ಬರೆದವರು: ರಹೀನ ತೊಕ್ಕೊಟ್ಟು

ಈ ಜೀವನ ಆಟ ವಿನೋದವಲ್ಲದೆ ಇನ್ನೇನು ಅಲ್ಲ. ಹೀಗಂತ ಒಂದು ಸಿದ್ದಾಂತವನ್ನು ಕುರಾನ್ ಪ್ರತಿಪಾದಿಸಿದೆ. ನನ್ನನ್ನು ಬಹಳಷ್ಟು ಯೋಚನೆಗೆ ಈಡು ಮಾಡಿದ ಈ ಸಿದ್ಧಾಂತ ಅಥವ ಈ ವಾಕ್ಯದ ಮರ್ಮ ಅರಿಯಲು ಬಹಳ ಸಮಯ ತೆಗೆದುಕೊಂಡೆ ನಾನು.

ವ್ಯಕ್ತಿತ್ವ ವಿಕಸನದ ಪಾಠಗಳು ಅಥವ ಯೋಗಭ್ಯಾಸದ ಪಾಠಗಳು ಜೀವನದಲ್ಲಿ ಸಾಧಿಸಬೇಕಾದ ಕಾರ್ಯಗಳನ್ನು ಬಹಳ ಆತ್ಮೀಯವಾಗಿ ತೆಗೆದುಕೊಂಡು ನಿರ್ವಹಿಸುವುದು ಹೇಗೆಂದು ಕಲಿಸಿಕೊಡುತ್ತದೆ. ಮನೆಯಲ್ಲಿ ತಾಯಿಯೊಬ್ಬಳು ಮಾಡುವ ಅಡುಗೆಯನ್ನು ತಾಯಿಯಾದವಳು ಪ್ರೀತಿಯಿಂದ ಬಡಿಸಬೇಕೆಂದು ಕಲಿಸಿಕೊಡುತ್ತದೆ. ಬಡಿಸಲೇಬೇಕಲ್ಲ,ಮನೆಕೆಲಸ ಮಾಡಲೇ ಬೇಕಲ್ಲ ಎಂಬಂತೆ ಮಾಡೋದಕ್ಕಿಂತ ನನ್ನ ಮನೆಕೆಲಸದಿಂದ ಅದೆಷ್ಟು ಮಂದಿಗೆ ನೆಮ್ಮದಿ ಸಿಗುತ್ತೆ,ನನ್ನ ಅಡುಗೆಯಿಂದ ಅದೆಷ್ಟು ಮಂದಿಯ ಹಸಿವು ನೀಗಿ ಮನಃತೃಪ್ತಿ ಹೊಂದುತ್ತಾರೆ ಎಂಬ ಮನೆಯವರ ಆನಂದದ ಮನಸ್ಸನ್ನು ತಾಯಿಯಾದವಳು ಅರಿತು ಅನುಭವಿಸಿದಾಗ ಸಿಗುವ ಆನಂದವೇ ನಿಜವಾದ ಆನಂದ ಅಥವ ಸಮಾಧಾನ. ಇದು ಕೇವಲ ತಾಯಿಯೊಬ್ಬಳ ಆನಂದದ ವಿಚಾರವಲ್ಲ ತಂದೆಯಾದವನು ಕೂಡ ದುಡಿದು ತಂದು ಮನೆಯವರು ,ಮಕ್ಕಳು ,ಕುಟುಂಬ,ನೆರೆಕರೆ ಯವರು ತನ್ನ ಬೆವರಿಳಿಸಿ ದುಡಿದ ಹಣದಿಂದ ಅಥವಾ ದೈಹಿಕವಾಗಿ ತಾನು ಇತರರಿಗೆ ಮಾಡಿದ ಸಾಹಾಯದಿಂದ ಅವರು ಪಡೆದ ,ಗಳಿಸಿದ ಅನಂದ ಖುಷಿಯನ್ನು ತನ್ನರಿವಿಗೆ ತಂದು,ಅನುಭವಿಸಿದಾಗ ಸಿಗುವ ಆನಂದವು ಅದು ವಿವರಿಸಲಾಗದ ಸುಖವಾಗಿರುತ್ತದೆ.

ನಾನಿವತ್ತೊಂದು ಶಾಲೆಯಲ್ಲಿ ಒಬ್ಬ ಯೋಗಗುರು(ಮುಸ್ಲಿಂ)ಒಂದೈವತ್ತು ಮಕ್ಕಳಿಗೆ ಯೋಗ,ನಾಯಕತ್ವ,ಶ್ರದ್ಧೆ ಮುಂತಾದವುಗಳ ಬಗೆಗೆ ತರಬೇತಿ ಕೊಡುತ್ತಾ ಕೊನೆ ಹೋಮ್ ಪ್ಲೇ ಎಂಬ ಕೆಲಸ ಕೊಟ್ಟು ಮಕ್ಕಳನ್ನು ಮನೆಯಿಂದ ಬರುವಾಗ ಒಂದು ಕೆಲಸಕ್ಕಾಗಿ ಮಾಡಿಕೊಂಡ ವಿನಂತಿಗಾಗಿ ಅವರು ಬಳಸಿದ ಪದ ಬಹಳ ಚಂದವಿತ್ತು. ಹೋಂಪ್ಲೇ ಎಂಬುದು ಅವರ ಮನೆಕೆಲಸದ ಹೆಸರು. ಮಕ್ಕಳಿಗೆ ಮನೆಕೆಲಸ ಎಂಬುದನ್ನು ಹೊರೆಯಾಗಿಸದೆ ಮನೆ ಆಟ ಎಂಬ ಪದ ಬಳಕೆಯೊಂದಿಗೆ ಮಕ್ಕಳಿಗೆ ಬದುಕನ್ನು ಒಂದು ಆಟವಾಗಿ ಪರಿಗಣಿಸಿ ಎಂದು ನೀಡುವ ತರಬೇತಿ ಇದೆಯಲ್ಲ ಅದು ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಬಹಳಷ್ಟು ಪರಿಣಾಮ ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ.

ನಾವೇನಿದ್ದರೂ ಬದುಕನ್ನೆ ನರಕವೆಂದು ಭಾವಿಸುತ್ತಾ ,ಅದನ್ನೇ ಇತರರಿಗೂ ಪಸರಿಸುತ್ತಾ,ಭಯವನ್ನು, ಕಷ್ಟ ಕಷ್ಟಗಳೆಂದೂ ಹೇಳುತ್ತಾ ಮಕ್ಕಳನ್ನು.ಬೆಳೆಸುತ್ತೇವೆ .ಜೊತೆಗೆ ನಾವು ಕೂಡ ಹಾಗೆ ಬದುಕುತ್ತೇವೆ. ನಗು ಮುಖದ,ಹಸನ್ಮುಖಿ ಮನಸ್ಥಿತಿಯ ಕ್ಷಣಗಳನ್ನು ಸದಾ ನಮ್ಮದಾಗಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣವೆಂದರೆ ಬದುಕನ್ನು, ಬದುಕಿನ ಸವಾಲುಗಳನ್ನು ನಾವು ಕೆಟ್ಟ ಗಂಭೀರತೆಯಾಗಿಯೂ, ದೊಡ್ಡ ಸಮಸ್ಯೆಯಾಗಿಯೂ ಪರಿಗಣಿಸಿರುವುದಾಗಿದೆ.

ಆಟವಿನೋದವಲ್ಲದೆ ಇನ್ನೇನು ಅಲ್ಲ ಎಂಬ ಸಿದ್ಧಾಂತವನ್ನು ಒಪ್ಪಿಕೊಂಡ ಒಬ್ಬ ಮನುಷ್ಯನಿಗೆ ಮರಣ ಮತ್ತು ಹುಟ್ಟು ಯಾವ ಭಾವನೆಗಳನ್ನೂ ಏರುಪೇರಾಗಿಸದು. ಆತ ಅವೆರಡೂ ಸಹಜವಲ್ಲವೇ? ಅದರಲ್ಲೇನೂ ವಿಶೇಷತೆ ಇದೆ ಎಂಬ ಸತ್ಯದೊಳಗಿನ ಅರಿವನ್ನು ತನ್ನದಾಗಿಸಿಕೊಂಡಿರುತ್ತಾರೆ.ಹಾಗೆಯೇ ಜೀವನದಲ್ಲಿ ಎದುರಾಗುವ ರೋಗ, ಆರ್ಥಿಕ ಸಂಕಷ್ಟ, ಕಷ್ಟ ನಷ್ಟ ಎಲ್ಲವನ್ನೂ ಬಹಳ ಸುಲಭವಾಗಿ ಎದುರಿಸುವ ತಂತ್ರವನ್ನು ಕಂಡುಕೊಳ್ಳುತ್ತಾರೆ ಯಾಕಂದರೆ ಅವರಷ್ಟು ಮಾನಸಿಕ ದೃಢತೆಯನ್ನೂ, ಅದ್ಹೇಗೋ ಗಳಿಸಿರುತ್ತಾರೆ. ಇಂತಹವರ ಮನಸ್ಥಿತಿಗೆ ಕುರಾನ್ ಆಟವಿನೋದವಲ್ಲದೆ ಬೇರೇನು ಅಲ್ಲ ಅಂತ ವಿವರಿಸುತ್ತದೆ.
ಕುರಾನಿನ ಈ ಕಲಿಕೆಯ ವಿಧಾನ ಬಹಳ ಅದ್ಭುತವಾಗಿದೆ. ಹೇಗೆಂದರೆ ಒಂದು ಮಗುವಿಗೆ ಹೋಂವರ್ಕ್ ಎಂಬ ಹೆಸರಿನೊಂದಿಗೆ ಕೊಡುವ ಮನೆಕೆಲಸಕ್ಕೂ ಹೋಂಪ್ಲೇ ಎಂಬ ಹೆಸರಿನೊಂದಿಗೆ ಕೊಡುವ ಮನೆಕೆಲಸಕ್ಕೂ ತುಂಬಾ ವ್ಯತ್ಯಾಸವಿದೆ. ಹೋಂಪ್ಲೇ ಎಂಬ ಪದದೊಂದಿಗೆ ಮನೆಗೆ ಬಂದ ಮಗು *ಆಟ* ಎಂಬ ಮನೋಭಾವದೊಂದಿಗೆ ತನ್ನ ಕೆಲಸ ಮಾಡುತ್ತದೆ. ಹೋಂವರ್ಕ್ ಎಂಬ ಪದದೊಂದಿಗೆ ಮಾಡುವಾಗ ಮಗುವಿಗೆ ಅದೇನೋ ಇತಿಮಿತಿಯೊಂದಿಗೆ, ಯಾರಿಗೋ ಮಾಡಬೇಕೆಂಬ ಮನದೊಂದಿಗೆ ಅದು ಮಾಡುತ್ತದೆ.
ಅದೆ ರೀತಿ ಕುರಾನ್ ಆಟವಿನೋದ ಎಂಬ ಪದ ಬಳಕೆ ಮಾಡುವುದರೊಂದಿಗೆ ಜೀವನದ ಜಂಜಡಗಳಿಗೆ ನೊಂದವರೊಂದಿಗೆ ಅದನ್ನು ಸುಲಭವಾಗಿ ಪರಿಗಣಿಸಿದ್ದೇ ಆದರೆ ನಿಮಗದು ಆಟದಂತೆ ತೋರುತ್ತದೆ ಎಂಬ ಸಿದ್ಧಾಂತವನ್ನು ಹೇಳುವ ಮೂಲಕ ಮನುಷ್ಯ ತನ್ನ ಮಾನಸಿಕತೆಯನ್ನು ಅದೇಗೆ ಬೆಳೆಸುತ್ತಾನೋ ಹಾಗೆಯೆ ಆತನ ಬದುಕು ಮತ್ತು ನೆಮ್ಮದಿ ಇರುತ್ತದೆ ಎಂದು ಪ್ರತಿಪಾದಿಸುತ್ತದೆ. ಕುರಾನ್ ಮಾತಾಡಿರುವುದು ಮನುಷ್ಯ ಮನಸ್ಸಿನೊಂದಿಗೆ ಎಂಬುದು ಮತ್ತೊಮ್ಮೆ ಸಾಬೀತಾಯಿತು.

LEAVE A REPLY

Please enter your comment!
Please enter your name here