– ಮುಹಮ್ಮದ್ ಶರೀಫ್ ಕಾಡುಮಠ
(ಯುವ ಬರಹಗಾರರು ಬೆಂಗಳೂರು)

ದೇಶದೆಲ್ಲೆಡೆ ನಡೆಯುತ್ತಿರುವ ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅತ್ಯಂತ ಕ್ರೂರವಾಗಿ ವಿದ್ಯಾರ್ಥಿಗಳನ್ನು ಹಿಂಸಿಸುವ ಪೊಲೀಸ್ ವಸ್ತ್ರಧಾರಿಗಳು, ಅಧಿಕಾರವಿಲ್ಲದೇ ಜಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಮೇಲೂ ಲಾಠಿ ಬೀಸಿದ್ದಾರೆ.

ಅನುಮತಿಯಿಲ್ಲದೆ ವಿಶ್ವವಿದ್ಯಾಲಯದ ಆವರಣಕ್ಕೆ‌ ಪ್ರವೇಶಿಸಿ, ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳನ್ನು ಥಳಿಸಲು ಇವರಿಗೆ ಅಧಿಕಾರ ಕೊಟ್ಟವರಾರು ? ಪ್ರತಿಭಟನೆ ವೇಳೆ ದಾಳಿಗೊಳಗಾದ ವಿದ್ಯಾರ್ಥಿನಿಯೊಬ್ಬರು ಹೇಳುವಂತೆ ಪ್ರತಿಭಟನೆಯೇ ನಡೆಯದ ಕಾಲೇಜಿನ ಸ್ಥಳವೊಂದರಲ್ಲಿ ಪೊಲೀಸರೇ ಟಿಯರ್ ಗ್ಯಾಸ್ ಸ್ಪೋಟಿಸಿದ್ದಾರೆ. ಬಳಿಕ ಸಿಕ್ಕ ಸಿಕ್ಕ ವಿದ್ಯಾರ್ಥಿಗಳಿಗೆ ಒಂದಿಷ್ಟೂ ಕರುಣೆ ತೋರದೆ ಹೊಡೆದಿದ್ದಾರೆ. ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಮೂವರು ವಿದ್ಯಾರ್ಥಿಗಳಿಗೆ ಗುಂಡಿಕ್ಕಲಾಗಿದೆ. ಇಬ್ಬರು ಬಲಿಯಾಗಿದ್ದಾರೆ.

ಇವೆಲ್ಲದರ ನಡುವೆ ಪ್ರಮುಖವಾಗಿ ಪ್ರಶ್ನೆಯಾಗಬೇಕಿದ್ದದ್ದು, ಜೀನ್ಸ್ ಪ್ಯಾಂಟ್, ಪೊಲೀಸರದ್ದಲ್ಲದ ಲಾಠಿ, ಪೊಲೀಸರ ವೇಷ ಧರಿಸಿ ಬಂದು ಮನಬಂದಂತೆ ಹೊಡೆದ ಕೆಲವು ದುಷ್ಕರ್ಮಿಗಳ‌ ಬಗ್ಗೆ. ಯಾವ ಅಧಿಕಾರ ಹಿಡಿದು ಈ ಕ್ರೂರಿಗಳು ಆವರಣ ಪ್ರವೇಶಿಸಿದರು? ಮನಸೋ ಇಚ್ಚೆ ಹಿಂಸಿಸಲು ಯಾರು ಅಧಿಕಾರ ಕೊಟ್ಟರು? ಆರಕ್ಷಕರು ಎಂಬ ಖಾಕಿ ಬಟ್ಟೆಯ ಪೊಲೀಸರೂ ಇವರ ಜತೆ ಸೇರಿ ವಿದ್ಯಾರ್ಥಿಗಳ‌ ಮೇಲೆ ಹಲ್ಲೆ ನಡೆಸುವುದಾದರೆ ರಕ್ಷಣೆಯ ಮೇಲಿನ ನಂಬಿಕೆಯನ್ನು ಇನ್ನೂ ನಾವು ಇಟ್ಟುಕೊಳ್ಳಬೇಕೆ? ಹಿಂಸಾತ್ಮಕ ಚಟುವಟಿಕೆಗಳು ನಡೆಯದಂತೆ ತಡೆಯಲು ಖಾಕಿ ಹಾಕಿ ತಿರುಗುವ ಪೊಲೀಸರು ಸ್ವತಃ ಹಿಂಸಾತ್ಮಕ ವರ್ತನೆ ತೋರುವುದಾದರೆ, ಸರ್ಕಾರ ಇವನ್ನೆಲ್ಲ ನೋಡುತ್ತಲೇ, ಪ್ರಧಾನಿ ‘ದಾಳಿ ನಡೆಸಿದವರ ಉಡುಪಿನಿಂದಲೇ ಅವರು ಯಾರೆಂದು ಪತ್ತೆ ಮಾಡಬಹುದು’ ಎನ್ನುವ ಮೂರ್ಖತನದ ಮಾತನ್ನಾಡುವುದಾದರೆ, ಜನರು ಸರ್ಕಾರದ ಮೇಲೆ, ಕಾನೂನಿನ ಮೇಲೆ, ಪೊಲೀಸರ ಮೇಲೆ ನಂಬಿಕೆ ಇರಿಸಬೇಕೆ? ಇರಿಸಬೇಕಾದದ್ದಾದರೂ ಹೇಗೆ? ಇವರು ಈ ಸಮಾಜವನ್ನು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಅರ್ಹರೇ?

ಪ್ರತಿಭಟನೆಗೆ ಹೇಗೆ ಶಾಂತಿಯುತವಾದ ಕ್ರಮ ಇದೆಯೋ ಅದೇ ರೀತಿ ಅವರನ್ನು ಬಂಧಿಸುವುದಕ್ಕೂ ಕ್ರಮ ಇರಬೇಕಲ್ಲವೆ. ಇದಕ್ಕೂ ಮೊದಲು ಪತ್ತೆ ಮಾಡಬೇಕಿರುವುದು ಅವರು ನಿಜಕ್ಕೂ ಪೊಲೀಸರೇ ಎಂಬುದನ್ನು. ಆರೆಸ್ಸೆಸ್ಸಿನವರ ಲಾಠಿ ಹಿಡಿದು ಶೂ, ಜೀನ್ಸ್ ಪ್ಯಾಂಟ್, ಕೆಂಪು ಶರ್ಟ್ ಧರಿಸಿ ಬರುವವರನ್ನು ಪೊಲೀಸರೆನ್ನಬೇಕೆ? ಅಥವಾ ಅನುಮಾನಿಸಬೇಕೆ ? ಅಂಥವರ ವಿರುದ್ಧ ಶೀಘ್ರ ತನಿಖೆಯಾಗಲೇಬೇಕು. ಪೊಲೀಸರಲ್ಲದಿದ್ದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.

ಹಿಟ್ಲರ್ ಕೂಡಾ ತನ್ನ ಅವಧಿಯಲ್ಲಿ ಪೊಲೀಸರ ಜತೆ ಇಂತಹ ಗೂಂಡಾಗಳನ್ನು ಸೇರಿಸಿ ಕಳಿಸುತ್ತಿದ್ದ. ಶುದ್ಧ ಭಯೋತ್ಪಾದಕರ ಹಾಗೆಯೇ ವರ್ತಿಸುವಲ್ಲಿ ನಿಸ್ಸೀಮರಾಗಿರುವ ಇಂತಹ ಗೂಂಡಾಗಳು ಹಿಂದುಮುಂದು ನೋಡದೆ ಹಿಂಸೆಯಲ್ಲಿ ತೊಡಗುತ್ತಾರೆ. ಮಾತಿನಲ್ಲಿ ತುಪ್ಪ ಸವರುವ ಮೋದಿ ಮತ್ತು ಅವರ ಗುಂಪಿಗೆ ಬೆನ್ನ ಹಿಂದಿನಿಂದ ಬೆಂಕಿ ಹಚ್ಚುವ ಹಿಂಸೆಯನ್ನು ಪ್ರಚೋದಿಸುವ ಗುಣ ಮೊದಲಿನಿಂದಲೂ ಇದ್ದದ್ದೇ. ಸರ್ಕಾರ ಈಗ ಸರ್ಕಾರವಾಗಿ‌ ಉಳಿದಿಲ್ಲ. ಇಬ್ಬರು ಗುಜರಾತಿ ಸರ್ವಾಧಿಕಾರಿಗಳ ಕೈಯಲ್ಲಿ ದೇಶ ನಲುಗುತ್ತಿದೆ.

2019ರ ಆರಂಭದಿಂದ ಅಮಿತ್ ಶಾ ಕುತಂತ್ರದಲ್ಲಿ ಹೊರಬರುತ್ತಿರುವ ಒಂದೊಂದು ಕಾನೂನು ಕೂಡಾ ಅತ್ಯಂತ ಅಪಾಯಕಾರಿಯಾದ ಬೆಳವಣಿಗೆಯನ್ನು ಸೃಷ್ಟಿಸುತ್ತಿದೆ. ದೇಶದ ಮುಸ್ಲಿಮರು ಮತ್ತು ಹಿಂದೂಗಳು ಸ್ವಲ್ಪಮಟ್ಟಿಗೆ ಐಕ್ಯದಿಂದಿರುವುದರಿಂದಾಗಿ ರಾಜಕೀಯ ಅವರಿಗೆ ಬೇಕಾದಂತೆ ನಡೆಸಲಾಗುತ್ತಿಲ್ಲ ಎಂಬುದು ಅವರ ಮನಸ್ಸಿನಲ್ಲಿ ಮೂಡಿದ ವಿಚಾರ. ಹಾಗಾಗಿ ಇಂತಹ ಕಾನೂನುಗಳನ್ನು ಆಗಾಗ ತರುತ್ತ, ಮುಸ್ಲಿಮರ ಹೆಸರನ್ನು ಅನಗತ್ಯವಾಗಿ ಮುಂದಿಡುತ್ತ, ಹಿಂದೂಗಳ ಮನಸ್ಸಿನಲ್ಲಿ ಕೆಟ್ಟ ಅಭಿಪ್ರಾಯವನ್ನು ಸೃಷ್ಟಿಸುತ್ತ ಕೋಮುವಾದವನ್ನು, ಹಿಂಸೆಯನ್ನು‌ ಚಾಲ್ತಿಯಲ್ಲಿರುವಂತೆ ಮಾಡುವಲ್ಲಿ ಇವರು ಯಶಸ್ವಿಯಾಗುತ್ತಿದ್ದಾರೆ. ಇದು ಶುದ್ಧ ಬ್ರಿಟಿಷ್ ಅಧಿಕಾರಿಗಳ‌ ಕ್ರಮವೂ ಹೌದು. ಹಿಂದೂ ಮುಸ್ಲಿಮರ ನಡುವೆ ಬೆಂಕಿ ಹಚ್ಚಿ ತಮ್ಮ ಕಾರ್ಯ ಸಾಧಿಸುತ್ತಿದ್ದದ್ದು ಬ್ರಿಟಿಷರು.

ಈ ನಡುವೆ ಕ್ರಾಂತಿಕಾರಿ ಭಗತ್ ಸಿಂಗ್ ನ ದೂರಾಲೋಚನೆಯ ಮಾತೊಂದು ನೆನಪಾಗುತ್ತದೆ. ಜೈಲಿನಿಂದ ಆತ ತನ್ನ ತಾಯಿಗೆ ಬರೆದ ಪತ್ರದಲ್ಲಿ, ‘ಅಮ್ಮಾ ನನಗೆ ಭಾರತ ಸ್ವತಂತ್ರವಾಗುವುದರಲ್ಲಿ ಅನುಮಾನವಿಲ್ಲ. ಆದರೆ ಬಿಳಿಮುಖಗಳು ಕುಳಿತಿದ್ದ ಕುರ್ಚಿಯಲ್ಲಿ ಕರಿಮುಖ(ಭಾರತೀಯರು) ಕೂರುವದಷ್ಟೇ ಸ್ವಾತಂತ್ರ್ಯದ ಫಲವಾದೀತೇ ಎಂಬ ಭಯ ನನ್ನನ್ನು ಕಾಡುತ್ತಿದೆ’ ಎಂದು ಬರೆದಿದ್ದ. ಇಪ್ಪತ್ತಮೂರರ ಚಿರಯುವಕನ ಈ ಆಲೋಚನೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಇದು ಒಬ್ಬ ನಿರ್ಭಯಿ ಕ್ರಾಂತಿಕಾರಿಯಲ್ಲಿ ಮೂಡಿದ ‘ಭಯ’ ಎಂಬುದನ್ನು‌ ನಾವು ಗಮನಿಸಬೇಕಿದೆ.

ಭಗತ್ ಅನುಮಾನದಂತೆ ಇಂದು ಬಿಳಿಮುಖಗಳು ಬಿಟ್ಟುಹೋದ ಕುರ್ಚಿಯಲ್ಲಿ ಕುಳಿತವರು ಮತ್ತದೇ ಬಿಳಿಯರಂತೆ‌ ಕಾಣುತ್ತಿದ್ದಾರೆ. ನಮ್ಮ ದೇಶದಲ್ಲಿ ನಮ್ಮ ಜನಗಳಿಗೇ ಸ್ವಾತಂತ್ರ್ಯವಿಲ್ಲ‌. ಮಾತನಾಡುವ, ಪ್ರಶ್ನಿಸುವ ಹಕ್ಕನ್ನು ಕ್ರಮೇಣ ಕಸಿಯಲಾಗುತ್ತಿದೆ. ಪೊಲೀಸರ ಜತೆ ಗೂಂಡಾಗಳನ್ನು ಬೆರೆಸಿ ಜನರ ವಿರುದ್ಧ ಲಾಠಿ ಪ್ರಹಾರ ಮಾಡಲಾಗುತ್ತಿದೆ. ಊಹಿಸಿ‌ ನೋಡಿ, ಜನರ ಪರವಾಗಬೇಕಿದ್ದ ಸರ್ಕಾರ ಜನರನ್ನು ವಿರೋಧಿಸುತ್ತಿದೆ. ಜನರು ಸರ್ಕಾರವನ್ನು ವಿರೋಧಿಸುವುದು ಸಾಮಾನ್ಯ. ಆದರೆ ಜನರನ್ನು ಸರ್ಕಾರ ವಿರೋಧಿಸುವುದು ಮೋದಿ ಶಾನಂತಹ ವಿಷಕಾರಿ ಮನಸ್ಸುಗಳು ಅಧಿಕಾರ ಹಿಡಿದರೆ ಮಾತ್ರ ಸಾಧ್ಯ.

ಏನೇ ಇರಲಿ, ಹಿಂಸೆಗೆ ಎದೆಯೊಡ್ಡಿ, ಗುಂಡಿಗೆ ಎದೆಯೊಡ್ಡಿ ವಿದ್ಯಾರ್ಥಿಗಳು ನಿಂತಿದ್ದಾರೆ. ಅನ್ಯಾಯವಾಗಿ ಪೊಲೀಸರಲ್ಲದ ದುಷ್ಕರ್ಮಿಗಳಿಂದ ಹಿಂಸೆ ಅನುಭವಿಸಿದ್ದಾರೆ‌. ಈ ಅನ್ಯಾಯವನ್ನು ಅನ್ಯಾಯವಾಗಿ ಉಳಿಯಲು ಬಿಡಲೇಬಾರದು. ಈ ಕ್ರೌರ್ಯದ ವಿರುದ್ಧ ದೊಡ್ಡ ಹೋರಾಟ, ಪ್ರತಿಭಟನೆ ನಡೆಯದೇ ಹೋದರೆ ನಮ್ಮ ತಲೆಗೆ ನಾವೇ ಕಲ್ಲು ಹೊತ್ತು ಹಾಕಿದಂತೆ. ಇಂದು ಪ್ರತಿಭಟಿಸದಿದ್ದರೆ ನಾಳೆ ಅದು ಮುಂದುವರಿಯುತ್ತದೆ. ಖಂಡಿತವಾಗಿಯೂ ಮುಂದುವರಿಯಲು ಬಿಡಬಾರದು. ಈಗ ನಡೆಯುತ್ತಿರುವ ಪ್ರತಿಭಟನೆಯಷ್ಟೇ ಇಲ್ಲಿನ ವಿದ್ಯಾರ್ಥಿಗಳ ಶಕ್ತಿ ಎಂದು ಭಾವಿಸಿದ್ದರೆ ಅದು ಈ ಸರ್ವಾಧಿಕಾರಿಗಳ ಮೂರ್ಖತನವಷ್ಟೆ.

ಜನರ ಶಕ್ತಿಯ ಮುಂದೆ ಸರ್ಕಾರ ದುರ್ಬಲವಾಗಲೇಬೇಕು. ಜನರಿಲ್ಲದೆ ಯಾವ ಗೋಡೆಗೆ ಇವರು ಸರ್ಕಾರ ನಡೆಸುತ್ತಾರೆ. ಗಾಂಧಿಯ ಅಸಹಕಾರ ಚಳವಳಿ ಇಂದು ಅಗತ್ಯವಿದೆ. ಅಸಹಕಾರವೇ ಹೋರಾಟದ‌ ಶಕ್ತಿ. ಸರ್ಕಾರದ ಅಸಾಂವಿಧಾನಿಕ‌ ನಡೆಗಳ‌ ವಿರುದ್ಧ ಜನರು ಅಸಹಕಾರ ತೋರಬೇಕು. ಸದ್ಯಕ್ಕೆ ನಮ್ಮ ಮುಂದೆ ಸರ್ಕಾರವೂ ಇಲ್ಲ, ಸುವ್ಯವಸ್ಥೆಯೂ ಇಲ್ಲ ಎಂಬುದು ನಮ್ಮ ದುರಂತ.‌ ಸಂವಿಧಾನ ವಿರೋಧಿ ಕಾನೂನುಗಳನ್ನು ಜಾರಿಗೆ‌ತರುತ್ತಲೇ‌ ಅಂಥದ್ದೇ ಮಾದರಿಯ ಹೊಸ ಸಂವಿಧಾನವನ್ನು ರಚಿಸುವ ಅಪಾಯವನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಜನತೆ ಎಚ್ಚರದಲ್ಲಿಲ್ಲದಿದ್ದರೆ ಈ ಇಬ್ಬರು ವ್ಯಾಪಾರಿಗಳಿಂದ ‘ಭಾರತ’ ಮಾರಾಟವಾಗಲೂ ಬಹುದು.

LEAVE A REPLY

Please enter your comment!
Please enter your name here