ಲೇಖಕರು: ಯೊಗೇಶ್ ಮಾಸ್ಟರ್

ಧಾರ್ಮಿಕತೆಯ ವೈಶಾಲ್ಯ, ಆಧ್ಯಾತ್ಮಿಕತೆಯ ಅನುಭಾವ, ವೈಚಾರಿಕತೆಯ ಆಳ ಮತ್ತು ಎತ್ತರಗಳನ್ನೆಲ್ಲಾ ಕಬ್ಬಿಣದ ಕಡಲೆಯನ್ನಾಗಿ ಮಾಡಿ ಯಾರಿಗೂ ಅರಗಿಸಿಕೊಳ್ಳುವುದಿರಲಿ,ಜಗಿಯಲಿಕ್ಕೂ ಆಗದಂತೆ ಕಗ್ಗಗಳನ್ನಾಗಿ ಮಾಡಿಟ್ಟು ಹೋದಂತಹ ಮಹಾತ್ಮರೂ ಉಂಟು.

ಭಾರತದ ಈಗಿನ ಪರಿಸ್ಥಿತಿಯಲ್ಲಿ ಧರ್ಮ, ಸಂಸ್ಕೃತಿ, ಸಾಮಾಜಿಕ ಪರಿಸ್ಥಿತಿ ಅಂತ ಯಾವುದಾದರೊಂದರ ಬಗ್ಗೆ ಲೇಖನ ಬರೆಯುವುದು ಅಷ್ಟು ಸುಲಭವಲ್ಲ. ಬಿಡಿಸಿದ ಉಲ್ಲನ್ ದಾರದ ಎಳೆಗಳೆಲ್ಲವೂ ಕಗ್ಗಂಟಾಗಿಬಿಟ್ಟಿದೆ. ಅದೆಷ್ಟು ನಿಧಾನವಾಗಿ ಬಿಡಿಸಲು ಹೋದರೂ ಅಲ್ಲೆಲ್ಲೋ ಒಂದು ಕಡೆ ಗಂಟಾಗಿ ನಿಂತುಬಿಡುತ್ತದೆ. ಇಡೀ ದೇಶವೇ ಸಾವೇ ಅಂತಿಮ
ಎನ್ನುವಂತಹ ರೋಗಗ್ರಸ್ತ ಸ್ಥಿತಿಯಲ್ಲಿದೆ. ಯಾರಾದರೊಬ್ಬ ಒಂದಿಷ್ಟು ನಗಬೇಕು, ಸರಸಮಯವಾಗಿ ಕಣ್ಣುಗಳಲ್ಲಿ ಒಂದಿಷ್ಟು ಹೊಳಪನ್ನು ಕಂಡುಕೊಳ್ಳಬೇಕು ಎಂದರೆ ಅವನಿಗೆ
ಅರವಳಿಕೆ ಕೊಡಬೇಕು. ನೋವೇ ಈ ದೇಶದ ಬೆತ್ತಲೆಯ ವಾಸ್ತವ.ಒಲವು ನಲಿವುಗಳೆಲ್ಲವೂ ಆಗಾಗ
ತೊಡುವಂತಹ ವೇಷಗಳು. ಸುದೀರ್ಘ ಸಂಘರ್ಷಗಳ ಇತಿಹಾಸವನ್ನೇ ಹಿನ್ನೆಲೆಯನ್ನಾಗಿ ಹೊಂದಿರುವ
ಈ ದೇಶದಲ್ಲಿ ಸಂಘರ್ಷಗಳ ಸ್ವರೂಪ ಕನಿಷ್ಟವೂ ಬದಲಾಗದೇ ಇರುವಷ್ಟು ಕೊರಕಲಿನಲ್ಲಿ
ಸಿಕ್ಕಿಹಾಕಿಕೊಂಡಿದೆ.

ಸರ್ವಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ. ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ ಎನ್ನುವುದು ರಸಋಷಿಯ ಆಶಯವಷ್ಟೇ ಹೊರತು, ವಾಸ್ತವದಲ್ಲಿ ಸರ್ವಜನಾಂಗದ ಅಶಾಂತಿಯ ಕೂಟ, ರಸಿಕರ ಕಂಗಳಿಗೆ ನೀಡುವ ಕಾಟ. ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರ ಸ್ಮಶಾನ ನಮ್ಮ ಭಾರತ. ಹೀಗೆ ಇಲ್ಲಿ ಬರೆಯುತ್ತಿರುವುದು ಹತಾಶೆಯಿಂದಲ್ಲ. ಕಾಣುತ್ತಿರುವುದನ್ನೇ ಹೇಳುತ್ತಿರುವ ವರದಿ.

ಒಬ್ಬ ಬರಹಗಾರ ಪ್ರಸ್ತುತ ಬದುಕಿಗೆ, ಜನರ ಸ್ಥಿತಿಗತಿಗೆ ಸ್ಪಂದಿಸದೇ ಬರಿದೇ ರೊಮ್ಯಾಂಟಿಕ್ ಕಾವ್ಯವನ್ನು ಬರೆದುಕೊಂಡಿರಲು ಯಾವ ಕಾಲದಲ್ಲಿಯೂ ಸಾಧ್ಯವಾಗಲಿಲ್ಲ. ಆದರೆ ಹಾಗೆ ಬರೆದಿಟ್ಟಿದ್ದಾರೆಂದರೆ ಅವರ ಸೀಮಿತ ದೃಷ್ಟಿಯ ಚೌಕಟ್ಟು ಅಥವಾ ತಾವಿರುವ ಸಮಾಜದ ಸಹಜೀವಿಗಳ ಬದುಕಿಗೆ ಅವರು ಸ್ಪಂದಿಸಿರಲಿಲ್ಲವೆಂದೇ ಅರ್ಥೈಸುತ್ತೇನೆ.

ಕನ್ನಡದಲ್ಲಿಯೂ ಪ್ರೇಮಕವಿಯಾಗಿ ಗಮಗಮಿಸುವ ಮಲ್ಲಿಗೆಯಂತಹ ಕಾವ್ಯವನ್ನು ಸದಾ ಬರೆದುಕೊಂಡಿರಲು ಯಾವುದೋ ಒಂದು ವರ್ಗದ ಜನಕ್ಕೆ ಮಾತ್ರ ಸಾಧ್ಯವಾಗುತ್ತದೆ ಎಂದರೆ,
ಉಳಿದ ವರ್ಗಗಳ ಬಗ್ಗೆ ಇರುವ ಅವರ ಕಾಳಜಿಯನ್ನು ಪ್ರಶ್ನಿಸುತ್ತೇನೆ.

ಧಾರ್ಮಿಕತೆಯ ವೈಶಾಲ್ಯ, ಆಧ್ಯಾತ್ಮಿಕತೆಯ ಅನುಭಾವ, ವೈಚಾರಿಕತೆಯ ಆಳ ಮತ್ತು ಎತ್ತರಗಳನ್ನೆಲ್ಲಾ ಕಬ್ಬಿಣದ ಕಡಲೆಯನ್ನಾಗಿ ಮಾಡಿ ಯಾರಿಗೂ ಅರಗಿಸಿಕೊಳ್ಳುವುದಿರಲಿ,ಜಗಿಯಲಿಕ್ಕೂ ಆಗದಂತೆ ಕಗ್ಗಗಳನ್ನಾಗಿ ಮಾಡಿಟ್ಟು ಹೋದಂತಹ ಮಹಾತ್ಮರೂ ಉಂಟು.

ಭಾರತದಲ್ಲಿ ಧರ್ಮ, ದೇವರು, ಶ್ರದ್ಧೆ, ನಂಬಿಕೆ ಮತ್ತು ಪ್ರೀತಿ ಮಿತಿಮೀರಿದ ಅಪವ್ಯಾಖ್ಯಾನಕ್ಕೆ ಒಳಗಾಗಿವೆ. ಅದೇ ಒಂದು ದುರಂತ. ಯಾವುವು ವಿವಿಧ ವಿವರಣೆಗಳಿಗೆ ಒಳಪಟ್ಟು ಸೋಜಿಗದ ಒಳನೋಟಗಳನ್ನು ನೀಡಬೇಕಿತ್ತೋ, ಹಲವು ಅರ್ಥಗಳನ್ನು ಕೇಳುತ್ತಾ ವಿಕಸಿತವಾಗಬೇಕಿತ್ತೋ, ವೈವಿಧ್ಯದ ಬದುಕಿನ ಅನುಭವಗಳಲ್ಲಿ ಅನ್ವೇಷಣೆಯ ಕವಲು ಮತ್ತು ದಾರಿಗಳನ್ನು ಕಾಣುತ್ತಾ ಎದೆ ಎದೆಗಳ ನಡುವೆ ಸೇತುವೆ ಮೂಡಿಸಬೇಕಾಗಿತ್ತೋ ಅವು ಇಂದು
ಕಂದಕಗಳಿಗೆ ಕಾರಣವಾಗಿರುವುದಕ್ಕೆ ನಾನು ನೇರ ಆಕ್ಷೇಪಿಸುವುದು ಪೂರ್ವಾಗ್ರಹಪೀಡಿತ ಮನಸ್ಥಿತಿಗಳಿಗೆ. ತಮ್ಮ ಧರ್ಮ ತನ್ನ ದಾರಿ, ತಮ್ಮ ದೇವರು ಎಲ್ಲರಿಗೆ ಎನ್ನುವುದಕ್ಕೆ ಯಾರಿಗೆ ಸಾಧ್ಯವಿಲ್ಲವೋ ಅವನು ದೇವರಿಗಿಂತ ಮಿಗಿಲಾಗಿ ವರ್ತಿಸಲು ತೊಡಗುತ್ತಾನೆ. ತಾನು ತನ್ನ
ದೇವರ ರಕ್ಷಣೆಗೆ ನಿಲ್ಲುತ್ತಾನೆ. ತನ್ನ ದೇವರು ತನ್ನಂತಹ ಹುಲುಮಾನವನಿಂದ ರಕ್ಷಣೆ ಪಡೆಯುವ ಅನಿವಾರ್ಯತೆಯುಳ್ಳಂತಹ ದುರ್ಬಲ ಎಂಬ ಚಿತ್ರ ಕಟ್ಟಿಕೊಡುತ್ತಾನೆ. ಇದೇ ಕಾರಣದಿಂದಲೇ ದೇವರು ಮತ್ತು ಧರ್ಮವೆರಡೂ ಬೆಳವಣಿಗೆಯ ಮತ್ತು ವಿಕಾಸದ ಲಕ್ಷಣಗಳಾವುವನ್ನೂ ತೋರದೇ ಸ್ಥಗಿತಗೊಂಡಿರುವ ಜಡವಾಗಿರುವಂತೆ ತೋರುವುದು. ಇಡೀ ದೇಶವು ಈಗ ವಿಶ್ವದ ಮುಂದೆ ಬೆತ್ತಲಾಗಿ ನಿಂತಿದೆ.

ರಾಜಕೀಯ ಧರ್ಮವನ್ನು ಯಾವಾಗ ದಾಳವನ್ನಾಗಿಸಿಕೊಂಡಿತೋ ಆಗಲೇ ಪ್ರಜಾಪ್ರಭುತ್ವದ ಮೇಲೆ ದಾಳಿಯಾಯಿತು. ಯಾವಾಗ ತಮ್ಮ
ಯಾವುದೋ ಒಂದು ಧಾರ್ಮಿಕ ಗ್ರಂಥವನ್ನು ಪಠ್ಯಗಳಲ್ಲಿ ಅಳವಡಿಸಬೇಕೆಂದು ಪ್ರಯತ್ನಗಳನ್ನು
ಪಟ್ಟಿತೋ ಆಗಲೇ ಅದು ಸಂವಿಧಾನವನ್ನು ಗಾಳಿಗೆ ತೂರಿಬಿಟ್ಟಿತು. ಸಹಬಾಳ್ವೆಯ ಉದ್ದೇಶವನ್ನು ಕಿಂಚಿತ್ತೂ ಹೊಂದಿರದೇ ಇರಲು ಯಾವುದೇ ಧರ್ಮಕ್ಕೆ ಸಾಧ್ಯವಿಲ್ಲ.ಏಕೆಂದರೆ ಧರ್ಮಗಳೆಲ್ಲವೂ ಬದುಕಿನ ಅಸ್ಮಿತೆ ಮತ್ತು ಜೀವದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮಾಡಿದಂತಹ ಸಂಘರ್ಷಗಳ ಫಲವೇ ಆಗಿದೆ. ಯಾವುದೇ ಧರ್ಮವು ಹುಟ್ಟಿನಂದಲ್ಲದೇ ಸ್ವೀಕರಿಸುವುದರಿಂದಾಗಿದೆ.

ಭಾರತದಲ್ಲಿ ಹಲವು ಧರ್ಮಗಳು
ಇರುವುದಕ್ಕೆ ಕಾರಣ ಯಥಾಸ್ಥಿತಿಯನ್ನು ಕಾಪಾಡಿಕೊಂಡಿರುವಂತಹ ಸಾಮಾಜಿಕ ಮನಸ್ಥಿತಿಯನ್ನು ಧಿಕ್ಕರಿಸಿದ್ದು. ಧರ್ಮವೇ ಇಲ್ಲದಂತಹ ಈ ದೇಶದಲ್ಲಿ ಧರ್ಮದ ನೈತಿಕ ಮತ್ತು ತಾತ್ವಿಕ ತಳಹದಿಯನ್ನು ಕೊಟ್ಟಿದ್ದೇ ಬೌದ್ಧಧರ್ಮ. ತಾನು ಯಾವ ದಾರಿಯಲ್ಲಿ ನಡೆಯಬೇಕೆಂಬುದರ
ಸ್ಪಷ್ಟತೆ ದಮ್ಮ ನೀಡಿದರೆ, ತಾನು ಏನೆಂದು ಮತ್ತು ಹೇಗಿರಬೇಕೆಂಬ ಸ್ಪಷ್ಟತೆ ಬುದ್ಧನಿಂದ ಸಿಕ್ಕಿತು. ಇನ್ನು ತಾನು ಯಾರ ಮತ್ತು ಎಂತವರ ಸಹವಾಸದಲ್ಲಿದ್ದರೆ ಶ್ರೇಯಸ್ಸು ಎಂಬ ಪರಿಕಲ್ಪನೆ ಸಂಘದಿಂದ ದೊರಕಿತು. ಹೀಗೆ ಬುದ್ಧ, ದಮ್ಮ ಮತ್ತು ಸಂಘಗಳಿಗೆ ಶರಣು ಹೋಗುವುದರ ಮೂಲಕ ಜನರಲ್ಲಿ ಧರ್ಮಜಾಗೃತಿ ಉಂಟಾಗಿತ್ತು. ಆದರೆ ನೀನು ನನ್ನ ಬಳಿಯೇ ಇರಬೇಕು, ಅಡಿಯಾಳಾಗಿ ಉಳಿಯಬೇಕು, ನನ್ನಿಂದ ದೂರವಾಗಿ ಪ್ರತ್ಯೇಕವಾಗಿ ನಿನ್ನ ಘನತೆಯನ್ನು ನನಗಿಂತ ಎತ್ತರಕ್ಕೇರಿಸಿಕೊಳ್ಳಬಾರದು ಎಂಬ ಮನಸ್ಥಿತಿಯ ಸನಾತನವಾದಿಗಳು, ವರ್ಣಾಶ್ರಮದ ಪ್ರತಿನಿಧಿಗಳು ಬೌದ್ಧಧರ್ಮವನ್ನು ಭಾರತದಿಂದ
ಹೊರಗೋಡಿಸಲು ಸರ್ವಪ್ರಯತ್ನ ಮಾಡಿದರು ಮತ್ತು ಯಶಸ್ವಿಯೂ ಆದರು. ಅದರ ನಂತರ ಜನರಿಗೆ
ಮತ್ತೆ ಧಾರ್ಮಿಕ ಆಯ್ಕೆಯನ್ನು ಪ್ರಕಟಿಸುವಂತಹ ಅವಕಾಶ ದೊರಕಿತ್ತು ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಿಂದ. ಅವುಗಳೂ ಕೂಡ ಸಹಬಾಳ್ವೆ, ವಿದ್ಯಾಭ್ಯಾಸ ಮತ್ತು ಸಾಮಾಜಿಕವಾಗಿ ಘನತೆಯ ಗುರುತನ್ನು ವ್ಯಕ್ತಿಗತವಾಗಿ ಸಾಧಿಸಲು ನೆರವಾದವು. ಮತಾಂತರಗಳು ನಿಜಕ್ಕೂ ತಮ್ಮದೇ ಬದುಕಿಗೆ ಸಾಂತ್ವಾನ ಕಂಡುಕೊಳ್ಳಲು ಮತ್ತು ಸಧ್ಯದ ಬದುಕನ್ನು ಕಟ್ಟಿಕೊಂಡು ಮುಂದಿನ ಪೀಳಿಗೆಗಳಿಗೆ ಬದುಕಿನ ಮಾರ್ಗವನ್ನು ಸ್ಪಷ್ಟಗೊಳಿಸುವುದೇ ಆಗಿದೆ.

ಆಮಿಷಗಳನ್ನೊಡ್ಡಿ ಮತಾಂತರ ಮಾಡುತ್ತಾರೆ ಎಂದೆಲ್ಲಾ ದೂರುತ್ತಾ ಪದೇ ಪದೇ ಗಲಭೆ ಮಾಡುವ
ಮಂದಿಯನ್ನು ಕಾಣುತ್ತೇವೆ. ಇಲ್ಲಿ ಸ್ಪಷ್ಟವಾಗಿ ತಿಳಿಯಬೇಕಾದ್ದೇನೆಂದರೆ ಆಮಿಷಕ್ಕೆ ಒಳಗಾಗುವವರಾದರೂ ಯಾರು? ಕೊರತೆಯುಳ್ಳವರು. ತಮ್ಮ ಕೊರತೆಯನ್ನು ನೀಗಿಸಿಕೊಳ್ಳುವುದರಲ್ಲಿ ಅವರು ಯಾವುದೇ ಧರ್ಮಕ್ಕೆ ಮೊರೆ ಹೋಗುವುದು ಹೇಗೆ
ತಪ್ಪಾದೀತು? ಧಾರ್ಮಿಕ ಆಯ್ಕೆ ಮತ್ತು ಜೀವನ ಶೈಲಿಯ ಆಯ್ಕೆ ಅವರ ವ್ಯಕ್ತಿಗತ
ಆಯ್ಕೆಯಾಗಿದ್ದು, ಸಮಾಜಕ್ಕೆ ಮತ್ತು ತನ್ನ ನೆರೆಹೊರೆಯವರಿಗೆ ಯಾವ ರೀತಿಯಲ್ಲಿಯೂ
ಸಮಸ್ಯೆಯಾಗದಿದ್ದರಾದೀತು. ತನ್ನ ಶ್ರೇಷ್ಟತೆಯ ಗೀಳಿನಿಂದ ತನ್ನ ಸಮುದಾಯದ
ಪಾರಮ್ಯವನ್ನು ಹೇರಲು ಹೊರಟಿರುವ ಮತೋನ್ಮತ್ತರ ಈ ದೇಶದಲ್ಲಿ ಹಲವು ಧರ್ಮಗಳ ಮತ್ತು
ಹಲವು ಸಂಸ್ಕೃತಿಗಳ ಸಹಬಾಳ್ವೆ ಕನಸು ಎಂದೆನಿಸುವ ಮುನ್ನವೇ, ಅರವಳಿಕೆಯಲ್ಲೇ
ಬದುಕುತ್ತಾ ಅರಿವಿಲ್ಲದೇ ಸಾಯುವ ಮುನ್ನ ಒಬ್ಬೊಬ್ಬನೂ ಎಚ್ಚೆತ್ತುಕೊಂಡರೇನೇ ಚೆನ್ನ!.

(ಯೋಗೇಶ್ ಮಾಸ್ಟರ್ ಖ್ಯಾತ ಬರಹಗಾರರು, ಸಾಮಾಜಿಕ ಕಾರ್ಯಕರ್ತರು ಹಾಗೂ ಹಲವಾರು ಮಕ್ಕಳ ಸಂಬಂಧಿ ಪುಸ್ತಕಗಳನ್ನು ಬರೆದವರಾಗಿದ್ದು ಕರ್ನಾಟದ ಚಿರಪರಿಚಿತ ಲೇಖಕರಲ್ಲಿ ಒಬ್ಬರಾಗಿದ್ದಾರೆ) 

 

LEAVE A REPLY

Please enter your comment!
Please enter your name here