ಕಥೆ
ಹಂಝ ಮಲಾರ್

ನನ್ನ ಮದುವೆಯ ನಂತರದ ಹೊಸ ದಿನಗಳು. ನಾನು ತುಂಬಾ ಲವಲವಿಕೆಯಿಂದಿದ್ದೆ. ಹೊಸ ಮುಖ, ಹೊಸ ಊರು-ಪರಿಸರ, ಹೊಸ ಬೆಳಕು, ಗಾಳಿ… ಹೀಗೆ ನನಗೆ ಎಲ್ಲದರಲ್ಲೂ ಹೊಸತು ಕಾಣುತ್ತಿತ್ತು. ಮದುವೆಗೆ ಮುಂಚೆ ಇದ್ದ ಆತಂಕ ದೂರವಾಗಿತ್ತು. ಹೆಂಡತಿ ಮತ್ತು ಮನೆಯವರು ನನ್ನನ್ನು ವಿಶೇಷವಾಗಿ ಆದರಿಸುತ್ತಿದ್ದರು. ಅವರ ಉಪಚಾರದಿಂದ ನನ್ನ ಮನಸ್ಸು ಗೆಲುವಿನಿಂದ ಕೂಡಿತ್ತು.

ನಾನು ಏಕಾಂತವನ್ನು ತುಂಬಾ ಇಷ್ಟಪಡುವವ. ಅದಕ್ಕೆ ತಕ್ಕಂತೆ ನನಗೆ ಆ ಮನೆಯ ವಾತಾವರಣವಿತ್ತು. ಆ ಮನೆಗೆ ನಾನು ಹೆಂಡತಿ ಸಮೇತ ಹೊಕ್ಕರೆ ಅಲ್ಲಿರುವವರ ಸಂಖ್ಯೆ ಐದು ದಾಟುವುದಿಲ್ಲ. ಅಲ್ಲಿ ಸಣ್ಣ ಮಕ್ಕಳು ಕೂಡ ಇಲ್ಲದ ಕಾರಣ ಸೂಜಿ ಬಿದ್ದರೂ ಕೇಳದಷ್ಟು ಮೌನ. ಹೆಂಡತಿ, ಭಾವ, ಭಾವನ ಹೆಂಡತಿ, ಅತ್ತೆ… ಹೀಗೆ ಯಾರ ಧ್ವನಿಯೂ ಜೋರಾಗಿಲ್ಲ. ಸ್ವಲ್ಪ ಎತ್ತರದ ಧ್ವನಿ ಅಂದರೆ ನನ್ನದೆ!.

“ತುಂಬು ಕುಟುಂಬದಲ್ಲಿ ಹುಟ್ಟಿ ಬೆಳೆದ ನಿಮಗೆ ಹೇಗೆ ಏಕಾಂತ ಒಲಿಯಿತು?” ಎಂದು ನನ್ನಾಕೆ ಕಾವ್ಯಮಯವಾಗಿ ಪ್ರಶ್ನಿಸುತ್ತಾಳೆ. ಹೌದು, ನಮ್ಮ ಮನೆ ಜನಜಂಗುಳಿ ಇದ್ದಂತೆ. ಅಲ್ಲಿ ಮನೆಯವರು ಮಾತ್ರವಲ್ಲ, ಅಕ್ಕಪಕ್ಕದವರು ಕೂಡ ಸಮಯದ ಗೊತ್ತುಗುರಿಯಿಲ್ಲದೆ ಯಾವ ಬಾಗಿಲಿನ ಮೂಲಕವಾದರೂ ಒಳಗೆ ನುಗ್ಗಬಹುದಾಗಿತ್ತು. ಹಾಗೇ ತಮಗೆ ಬೇಕಾದದ್ದನ್ನು ಕೇಳಿ ಪಡೆಯಬಹುದಾಗಿತ್ತು.
ಅಪ್ಪ ಕೃಷಿಕ-ವ್ಯಾಪಾರಿ. ಕೃಷಿಗೆ ಸಂಬಂಧಿಸಿದ ಸಲಕರಣೆ ಮಾತ್ರವಲ್ಲ ಕೃಷಿ ಬೆಳೆಗಳನ್ನು ಕೂಡ ಮನೆಯಲ್ಲೇ ರಾಶಿ ಹಾಕಿಸುತ್ತಿದ್ದರು. ಕೆಲವೊಮ್ಮೆ ಅಂಗಡಿ ಸಾಮಗ್ರಿಗಳನ್ನು ಮನೆಯಲ್ಲಿ ದಾಸ್ತಾನು ಇರಿಸುತ್ತಿದ್ದರು. ಬೀಡಿಯ ಗುತ್ತಿಗೆದಾರರೂ ಆಗಿದ್ದರಿಂದ ಎಲೆಯ ಬಂಡಲುಗಳನ್ನು ಮನೆಯಲ್ಲಿ ಅಟ್ಟಿಗಟ್ಟಿಸುತ್ತಿದ್ದರು.

ಬೀಡಿ ಬ್ರಾಂಚಿಗೆ ಬಾಗಿಲು ಹಾಕಿದಾಗ, ಬೀಡಿ ಕಾರ್ಮಿಕರು ನೇರ ಮನೆಗೆ ಆಗಮಿಸಿ ಎಲೆಯೋ, ಸೊಪ್ಪು ಕೊಂಡು ಹೋಗುತ್ತಿದ್ದರು. ಆದರೆ ನನಗೆ ಇದೆಲ್ಲಾ ಇಷ್ಟವಿರಲಿಲ್ಲ. ಮನೆ ಅಂದ್ಮೇಲೆ ಅದು ವಾಸಕ್ಕೆ ಯೋಗ್ಯವಾಗಿರಬೇಕು. ಹಗಲಿಡೀ ದುಡಿದು ಬಂದ ದೇಹಕ್ಕೆ ವಿಶ್ರಾಂತಿ-ನೆಮ್ಮದಿ ನೀಡುವ ತಾಣ ಅದಾಗಬೇಕು. ಅದರ ಬದಲು ಮನೆಯನ್ನೇ ಅಂಗಡಿ-ಗೋದಾಮು ಮಾಡುವುದು ಸರಿಯಾ? ಎಂದು ನಾನು ಗೊಣಗುತ್ತಿದ್ದೆ. ಆ ಮನೆಯಲ್ಲಿ ನಾನೇ ಮೊದಲು ಎಸ್‍ಎಸ್‍ಎಲ್‍ಸಿ ತೇರ್ಗಡೆ ಹೊಂದಿದ ಕಾರಣವೋ ಅಥವಾ ಇನ್ನೇನೋ ಗೊತ್ತಿಲ್ಲ, ಮನೆಯಲ್ಲಿ ಸಾಮಗ್ರಿಗಳನ್ನೆಲ್ಲಾ ರಾಶಿ ಹಾಕಿಡುವುದು ನನಗೆ ಸರಿ ಕಾಣುತ್ತಿರಲಿಲ್ಲ. ಅದನ್ನು ಒಂದೆರೆಡು ಬಾರಿ ಪ್ರಶ್ನಿಸಿದಾಗ, “ಅದು ಅನ್ನ ಕೊಡುವಂತದ್ದು. ನಿನಗೆ ಈ ಮನೆಯಲ್ಲಿರಲು ಇಷ್ಟವಿಲ್ಲದಿದ್ದರೆ ಹೋಗಬಹುದು” ಎಂದು ಅಬ್ಬ ಹೇಳಿ ನನ್ನ ಬಾಯಿ ಮುಚ್ಚಿಸುತ್ತಿದ್ದರು.
ನನ್ನ ಇಬ್ಬರು ಅಣ್ಣಂದಿರಿಗೆ ಶಾಲೆಯ ಓದು ತಲೆಗೆ ಹತ್ತಲಿಲ್ಲ. ಅವರು ಕೂಡ ಅಬ್ಬನ ದಾರಿಯಲ್ಲೇ ವ್ಯಾಪಾರದತ್ತ ಮನಸ್ಸು ಮಾಡಿದರು. ಕ್ರಮೇಣ ಇಬ್ಬರು ತಮ್ಮಂದಿರೂ ಕೂಡ ಕೃಷಿ-ಅಂಗಡಿ ಎಂದೆಲ್ಲಾ ಓಡಾಡತೊಡಗಿದರು. ನಾನು ಮಾತ್ರ ಪದವಿ ಮಾಡಿ ಮುಗಿಸುವ ತವಕದಿಂದಿದ್ದೆ.

ತನ್ಮಧ್ಯೆ ನಮ್ಮ ಅಕ್ಕನಿಗೆ ಊರಲ್ಲೇ ಮನೆ ನಿರ್ಮಾಣವಾಗಿತ್ತು. ಭಾವ ಗಲ್ಫ್‍ನಲ್ಲಿದ್ದ ಕಾರಣ, ಆ ಮನೆಗೊಬ್ಬ ಗಂಡಸು ಬೇಕಾಗಿತ್ತು. ನನಗೆ ನನ್ನ ತಾಯಿ ಮನೆಯ ವಾತಾವರಣ ಹಿಡಿಸದ್ದನ್ನು ಮೊದಲೇ ತಿಳಿದಿದ್ದ ಅಬ್ಬ, ಭಾವ ಬರುವವರೆಗೆ ನೀನು ಆ ಮನೆಯಲ್ಲಿರು ಎಂದಿದ್ದರು. ಅದರಂತೆ ನಾನು ಬರೋಬ್ಬರಿ 14 ವರ್ಷ ಅಕ್ಕನ ಮನೆಯಲ್ಲಿದ್ದೆ. ಅಕ್ಕನ ಮನೆ ನನಗೆ ಹೇಳಿ ಮಾಡಿಸಿದಂತಿತ್ತು. ಅಲ್ಲಿ ನಾನು, ಅಕ್ಕ ಮತ್ತು ನಾಲ್ಕು ವರ್ಷದ ಅಕ್ಕನ ಮಗ ಮಾತ್ರ ಇದ್ದೆವು. ಹಾಗಾಗಿ ಕಥೆ ಬರೆಯುವುದು, ಓದುವುದು, ಹೀಗೆ ಎಲ್ಲದಕ್ಕೂ ನನಗೆ ಅಲ್ಲಿ ಮುಕ್ತ ವಾತಾವರಣ ಮಾಡಿಸಿದಂತಿತ್ತು.
ಮದುವೆ ಇಲ್ಲವಾ ಎಂದು ದಲ್ಲಾಳಿ ಜಕ್ರಿಯಾಕ ಕೇಳಿ ಪದೇ ಪದೇ ಒತ್ತಾಯಪಡಿಸÀದಿರುತ್ತಿದ್ದರೆ ನಾನು ಆ ವಿಷಯದಲ್ಲಿ ಆಸಕ್ತಿ ವಹಿಸುತ್ತಿರಲಿಲ್ಲವೋ ಏನೋ?. ಮೊದಲ ನೋಟದಲ್ಲೇ ನನಗೆ ಹುಡುಗಿ ಮೆಚ್ಚುಗೆಯಾಗಬೇಕು. ಇಲ್ಲದಿದ್ದರೆ ನಾನು ಮತ್ತೆಂದೂ ಹುಡುಗಿ ನೋಡುವ ಶಾಸ್ತ್ರ ಮಾಡುವುದಿಲ್ಲ. ಅಷ್ಟೇ ಅಲ್ಲ ಮದುವೆಯೂ ಆಗುವುದಿಲ್ಲ ಎಂದು ದಲ್ಲಾಳಿಗೆ ಹೇಳಿದ್ದೆ. ಅದರಂತೆ ದಲ್ಲಾಳಿ ತೋರಿಸಿದ್ದ ಹುಡುಗಿಯ ಫೋಟೋ ನೋಡಿ ತುಂಬಾ ಖುಷಿಗೊಂಡೆ.

ಅದೊಂದು ಸಂಜೆ ನಾನೇ ಹೋಗಿ ಹುಡುಗಿ ನೋಡಿದೆ. ಮೆಚ್ಚುಗೆಯಾದೊಡನೆ ಒಪ್ಪಿಗೆ ಕೊಟ್ಟೆ. ಎರಡೇ ವಾರದಲ್ಲಿ ಸರಳ ಮದುವೆಯೂ ಆಯಿತು.
ನನಗೆ ನೀಡಿದ ಕೋಣೆ ಅಟ್ಯಾಚ್ ಬಾತ್‍ರೂಮ್‍ನಿಂದ ಕೂಡಿತ್ತು. ನಾನು ಈ ಹಿಂದೆ ಎರಡು ಮನೆಯಲ್ಲಿ ಹಲವಾರು ವರ್ಷ ಕಳೆದರೂ ಕೂಡ ನನಗೆ ಅಲ್ಲಿ ಅದರ ಸೌಭಾಗ್ಯವಿರಲಿಲ್ಲ. ಹಾಗಾಗಿ ಅತ್ತೆ ಮನೆಯಲ್ಲಿ ಸಿಕ್ಕಿದ ಈ ಅವಕಾಶ ನನ್ನನ್ನು ತುಂಬಾ ಪುಳಕಿತಗೊಳಿಸಿತ್ತು.
ಅದೊಂದು ಸಂಜೆ ನಾನು ಅತ್ತೆ ಮನೆಯಲ್ಲಿದ್ದೆ. ಕಿಟಕಿಗೆ ಹಾಕಿದ್ದ ಪರದೆ ಸರಿಸಿ, ಗಾಳಿ ಬೆಳಕಿಗಾಗಿ ಬಾಗಿಲುಗಳನ್ನೆಲ್ಲಾ ತೆರೆದೆ. ಸಂಜೆಯ ಬಿಸಿಲಮಯ ಗಾಳಿ ನನ್ನ ಮನಕ್ಕೆ ಆಹ್ಲಾದಕರವನ್ನುಂಟು ಮಾಡಿತ್ತು.
ಸ್ವಲ್ಪ ಹೊತ್ತಿನಲ್ಲೇ ನನ್ನಾಕೆ ಬಂದು “ಈ ಕಿಟಕಿಯ ಬಾಗಿಲು ತೆರೆಯದಿದ್ದರೆ ಚೆನ್ನಾಗಿತ್ತು” ಎಂದಳು.
“ಯಾಕೆ? ಶುಭ್ರ ಗಾಳಿ, ಬೆಳಕು ನಿನಗೆ ಇಷ್ಟವಿಲ್ಲವಾ?” ಎಂದು ನಾನು ಕೇಳಿದೆ.
“ಹಾಗಲ್ಲ…”- ನನ್ನಾಕೆ ಮಾತಿಗಾಗಿ ತಡಕಾಡಿದಳು.
“ಏನು… ಹೇಳು, ನಿನಗೆ ಇದರಿಂದ ತೊಂದರೆಯಾಗುತ್ತದಾ?”-ನಾನು ಕೇಳಿದೆ.
“ಪಕ್ಕದ ಆ ಮನೆಯವರಿಗೂ ನಮಗೂ ಸರಿ ಇಲ್ಲ”
“ಏನು ಸಮಸ್ಯೆ?”
“ಅಂಥದ್ದೆನೂ ಇಲ್ಲ, ಸಣ್ಣ ವಿಷಯ”
“ಬಾಗಿಲು ಮುಚ್ಚಿದರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದಾ?”- ನಾನು ಪ್ರಶ್ನಿಸಿದೆ.
“ನಿಮಗೆ ಈಗ ಅದೊಂದೂ ಅರ್ಥವಾಗಲಿಕ್ಕಿಲ್ಲ. ಕ್ರಮೇಣ ಅದೆಲ್ಲಾ ಅರ್ಥವಾದೀತು” ಎಂದು ನನ್ನಾಕೆ ಮಾತು ಮುಂದುವರಿಸಲಾಗದೆ ವಿಷಯ ಬದಲಾಯಿಸತೊಡಗಿದಳು.
ಅವಳು ವಿಷಯ ಮುಚ್ಚಿಟ್ಟಷ್ಟೂ ನನ್ನ ಕುತೂಹಲ ಹೆಚ್ಚಾಯಿತು. ನಾನು ಮತ್ತೆ ಮತ್ತೆ ಅದನ್ನು ಕೆದಕಿದೆ. ಕೊನೆಗೂ ನನ್ನ ಹಠಕ್ಕೆ ಕಟ್ಟು ಬಿದ್ದ ನನ್ನಾಕೆ ಒಂದೊಂದೇ ಸಂಗತಿಯನ್ನು ಹೊರ ಹಾಕತೊಡಗಿದಳು.

ವಿಷಯ ಇಷ್ಟೆ : ಆ ಮನೆಯಲ್ಲೊಬ್ಬರು ಅಜ್ಜಿ ಇದ್ದಾರೆ. ಸುಮಾರು 76 ವರ್ಷ ಪ್ರಾಯ ದಾಟಿದೆ. ಅಕ್ಷರ ಜ್ಞಾನವಿಲ್ಲ. ಆದರೆ ಮಾತು ಅಥವಾ ಸುದ್ದಿಗಳನ್ನು ಬಿತ್ತುವುದರಲ್ಲಿ ಹುಷಾರು. ಯಾರಿಗೂ ತಿಳಿಯದ ಸುದ್ದಿ ಅವರಿಗೆ ಸಿಗುತ್ತಿತ್ತು. ಅದನ್ನೆಲ್ಲಾ ಅವರು ಊರಿಡೀ ಹೇಳಿಕೊಂಡು ತಿರುಗಾಡುತ್ತಿದ್ದರು. ಪಾತಜ್ಜಿಯ ಕಿವಿಗೆ ಬಿದ್ದರೆ ಸಾಕು, ಯಾವ ಪೇಪರೂ ಬೇಕಾಗಿಲ್ಲ ಎಂದು ಕೆಲವರು ಹೇಳುವುದುಂಟು. ಹಾಗಾಗಿ ಅವರಿಗೆ “ಅಸರ್ವಾಣಿ ಪತ್ರಿಕೆ” ಅಂತ ಅಡ್ಡ ಹೆಸರಿಟ್ಟಿದ್ದರು. ಅಷ್ಟೇ ಅಲ್ಲ, ಅಜ್ಜಿ ಜಗಳಗಂಟಿಯೂ ಹೌದು. ಸಣ್ಣ ಪುಟ್ಟ ವಿಷಯಕ್ಕೂ ಆಕಾಶವೇ ಕಳಚಿ ಬಿದ್ದಂತೆ ಅಬ್ಬರಿಸುತ್ತಿದ್ದರು. ಜನ ಸೇರಿಸುತ್ತಿದ್ದರು. ಕೊನೆಗೆ ನಿಮಗೆಂಥ ಇಲ್ಲಿ ಕೆಲಸ ಎಂದು ಕೇಳಿ ಕಿಡಿ ಕಾರುತ್ತಾ ಸೇರಿದ ಜನರನ್ನು ಅವರೇ ಚದುರಿಸುತ್ತಿದ್ದರು. ಇತರರ ಮಧ್ಯೆ ವೈಷಮ್ಯವನ್ನುಂಟು ಮಾಡುವುದರಲ್ಲೂ ಪಾತಜ್ಜಿ ಒಂದು ಹೆಜ್ಜೆ ಮುಂದಿದ್ದರು. ಈ ಬಗ್ಗೆ ಯಾರಾದರು ಆಕ್ಷೇಪವೆತ್ತಿದರೆ, ನಾನು ಕಣ್ಮುಚ್ಚಿದ ನಂತರ ನಿಮಗೆ ನನ್ನ ಅವಶ್ಯಕತೆ ಎಷ್ಟು ಉಂಟು ಅಂತ ಗೊತ್ತಾದೀತು? ಎನ್ನುತ್ತಿದ್ದರು.
ಅಂಥ ವಿಶೇಷತೆ ನಿಮ್ಮಲ್ಲಿ ಏನುಂಟು ಎಂದು ಕೇಳಿದರೆ, ಈ ಊರಿನ ಮೂರ್ನಾಲ್ಕು ಹುಡುಗಿಯರು ಯಾರೊಟ್ಟಿಗೋ ಓಡಿ ಹೋಗಲು ಮುಂದಾದಾಗ ನಿಮಗೆಲ್ಲಾ ತಿಳಿಸಿ ಅವರು ಪರಾರಿಯಾಗದಂತೆ ನಾನು ನೋಡಿಲ್ಲವಾ? ಒಂದು ವೇಳೆ ಓಡಿ ಹೋಗಿದ್ದರೆ ಹುಡುಗಿಯ ಹೆಸರಿನ ಜತೆಗೆ ಪತ್ರಿಕೆಯಲ್ಲಿ ಈ ಊರಿಗೂ ಕೆಟ್ಟ ಹೆಸರು ಬರುತ್ತಿರಲಿಲ್ಲವಾ? ಎಂದು ತಿರುಗೇಟು ನೀಡುತ್ತಿದ್ದರು.
“ನೀವೇ ದೊಡ್ಡ ಪೇಪರು… ಮತ್ತೆ ಅದನ್ನು ಪ್ರಿಂಟ್ ಹಾಕಿಸಬೇಕಾ?” ಎಂದು ಛೇಡಿಸಿದರೆ ಥೂ ಅಂತ ಉಗುಳಿ ಅವಾಚ್ಯ ಶಬ್ದದಿಂದ ಬೈಯ್ಯುತ್ತಿದ್ದರು.
ಪಾತಜ್ಜಿಯ ಗಂಡ 20 ವರ್ಷದ ಹಿಂದೆಯೇ ಅಸುನೀಗಿದ್ದಾರೆ. ಏಕೈಕ ಮಗಳು ಮತ್ತು ಅಳಿಯ ರಸ್ತೆ ಅಪಘಾತದಲ್ಲಿ ವರ್ಷದ ಹಿಂದೆ ಕೊನೆಯುಸಿರೆಳೆದಿದ್ದರು. ಊರವರ ಸುದ್ದಿಯನ್ನು ಆಚೀಚೆ ಮಾಡಿದ್ದಕ್ಕೆ ಅಲ್ಲಾಹು ಪಾತಜ್ಜಿಗೆ ಶಿಕ್ಷೆ ಕೊಟ್ಟ ಎಂದು ಕೆಲವರು ಹೇಳಿದ್ದುಂಟು.
ಗಂಡನ ಅಗಲಿಕೆಯ ದು:ಖ ಮರೆಯಲು ಪಾತಜ್ಜಿ ಬೀಡಿ ಸೇದತೊಡಗಿದ್ದರು. ಅವರು ಮೂಗಲ್ಲೂ, ಕಿವಿಯಲ್ಲೂ ಬೀಡಿಯ ಹೊಗೆ ಬಿಡುತ್ತಿದ್ದರು. ಅಜ್ಜಿಗೆ ಸಿಗರೇಟು ಸೇದಲು ಗೊತ್ತಿಲ್ಲ ಎಂದು ಯಾರಾದರು ತಮಾಶೆ ಮಾಡಿದರೆ, ಸಿಗರೇಟಿನಲ್ಲಿ ಎಂಥದ್ದುಂಟು ಮಣ್ಣಾಂಗಟ್ಟಿ… ಬೀಡಿಯಲ್ಲಿರುವ ಸುಖ ನಿಮಗೆ ಗೊತ್ತಾ? ಎಂದು ಕಿಡಿಕಾರುತ್ತಿದ್ದರು.
ಪಾತಜ್ಜಿ ಕೆಲವೊಮ್ಮೆ ತನ್ನಷ್ಟಕ್ಕೆ ಮಾತನಾಡುತ್ತಾರೆ, ಹಾಡುತ್ತಾರೆ. ಆಕಾಶ ದಿಟ್ಟಿಸಿ ಏನೇನೋ ಹೇಳುತ್ತಾರೆ. ಅದರ ಬಗ್ಗೆ ಕೇಳಿದರೆ, ನಾನು ಈ ಊರ ಜನರ ಹಿತಕ್ಕಾಗಿ ಪ್ರಾರ್ಥಿಸಿದೆ ಎನ್ನುತ್ತಾರೆ.
ಇತ್ತೀಚಿನ ದಿನಗಳಲ್ಲಿ ಪಾತಜ್ಜಿ ಮನೆಯಲ್ಲಿ ಅಡುಗೆ ಕೂಡ ಮಾಡುತ್ತಿರಲಿಲ್ಲ. ಊರಿಡೀ ತಿರುಗಾಡಿ ಹೊಟ್ಟೆ ತುಂಬಿಸುತ್ತಿದ್ದರು. ಆದರೆ ಯಾರಿಂದಲೂ ನಯಾ ಪೈಸೆ ಕೇಳಿದವರಲ್ಲ. ಯಾರಾದರು ಕೈಯಾರೆ ಕೊಟ್ಟರೆ ಬೇಡ ಎನ್ನುತ್ತಿರಲಿಲ್ಲ. ಮಗಳು ಮತ್ತು ಅಳಿಯನ ಸಾವಿನ ನಂತರ ಪಾತಜ್ಜಿ ಬೀಡಿ ಸೇದುವುದನ್ನೂ ನಿಲ್ಲಿಸಿದ್ದಾರೆ. ಅಳಿಯ ಮತ್ತು ಮಗಳು ಚಲಿಸುತ್ತಿದ್ದ ಬೈಕ್‍ಗೆ ಬಸ್ಸೊಂದು ಗುದ್ದಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. 4 ತಿಂಗಳ ಹಸೀನಾ ಪ್ರಾಣಾಪಾಯದಿಂದ ಪಾರಾಗಿದ್ದಳು. ಡಿಕ್ಕಿ ಹೊಡೆದ ರಭಸಕ್ಕೆ ಹಸೀನಾ ಮಣ್ಣು ರಸ್ತೆಗೆ ಎಸೆಯಲ್ಪಟ್ಟರೂ ಕೇವಲ ತರಚಿದ ಗಾಯವಾಗಿತ್ತು. “ಅಲ್ಲಾಹನ ರಕ್ಷೆ ಇದ್ದರೆ ಬದುಕುಳಿಯಬಹುದು” ಎಂಬುದಕ್ಕೆ ಇದು ಸಾಕ್ಷಿ ಎಂದು ಮಗುವಿನ ಕುರಿತು ಎಲ್ಲರೂ ಹೇಳಿಕೊಳ್ಳತೊಡಗಿದರು.
ಒಂದೆರೆಡು ದಿನ ಜೀವಚ್ಛವವಾಗಿದ್ದ ಪಾತಜ್ಜಿ, ನಂತರ ತನ್ನ ಪುಳ್ಳಿಯನ್ನು ಕಂಡು ಅದರ ಆರೈಕೆಯಲ್ಲಿ ತೊಡಗಿಸಿಕೊಂಡರು. ಅಲ್ಲಾಹು ಕೊಟ್ಟದ್ದನ್ನು ನಾನು ಆರೈಕೆ ಮಾಡದಿದ್ದರೆ, ಈ ಮಗುವನ್ನು ಕೊಂದ ಪಾಪ ನನಗೆ ಬಂದೀತು ಎಂದು ಆತಂಕಿಸಿದ ಪಾತಜ್ಜಿ, ಹಸೀನಾಳ ಉಪಚಾರದಲ್ಲೇ ಕಾಲ ಕಳೆದರು. ಪಕ್ಕದ ಹಬೀಬಾ ಕೂಡ ಆಗಷ್ಟೇ ಹೆಣ್ಮಗುವಿಗೆ ಜನ್ಮ ನೀಡಿದ್ದಳು. ಆಕೆ, ಹಸೀನಾಳಿಗೆ ಮೊಲೆ ಹಾಲುಣಿಸುತ್ತಿದ್ದಳು. ಮಗು ಅತ್ತಾಗಲೆಲ್ಲಾ ಪಾತಜ್ಜಿ ಹಬೀಬಾಳ ಬಳಿ ಹೋಗಿ “ನನ್ನ ಪುಳ್ಳಿಗೆ ಸ್ವಲ್ಪ ನಿನ್ನ ಅಮೃತ ಕೊಡು” ಎನ್ನುತ್ತಿದ್ದರು.
ಪಾತಜ್ಜಿ ಹಬೀಬಾಳ ಮನೆಯವರ ಜತೆಯೂ ಅದ್ಯಾವುದೋ ಸಣ್ಣ ವಿಷಯಕ್ಕೆ ಈ ಹಿಂದೆ ಜಗಳ ತೆಗೆದಿದ್ದರು. ಆದರೆ ಅದನ್ನು ಹಬೀಬಾಳ ಮನೆಯವರು ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲ. ಆ ಹಳೆಯ ಕಹಿ ಘಟನೆಯನ್ನು ಮರೆತು ಮಾನವೀಯತೆ ಪ್ರದರ್ಶಿಸಿದ್ದರು.
ದಿನಗಳೆದಂತೆ, ಹಸೀನಾಳಿಗೆ ಪಾತಜ್ಜಿಯನ್ನು ಬಿಟ್ಟಿರಲು ಆಗುತ್ತಿಲ್ಲ. ಆಕೆ, ಆಚೀಚೆ ಹೋಗುವಾಗ ಮಗುವನ್ನೂ ಕರೆದುಕೊಂಡು ಹೋಗುತ್ತಿದ್ದರು. ಅಲ್ಲದೆ, ಹಸೀನಾ ಕೂಡ ಪಾತಜ್ಜಿಯನ್ನು ಉಮ್ಮ ಎಂದೇ ಕರೆಯುತ್ತಿದ್ದಳು.
ಪಾತಜ್ಜಿಯ ಆರೈಕೆಯಲ್ಲಿ ಬೆಳೆದ ಕಾರಣ, ಎಲ್ಲರೂ ಆ ಮಗುವನ್ನು ಹೆಸರಿಡಿದು ಕರೆಯುವ ಬದಲು “ಅಜ್ಜಿ ಸಾಕಿದ ಪುಳ್ಳಿ” ಎನ್ನುತ್ತಿದ್ದರು. ಎರಡು ವರ್ಷ ಪ್ರಾಯದ ಹಸೀನಾಳ ಚಲನವಲನಗಳನ್ನು ಗಮನಿಸಿದ ಅಕ್ಕಪಕ್ಕದವರು “ಇದು ನಿಜಕ್ಕೂ ಅಜ್ಜಿ ಸಾಕಿದ ಪುಳ್ಳಿ” ಎಂದು ಹೇಳಿಕೊಳ್ಳುತ್ತಿದ್ದರು.
ಹೇಗಾದರು ಸರಿ, ಪಾತಜ್ಜಿಯ ಪರಿಚಯ ಮಾಡಿ ಮಾತನಾಡಿಸಬೇಕು. ನನ್ನ ಕಥೆಗೆ ವಸ್ತುಗಳು ಸಿಗುತ್ತದಾ ಅಂತ ನೋಡಬೇಕು ಎಂದು ನಾನು ಮನಸ್ಸಿನಲ್ಲೇ ಅಂದುಕೊಂಡೆ.
ಮರುದಿನ ಅಲ್ಲಿಂದ ನಾನು ಹೊರಡಬೇಕಾಗಿತ್ತು. ಆದರೆ, ಅಜ್ಜಿ ಮತ್ತು ಅಜ್ಜಿ ಸಾಕಿದ ಪುಳ್ಳಿಯನ್ನು ಕಾಣಬೇಕು ಎಂಬ ಅಭಿಲಾಶೆ ನನಗೆ ಹೆಚ್ಚಾಯಿತು. ಆವತ್ತಿಡೀ ನಾನು ಕಿಟಕಿಯ ಬಾಗಿಲು ತೆರೆದಿಟ್ಟು ಆ ಮನೆಯ ಪುಟ್ಟ ಕಿಟಕಿಯತ್ತ ಕಣ್ಬಿಟ್ಟು ನೋಡತೊಡಗಿದೆ. ಎರಡು ವರ್ಷ ಪ್ರಾಯದ ಮಗು ಹಸೀನಾಳಿಗಾಗಿ ತವಕಿಸಿದೆ. ಮಗುವಿನ ಅಳು, ಅಜ್ಜಿ ಅದ್ಯಾವುದೋ ಹಾಡು ಹೇಳಿ ಮಗು ನಿದ್ದೆಗೆ ಜಾರುವಂತೆ ಮಾಡುವುದು ಎಲ್ಲವೂ ಕೇಳಿಸುತ್ತಿತ್ತು. ಜತೆಗೆ ಯಾರಿಗೋ, ಯಾವುದೋ ವಿಷಯಕ್ಕೆ ಸಂಬಂಧಿಸಿ ಅವಾಚ್ಯ ಶಬ್ದಗಳ ಬೈಗುಳವೂ ಕೇಳಿಸುತ್ತಿತ್ತು.
ಒಂದೆರೆಡು ಬಾರಿ ಪಾತಜ್ಜಿ ಹೊರಗೆ ಬಂದಾಗ ನಾನು ಅವರನ್ನು ಸ್ಪಷ್ಟವಾಗಿ ನೋಡಿದೆ. ಹಳೆ ಕಾಲದ ಕುಪ್ಪಸ, ಅಡ್ಡಪಟ್ಟಿಯ ಹಸಿರು ಬಣ್ಣದ ಸೀರೆ, ತಲೆಗೆ ಕೆಂಪು ಬಣ್ಣದ ಎಲ್ಸರ, ಕಿವಿಯಲ್ಲಿ ಜೋತು ಬಿದ್ದಂತೆ ಕಾಣುವ ಅಲಿಕಾತು, ದಪ್ಪ ಶರೀರದ ಪಾತಜ್ಜಿಯನ್ನು ಕಣ್ಬಿಟ್ಟು ನೋಡುವುದೇ ಹಬ್ಬ!.
ಸಂಜೆಯ ಹೊತ್ತು ಮಗು, ಸರಿಯಾಗಿ ಬೆಳಕು ಬೀಳದ ಸಣ್ಣ ಕಿಟಕಿಯ ಸರಳನ್ನು ಹಿಡಿದು ನಿಂತಿತ್ತು. ತಕ್ಷಣ ನಾನು ಆ ಮಗುವಿಗೆ ಕಾಣುವಂತೆ ಸಿಳ್ಳೆ ಹಾಕಿದೆ, ಕೈ ಬೀಸಿ ಕರೆದೆ. ಆಟಿಕೆಯ ವಸ್ತುಗಳು ಮತ್ತು ಸಿಹಿ ತಿಂಡಿಯ ಪೆÇಟ್ಟಣವನ್ನೂ ತೋರಿಸಿದೆ. ಕ್ಷಣಕಾಲ ಹೆದರಿದ ಮಗು, ನನ್ನ ಮುಗುಳ್ನಗುವನ್ನು ಕಂಡು ಸಾವರಿಸಿಕೊಂಡಿತು. ಸ್ವಲ್ಪ ಸಮಯದ ನಂತರ ಮಗು ಕೂಡ ನಗಾಡತೊಡಗಿತು. ಟಾಟಾ ಮಾಡಿತು. ನಾನೂ ಕೈ ಬೀಸಿದೆ. ಅಷ್ಟರಲ್ಲಿ ದಜ್ಜಾಲಿಯಂತೆ ಬಂದ ಪಾತಜ್ಜಿ “ಯಾ… ರಬ್ಬೇ?” ಎಂದು ಬೊಬ್ಬಿಟ್ಟು ಮಗುವನ್ನು ಎಳೆದುಕೊಂಡು ಹೋದರು. ಮಗು ಕಿಟಕಿಯತ್ತ ನಿಂತು ನನ್ನನ್ನು ನೋಡುವುದಕ್ಕಾಗಿ ಅಳುತ್ತಲೇ ಇತ್ತು.
“ಬೇಡ… ನೀನು ಅಲ್ಲಿ ನಿಲ್ಲಬೇಡ” ಎಂದು ಪಾತಜ್ಜಿ ಒಂದೇ ಸವನೆ ಹೇಳುತ್ತಿದ್ದರು. ನಾನು ತಪ್ಪು ಮಾಡಿಬಿಟ್ಟೆನೋ ಎಂದು ಗೊತ್ತಾಗಲಿಲ್ಲ. ನನ್ನಾಕೆ ಅಲ್ಲೇ ಒಳಗೆ ಕುಳಿತು ಎಲ್ಲವನ್ನೂ ದಿಟ್ಟಿಸುತ್ತಿದ್ದಳು.
“ನಿಮ್ಮ ಮೇಲೆ ಅವರಿಗೆ ಯಾಕಿಷ್ಟು ಸಿಟ್ಟು?”-ನಾನು ಪ್ರಶ್ನಿಸಿದೆ.
“ನನ್ನ ಅಣ್ಣನಿಗೆ ಅವರ ಮಗಳನ್ನು ಕೊಡಲು ಮನಸ್ಸಿತ್ತು. ಅದಕ್ಕೆ ನಾವು ಒಪ್ಪಿರಲಿಲ್ಲ. ಆ ಸಿಟ್ಟಿನಲ್ಲಿ ಅವರು ಮಾತು ನಿಲ್ಲಿಸಿದರು, ಅಣ್ಣನಿಗೆ ಬಂದ ಒಂದೆರೆಡು ಪೆÇದು ಸಂಬಂಧವನ್ನು ತಪ್ಪಿಸಿದರು. ಅದರ ನಂತರ ನಾವು ಮಾತು ಬಿಟ್ಟೆವು. ಅವರ ಮಗಳ ಮದುವೆಗೆ ನಮ್ಮನ್ನು ಕರೆಯಲಿಲ್ಲ. ಅಣ್ಣ ಮತ್ತು ನನ್ನ ಮದುವೆಗೂ ನಾವು ಅವರನ್ನು ಕರೆಯಲಿಕ್ಕೆ ಹೋಗಲಿಲ್ಲ” ಎಂದು ನನ್ನಾಕೆ ಹೇಳಿದಳು.
“ಅಷ್ಟೇನಾ… ಅದಕ್ಕೆಲ್ಲಾ ಮಾತನಾಡದಿರುವುದಾ? ನೆರಕರೆ ಅಂದ್ಮೇಲೆ ಅದೆಲ್ಲಾ ಸಾಮಾನ್ಯ” ಅಂತ ನಾನು ಉಸುರಿ “ಅಜ್ಜಿಯ ಹೆಸರಿನಲ್ಲಿ ಕಥೆ ಬರೆಯಬೇಕು” ಎಂದೆ.
“ನೀವು ಏನೇನೋ ಎಡವಟ್ಟು ಮಾಡಬೇಡಿ. ಕಥೆ ಬರೆಯುವ ನಿಮ್ಮ ಮೇಲೆಯೇ ಅವರು ಕಥೆ ಕಟ್ಟಿಯಾರು” ಎಂದಾಗ, ನಾನು ಗೊಳ್ಳನೆ ನಕ್ಕೆ.
ಮುಂದಿನ ವಾರ ನಾನು ಮತ್ತೆ ಅತ್ತೆ ಮನೆಗೆ ಹೋದೆ. ಅದೇ, ಕಿಟಕಿಯ ಬಾಗಿಲು ಸರಿಸಿ ಅಲ್ಲೇ ನಿಂತೆ. ಅರ್ಧ ಗಂಟೆಯವರೆಗೆ ಮಗುವಿನ ಸುಳಿವಿಲ್ಲ. ಸ್ವಲ್ಪ ಹೊತ್ತಿನಲ್ಲೇ ಮಗು ಮನೆಯ ಹಿತ್ತಲಿಗೆ ಬಂತು. ನಾನು ತಿಂಡಿಯ ಪೆÇಟ್ಟಣ ಮತ್ತು ಆಟಿಕೆ ವಸ್ತುಗಳನ್ನು ತೋರಿಸಿ ಮಗುವನ್ನು ಹತ್ತಿರ ಕರೆದೆ.
ಒಮ್ಮೆ ಆಚೀಚೆ ನೋಡಿದ ಮಗು, ನಂತರ ಓಡಿ ಬಂದು ಎರಡನ್ನೂ ಕೈಗೆತ್ತಿಕೊಂಡಿತು. ನಾನು ಕಿಟಕಿಯಿಂದಲೇ ಕೈ ಹೊರಚಾಚಿ ಮಗುವನ್ನು ಎತ್ತಿಕೊಂಡು ಮುದ್ದಿಸತೊಡಗಿದೆ. ಹೀಗೆ ನಾನು ಅತ್ತೆ ಮನೆಗೆ ಹೋದಾಗಲೆಲ್ಲಾ ಆ ಮಗುವಿಗೆ ತಿಂಡಿ ಕೊಂಡೊಯ್ಯುತ್ತಿದ್ದೆ. ಆ ಮಗು ಪ್ರತೀ ದಿನಾ ನನಗಾಗಿ ಕಿಟಕಿಯ ಬಳಿ ಬರುವುದು ಸಾಮಾನ್ಯವಾಗಿತ್ತು. ನಾನಿಲ್ಲದಾಗಲೂ ತುಂಬಾ ಹೊತ್ತು ನಿಂತು ಹೋಗುತ್ತಿತ್ತು, ಹಾಗಂತ ನನ್ನಾಕೆ ನನಗೆ ವರದಿ ಒಪ್ಪಿಸುತ್ತಿದ್ದಳು. ಅತ್ತೆ ಮನೆಯವರು ಕೂಡ ಆ ಮಗುವಿನ ಜತೆ ಮಾತಿಗೆ ತೊಡಗಿದ್ದರು. ದಿನಗಳೆದಂತೆ ಮಗು ಅಂಗಳಕ್ಕೂ ಬರತೊಡಗಿತ್ತು. ಪಾತಜ್ಜಿಗೆ ಇದೆಲ್ಲಾ ಗೊತ್ತಿದ್ದರೂ, ಏನೂ ಅರಿಯದವರಂತೆ ನಟಿಸಿ ಸುಮ್ಮನಿರುತ್ತಿದ್ದರು.
ಆವತ್ತು ಪೆರ್ನಾಳ್ ಹಬ್ಬ. ನಾನು ಅತ್ತೆ ಮನೆಯಲ್ಲಿದ್ದೆ. ಎಂದಿನಂತೆ ಆ ಮಗು ಕಿಟಕಿಯ ಬಳಿ ಬಂದಿತ್ತು. ನಾನು ತಿಂಡಿ ತಿನಿಸು ಕೊಟ್ಟಿದ್ದೆ. ಆದರೆ, ಮಗು ಹಳೆಯ ಬಟ್ಟೆ ಧರಿಸಿದ್ದನ್ನು ಕಂಡು ನನ್ನ ಮನಸ್ಸು ಕರಗತೊಡಗಿತ್ತು.
“ಮೋಳೇ… ಹೊಸ ಬಟ್ಟೆ ಯಾಕೆ ಹಾಕಿಲ್ಲ? ಈವತ್ತು ಪೆರ್ನಾಳ್ ಅಲ್ವಾ?” ಎಂದು ನಾನು ಕೇಳಿದಾಗ, “ಉಮ್ಮ ಹೊಸ ಬಟ್ಟೆ ತೆಗೆಯಲಿಲ್ಲ” ಎಂದು ಮಗು ಹೇಳಿತು. ನನಗೆ ಅಲ್ಲಿರಲು ಸಾಧ್ಯವಾಗಲೇ ಇಲ್ಲ. ನೇರ ಪಕ್ಕದ ಜಂಕ್ಷನ್‍ನಲ್ಲಿರುವ ಬಟ್ಟೆ ಅಂಗಡಿಗೆ ಹೋಗಿ ಎರಡು ಜತೆ ಬಟ್ಟೆ ಬರೆ ಖರೀದಿಸಿ ಬಂದು, ಆ ಮಗುವನ್ನು ಕರೆದು ಕೊಟ್ಟೆ. ಮಗು ಕ್ಷಣಾರ್ಧದಲ್ಲಿ ಅದನ್ನು ಕೈಗೆತ್ತಿಕೊಂಡು ಓಡಿ ಹೋಯಿತು.
ಸ್ವಲ್ಪ ಹೊತ್ತಿನಲ್ಲೇ ಪಾತಜ್ಜಿ ಬಟ್ಟೆ ಸಮೇತ ಮಗುವನ್ನು ಕರೆದುಕೊಂಡು ಬಂದರು.`ನೋಡಿ, ನಿಮಗೆ ಯಾಕೆ ಅವರ ಉಸಾಬರಿ?. ಈಗ ನಿಮ್ಮ ಮುಖಕ್ಕೆ ಆ ಬಟ್ಟೆ ಎಸೆದು ಏನೇನೋ ಹೇಳಿ ರಂಪಾಟ ಮಾಡುತ್ತಾರೆ’ ಎಂದು ನನ್ನಾಕೆ ಗೊಣಗಿದಳು.

ನಾನೂ ಕ್ಷಣಕಾಲ ಬೆವರಿದೆ. ಅತ್ತೆಯ ಮನೆಯಲ್ಲಿ ಅದೂ ಹೊರಗಿನ ಹೆಂಗಸರಿಂದ ಮರ್ಯಾದೆ ಹೋಗುವುದು ಅಂದರೆ…!? ನಾನು ಬೆವೆತು ಹೋದೆ. ಪಾತಜ್ಜಿ ಸೀದಾ ಅತ್ತೆಯ ಮನೆಯೊಳಗೆ ಕಾಲಿಟ್ಟು, “ಎಲ್ಲಿ ನಿನ್ನ ಗಂಡ?’ ಎಂದು ನನ್ನಾಕೆಯಲ್ಲಿ ಕೇಳುತ್ತಾ ಒಳ ಬಂದರು. ಪ್ರಶ್ನೆಯಲ್ಲಿ ಆಕ್ರೋಶವಿರಲಿಲ್ಲ, ತಾಳ್ಮೆ ಇತ್ತು. ಮುಗುಳ್ನಗೆಯೂ ಇತ್ತು. ಮುಖಗಂಟಿಕ್ಕಿರುತ್ತಿದ್ದ ಪಾತಜ್ಜಿಯ ಮುಖದಲ್ಲಿ ನಗು ಸೂಸುತ್ತಿತ್ತು. “ಈ ಬಟ್ಟೆಯನ್ನು ಹಸೀನಾಳಿಗೆ ನಿನ್ನ ಗಂಡನೇ ಕೈಯಾರೆ ಹಾಕಿ ಬಿಡಲಿ” ಎಂದು ಹೇಳಿದಾಗ ನಮಗೆಲ್ಲಾ ಆಶ್ಚರ್ಯವಾಗಿತ್ತು. ನಾನು ತಕ್ಷಣ ಹೊರಬಂದು ಮಗುವನ್ನು ಅಪ್ಪಿ ಹಿಡಿದು ಮುತ್ತುಕೊಟ್ಟು ಬಟ್ಟೆ ಧರಿಸಿದೆ. ಮಗು ಖುಷಿಯಿಂದ ನಲಿದಾಡಿತು.
“ಮಗು ಮತ್ತು ನಿನ್ನ ಒಡನಾಟವನ್ನು ನಾನು ನೋಡುತ್ತಲೇ ಇದ್ದೆ. ಮೊದಲು ನನಗೆ ಅದು ಇಷ್ಟವಿರಲಿಲ್ಲ. ಆದರೆ, ಮಗು ನಿನ್ನನ್ನು ಕಾಣಲು, ಮಾತನಾಡಲು ಹಂಬಲಿಸುತ್ತಿತ್ತು. ನನ್ನಿಂದಾಗಿ ಮಗುವಿನ ಮನಸ್ಸಿಗೆ ನೋವಾಗುವುದು ಬೇಡಾಂತ ಭಾವಿಸಿ ನಾನು ಸುಮ್ಮನಾದೆ. ಈವತ್ತು ನೀನು ಈ ಉಪಕಾರ ಮಾಡಿದ ಮೇಲೂ ಮಗನಂತಿರುವ ನಿನ್ನ ಜತೆ ನಾನು ಕನಿಷ್ಠ “ಏನು?” ಅಂತ ಕೇಳದಿರಲು ಸಾಧ್ಯವಾ? ಇದೇ ಅವಕಾಶ ಎಂದು ಬಗೆದು, ಆದ ಘಟನೆಯನ್ನು ಮರೆತು ನಾನು ನೇರ ಇಲ್ಲಿಗೆ ಬಂದೆ” ಎಂದು ಪಾತಜ್ಜಿ ಹೇಳುತ್ತಲೇ ಇದ್ದರು. ಪಾತಜ್ಜಿಯ ಬದಲಾವಣೆ ಅತ್ತೆ ಮನೆಯವರನ್ನೂ ಆಶ್ಚರ್ಯಕ್ಕೀಡು ಮಾಡಿತ್ತು. ಅತ್ತೆ ಮನೆಯವರು ಕೂಡ ಬಿಗುಮಾನ ಸಡಿಲಿಸಿ ಅವರ ಜತೆ ಆತ್ಮೀಯವಾಗಿ ಮಾತಿಗಿಳಿದರು.
ತಿಂಗಳ ನಂತರ ನಾನು ಮತ್ತೆ ಅತ್ತೆ ಮನೆಗೆ ಹೋದಾಗ, ಪಾತಜ್ಜಿ ಮತ್ತು ಅತ್ತೆ ಮನೆಯವರೆಲ್ಲಾ ಹರಟೆ ಹೊಡೆಯುತ್ತಿದ್ದುದನ್ನು ಕಂಡೆ. ಹಸೀನಾ ನನ್ನನ್ನು ಕಂಡು ಓಡಿ ಬಂದಾಗ, ಅಜ್ಜಿ ಸಾಕಿದ ಪುಳ್ಳಿಯಿಂದಾಗಿ ಎರಡು ಮನೆಯವರು ಒಂದಾಗುವಂತಾಯಿತು ಎಂದು ನಾನು ನನ್ನಲ್ಲೇ ಹೇಳಿ ಮಗುವನ್ನು ಪ್ರೀತಿಯಿಂದ ಮುದ್ದಿಸತೊಡಗಿದೆ.

1 COMMENT

LEAVE A REPLY

Please enter your comment!
Please enter your name here