ಲೇಖಕರು : ಎಮ್ಮೆಸ್ಕೆ ಬೆಂಗಳೂರು

ಇಂದು ಹುತಾತ್ಮ ದಿನ

ಇಪ್ಪತ್ಮೂರನೆಯ ವಯಸ್ಸಿಗೆ ತನ್ನ ಬದುಕನ್ನು ತ್ಯಾಗ ಮಾಡಿದ್ದರೂ, ಅಂದಿನಿಂದ ಇಂದಿನವರೆಗೂ (ಮುಂದೆಯೂ) ಭಾರತೀಯ ಯುವ ಮನಸ್ಸುಗಳನ್ನು ರೋಮಾಂಚನಗೊಳಿಸುವ ಹೆಸರು ಭಗತ್ ಸಿಂಗ್ ನದ್ದು. ಭಯ ಎನ್ನುವುದನ್ನು ಅಳಿಸಿಹಾಕಿದರೆ ಹೇಗೆ ನಿರ್ಭೀತವಾಗಿ ಬದುಕಬಹುದು ಮತ್ತು ಬದುಕನ್ನು ಗೆಲ್ಲಬಹುದು ಎನ್ನುವುದಕ್ಕೆ ಭಗತ್ ಸೂಕ್ತ ಉದಾಹರಣೆ. ಸಾವಿಗೆ ಕೆಲವೇ ಗಂಟೆಗಳಿರುವಾಗಲೂ ಜೈಲಿನಲ್ಲಿ ಪುಸ್ತಕ ಓದುತ್ತಾ ಕೂತಿದ್ದನೆಂದರೆ ಭಗತ್ ನ ಧೈರ್ಯ ಎಷ್ಟಿರಬೇಡ! ಮಾನಸಿಕವಾಗಿ ಸಾವನ್ನು ಎದುರುಗೊಳ್ಳುವ ಆ ಶಕ್ತಿ ನಿಜಕ್ಕೂ ಅಚ್ಚರಿಯಾದುದು. ಆದರೆ, ಅಂತಹ ನಿರ್ಭಯಿ ಕ್ರಾಂತಿಕಾರಿ ಒಂದು ವಿಚಾರಕ್ಕೆ ಮಾತ್ರ ಭಯಪಟ್ಟಿದ್ದ! 
ಹೌದು. ಸಾವಿಗೂ ಹೆದರದ ಈ ಕ್ರಾಂತಿಕಾರಿಯೊಳಗಿದ್ದ ‘ಭಯ’ ನಿಜಕ್ಕೂ ನಮ್ಮನ್ನು ತಟ್ಟಿ ಎಬ್ಬಿಸಬೇಕಾಗಿದೆ. ಜೈಲಿನಲ್ಲಿದ್ದ ಒಂದು ಸಂದರ್ಭ ತನ್ನ ತಾಯಿಗೆ ಬರೆದ ಪತ್ರದಲ್ಲಿ, ಭಗತ್ ಈ ಭಯವನ್ನು ವ್ಯಕ್ತಪಡಿಸುತ್ತಾನೆ.“ಭಾರತಮಾತೆ ಬ್ರಿಟಿಷರ ಬಂಧನದಿಂದ ಸ್ವತಂತ್ರಳಾಗುವುದರಲ್ಲಿ ನನಗೆ ಯಾವುದೇ ಅನುಮಾನ ಇಲ್ಲ. ಆದರೆ ಈ ಸ್ವಾತಂತ್ರ್ಯ, ಬ್ರಿಟಿಷರು ಬಿಟ್ಟು ಹೋದ ಅಧಿಕಾರದ ಕುರ್ಚಿಯಲ್ಲಿ, ಭಾರತೀಯರು ಕೂರುವುದಷ್ಟೇ ಆಗಿಬಿಡಬಹುದೇನೋ ಎಂಬ ಭಯ ನನ್ನದು“. ಈ ಎರಡು ವಾಕ್ಯಗಳು ಭಗತ್ ನಲ್ಲಿದ್ದ ದೂರದೃಷ್ಟಿತ್ವವನ್ನು ಬಿಂಬಿಸುತ್ತದೆ. ದುರಂತ ಎಂದರೆ, ಅಂದು ಭಗತ್ ಬರೆದ ಈ ಮಾತು, ಇಂದಿಗೆ ಕನ್ನಡಿ ಹಿಡಿಯುತ್ತಿದೆ. ಇಂದೇನು ನಡೆಯುತ್ತಿದೆ? ಸುತ್ತಲಿನ ಸಮಾಜವನ್ನು, ಅಧಿಕಾರದಲ್ಲಿ ಕೂತವರನ್ನು (ಹಿಂದೆ ಅಧಿಕಾರದಲ್ಲಿದ್ದವರೂ ಕೂಡ) ಕಾಣುವಾಗ ಭಗತ್ ಹೇಳಿದ ಮಾತು ಮತ್ತೆ ಮತ್ತೆ ನೆನಪಿಗೆ ಬಂದೇ ಬರುತ್ತದೆ. 
ಅಧಿಕಾರದ ದರ್ಪ ಗ್ರಾಮ ಪಂಚಾಯತಿ ಸದಸ್ಯ, ಅಧ್ಯಕ್ಷನಿಂದ ಹಿಡಿದು ದೊಡ್ಡ ದೊಡ್ಡ ನಾಯಕರವರೆಗೂ ಹರಡಿಕೊಂಡುಬಿಟ್ಟಿದೆ. ಬಡವರ ಮೇಲೆ ಈ ದರ್ಪ ಪ್ರಯೋಗವಾಗುತ್ತಿದೆ. ಬ್ರಿಟಿಷರು ಹೋದ ಮೇಲೆ ಸುಂದರ ಭಾರತವೊಂದು ನಿರ್ಮಾಣವಾಗಬಹುದು ಎಂಬ ಕನಸಿನಲ್ಲಿ ನಿಟ್ಟುಸಿರು ಬಿಟ್ಟವರು ಅಂತಹ ಭಾರತವನ್ನು ಕಾಣದೆಯೇ ಉಸಿರು ಬಿಡಬೇಕಾಯಿತು. ಈಗ ಉಸಿರುಗಟ್ಟಿಸುವ ವಾತಾವರಣದಲ್ಲಿ ನಮ್ಮ ಬದುಕು. ನಾವು ಉಸಿರುಗಟ್ಟಿಸುವ ವಾತಾವರಣದಲ್ಲಿ ಬದುಕುತ್ತಿದ್ದೇವೆ ಅಂತ ಹೇಳಿದರೆ ಸಾಕು, ಕೆಲವರಿಗಂತೂ ಎಲ್ಲಿಲ್ಲದ ಸಿಟ್ಟು ಬರುತ್ತದೆ. ‘ನಿನಗೇನಾಗಿದೆ ಮಾರಾಯ ಅಂಥದ್ದು, ನೀನು ಚೆನ್ನಾಗಿಲ್ವ’ ಅಂತ ಪ್ರಶ್ನಿಸುತ್ತಾರೆ. ಚೆನ್ನಾಗಿರುವುದೆಂದರೆ ಹೇಗೆ ಎಂಬುದೇ ಅರ್ಥವಾಗುತ್ತಿಲ್ಲ. ಹೊತ್ತು ಹೊತ್ತಿನ ಊಟ, ನಿದ್ದೆ, ನೆಮ್ಮದಿ ಇದ್ದರೆ ಈ ಜಗತ್ತಿನಲ್ಲಿ ಆರಾಮಾಗಿ ಇದ್ದುಬಿಡಬಹುದು ಅಥವಾ ಇದ್ದುಬಿಡಬೇಕು ಎಂಬುದು ಇಂಥವರ ಆಲೋಚನೆಯೋ ಏನೊ. ಹಾಗೆ ಬದುಕಬಹುದು. ಆದರೆ ಇನ್ನೊಬ್ಬರ ನೋವಿಗೆ ಯಾವ ರೀತಿಯ ಸ್ಪಂದನೆಯನ್ನೂ ನೀಡದೆ ಬದುಕುವುದಕ್ಕೆ ಅರ್ಥವಿಲ್ಲವಲ್ಲ. 
ಭಗತ್ ಸಣ್ಣ ವಯಸ್ಸಿಗೇ ಬದುಕು ಮುಗಿಸಿದ ಕಾರಣಕ್ಕೆ ಆತನ ಬಗ್ಗೆ, ಆತನ ವಿಚಾರಗಳ‌ ಬಗ್ಗೆ ನಿರ್ಲಕ್ಷ್ಯ ವಹಿಸುವಂತಿಲ್ಲ.‌ ಇಂದಿನ ಸಾಮಾಜಿಕ ವಾತಾವರಣವನ್ನು ಗಮನಿಸಿದರೆ, ಬಹುಷಃ ಭಗತ್ ಬದುಕಿದ್ದಿದ್ದರೆ ಇಂದಿನ ನಕಲಿ ದೇಶಭಕ್ತರೇ ಆತನ ವಿರುದ್ಧ ಸಂಚು ಹೂಡುತ್ತಿದ್ದರು ಎಂದೆನಿಸುತ್ತದೆ. ‘ಭಗತ್ ಅಂಥದ್ದೇನು ಮಾಡಿದ, ಸಂಸತ್ತಿಗೆ ಬಾಂಬ್ ಹಾಕಿದ ಅಷ್ಟೆ’ ಎಂದು ಸಲೀಸಾಗಿ ಹೇಳುವವರಿರಬಹುದು. ಆದರೆ, ಭಗತ್ ಬಾಂಬ್ ಹಾಕಿರುವುದರ ಹಿಂದಿನ ಉದ್ದೇಶವನ್ನು ಮಾತ್ರ ಇವರು ಮರೆಮಾಚುತ್ತಾರೆ. ಭಗತ್ ಗೆ ಬಾಂಬಿನ ಪರಿಣಾಮ ಬೇಕಿರಲಿಲ್ಲ. ಹಾಗೇನಾದರೂ ಸಂಸತ್ತಿನಲ್ಲಿದ್ದವರನ್ನು ಸಾಯಿಸಬೇಕೆಂಬ ಉದ್ದೇಶದಿಂದ ಬಾಂಬ್ ಹಾಕಿದ್ದಿದ್ದರೆ, ಎರಡೇ ಬಾಂಬ್ ಹಾಕುತ್ತಿರಲಿಲ್ಲ ಮತ್ತು ಅದು ಯಾರಿಗೂ ತಾಗದ ಹಾಗೆ ಗುರಿ ಇಡುತ್ತಲೂ ಇರಲಿಲ್ಲ. ಭಗತ್ ಗೆ ಬೇಕಿದ್ದದ್ದು ಆ ಬಾಂಬ್ ನ ಸದ್ದು. ಆ ಸದ್ದು ಅತ್ಯಂತ ಅನಿವಾರ್ಯವಾಗಿತ್ತು. ವೈಸ್ ರಾಯ್ ತನ್ನ ವಿಶೇಷ ಅಧಿಕಾರವನ್ನು ಬಳಸಿ, ಸಾರ್ವಜನಿಕ ಸುರಕ್ಷತಾ ಕಾಯಿದೆ ಮತ್ತು ವ್ಯಾಪಾರ ವಿವಾದ ಕಾಯಿದೆಯನ್ನು ಜಾರಿ ಮಾಡಲು ಹೊರಟದ್ದಕ್ಕೆ ವಿರುದ್ಧವಾಗಿ, ನಮ್ಮ ಧ್ವನಿ ಇಲ್ಲಿದೆ ಎಂದು ಆ ಬಾಂಬ್ ಮೂಲಕ ತಿಳಿಸಿದ್ದ ಭಗತ್. ಅದರೂ, ಇವೆಲ್ಲವೂ ಭಗತ್ ನ ಮೇಲ್ನೋಟದ‌ ಉದ್ದೇಶಗಳಾಗಿತ್ತು ಎಂಬುದು ನಿಜಕ್ಕೂ ಅಚ್ಚರಿಯ ಸಂಗತಿ. ಒಬ್ಬ ಕ್ರಾಂತಿಕಾರಿಯ ನಡೆಯ ಹಿಂದೆ ಇರಬಹುದಾದ ನಿಜವಾದ ಉದ್ದೇಶವನ್ನು ಕೆಲವೊಮ್ಮೆ ಊಹಿಸುವುದು ಕಷ್ಟ. ಭಗತ್ ಬಾಂಬ್ ಸಿಡಿಸಿರುವುದರ ಹಿಂದಿನ ನಿಜವಾದ ಉದ್ದೇಶವೆಂದರೆ, ಬಾಂಬ್ ಸಿಡಿಸಿದ ಮೇಲೆ ಆತ ಮತ್ತು ಆತನ ಗೆಳೆಯರಿಬ್ಬರನ್ನು ಬಂಧಿಸಿ, ಬಳಿಕ ನ್ಯಾಯಾಲಯದ ಮುಂದೆ ನಿಲ್ಲಿಸಲಾಗುತ್ತದೆ. ಅದೇ ಅವಕಾಶವನ್ನು ಬಳಸಿಕೊಂಡು, ನಾವಿಲ್ಲಿ ಹೋರಾಡುತ್ತಿದ್ದೇವೆ ಎಂಬ ಸಂಗತಿಯನ್ನು ಎಲ್ಲರಿಗೂ ಮುಟ್ಟುವಂತೆ ಮಾಡುವುದು. ತಮ್ಮ ಹೋರಾಟದ, ತ್ಯಾಗದ ಮೂಲಕ ಜನರಲ್ಲಿ‌ ದೇಶಪ್ರೇಮ, ಹೋರಾಟದ ಕಿಚ್ಚು ಹೆಚ್ಚಿಸುವುದು. ನೇನುಗಂಬ ಏರಿದರೆ ತನ್ನ ನೆನಪಿನಲ್ಲೇ ಜನರು ಹೋರಾಡುವುದನ್ನು ಮುಂದುವರಿಸುತ್ತಾರೆ ಎಂಬ ನಂಬಿಕೆ ಭಗತ್ ನದ್ದಾಗಿತ್ತು! 
ಸ್ಯಾಂಡರ್ಸ್ ನನ್ನು ಕೊಂದಿದ್ದಕ್ಕೆ, ಭಗತ್ ಹಿಂಸೆ ಮಾಡಿದ ಎಂದು ದೂರವಿಡುವ ಶಾಂತಿಪ್ರಿಯರು, ಇಂದು ರಾಜಕೀಯ ಪಕ್ಷಗಳ ನಡುವೆ, ಧರ್ಮಗಳ ನಡುವೆ ನಡೆಯುತ್ತಿರುವ ಹತ್ಯೆಗಳಿಗೆ ಏನೆನ್ನುತ್ತಾರೆ? ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್ ಇಂತಹ ಯಾವ ಪಕ್ಷವಾದರೂ ಇಲ್ಲಿ ಪರಸ್ಪರ ಕಾರ್ಯಕರ್ತರ ಕೊಲೆಗಳು ಬೇಕಾದಷ್ಟು ನಡೆದಿವೆ. ಇಂಥವುಗಳ ಮುಂದೆ ಸ್ಯಾಂಡರ್ಸ್ ಹತ್ಯೆ ಇಟ್ಟುಕೊಂಡು ಭಗತ್ ನನ್ನು ದೂರವಿಡುವುದಕ್ಕೆ ಅರ್ಥವಿದೆಯೆ? ಅಲ್ಲದೆ ಈ ರೀತಿಯ ಸಂದರ್ಭಗಳಲ್ಲಿ ನಡೆದ ಹತ್ಯೆಯನ್ನು ಹೆಕ್ಕಿ ಹೇಳುವುದಾದರೆ, ಸಂದರ್ಭ ಬಂದಾಗ ಎದುರಾಳಿಗಳಿಗೆ ಗುಂಡಿಕ್ಕುವ ನಮ್ಮ ಗಡಿ ಕಾಯುವ ಸೈನಿಕರನ್ನೂ ಹಿಂಸಾಚಾರಿಗಳು ಎಂದು ಹೇಳಲಾಗುತ್ತದೆಯೆ? ಹಾಗಂತ ಹಿಂಸೆಯನ್ನು ಸಮರ್ಥಿಸುತ್ತಿಲ್ಲ. ಭಗತ್ ಕುರಿತ ಇಂತಹ ಮಾತುಗಳನ್ನೂ ಒಪ್ಪುವುದಿಲ್ಲ ಅಷ್ಟೆ. 
ನಾಸ್ತಿಕನಾದ ಕಾರಣ ಭಗತ್ ಹಿಂದುತ್ವದ ಪ್ರೇಮಿಗಳಿಗೆ ಬೇಡವಾದ. ಈಗೀಗ ಕಮ್ಯೂನಿಸ್ಟರಿಗೂ ಬೇಕಿಲ್ಲ. ಸ್ವಾತಂತ್ರ್ಯ ಹೋರಾಟಗಾರರು, ದೇಶ ಕಟ್ಟುವ ಕೆಲಸ ಮಾಡಿದವರು ಒಟ್ಟಾಗಿಯೇ ಹೋರಾಡಿದ್ದಾರೆ. ಆದರೆ ನಾವೀಗ ಅವರನ್ನು ವಿಭಜಿಸಿ, ನಮಗೆ ಬೇಕಾದವರನ್ನು ಮಾತ್ರ ಜೊತೆಗಿಟ್ಟುಕೊಳ್ಳುತ್ತಿದ್ದೇವೆ. ಅಂಬೇಡ್ಕರ್ ಕೆಲವರಿಗೆ ಮಾತ್ರ, ಗಾಂಧಿ ಇನ್ನು ಕೆಲವರಿಗೆ, ಮತ್ತೆ ಕೆಲವರಿಗೆ ಗೋಡ್ಸೆ, ಸರ್ದಾರ್ ಪಟೇಲ್, ಟಿಪ್ಪು, ಶಿವಾಜಿ, ಬಸವಣ್ಣ, ವಿವೇಕಾನಂದ… ಹೀಗೆ ಎಲ್ಲರನ್ನೂ ಒಂದುಗೂಡಿಸುವ ಶುದ್ಧ ಮನಸ್ಸು ನಮಗಿನ್ನೂ ದಕ್ಕಿಲ್ಲ. ನಮ್ಮ ರಾಜಕೀಯಕ್ಕಾಗಿ ಇಂತಹ ನಾಯಕರನ್ನು ದೂರ ನಿಲ್ಲಿಸಿ ಲಾಭ ಪಡೆಯುತ್ತಿದ್ದೇವೆ. 
ನಾಚಿಕೆಗೇಡಿನ ಸಂಗತಿ ಎಂದರೆ, ಭಗತ್ ನಾಸ್ತಿಕ ಎಂದು ದೂರವಿಡುವ ಕೆಲವು ಮಹಾನ್ ಧರ್ಮಿಷ್ಟರು ಅದೇ ಭಗತ್ ನನ್ನು ಗಲ್ಲಿಗೇರಿಸಿದ ದಿನಾಂಕವನ್ನು ಫೆಬ್ರವರಿ ಹದಿನಾಲ್ಕು ಎಂದು ಹೇಳಿಕೊಂಡು ಪೋಸ್ಟರ್ ಗಳನ್ನು ಸಿದ್ಧಗೊಳಿಸಿ, ಪ್ರೇಮಿಗಳು ‘ಪ್ರೇಮಿಗಳ ದಿನ’ ಆಚರಿಸದಂತೆ ತಡೆಯಲು ಪ್ರಯತ್ನಿಸುತ್ತಾರೆ. ಕ್ರಾಂತಿಕಾರಿಯೊಬ್ಬ ನಗುನಗುತ್ತಾ ನೇಣಿಗೇರಿದ ದಿನದ ದಿನಾಂಕವನ್ನು ಬದಲಿಸುವುದಕ್ಕೆ ಇವರಿಗಿರುವ ಅಧಿಕಾರವಾದರೂ ಏನು? ಹಾಗಾದರೆ ಇಷ್ಟೇನಾ ಇವರ ದೇಶಪ್ರೇಮ?
ಭಗತ್ ಸಿಂಗ್ ಎಂಬ ಕ್ರಾಂತಿಕಾರಿಯ ಬದುಕಿನ ಚೂರು ಪಾರು ಸಂಗತಿಗಳನ್ನಾದರೂ ಇಂದಿನ ಯುವ ಪೀಳಿಗೆ ಓದಬೇಕು. ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ಬಳಿಕ ಆ ನೆಲಕ್ಕೆ ಆಗ ಬಾಲಕನಾಗಿದ್ದ ಭಗತ್ ತನ್ನ ತಂಗಿಯ ಜತೆ ತೆರಳಿ, ಅಲ್ಲಿನ ರಕ್ತಮಿಶ್ರಿತ ಮಣ್ಣನ್ನು ತನ್ನ ಮುಷ್ಟಿಯಲ್ಲಿ ಹಿಡಿದುಕೊಂಡು ಮನೆಗೆ ಬಂದು ನಮಸ್ಕರಿಸಿ ಗೌರವ ಸಲ್ಲಿಸಿದ ಸಂಗತಿ ಒಂದು ಕ್ಷಣ ಮೈ ಜುಮ್ಮೆನ್ನುವಂತೆ ಮಾಡುತ್ತದೆ. ಈ ಹೊತ್ತಿನಲ್ಲಿ ಭಗತ್ ಸಿಂಗ್ ಕುರಿತು ಓದುವುದು ಆ ಕ್ರಾಂತಿಕಾರಿ ಮನಸ್ಸಿಗೆ ಸಲ್ಲಿಸಬಹುದಾದ ಸೂಕ್ತ ಗೌರವ.

LEAVE A REPLY

Please enter your comment!
Please enter your name here