ಸೈಯದ್ ಅಬುಲೈಸ್

ಒಂದು ಕನಸಿನಿಂದ, ಆ ಒಂದು ಸುಂದರ ವೈಭವದ ಕನಸಿನಿಂದ ಇದೆಲ್ಲವೂ ಆರಂಭವಾಗುತ್ತದೆ. ನೀವು ಬರೆಯಬೇಕೆಂದಿರುವ ಒಂದು ವಿಚಾರ ಅಥವಾ ನೀವು ಸಾಧಿಸಬೇಕೆಂದಿರುವ ಒಂದು ಗುರಿ. ಆ ಕನಸಿನ ನೆರವೇರಿಕೆಯ ಕಲ್ಪನೆಯು ಭಾವಪರವಶತೆಯನ್ನು ಉಂಟು ಮಾಡುತ್ತದೆ. ಅದು ಪರಿಪೂರ್ಣ ಮತ್ತು ದೋಷರಹಿತವಾದುದಾಗಿದೆ. ನೀವು ಯೋಜನೆಯನ್ನು ರಚಿಸಿ, ಕಾರ್ಯಗತದ ಮಾರ್ಗವನ್ನು ರೂಪಿಸುತ್ತೀರಿ. ನಿಮ್ಮ ಮೇರುಉತ್ಪತಿಯು ಯಾವ ರೀತಿಯಿರಬೇಕೆಂಬುದರ ಕುರಿತು ನಿಮ್ಮ ಚಿಂತನೆಯ ದೃಷ್ಟಿಯಲ್ಲಿ ವಿವಿಧ ಆಲೋಚನೆಗಳಿವೆ. ನೀವು ಈಗಷ್ಟೆ ಮಾಡಿರುವ ಯೋಜನೆಯೆಡೆಗೆ ದೃಷ್ಟಿಬೀರುತ್ತೀರಿ ಮತ್ತು ನೀವು ಪರಿಪೂರ್ಣತೆಯನ್ನು ತಲುಪಿದ್ದಿರೆಂದು ಹೆಮ್ಮೆ ಪಡುತ್ತೀರಿ.

ನೀವು ಕುಟುಂಬಿಕರೊಂದಿಗೆ ಅಥವಾ ಸ್ನೇಹಿತರೊಂದಿಗೆ ನಿಮ್ಮ ಕನಸನ್ನು ಹಂಚಿ ಅದನ್ನು ಹೇಗೆ ಸಾಧಿಸುವವರಿದ್ದಿರೆಂದು ತಿಳಿಸುತ್ತೀರಿ. ಕೆಲವೊಮ್ಮೆ ನಿನಗೆ ಅವರ ಬೆಂಬಲ ಮತ್ತು ಆಶಿರ್ವಾದ ಲಭಿಸುತ್ತದೆ, ಆದರೆ ಕೆಲವೊಮ್ಮೆ ಅವರು ವಿರೋಧಿಸುತ್ತಾರೆ. ಅದು ನೀವು ಅನುಭವಿಸಬೇಕಿರುವ ಪ್ರಕ್ಷುಬ್ದತೆಯ ಅನುಭವ ಅವರಿಗಿರುವುದರಿಂದಲೋ ಅಥವಾ ನೀವು ಬಳಲಿಕೆಯ ಮತ್ತು ಕಷ್ಟಕರ ಜೀವನವನ್ನು ತುಳಿಯುವುದು ಅವರಿಗೆ ಇಷ್ಟವಿಲ್ಲದಿರುವುದರಿಂದಲೋ ಅಥವಾ ನಿಮ್ಮ ಕನಸನ್ನು ಸಾಧಿಸಲು ನೀವು ಅಶಕ್ತರಾಗಿದ್ದಿರೆಂದು ಅವರು ಭಾವಿಸುವುದರಿಂದಲೋ ಇರಬಹುದು.

ಆದರೆ, ನಿಮಗಿದು ತಿಳಿದಿರಲಿ, ಯಾವುದೇ ಶ್ರೇಷ್ಟತೆಯನ್ನು ಸಂಕಷ್ಟ ಮತ್ತು ತ್ಯಾಗಗಳಿಲ್ಲದೆ ಸಾಧಿಸಲ್ಪಡಲಿಲ್ಲ ಮತ್ತು ನಿಮ್ಮ ಬಗ್ಗೆ ಇತರರು ಏನು ಭಾವಿಸುತ್ತಾರೆ ಎಂಬುವುದು ಸಮಸ್ಯೆಯೇ ಅಲ್ಲ. ಜಗತ್ತಿನಲ್ಲಿ ನಿಮ್ಮ ಆಲೋಚನೆ ಮತ್ತು ಕನಸಿನ ಬಗ್ಗೆ ನಂಬಿಕೆ ಇರುವ ಒಬ್ಬನೇ ಒಬ್ಬನಿರುವ ಸಮಯವೂ ಬರಬಹುದು. ಆ ಒಬ್ಬನು ನೀವೇ ಆಗಿರುತ್ತೀರಿ ಮತ್ತು ಅದು ಸಾಕಾಗುತ್ತದೆ. ಯಾಕೆಂದರೆ ನಿಮ್ಮ ಮುಂದೆ ಎರಡು ಸಾಧ್ಯತೆಗಳಿವೆ. ಒಂದೋ ನೀವು ಅದನ್ನು ಸಾಧಿಸುತ್ತೀರಿ ಅಥವಾ ಇಲ್ಲ. ನೀವು ಸಫಲರಾದರೆ ಅದು ನಿಮ್ಮ ಜೀವಮಾನ ಸಾಧನೆಯಾಗುತ್ತದೆ ಮತ್ತು ನೀವು ಸೋಲನ್ನು ಕಂಡರೆ, ಖಂಡಿತವಾಗಿ ವಿಜಯವು ಕಲಿಸುವುದಕ್ಕಿಂತ ಮಹತ್ವವಾದ ಪಾಠವನ್ನು ಕಲಿಯುತ್ತೀರಿ. ಅಲ್ಲದೆ, ನೀವು ಹೆಚ್ಚು ವಿವೇಕ ಮತ್ತು ಒಳಜ್ಞಾನದಿಂದ ಎಲ್ಲವನ್ನು ಪುನಃ ಪ್ರಾರಂಭಿಸಬಹುದು.

ಆ ರಾತ್ರಿ ನೀವು ಸಂತೋಷಭರಿತವಾದ ಭಾವನೆಯೊಂದಿಗೆ ಮಲಗುತ್ತೀರಿ ಮತ್ತು ನಿಮ್ಮ ತಲೆಯಲ್ಲಿ ಯೋಜನೆಯನ್ನು ಅನೇಕ ಬಾರಿ ಅವಲೋಕಿಸುತ್ತಿರಿ. ಕೆಲವೊಮ್ಮೆ ತತ್‍ಕ್ಷಣದಿಂದ ನೀವು ಕಾರ್ಯಪ್ರವೃತ್ತರಾಗುತ್ತೀರಿ ಮತ್ತು ಮಗದೊಮ್ಮೆ ಅದೆಲ್ಲವನ್ನು ಹೇಗೆ ಮಾಡುವುದು, ಎಷ್ಟು ಸುಲಭ ಹಾಗು ಬೆರಳಿನ ಚಲನೆಯಿಂದ ಮಾಡಿಬಿಡಬಹುದು ಎಂಬುದೆಲ್ಲವನ್ನು ತಿಳಿದವರಂತೆ ತಡಮಾಡುತ್ತೀರಿ. ಏನನ್ನು ಮಾಡಬೇಕಿತ್ತೋ ಅದನ್ನು ಮಾಡದೆ ನಿಧಾನವಾಗಿಸುತ್ತೀರಿ. ಅದು ನಿಮ್ಮೊಳಗೆ ಅವಿತುಕೊಂಡಿರುವ, ನೀವು ಬಯಸದ ಸೋಲಿನ ಭಯದ ಕಾರಣದಿಂದಾಗಿರಬಹುದು ಅಥವಾ ನಿಮ್ಮ ಉದಾಸೀನತೆ ಅಥವಾ ಮುಂದಿರುವ ವ್ಯಾಕುತೆಗಳಿಗೆ ನಿಮ್ಮ ಗಮನವನ್ನು ಅತಿಯಾಗಿ ನೀಡುತ್ತೀರುವುದರಿಂದಲೂ ಇರಬಹುದು.

ಅಂತಿಮವಾಗಿ, ಹೆಜ್ಜೆಯಿಡುವಾಗ ಸ್ಥೈರ್ಯ ಮತ್ತು ಶಕ್ತಿಯು ನಿಮ್ಮಲ್ಲಿ ತುಂಬಿರುತ್ತದೆ ಹಾಗು ನಿಮಗೆ ಅದೆಲ್ಲವನ್ನೂ ಮಾಡಿ ಮುಗಿಸಬೇಕೆಂಬ ಹಂಬಲವಿರುತ್ತದೆ. ನೀವು ಉತ್ಸಾಹದಿಂದ ಕಾರ್ಯವನ್ನು ಆರಂಭಿಸುತ್ತೀರಿ. ನೀವು ಸ್ಪೂರ್ತಿಯನ್ನು ಪಡೆದಿರುತ್ತೀರಿ. ಕಾರ್ಯಪ್ರವೃತ್ತರಾಗುತ್ತೀರಿ ಮತ್ತು ನೀವು ಯಾವತ್ತೂ ಚಿಂತಿಸಿರುವುದಕ್ಕಿಂತಲೂ ಕಠಿಣವಾಗಿ ಶ್ರಮಿಸುತ್ತೀರಿ. ನೀವು ಕಷ್ಟದ ಸಂಧರ್ಭವನ್ನು ಎದುರಿಸುತ್ತಿದ್ದಿರೆಂದಾರೆ ಕೆಲವೊಮ್ಮೆ ನೀವು ನೆಗೆಟಿವಿಟಿಯನ್ನು ಅನುಭವಿಸಬಹುದು. ಗುರಿಯನ್ನು ತಲುಪಲು ನಿಮ್ಮ ಸ್ಪೂರ್ತಿಯು ಸಾಕಾಗುತ್ತದೆ ಮತ್ತು ಕೆಲವೊಮ್ಮೆ ಹಲವಾರು ಕಾರಣಗಳಿಂದಾಗಿ ನಿಮ್ಮ ಶಕ್ತಿಯು ಕುಂದಿ, ಇನ್ನು ನನ್ನಿಂದ ಸಾಧ್ಯವಿಲ್ಲ ಎಂದು ನಿಮಗೆ ಅನಿಸಬಹುದು.

ಈ ಪ್ರಕ್ರಿಯೆಯಲ್ಲಿ ಹಲವರು ನಿಮ್ಮನ್ನು ವಿರೋಧಿಸಬಹುದು. ಯಾಕೆಂದರೆ, ಅವರು ತಮ್ಮಲ್ಲೇ ಅಭದ್ರತೆಯನ್ನು ಕಾಣಬಹುದು ಮತ್ತು ನೀವು ಸಫಲರಾಗುವುದು ಅವರನ್ನು ಭಯಬೀತರನ್ನಾಗಿಸುತ್ತದೆ ಮತ್ತು ಅವರು ಎಷ್ಟೊಂದು ಅಸಮರ್ಥರೆಂಬುವುದನ್ನು ಅವರಿಗೇ ನೆನಪಿಸುತ್ತದೆ ಅಥವಾ ನಿಮ್ಮ ಕುರಿತು ಅವರ ಅತಿ ಕಾಳಜಿಯ ಪ್ರವೃತ್ತಿಯಿಂದಾಗಿ ನೀವು ನಿಖರ ಸಾಧ್ಯತೆ ಇಲ್ಲದ ಪ್ರತಿಫಲಕ್ಕಾಗಿ ಪರಿಶ್ರಮಿಸುತ್ತಿದ್ದೀರೆಂದು ಅವರು ಭಾವಿಸಿ ನಿಮ್ಮ ಸಮಯ ಮತ್ತು ಶಕ್ತಿಯು ವ್ಯರ್ಥವಾಗುತ್ತಿದೆ ಎಂದು ತಿಳಿದು ನಿಮ್ಮನ್ನು ನಿರಾಸೆಯಿಂದ ರಕ್ಷಿಸಲೆಂದು ಮಾಡುತ್ತಿರಬಹುದು. ನಿಮಗಿದು ತಿಳಿದಿರಲಿ ಅತಿಯಾಗಿ ಮುದ್ದಿಸಿದ ಮಗು ಯಾವತ್ತಿಗೂ ಮಗುವಾಗೇ ಉಳಿಯುತ್ತದೆ.
ನೀವು ಹೇಗೋ ಅದನ್ನು ಪೂರ್ತಿ ಮಾಡಿದ್ದೀರಿ ಮತ್ತು ಈಗ ಮೇರು ಉತ್ಪತಿಗಾಗಿ ಕಾಯುತ್ತಿದ್ದೀರಿ. ಆದರೆ, ಕಾದು ನೋಡಿ…..ನೀವು ಏನನ್ನು ಕಾಣುತ್ತೀರಿ. ನೀವು ಕಂಡ ಕನಸಿಗಿಂತ ಅದು ಎಲ್ಲಿಯೋ ಇದೆ. ಇನ್ನೂ ಕ್ರೂರವಾಗಿ ಹೇಳುವುದಾದರೆ, ಅದು ಭಯಾನಕವಾಗಿದೆ. ನೀವು ಸಾಧಿಸಿರುವುದರ ಬಗ್ಗೆ ಅಸಹ್ಯಗೊಂಡಿದ್ದೀರಿ ಮತ್ತು ಅದು ಕರುಣಾಜನಕವಾಗಿದೆ. ನೀವು ಕರುಣಾಜನಕರಾಗಿದ್ದೀರಿ.
ನೀವು ಕಾಗದಗಳನ್ನು ಗಾಳಿಗೆ ಎಸೆಯುತ್ತೀರಿ ಅಥವಾ ಮೇಜಿಗೆ ಬಡಿಯುತ್ತೀರಿ. ನೀವು ಯಾವುದಕ್ಕೂ ಒಳಿತಲ್ಲದ ಭಾರ ಎಂಬಂತೆ ಪೂರ್ತಿದಿನ ನಿಮ್ಮನ್ನು ಎಳೆದಾಡುತ್ತೀರಿ. ನಿಮ್ಮನ್ನು ಪ್ರೀತಿಸುವವರ ಬಾಹುಗಳಲ್ಲಿ ಸೇರಿ ಬಿಡುತ್ತೀರಿ ಅಥವಾ ನೀವು ಏಕಾಂತವನ್ನು ಆಯ್ಕೆ ಮಾಡಿ ನಿಮ್ಮ ಅಶಕ್ತತೆ ಮತ್ತು ಕಳಪೆತನವನ್ನು ಆಳವಾಗಿ ಆಲೋಚಿಸುತ್ತೀರಿ. ಆ ರಾತ್ರಿ ನೀವು ನಿದ್ರಿಸಲು ಕಷ್ಟಪಡುತ್ತೀರಿ ಮತ್ತು ನೀವು ದುಃಖಿತರಾಗಿರುತ್ತೀರಿ.

ನೆನಪಿಡಿ, ಯಾವುದೇ ಕ್ರಿಯಾಶೀಲತೆಯ ಪ್ರಥಮ ವಿಚಾರವೇನೆಂದರೆ, ತಮ್ಮ ಪ್ರಥಮ ಕರಡಿನ ಭಯಾನಕತೆಗಾಗಿ ತಮ್ಮನ್ನು ಕ್ಷಮಿಸುವುದು. ಅವಸರ ಮಾಡದಿರಿ; ದಿನಕ್ಕೆ ಸ್ವಲ್ಪವೇ ಮಾಡಿರಿ. ದಿನ, ತಿಂಗಳು ಅಥವಾ ವರ್ಷಗಳ ಕಾಲ ಭರವಸೆಯೊಂದಿಗೆ ಕೆಲಸ ಮಾಡಿದಾಗ, ಪ್ರತಿಭೆಯು ನಿಮ್ಮ ರುಚಿಯನ್ನು ಹಿಡಿದುಕೊಳ್ಳುತ್ತದೆ. ನಿಮ್ಮ ನಿರೀಕ್ಷೆಗೆ ಅನುಗುಣವಾಗಿ ನೀವು ಏನನ್ನಾದರೂ ಮಾಡುತ್ತೀರಿ. ನೀವು ನಿಮ್ಮ ಬಗ್ಗೆ ಸ್ವಲ್ಪವೇ ಹೆಮ್ಮೆ ಪಡಬಹುದು ಮತ್ತು ಯಾರಿಗೆ ಗೊತ್ತು ಉಳಿದ ಜಗತ್ತು ಕೂಡಾ.
ಶ್ರೇಷ್ಟತೆಯನ್ನು ಸಾಧಿಸಿರುವವರೆಲ್ಲಾ ಅನ್ಯಗ್ರಹ ಜೀವಿಗಳಲ್ಲ. ಆದರೆ, ಖಂಡಿತವಾಗಿಯೂ ಅವರು ಸೂಪರ್ ಪವರ್ ಹೊಂದಿದ್ದಾರೆ. ಸಹಜೀವಿಗಳಿಗಿಂತ ಅವರು ಹೆಚ್ಚು ಬುದ್ಧಿಂತರು. ಮನುಷ್ಯನು ತಪ್ಪು ಮಾಡುವ ಪ್ರವೃತ್ತಿಯವನು ಎಂಬುವುದರ ಸಾಕ್ಷಾತ್ಕಾರ. ತಮ್ಮ ತಪ್ಪುಗಳನ್ನು ಮತ್ತು ಕೊರತೆಗಳನ್ನು ಒಪ್ಪುವ ಧೈರ್ಯ ಮತ್ತು ಸೋಲನ್ನು ಕಲಿಕೆಯ ಪ್ರಕ್ರಿಯೆ ಎಂದು ಸ್ವೀಕರಿಸುವುದು. ಸಾಮಾನ್ಯ ಮನುಷ್ಯನಿಗಿಂತ ಹೆಚ್ಚಿನ ಅವಧಿಗೆ ಅವರು ತಮ್ಮ ಯೋಜನೆಗೆ ಅಂಟಿಕೊಂಡಿರುತ್ತಾರೆ. ನಿಂದನೆಯ ಭಯ ಮತ್ತು ಜನರು ಮಾಡುವ ಅವಹೇಳನದ ಭಯಾನಕತೆಯು ಅವರನ್ನು ನಿಲ್ಲಿಸುವುದಿಲ್ಲ. ಸಾಧಿಸಿದಕ್ಕೆ ಅಭಿನಂದಿಸುವ ಮತ್ತು ಶ್ರೇಷ್ಟರು ಎಂದು ಗುರುತಿಸುವುದಕ್ಕಿಂತ ದೀರ್ಘ ಸಮಯವು ಅವರು ನಂಬಿರುವ ವಿಚಾರಕ್ಕಾಗಿ ಅವರನ್ನು ನಿಂದಿಸಲಾಗುತ್ತದೆ ಮತ್ತು ಹುಚ್ಚನೆಂದು ಕರೆಯಲಾಗುತ್ತದೆ. ಈ ಮನುಷ್ಯರು ನಿರಂತರತೆಯನ್ನು ಕಾಪಾಡಿಕೊಂಡಿರುತ್ತಾರೆ. ಯಾಕೆಂದರೆ ಯಶಸ್ಸು ಎನ್ನುವುದು ಕೊನೆಯಲ್ಲ; ಬದಲಾಗಿ ಕಲಿಯುವುದು ಮತ್ತು ಬೆಳೆಯುವುದು ಗುರಿಯಾಗಿದೆ.

ಅವಿರತ ಯತ್ನವನ್ನು, ಸರಿಯಾದ ದಾರಿಯಲ್ಲಿರಲು ನಾವು ಎದುರಿಸ ಬೇಕಾದ ಹೋರಾಟದೊಂದಿಗೆ ಹೊಸೆದು ಮಾತನಾಡುವುದಾದರೆ ಅದು ಅಲ್ಲಾಹನ ಮಾರ್ಗ ಮತ್ತು ಅಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ನರಕದಿಂದ ರಕ್ಷಣೆ ಹೊಂದಿ ಸ್ವರ್ಗದಲ್ಲಿ ದಾಖಲು ಪಡೆಯುವುದನ್ನೇ ಯಶಸ್ಸು ಎಂದು ಪರಿಗಣಿಸಿದರೆ, ಈ ಜಗತ್ತಿನಲ್ಲಿ ನಮ್ಮ ಜೀವನವು ಅನೇಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಶೈತಾನನು ನಮ್ಮನ್ನು ಧೈರ್ಯಗುಂದುವಂತೆ ಮಾಡಿ ನಮ್ಮ ಕರ್ಮಗಳನ್ನು ವಿರೋಧಿಸುತ್ತಾನೆ. ಅತ್ಯಂತ ಅಗತ್ಯವಾದುದೇನೆಂದರೆ, ಆದಮ್(ಅವರ ಮೇಲೆ ಶಾಂತಿ ಇರಲಿ)ರ ಮಕ್ಕಳು ತಪ್ಪು ಮಾಡುತ್ತಾರೆ ಎಂಬುವುದನ್ನು ಅಲ್ಲಾಹನ ದಾಸನಾಗಿ ಆತನನ್ನು ಅನುಸರಿಸದೇ ಇರುವ ಸೋಲಿಗೆ ಕಾರಣವನ್ನಾಗಿಸುತ್ತಾರೆ.

ಓರ್ವ ಮುಸ್ಲಿಮನು ತಾನು ಹೇಗಿರಬೇಕೆಂಬುವುದರ ನಿಖರ ಆಲೋಚನೆಯೊಂದಿಗೆ ತೊಡಗುತ್ತಾನೆ. ಎಲ್ಲಾ ರೀತಿಯ ಕೆಡುಕುಗಳಿಂದ ಮುಕ್ತನಾಗಿ ಒಳಿತುಗಳನ್ನು ಮಾಡುತ್ತಾ ಮತ್ತು ಅಲ್ಲಾಹನ ಸಂತೃಪ್ತಿಯನ್ನು ಗಳಿಸಲು ಸೃಷ್ಟಕರ್ತನೆಡೆಗೆ ಶರಣಾಗುವುದು ಮುಸ್ಲಿಮನ ಆದರ್ಶಪೂರ್ಣವಾದ ಚಿಂತನೆಯಾಗಿದೆ. ಆದರೆ, ಸತ್ಯವೇನೆಂದರೆ ಅಲ್ಲಾಹನು ನಮ್ಮನ್ನು ಆ ರೀತಿಯಾಗಿ ಸೃಷ್ಟಿಸಲಿಲ್ಲ. ಆತನು ನಮ್ಮಲ್ಲಿ ಒಂದು ಅಂಶವನ್ನಿಟ್ಟಿದ್ದಾನೆ ಅದು ನಮ್ಮನ್ನು ಕೆಡುಕು ಮತ್ತು ಪಥಭ್ರಷ್ಟತೆಯೆಡೆಗೆ ಆಹ್ವಾನಿಸುತ್ತದೆ. ನಮ್ಮಿಂದ ತಪ್ಪುಗಳು ಸಂಭವಿಸಿದಾಗ ಆತನು ಕ್ಷಮಿಸುತ್ತಾನೆ. ನಮ್ಮನ್ನು ತಪ್ಪು ಮಾಡಲು ಬಿಟ್ಟಿದ್ದಾನೆ ಆದ್ದರಿಂದ ಸರಿಯಾಗಿರುವುದು ಹೇಗೆಂದು ಆತನು ನಮಗೆ ತೋರಿಸಿಕೊಡುತ್ತಾನೆ. ವಾಸ್ತವದಲ್ಲಿ ತಪ್ಪುಗಳಿಗೆ ಅದರದೇ ಆದ ಶೈಕ್ಷಣಿಕ ಮೌಲ್ಯವಿದೆ. ಧಾರ್ಮಿಕ ಜನರು ಸಾಮಾನ್ಯವಾಗಿ ಮೂಕರಾಗಿರುತ್ತಾರೆ.

ನಮ್ಮಿಂದ ಪಾಪಗಳು ಸಂಭವಿಸುವಂತೆ ಮಾಡಿರುವುದರಿಂದ ಆತನು ನಮಗೆ ಪಶ್ಚಾತಾಪವನ್ನು ಕಲಿಸಿದನು, ಆದಮ್‍ರ ಇತರ ಪುತ್ರರು ಮತ್ತು ಪುತ್ರಿಯರೆಡೆಗೆ ಸಹಾನುಭೂತಿ ಮತ್ತು ಪರಾನುಭೂತಿಯನ್ನು ತೋರಲು ಕಲಿಸಿದನು. ನಮ್ಮಿಂದ ಪಾಪಗಳು ಸಂಭವಿಸುವಂತೆ ಮಾಡಿ ಆತನು ನಮಗೆ ನಮ್ರತೆ ಮತ್ತು ಮಾನವನು ಎಷ್ಟೊಂದು ಅಶಕ್ತನು ಎಂಬುದನ್ನು ಕಲಿಸಿದನು. ನಾವು ಸ್ವತಃ ನಮ್ಮ ಆಲೋಚನೆಗಳು ಮತ್ತು ಕರ್ಮಗಳನ್ನು ನಿಯಂತ್ರಿಸಲು ಅಸಮರ್ಥರು ಮತ್ತು ಕ್ಷಮಿಸುವುದರ ಮೂಲಕ ಆತನು ಎಷ್ಟೊಂದು ದಯಾಮಯನು ಎಂಬುವುದನ್ನು ನಮಗೆ ಸ್ಪಷ್ಟ ಪಡಿಸಿದನು.

ಅಂತಿಮವಾಗಿ, ಯಾರಿಗೆ ತಾನೊಬ್ಬ ಪಾಪ ಮಾಡುವವನು ಎಂಬುದು ತಿಳಿದಿದೆಯೋ ಆತನು ಅವಿರತವಾಗಿ ಪ್ರಯತ್ನ ಮಾಡುವ ಮುಸ್ಲಿಮ್(ಆಧ್ಯಾತ್ಮಿಕ ಹಿನ್ನಲೆಯಲ್ಲಿ) ಆಗಿದ್ದಾನೆ. ಆತನ ಪಾಪಗಳು ಆತನನ್ನು ಹೆಚ್ಚು-ಹೆಚ್ಚು ವಿನಮ್ರ ಮತ್ತು ವಿನೀತನಾಗಿಸುತ್ತದೆ. ಆತನು ನಿರಂತರವಾಗಿ ಆತನ ದೇವನಲ್ಲಿ ಪಶ್ಚಾತಾಪವನ್ನು ಬೇಡುತ್ತಾನೆ ಮತ್ತು ತನ್ನದೇ ಆದ ಕೊರತೆಗಳಿಂದ ಖಿನ್ನನಾಗುವುದಿಲ್ಲ. ಆತನು ತನ್ನ ತಪ್ಪುಗಳಿಂದ ಕಲಿತು ಔನ್ನತ್ಯದ ದಾರಿಯೆಡೆಗೆ ಸಾಗುತ್ತಾನೆ. ಆತನು ತನ್ನ ದೇವನ ಕರುಣೆಗೆ ಆಭಾರಿಯಾಗಿರುತ್ತಾನೆ ಮತ್ತು ಆತನ ಕರುಣೆಯಿಂದ ನೈಜ ಯಶಸ್ಸನ್ನು ಗಳಿಸಲು ಮಾರ್ಗದರ್ಶಿಸಲು ಹಾಗು ಸಹಾಯ ಮಾಡಲು ಬೇಡುತ್ತಾನೆ.

 

LEAVE A REPLY

Please enter your comment!
Please enter your name here