ನಿರಂಜನಾರಾಧ್ಯ. ವಿ.ಪಿ.
(ಅಭಿವೃದ್ಧಿ ಶಿಕ್ಷಣ ತಜ್ಞ ಹಾಗೂ ಸರಕಾರಿ ಶಾಲೆಗಳ ಸಬಲೀಕರಣದ ಹರಿಕಾರ)

ಶಾಲೆಗಳನ್ನು ಪುನಾರಾರಂಭಿಸುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಸನ್ಮಾನ್ಯ ಸಚಿವರು ಎಲ್ಲಾ ಸಚಿವರಿಗೆ ಮತ್ತು ಶಾಸಕರಿಗೆ ಪತ್ರ ಬರೆದು ಈ ಕೆಳಗಿನ ಪ್ರಶ್ನೆಗಳನ್ನು ಕೇಳಿದ್ದಾರೆ ಶಾಲೆಗಳನ್ನು ಯಾವಾಗ ಪ್ರಾರಂಭಿಸಬಹುದು?. ಒಂದು ವೇಳೆ ಪ್ರಾರಂಭಿಸಿದರೆ ಯಾವ ತರಗತಿಗಳನ್ನು ಮೊದಲು ಪ್ರಾರಂಭಿಸಬೇಕು?
ಸಮುದಾಯ ಮತ್ತು ಜನ ಪ್ರತಿನಿಧಿಗಳಿಂದ ಯಾವ ರೀತಿಯ ಸಹಕಾರ ನಿರೀಕ್ಷಿಸಬಹುದು?

ಈ ವಿಷಯದಲ್ಲಿ ಈಗಾಗಲೇ ಸಾಕಷ್ಟು ವಿಸ್ತೃತ ಚರ್ಚೆಗಳಾಗಿವೆ (ಇಲಾಖೆ ಪಾಲಕರ ಜೊತೆ ಶಾಲಾ ಹಂತದಲ್ಲಿ ನಡೆಸಿದ ಚರ್ಚೆ ಹಾಗು ಸಚಿವರು ಕ್ಷೇತ್ರದ ಎಲ್ಲಾ ವಾರಸುದಾರರರ ಮತ್ತು ಮಾಜಿ ಶಿಕ್ಷಣ ಸಚಿವರಿಗಳ ಜೊತೆ ನಡೆಸಿದ ಚರ್ಚೆಗಳು). ಇನ್ನು ಚರ್ಚೆಯಲ್ಲಿ ಹೆಚ್ಚು ಕಾಲ ಕಳೆಯದೆ ಸರಕಾರ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗುತ್ತದೆ.

ಎಲ್ಲಾ ಶಾಲೆಗಳನ್ನು ಒಂದೇ ತಕ್ಕಡಿಯಲ್ಲಿ ಹಾಕಲು ಸಾಧ್ಯವಿಲ್ಲ. ಖಾಸಗಿ ಶಾಲೆಗಳು ಅದರಲ್ಲೂ ವಿಶೇಷವಾಗಿ ಪ್ರತಿಷ್ಠಿತ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಸಾಮಾಜಿಕ- ಆರ್ಥಿಕ ಸ್ಥಿತಿಗತಿ ಬೇರೆಯೇ ಆಗಿರುತ್ತದೆ. ಅವರ ಅಭಿಪ್ರಾಯಗಳು ನಮ್ಮ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಬಡ ಕೂಲಿಕಾರ್ಮಿಕರ –ಕೃಷಿಕ ತಂದೆ ತಾಯಿಯರ ಅಭಿಪ್ರಾಯ ಮತ್ತು ಬವಣೆಗಳಿಗಿಂತ ಭಿನ್ನವಾಗಿರುತ್ತವೆ .

ಸರಕಾರಿ ಶಾಲೆಗಳು ಕೇವಲ ಕಲಿಕಾ ಕೇಂದ್ರಗಳು ಮಾತ್ರವಲ್ಲ. ಜೊತೆಗೆ ಅವು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಮಕ್ಕಳ ವಿವಿಧ ಅಗತ್ಯತೆಗಳನ್ನು ಪೂರೈಸುವ ಸಾಮಾಜಿಕ ನ್ಯಾಯದ ಕೇಂದ್ರಗಳು ಸಹ ಆಗಿರುತ್ತವೆ. ಅವು ಬಡ ಕುಟುಂಬಗಳಿಗೆ ಹಲವು ರೀತಿಯಲ್ಲಿ ಆಸರೆಯಾಗಿರುತ್ತವೆ. ಈ ಸಂಕಷ್ಟದ ಸಂದರ್ಭದಲ್ಲಿ ಇದು ಒಂದು ಅತ್ಯಂತ ಮಹತ್ವದ ವಿಷಯವಾಗುತ್ತದೆ.
ಉದಾಹರಣೆಗೆ, ನಾವು ಶಾಲೆಯಲ್ಲಿ ಮಧ್ಯಾಹ್ನ ಒದಗಿಸುವ ಬಿಸಿ ಊಟ ಲಕ್ಷಾಂತರ ಮಕ್ಕಳಿಗೆ ಬೇರೆ ಬಗೆಯ ಆತ್ಮ ವಿಶ್ವಾಶ ಮತ್ತು ಮನೋಬಲ ಹಾಗು ದೈಹಿಕ ಬಲವನ್ನು ಕಲ್ಪಿಸುತ್ತದೆ. ಸರ್ಕಾರ ಈ ಆಯಾಮಗಳಿಂದಲೂ ಆಲೋಚಿಸಬೇಕು. ಗ್ರಾಮೀಣ ಹಾಗು ನಗರದಲ್ಲಿನ ಆರ್ಥಿಕ –ಸಾಮಾಜಿಕ ದುರ್ಬಲ ಹಾಗು ಅವಕಾಶ ವಂಚಿತ ಸಮುದಾಯಗಳ ಬದುಕಿನ ಸಂದರ್ಭ ಮತ್ತು ಸಮಸ್ಯೆಗಳು ಬೇರೆಯೇ ಆಗಿರುತ್ತವೆ. ಕೋವಿಡ್-19ರ ಈ ಸಂಕಷ್ಟದ ಸಂದರ್ಭದಲ್ಲಿ, ತಮ್ಮ ಜೀವನೋಪಾಯಕ್ಕಾಗಿ ದಿನ ನಿತ್ಯ ಹೋರಾಟ ನಡೆಸುತ್ತಿರುವ ಈ ಬಡಜನರು ಶಾಲೆಯನ್ನು ಕಲಿಕೆಯ ಆಚೆ ಬೆಂಬಲಿತ ಸಂಸ್ಥೆಯಾಗಿಯೂ ಕೂಡ ನೋಡುತ್ತಾರೆ. ಆದರೆ, ನಾವು ನಡೆಸುವ ಹಲವು ಚರ್ಚೆಗಳು ಕೇವಲ ನಗರ ಕೇಂದ್ರಿತ ಮತ್ತು ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕವಾಗಿ ಬಲಿಷ್ಠವಾಗಿರುವ ಸಮುದಾಯಗಳ ಸುತ್ತಮುತ್ತ ಮಾತ್ರ ನಡೆಯುತ್ತಿವೆ.

ಸಚಿವರು ಶಿಕ್ಷಣ ಇಲಾಖೆ ಈ ಬಗೆಯ ಚರ್ಚೆಗಳಿಂದ ಹೊರಬಂದು ಹಲವು ಕಾರಣಗಳಿಂದ ಶಾಲೆಯನ್ನೇ ತಮ್ಮ ಎರಡನೆಯ ಮನೆಯಾಗಿ ಕಾಣುವ ಮಿಲಿಯಾಂತರ ಮಕ್ಕಳ ಮತ್ತು ಬಡ ಪಾಲಕರ ದೃಷ್ಟಿಕೋನದಿಂದ ಯೋಚಿಸಬೇಕಿದೆ. ಈ ಮಕ್ಕಳಿಗಾಗಿ ನಮ್ಮ ಸರಕಾರಿ ಶಾಲೆಗಳನ್ನು ಆದಷ್ಟು ಬೇಗೆ ತೆರೆಯುವುದು ಮಹತ್ವದ ನಿರ್ಧಾರವಾಗಿದೆ. ಇಲ್ಲವಾದಲ್ಲಿ ಅನೇಕ ಮಕ್ಕಳು ಶಾಲೆಯಿಂದ ದೂರವುಳಿದು ಬಾಲ ಕಾರ್ಮಿಕ ಪದ್ಧತಿ, ಜೀತ ಪದ್ಧತಿ, ಬಾಲ್ಯ ವಿವಾಹ , ಮಕ್ಕಳ ಸಾಗಣೆಗೆ ತುತ್ತಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಮಕ್ಕಳನ್ನು ಈ ಎಲ್ಲಾ ಅವಘಡಗಳಿಂದ ರಕ್ಷಿಸಿ ಬಾಲ್ಯವನ್ನು ಅನುಭವಿಸಲು ಅವಕಾಶ ಕಲ್ಪಿಸಬೇಕಾದರೆ ಸರಕಾರಿ ಶಾಲೆಗಳು ಶೀಘ್ರವಾಗಿ ತೆರೆಯಬೇಕು. ಈ ಮಕ್ಕಳ ಬಡ ಪಾಲಕರು ನೆಮ್ಮದಿಯಿಂದ ತಮ್ಮ ಜೀವನಾಧಾರದ ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಾಗುವಂತಾಗಬೇಕು .

ಹಲವು ಅಂತಾರಾಷ್ಟ್ರೀಯ ಸಂಶೋಧನೆಯು ಈ ಬಗ್ಗೆ ಈಗಾಗಲೇ ಬೆಳಕು ಚೆಲ್ಲಿವೆ. (ಈ ಜಾಲ ಕೊಂಡಿಯನ್ನು ನೋಡಿ -https://www.unicef.org/documents/framework-reopening-schools). ಶಾಲೆಗಳನ್ನು ಮುಚ್ಚಿರುವುದು ಸಮಾಜದ ಒಂದು ವರ್ಗಕ್ಕೆ ಹೆಚ್ಚೇನು ಹಾನಿ ಮಾಡಿಲ್ಲ. ಆದರೆ, ಇದರ ಪರಿಣಾಮ ಅವಕಾಶ ವಂಚಿತ ಬಡ ಸಮುದಾಯಗಳ ಮೇಲೆ ಎಂಬುದು ಗಮನಾರ್ಹ ಅಂಶ. ಹೀಗಾಗಿ, ಈ ಬಡ ವರ್ಗಗಳ ದೃಷ್ಟಿಯಿಂದ ಶಾಲೆಗಳನ್ನು ಮುಚ್ಚಿರುವುದು ಈಗಾಗಲೇ ಅವರನ್ನು ಕೋವಿಡ್ ಸಂಕಷ್ಟದ ಜೊತೆಗೆ ಹೊಸ ಬಗೆಯ ಆರ್ಥಿಕ ಸಾಮಾಜಿಕ ಸಂಕಷ್ಟಕ್ಕೆ ದೂಡಿದೆ. ಅವರ ಬದುಕು ಮತ್ತಷ್ಟು ದುರ್ಭರವಾಗಿದೆ. ಈ ಸಂಕಷ್ಟದ ಕಾಲದಲ್ಲಿ ಈ ವರ್ಗಗಳ ಜೊತೆ ನಿಲ್ಲುವುದು ಮತ್ತು ಅವರನ್ನು ಕೈಹಿಡಿಯುವುದು ಸರ್ಕಾರದ ಆದ್ಯ ಕರ್ತವ್ಯ. ಹೆಚ್ಚಿನ ಹಾನಿಯನ್ನು ತಡೆಯಲು ಶಾಲೆಗಳನ್ನು ತೆರೆಯುವ ಮೂಲಕ ಸರಕಾರ ತಕ್ಷಣ ಸ್ಪಂದಿಸಬೇಕಿದೆ. ಇದು ಸರಕಾರದ ಆದ್ಯತೆಯಾಗಬೇಕಿದೆ. ಸಚಿವರು ಮತ್ತು ಇಲಾಖೆ ಈ ಕೆಳಕಂಡ ಅಂಶಗಳನ್ನು ಗಮನಿಸಬೇಕಿದೆ:

ಸಿದ್ಧತಾ ಕೆಲಸಗಳು
ಲಭ್ಯವಿರುವ ಸಂಶೋಧನೆಯ ಪ್ರಕಾರ ಶಾಲೆಗಳನ್ನು ತೆರೆಯುವುದು ಸಮಸ್ಯೆಯಲ್ಲ. ಏಕೆಂದರೆ ವಯಸ್ಸಾದವರಿಗೆ ಮತ್ತು ಬೇರೆ ಬೇರೆ ಕಾಯಿಲೆಯ ಇತಿಹಾಸ ಇರುವವರಿಗೆ ಹೋಲಿಸಿದರೆ ಮಕ್ಕಳು ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ಈ ಅಂಶಗಳನ್ನು ಆಧರಿಸಿ ಪಾಲಕರಲ್ಲಿ ಜಾಗೃತಿ ಮೂಡಿಸಬೇಕು.

  • ಶಾಲಾ ಆವರಣಗಳನ್ನು ಪೂರ್ಣವಾಗಿ ಸೋಂಕು ನಿವಾರಣೆಗೊಳಿಸಬೇಕು
  • ಕೈ ತೊಳೆಯಲು ಅಗತ್ಯ ಸಾಬೂನು – ನಿರಂತರ ನೀರಿನ ಸೌಲಭ್ಯವನ್ನು ಖಾತರಿಪಡಿಸಿಕೊಳ್ಳಬೇಕು
  • ಎಲ್ಲಾ ಮಕ್ಕಳಿಗೆ, ಅದರಲ್ಲೂ ವಿಶೇಷವಾಗಿ 11 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಕಡ್ಡಾಯವಾಗಿ ಮಾಸ್ಕ್‌ ಧರಿಸುವ ವ್ಯವಸ್ಥೆಯಾಗಬೇಕು
  • ದೈಹಿಕ ಅಂತರ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಕ್ಕಳಿಗೆ ತಿಳಿ ಹೇಳಬೇಕು. ಈ ಬಗ್ಗೆ ಶಿಕ್ಷಕರು ಗಮನ ಹರಿಸಬೇಕು
  • ಈ ಎಲ್ಲಾ ಅಂಶಗಳನ್ನು ಉಪನಿರ್ದೇಶಕರು ಆಡಳಿತ-ಬಿಇಒ-ಶಿಕ್ಷಣ ಸಂಯೋಜಕರು ಮತ್ತು ಎಸ್‌ ಡಿ ಎಂ ಸಿ ಗಳು ಮೇಲುಸ್ತುವಾರಿ ಮಾಡಬೇಕು
  • ಮಕ್ಕಳಿಗೆ ಒದಗಿಸಲೇಬೇಕಾದ ಅವಶ್ಯಕತೆಗಳು
  • ಶುಚಿತ್ವದಿಂದ ಕೂಡಿದ ಬೆಳಗಿನ ಬಿಸಿ ಹಾಲು ಮತ್ತು ಮಧ್ಯಾಹ್ನದ ಪೌಷ್ಕಿಕಾಂಶಯುಕ್ತ ಬಿಸಿಯೂಟವನ್ನು ಮಕ್ಕಳಿಗೆ ಒದಗಿಸಬೇಕು
  • ಇದರೊಂದಿಗೆ ಉಚಿತ ಕೋವಿಡ್‌ ಎಚ್ಚರಿಕಾ ಸಾಧನಗಳನ್ನು ಪೂರೈಸಬೇಕು
  • ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೆ ಬಿಸಿ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು
  • ಆಹಾರದ ಜೊತೆಗೆ ಮಕ್ಕಳಿಗೆ ರೋಗ ನಿರೋಧಕ ವಿಟಮಿನ್‌ ಮಾತ್ರಗಳನ್ನು ನೀಡಬೇಕು
  • ಆರೋಗ್ಯ ತಪಾಸಣೆ ಭಾಗವಾಗಿ ಎಲ್ಲಾ ಮಕ್ಕಳಿಗೆ ಆರೋಗ್ಯ ಪರೀಕ್ಷೆಯನ್ನು ನಿಯತವಾಗಿ ಕೈಗೊಳ್ಳಬೇಕು
  • ಈ ಎಲ್ಲಾ ಅಂಶಗಳನ್ನು ತಾಲೂಕಿನ ಬಿಸಿಯೂಟದ ಅಧಿಕಾರಿಗಳು ಮತ್ತು ಎಸ್‌ ಡಿ ಎಂ ಸಿ ಗಳು ಮೇಲುಸ್ತುವಾರಿ ಮಾಡಬೇಕು

ಶಾಲೆಗಳ ಪ್ರಾರಂಭ ಹಾಗು ಶೈಕ್ಷಣಿಕ ಕಾರ್ಯಕ್ರಮ

  • 2020-21ನ್ನು ಪರೀಕ್ಷಾ ರಹಿತ ಕಲಿಕಾ ವರ್ಷವೆಂದು ಘೋಷಿಸಬೇಕು
  • ಪರೀಕ್ಷಾ ರಹಿತ ಕಲಿಕಾ ವರ್ಷದಲ್ಲಿ ಶಾಲಾ ಹಂತದ ದಿನಚರಿ ಮತ್ತು ತರಗತಿವಾರು ಕಲಿಕಾ ದಿನಚರಿಯನ್ನು ಶೈಕ್ಷಣಿಕ ಪ್ರಾಧಿಕಾರವಾದ ಡಿಎಸ್‌ಇಆರ್‌ಟಿ ಗೊತ್ತುಪಡಿಸಬೇಕು
  • ಮೊದಲು 30ಕ್ಕಿಂತ ಕಡಿಮೆ ಮಕ್ಕಳಿರುವ ಸರಕಾರಿ ಕಿರಿಯ/ಹಿರಿಯ ಶಾಲೆಗಳನ್ನು ಪ್ರಾರಂಭಿಸಬೇಕು. ಈ ಶಾಲೆಗಳು ಮೊದಲ ಹದಿನೈದು ದಿನ ಅರ್ಧ ದಿವಸ ಕಾರ್ಯ ನಿರ್ವಹಿಸಬೇಕು

ಕಿರಿಯ ಪ್ರಾಥಮಿಕ ಶಾಲೆಗಳನ್ನು ಶೀಘ್ರವಾಗಿ ಪ್ರಾರಂಭಿಸಬೇಕು. ಉಳಿದಂತೆ ಹೆಚ್ಚಿನ ಸಂಖ್ಯೆಯಿರುವ ಶಾಲೆಗಳನ್ನು ಪಾಳಿ ಪದ್ಧತಿಯಲ್ಲಿ ಪ್ರಾರಂಭಿಸಬೇಕು. ಜೊತೆಗೆ ವಿವರವಾದ ಮಾರ್ಗಸೂಚಿಗಳನ್ನು ಶಾಲೆ ತೆರೆದ ನಂತರ ಸಿಗುವ ಕಲಿಕೆ ಮತ್ತು ಅನುಭವಗಳೊಂದಿಗೆ ಕಾಲ ಕಾಲಕ್ಕೆ ಅಗತ್ಯಕ್ಕೆ ತಕ್ಕಂತೆ ರೂಪಿಸಬಹುದಾಗಿದೆ. ಈಗಾಗಲೇ ಕೇಂದ್ರ ಹಾಗು ರಾಜ್ಯ ಸರಕಾರಗಳು ಲಾಕ್‌ ಡೌನ್‌ನನ್ನು ಸಡಿಲಿಸುವ ಭಾಗವಾಗಿ ಈ ಬಗೆಯ ಮಾರ್ಗಸೂಚಿಗಳನ್ನು ಹಂತ ಹಂತವಾಗಿ ಹೊರಡಿಸುತ್ತಿವೆ. ಈಗ ತಾನೆ ಕೇಂದ್ರದಿಂದ ಬಂದ ಹೊಸ ಮಾರ್ಗಸೂಚಿಯಂತೆ ಶಾಲೆ ತೆರೆಯುವ ತೀರ್ಮಾನವನ್ನು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ (ವಿವರಗಳಿಗೆ ಗೃಹ ಮಂತ್ರಾಲಯವು ಹೊರಡಿಸಿರುವ ಹೊಸ ಮಾರ್ಗ ಸೂಚಿ ಆದೇಶ ಸಂಖ್ಯೆ:40-3/2020 ಡಿಎಮ್‌-ಐ(ಎ) ದಿನಾಂಕ. ಸೆಪ್ಟಂಬರ್ 30, 2020‌ನ್ನು ನೋಡಿ).ಈ ಬಗೆಯ ತೀರ್ಮಾನಗಳನ್ನು ಶಾಲೆ ಮತ್ತು ಎಸ್‌ಡಿಎಂಸಿ ಸ್ಥಳೀಯ ನಿರ್ಧಾರಕ್ಕಾಗಿ ಬಿಡುವುದು ಸ್ಥಳೀಯವಾಗಿ ಹೆಚ್ಚು ಸೂಕ್ತವಾಗುತ್ತದೆ
ಎರಡೂ ಪಾಳಿಯಲ್ಲಿ ಶಾಲೆಗೆ ಬರುವ ಮಕ್ಕಳಿಗೆ ಮೇಲಿನ ಎಲ್ಲವನ್ನೂ ಒದಗಿಸಬೇಕು
ಈ ಎಲ್ಲಾ ಅಂಶಗಳನ್ನು ಉಪನಿರ್ದೇಶಕರು (ಶೈಕ್ಷಣಿಕ)-ಬಿಆರ್‌ ಸಿ – ಬಿಆರ್‌ಪಿ –ಸಿಆರ್‌ಪಿ ಮತ್ತು ಎಸ್‌ ಡಿಎಂಸಿಗಳು ಮೇಲುಸ್ತುವಾರಿ ಮಾಡಬೇಕು.

LEAVE A REPLY

Please enter your comment!
Please enter your name here