- ಸಿಹಾನ ಬಿ.ಎಂ
ಹಿಂದೊಂದು ಕಾಲವಿತ್ತು. ಆವಾಗ “ಹಿಂದೂ ಯುವಕ ಮುಸ್ಲಿಮ್ ಮಹಿಳೆಗೆ ಸಹಾಯ ಮಾಡಿದರು, ಮುಸ್ಲಿಮ್ ಯುವಕರು ಹಿಂದೂ ಯುವಕನ ಅಂತ್ಯ ಮಾಡಿದರು” ಈ ರೀತಿ ಸಹಾಯವನ್ನು ಜಾತಿ , ಧರ್ಮದ ಆಧಾರದಲ್ಲಿ ಗುರುತಿಸಿ ಪರಿಚಯಿಸುತ್ತಿರಲಿಲ್ಲ. ಅಂದು ಇದಕ್ಕಿಂತಲು ದೊಡ್ಡ ಮಟ್ಟಿನ ಸಹಾಯ , ಸಹಕಾರಗಳು ನಡೆಯುತ್ತಿದ್ದವು. ಒಂದೇ ಏರಿಯಾದಲ್ಲಿ ಹಿಂದು , ಮುಸ್ಲಿಮ್ , ಕ್ರೈಸ್ತರೆಲ್ಲ ಸಹಬಾಳ್ವೆಯಿಂದ ಬದುಕುತ್ತಿರುವ ಆ ಕಾಲ ಬಹಳ ಸುಂದರ ಕಾಲವಾಗಿತ್ತು. ಸೌಹಾರ್ದತೆಯ ಅಭೇದ ಕಲ್ಪನೆಯೊಂದಿಗೆ ನಲ್ಮೆಯಿಂದ ಒಲುಮೆಯಿಂದ ಭಾರತ ಭೂಮಿಯ ಸಾವಯವ ಗುಣವನ್ನು ಮೈಯೆಲ್ಲ ತುಂಬಿಸಿ ಹಾಲು ಜೇನಿನಂತೆ ಬೆರೆಯುತ್ತಿದ್ದ ಹೃದಯಗಳ ಕಾಲವದು. ತನ್ನ ನೆರೆಯವರು , ಊರಿನವರು, ಒಡನಾಡಿಗಳೆಡೆಗೆ ಸಂವೇದನಾಭರಿತರಾಗಿ ಸಹೃದಯಿಗಳನ್ನು ಬೆಸೆಯುವ ಕೊಂಡಿಗಳನ್ನು ಜೋಡಿಸುತ್ತಲೇ ಇದ್ದರು. ವಿಷ ಹರಡುವ , ಹುಳಿ ಹಿಂಡುವ ಕೆಟ್ಟ ಮನಸ್ಸುಗಳು ಬಳಿ ಸೇರದಂತೆ ಮನದ ಗೂಡೊಳಗೆ ತುರಿಸುವ ಹುಳುಗಳು ನುಸುಳದಂತೆ ಜಾಗರೂಕರಾಗಿದ್ದರು. ಎಂತಹ ರಂಗುರಂಗಿನ ದಿನಗಳು…ಸುತ್ತಲೂ ಸುವಾಸನೆಭರಿತ ಕಂಪು ಬೀಸುವ ಗಾಳಿ… ದಳ ಎಸಳಿನ ಸೌಹಾರ್ದತೆಯ ಪುಷ್ಪ ಸಂಕುಲ… ಭಾವಸ್ಪುರಣೆಯ ಬಿಗಿಬಾಹುಗಳ ಅಪ್ಪುಗೆ….ನೆನಪುಗಳು ಒಂದೇ ಎರಡೇ…ಸಾವಿರ ಮಜಲುಗಳು ನೂರಾರು ತಿರುವುಗಳ ದಾಟಿದರೂ ಮಾಸದ ನೆನಪುಗಳವು !
ಉಪ್ಪಿನಂಗಡಿಯ ವೆಂಕಟರಮಣ ದೇವಸ್ಥಾನ ಮತ್ತು ಸಹಸ್ರಲಿಂಗೇಶ್ವರ ದೇವಸ್ಥಾನ , ಮಾಲಿಕ್ ದಿನಾರ್ , ಮಸ್ಜಿದ್ ಹುದಾ ಮಸೀದಿ , ಸಂತ ಫಿಲೋಮಿನಾ ಚರ್ಚಿನ ಮಡಿಲಲ್ಲಿ ಬೆಳೆದ ನಾನು ಹಲವಾರು ಸೌಹಾರ್ದತೆಯ ನೆನಪುಗಳನ್ನು ಉಡಿ ತುಂಬಾ ತುಂಬಿಸಿಕೊಂಡಿದ್ದೇನೆ. ಹಲವಾರು , ಮದುವೆ ಕಾರ್ಯಕ್ರಮಗಳು , ಅಂತ್ಯ ಸಂಸ್ಕಾರಗಳಿಗೆ ಸಾಕ್ಷಿಯಾಗಿದ್ದೇನೆ. ಕಷ್ಟ ಕಾರ್ಪಣ್ಯಗಳ ಸಂದರ್ಭಗಳಲ್ಲಿ ನಮ್ಮ ನೆರೆಯವರು , ಪರಿಚಯಸ್ಥರು, ನಮ್ಮವರು ಎಂಬ ನೆಲೆಯಲ್ಲಿ ಸಹಾಯಹಸ್ತ ಚಾಚಿದ ಕರಗಳ ದರ್ಶನ ಪಡೆದಿದ್ದೇನೆ. ರತ್ನಕ್ಕ , ವಿಜಯಮ್ಮನವರ ಕೈ ರುಚಿ , ಮಡಿಲಲ್ಲಿ ಮಾಡಿದ ನಿದ್ರೆ ಇದೆಲ್ಲವು ಇಂದಿಗೂ ಮಾಸಿ ಹೋಗಿಲ್ಲ. ನಮ್ಮ ಹೆತ್ತವರಾಗಲಿ , ಹಿರಿಯರಾಗಲಿ ಅದು ಹಿಂದುಗಳ ಮನೆ , ಕ್ರೈಸ್ತರ ಮನೆಯೆಂದು ನಮಗೆ ಯಾವತ್ತೂ ಪರಿಚಯಿಸಲಿಲ್ಲ. ಈಗಲೂ ನನ್ನ ಗೆಳತಿಯರು ನನ್ನಮ್ಮನ ಅಡುಗೆಯ ಸ್ವಾದವನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇಂತಹ ಸೌಹಾರ್ದತೆ , ಸಹಬಾಳ್ವೆಯ ಅದೆಷ್ಟೋ ನೆನಪುಗಳು ನಮ್ಮೊಂದಿಗಲ್ಲ ! ಅಂದು ನಮ್ಮನ್ನು ಸಂಶಯ ದೃಷ್ಟಿಯಿಂದ ನೋಡುವವರಾರು ಇರಲಿಲ್ಲ. ಯಾವುದೇ ಒಳಿತಿನ ಕಾರ್ಯ ಮಾಡಿದರೆ ಬೆನ್ನು ತಟ್ಟಿ ಹುರಿದುಂಬಿಸುವವರೇ ಅಧಿಕ ಮಂದಿ.
ಆದರೆ ಇಂದು ಯಾವುದೇ ಒಳಿತು ಕಾರ್ಯದ ಹಿಂದೆ ಹಲವಾರು ಸಂಶಯದ ಕಣ್ಣುಗಳು ಸುತ್ತುತ್ತಿರುತ್ತವೆ. ನಾವ್ಯಾರೂ ಒಳಿತು ಕಾರ್ಯದ ಹಿಂದೆ ಧರ್ಮದ ಲೇಪನ ಹಚ್ಚಲು ಬಯಸುವವರಲ್ಲ. ಸೌಹಾರ್ದತೆ, ಸಹಬಾಳ್ವೆ , ಸಹಿಷ್ಣುತೆಯ ಪಾಠವನ್ನು ನಮ್ಮ ಭೂಮಿ ನಮಗೆ ಕಲಿಸಿಕೊಟ್ಟಿದೆ. ಇಲ್ಲದಿದ್ದರೆ ಅನ್ಯ ಧರ್ಮೀಯರ ಅದರಲ್ಲೂ ಬ್ರಾಹ್ಮಣರ ಅಂತ್ಯ ಸಂಸ್ಕಾರವನ್ನು ಅವರದೇ ಶೈಲಿಯಲ್ಲಿ ನಡೆಸಿಕೊಡಬೇಕಾದರೆ ಅದು ಸೌಹಾರ್ದತೆ , ಸಹಿಷ್ಣುತೆಯ ಭಾಗವಲ್ಲದೆ ಮತ್ತೇನು ? ಎಷ್ಟೇ ಹಣ ಕೊಟ್ಟರೂ ಕೊರೋನದ ಮೊದಲು ಅಂತಹ ಕಾರ್ಯವನ್ನು ನಡೆಸಿಕೊಟ್ಟ ಉದಾಹರಣೆಯನ್ನು ಯಾರಾದರೂ ತೋರಿಸಬಲ್ಲಿರಾ ? ಇಂದು ಅನ್ಯಧರ್ಮದವರ ಅಂತ್ಯ ಸಂಸ್ಕಾರವನ್ನು ನಡೆಸಿಕೊಡುವುದರ ಹಿಂದಿರುವ ಉದಾರತೆಯನ್ನು ಮಾನವೀಯ ದೃಷ್ಟಿಯಿಂದ ಚಿಂತಿಸಬಾರದೇ ? ಅದರ ಹಿಂದೆ ಇಲ್ಲದ ಆರೋಪವನ್ನು ಹೊರಿಸಿ ಸಹಾಯ ಹಸ್ತ ಚಾಚುವ ಕರಗಳಿಗೆ ಅವಮಾನದ ಮೇಲೆ ಅವಮಾನ ಮಾಡುವಿರೇಕೆ ? ತನ್ನ ಸಹೋದರನ ಮೃತದೇಹ ಅನಾಥವಾಗಿ ಬಿದ್ದಿರುವುದನ್ನು ನೋಡಲು ಇಷ್ಟಪಡದ ಅವರು ತಾವಾಗಿಯೇ ಸ್ವಯಂ ಮುಂದೆ ಬಂದಿರುವುದು ಶ್ಲಾಘನೀಯ. ಸಂಧಿಗ್ದ ಪರಿಸ್ಥಿತಿಯಲ್ಲಿ ಮೃತನ ಮನೆಯವರ ನೋವು ಅರಿತು ಸಹಕರಿಸುವುದು ಅವರಿಗೂ ಆಶ್ವಾಸನೆ. ಹಾಗಾಗಿಯೇ ಅವರು ಮರೆಯಲಾಗದ ಆ ಹಸ್ತಗಳಿಗೆ ಕೃತಜ್ಞತೆ ಸಲ್ಲಿಸುತ್ತಿರುವುದು. ಮುಸ್ಲಿಮ್ ಯುವಕರ ಸೇವೆ ಇದೇನು ಮೊದಲಲ್ಲ. ಅವರು ಪ್ರತೀ ಆಪತ್ತಿನ ಸಂದರ್ಭದಲ್ಲಿ ಹಿಂದು ಮುಂದು ನೋಡದೆ ಸಹಾಯ ಹಸ್ತ ಚಾಚಲು ಮುನ್ನುಗುವ ಧೀರರು. ಪ್ರವಾಹದ ಸಂದರ್ಭದಲ್ಲಿ , ವಿಮಾನ ಅಪಘಾತ ಸಮಯಗಳಲ್ಲಿ ಸೌಹಾರ್ದತೆಯ ಪಾಠ ಕಲಿಸಿದ ಕೀರ್ತಿ ಅವರಿಗಿದೆ. ಅಂದು ಯಾರೂ ಹಣಕ್ಕಾಗಿ ಇವರು ಈ ಕೆಲಸ ಮಾಡುತ್ತಿದ್ದಾರೆಂಬ ಆರೋಪವನ್ನು ಅವರ ಮೇಲೆ ಹೊರಿಸಲಿಲ್ಲ…! ಸಂಕುಚಿತ ಮನೋಭಾವದ ಸಂಶಯ ಪಿಶಾಚಿಗಳಿಂದ ಇಂದು ಮನಶ್ಶಾಂತಿ ಮರೀಚಿಕೆಯೇ ಸರಿ. ಪುಟ್ಟ ಅಚಾತುರ್ಯ ನಡೆದರೂ ಸಣ್ಣ ಹುಳುಕೇ ಸಿಕ್ಕರೂ ಹೊಂಚು ಹಾಕುವ ಕಣ್ಣುಗಳು ಆ ಘಟನೆಗಳಿಗೆ ಹೊಸ ಕಥೆ ಸೃಷ್ಟಿಸಿ ತಮ್ಮ ಕೊಲಕುಚಹರೆಯ ಪ್ರದರ್ಶಿಸಿಯೇ ಬಿಡುವರು. ಯಾವುದೇ ರಾಗರಂಜನೆಯಿಲ್ಲದೆ , ವೈಭವೀಕರಣವಿಲ್ಲದೆ ಪ್ರಾಮಾಣಿಕವಾಗಿ ಸಲ್ಲಿಸುವ ಸೇವೆ , ಸೌಹಾರ್ದತೆಯ ಊರ್ಧ್ವಮುಖಗಳ ಪಯಣದ ಹಾದಿಯನ್ನು ಗುರುತಿಸಬೇಕೇ ಹೊರತು ಕಿವುಚುವ ಪ್ರಯತ್ನ ಸಲ್ಲದು. ಧರ್ಮದ ಹೆಸರಿನಲ್ಲಿ ರೋಗಗಳಿಗೆ ನಾಮಕರಣ ಮಾಡುವ ಪ್ರಯತ್ನ , ಬೆಡ್ ಬ್ಲಾಕಿಂಗ್ ನಲ್ಲಿ ಸಿಲುಕಿಸುವ ಕುತಂತ್ರ ಚಾಚುವ ಹಸ್ತಗಳನ್ನು ಅಧೀರಗೊಳಿಸಿ ತಮ್ಮ ಕೆಟ್ಟ ಮನಸ್ಥಿತಿಯೊಂದಿಗೆ ಅಧಿಕಾರ ಸ್ಥಾಪನೆಯ ಪ್ರಯತ್ನವಷ್ಟೇ.
ಅನ್ನದ ಬೇವು ನೋಡಲು ಒಂದು ಕಾಳು ಹಿಚುಕಿದರೆ ಸಾಕಂತೆ. ಹಾಗೆಯೇ ಪ್ರತೀ ಸಮುದಾಯದ ಒಳಿತಿನ ಪಯಣ ದರ್ಶಿಸಲು ನಿಮ್ಮ ಹತ್ತಿರದ ಒಡನಾಡಯ ಹೆಜ್ಜೆ ಗುರುತು ಸಾಕು. ಅದಕ್ಕೆ ದೂರದ ಬೆಟ್ಟದ ತಪ್ಪಲಿನ ಕೇಳದ ಕಂಡರಿಯದ ನೋಟ ಸತ್ಯವಾಗಲಾರದು. ಸೇವೆ , ಉದಾರತೆ , ಕೊಡುಗೆಗಳ ಮಹಾ ರೂಪಕಗಳ ಶ್ರೇಷ್ಟ ಪರಂಪರೆಯ ಈ ಭಾರತ ಭೂಮಿಯ ಇತಿಹಾಸದ ಪುಟಗಳ ತಿರುವುವಿಕೆಯೇ ಮತ್ತೊಮ್ಮೆ ನಮ್ಮನ್ನು ಸಹಬಾಳ್ವೆಯ ಕಡಲಲ್ಲಿ ತೇಲಿಸಬಲ್ಲದು. ಹಿಂದೂಗಳ ಉದಾರತೆಯ ಗುಣ ಬಹುಧರ್ಮೀಯರನ್ನು ಒಂದೇ ಆಟದ ಬಯಲಿನಲ್ಲಿ ಸೇರಿಸಿದರೆ , ಕ್ರೈಸ್ತರ ಸೇವಾಗುಣ ಈ ನಾಡಿಗೆ ಅಪಾರ ಕೊಡುಗೆ ನೀಡಿದರೆ , ಮುಸಲ್ಮಾನರ ಮನ ಬೆಸೆಯುವ ವಿವಿಧ ಸ್ವರೂಪಗಳ ರಹಸ್ಯ – ಬಹಿರಂಗ ದಾನ ಹಾಗೂ ಸೇವಾಗುಣಗಳ ಬಿಂದುಗಳನ್ನು ಹನಿಸಿದರೆ , ಅಹಿಂಸೆಯ ಬೋಧನೆ ಮೂಲಕ ಸರ್ವರಲ್ಲೂ ನೆಮ್ಮದಿಯನ್ನು ಬಯಸುವ ಜೈನ ಮತ್ತು ಬೌದ್ಧ ಧರ್ಮಗಳು , ಉದಾತ್ತ ಭಾವೈಕ್ಯದ ಸರಳ ಸುಂದರವಾದ ವಚನಗಳೊಂದಿಗೆ ಬಹುಬೇಗನೆ ಮನಸ್ಸುಗಳನ್ನು ಸೆಳೆಯುವ ಬಸವಣ್ಣನವರ ಅನುಯಾಯಿಗಳು ಇವರೆಲ್ಲರು ಈ ಭೂಮಿಯ ಚೆಲುವಿಗೆ ಕಾರಣಕರ್ತರು.
” ಕೊಟ್ಟದ್ದು ತನಗೆ , ಬಚ್ಚಿಟ್ಟದ್ದು ಪರರಿಗೆ” ಎಂಬ ಬಸವಣ್ಣನವರ ನುಡಿಯನ್ನು ಶ್ರವಿಸುತ್ತಾ ” ಬಲಗೈಯ ದಾನ ಎಡಗೈಗೂ ಸ್ಪರ್ಶಿಸಬಾರದು” ಎಂಬ ವಿಶ್ವಾಸದಡಿಯಲ್ಲಿ ಬದುಕುತ್ತಿರುವ ಮುಸ್ಲಿಮರು ತಮ್ಮ ಸೇವೆ ,ದಾನವನ್ನು ಆಡಿಕೊಂಡು ನಡೆದಾಡುವವರಲ್ಲ. ಹಾಗೆ ನಡೆದರೆ ತಮ್ಮ ಕರ್ಮ ನಿಷ್ಫಲವಾಗುವುದೆಂದು ದೃಢವಾಗಿ ನಂಬಿದವರು. ಆದರೆ ಇಂದು ಸುಂದರ ಭೂಮಿಯನ್ನು ಜಾತಿ ,ಧರ್ಮದ ಹೆಸರಿನಲ್ಲಿ ಕುರೂಪಗೊಳಿಸುವ ಪ್ರಯತ್ನಗಳ ನಡುವೆ ತಮ್ಮ ಸೌಹಾರ್ದತೆಯ ಹೃದಯಗಳನ್ನು ಪರಿಚಯಿಸುವುದು ಅವರಿಗೆ ಅಗತ್ಯದ ಜೊತೆ ಅನಿವಾರ್ಯವೂ ಆಗಿದೆ. ಅಂತಹ ಸಹೃದಯಿಗಳ ಮೇಲೆ ಬಣ್ಣ ಹಚ್ಚಿ ಮತ್ತಷ್ಟೂ ನೋವಿನ ಮೇಲೆ ನೋವಿನ ಬರೆಯೆಳೆಯುವ ಪ್ರಯತ್ನ ಮಾಡದಿರಿ. ಹಿಂದೆ ಮುಂದೆ ನೋಡದೆ ಸಹಾಯ ಹಸ್ತ ಚಾಚಲು ಧಾವಿಸುವ ಸಹೋದರ , ಸಹೋದರಿಯರೇ… ನೀವು ಇಂತಹ ಸಮಯದಲ್ಲಿ ಎಚ್ಚರವಾಗಿರಬೇಕಾದದು ಅತೀ ಅಗತ್ಯ. ದುಃಖ ದುಮ್ಮಾನ ನೋವಿನ ಈ ಕಾಲದಲ್ಲೂ ನಿಮ್ಮ ಮೇಲೆ ಅಪಪ್ರಚಾರ ಮಾಡುವವರು ನಂತರದ ಕಾಲದಲ್ಲಿ ಇದರ ಭಯಾನಕ ರೂಪಗಳನ್ನು ಪ್ರದರ್ಶಿಸದೇ ಇರಲಾರರು. ಅಂತಹವರಿಗೆ ಬದುಕಿನ ಪಾಠಗಳನ್ನು ನಿಮ್ಮ ನಡವಳಿಕೆಯಿಂದ ತೋರಿಸುತ್ತಲೇ ಇರಬೇಕು. ಕಲಿತ ಶಿಕ್ಷಣದ ಮೂಲಕ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಲೇ ಇರಬೇಕು. ಎಲ್ಲಾ ತಯಾರಿಗಳೊಂದಿಗೆ ರಂಗಕ್ಕಿಳಿಯಬೇಕು. ಅಧೋಗತಿಗೆ ಇಳಿಯುತ್ತಿರುವ ಇಂದಿನ ವ್ಯವಸ್ಥೆಯ ವಿರುದ್ಧ ಹೋರಾಡುತ್ತಲೇ ಇರಬೇಕು. ಈ ರೀತಿ ಹಿಂದಿನ ಅದೇ ಸೌಹಾರ್ದತೆ , ಸಹಬಾಳ್ವೆಯ ಶ್ರೇಷ್ಟ ಬಾಳ್ವೆ ನಮ್ಮದಾಗುವಂತೆ ಪ್ರಯತ್ನ ಮುಂದುವರಿಯುತ್ತಲೇ ಇರಲಿ.