(ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶೇಷ ಲೇಖನ)

ಎಂ . ಅಶೀರುದ್ದೀನ್ ಮಂಜನಾಡಿ

ಇಂದು ಮಹಿಳಾ ದಿನಾಚರಣೆ. ಈ ಪ್ರಯುಕ್ತ ಒಂದು ಲೇಖನ ಬರೆಯಬೇಕೆಂದು ಅನಿಸಿತು. ಮಹಿಳಾ ಸಭಲೀಕರಣ,ಹೆಣ್ಣಿನ ಶಿಕ್ಷಣ, ದೌರ್ಜನ್ಯ , ಬ್ರೂಣ ಹತ್ಯೆ, ಇತ್ಯಾದಿ ವಿಷಯಗಳು ಸರ್ವೇಸಾಮಾನ್ಯ ಎಂಬಂತೆ ಪ್ರಕಟಣೆಗಳೂ,ಪ್ರತಿಭಟನೆಗಳೂ ನಿರಂತರ ನಡೆಯುತ್ತಿದೆ. ದೌರ್ಜನ್ಯಗಳು, ಅತ್ಯಾಚಾರಗಳೂ ಪ್ರತಿದಿನ ವರದಿಯಾಗುತ್ತಲೂ ಇವೆ. ಸ್ವತಂತ್ರ ಭಾರತ ಅಭಿವೃದ್ಧಿಯ ಮಂತ್ರ ಹೇಳಿ ಇಷ್ಟು ವರ್ಷಗಳು ದಾಟಿ ನಿಂತರೂ, ಮಹಿಳೆಗೆ  ರಕ್ಷಣೆ ಸಂಪೂರ್ಣವಾಗಿ ನೀಡಲು ಸಾಧ್ಯವಾಗಲಿಲ್ಲ “ಒಂದು ಹೆಣ್ಣು ಅರ್ಧರಾತ್ರಿಯಲ್ಲಿ ರಸ್ತೆಯಿಂದ ಮುಕ್ತವಾಗಿ ನಿರ್ಭಯಳಾಗಿ ಮನೆ ಸೇರುವಳೋ ಅಂದು  ಈ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಲಭಿಸುತ್ತದೆ” ಎಂದು ರಾಷ್ಟ್ರ ಪಿತಾ  ಮಹಾತ್ಮಾ ಗಾಂಧೀಜಿಯವರು ಹೇಳಿರುವರು . ಇಂದಿನ ಪರಿಸ್ಥಿತಿಗೆ ಹೋಲಿಸಿದರೆ ಆ ಸಂದರ್ಭವೂ ಪ್ರವರ್ತನೆಗೆ ಬರಲು ಎಷ್ಟು ವರ್ಷಗಳನ್ನು ಈ ದೇಶ ಕಾದುನೋಡಬೇಕಾಗಬಹುದು ಎಂಬುವುದು ಒಂದು ಪ್ರಶ್ನೆಯಾಗಿದೆ.

ಇತರ ಪಾಶ್ಚತ್ಯ ಅಥವಾ ಅರಬ್ ನಾಡಿನ ಮಹಿಳೆಯಂತೆ ಜಾಗತಿಕ ಬದಲಾವಣೆಯ ನಂತರ ಸಮಾಜದ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಂಡವಳಲ್ಲ  ಭಾರತೀಯ ನಾರಿ  ಬದಲಾಗಿ ಅದೆಷ್ಟೋ ಶತಮಾನಗಳ ಹಿಂದಿನಿಂದಲೂ ಸಮಾಜ ಮುಖಿ ಕೆಲಸದಲ್ಲಿ ತೊಡಗಿ ತನ್ನ ಹಕ್ಕು ಮತ್ತು ನ್ಯಾಯಕ್ಕಾಗಿ  ಪ್ರತಿಭಟಿಸಿದವಳು . ಪಟ್ಟಿ ಮಾಡುತ್ತಾ ಹೋದರೆ ಮುಗಿಯದಷ್ಟು ಹೆಣ್ಣು ಮಕ್ಕಳ ಹೆಸರುಗಳು ಸಿಗಬಹುದು ಶಿಕ್ಷಣಕ್ಕಾಗಿ, ದೌರ್ಜನ್ಯದ ವಿರುದ್ಧ,ಅನಾಚಾರದ ವಿರುದ್ಧ,ದಬ್ಬಾಳಿಕೆಯ ವಿರುದ್ಧ ,ಕಿರುಕುಳವನ್ನು ತಡೆಯಲಾರದೆ ಸತಿಸಹಗಮನದಲ್ಲಿ , ಚಿತೆಗೆ ಹಾರಿ , ಕೆಳಜಾತಿಯ ಹೆಣ್ಣು ಮಕ್ಕಳು ಮೇಲುಜಾತಿಯವರ ಕಾಮದ ಕೊರಳಿಗೆ ಸಿಲುಕಿ, ಹುತಾತ್ಮರಾದ ಮತ್ತು ಈ ದೇಶದ ರಕ್ಷಣೆಗಾಗಿ ಹೋರಾಡಿ ಮಡಿದ ಅದೆಷ್ಟೋ ಮಹಿಳಾ ಮಣಿಗಳು ಇತಿಹಾಸದ ಪುಟದಲ್ಲಿ ಇಂದಿಗೂ ಸ್ಮರಣೀಯ

ನಾಲ್ಕು ಗೋಡೆಯ ಮೂಲೆಯೊಳಗೆ ಗಂಡು ಜೀವದ ಸೇವಕಿ ವೃತ್ತಿಗೆ ಅವನ ಮಕ್ಕಳನ್ನು ಹಡೆವ  ಮತ್ತು ಹಾಸಿಗೆಯ ಸುಖಕ್ಕೆ ಮಾತ್ರ  ಮೀಸಲಿಡಲ್ಪಟ್ಟಿದ್ದ ಹೆಣ್ಣು  ಒಂದು ಗಂಡು ಜೀವದ ಮುಂದೆ ಬಂದು ನಿಲ್ಲಲು ಹೆದರುತ್ತಿದ್ದ ಆ ಕಾಲದಲ್ಲಿ  ರಾಜ್ಯಾಭಾರ ನಡೆಸಿದ ಮತ್ತು ನಾಡಿನ ರಕ್ಷಣೆಗೆ ಹೆಗಲುಕೊಟ್ಟ ವೀರ ರಾಣಿಯರು ನಮ್ಮ ದೇಶದಲ್ಲೂ ರಾಜ್ಯದಲ್ಲೂ ನಾಡಿನಲ್ಲೂ ಇದ್ದರು ಎಂಬುವುದು ಹೆಮ್ಮೆ . ಕಿತ್ತೂರು ರಾಣಿ ಚೆನ್ನಮ್ಮ , ಒನಕೆ ಓಬವ್ವ ,ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ,ಬೇಗಂ ಹಾಜ್ರತ್ ಮಹಲ್ , ಅಹಿಲ್ಯಾ ಬಾಯಿ ಹೊಲ್ಕರ್ ,ಚಾಂದ್ ಬೀಬಿ,ಕೆಳದಿ ಚೆನ್ನಮ್ಮ ,ರಾಣಿ ತಾರಾಬಾಯಿ,ಅಬಾದಿ ಬಾನು ಬೇಗಂ,ಝುಲೈಖಾ ಬೇಗಂ, ಸಾವಿತ್ರಿ ಬಾಯಿ ಪುಲೆ,ಫಾತಿಮಾ ಶೈಖ್ ಹಾಗು ತುಳುನಾಡಿನ ವೀರ ರಾಣಿ ಅಬ್ಬಕ್ಕ . ಇವರ ಹೋರಾಟ ಮತ್ತು ಕೆಚ್ಚೆದೆ ಅಂದಿನ ಕಾಲಕ್ಕೆ ಹೋಲಿಸಿದರೆ ಸಾಹಸಿಕವಾದದ್ದು ಇಂದು ನಾವು ಅವರನ್ನು ಕಾಟಾಚಾರಕ್ಕೆ ಎಂಬಂತೆ ಸ್ವಾತಂತ್ರ್ಯೋತ್ಸವಕ್ಕೆ ಒಮ್ಮೆ ನೆನಪಿಸಿಕೊಳ್ಳುತ್ತೇವೆ ಅಷ್ಟೆ.

ಮಹಿಳಾ ದಿನಾಚರಣೆಯ ಪ್ರಯುಕ್ತ ಅಬ್ಬಕ್ಕಳ ಬಗ್ಗೆ ಬರೆಯುವುದು ಹೆಚ್ಚು ಸೂಕ್ತವೆನಿಸಿತು ಆಕೆ ಇಂದಿನ ಮಹಿಳಾ ಹೋರಾಟಗಾರರಿಗೆ ಮಾದರಿಯಾಗಬೇಕಾದವಳು  ತನ್ನ ತ್ಯಾಗಮಯ ಹೋರಾಟಮಯ ಉದಾರತೆಯ ಜೀವನದಿಂದ ಸ್ಪೂರ್ತಿಯಾಗಬೇಕಾದವಳು ಆದರೆ ಪ್ರಸ್ತುತ ಜನಮಾನಸದಿಂದಲೂ ಇತಿಹಾಸದ ಪುಟಗಳಿಂದಲೂ  ತಿರಸ್ಕೃತಗೊಂಡಿರುವಳೆಂದು ನನಗೆ ಅನಿಸಿತು

ಹೆಚ್ಚಿನವರಿಗೆ ಅಬ್ಬಕ್ಕ ಹೆಸರಿನ ಪರಿಚಯವಿರಬಹುದು ವ್ಯಕ್ತಿಗತವಾಗಿ ಹೆಚ್ಚಾಗಿ ತಿಳಿದಿರಲಿಕ್ಕಿಲ್ಲ . ಅಬ್ಬಕ್ಕ ಎಂದರೆ ಯಾರು ?ಅವಳು ಕೇವಲ ಒಂದು ಸಣ್ಣ ಊರಿನ ರಾಣಿಯೇ ?ನಾಡಿಗೆ ಅವಳ ಕೊಡುಗೆ ಇದೆಯೇ ? ಅವಳಿಗೇಕೆ ಅಷ್ಟು ಪ್ರಾಮುಖ್ಯತೆ ಏಕೆ? ಹೀಗೆ  ಹಲವಾರು ಪ್ರಶ್ನೆಗಳು ಮೂಡಬಹುದು ಇಂತಹ ಹಲವು ಗೊಂದಲಗಲಾಚೆ ಅಬ್ಬಕ್ಕ ಎಂಬ ಮಹಿಳೆ ನಾಡನ್ನು ಆಳಿದಳು ಎಂದಲ್ಲದೆ ಪೋರ್ಚಿಗೀಸರ ಸದ್ದಡಗಿಸಲು ಹೋರಾಡಿದಳು ಎಂಬುವುದು ಇತಿಹಾಸದ ಸತ್ಯ.

ತುಳುನಾಡಿನ ರಾಜ ಮನೆತನದಲ್ಲಿ ಪುತ್ತಿಗೆಯ ಚೌಟರು ಒಂದು ದೊಡ್ಡ ರಾಜ ಮನೆತನದವರು. ವಿಜಯ ನಗರ ಆರಸರ ಪತನದ ನಂತರ ಕೆಳದಿ ಅರಸರ ಅಧೀನದಲ್ಲಿ ತುಳುನಾಡಿನ ದಕ್ಷಿಣ ಭಾಗದ ಉಳ್ಳಾಲವನ್ನು ಕೇಂದ್ರವಾಗಿಟ್ಟುಕೊಂಡು  ರಾಜ್ಯವಾಳುತ್ತಿದ್ದರು.  ಜೈನ ಧರ್ಮದಲ್ಲಿ ನಂಬಿಕೆಯಿರಿಸಿರುವರು ಮತ್ತು  “ಅಳಿಯ ಸಂತಾನ”ಒಂದು ಸಾಮಾಜಿಕ ಏರ್ಪಾಡು ಇವರಲ್ಲಿ ಬಳಕೆಯಿದ್ದ ಪದ್ಧತಿಯಾಗಿತ್ತು . ಸಾಂಸ್ಕೃತಿಕವಾಗಿಯೂ ವ್ಯಾವಹಾರಿಕವಾಗಿಯೂ ತುಳುನಾಡನ್ನು ಬೆಳೆಸುವಲ್ಲಿ ಇವರ ಪಾತ್ರ ಮಹತ್ವದ್ದು.

16ನೇ ಶತಮಾನದಲ್ಲಿ ಪೊರ್ಚೀಗಿಸರು ದಕ್ಷಿಣ ಭಾರತದಲ್ಲಿ ಗೋವಾವನ್ನು ಕೇಂದ್ರವಾಗಿಟ್ಟುಕೊಂಡು ಪ್ರಬಲರಾಗುತ್ತಿದ್ದಂತ ಸಮಯದಲ್ಲಿ 1525 ರಂದು ಅಬ್ಬಕ್ಕಳ  ಜನನವಾಗುತ್ತದೆ,ತಂದೆ ಕಾಮದೇವ ಮತ್ತು ತಾಯಿ ಅಂಬಿಕಾ ದೇವಿಯರ ಮರಣಾನಂತರ ಚಿಕ್ಕಪ್ಪ ತಿರುಮಲರಾಯರ ನೆರಳಲ್ಲಿ ಬೆಳೆದು ವೇದಗಳ ಶಿಕ್ಷಣ,ಯುದ್ಧಕಲೆ, ಅಕ್ಷರಜ್ಞಾನ, ಇತ್ಯಾದಿಗಳನ್ನು ಕರಗತ ಮಾಡಿಕೊಂಡಳು ಪ್ರಾಯ ಪ್ರಬುದ್ದಕ್ಕೆ ತಲುಪಿದ ನಂತರ ರಾಜ ಮನೆತನದ ಪ್ರಕಾರ (ಕುಟುಂಬದಲ್ಲಿ ಗಂಡುಮಕ್ಕಳಿಲ್ಲದಿದ್ದರೆ ) ಅಧಿಕಾರ ವಹಿಸಿಕೊಂಡಳು ಮತ್ತು  ಮಂಗಳೂರಿನ ಬಂಗಾಡಿಯ ರಾಜ ಲಕ್ಷ್ಮಪ್ಪ ಬಂಗರಸನೊಂದಿಗೆ ವಿವಾಹವು ನೆರೆವೇರಿತು ಒಬ್ಬಳು ಗ್ರಹಿಣಿಯಾಗಿ ರಾಣಿಯಾಗಿ ಜೀವನಾರಂಭಿಸಿದಳು ಒಂದು ಮಗನನ್ನು ಮತ್ತು ಮಗಳನ್ನು ಹೆತ್ತಳು . ಪೋರ್ಚಿಗೀಸರು ತಮ್ಮ ಸೈನಿಕ ಬಲದೊಂದಿಗೆ ಒಂದೊಂದೇ ಪಾಳೇಯಗಾರರನ್ನು ಎತ್ತಿಕಟ್ಟಿ ಆಕ್ರಮಿಸುತ್ತಿರಲು, ಪತಿ ಬಂಗರಸ  ಲಕ್ಷ್ಮಪ್ಪ ಅವರೊಂದಿಗೆ ಒಪ್ಪಂದ ಮಾಡಿ ಕಪ್ಪಾ ಕಾಣಿಕೆ ಕೊಡಲಾರಂಭಿಸಿದ ಆರಂಭದಿಂದಲೇ ಇದನ್ನು ವಿರೋಧಿಸುತ್ತಾ ಬಂದ ಅಬ್ಬಕ ತನ್ನ ಪತಿಯೊಂದಿಗೆ ಮಾತಿಗಿಳಿದು ಮಾತು ಮುನಿಸಾಯಿತು ಜಗಳವಾಯಿತು ಪರದೇಶಿಯರಿಗೆ ಕಪ್ಪ ಕೊಡುವುದಿಲ್ಲವೆಂದು ಶಪತ ವಿಟ್ಟು  ಅರಮನೆ ಇಳಿದು ಬಂದು ಉಳ್ಳಾಲದ ರಾಣಿಯಾದಳು 1567,1569,1575,1582ಸುಮಾರು 40 ವರುಷದ ರಾಜ್ಯಭಾರದಿಂದ ನಿರಂತರವಾಗಿ ಶತ್ರುಗಳೊಂದಿಗೆ ಹೋರಾಡಿದಳು ಮತ್ತು ತನ್ನ ತೀರ್ಮಾನಕ್ಕೆ ಕೊನೆಯವರೆಗೂ ಬದ್ಧಳಾಗಿದ್ದಳು 7-8 ಯುದ್ಧಗಳನ್ನು ತನ್ನ ಮುಂದಾಳುತ್ವದಲ್ಲಿ ಮಾಡಿದಳು ತನ್ನ ಮತ್ತು ನಾಡಿನ ಎದುರು ಪಿತೂರಿ ನಡೆಸಿದ ಪತಿಯ ಮತ್ತು ಅವನ ಅಳಿಯ ಕಾಮರಾಯನ ವಿರುದ್ಧ ಯುದ್ಧ ಸಾರಿದಳು ,ಒಂದು ಕಡೆ ನಾಡಿನ ರಕ್ಷಣೆಗೆ ಹೋರಾಟ ಇನ್ನೊಂದುಕಡೆ ಸಂಪತ್ತಿನಿಂದ ನಾಡನ್ನು ಶ್ರೀಮಂತಗೊಳಿಸಿದಳು ಅರಬರೊಂದಿಗೆ ರೋಮನ್ನರೊಂದಿಗೆ ಮಲಬಾರಿನ ಜಾಮೋರಿನ್,ಕುಟ್ಟಿಪೋಕರು,ಕುಞಾಲಿ ಮರಕ್ಕಾರ್,ಕುಂಬಳೆ ರಾಜರೊಂದಿಗೆ, ಬಿಜಾಪುರದ ಸುಲ್ತಾನರೊಂದಿಗೆ ವ್ಯಾಪಾರ ಸಂಬಂಧವನ್ನು ಕುದುರಿಸಿದಳು ಇದೆಲ್ಲವೂ ಒಂದು ಹೆಣ್ಣಿಗೆ ಹೇಗೆ ಸಾಧ್ಯವಾಯಿತೆಂಬುವುದೇ ಅಚ್ಚರಿ . ಇಟಲಿಯ ಪಿಯತ್ರೋ ಡೆಲ್ಲಾ ವೆಲ್ಲ ಮತ್ತು ಪೆರ್ಶಿಯಾದ ಅಬ್ಬಾಸ್ ಉಳ್ಳಾಲಕ್ಕೆ ಭೇಟಿಯಿತ್ತರು Bukarani of Ballal “ಕರಿಮೆಣಸಿನ ರಾಣಿ ” ಎಂಬ ಬಿರುದು ಕೊಟ್ಟರು ಅಲ್ಲದೆ ಅಬ್ಬಕ್ಕ ತಯಾರಿಸಿದ ತೆಂಗಿನ ಗರಿಗಳ ಬಾಣ ಪಿರಂಗಿಗಿಂತಲೂ ಶಕ್ತಿಯುತಯಾಗಿತ್ತು, ನಾಡಿನ ಕಲೆ ಸಾಹಿತ್ಯ ಸಾಂಸ್ಕೃತಿಕ ಮತ್ತು ಸಾಮರಸ್ಯದ ಬೆಳವಣಿಗೆಗೆ ಅಬ್ಬಕಳ ಕೊಡುಗೆ ಅವಿಸ್ಮರಣೀಯವಾದದ್ದು ತನ್ನ ಸೈನ್ಯಾಧಿಪತಿ ಅಲೀ ಖಾನ್ ಎಂಬ  ಓರ್ವ ಮುಸ್ಲಿಮನಾಗಿದ್ದ ಮಂತ್ರಿ ನಾರ್ಣಪ್ಪಯ್ಯ ಎಂಬ ಮೊಗವೀರನಾಗಿದ್ದ, ಜೈನರು, ಚೌಟರು, ಮೊಗವೀರರು,ಮಾಪಿಳ್ಳೆಗಳು,ಬ್ಯಾರಿಗಳು,ಗುರಿಕಾರರು,ಹೊಲೆಯರು,ತನ್ನ ರಾಜ್ಯದಲ್ಲಿ ಸೈನ್ಯದಲ್ಲೂ ಸೌಹಾರ್ದದಿಂದಿದ್ದರು ಒಂದು ಗ್ರಾಮೀಣ ಹೆಣ್ಣು ಪೋರ್ಚಿಗೀಸರ ಬೆಳವಣಿಗೆಗೆ ತಡೆಗೋಡೆಯಾದದ್ದು ವಿಶ್ವವನ್ನೇ ಬೆರಗಾಗುವಂತೆ ಮಾಡಿತು . ಆದರೆ ಖೇದಕರವಾದ ಸಂಗತಿಯೆಂದರೆ ಅಂದು ಹೊರನಾಡಿನ ಪರಕೀಯರು ಅಬ್ಬಕ್ಕಳನ್ನು ತಿರಸ್ಕರಿಸಿದರೆ  ಇಂದು  ಅವಳ ನಾಡ ಜನರೇ ಅವಳನ್ನು ತಿರಸ್ಕರಿಸಿದಂತೆ ಬಾಸವಾಗುತ್ತದೆ

ಅಬ್ಬಕ್ಕಳು ಅವಳು ಒಬ್ಬಳೇ ಇಬ್ಬರೇ ಅಥವಾ ಹೆಚ್ಚಿನವರು ಅಬ್ಬಕ್ಕಂದಿರೂ ಇದ್ದಾರೆಯೇ ? ಎನ್ನುವ ಹಲವಾರು ಪ್ರಶ್ನೆಗಳ ಆಚೆ ಇತಿಹಾಸದ ಹೆಚ್ಚಿನ ರೀತಿಯಲ್ಲಿ ಅಧ್ಯಯನ ನಡೆಯಲಿಲ್ಲ ಹೊರ ನಾಡಿನ ಹೋರಾಟಗಾರರಿಗೆ ಮಹತ್ವಕೊಡುವ ನಾವು ಈ ನಾಡಿನ ವೀರ ವನಿತೆಯ ಮರೆತಿದ್ದೇವೆ ರಸ್ತೆಗೋ ಊರಿಗೋ ಅವಳ ಹೆಸರಿಲ್ಲ ವಿದ್ಯಾ ಕೇಂದ್ರವನ್ನೂ ವಿಮಾನ ನಿಲ್ದಾಣವನ್ನೋ ಅಭಯ ಕೇಂದ್ರವನ್ನೂ ಆಶ್ರಮವನ್ನೋ ವಸ್ತು ಪ್ರದರ್ಶನಾಲಯವನ್ನೋ  ಅವಳ ಹೆಸರಲ್ಲಿ ನೆನಪಿಸಿಲ್ಲ ಅವಳ ಬಗ್ಗೆ ಇತಿಹಾಸ ಅಧ್ಯನದ ಪೀಠಗಳು ವಿಶ್ವವಿದ್ಯಾನಿಲಯಗಳಲ್ಲಿ ತೆರೆದಿಲ್ಲ ಇದೆಲ್ಲವೂ ಖೇದಕರವಾದ ಸಂಗತಿಗಳು. ಅಬ್ಬಕ್ಕಳ ಹೆಸರಿಗೆ ಉತ್ಸವಗಳು ಮಾತ್ರ ಸೀಮಿತವಾಗದೆ ವಿಧ್ಯಾರ್ಥಿಳಲ್ಲಿ ಮಕ್ಕಲ್ಲಿ ಅವಳ ಬಗ್ಗೆ ನೆನಪು ಉಂಟುಮಾಡುವ ಹಲುವು ಕಾರ್ಯಕ್ರಮಗಳು ಕಾರ್ಯಾಗಾರಗಳು ಅಧ್ಯಯನಗಳು ನಡೆಯಲಿ ಅಬ್ಬಕ್ಕ ಈ ನಾಡಿನ ಹಸಿರಿನಲ್ಲೂ ಉಸಿರಿನಲ್ಲಿ ಚಿರಕಾಲ ಉಳಿಯಲಿ .

LEAVE A REPLY

Please enter your comment!
Please enter your name here