ಎಂ. ಅಶೀರುದ್ದೀನ್ ಆಲಿಯಾ ಮಂಜನಾಡಿ

ಇತ್ತೀಚಿನ ದಿನಗಳಲ್ಲಿ ಜನ ಸಾಮಾನ್ಯರ ನಡುವೆ ನಡೆಯುವ ಇತರ ಎಲ್ಲಾ ವಿಷಯಗಳನ್ನು ಮರೆತು ಕೇವಲ ಕೊರೋನಾ, ಲಾಕ್ ಡೌನ್, ಟಿಕ್ ಟಾಕ್ , ವಾಟ್ಸಾಪ್, ಫೇಸ್ ಬುಕ್ ಸ್ಟೇಟಸ್ಗಳಲ್ಲಿ ತಮ್ಮ ಬಗ್ಗೆ ಕೊಚ್ಚಿಕೊಳ್ಳುದರಲ್ಲಿ ಮೈಮೆರೆತಿರುವಾಗ ಇದರ ನಡುವೆ ಮಂಗಳೂರಿನ ಉಳ್ಳಾಲದ ಯುವಕ ಅರ್ಫಾಝ್ ಉಳ್ಳಾಲ ಹಾಡು ಕರ್ನಾಟಕದಲ್ಲಿ ಮಿಂಚಿದ್ದು ಯಾರ ವಾಟ್ಸಪ್ ಮೆಸೇಜಿಗೂ ಸಿಗಲಿಲ್ಲ ಎಂಬುವುದು ವಿಷಾದನೀಯ. ಸಿಕ್ಕಿದರೂ ಅದನ್ನು ಅಷ್ಟು ಪ್ರಚಾರ ಮಾಡುವ ಗೋಜಿಗೆ ಯಾರು ಹೋಗಲಿಲ್ಲ. ಏಕೆಂದರೆ, ಅವನು ರಾಜಕಾರಣಿಯ ಮಗನೋ ಅಥವಾ ಶ್ರೀಮಂತನ ಪುತ್ರನೋ ಅಲ್ಲ. ಅಂತೂ ತನ್ನ ನೆಚ್ಚಿನ ಗೆಳೆಯರ ಸಹಕಾರದಿಂದ ಆತ ಸಾಧನೆಯ ಮೆಟ್ಟಿಲೇರಿ ಬಿಟ್ಟಿರುವುದು ಸಂತಸದ ವಿಷಯ.

ಉಳ್ಳಾಲದ ಶುಭಾಷ್ ನಗರದ 21 ಹರೆಯದ ಯುವಕ ಬಾಲ್ಯದಲ್ಲಿಯೇ ಒಬ್ಬ ಹಾಡುಗಾರನಾಗಬೇಕೆಂದು ಕನಸ್ಸು ಕಂಡಿದ್ದ. ಅಪ್ಪನೇ ಆದಾರವಾಗಿದ್ದ ಕುಟುಂಬದಲ್ಲಿ ಬಡತನವೂ ಒಂದು ದೊಡ್ಡ ಸಮಸ್ಯೆಯೇ ಆಗಿತ್ತು. ತಂದೆ ಮತ್ತು ಮಾವ ಹಾಡುಗಾರರಾಗಿದ್ದುದರಿಂದ ಪರಂಪರಗತವಾದ ಕಲೆಯೂ ಇವನಿಗೂ ಒಲಿದು ಬಂತು. ಅರ್ಫಾಝ್ ಚಿಕ್ಕವನಿರುವಾಗ ವರ್ಷಕ್ಕೊಮ್ಮೆ ಮದರಸದಲ್ಲಿ ನಡೆಯುವ ಮಿಲಾದ್ ಕಾರ್ಯಕ್ರಮದಲ್ಲಿ ಹಾಗೂ ಮದುವೆ ಸಣ್ಣ ಪುಟ್ಟ ಕಾರ್ಯಕ್ರಮದಲ್ಲಿ ಹಾಡುತಿದ್ದರೂ ಯಾರೂ ಅವನನ್ನು ಗುರುತಿಸಲಿಲ್ಲ.

ಮನೆಯಲ್ಲಿರುವ ಬಡತನದ ಕಾರಣಕ್ಕೆ ಹತ್ತನೇ ತರಗತಿ ಓದು ಮುಗಿಸುವುದು ಅನಿವಾರ್ಯವೆಂದೆನಿಸಿತು. ಹತ್ತನೇ ತರಗತಿ ಮುಗಿದ ಕೆಲವು ಸಮಯಕ್ಕೆ ಹೆತ್ತ ತಾಯಿಯೂ ಇಹ ಲೋಕಕ್ಕೆ ವಿದಾಯ ಹೇಳಿದರು. ಇದು ಅವನನ್ನು ಇನ್ನಷ್ಟು ನೋವಿಗೆ ದೂಡಿತು. ನಂತರ ಉಳ್ಳಾಲದ ಭಾರತ್ ಹೈಸ್ಕೂಲ್ ನಲ್ಲಿ ದ್ವಿತಿಯ ಪಿ.ಯು.ಸಿ ಮುಗಿಸಿದರು. ಹೊಟ್ಟೆಪಾಡಿಗಾಗಿ ಪೈಂಟಿಂಗ್, ಇಲೆಕ್ಟ್ರಿಷನ್, ಕೂಲಿಕೆಲಸಗಳನ್ನು ಮಾಡಿ ಏಳು ಮಂದಿಯಿದ್ದ ಮನೆಗೆ ಅಪ್ಪನೊಂದಿಗೆ ಆಸರೆಯಾದರು. ಹಾಡುಗಾರನಾಗಬೇಕೆಂಬ ಆತನ ಕನಸು ಇನ್ನು ಮನಸ್ಸಿನಿಂದ ಮಾಸಿರಲಿಲ್ಲ. ಫೀಸ್ ಕಟ್ಟಿ ಸಂಗೀತ ಕಲಿಯುವುದು ದೂರದ ಮಾತು ಬಿಡಿ. ಆದರೂ ತಾನೊಬ್ಬ ಹಾಡುಗಾರನಾಗಬೇಕೆಂಬ ಹುಚ್ಚು ಹಚ್ಚಾಗಿ ಉಳಿದಿದ್ದರಿಂದ ಮನಸ್ಸಿನ ಸಂತೃಪ್ತಿಗಾಗಿ ಬಿಡುವಿನ ವೇಳೆ ಹಾಡುತ್ತಾ ಖುಷಿ ಪಡುತಿದ್ದರು. ಈ ನಡುವೆ ಬೆಲ್ತಂಗಡಿಯ ಗೆಳೆಯ ಜುನೈದ್ ಅರ್ಫಾಝ್ ನ ಮನವೊಲಿಸಿ ಒಂದು ಅಲ್ಬಾಂ ಸಾಂಗ್ ಮಾಡುವ ತೀರ್ಮಾನ ಕೈಗೊಂಡರು. ಕ್ಲಾಸಿಕ್ ಮೀಡಿಯಾ ಎಂಬ ಹೆಸರಿನಲ್ಲಿ ಗೆಳೆಯರ ಸಂಘ ಕಟ್ಟಿಕೊಂಡು ಸ್ಟೂಡಿಯೂಗಳಲ್ಲಿ ಹಾಡಿ ಯೂಟೂಬ್ ಗಳಲ್ಲಿ ಬಿತ್ತರಿಸುತಿದ್ದರು. ಜನರೇನು ಅಷ್ಟು ಇಷ್ಟಪಡದಿದ್ದರೂ ತಮ್ಮ ಪ್ರಯತ್ನ ಬಿಡಲಿಲ್ಲ. ಅಪ್ಲೋಡ್ ಮಾಡಿದ ಹಾಡುಗಳಿಗೆ ಜನರು ಸ್ಪಂದಿಸದ್ದನ್ನು ಬೆಸೆತ್ತು ಹಾಡಿನಿಂದ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲವೆಂದೆನಿಸಿ ಕೆಲಸಕ್ಕಾಗಿ ಅರ್ಫಾಝ್ ಬೆಂಗಳೂರಿಗೆ ಹೋದರು. ಬೆಂಗಳೂರಿನ ಕೋರಮಂಗಳದಲ್ಲಿ ಜ್ಯೂಸ್ ಅಂಗಡಿ ಆರಂಭಿಸಿದರು.

ಅರ್ಫಾಝ್ ವಿರಹ ಗೀತೆಯನ್ನು ಹೆಚ್ಚಾಗಿ ಹಾಡಲಾರಂಭಿಸಿದರು. ಅಮ್ಮನ ಬಗ್ಗೆ, ಪ್ರೇಯಸಿಯ ಬಗ್ಗೆ, ಇತ್ಯಾದಿ. ಅವರ ಶಬ್ದಕ್ಕೆ ನೆಚ್ಚಿಕೊಂಡ ರಾಗ ಅದಾಗಿತ್ತು. ಬಿಡುವಿನ ವೇಳೆಗಳಲ್ಲಿ ಮಂಗಳೂರಿಗೆ ಬಂದು ಇತರ ಭಾಷೆಗಳ ಹಾಡನ್ನು ಕನ್ನಡಕ್ಕೆ ಭಾಷಾಂತರಿಸಿದ ಗೆಳೆಯನ ಲಿರಿಕ್ಸ್ ಗೆ ತಕ್ಕಂತೆ ಹಾಡಿ ಜನ ರಂಜಿಸುವ ಕಾರ್ಯದಲ್ಲಿ ಮುಂದುವರಿದರು. ಆಗಷ್ಟೆ “ಬಡ ಪಚ್ತಾವೋಗೆ” ಹಿಂದಿ ಹಾಡು ಹಿಟ್ ಆಗಿತ್ತು ಅದನ್ನು ಕನ್ನಡೀಕರಿಸಿ “ಮೋಸಗಾತಿಯೆ” ಎಂದು ಹಾಡಿ ಯೂಟೂಬ್ ನಲ್ಲಿ ಅಪ್ಲೋಡ್ ಮಾಡಿದರು. ಈ ಹಾಡು ಅವರ ನಿರೀಕ್ಷೆಗು ಮೀರಿ ಪ್ರಚಾರ ಪಡೆಯಿತು. ರಾಜ್ಯಾದ್ಯಂತ ಟಿಕ್ ಟಾಕ್, ಫೇಸ್ ಬುಕ್,ಇತ್ಯಾದಿ ಸಾಮಾಜಿಕ ಜಾಲಾತಾಣಗಳಲ್ಲಿ ಬೃಹತ್ ಪ್ರಚಾರ ಪಡೆಯಿತು. 80 ಲಕ್ಷಕ್ಕಿಂತ ಹೆಚ್ಚು ಜನ ನೋಡಿ ಆನಂದಿಸಿದರು.
ಮೋಸಗಾತಿಯೇ ಎಂಬ ಹಾಡು ಅರ್ಫಾಝ್ ನವರ ಕನಸಿಗೆ ಒಂದು ತಿರುವು ನೀಡಿತು ಎಂದು ಅವರು ಸ್ಮರಿಸುತ್ತಾರೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಸಾದುಕೋಕಿಲ ಹಾಡನ್ನು ಮೆಚ್ಚಿ ಅಭಿನಂದಿಸಿದರು. ಕರಾವಳಿಯ ಅರ್ಜಿತ್ ಸಿಂಗ್ ಎಂದೇ ಪ್ರಖ್ಯಾತರಾದರು. ಕಲರ್ಸ್ ಟಿ.ವಿ ಆಯೋಜಿಸಿದ ಹಾಡು ಕರ್ನಾಟಕದ ಆಡಿಷನ್ ನಲ್ಲಿ ಪಾಲ್ಗೋಡು ಪ್ರವೇಶ ಪಡೆದರು. ಇದೀಗಾಗಲೇ ಸುಮಾರು 25 ಹಾಡುಗಳನ್ನು ಹಾಡಿರುವ ಇವರು ಕನ್ನಡಿಗರಿಗೆ ಪರಿಚಿತರಾದರು.

ಸಂಗೀತ ಜ್ಞಾನವನ್ನು ಪಡೆಯದ ಇವರು ಹಾಡು ಕರ್ನಾಟಕದಲ್ಲಿ ಒಳ್ಳೆಯ ಶಬ್ದದಿಂದ ಪೈಪೋಟಿ ನೀಡಿದರೂ ಸಂಗೀತದ ನಿಬಂಧನೆಗಳನ್ನು ಪಾಲಿಸಲಾಗದ್ದು ಒಂದು ದೊಡ್ಡ ಸವಾಲಾಗಿದ್ದರೂ ಬಿಡುವು ಮಾಡಿಕೊಂಡು ಪ್ರಯತ್ನಪಟ್ಟರೂ ಸಹಕಾರಿಯಾಗಲಿಲ್ಲ. ಸಂಗೀತ ಕಲಿಯುವುದು ಅಗತ್ಯವೆಂದು ತೀರ್ಪುಗಾರರ ಸಲಹೆ ಕೊಟ್ಟಿದ್ದಾರೆ. ಹಾಡು ಕರ್ನಾಟಕದಿಂದ ಹೊರ ಬಿದ್ದರೂ ಇದು ಅವರ ಆರಂಭ ಅಷ್ಟೇ. ಸೋಲು ಗೆಲುವಿನ ಸೋಪಾನ. ಯಶಸ್ವಿನ ಮೆಟ್ಟಿಲು. ಕೋಗಿಲೆ ಕಂಠದ ಯುವ ಪ್ರತಿಭೆ ಇನ್ನಷ್ಟು ಬೆಳೆಯಬೇಕು. ತಂಗಿಯ ಮದುವೆ, ಚಿಕ್ಕಮ್ಮನ ಮಕ್ಕಳ ಶಿಕ್ಷಣ ಮತ್ತು ಅಪ್ಪನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಇರಾದೆಯೊಂದಿಗೆ ಒಳ್ಳೆಯ ಹಾಡುಗಾರನಾಗಬೇಕೆಂ, ಪ್ರಸಿದ್ಧನಾಗಬೇಕೆಂಬ ಕನಸ್ಸು ಇದೆ. ಕೆಲವು ಸಿನಿಮಾಗಳಲ್ಲಿ, ಅಲ್ಭಾಂಗಳಲ್ಲಿ ಹಾಡುವ ಅವಕಾಶವು ಒದಗಿ ಬರುತ್ತಿರುವುದು ಸಂತಸದ ವಿಷಯ. ನಮ್ಮೆಲ್ಲರ ಸಹಕಾರ ಮತ್ತು ಪ್ರಾರ್ಥನೆ ಇದ್ದರೆ ಆತ ಇನ್ನಷ್ಟು ಬೆಳೆದು ನಾಡಿನ ಹೆಮ್ಮೆಯ ಪುತ್ರನಾಗುವನು ಎಂಬುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ನಮ್ಮ ಪ್ರೀತಿಯ ಅರ್ಫಾಝ್ ಉಳ್ಳಾಲ ಇವರನ್ನು ಒಳ್ಳೆಯ ಮನಸ್ಸಿನಿಂದ ಪ್ರೋತ್ಸಾಹಿಸೋಣ ಬೆಂಬಲಿಸೋಣ

LEAVE A REPLY

Please enter your comment!
Please enter your name here