ಎಂ . ಅಶೀರುದ್ದೀನ್ ಮಂಜನಾಡಿ

ಸಿನಿಮ ವಿಮರ್ಶೆ

ಬ್ಯಾರಿ ಕಲಾ ಸಾಂಸ್ಕೃತಿಕ ರಂಗ ಮೆಲ್ಲ ಮೆಲ್ಲನೆ ಪ್ರಗತಿಯೆತ್ತ ಹೆಜ್ಜೆ ಹಾಕುತ್ತಿದೆ. ಟೆಲಿಫಿಲೀಮಿನಿಂದ ಸಿನಿಮ ರಂಗದಲ್ಲೂ ತಮ್ಮ ಶಕ್ತಿಯನ್ನು ಪ್ರದರ್ಶಿಸಲಾರಂಭಿಸಿ ವರ್ಷಗಳೇ ಸಂದಿವೆ. “ಬ್ಯಾರಿ” ಪ್ರಥಮ ಸಿನಿಮವಾಗಿ ಸ್ವರ್ಣ ಕಮಲ ಪ್ರಶಸ್ತಿಗಳಿಸಿ ದೇಶಾದ್ಯಂತ ಬ್ಯಾರಿ ಭಾಷೆಯ ಬಗ್ಗೆ ಚರ್ಚೆ ನಡೆಸುವಂತೆ ಮಾಡಿತ್ತು. ವಿಶ್ವದಾದ್ಯಂತ ಬ್ಯಾರಿ ಭಾಷೆ ಮತ್ತು ಸಂಸ್ಕೃತಿಯನ್ನು ಪರಿಚಯ ಮಾಡಿ ಕೊಟ್ಟಿತು. ಆರ್ಥಿಕವಾದ ಬೆಂಬಲದ ಕೊರತೆ ಇದ್ದರು ಬ್ಯಾರಿ ಸಿನಿ ಕಲಾವಿದರು ತಮ್ಮ ಪ್ರಯತ್ನ ಮುಂದುವರಿಸುತಿದ್ದಾರೆ ಎಂಬುವುದನ್ನು ಮೆಚ್ಚಬೇಕು. ಇದೀಗ ಬ್ಯಾರಿ ಸಿನಿಮಾ ರಂಗಕ್ಕೆ ಮೆರುಗು ನೀಡುವ ಮತ್ತೊಂದು ಸಿನಿಮಾ “ಅಬ್ಬ” ಬಿಡುಗಡೆಯಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಮತ್ತು ಜನ ಮಾನಸಗಳಲ್ಲಿ ಮೆಚ್ಚುಗೆ ಗಳಿಸುತ್ತಿದೆ.
“ಅಬ್ಬ” ಜಗತ್ತಿನಲ್ಲಿ ಸರ್ವೇ ಸಾಮಾನ್ಯವಾಗಿರುವ ಕಥೆಯಾಧಾರಿತ ಸಿನಿಮಾ. ಮಾತೃ ಪ್ರೀತಿ ಪ್ರೇರಿತ ಕತೆಗಳೇ ಹೆಚ್ಚಾಗಿರುವ ಸಿನಿಮಾ ಜಗತ್ತಿನಲ್ಲಿ ತಂದೆಯ ಪ್ರೀತಿ, ತ್ಯಾಗದ ಬಗ್ಗೆ ಸಿನಿಮಾ ಬಂದಿರುವುದು ಅತೀ ವಿರಳ. ಈ ಕಾರಣಕ್ಕೆ ಅಬ್ಬ ಎಂಬ ಬ್ಯಾರಿ ಸಿನಿಮವು ಕಥೆಯಲ್ಲಿ ವಿಶೇಷವೆನಿಸುತ್ತದೆ. ಎಂ.ಜಿ. ರಹೀಮ್ ನಿರ್ದೇಶನದ “ಅಬ್ಬ” ಬ್ಯಾರಿ ಭಾಷೆಯ ಎರಡನೇ ಸಿನಿಮ. ತಂದೆ, ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ, ಅವರಿಗಾಗಿ ಮಾಡುವ ತ್ಯಾಗವನ್ನು ಸಿನಿಮ ಅರ್ಥವತ್ತಾಗಿ ವಿವರಿಸುತ್ತದೆ. ತಂದೆ, ಮಗನ ಮೇಲಿಟ್ಟಿರುವ ಪ್ರೀತಿ ವಿಶ್ವಾಸವೇ ಕಥೆಯ ಮೂಲ ವಸ್ತು. ದಪ್ಪು ಕಲೆಯ ಉಸ್ತಾದರಾದ ಬಾವಕ ಎಂಬ ಹಿರಿಯ ಮನುಷ್ಯ ತಾನು ಮುದ್ದಾಗಿ ಬೆಳೆಸಿದ ಮಗ ತನ್ನಿಂದ ದೂರವಾದಾಗ ಉಂಟಾಗುವ ನೋವು, ದುಃಖವನ್ನು ಸಿನಿಮಾ ಮನ ಮುಟ್ಟುವಂತೆ ಚಿತ್ರೀಕರಿಸಿದೆ. ಮುದಿತನಕ್ಕೆ ಬಂದ ಹೆತ್ತವರಿಗೆ ಸಹಜವಾಗಿ ಇರುವ ಮಕ್ಕ ಯಾತ್ರೆಯ ಕನಸು, ಪತಿ ಪತ್ನಿಯರ ನಡುವೆ ಇರುವ ಪ್ರೀತಿ, ಜಗಳ. ಆಸ್ತಿಗಾಗಿ ಹೆತ್ತವರನ್ನು ಹಿಂಸಿಸುವ ಮಕ್ಕಳ ದೌರ್ಬಲ್ಯವನ್ನು ಸಿನಿಮಾ ಬಿಚ್ಚಿ ಮಾತಾಡುತ್ತದೆ. ಜೊತೆಗೆ ತುಳುನಾಡಿನ ಭಾಷಾ ವೈವಿಧ್ಯ, ಹಿಂದೂ, ಮುಸ್ಲಿಂ, ಕ್ರೈಸ್ತರ ನಡುವೆ ಇರುವ ಸಾಮರಸ್ಯ, ಕಲೆ ಮತ್ತು ಪ್ರಕೃತಿಯ ಸೊಬಗನ್ನು ಸಿನಿಮ ಚಿತ್ರಿಕರಿಸಿದೆ.

ಬ್ಯಾರಿ ಭಾಷೆಯ ಮತ್ತು ಕಲಾವಿದರ ಬಗ್ಗೆ ತಾತ್ಸರ ಭಾವನೆಯಿಂದ ನೋಡುವ ಸುಮಾರು ಜನರನ್ನು ವಾಟ್ಸಾಪ್, ಫೇಸ್ ಬುಕ್, ಹಾಗು ವೇದಿಕೆಯ ಮೇಲೆ ನಮಗೆ ಕಾಣಬಹುದು. ಹಿಂದಿ, ಮಲಯಾಳಂ, ತಮಿಳು, ಕನ್ನಡ ಸಿನಿಮಗಳ ದರ ಗಗನದಲ್ಲಿ ಇದ್ದರೂ ಚಿತ್ರಮಂದಿರವನ್ನು ತುಂಬಿಸುವ ಬ್ಯಾರಿಗಳು ತಮ್ಮ ಮಾತೃ ಭಾಷೆಯಲ್ಲಿ ಸಿನಿಮ ಬಂದಾಗ ನಿರಾಕರಿಸುವುದರಲ್ಲಿ ಬೇಸರವಿದೆ. ಒಬ್ಬ ಸಿನಿಮ ಕಲಾವಿದ ತನ್ನ ಕಠಿಣ ಪರಿಶ್ರಮದಿಂದ ಬ್ಯಾರಿ ಸಾಂಸ್ಕೃತಿಕ ಲೋಕಕ್ಕೆ ಮೆರುಗು ನೀಡುವ ಸಿನಿಮ ಒಂದನ್ನು ಬಿಡುಗಡೆ ಗೊಳಿಸಿದಾಗ ಅವರನ್ನು ಪ್ರೋತ್ಸಾಹಿಸಿ ಬೆಂಬಲಿಸುವುದು ಬ್ಯಾರಿ ಭಾಷೆಯನ್ನು ಪ್ರೀತಿಸುವ ಪ್ರತಿಯೊಬ್ಬನ ಕರ್ತವ್ಯವಾಗಿರುತ್ತದೆ ಎಂದು ನಾನು ನಂಬುತ್ತೇನೆ. ಏಕೆಂದರೆ, ಬ್ಯಾರಿಗಳಿಗೆ ಮತ್ತು ಬ್ಯಾರಿ ಭಾಷೆಗೆ ಸಮಾಜದಲ್ಲಿ ಘನತೆ ಗೌರವವನ್ನು ತಂದು ಕೊಟ್ಟವರಲ್ಲಿ ಬ್ಯಾರಿ ಕಲಾವಿದರ ಕೊಡುಗೆ ಬಹಳ ದೊಡ್ಡದು.

ಸಿನಿಮದಲ್ಲಿ ಕೇಂದ್ರ ಕಥಾ ನಾಯಕನಾಗಿರುವು ಮಹಮ್ಮದ್ ಬಡ್ಡೂರ್ ತಮ್ಮ ನಟನೆಯನ್ನು ಇನ್ನಷ್ಟು ಉತ್ತಮ ಗೊಳಿಸ ಬೇಕಿತ್ತು ಎಂದನಿಸುತ್ತದೆ. ಕನ್ನಡ ನಟ ಎಂ. ಕೆ ಮಠ, ನಟಿ ರೂಪ ವರ್ಕಾಡಿ ತಮ್ಮ ಪಾತ್ರವನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ, ಸತ್ತಾರ್ ಗೂಡಿನ ಬಳಿಯವರ ನಟನೆಯೂ ಚೆನ್ನಾಗಿ ಮೂಡಿ ಬಂದಿದೆ. ರಹೀಮ್ ಸಟ್ಟೇರಿ ಪೇಟೆ, ಬಿ. ಮುಹಮ್ಮದ್ ಅಲಿ, ಉಮರ್ ಯು ಎಚ್, ಹುಸೈನ್ ಕಾಟಿಪಳ್ಳ, ಬಷೀರ್ ಬೈಕಂಪಾಡಿ, ಝಾಕಿರ್ ಇಖ್ಲಾಸ್ ಪಾತ್ರಗಳಿಗೆ ಸಾಧ್ಯವಾದ ಮಟ್ಟಿಗೆ ಜೀವ ತುಂಬಿದ್ದಾರೆ. ಎಲ್ವಿನ್ ಕೃಷ್ಣನ್ ರವರ ಛಾಯಾಗ್ರಹಣ ಮಹಮ್ಮದ್ ಬಡ್ಡೂರ್ ರವರ “ಕೊದಿಯುಂಡು ಕಲ್ಬುಲು” “ಮಿನ್ನ ಪುಳು ಚೋನ್ತು” ಹಾಡು ಅರ್ಥವತ್ತಾಗಿದೆ. ಹಿನ್ನೆಲೆ ಸಂಗೀತವು ಉತ್ತಮವಾಗಿದೆ. ಎಂ.ಜಿ. ರಹೀಮ್ ನಿರ್ದೇಶನದ ಅಬ್ಬಾ ಸಿನಿಮಾವನ್ನು ಕಾಪ್ ಮ್ಯಾನ್ ಮೇಕರ್ಸ್ ಮಂಗಳೂರು ನಿರ್ಮಿಸಿದೆ. ಯಾವುದೇ ಅಶ್ಲೀಲಾ ಸಂಭಾಷಣೆ ಇಲ್ಲದ ಕುಟುಂಬ ಸಮೇತ ನೋಡಬಹುದಾದ ಸಿನಿಮ. ಎಲ್ಲರೂ ಅಬ್ಬಾ ಸಿನಿಮಾವನ್ನು ಒಮ್ಮೆ ಗೆಳೆಯರ ಜೊತೆ ಸೇರಿ ನೋಡಿ ಪ್ರೋತ್ಸಾಹಿಸಿ ಬೆಂಬಲಿಸಿ. ಎಂ ಜಿ ರಹೀಮರ ಈ ಮಹತ್ತರ ಕೊಡುಗೆಗೆ ಅಭಿನಂದನೆಗಳು

LEAVE A REPLY

Please enter your comment!
Please enter your name here