ಬಹುತ್ವ, ಬಹು ಸಂಸ್ಕೃತಿ, ಕೋಮು ಸಾಮರಸ್ಯ ಮತ್ತು ದೇಶ ನಿರ್ಮಾಣ ನಮಗೆ ತಿಳಿದಿರುವಂತೆ ಮತ್ತು ನಾವು ಈ ವಿಷಯ, ತತ್ವ, ಚರ್ಚೆಗಳನ್ನು ಬೇರೆ-ಬೇರೆ ಹಿನ್ನೆಲೆಯಲ್ಲಿ ಚರ್ಚಿಸುತ್ತಾ ಬಂದಿದ್ದೇವೆ. ಭಾರತೀಯ ಸಮಾಜದಲ್ಲಿ ಅದರ ವಿವಿಧ ಕಾರಣಗಳನ್ನು, ಸವಾಲುಗಳನ್ನು, ಬೆಳವಣಿಗೆಯನ್ನು ಅರ್ಥೈಸುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದೇವೆ.
ಭಾರತಕ್ಕೆ ಪ್ರತ್ಯೇಕ ಭೌಗೋಳಿಕತೆ ಮತ್ತು ವಿಭಿನ್ನ ಜನ ಮಾನಸಿಕತೆಯ ಜೊತೆಗೆ ಬಹು ಸಂಸ್ಕೃತಿಯ/ಬಹುತ್ವದ ಬೃಹತ್ ಇತಿಹಾಸವಿದೆ. ಭಾರತವು ಬಹು ಸಂಸ್ಕೃತಿಯ ವಿಭಿನ್ನ ದೇಶವಾಗಿದ್ದು, ಸಾವಿರಾರು ವರ್ಷಗಳ ಅನೇಕತೆಯ ಚೇತೋಹಾರಿ ಯಾದ ಇತಿಹಾಸವನ್ನು ಹೊಂದಿದೆ. ಹಿಂದೂ, ಇಸ್ಲಾಮ್. ಕ್ರಿಸ್ಚಿಯನ್, ಬೌದ್ಧ, ಸಿಖ್, ಜೈನ ಹೀಗೆ ಅನೇಕ ಧರ್ಮ ಗಳನ್ನು, ಹಲವು ನಂಬಿಕೆಗಳನ್ನು ಪ್ರತಿನಿಧಿಸುವುದಲ್ಲದೇ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವೂ ಹೌದು. ಭಾರತವು ಧಾರ್ಮಿಕ ವೈವಿಧ್ಯತೆಯ ಬಹುಮುಖಿ ಪರಂಪರೆಯನ್ನು ಅರ್ಥೈಸಲು ವಿಶೇಷವಾದ ಅವಕಾಶವನ್ನು ಒದಗಿಸುತ್ತದೆ.
ಈ ಬಹುಧರ್ಮಿಯ, ಬಹುಭಾಷೆಯ, ಬಹುಜನಾಂಗೀಯ, ಬಹುಗೋತ್ರದ ಸಮುದಾಯಗಳು ಪರಸ್ಪರ ಸಹಬಾಳ್ವೆ, ಸ್ವೀಕಾರ, ಗೌರವಗಳು ಭಾರತೀಯ ಸಂಸ್ಕೃತಿಯ ಮೂಲ ಮತ್ತು ವಿಶಿಷ್ಟವಾದ ಮೌಲ್ಯಗಳಾಗಿವೆ. ಬಹುಸಂಸ್ಕೃತಿಯ ಸಮಾಜವೊಂದರಲ್ಲಿ ಜನರು ವಿವಿಧ ನಂಬಿಕೆಗಳನ್ನು ತಮ್ಮದಾಗಿಸುವುದರೊಂದಿಗೆ, ಒಟ್ಟಿಗೆ ಬದುಕುವುದು ಮತ್ತು ತಮ್ಮ-ತಮ್ಮ ಹಕ್ಕುಗಳನ್ನು ಸಂಪೂರ್ಣ ಸ್ವಾತಂತ್ರ್ಯದೊಂದಿಗೆ ಅನುಭವಿಸುವುದು ಸಾಧ್ಯ.
ವಿಲ್ ಕಿಮ್ಲಿಕಾ ಒಂದೆಡೆ ಹೇಳುತ್ತಾರೆ, “ಸಾಮೂಹಿಕ ಭಿನ್ನತೆಯ ಅಂಗೀಕಾರ ಮತ್ತು ಧನಾತ್ಮಕ ಒಳಗೊಳ್ಳುವಿಕೆಯು ಸಾಮೂಹಿಕ ಭಿನ್ನತೆಯ ಹಕ್ಕಿನ ಮೂಲಕ ದೊರಕಿಸಬೇಕಿದೆ.” ಗಾಂಧೀಜಿಯವರೂ ಕೂಡಾ ಬಹುತ್ವದ ಪ್ರತಿಪಾದಕ ಮತ್ತು ಹರಿಕಾರರಲ್ಲಿ ಪ್ರಮುಖರಾಗಿದ್ದರು. ಪ್ರಸ್ತುತ ಸಂಧರ್ಭದಲ್ಲಿ ನಾವು ಬಹುಸಂಸ್ಕøತಿಯ ಕುರಿತಾಗಿ ಚರ್ಚಿಸಬೇಕಾಗಿರುವುದು ಅಗತ್ಯವಾಗಿದೆ. ಗತವನ್ನು ನಾವು ಅವಲೋಕಿಸಿದರೆ, ಬಹುತ್ವತೆಯು ಮಾನವಕುಲದ ಏಕತೆ ಮತ್ತು ವಿವಿಧ ಸಂಸ್ಕøತಿಯಲ್ಲಿನ ಸಮಾನ ಮೌಲ್ಯಗಳ ಜಾಗೃತಿ ಮೂಡಿಸುವಲ್ಲಿ ಪ್ರಬಲ ಸಾಧನವಾಗಿದೆ.
ಪ್ರಸ್ತುತ ಸನ್ನಿವೇಶದಲ್ಲಿ ಬಹು ಸಂಸ್ಕೃತಿಯ ತತ್ವಗಳು ಹೇಗೆ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯದ ವಾತಾವರಣವನ್ನು ವಿವಿಧ ಸಂಸ್ಕøತಿ, ಸಮುದಾಯ, ಧಾರ್ಮಿಕ ಪಂಗಡಗಳ ನಡುವೆ ಮೂಡಿಸಲು ಸಾಧ್ಯ ಎಂಬುದನ್ನು ಚರ್ಚಿಸುವುದು ಕಾಲದ ಬೇಡಿಕೆಯಾಗಿದೆ. ಆ ಚರ್ಚೆಗಳು ಭಾರತದ ಬಹುತ್ವದ ಗುಣಲಕ್ಷಣಗಳು ಮತ್ತು ಬಹುಸಂಸ್ಕøತಿಯನ್ನು ಅಥೈಸುವಂತಹ ಹಾಗೂ ಎತ್ತಿ ಹಿಡಿಯುವಂತಹದ್ದಾಗಿರಬೇಕು. ಯಾವ ರೀತಿಯಲ್ಲಿ ಯುವಕರು ಭಾರತದ ಸಮಾಜದಲ್ಲಿ ಬಹುತ್ವದ ಮೌಲ್ಯವನ್ನು ಪ್ರತಿಪಾದಿಸುವಲ್ಲಿ, ಉತ್ಕೃಷ್ಟಗೊಳಿಸುವಲ್ಲಿ, ಕಾರ್ಯಗತಗೊಳಿಸುವಲ್ಲಿ ಅವಿಭಾಜ್ಯ ಪಾತ್ರವನ್ನು ವಹಿಸಬಹುದು ಎಂಬುವುದನ್ನು ವ್ಯಕ್ತಪಡಿಸುವ ತರಹದ್ದಾಗಿರಬೇಕಾಗಿದೆ.
ಪ್ರಸ್ತುತ, ಈ ವೈವಿಧ್ಯಮಯವಾದ ಮನುಷ್ಯ ನಾಗರೀಕತೆಯು ಶಾಂತಿಯುತ ಸಹಬಾಳ್ವೆಗೆ ಧರ್ಮ, ಸಂಪ್ರದಾಯ ಮತ್ತು ಭಾಷೆಯ ಆಧಾರದಲ್ಲಿ ಜನರನ್ನು ಗುರುತಿಸಿ ವಿಭಜಿಸುತ್ತಿರುವ ಪ್ರವೃತ್ತಿಯು ಕಠಿಣ ಬೆದರಿಕೆಯಾಗಿದೆ. ಭಾರತೀಯ ಸಂವಿಧಾನವು ಸಮಾಜಕ್ಕೆ ಪರಸ್ಪರ ಗೌರವ, ಬಹುತ್ವದ ಮತ್ತು ಸರ್ವರಿಗೂ ಮೂಲಭೂತ ಹಕ್ಕುಗಳ ಸಂರಕ್ಷಣೆಯ ಶ್ಲಾಘನೀಯ ಅಡಿಪಾಯವನ್ನು ಒದಗಿಸಿದೆ. ಆದರೆ, ಈ ಮೌಲ್ಯಗಳು ಸಮಾಜದಲ್ಲಿ ಇನ್ನೂ ಪರಿಪೂರ್ಣವಾಗಿ ಕಾರ್ಯಗತಗೊಳ್ಳಲಿಲ್ಲ ಎನ್ನುವುದು ವಿಷಾದ. ದೇಶದ ಬಹುತ್ವ ಮತ್ತು ಬಹುಸಂಸ್ಕೃತಿಯನ್ನು ದೃಢೀಕರಿಸಲು ವಿವಿಧ ಧರ್ಮ, ಪರಂಪರೆ, ಸಮುದಾಯಗಳ ನಡುವೆ ಒಗ್ಗಟ್ಟಿನ ಸೇತುವೆಯನ್ನು ನಿರ್ಮಿಸಬೇಕಾದುದು ಅತೀ ಅಗತ್ಯವಾಗಿದೆ.
ನಾವುಗಳು ವಿವಿಧ ಸಮುದಾಯಗಳ ನಡುವೆ ಗಾಢವಾಗಿ ತೊಡಗಿಸಿಕೊಳ್ಳಬೇಕಿದೆ. ಪರಸ್ಪರರನ್ನು ಗೌರವಿಸಬೇಕಿದೆ. ಮುಂತಾದ ಪ್ರಕ್ರಿಯೆಗಳು ಮೂಲ ಉದ್ದೇಶವಾದ ‘ಬಹು ಸಂಸ್ಕೃತಿಯು ಸಮಾಜದಲ್ಲಿ ಶಾಂತಿ, ಸಾಮರಸ್ಯವನ್ನು ಸ್ಥಾಪಿಸುವ ಸಾಧನವಾಗಿದೆ’ ಎಂಬುವುದನ್ನು ಪೂರೈಸಬಲ್ಲುದು.