ಸಿನಿಮ ವಿಮರ್ಶೆ

ಎಂ. ಅಶೀರುದ್ದೀನ್ ಆಲಿಯಾ, ಮಂಜನಾಡಿ

ನೋವಿನ ಮತ್ತು ಹೋರಾಟದ ಕತೆಯಾದ “ಛಾಪೆಕ್” 2020 ರ ಆರಂಭದಲ್ಲಿ ವಿಮರ್ಶೆಯನ್ನು ಎದುರಿಸಿ ಮೆಚ್ಚುಗೆ ಪಡೆದ ಸಿನಿಮ. ಆಸಿಡ್ ದಾಳಿಗೊಳಗಾಗಿ ದೌರ್ಜನ್ಯಕ್ಕೀಡಾದ ಹಲವಾರು ಯುವತಿಯರ ಹೋರಾಟದ ದ್ವನಿಯಾಗಿ ದುರಂತ ಮಯ ಬದುಕಿಗೆ ಬೆಳಕಾಗಿ ಮೂಡಿದ ಸಿನಿಮ. “ಛಾಪಕ್” ಒಂದು ಹುಡುಗಿಯ ನೋವಿನ ಕಥೆ ಮಾತ್ರವಲ್ಲ ಆಸಿಡ್ ದೌರ್ಜನ್ಯಕ್ಕೀಡಾದ ಹಲವು ಯುವತಿಯರ ನೋವಿನ ದ್ವನಿಯಾಗಿದೆ ದುರಾದೃಷ್ಟಕರವೆಂದರೆ, ಇಂತಹ ಒಳ್ಳೆಯ ಸಿನಿಮಗಳನ್ನು ಸಹ ಬಹಿಷ್ಕರಿಸುವ ಕಲಾ ಪ್ರಿಯರೆನಿಸಿಕೊಂಡ ಕಲೆಯ ಕೊಲೆಗಾರರು ಭಾರತದಲ್ಲಿ ಇದ್ದಾರೆ ಎಂಬುವುದಾಗಿದೆ.

ಇಂದು ಕಲೆ ಮತ್ತು ಸಾಂಸ್ಕೃತಿಕ ರಂಗದಲ್ಲಿ ಅಧಾರ್ಮಿಕತೆ ಮತ್ತು ಕೋಮುವಾದ ತನ್ನ ಬೇರನ್ನು ವ್ಯಾಪಕವಾಗಿ ಹರಡಿದೆ. ಆಡಳಿತ ವರ್ಗದ ವಿರುದ್ಧ ಪ್ರತಿಭಟಿಸುವುದು, ಮಾತನಾಡುವುದು ದೇಶದ್ರೊಹವಾಗಿ ಬಿಟ್ಟಿದೆ. ಕಳೆದ ತಿಂಗಳು ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ಸಬರಮತಿ ಟಿ ಪಾಯಿಂಟ್ ನಲ್ಲಿ ಗೂಂಡಾಗಳಿಂದ ಅಕ್ರಮಕ್ಕೊಳಗಾದ ವಿದ್ಯಾರ್ಥಿನಿಗಳ ಪ್ರತಿಭಟನೆಯಲ್ಲಿ ದೀಪಿಕಾ ಅವರ ಬೆನ್ನಿಗೆ ನಿಂತಳು ಎಂಬ ಏಕೈಕ ಕಾರಣದಿಂದ ಹಿಂದುತ್ವ ವಾದಿಗಳ ಕೆಂಗಣ್ಣಿಗೆ ಗುರಿಯಾದಳು. ಮತ್ತು ಅವಳನ್ನು ದೇಶದ್ರೋಹಿಯಾಗಿ ಗುರುತಿಸಲಾಯಿತು. ಸಿನಿಮವನ್ನು ಬಹಿಷ್ಕರಿಸಿದ್ದರು. ಸಿನಿಮ ಹಣಗಳಿಕೆಯೇ ಮೇಲು ಸ್ವಲ್ಪ ಹೊಡೆತ ಬಿತ್ತು. IMDB ರೇಟಿಂಗ್ ಕುಸಿದಿತ್ತು. ಸಿನಿಮದ ಮೇಲೆ ಅಪವಾದ ಹೊರಿಸಿದರು. ಅಪಪ್ರಚಾರ ಮಾಡಿದರು. ಇದೆಲ್ಲದಕ್ಕೆ ಕಾರಣ ಏನೆಂದರೆ JNU ವಿಧ್ಯಾರ್ಥಿನಿಗಳ ನೋವಿಗೆ ಆಕೆ ಸ್ಪಂದಿಸಿದಳು ಎಂದಾಗಿತ್ತು.

ಹಿಂದೆಂದೂ ಇಂತಹ ಅವಸ್ಥೆ ಇರಲಿಲ್ಲ ಕಲೆಯಲ್ಲಿ ರಾಜಕೀಯ ಅಥವಾ ಕೋಮುವಾದ ನುಸುಳಿರಲಿಲ್ಲ. ಕಲೆಯನ್ನು ಕಲೆಯಾಗಿ ಎಲ್ಲರು ಸ್ವೀಕರಿಸಿ ಪ್ರೀತಿಸಿದ್ದರು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ಬಾರತದ ಉದ್ದಗಲಕ್ಕೂ ಕೋಮುವಾದ ಬೇರು ಬಿಟ್ಟಿದೆ. ಕೋಮುವಾದವನ್ನು ಪ್ರಚುರ ಪಡಿಸುವ ಹಿಂದುತ್ವ ಅಜಂಡಾದ ಸಿನಿಮಾಗಳಿಗೆ ಹೆಚ್ಚು ಬೇಡಿಕೆ ಇದೆ ಹೋರಾಟದ ಸ್ಫೂರ್ತಿ ನೀಡುವ ಸತ್ಯ ಘಟನಾಧಾರಿತ ಸಾಮಾಜಿಕ ಕಳಕಳಿಯ ಸಿನಿಮಾಗಳಿಗೆ ಬೇಡಿಕೆಯಿಲ್ಲ. ಆದರೂ, ಒಂದು ಖುಷಿಯ ವಿಷಯವೇನೆಂದರೆ ಕಲೆಯನ್ನು ಪ್ರೀತಿಸುವ ಕೆಲವು ಪ್ರಜ್ಞಾವಂತ ಕಲಾ ಪ್ರೇಮಿಗಳು ಇನ್ನೂ ಬದುಕಿ ಇದ್ದಾರೆ. ಛತ್ತೀಸಘಡ ಮತ್ತು ಉತ್ತರ ಪ್ರದೇಶದಲ್ಲಿ ಹಲವು ರಾಜಕಾರಣಿಗಳು ನಾಯಕರು ಸಿನಿಮವನ್ನು ನೋಡಿ ಪ್ರೋತ್ಸಾಹಿಸಿದ್ದರು. ಅಲ್ಲಿನ ಸರಕಾರ ತೆರಿಗೆ ವಿನಾಯಿತಿ ನೀಡಿತು. ಮಂಗಳೂರಿನಲ್ಲಿಯೂ ಉದ್ಯಮಿಯೊಬ್ಬರು ಒಂದು ಹೊತ್ತಿನ ಷೋ ಬುಕ್ ಮಾಡಿ ಸಾರ್ವಜನಿಕರಿಗೆ ಉಚಿತವಾಗಿ ಟಿಕೆಟ್ ನೀಡಿ ಬೆಂಬಲಿಸಿದ್ದರು.

“ಛಾಪೆಕ್” ದೌರ್ಜನ್ಯಕ್ಕೊಳಗಾದವಳ ಕಥೆ. ಈ ಸಿನಿಮದ ಸುತ್ತ ಮೂರು ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳ ಕತೆ ಕಾಣ ಸಿಗುತ್ತದೆ ಒಂದು ಆಸಿಡ್ ದಾಳಿಗೊಳಗಾದ ಲಕ್ಷ್ಮಿ ಅಗರವಾಲ್, ಆಕೆಯ ಬಗ್ಗೆ ಸಿನಿಮಾ ತೆಗೆದು ದೇಶದ್ರೋಹಿಯಾದ ದೀಪಿಕಾ ಪಡುಕೋಣೆ ಮತ್ತು ಆಕೆ ದೇಶದ್ರೋಹಿಯಾಗಲು ಕಾರಣ ಕರ್ತೆಯಾದ JNU ವಿಧ್ಯಾರ್ಥಿನಿ ಎಯೇಷಾ ಘೋಷ್. ಈ ಮೂರು ಹೆಣ್ಣು ಮಕ್ಕಳ ಮೇಲೆ ನಡೆದ ದೌರ್ಜನ್ಯ ಮೆದುಳಿನಲ್ಲಿ ಕ್ರೋಧ ತುಂಬಿದವರಿಂದ ನಡೆದಿದೆ. ದೀಪಿಕಾ ನಿಜ ಜೀವನದಲ್ಲಿಯೂ ನಾಯಕಿಯಾದಳು. ಮೌನ ತಾಳಿರುವ ಇತರ ಪ್ರಮುಖ ಸಿನಿಮ ನಟ ನಟಿಯರಿಗೆ ದೀಪಿಕಾ ಮಾದರಿಯಾಗುತ್ತಾಳೆ ರೇಟಿಂಗ್ ಕುಸಿದಾಗ ಆಕೆ ಹೃದಯ ಮೆಚ್ಚುವ ಮಾತನಾಡಿದಳು “ರೇಟಿಂಗ್ ಬದಲಿಸಬಹುದು ನನ್ನ ಮನಸ್ಸನ್ನಲ್ಲ”

2005 ರ ತನ್ನ 15ನೇ ವಯಸ್ಸಿನಲ್ಲಿ ತನಗಿಂತ ಹಿರಿಯ ವಯಸ್ಸಿನ 32ರ ಹರೆಯದ ಯುವಕನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ ಕಾರಣದಿಂದ ಆಸಿಡ್ ದಾಳಿಗೊಳಗಾದ ಲಕ್ಷ್ಮಿ ಅಗರವಾಲ್ ದೆಹಲಿಯ ಮಾಧ್ಯಮ ಕುಟುಂಬದಲ್ಲಿ ಹುಟ್ಟಿ ಬೆಳೆದವಳು. ಕಲಿಕೆಯನ್ನು ತೊರೆದು ಪುಸ್ತಕ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿರುತ್ತಾಳೆ. ತಾನು ಸಂಗೀತ ಕಲಿತು ಹಾಡುಗಾರ್ತಿಯಾಗಬೇಕೆಂಬ ಕನಸನ್ನು ಹೊತ್ತು ಅದಕ್ಕಾಗಿರುವ ಪ್ರಯತ್ನದಲ್ಲಿರುವ ಸಮಯದಲ್ಲಿ ಪ್ರೇಮ ನಿವೇದನೆಯಿಂದ ತನ್ನನ್ನು ನಿರಂತರ ಸತಾಯಿಸುತ್ತಿದ್ದ ಗುಡ್ಡು ಎಂಬ ನದೀಮ್ ಖಾನ್ ಆಸಿಡ್ ಎರಚಿ ಆಕೆಯ ಭವಿಷ್ಯದ ಮೇಲೆ ಬರೆಯೆಳೆಯುತ್ತಾನೆ. ಆಸಿಡ್ ಬೇಗೆಯಿಂದ ಉರಿದು ಹೋಗಿ ವಿಕೃತವಾದ ತನ್ನ ಮುಖವನ್ನು ಹೊತ್ತು ಆಕೆ ಹೋರಾಟ ರಂಗಕ್ಕೆ ಇಳಿಯುತ್ತಾಳೆ. ಆಸಿಡ್ ನಿಷೇಧಿಸುವಲ್ಲಿ, ಅಂತಹ ಕೃತ್ಯವೆಸಗಿದವರಿಗೆ ಕಠಿಣ ಶಿಕ್ಷೆಯನ್ನು ಜಾರಿ ಗೊಳಿಸುವಲ್ಲಿ ಹೋರಾಡಿ ಯಶಸ್ವಿಗೊಂಡ ಮಹಿಳೆಯರಲ್ಲಿ ಆಕೆ ಮೊದಲಿಗಳು. ಈಗಲೂ ಸಹ ಆಕೆ ಹೋರಾಟ ಮುಂದುವರಿಸುತಿದ್ದಾಳೆ ಯಾಕೆಂದರೆ ಭಾರತದಲ್ಲಿ ಆಸಿಡ್ ದೌರ್ಜನ್ಯವು ನಿಲ್ಲಲಿಲ್ಲ ಆಸಿಡ್ ವ್ಯಾಪಾರವು ನಿಲ್ಲಲಿಲ್ಲ ಹೋರಾಟದೊಂದಿಗೆ ಬೆಂಬಲಾವಾಗಿ ದೆಹಲಿಯ ಅಲೋಕ್ ದೀಕ್ಷಿತ್ ನೊಂದಿಗೆ ಬದುಕುತ್ತಿದ್ದಾಳೆ ಅವರಿಗೆ ಒಂದು ಮಗಳು ಇದ್ದಾಳೆ.

ಮಾಲತಿಯ ಪಾತ್ರದಲ್ಲಿ ದೀಪಿಕಾ ಪಡುಕೋಣೆಯ ಅಭಿನಯವು ಮೆಚ್ಚುವಂತದ್ದು. NGO ಹೋರಾಟಗಾರನ ಪಾತ್ರದಲ್ಲಿ ನಟ ವಿಕ್ರಾಂತ್ ಮೆಸ್ಸೇ ‘ಅಮೋಲ್’ ಪಾತ್ರದಲ್ಲಿ ನಟಿಸಿದ್ದಾರೆ ಮೇಘನಾ ಗುಲ್ಜಾರ್ ಸಿನಿಮಾ ನಿರ್ದೇಶಿದರು, ಫಾಕ್ಸ್ ಬ್ಯಾನರ್ ಅಡಿಯಲ್ಲಿ ದೀಪಿಕಾ ಸ್ವತಃ ನಿರ್ಮಾಣ ಮಾಡಿದ್ದಾಳೆ ದೀಪಿಕಾ ಪಡುಕೋಣೆ ವಿಕ್ರಾಂತ್ ಮೆಸ್ಸೇ ಅಮೋಘವಾಗಿ ಅಭಿನಯಿಸಿದ್ದಾರೆ “ಚಾಪೆಕ್” ಮತ್ತು “ಖುಲ್ ನೇ ದೋ” ಹಾಡುಗಳು ಉತ್ತಮವಾಗಿದೆ

LEAVE A REPLY

Please enter your comment!
Please enter your name here