ಲೇಖಕರು: ಮಹಮ್ಮದ್ ಪೀರ್ ಲಟಗೇರಿ, ಇಳಕಲ್

ಕಳೆದ ಬಾರಿ ಬಿಜೆಪಿ ಅವಧಿಯ ಬೊಮ್ಮಾಯಿ ನೇತೃತ್ವದ ಸರ್ಕಾರವು ಈ ಹಿಂದೆ ಸ್ಥಾಪಿಸಿದ್ದ 10 ಹೊಸ ವಿವಿಗಳ ಪೈಕಿ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸಚಿವ ಸಂಪುಟದ ಉಪ ಸಮಿತಿ ನಿರ್ಧರಿಸಿದೆ ಎಂದು ಹಲವು ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಧ್ಯಕ್ಷತೆಯ ಈ ಉಪಸಮಿತಿಯು ವಿವಿಗಳ ಆರ್ಥಿಕ ಸ್ಥಿತಿಗತಿಯ ಪರಿಶೀಲನೆ ಕುರಿತು ಗುರುವಾರ ಮೊದಲ ಸಭೆ ನಡೆದಿದೆ.

ಬೀದರ್ ವಿವಿಯನ್ನು ಹೊರತುಪಡಿಸಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ಮತ್ತು ನೃಪತುಂಗ ವಿವಿಯ ಜೊತೆಗೆ ಬಾಗಲಕೋಟೆ, ಕೊಪ್ಪಳ, ಹಾಸನ, ಚಾಮರಾಜನಗರ, ಹಾವೇರಿ, ಕೊಡಗು, ಮಂಡ್ಯ ವಿಶ್ವವಿದ್ಯಾಲಯಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಮಖಂಡಿಯಲ್ಲಿರುವ ಬಾಗಲಕೋಟೆ ವಿಶ್ವವಿದ್ಯಾಲಯ

ಬೀದರ್ ವಿಶ್ವವಿದ್ಯಾಲಯವು 150 ಸಂಯೋಜಿತ ಕಾಲೇಜುಗಳನ್ನು ಹೊಂದಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅದನ್ನು ಹೊರತುಪಡಿಸಿ ಇತರ ವಿಶ್ವವಿದ್ಯಾಲಯಗಳು ಸುಗಮವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಹಾಗೂ ವಿವಿಗಳಿಗೆ ಸಂಯೋಜಿತ ಕಾಲೇಜುಗಳು ಕಡಿಮೆ ಇರುವುದರಿಂದ ವಿಶ್ವವಿದ್ಯಾಲಯವನ್ನು ನಡೆಸಲು ಆರ್ಥಿಕ ಹೊರೆಯಾಗುತ್ತಿದೆ ಎಂದು ತಿಳಿದು ಬಂದಿದೆ.

ಹೊಸ ವಿವಿಗಳನ್ನು ನಡೆಸಲು ಮೊದಲ ಐದು ವರ್ಷಗಳಿಗೆ ಅಗತ್ಯ ಹಣಕಾಸಿನ ಮೊತ್ತದ ಬಗ್ಗೆ ಪರಿಶೀಲನೆ ನಡೆಸಲು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ವರದಿ ಸಲ್ಲಿಸಿದ ಕಾರಣ ಸಂಪುಟ ಉಪ ಸಮಿತಿ ರಚಿಸಲಾಗಿದ್ದು, ಹೊಸ ವಿವಿಗಳ ಸ್ಥಾಪನೆ ಮತ್ತು ಕಾರ್ಯನಿರ್ವಹಿಸಲು 342 ಕೋಟಿ ಅಗತ್ಯವಿದೆ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.ವಿವಿಗಳ ಸ್ಥಾಪನೆಗೆ ಜಮೀನಿನ ವೆಚ್ಚ ಬಿಟ್ಟು (100 ರಿಂದ 200 ಎಕರೆ ಅಗತ್ಯ) 342 ಕೋಟಿ ಮೊತ್ತವು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ವೇತನ, ಮೂಲ ಸೌಕರ್ಯ, ಸಲಕರಣೆಗಳು, ವಾಹನಗಳು, ಪೀಠೋಪಕರಣ ಹಾಗೂ ಇತರೆ ವಸ್ತುಗಳ ಖರೀದಿಸಲು ಅಗತ್ಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮಂಡ್ಯ, ಚಾಮರಾಜನಗರ ಭಾಗದ ವಿದ್ಯಾರ್ಥಿಗಳು ಮೈಸೂರು ವಿವಿಗಳಿಗೆ ಆಧ್ಯತೆ ನೀಡುತ್ತಿರುವ ಕಾರಣ ಈ ಭಾಗದ ಇತರ ಹೊಸ ವಿವಿಗಳಲ್ಲಿ ಪ್ರವೇಶಾತಿ ಕುಸಿತವಾಗಿದೆ, ಅದರೊಂದಿಗೆ ಪ್ರಾಧ್ಯಾಪಕರು ಮಂಡ್ಯ, ಚಾಮರಾಜನಗರಕ್ಕೆ ಹೋಗಲು ತಯಾರಿಲ್ಲ, ಅವರು ಹಿರಿತನ ಮತ್ತು ಪಿಂಚಣಿ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಹಿಂಜರಿಯುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ರವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಚಾಮರಾಜನಗರ ವಿಶ್ವವಿದ್ಯಾಲಯ

ಈ ಹಿಂದೆ ನೂತನವಾಗಿ ಪ್ರಾರಂಭಿಸಲಾದ ಪ್ರತಿ ವಿಶ್ವವಿದ್ಯಾಲಯಗಳಿಗೆ ಕೇವಲ 2 ಕೋಟಿ ಮೀಸಲಿಟ್ಟಿದ್ದರು ಆದರೆ ಯಾವುದೇ ಜಮೀನು ನೀಡದೆ, ಚಾಲ್ತಿಯಲ್ಲಿದ್ದ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಕ್ಯಾಂಪಸ್ ಗಳಲ್ಲಿಯೇ ತರಾತುರಿಯಲ್ಲಿ ನೂತನ ವಿಶ್ವವಿದ್ಯಾಲಯಗಳನ್ನು ಬಿಜೆಪಿ ಸರ್ಕಾರವು ಘೋಷಿಸಿತ್ತು.ವಿಶ್ವವಿದ್ಯಾಲಯಗಳ ಕಾರ್ಯವೈಖರಿ ಹಾಗೂ ಆರ್ಥಿಕ ಸ್ಥಿತಿಗತಿಗಳ ಅಧ್ಯಯನ ಕುರಿತು ಡಿ‌.ಸಿ.ಎಂ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ಮುಂದಿನ ಸಭೆಯಲ್ಲಿ ಚರ್ಚಿಸಿ ಅಧಿಕೃತ ನಿರ್ಧಾರ ಪ್ರಕಟಿಸಲಿದೆ ಎನ್ನಲಾಗಿದೆ.

ಅಗತ್ಯ ಹಣಕಾಸಿನ ನೆರವು, ಮೂಲ ಸೌಕರ್ಯ ಕಲ್ಪಿಸದೆ ರಾಜಕೀಯ ಲಾಭಕ್ಕಾಗಿ ಹಳೆಯ ವಿಶ್ವವಿದ್ಯಾಲಯಗಳನ್ನು ಮನಸ್ಸಿಗೆ ಬಂದಂತೆ ವಿಭಜಿಸಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪಿಸುವ ಪರಿಪಾಠವನ್ನು ಬಿಜೆಪಿ ಸರ್ಕಾರ ಶುರು ಮಾಡಿಕೊಂಡಿತು, ಇದು ಮುಂಬರುವ ದಿನಗಳಲ್ಲಿ ಉನ್ನತ ಶಿಕ್ಷಣದಲ್ಲಿ ಇನ್ನಷ್ಟೂ ಸಮಸ್ಯೆಯನ್ನು ಉದ್ಭವಿಸುತ್ತದೆ ಎಂಬುದನ್ನು ಚಿಂತಿಸದೆ ಒಂದು ಕೆಟ್ಟ ಪಂಕ್ತಿಯನ್ನು ಬಿಜೆಪಿ ಹಾಕಿಕೊಟ್ಟಿದೆ.

ಪ್ರಸ್ತುತ ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾಲಯ ಸ್ಥಿತಿಗತಿ ಮತ್ತು ಅದು ಸಾಗುತ್ತಿರುವ ಅಧೋಗತಿಯನ್ನು ತಿಳಿಯಲು ಕಳೆದ ಕೆಲವು ವರ್ಷಗಳಿಂದ ಸರ್ಕಾರ ವಿವಿಗಳಿಗೆ ನೀಡಿದ ಅನುದಾನವನ್ನು ಗಮನಿಸಿದರೆ ವಿವಿಗಳ ಆರ್ಥಿಕ ದುಸ್ಥಿತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ.

ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ದಶಕದಿಂದ ನೇಮಕಾತಿ ಪ್ರಕ್ರಿಯೆ ನಡೆಯದ ಕಾರಣ ಅತಿಥಿ ಉಪನ್ಯಾಸಕರು, ಹೊರಗುತ್ತಿಗೆ ನೌಕರರ ಅವಲಂಬನೆಯಲ್ಲಿಯೇ ನಡೆಯುತ್ತಿವೆ, 2007 ರಿಂದಲೂ ಬೋಧಕ ಸಿಬ್ಬಂದಿ ನೇಮಕಾತಿ ನಡೆದಿಲ್ಲ, ನಿವೃತ್ತರ ಸಂಖ್ಯೆಯೂ ಹೆಚ್ಚಿದೆ, 2019-20 ರಲ್ಲಿ ನೇಮಕಾತಿ ನಡೆಯಬೇಕಿತ್ತು ಆದರೆ ಕೋವಿಡ್ ಮತ್ತು ಆರ್ಥಿಕ ಕಾರಣಗಳಿಗಾಗಿ ಮತ್ತೆ ನೇಮಕಾತಿ ಪ್ರಕ್ರಿಯೆಯೂ ಹಿನ್ನೆಲೆಗೆ ಸರಿದಿದೆ, ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟವನ್ನು ಉಳಿಸಿಕೊಳ್ಳಲು ವಿವಿಗಳು ಹೆಣಗಾಡುತ್ತಿವೆ.

ಇನ್ನೊಂದೆಡೆ ವಿವಿಧ ಕಾಲೇಜುಗಳ ಸಂಯೋಜನೆ, ಪರೀಕ್ಷೆ ಇತರೆ ಶುಲ್ಕಗಳಿಂದ ಏರುತ್ತಿರುವ ಆದಾಯವು ಪಿಂಚಣಿ, ಅತಿಥಿ ಉಪನ್ಯಾಸಕರು, ಹೊರ ಗುತ್ತಿಗೆ ನೌಕರರ ವೇತನ-ಭತ್ಯೆ ಭರಿಸುವುದಕ್ಕೆ ಸಾಲುತ್ತಿಲ್ಲ ಎಂಬ ಅಳಲನ್ನು ವಿವಿಯ ಉಪಕುಲಪತಿಗಳು ಪ್ರತಿಕ್ರಿಯಿಸಿದ್ದಾರೆ, ಇದರೊಂದಿಗೆ ಸರ್ಕಾರ ನೀಡುವ ಅನುದಾನವು ಕೇವಲ ಪದವಿ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಹಾಗೂ ನಿವೃತ್ತರ ಪಿಂಚಣಿಗಷ್ಟೆ ಸಾಲುತ್ತಿದೆ ಎಂಬ ಆರೋಪವಿದೆ.

ಜಿಲ್ಲೆಗೊಂದರಂತೆ ವಿವಿಗಳ ಸ್ಥಾಪನೆ ಪರಿಣಾಮ ಹಳೆಯ ವಿಶ್ವವಿದ್ಯಾಲಯಗಳಿಗೆ ಸಂಯೋಜಿತ ಕಾಲೇಜುಗಳ ಸಂಖ್ಯೆ ಕಡಿಮೆಯಾಗುವುದರಿಂದ ಆದಾಯದ ಕೊರತೆ ಕಾಣುತ್ತಿದ್ದು, ಇತ್ತ ಹಳೆ ವಿಶ್ವವಿದ್ಯಾಲಯಗಳಿಗೆ ಅಗತ್ಯ ಅನುದಾನವನ್ನು ನೀಡಲಾಗದೆ, ಅತ್ತ ಹೊಸ ವಿವಿಗಳಲ್ಲಿ ಶೇ. 90ರಷ್ಟು ವಿವಿಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿವೆ.

ಒಂದು ಕಡೆ ರಾಷ್ಟ್ರೀಯ ಶಿಕ್ಷಣ ನೀತಿಯ (NEP)ಯ ಭಾಗವಾಗಿ ವಿದೇಶಿ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಭಾರತದಲ್ಲಿ ಸ್ಥಾಪಿಸಲು ರಿಯಾಯಿತಿಯೊಂದಿಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ರವರು ರೆಡ್ ಕಾರ್ಪೆಟ್ ಮೂಲಕ ಸ್ವಾಗತಿಸುತ್ತಿದ್ದಾರೆ, ಆದರೆ ನಮ್ಮದೆ ದೇಶದ ಸಾರ್ವಜನಿಕ ಉನ್ನತ ಶಿಕ್ಷಣ ವ್ಯವಸ್ಥೆಯ ಸಬಲೀಕರಣಕ್ಕೆ ಯಾವುದೇ ಅಗತ್ಯ ಕ್ರಮಗಳನ್ನು ಮತ್ತು ಅನುದಾನವನ್ನು ನೀಡುತ್ತಿಲ್ಲ, ಅದರೊಂದಿಗೆ ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ ವಿವಿಗಳು ದಿನದಿಂದ ದಿನಕ್ಕೆ ಅಧೋಗತಿಯತ್ತ ಸಾಗುತ್ತಿದೆ, ಇದರೊಂದಿಗೆ ವಿಶ್ವವಿದ್ಯಾಲಯಗಳಿಗೆ ಅನುದಾನ ನೀಡುವ ಯುಜಿಸಿ ಕೂಡಾ ಸಮರ್ಪಕ ಅನುದಾನವನ್ನು ಒದಗಿಸುತ್ತಿಲ್ಲ, ಈ ಬಾರಿಯ ಕೇಂದ್ರ ಬಜೆಟ್ ನಲ್ಲೂ ಕೇಂದ್ರಿಯ ವಿಶ್ವವಿದ್ಯಾಲಯ ಮತ್ತು ಕೇಂದ್ರದಿಂದ ನಡೆಸಲಾಗುತ್ತಿರುವ ಪ್ರತಿಷ್ಠಿತ ಐಐಟಿ, ಎನ್ಐಟಿ ಗಳಿಗೆ ಹೆಚ್ಚಿನ ಅನುದಾನ ಒದಗಿಸಲಾಗಿದೆ ಹೊರತು ದೇಶಾದ್ಯಂತ ಚಾಲ್ತಿಯಲ್ಲಿರುವ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಅಗತ್ಯ ಅನುದಾನವನ್ನು ಹಂಚಿಕೆ ಮಾಡಿಲ್ಲ.

ಕರ್ನಾಟಕ ರಾಜ್ಯ ಸರ್ಕಾರವು ಪ್ರಸ್ತುತ ಚಾಲ್ತಿಯಲ್ಲಿರುವ ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳ ಸುಗಮ ನಿರ್ವಹಣೆಗಾಗಿ ಸಾಕಷ್ಟು ಅನುದಾನವನ್ನು ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ನೀಡುವ ಮೂಲಕ ರಾಜ್ಯದ ಸಾರ್ವಜನಿಕ ಉನ್ನತ ಶಿಕ್ಷಣವನ್ನು ಉಳಿಸಿಕೊಳ್ಳುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ.

LEAVE A REPLY

Please enter your comment!
Please enter your name here