ನಿಹಾಲ್ ಕುದ್ರೋಳಿ,
(ಕಾನೂನು ವಿದ್ಯಾರ್ಥಿ, ಮಲಪ್ಪುರಂ)

ವಿಶ್ವ ಕಂಡ ಅಗ್ರಗಣ್ಯ ಕವಿಗಳಲ್ಲಿ ಓರ್ವರಾಗಿದ್ದರು ಸರ್ ಅಲ್ಲಾಮಾ ಇಕ್ಬಾಲ್. ಅವರು ಕವಿ ಮಾತ್ರವಲ್ಲ ರಾಜಕಾರಣಿ ಹಾಗೂ ತತ್ವಜ್ಞಾನಿಯೂ ಆಗಿದ್ದರು. ಅವರನ್ನು ಉರ್ದು ಸಾಹಿತ್ಯದ ಬಹುದೊಡ್ಡ ಆಸ್ತಿ ಎಂದು ಬಣ್ಣಿಸಲಾಗಿದೆ. ಉರ್ದು ಮತ್ತು ಫಾರ್ಸಿ ಭಾಷೆಯಲ್ಲಿ ಬರೆದ ತಮ್ಮ ಕವಿತೆಗಳ ಮೂಲಕ ನಿದ್ದೆಗೆ ಜಾರಿದ್ದ ಮುಸ್ಲಿಂ ಸಮುದಾಯವನ್ನು ಎಬ್ಬಿಸಿದ ಅಪರೂಪದ ಕವಿ ಡಾ. ಸರ್ ಅಲ್ಲಾಮಾ ಮುಹಮ್ಮದ್ ಇಕ್ಬಾಲ್.

ಬಹುತೇಕ ಜನರು ವಿಶ್ವವನ್ನು ಪ್ರೀತಿಸಿದರೆ ಅಲ್ಲಾಮಾ ರಂತಹ ಕೆಲವು ಮಹಾನ್ ವ್ಯಕ್ತಿಗಳನ್ನು ಇಡೀ ವಿಶ್ವ ಪ್ರೀತಿಸುತ್ತದೆ. ಇಂದಿಗೆ ಅಲ್ಲಾಮಾ ಇಕ್ಬಾಲ್ ನಮನ್ನಗಲಿ 83 ವರ್ಷವಾಯಿತು.

ನವೆಂಬರ್ 9,1877 ರಲ್ಲಿ ಇಂದಿನ ಪಾಕಿಸ್ತಾನದ ಪಂಜಾಬ್ ನ ಸಿಯಾಲ್ಕೋಟ್ ನಲ್ಲಿ ಶೇಖ್ ನೂರ್ ಮೊಹಮ್ಮದ್ ಮತ್ತು ಇಮಾಮ್ ಬೀಬಿ ದಂಪತಿಗಳ ಐದನೇ ಮಗನಾಗಿ ಮೊಹಮ್ಮದ್ ಇಕ್ಬಾಲ್ ರ ಜನನವಾಯಿತು. ನೂರ್ ಮೊಹಮ್ಮದ್ ರವರ ಪೂರ್ವಜರು ಕಾಶ್ಮೀರಿ ಪಂಡಿತ್ ಗಳಾಗಿದ್ದರು. ಉರ್ದು, ಫಾರ್ಸಿ ಮತ್ತು ಅರೇಬಿಕ್ ಕವಿತೆಗಳಲ್ಲಿ ಅವರು ಪ್ರಾಥಮಿಕ ಶಿಕ್ಷಣವನ್ನು ಸೈಯದ್ ಮಿರ್ ಹಸನ್ ಅವರ ಅಧೀನದಲ್ಲಿ ಪಡೆದುಕೊಂಡರು. 1893 ರಲ್ಲಿ ಮೆಟ್ರಿಕ್ ಪಾಸಾದ ಅಲ್ಲಾಮಾ ಇಕ್ಬಾಲ್ ತದ ನಂತರ 1895 ರಲ್ಲಿ ಸರ್ಕಾರಿ ಕಾಲೇಜಿನಲ್ಲಿ ಬಿ.ಎ. ಪದವಿಗೆ ಸೇರಿದರು. 1899 ರಲ್ಲಿ ಎಂ.ಎ.ಪದವಿಯನ್ನು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಪಡೆದರು. 1899 ರಲ್ಲಿ ಇಕ್ಬಾಲ್ ಅವರು ಸರ್ ಥಾಮಸ್ ಅರ್ನಾಲ್ಡ್ ಅವರಿಂದ ಪ್ರಭಾವಿತರಾದರು. 1905 ರಲ್ಲಿ ಇಂಗ್ಲೆಂಡಿಗೆ ಹೋದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿವೇತನ ದೊರೆಯಿತು, ನಂತರ 1906 ರಲ್ಲಿ ಬಿ.ಎ. ಪದವಿ ಪಡೆದರು. 1907 ರಲ್ಲಿ ಜರ್ಮನಿ ತತ್ವಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಫ್ರೆಡ್ರಿಕ್ ಅವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿ ಸಂಶೋದನೆಯನ್ನು ಪ್ರಕಟಿಸಿ ಡಾಕ್ಟರೇಟ್ ಪಡೆದುಕೊಂಡರು. ತದ ನಂತರ ಇಂಗ್ಲೆಂಡಿಗೆ ಮರಳಿ ಕಾನೂನು ಕಲಿಕೆಯನ್ನು ಆರಂಭಿಸುತ್ತಾರೆ. 1908 ರಲ್ಲಿ ಬಾರ್ರಿಸ್ಟರ್ ಆಗಿ ತೇರ್ಗಡೆಗೊಳ್ಳುತ್ತಾರೆ. ಯುರೋಪ್ ನಲ್ಲಿ ಅವರು ಓದುತ್ತಿರುವ ಸಂದರ್ಭದಲ್ಲಿ ಬರವಣಿಗೆಯನ್ನು ಆರಂಭಿಸಿದರು.

ಇಕ್ಬಾಲ್ ಅವರು ಕವನಗಳನ್ನು ಉರ್ದು ಭಾಷೆಗಿಂತ ಹೆಚ್ಚಾಗಿ ಪರ್ಷಿಯನ್ ಭಾಷೆಯಲ್ಲಿ ಬರೆದ್ದಿದ್ದಾರೆ. ಅವರ ಒಟ್ಟು ಹನ್ನೆರಡು ಸಾವಿರ ಕವನಗಳಲ್ಲಿ ಏಳು ಸಾವಿರ ಕವನಗಳನ್ನು ಪರ್ಷಿಯನ್ ಭಾಷೆಯಲ್ಲೇ ಬರೆದ್ದಿದ್ದಾರೆ. 1922 ರಲ್ಲಿ ಕಿಂಗ್ ಜಾರ್ಜ್ ಇವರಿಗೆ ಸರ್ ಎಂಬ ಉಪಾದಿಯನ್ನು ನೀಡಿ ಗೌರವಿಸುತ್ತಾರೆ. 1930-32 ರ ನಡುವೆ ನಡೆದಂತಹ ದುಂಡು ಮೇಜು ಸಮ್ಮೇಳನಗಳಲ್ಲಿ ಇವರು ಭಾಗವಹಿಸುತ್ತಾರೆ. 1931 ರಿಂದಲೇ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತದೆ. 1934 ರಲ್ಲಿ ವಿಶೇಷ ರೀತಿಯ ಗಂಟಲು ರೋಗಕ್ಕೆ ತುತ್ತಾಗಿ ಅದರ ಪರಿಣಾಮ ಏಪ್ರಿಲ್ 21, 1938 ರಂದು ಅವರು ಮರಣ ಹೊಂದಿದರು.

ಅವರ ಪ್ರಮುಖ ಕವನ ಸಂಕಲನಗಳು ಅಸರ್-ಇ-ಖುದಿ, ರುಮಜ್-ಐ-ಬೇಖುದಿ,
ಶಿಕ್ವಾ – ಜವಾಬ್ ಎ ಶಿಕ್ವಾ ಹಾಗೂ ಇತ್ಯಾದಿ.
ಇರಾನ್ ನಲ್ಲಿ ಅವರು “ಲಾಹೋರ್ ನ ಇಕ್ಬಾಲ್” ಎಂದು ಪ್ರಸಿದ್ದಿ ಪಡೆದಿದ್ದರು. ಭಾರತದಲ್ಲಿ ಅವರು ಬರೆದ ‘ಸಾರೇ ಜಹಾನ್ ಸೇ ಅಚ್ಚ’ ಎಂಬ ಪ್ರಸಿದ್ಧ ಗೀತೆಯಿಂದಾಗಿ ವಿಷೇಶವಾಗಿ ಸ್ಮರಿಸಲ್ಪಡುತ್ತಾರೆ.

800ಕ್ಕೂ ಹೆಚ್ಚು ವರ್ಷ ಭಾರತವನ್ನಾಳಿದ ಮುಸ್ಲಿಮರು ಬ್ರಿಟಿಷ್ ಸಾಮ್ರಾಜ್ಯದ ಅಧೀನದಲ್ಲಿ ತಮ್ಮ ಸ್ವಾಭಿಮಾನವನ್ನು ಕಳೆದುಕೊಂಡು ಜೀವಿಸುತ್ತಿದ್ದರು. ಆ ಮುಸ್ಲಿಮರಲ್ಲಿ ಸ್ವಾಭಿಮಾನವನ್ನು ಪುನಃ ಸ್ಥಾಪಿಸುವಲ್ಲಿ ಅಲ್ಲಾಮಾ ಇಕ್ಬಾಲ್ ರ ಕೊಡುಗೆ ಅನನ್ಯ. ತಮ್ಮ ಕವಿತೆಗಳ ಮೂಲಕ ಇಸ್ಲಾಮಿನ ಸಾರವನ್ನು ಸಾರಿದವರಲ್ಲಿ ಇಕ್ಬಾಲರು ಮುಂಚೂಣಿಯಲ್ಲಿದ್ದರು. ತನ್ನ ಜೀವನದ ಮೊದಲನೆಯ ಘಟ್ಟದಲ್ಲಿ ರಾಷ್ಟ್ರೀಯತೆಯನ್ನು ಎತ್ತಿ ಹಿಡಿದ ಅವರು, 1905-1908 ರವರೆಗೆ ಯುರೋಪ್ ನಲ್ಲಿ ತಂಗಿದ್ದರು. ಆ ಕಾಲಾವಧಿಯಲ್ಲಿ ರಾಷ್ಟ್ರೀಯತೆಯ ಕಾರಣದಿಂದಾಗಿ ಯುರೋಪ್ ಸಾಮ್ರಾಜ್ಯದಲ್ಲಿ ಸೃಷ್ಟಿಯಾದ ಕೆಡುಕುಗಳನ್ನು ಕಂಡ ಅವರ ಚಿಂತನೆಗಳಲ್ಲಿ ಬದಲಾವಣೆ ಕಂಡುಬರುತ್ತದೆ. ರಾಷ್ಟ್ರೀಯತೆಯನ್ನು ತೀವ್ರವಾಗಿ ತಮ್ಮ ಕವಿತೆಗಳ ಮೂಲಕ ವಿರೋಧಿಸಲಾರಂಭಿಸಿದರು. ಅದಲ್ಲದೆ ಇಸ್ಲಾಮ್ ಸಾರುವಂತಹ ವಿಶ್ವ ಸಹೋದರತ್ವದ ಸಾರವನ್ನು
ತಮ್ಮ ಕವಿತೆಗಳ ಮೂಲಕ ಸಾಮಾನ್ಯ ಜನರಿಗೆ ಮುಟ್ಟಿಸುವ ಪ್ರಯತ್ನವನ್ನು ಮಾಡಿದರು. ಇವರ ಕುರಿತಾಗಿ ಹೇಳಿದ ಒಂದು ಮಾತಿದೆ : ನಿಮಗೆ ತಫ್ಸೀರೆ ಇಕ್ಬಾಲ್ ಎಂಬ ಪುಸ್ತಕ ಸಿಗಲಿಕಿಲ್ಲ, ಆದರೆ ಇಕ್ಬಾಲ್ ಬರೆದಂತಹ ಒಂದೊಂದು ಕವನ ಕೂಡ ಕುರ್ಆನಿನ ತಫ್ಸೀರ್ ಆಗಿದೆ. ಈ ಒಂದು ಮಟ್ಟಕ್ಕೆ ಅವರು ತಮ್ಮ ಲೇಖನಿಗಳ ಮೂಲಕ ಕುರ್ಆನನ್ನು ಪ್ರತಿಪಾದಿಸುತ್ತಿದ್ದರು. ಇಸ್ಲಾಮನ್ನು ಒಂದು ಸಂಪೂರ್ಣ ಜೀವನ ವ್ಯವಸ್ಥೆಯೆಂದು ಬಿಂಬಿಸುವುದರಲ್ಲಿ ಇವರ ಕವಿತೆಗಳ ಪಾತ್ರ ಬಹುಮುಖ್ಯ.

ಇಕ್ಬಾಲರ ಜೀವನದ ಸಣ್ಣ ಪರಿಚಯವನ್ನು ತಮ್ಮ ಮುಂದಿಡುವ ಪ್ರಯತ್ನವನ್ನು ಮಾಡಿದ್ದೇನೆ. ಅಲ್ಲಾಮಾ ಇಕ್ಬಾಲರ ಜೀವನದಿಂದ ಸ್ಪೂರ್ತಿ ಪಡೆಯಲು ನಮಗೆಲ್ಲರಿಗೂ ಸಾಧ್ಯವಾಗಲಿ.

LEAVE A REPLY

Please enter your comment!
Please enter your name here