ಕವನ

ಬೆಳಗಲು ಬೇಕು ಬೆಳಕು
ಬಾಳಿನ ಸೆಲೆಯೇ ಬೆಳಕು
ಕೂಳಿನ ನೆಲೆಗೂ ಎಂದಿಗು ಬೇಕು
ಆಸರೆ ನೆಮ್ಮದಿ ಬೆಳಕು

ದೀಪದ ಹಬ್ಬದಿ ಬೆಳಕು
ಝಗಮಗಿಸಲಿ ಹೊಂಬೆಳಕು
ಮತಾಪು ಸದ್ದಿನ ಕಾಟವು ಏತಕೆ
ಸಾಕದು ಕರುಣೆಯ ಬೆಳಕು

ಕತ್ತಲು ಕಳೆವುದು ಬೆಳಕು
ಮುತ್ತಿನ ಮತ್ತದು ಬೆಳಕು
ನಲ್ಲನ ತೆಕ್ಜೆಯಲೊರಗಿದ ನಲ್ಲೆಗೆ
ಪ್ರತಿದಿನ ಪ್ರೀತಿಯ ಬೆಳಕು

ಸೊಗ ಮೊಗ ಮಿಂಚಲು ಬೆಳಕು
ಗುಳಿಕೆನ್ನೆಯಲಿದೆ ಬೆಳಕು
ಒಲವಿನ ರಾಶಿಯು ತುಂಬಲು ಕಣ್ಣಲಿ
ದೀಪದ ಹಬ್ಬದ ಬೆಳಕು

ಮಮತೆಯ ಮಡಿಲದೆ ಬೆಳಕು
ವಿಜಯದ ಸಾರಥಿ ಬೆಳಕು
ನರಕಾಸುರನನು ಕೊಂದಿಹ ದೇವಿಯ
ಕಣ್ಣಲಿ ಮಿನುಗುವ ಬೆಳಕು

ಭಕ್ತಿಯ ಸಿಂಚನ ಬೆಳಕು
ಹಬ್ಬದ ಗರಿಮೆಯ ಬೆಳಕು
ಮಿಂಚುವ ಆಗಸ ನೆನಪಿಸುವಂತಹ
ಸಗ್ಗದ ಸಂಭ್ರಮ ಬೆಳಕು.

ನಡೆಯಲಿ ಸೊಗಸಲಿ ಬೆಳಕು
ಹರಿಸಲು ಸಮರಸ ಬೆಳಕು
ಮತಬೇಧವ ತೊರೆದಾಡುತ ನಲಿಯುತ
ಕೋರೈಸಲಿ ಕಣ್ಣಿಗೆ ಬೆಳಕು.

ಬರೆದವರು: ಡಾ. ಸುರೇಶ ನೆಗಳಗುಳಿ
(ಶಸ್ತ್ರ ಚಿಕಿತ್ಸಕ ಹಾಗೂ ಮಿಶ್ರಪದ್ಧತಿ ತಜ್ಞರು, ಮಂಗಳೂರು)

LEAVE A REPLY

Please enter your comment!
Please enter your name here