- ಹಕೀಮ್ ತೀರ್ಥಹಳ್ಳಿ
ಸಂಶೋಧನಾ ವಿದ್ಯಾರ್ಥಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯ

ವಸಾಹತುಶಾಹಿಯ ಹಿಡಿತದಿಂದ ಹೊರಬರಲು ಧರ್ಮದ ಚೌಕಟ್ಟುಗಳನ್ನು ಬದಿಗೊತ್ತಿ ಹೋರಾಟ ಮಾಡಿದ ಭಾರತವು ಕೊನೆಗೆ ಧರ್ಮದ ಆಧಾರದಲ್ಲಿ ವಿಭಜನೆಗೊಂಡಿತು. ಇದರ ಪರಿಣಾಮ ಎಂಬಂತೆ ಮುಸ್ಲಿಂ ದೇಶ ಪಾಕಿಸ್ತಾನ ಮತ್ತು ಇಂದಿನ ಬಾಂಗ್ಲಾದೇಶ ರಚನೆಯಾಯಿತು. ಅದೇ ಸಂಧರ್ಭದಲ್ಲಿ ಕೆಲವರಿಂದಾಗಿ ಭಾರತ ದೇಶವನ್ನು ‘ಹಿಂದೂರಾಷ್ಟ್ರ’ ಮಾಡಬೇಕು ಎಂಬ ಆಗ್ರಹಗಳು ಗಟ್ಟಿಯಾಗಿಯೇ ಕೇಳಿಬಂದವು. ಆದರೆ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದವರು ಮತ್ತು ಈ ದೇಶದ ಸಂವಿಧಾನವನ್ನು ರೂಪಿಸಿದವರು ಇದಕ್ಕೆ ಕಿವಿಗೊಡಲಿಲ್ಲ. ಬದಲಾಗಿ ಭಾರತದ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಭಾರತವೊಂದು ಜಾತ್ಯಾತೀತ, ಧರ್ಮಾತೀತ ಮತ್ತು ಸಮಾನತೆಯ ದೇಶ ಎಂದು ಕರೆದರು. ಆದರೆ ಇಂದು ನಮ್ಮನ್ನು ಆಳುವ ವರ್ಗ ಈ ತತ್ವದ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಧರ್ಮನಿರಪೇಕ್ಷ ಮತ್ತು ಸಮಾನತೆಯ ಅಣಕದಂತೆ ಕಾಣುತ್ತಿರುವ ‘ಪೌರತ್ವ (ತಿದ್ದುಪಡಿ) ಮಸೂದೆ-2019’ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆಗೊಂಡು ರಾಷ್ಟ್ರಪತಿಯವರ ಅಂಕಿತದೊಂದಿಗೆ ಇಂದು ನಮ್ಮ ಮುಂದೆ ‘ಪೌರತ್ವ (ತಿದ್ದುಪಡಿ) ಕಾಯ್ದೆ-2019’ ಆಗಿ ರೂಪುಗೊಂಡಿದೆ.


ಈ ಕಾಯ್ದೆಯ ಉದ್ದೇಶ ಅಫ್ಗಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಧರ್ಮದ ಕಾರಣಕ್ಕೆ ದೌರ್ಜನ್ಯಕ್ಕೆ ತುತ್ತಾಗಿ ಭಾರತಕ್ಕೆ 2014ರ ಡಿಸೆಂಬರ್ 31ಕ್ಕೆ ಮೊದಲು ಬಂದ ಹಿಂದೂ, ಸಿಖ್, ಬೌದ್ಧ, ಜ್ಯೆನ, ಪಾರ್ಸಿ, ಕ್ರ್ಯೆಸ್ತ ಸಮುದಾಯದ ಅಕ್ರಮ ವಲಸಿಗರಿಗೆ ಭಾರತ ಪೌರತ್ವ ನೀಡಬಹುದಾಗಿದೆ. ಇದನ್ನು ಮನಗಂಡಾಗ ನಮಗೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಮುಸ್ಲಿಮರನ್ನು ಉದ್ದೇಶ ಪೂರ್ವವಕವಾಗಿಯೇ ಈ ಕಾಯ್ದೆಯಿಂದ ಹೊರಗಿಡಲಾಗಿದೆ. ಅಷ್ಟೇ ಅಲ್ಲ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಜೊತೆಗೆ ಅಫಘಾನಿಸ್ತಾನವನ್ನು ಸೇರಿಸಿಕೊಂಡಿದ್ದೇಕೆ ಎಂಬ ಪ್ರಶ್ನೆಯು ಉದ್ಭವವಾಗುತ್ತದೆ. ಅದಲ್ಲದೆ ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ಮ್ಯಾನ್ಮಾರ್ ದೇಶದಲ್ಲಿ ರೋಹಿಂಗ್ಯಾ ಮುಸ್ಲಿಂ ಸಮುದಾಯದವರು ಕೂಡ ಧರ್ಮದ ಕಾರಣಕ್ಕೆ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ಅವರಿಗೆ ಪೌರತ್ವ ನೀಡುವ ಪ್ರಸ್ತಾಪ ತಿದ್ದುಪಡಿಯಲ್ಲಿ ಇಲ್ಲ. ನಮ್ಮ ದೇಶದ ಮತ್ತೊಂದು ನೆರೆ ರಾಷ್ಟ್ರವಾದ ಶ್ರೀಲಂಕಾದಲ್ಲಿ ಭಾರತದ ಮೂಲದ ತಮಿಳರು ಭಾಷೆಯ ಕಾರಣಕ್ಕೆ ಜನಾಂಗೀಯ ನೆಲೆಯಲ್ಲಿ ಕಿರುಕುಳಕ್ಕೆ ಒಳಗಾಗಿದ್ದಾರೆ. ಅವರು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದರೆ ಅವರಿಗೆ ಪೌರತ್ವ ನೀಡುವ ಪ್ರಸ್ತಾವ ಈ ಕಾಯ್ದೆಯಲ್ಲಿ ಇಲ್ಲ. ಅಂದರೆ ಇದನ್ನು ಗಮನಿಸುವಾಗ ಈ ಮಸೂದೆಯು ಮುಸ್ಲಿಂ ಆಡಳಿತ ಇರುವ ದೇಶವನ್ನು ಎದುರಿಗಿರಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಭಾರತದಲ್ಲಿ ಪರಸ್ಪರ ಸಹೋದರಂತೆ ಬದುಕುತ್ತಿರುವ ಹಿಂದೂ, ಮುಸ್ಲಿಮರನ್ನೂ ‘ನಾವು ಮತ್ತು ಅವರು’ ಎಂದು ವಿಂಗಡಣೆ ಮಾಡಲು ಹೊರಟಿದೆ. ಇದು ಆಳುವ ವರ್ಗದ ಸಂಕುಚಿತ ದೃಷ್ಟಿ ಮತ್ತು ಅವಿವೇಕಿ ತೀರ್ಮಾನ ಎಂಬುದರಲ್ಲಿ ಸಂಶಯವಿಲ್ಲ. ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುತ್ತಿರುವ ಈ ಮಸೂದೆ ಧರ್ಮನಿರಪೇಕ್ಷ ತತ್ವಕ್ಕೆ ವಿರುದ್ದವಾಗಿದೆ.
ಭಾರತದ ಸಂವಿಧಾನದಲ್ಲಿ ಬಹಳ ಸ್ಪಷ್ಟವಾಗಿ ಹೇಳಿದೆ. ಧರ್ಮ, ಮೂಲವಂಶ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರಗಳ ಮೇಲೆ ತಾರತಮ್ಯ ಮಾಡುವಂತಿಲ್ಲ ಎಂಬುದನ್ನು. ಅದಲ್ಲದೆ ಭಾರತದ ಸಂವಿಧಾನದ ಸ್ಪಷ್ಟ ಉಲ್ಲಂಘನೆ ಆಗಿರುವುದು ಈ ಕಾಯ್ದೆಯ ಮೂಲಕ ಅರಿವಾಗುತ್ತದೆ. ಭಾರತದ ಸಂವಿಧಾನದ 14, 15, 21, 25ನೇ ಅನುಚ್ಚೇದದ ವಿರುದ್ಧವಾಗಿ ಈ ಕಾಯ್ದೆಯು ರೂಪುಗೊಂಡಿದೆ. ಅದಲ್ಲದೆ ಈ ಕಾಯ್ದೆಯು ಸಂವಿಧಾನದ ಮೂಲ ಆಶಯಕ್ಕೆ ದಕ್ಕೆಯನ್ನು ಉಂಟುಮಾಡುತ್ತಿದೆ. ಅಷ್ಟೇ ಅಲ್ಲ ಭಾರತದ ನಮ್ಮ ಸಂವಿಧಾನವು ಭಾರತವನ್ನು ಜಾತ್ಯತೀತ ದೇಶ ಎಂದು ಘೋಷಿಸಿದೆ. ಇದರರ್ಥ ಧರ್ಮ, ಜಾತಿ, ಲಿಂಗ, ಬಣ್ಣ, ಭಾಷೆ ಆಧಾರದ ಮೇಲೆ ವ್ಯಕ್ತಿಗಳ ನಡುವೆ ಯಾವುದೇ ರೀತಿಯ ಬೇದ-ಭಾವ ಮಾಡಬಾರದು. ಆದ್ದರಿಂದ ಈ ಕಾಯ್ದೆಯು ನೆರೆಯ ದೇಶದಲ್ಲಿ ಹಿಂಸೆಗೆ ಒಳಪಟ್ಟ ಮುಸ್ಲಿಮರನ್ನು ಭಾರತದ ಪೌರತ್ವವನ್ನು ಕೊಡುವುದರಿಂದ ಹೊರತುಪಡಿಸಿ ನಮ್ಮ ದೇಶದ ಜಾತ್ಯತೀತತೆಯ ತತ್ವವನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿದೆ .
ಭಾರತ ಎಂಬುದು ಯಾವುದೇ ಒಂದು ಜನಾಂಗಕ್ಕೆ, ಧರ್ಮಕ್ಕೆ, ಒಂದೇ ಭಾಷೆಯನ್ನಾಡುವವರಿಗೆ ಸೇರಿದ ದೇಶವಲ್ಲ. ಭಾರತವು ಸರ್ವಧರ್ಮಿಯರಿಗೂ ಸೇರಿದ ದೇಶ. ಇಂತಹ ಬಹುತ್ವ ಭಾರತವನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಹುನ್ನಾರ ಈ ಕಾಯ್ದೆಯಲ್ಲಿದೆ. ಅಕ್ರಮ ನುಸುಳುಕೋರರನ್ನು ಗುರುತಿಸಲು ಈಗಾಗಲೇ ಅನೇಕ ಕಾನೂನುಗಳಿವೆ. ಯಾವುದೇ ಊರಿನಲ್ಲಿ ಅಕ್ರಮ ವಾಸಿಗಳಿದ್ದರೆ ಅವರು ಯಾರೆಂಬುದು ಪೋಲಿಸರಿಗೆ ತಿಳಿದಿರುತ್ತದೆ. ಅವರನ್ನು ಹೊರಹಾಕುವ ಹೆಸರಿನಲ್ಲಿ ಪ್ರಜೆಗಳನ್ನು ವಿಭಜಿಸುವುದು, ಪಕ್ಷಪಾತ ಮಾಡುವುದು ದೇಶದಲ್ಲಿ ಅಸಮಾನತೆಗೆ ದಾರಿಯಾಗುತ್ತದೆ.


ಇಂದಿನ ಕೇಂದ್ರ ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಅಕ್ರಮ ನುಸುಳುಕೋರರನ್ನು ಹೊರಹಾಕುತ್ತೇವೆ ಎಂಬ ಪ್ರಣಾಳಿಕೆ ಈಡೇರಿಸಲು ಮೊದಲು ಪ್ರಯೋಗಶಾಲೆ ಮಾಡಿಕೊಂಡಿದ್ದು ಅಸ್ಸಾಂ ರಾಜ್ಯವನ್ನು. ಇಲ್ಲಿ ರಾಷ್ಟ್ರೀಯ ಪೌರತ್ವ ನೊಂದಣಿ ಮಾಡಲಾಯಿತು. ಅದರಂತೆ ಪೌರತ್ವ ನೊಂದಣಿ ಮುಗಿದ ಮೇಲೆ ತಮ್ಮ ಇರುವಿಕೆಯ ದಾಖಲೆಯನ್ನು ನೀಡಲಾಗದೆ ಉಳಿದವರು ಹತ್ತೊಂಬತ್ತು ಲಕ್ಷ ಜನ. ಈ ನೊಂದಣಿಯ ಪ್ರಕಾರ ಒಂದು ಅಂಶ ಹೊರಬಿತ್ತು. ಅದೇನೆಂದರೆ ಈ ಹತ್ತೊಂಬತ್ತು ಲಕ್ಷ ಜನರಲ್ಲಿ ಹನ್ನೆರಡು ಲಕ್ಷ ಜನ ಹಿಂದೂಗಳೆಂದು. ದಾಖಲೆ ನೀಡಲಾಗದ ವಲಸಿಗರಲ್ಲಿ ಮುಸ್ಲಿಮರ ಸಂಖ್ಯೆ ಕಡಿಮೆಯಾಯಿತೋ ಆ ಸಂದರ್ಭದಲ್ಲಿ ಸ್ವತಃ ಅಸ್ಸಾಂ ಸರ್ಕಾರ ಈ ನೊಂದಣಿಯ ವಿರುದ್ದ ತಿರುಗಿ ಬಿತ್ತು. ಅಷ್ಟೇ ಅಲ್ಲ ಇದೊಂದು ರದ್ದಿ ಪೇಪರ್ ಎಂದು ಆಕ್ರೋಶ ಹೊರಹಾಕಿದರು. ಆಗ ಕೆಲವು ಬದಲಾವಣೆಯೊಂದಿಗೆ ರಾಷ್ಟ್ರೀಯ ಪೌರತ್ವ ನೊಂದಣಿಯ ಮುಂದುವರೆದ ಭಾಗವಾಗಿ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಸಂಸತ್ತುಗಳಲ್ಲಿ ಮಂಡಿಸಲಾಯಿತು. ಇದರ ಉದ್ದೇಶ ಬಹಳ ಸ್ಪಷ್ಟ. ಇದನ್ನು ಕಾಯ್ದೆಯಾಗಿ ರೂಪಿಸಿ ಭಾರತದಲ್ಲಿ ತಮ್ಮ ಇರುವಿಕೆಯ ಸೂಕ್ತ ದಾಖಲೆಯನ್ನು ನೀಡಲಾಗದ ಮುಸ್ಲಿಮರನ್ನು ಹೊರತುಪಡಿಸಿ ಇತರರನ್ನ ಭಾರತದ ಪೌರರನ್ನಾಗಿ ಮಾಡುವುದಾಗಿದೆ. ಈ ಮಸೂದೆಯನ್ನು ಅಸ್ಸಾಂನ ಮುಖ್ಯಮಂತ್ರಿ ಸ್ವಾಗತಿಸುತ್ತಾರೆ. ಹಾಗಾದರೆ ಮೊದಲು ರದ್ದಿ ಪೇಪರ್ ಆಗಿದ್ದ ಈ ಮಸೂದೆ ನಂತರದಲ್ಲಿ ಸ್ವಾಗತ ಕೋರಲು ಅರ್ಹವಾದದ್ದು ಹೇಗೆ? ಅಂದರೆ ಇವರಿಗೂ ಅಲ್ಲಿ ಮುಸ್ಲಿಮರನ್ನೂ ಆ ಕಾಯ್ದೆಯಿಂದ ಹೊರಗಿಡುವ ಉದ್ದೇಶ ಸ್ಪಷ್ಟವಾಗಿದೆ. ಇದೇ ರೀತಿ ಮುಂದೆ ದೇಶದ ಎಲ್ಲಾ ಕಡೆಗಳಲ್ಲಿ ಪೌರತ್ವ ನೊಂದಣಿ ಮಾಡುತ್ತಾರೆ. ದಾಖಲೆಗಳನ್ನು ಒದಗಿಸಲಾಗದ ಮುಸ್ಲಿಮರ ಪರಿಸ್ಥಿತಿ ಏನು ಎಂಬ ಆತಂಕ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ.


ಇಂದು ಇಂತಹ ಕಾಯ್ದೆಗಳನ್ನು ಜಾರಿಗೊಳಿಸಿ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಿ ಭಾರತದ ನಾಗರೀಕರ ನಿಜವಾದ ಸಮಸ್ಯೆಗಳಾದ ನಿರುದ್ಯೋಗ, ಬಡತನ, ಜಿ.ಡಿ.ಪಿ.ಯ ಇಳಿಕೆ, ಮೂಲ ಸೌಕರ್ಯ ಇವುಗಳನ್ನು ಕೇಳದಂತೆ ಬಾಯಿಮುಚ್ಚಿಸಿ ಧರ್ಮದ ನೆಪದಲ್ಲಿ ಭಾವನಾತ್ಮಕವಾಗಿ ಬಹುಸಂಖ್ಯಾತರನ್ನು ಬಲಪಡಿಸುವ ತಂತ್ರಗಾರಿಕೆ ಇದರಲ್ಲಿದೆ ಎನ್ನುವುದನ್ನು ಮರೆಯಬಾರದು. ಇಂದು ಇದು ಕೇವಲ ಮುಸ್ಲಿಮರ ಸಮಸ್ಯೆ ಮಾತ್ರವಲ್ಲ. ಭಾರತದಲ್ಲಿ ಹಿಂದೂಗಳ ನಂತರ ಎರಡನೇ ದೊಡ್ಡ ಸಂಖ್ಯೆಯಲ್ಲಿರುವುದು ಮುಸ್ಲಿಮರು. ಇವರನ್ನು ‘ನಾವು ಮತ್ತು ಅವರು’ ಎಂದು ವಿಂಗಡಿಸುವಾಗ ಇತರರು ಈ ಕಾಯ್ದೆಯ ಬಗ್ಗೆ ಅಪಸ್ವರ ಎತ್ತಬಾರದೆಂದು ದಲಿತರು, ಕ್ರ್ಯೈಸ್ತರು, ಜ್ಯೆನರು, ಸಿಖ್ಖರಿಗೆ, ಬುಡುಕಟ್ಟು ಸಮುದಾಯದವರಿಗೆ ತೊಂದರೆಯಿಲ್ಲ ಎಂಬ ಭರವಸೆ ನೀಡಲಾಗಿದೆ. ಆದರೆ ಇಂದಲ್ಲ ನಾಳೆ ಇದು ಎಲ್ಲರನ್ನೂ ಒಳಗೊಳ್ಳುವ ಸಮಸ್ಯೆ ಆಗುವುದರಲ್ಲಿ ಸಂದೇಹವೇ ಇಲ್ಲ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಂದು ಹಿಂದೂ ಮತ್ತು ಮುಸ್ಲಿಮರು ಎಂದು ತುಂಡರಿಸಲು ಹೊರಟವರು ಅಬ್ದುಲ್ ಕಲಾಂ ಅಜಾದ್ ಅವರು ಹೇಳಿದಂತೆ ”ಯಾವ ರೀತಿ ನೀರನ್ನು ತುಂಡರಿಸಲಾಗದೋ ಅದೇ ರೀತಿ ಭಾರತೀಯ ಹಿಂದೂ ಮುಸ್ಲಿಮರನ್ನೂ ತುಂಡರಿಸಲಾಗದು” ಎಂಬ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

LEAVE A REPLY

Please enter your comment!
Please enter your name here