• ನಿಖಿಲ್ ಕೋಲ್ಪೆ

ಸರ್ವಾಧಿಕಾರಕ್ಕೆ ಕೆಲವು ಐತಿಹಾಸಿಕ ಗುಣಲಕ್ಷಣಗಳಿವೆ. ಏಕ ಸಂಸ್ಕೃತಿಯ ಹೇರಿಕೆ, ವ್ಯಕ್ತಿಪೂಜೆ, ಹುಸಿ ರಾಷ್ಟ್ರೀಯತೆಯ ವಿಜ್ರಂಭಣೆ, ದೇಶ ಪ್ರೇಮದ ಹೆಸರಲ್ಲಿ ಭೂಪಟ ಪ್ರೇಮ, ಯುದ್ಧದಾಹ, ಗಿಲೀಟಿನ ಸುಳ್ಳು ಪ್ರಚಾರ, ವಿರೋಧಿಗಳ ಚಾರಿತ್ರ್ಯಹನನ, ಮಾಧ್ಯಮದ ಖರೀದಿ ಮತ್ತು ದಮನ ಅಭಿವೃದ್ಧಿಯ ಮಂತ್ರ, ಎಲ್ಲರನ್ನೂ ಜೊತೆಗೊಯ್ಯುವ ಹುಸಿ ಭರವಸೆ, ನಂತರ ಜನಾಂಗಗಳ ಎತ್ತಿಕಟ್ಟುವಿಕೆ, ದುರ್ಬಲರ ಮೇಲೆ ದೌರ್ಜನ್ಯ, ಗೊಂದಲ ಸೃಷ್ಟಿ, ವಿರೋಧಿಗಳಿಗೆ ಕಿರುಕುಳ, ಕಾರ್ಯಾಂಗದ ವಶೀಕರಣ, ನ್ಯಾಯಾಂಗದ ಅಧಿಕಾರ ಕಸಿಯುವಿಕೆ, ಸೇನೆಯ ರಾಜಕೀಕರಣ ಇತ್ಯಾದಿ.

ವ್ಯಕ್ತಿ ಪೂಜೆ : ಸರ್ವಾಧಿಕಾರದ ಮುಖ್ಯ ಲಕ್ಷಣಗಳಲ್ಲಿ ಏಕ ವ್ಯಕ್ತಿ ಪೂಜೆಯೂ ಒಂದು. ಹಿಟ್ಲರನ ಕಾಲದಲ್ಲಿ ಇದು ನಡೆಯುತ್ತಿತ್ತು‌ ಪ್ರತೀ ಸರ್ವಾಧಿಕಾರದಲ್ಲಿ ಇದು ನಡೆದಿದೆ. ಒಬ್ಬ ವ್ಯಕ್ತಿ ಇಲ್ಲದಿದ್ದರೆ, ದೇಶವೇ ಇಲ್ಲ ಎಂಬಂತಹ ಭ್ರಮೆಯಿದು. ನಮ್ಮಲ್ಲಿ ಇದು ಇಂದಿರಾ ಇಸ್ ಇಂಡಿಯಾ ಎಂಬ ಮಟ್ಟಕ್ಕೆ ಬೆಳೆಯಿತು. ಕೊನೆಗೆ ಇದುವೇ ತುರ್ತುಪರಿಸ್ಥಿತಿಯ ಹೇರಿಕೆಗೆ, ಹಕ್ಕು ಮತ್ತು ಸ್ವಾತಂತ್ರ್ಯದ ದಮನಕ್ಕೆ ವೇದಿಕೆ ಒದಗಿಸಿತು.

ಇದೀಗ ಭಾರತದಲ್ಲಿ ಮತ್ತೆ ಇಂತಹ ಪ್ರವೃತ್ತಿ ಬೆಳೆಯುತ್ತಿದೆ. ಇಡೀ ದೇಶವೇ ಒಬ್ಬ ವ್ಯಕ್ತಿಯ ಸುತ್ತ ಗಿರಕಿ ಹೊಡೆಯುತ್ತಿದೆಯೋ ಎಂಬಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಇಲ್ಲಿ ಒಂದು ಪಕ್ಷ ಅಥವಾ ಕೂಟದ ಸರಕಾರ ಇಲ್ಲವೇನೋ, ಬದಲಿಗೆ ಒಬ್ಬ ವ್ಯಕ್ತಿಯ ಸರಕಾರ ಇದೆಯೇನೋ ಎಂಬ ಭ್ರಮೆ!

ಅದಕ್ಕೆ ತಕ್ಕಂತೆ ಮಾಧ್ಯಮಗಳ ಭಾಷೆಯೂ ಬದಲಾಗಿದೆ. ಸದ್ದಾಂ ಹುಸೇನ್‌ ಇರಾಕಿನ ಅಧ್ಯಕ್ಷನಾಗಿದ್ದಾಗ ಅಲ್ಲಿನ ಪತ್ರಿಕೆಗಳ ಮುಖಪುಟದ ಎಡಬಾಗದಲ್ಲಿ ಮೂರು ಕಾಲಂಗಳಲ್ಲಿ ಆತನ ಫೋಟೋ ಕಡ್ಡಾಯವಾಗಿತ್ತು. ಇಲ್ಲಿ ಕಡ್ಡಾಯ ಇಲ್ಲದಿದ್ದರೂ ಪ್ರತೀ ದಿನ ನೀವು ಓದುವ ಪ್ರಮುಖ (ಲೀಡ್) ಸುದ್ದಿಯಲ್ಲಿ ಯಾರಿರುತ್ತಾರೆಂದು ಗಮನಿಸಿದ್ದೀರಿ ತಾನೆ? ಇದು ಎಲ್ಲಿಯ ತನಕ ಮುಟ್ಟಬಹುದು?

ಪೊಳ್ಳು ರಾಷ್ಟ್ರೀಯತೆ : ಪೊಳ್ಳು ರಾಷ್ಟ್ರೀಯತೆ ಮತ್ತು ಜನ ಪ್ರೀತಿಯಿಲ್ಲದ ಭೂಪಟ ಪ್ರೇಮ ಸರ್ವಾಧಿಕಾರದ ಇನ್ನೊಂದು ಲಕ್ಷಣ. ಆಸ್ಟ್ರಿಯನ್ ಸಂಜಾತ ಅಡಾಲ್ಫ್ ಹಿಟ್ಲರ್ ಜರ್ಮನ್ ರಾಷ್ಟ್ರೀಯತೆ ಹೆಸರಿನಲ್ಲಿ ಜರ್ಮನಿಯಲ್ಲಿ ಅಧಿಕಾರ ಹಿಡಿದ. ಅವನ ಜರ್ಮನ್ ರಾಷ್ಟ್ರೀಯತೆಯಲ್ಲಿ ಯಹೂದಿಗಳಿಗೆ, ಜಿಪ್ಸಿಗಳಿಗೆ, ಪೋಲಿಷ್ ಸಂಜಾತರಿಗೆ, ಕರಿಯರು, ಮಿಶ್ರ ರಕ್ತದವರಿಗೆ ಸ್ಥಾನವಿರಲಿಲ್ಲ! ಶುದ್ಧರಕ್ತದವರೆಂದು ಅವನು ಭಾವಿಸಿದ್ದ ಅರ್ಯನ್ ಜನಾಂಗದವರಿಗೆ ಮಾತ್ರ ಸ್ಥಾನವಿತ್ತು.

ಅತ ಸುಳ್ಳು ದೇಶಪ್ರೇಮದ ಬೊಂಬಡ ಬಜಾಯಿಸಿದಾಗ ಎಲ್ಲರೂ ಅದಕ್ಕೆ ತಲೆದೂಗಿಸಿದರು. ಎಲ್ಲರೂ ದೇಶಕ್ಕಾಗಿ ಅದನ್ನು ತ್ಯಾಗ ಮಾಡಬೇಕು, ಇದನ್ನು ತ್ಯಾಗ ಮಾಡಬೇಕು ಎಂದು ಹೇಳಿದ. ಕೊನೆಗೆ ಜನರು ತಮ್ಮ ಸ್ವಾತಂತ್ರ್ಯವನ್ನು ತ್ಯಾಗ ಮಾಡಬೇಕಾಯಿತು. ತನ್ನ ವಿಚಾರಗಳಿಗೆ ತಲೆಬಾಗುವವರು ಮಾತ್ರ. ದೇಶಪ್ರೇಮಿಗಳು, ಉಳಿದವರೆಲ್ಲ ದೇಶದ್ರೋಹಿಗಳೆಂದು ಆತನ ಭ್ರಮೆ. ಜನರನ್ನು ಪೋಲೆಂಡ್ ಸಹಿತ ನೆರೆಯ ದೇಶಗಳ ಮೇಲೆ ಎತ್ತಿಕಟ್ಟಿ ಆಕ್ರಮಣ ಮಾಡಿ ಜರ್ಮನಿಯನ್ನು ಭೂಪಟದಲ್ಲಿ ವಿಸ್ತರಿಸಿದ. ಅದರೆ, ಜನರದ್ದು ನಾಯಿ ಪಾಡಾಯಿತು.

ಇದೀಗ ಭಾರತದಲ್ಲಿ ದೇಶಪ್ರೇಮದ ಮತ್ತು ರಾಷ್ಟ್ರೀಯತೆಯ ಮಾತಾಗುತ್ತಿದೆ. ಈ ರಾಷ್ಟ್ರೀಯತೆಯಲ್ಲಿ ಮತೀಯ ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ, ದಲಿತರಿಗೆ ಯಾವ ಸ್ಥಾನವಿದೆ? ರಾಷ್ಟ್ರೀಯತೆಯ ಹೆಸರಲ್ಲಿ ಮೇಲ್ಜಾತಿ ಪ್ರಾಬಲ್ಯ ಒಪ್ಪಿಕೊಳ್ಳಬೇಕೆ?

ನಮ್ಮಲ್ಲಿಯೂ ದೇಶಕ್ಕಾಗಿ ತ್ಯಾಗ ಮಾಡಿ, ಸಬ್ಸಿಡಿ ತ್ಯಾಗಮಾಡಿ ಇತ್ಯಾದಿ ಹೇಳಲಾಗುತ್ತದೆ. ಗಗನಕ್ಕೇರಿದ ತೈಲ, ಅನಿಲ ಬೆಲೆಯೂ ದೇಶಕ್ಕಾಗಿ ಮಾಡುವ ತ್ಯಾಗವಂತೆ!

ಇಲ್ಲಿ ಕೂಡಾ ಪಾಕಿಸ್ತಾನ, ಬಾಂಗ್ಲ, ನೇಪಾಳ, ಶ್ರೀಲಂಕಾ, ಬರ್ಮಾ ಒಳಗೊಂಡಂತಹ ಅಖಂಡ ಭಾರತದ ಸಾಮ್ರಾಜ್ಯಶಾಹಿ ಕಲ್ಪನೆಗೆ ನೀರುಣಿಸಿ ಬೆಳೆಸುವವರು ಇನ್ನೂ ಇದ್ದಾರೆ‌. ಭೂಪಟ ಮತ್ತು ಜನಪ್ರೇಮದ ವ್ಯತ್ಯಾಸವನ್ನು, ನಿಜವಾದ ದೇಶಪ್ರೇಮವನ್ನು ಸರ್ವಾಧಿಕಾರಿ ಪ್ರವೃತ್ತಿಯು ಎಂದಿಗೂ ತಿಳಿದುಕೊಳ್ಳಲಾರದು.

ಗಿಲೀಟಿನ ಪ್ರಚಾರ : ಗಿಲೀಟಿನ ಸುಳ್ಳು ಪ್ರಚಾರ ಸರ್ವಾಧಿಕಾರದ ಮುಖ್ಯ ಲಕ್ಷಣಗಳಲ್ಲಿ ಇನ್ನೊಂದು. ನಾಜಿ ಜರ್ಮನಿಯಲ್ಲಿ ಗೊಬೆಲ್ಸ್ ಅದರ ರೂವಾರಿಯಾಗಿದ್ದ. ಒಂದು ಸುಳ್ಳನ್ನು ಸಾವಿರ ಸಲ ಹೇಳಿದರೆ ಅದು ಸತ್ಯವಾಗುತ್ತದೆ ಎಂಬುದು ಅವನ ನಿಲುವಾಗಿತ್ತು. ಅಪಪ್ರಚಾರವು ಅವರ ಪ್ರಚಾರದ ಇನ್ನೊಂದು ಮುಖ.
ಇಂದು ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಹಸಿಹಸಿ ಸುಳ್ಳುಗಳನ್ನು ಉತ್ಪಾದಿಸುವ ಕಾರ್ಖಾನೆಗಳೇ ನಡೆಯುತ್ತಿವೆ. ಅವುಗಳನ್ನು ಕಾಸಿಗಾಗಿ ಶೇರ್ ಮಾಡುವವರ ಪಡೆಗಳಿವೆ. ವಿದ್ವೇಷದ, ಅವಹೇಳನೆಯ ವೈಯುಕ್ತಿಕ ನಿಂದನೆಯ, ಅಶ್ಲೀಲವಾದ ಬೆದರಿಕೆಯ ಸಂದೇಶಗಳು ಸ್ವಯಂಘೋಷಿತ ಸಂಸ್ಕೃತಿಯ ರಕ್ಷಕರಿಂದ ಬರುತ್ತಿರುವುದು ಬರೇ ಕಾಕತಾಳೀಯ. ಅಗಿರಲಾರದು!

ಗಾಂಧಿ ಪದತಲದಲ್ಲಿ ಯುವಕ ಮೋದಿ, ಭೋಸರ ಪಕ್ಕದಲ್ಲಿ ವಂದನೆ ಸ್ವೀಕರಿಸುತ್ತಿರುವ ಮೋದಿ, ಭಗತ್ ಸಿಂಗ್‌ಗೆ ಜೈಲಿನಲ್ಲಿ ಮನೆಯೂಟ ನೀಡುತ್ತಿರುವ ಮೋದಿ ಇತ್ಯಾದಿಯಾಗಿ ನಾಜಿಗಳೇ ನಾಚುವಂತಹ ಫೊಟೋಷಾಪ್ ಸುಳ್ಳುಗಳನ್ನು ಹರಿದು ಬಿಡಲಾಗುತ್ತದೆ. 1950ರಲ್ಲಿ ಅತ ಹುಟ್ಟಿದಾಗ ಅವರೆಲ್ಲಾ ಮಣ್ಣಲ್ಲಿ ಲೀನವಾಗಿ ಹೋಗಿದ್ದರೆಂಬ ಸ್ಪಷ್ಟ ಸತ್ಯವೂ ಗೋಚರವಾಗದ ಮುಗ್ಧ ಜನರು ಅವುಗಳನ್ನು ನಂಬುತ್ತಾರೆ. ಇದುವೇ ಗೋಬೆಲ್ಸ್ ತಂತ್ರ.

ಪ್ರಧಾನಿಯವರ ಸೆಲ್ಫಿಗಳಲ್ಲಿ ವ್ಯಕ್ತವಾಗುವ ಸೆಲ್ಫ್ ಮೋಹ ಗಾಬರಿ ಹುಟ್ಟಿಸುತ್ತದೆ. ಅವರು ಲಕ್ಷಾಂತರ ಟ್ವೀಟ್‌ಗಳಿಗೆ ಸ್ವತಃ ಪ್ರತಿಕ್ರಿಯಿಸುತ್ತಾರೆಂದು ನಂಬುವ ಮೂರ್ಖರೂ ಇದ್ದಾರೆ. ಇದು ಸಾಧ್ಯವೆ, ಮತ್ತೆ ಅವರು ಕೆಲಸ ಮಾಡುವುದು ಯಾವಾಗ, ಅವರ ಗಡಿಯಾರದಲ್ಲಿ ದಿನಕ್ಕೆ 48 ಗಂಟೆಗಳಿವೆಯೇ ಎಂದು ಯಾರೂ ಪ್ರಶ್ನೆ ಮಾಡಲು ಹೋಗುವುದಿಲ್ಲ. ಇಂತಹ ಕುರುಡು ನಂಬಿಕೆ, ವ್ಯಕ್ತಿ ವೈಭವೀಕರಣವೇ ಸರ್ವಾಧಿಕಾರಕ್ಕೆ ಮೆಟ್ಟಿಲು.

ಅಭಿವೃದ್ಧಿಯ ಮಂತ್ರ : ಎಲ್ಲಾ ಸರ್ವಾಧಿಕಾರಿಗಳು ಹಿಂದಿನ ಆಡಳಿತವನ್ನು ದೂರಿ ಅಭಿವೃದ್ಧಿಯ ಮಂತ್ರವನ್ನು ಜಪಿಸಿದ್ದಾರೆ. ಹಿಟ್ಲರ್ ಮತ್ತು ಇಟಲಿಯ ಸರ್ವಾಧಿಕಾರಿ ಬೆನಿಟೊ ಮುಸೊಲಿನಿಯಂತವರೂ ಹಿಂದೆ ಬಿದ್ದಿರಲಿಲ್ಲ. ತಮ್ಮ ತಮ್ಮ ದೇಶಗಳನ್ನು ಸಮೃದ್ಧಿಯ ಶಿಖರಕ್ಕೆ ಕೊಂಡೊಯ್ಯುವ ಭರವಸೆ ನೀಡಿ ವಿನಾಶದ ಪಾತಾಳಕ್ಕೆ ತಳ್ಳಿದರು. ಜನ ಕೇಂದ್ರಿತವಲ್ಲದ ಮತ್ತು ಮಿಲಿಟರಿ ಯಂತ್ರವನ್ನು ಬಲಪಡಿಸುವ ಕೈಗಾರಿಕೀಕರಣ ಅದಾಗಿತ್ತು. ಹೊಸ ರೀತಿಯ ಬಂದೂಕುಗಳು, ಫಿರಂಗಿಗಳು, ಟ್ಯಾಂಕ್‌ಗಳು, ಯುದ್ಧ ವಿಮಾನಗಳು, ಹಡಗುಗಳು, ಜಲಾಂರ್ಗಾಮಿಗಳು, ಸೋನಾರ್, ರಾಡಾರ್ ತಂತ್ರಜ್ಞಾನಗಳು ಅಭಿವೃದ್ಧಿ ಹೊಂದಿ ವಿನಾಶದ ಸಲಕರಣೆಗಳು ಭಾರೀ ಪ್ರಮಾಣದಲ್ಲಿ ನಿರ್ಮಾಣವಾದವು. ಇಂದು ಮಧ್ಯಮ ವರ್ಗದ, ಅದರಲ್ಲೂ ಯುವಕರ ನೆಚ್ಚಿನ ಶೋಕಿಗಳಾಗಿರುವ ಮೋಟಾರ್ ಬೈಕ್ ನಿರ್ಮಾಣವಾದದ್ದು ಜರ್ಮನಿಯಲ್ಲಿ! ಸ್ಕೂಟರ್ ನಿರ್ಮಾಣವಾದದ್ದು ಇಟಲಿಯಲ್ಲಿ! ಅದೂ ಯುದ್ಧದ ಉದ್ದೇಶಕ್ಕಾಗಿ.

ನಮ್ಮಲ್ಲಿಯೂ ಯುದ್ಧಾಸ್ತ್ರಗಳ ಖಾಸಗಿ ನಿರ್ಮಾಣಕ್ಕೆ ಚಾಲನೆ ದೊರಕಿದೆ. ರಾಫೆಲ್ ಯುದ್ಧ ವಿಮಾನಗಳ ನಿರ್ಮಾಣ ಗುತ್ತಿಗೆ ಸಾರ್ವಜನಿಕ ವಲಯದ ಅನುಭವಿ ಹಿಂದೂಸ್ತಾನ್ ಏರೋನ್ಯಾಟಿಕ್ಸ್ ಲಿಮಿಟೆಡ್‌ಗೆ ಸಿಗದೇ ಅನುಭವವೇ ಇಲ್ಲದ ಅಂಬಾನಿಯ ಹೊಸ ಕಂಪೆನಿಯ ಪಾಲಾಗಿದೆ. ಡ್ರೋನ್ ನಿರ್ಮಾಣದ ಗುತ್ತಿಗೆಯದ್ದೂ ಅದೇ ಕತೆ! ಅಂಬಾನಿ, ಅದಾನಿ ಮುಂತಾದ ಆಗರ್ಭ ಶ್ರೀಮಂತರ ಬೃಹತ್ ಉದ್ದಿಮೆಗಳಿಗೆ ಲಾಭ ಮಾಡಿಕೊಡುವುದರಿಂದ ಸಾಮಾನ್ಯ ಜನರ ಅಭಿವೃದ್ಧಿ ಅಗುವುದು ಹೇಗೆ? ಬಂಡವಾಳ ಹೂಡಿಕೆಯ ಲಾಭ ಕೇವಲ ಉದ್ದಿಮೆಗಳಿಗೆ, ರಾಜಕೀಯ ಪಕ್ಷಗಳ ನಿಧಿಗೆ, ರಾಜಕಾರಣಿಗಳ ಜೇಬಿಗೆ ತಲುಪಿದರೆ ಸಾಕೆ? ರಕ್ಷಣಾ ವಲಯದಂತಹ ಸೂಕ್ಷ್ಮ ಕ್ಷೇತ್ರಗಳನ್ನೂ ಖಾಸಗಿ ಬಂಡವಾಳಗಾರರಿಗೆ ಬಿಟ್ಟುಕೊಡುತ್ತಿರುವುದು ಅಪಾಯಕಾರಿ ನಡೆ. ವಿಕೇಂದ್ರೀಕೃತವಾದ ಜನಪರ ಅಭಿವೃದ್ಧಿಗೆ ತಿಲಾಂಜಲಿ ಬಿಟ್ಟು, ದೊಡ್ಡ ಕೈಗಾರಿಕೆಗಳಿಗೆ ಭೂಮಿ ಒದಗಿಸಿಕೊಡುವ ರಿಯಲ್ ಎಸ್ಟೇಟ್ ದಂಧೆಗೆ ಇಳಿದು, ಅದಕ್ಕೆ ಅನುಕೂಲಕರವಾದ ರೈತವಿರೋಧಿ ಭೂಸ್ವಾಧೀನ ಕಾಯಿದೆಯನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬುದು ಅಪಾಯದ ಗಂಟೆಯನ್ನು ಮೊಳಗಿಸುತ್ತಿದೆಯೆ?

ಮಾತಿನಲ್ಲಿ ಎಲ್ಲರೂ ಜೊತೆಗೆ!: ಜನಾಂಗ ಜನಾಂಗಗಳನ್ನೇ ನಿರ್ನಾಮ ಮಾಡಿದ ಸರ್ವಾಧಿಕಾರಗಳೆಲ್ಲವೂ ಮೊದಲಿಗೆ ಎಲ್ಲರನ್ನು ಜೊತೆಗೊಯ್ಯುವ ಮಾತಾಡಿವೆ!. ಲಕ್ಷಾಂತರ ಯಹೂದಿಗಳನ್ನು ಯಾತನಾ ಶಿಬಿರಗಳಿಗೆ ತಳ್ಳಿ ಅಮಾನವೀಯವಾಗಿ ಮುಗಿಸಿದ ಹಿಟ್ಲರ್‍ಗೆ ಆರಂಭದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದ ಯಹೂದಿಗಳು ಬೇಕಾಗಿದ್ದರು. ಅವನು ಅದಕ್ಕಾಗಿ ಅವರನ್ನು ಓಲೈಸಿದ್ದ ಕೂಡಾ. ಅತನ ಸರಕಾರ ಅವರಿಂದ ಬೇಕಾಬಿಟ್ಟಿ ಸಾಲ ಎತ್ತಿದ್ದ. ನಂತರ ಕೈಯೆತ್ತಿ ಅವರ ವಿರುದ್ಧ ಮುಗಿಬಿದ್ದಿದ್ದ.

ನಮ್ಮಲ್ಲಿಯೂ ಇಂತಹ ಮಾತುಗಳು ಕೇಳಿಬರುತ್ತಿವೆ. ಅದರೆ, ವ್ಯವಸ್ಥಿತವಾಗಿ ಸಂಕುಚಿತವಾದ, ಗಂಭೀರವಾದ ದಾಳಿಗಳು ನಿರಂತರವಾಗಿ ಬುದ್ಧಿ ಜೀವಿಗಳ ಮೇಲೆ, ದಲಿತರು, ಅಲ್ಪಸಂಖ್ಯಾತರ ಮೇಲೆ ನಡೆದುಕೊಂಡು ಬಂದಿವೆ. ದನ ಸಾಗಾಟ, ಕಾಲ ಮೇಲೆ ಕಾಲು ಹಾಕಿದ್ದು, ಕುದುರೆಯ ಮೇಲೆ ಕುಳಿತದ್ದು ಮುಂತಾದ ಕ್ಷುಲ್ಲಕ ಕಾರಣಗಳಿಗೆ ಮಾತ್ರವಲ್ಲ, ಕಾರಣವೇ ಇಲ್ಲದೇ ದಾಳಿಗಳು, ಕೊಲೆಗಳು, ಅತ್ಯಾಚಾರಗಳು ನಡೆದಿವೆ. ಜೊತೆಗೆ ಪ್ರತೀಕಾರ ಕೃತ್ಯಗಳೂ ಕೆಲವೊಮ್ಮೆ ನಡೆದಿವೆ. ತಾವು ಸಂತರೆಂದು ಹೇಳಿಕೊಳ್ಳುವವರು, ಸಂಸದರು ಕೂಡಾ ಕೊಚ್ಚಿ, ಕೊಲ್ಲಿ, ಬೆಂಕಿಹಚ್ಚಿ, ತಲೆಕಡಿಯಿರಿ, ದೇಶದಿಂದ ಓಡಿಸಿ ಇತ್ಯಾದಿ ಪ್ರಚೋದನಾತ್ಮಕ ಭಾಷೆಯಲ್ಲಿ ಎಗ್ಗಿಲ್ಲದೇ ಮಾತನಾಡುತ್ತಿದ್ದಾರೆ. ಎಲ್ಲರನ್ನೂ ಜೊತೆಗೊಯ್ಯುತ್ತೇವೆ ಎಂದು ಹೇಳುವವರು ಮಾತ್ರ ಇವುಗಳನ್ನು ಖಂಡಿಸದೇ, ಕ್ರಮ ಕೈಗೊಳ್ಳದೆ ಮೌನ ಅನುಮತಿ ನೀಡುತ್ತಿರುವಂತಿದೆ. ಈಗಿನ ಪ್ರಧಾನಿ ಈ ಒಂದು ವಿಷಯದಲ್ಲಿ ಮಾತ್ರ ಮಾತನಾಡದ ಪ್ರಧಾನಿ ಎಂದು ಟೀಕಿಸುತ್ತಾ ಬಂದಿರುವ ಮನಮೋಹನ್ ಸಿಂಗ್ ಅವರ ಪಟ್ಟ ಶಿಷ್ಯರಂತೆ ವರ್ತಿಸುತ್ತಿರುವುದೇಕೆ?!

ಇದಲ್ಲದೇ ಸಂವಿಧಾನವನ್ನು ಬದಲಾಯಿಸುವ ಮಾತೂ ಕೇಳಿಬರುತ್ತಿದೆ. ಈ ಎಲ್ಲಾ ವಿಷಯಗಳನ್ನು ಮುಂದೆ ವಿವರವಾಗಿ ಚರ್ಚಿಸೋಣ. ಇದು ಕೇವಲ ಪರಿಚಯ ಮಾತ್ರ. ಭಾರತದಂತಹ ವೈವಿಧ್ಯಮಯ ವಿಶಾಲ ಜನಭರಿತ ದೇಶದಲ್ಲಿ ಸರ್ವಾಧಿಕಾರ ತರುವುದು ಸುಲಭದ ಕೆಲಸವೇನಲ್ಲ! ಹಿಂದೆ ಇಂದಿರಾಗಾಂಧಿಯವರ ಕಾಲದಲ್ಲಿ ಇಂತಹ ಪ್ರಯತ್ನ ನಡೆದಿತ್ತು ಮತ್ತು ಅದನ್ನು ಜನತೆಯ ಹೋರಾಟ ವಿಫಲಗೊಳಿಸಿತು ಎಂಬುದನ್ನು ಮರೆಯದಿರೋಣ.

LEAVE A REPLY

Please enter your comment!
Please enter your name here