ಲೇಖಕರು:ಸುಹಾನ ಸಫರ್
ಕಾನೂನು ವಿದ್ಯಾರ್ಥಿ, ಮಂಗಳೂರು

ಜಗತ್ತಿನ ಅತ್ಯಂತ ಅಮೂಲ್ಯವಾದ ಸಂಪನ್ಮೂಲ ಮಕ್ಕಳಾಗಿದ್ದಾರೆ ಮತ್ತು ಉತ್ತಮ ಭರವಸೆ ಕೂಡಾ ಅವರೇ ಆಗಿದ್ದಾರೆ.
ಜೊನ್.ಎಫ್. ಕೆನ್ನಡಿ

“ಇಂದಿನ ಮಕ್ಕಳೇ ನಾಳಿನ ಪ್ರಜೆಗಳು” ಎಂಬ ಮಾತೊಂದಿದೆ. ಆದರೆ ಮಕ್ಕಳಿಗಾಗಿ ಸಿಗಬೇಕಾದ ಹಕ್ಕು ,ಸ್ಥಾನಮಾನ, ರಕ್ಷಣೆ ಮತ್ತು ಭದ್ರತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಏಕೆಂದರೆ ಸಮಾಜದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಹೆಚ್ಚುತ್ತಿರುವ ಆತಂಕಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯವು ಒಂದಾಗಿದೆ. ನಮಗೆ ಗೊತ್ತಿಲ್ಲದೆ ಇಂತಹ ದೌರ್ಜನ್ಯವು ಕೇವಲ ಮಗುವಿಗೆ ಅಥವಾ ಅವರ ಹತ್ತಿರದವರಿಗೆ ಮತ್ರ ಸಂಬಂಧಪಟ್ಟಿರದೇ ಇಡೀ ಸಮಾಜಕ್ಕೆ ಅತೀ ಕೆಟ್ಟ ರೀತಿಯಲ್ಲಿ ಪ್ರಭಾವ ಬೀರುತ್ತಿದೆ. ಇದು ಮಗುವಿನ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಈ ಮಕ್ಕಳ ಮೇಲಿನ ದೌರ್ಜನ್ಯವು ಕೇವಲ ಒಂದು ಜಾತಿಗೋ, ಲಿಂಗಕ್ಕೋ, ಸಮುದಾಯಕ್ಕೋ ಅಥವಾ ಆರ್ಥಿಕ ಸ್ಥಾನಮಾನಕ್ಕೋ ಸಂಬಂಧ ಪಟ್ಟಿರುವುದಾಗಿರುವುದಿಲ್ಲ.

ಭಾರತವೆಂಬ ಈ ಬೃಹತ್ ರಾಷ್ಟ್ರಕ್ಕೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ. ಮಹಿಳೆಯರ ಬಗ್ಗೆ ಹೇಳುವುದಾದರೆ, “ಇತಿಹಾಸದುದ್ದಕ್ಕೂ ಮಹಿಳೆಯರಿಗೆ ಅತ್ಯಂತ ಗೌರವಾನ್ವಿತ ಸ್ಥಾನವಿದೆ. ಈ ಪ್ರತಿಷ್ಠೆಯ ಸ್ಥಾನವನ್ನು ಭಾರತೀಯ ಸಂಸ್ಕೃತಿ ಅವರಿಗಾಗಿ ಮೀಸಲಿಟ್ಟಿದೆ. ಈ ಸ್ಥಾನಮಾನದ ಕಾರಣ ಇಂದಿಗೂ ಅವರಿಗೆ ಗೌರವ ದೊರಕುತ್ತದೆ.” ಇಂತಹಾ ಬರಹಗಳು, ಮೇಲಿನ ಚರ್ಚೆಗಳು ಕಂಡು ಬಂದಾಗ, ಮೂಲಭೂತವಾಗಿ ವಾಸ್ತವಿಕತೆಯನ್ನು ಗಮನಿಸಿದರೆ ಇದೊಂದು ಪೊಳ್ಳು ಚರ್ಚೆ ಎಂಬ ಅನುಮಾನಗಳು ಸಹಜವಾಗಿ ಬರುತ್ತದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 2007ರ ವರದಿಯ ಪ್ರಕಾರ ದೇಶದ ಅರ್ಧದಷ್ಟು ಮಕ್ಕಳು ವಿವಿಧ ರೀತಿಯ ಲೈಂಗಿಕ ಕಿರುಕುಳವನ್ನು ಎದುರಿಸುತ್ತಿದ್ದು, ಶೇ.21ರಷ್ಟು ತೀವ್ರವಾದ ಲೈಂಗಿಕ ಕಿರುಕುಳವಾಗಿರುತ್ತದೆ. ದೇಶದಲ್ಲಿ ಪ್ರತೀ ಸೆಂಕಡಿಗೂ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ ಎಂಬ ಆತಂಕಕಾರಿ ಅಂಶವೂ ವೃದ್ಧಿಯಾಗಿರುತ್ತದೆ. ಅತ್ಯಂತ ಹೆಚ್ಚು ಲೈಂಗಿಕ ಕಿರುಕುಳ ನಡೆಯುವ ರಾಜ್ಯದ ಸಾಲಿನಲ್ಲಿ ಅಸ್ಸಾಂ(55%), ದೆಹಲಿ (41%), ಆಂಧ್ರ ಪ್ರದೇಶ (33%) ಮತ್ತು ಬಿಹಾರ (33.27%) ಸೇರುತ್ತದೆ.
ಕಡಿಮೆ ಅಸ್ಪಷ್ಟ ಮತ್ತು ಹೆಚ್ಚು ಕಠಿಣವಾದ ಕಾನೂನು ನಿಬಂಧನೆಗಳ ಮೂಲಕ ಲೈಂಗಿಕ ಕಿರುಕುಳ, ಲೈಂಗಿಕ ಹಿಂಸೆ, ದೌರ್ಜನ್ಯವನ್ನು ಮತ್ತು ಅಶ್ಲೀಲ ರಚನೆಗಳಂತಹ ಘೋರ ಅಪರಾಧಗಳಿಂದ ಪರಿಣಾಮಕಾರಿಯಾಗಿ ಮಕ್ಕಳನ್ನು ರಕ್ಷಿಸಲು ಪೂಕ್ಸೋ (Pocso) (ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ಸ್ ಫ್ರಂ ಸೆಕ್ಷುವಲ್ ವಫೆನ್ಸೆಸ್) ಅಂದರೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯನ್ನು 2012ರಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಯಿತು.
ವಿಚಾರಣೆಗೆ ಸಂಬಂಧಿಸಿದಂತೆ ಮಕ್ಕಳ ಸ್ನೇಹಿ ವ್ಯವಸ್ಥೆಯನ್ನು ಒದಗಿಸುವುದು ಮತ್ತು ಅಪರಾಧಿಗಳಿಗೆ ಶಿಕ್ಷೆಯನ್ನು ನೀಡುವುದು ಇದರ ಮೂಲ ಉದ್ದೇಶವಾಗಿದೆ. ಈ ಕಾಯ್ದೆಯಡಿಯಲ್ಲಿ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಯನ್ನು “ಮಗು” ಎಂದು ವ್ಯಾಖ್ಯಾನಿಸಲಾಗಿದೆ. ನ್ಯಾಯಾಂಗ ವ್ಯವಸ್ಥೆಯ ಕೈಯಲ್ಲಿ ಮಗುವನ್ನು ಮರು ಬಲಿಪಶುವನ್ನಾಗಿ ಮಾಡುವುದು ತಪ್ಪಿಸಲು ಈ ಕಾಯಿದೆಯ ನಿಬಂಧನೆಗಳನ್ನು ಹೂಡುತ್ತದೆ. ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಮೂಲಕ ಈ ರೀತಿಯ ಮಕ್ಕಳ ಪ್ರಕರಣಗಳನ್ನು ವಿಚಾರಣೆ ನಡೆಸಲು ಅನುವು ಮಾಡಿಕೊಡುತ್ತದೆ.
2012ರ ಪೋಕ್ಸೋ ಕಾಯಿದೆ ಜಾರಿಗೆ ಬರುವುದಕ್ಕಿಂತ ಮುಂಚಿತವಾಗಿ ಮಕ್ಕಳಿಗಾಗಿ ವಿಶೇಷ ಶಾಸನವೆಂದರೆ ಅದು ಗೋವಾ ಮಕ್ಕಳ ಕಾಯ್ದೆ, 2003 ಆಗಿರುತ್ತದೆ. ಆದ್ದರಿಂದ ಮಕ್ಕಳ ಮೇಲಿನ ದೌರ್ಜನ್ಯವನ್ನು ಕೇವಲ ಐಪಿಸಿಯ ಕೆಲವು ಸೆಕ್ಷನ್‍ಗಳ ಸಹಾಯದಿಂದ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ಅವೆಂದರೆ ಐಪಿಸಿ ಸೆಕ್ಷನ್ 375-ಅತ್ಯಾಚಾರದ ಐಪಿಸಿ ಸೆಕ್ಷನ್ 354 ಅದು ಮಹಿಳೆಯ ನಮ್ರತೆಯನ್ನು ಮೀರಿಸುವುದು ಮತ್ತು ಐಪಿಸಿ ಸೆಕ್ಷನ್ 377 ಸ್ವಾಭಾವಿಕವಲ್ಲದ ಅಪರಾಧಿಗಳು ಅದಾಗ್ಯೂ ಅನೇಕ ಲೋಪದೋಷಗಳ ಕಾರಣದಿಂದಾಗಿ ಭಾರತದ ದಂಡ ಸಂಹಿತೆಯನ್ನು ಪರಿಣಾಮಕಾರಿಯಾಗಿ ಈ ಅಪರಾಧಗಳಿಗೆ ವಿಧಿಸಲಾಗುತ್ತಿರಲಿಲ್ಲ. ಆ ಲೋಪದೋಷಗಳೆಂದರೆ, ಈ ಸೆಕ್ಷನ್‍ಗಳು ಪುರುಷ ಸಂತ್ರಸ್ತರನ್ನು ಒಳಗೊಳ್ಳುವುದಿಲ್ಲ. ಹಾಗೆಯೇ ಪೆನೋ ವೆಜಿನಲ್ ಸಂಭೋಗವನ್ನು ಹೊರತುಪಡಿಸಿ ಬೇರೆ ಯಾವ ಲೈಂಗಿಕ ಕ್ರಿಯೆಯಿಂದಲೂ ರಕ್ಷಣೆ ಇದರಿಂದ ದೊರೆಯುವುದಿಲ್ಲ ಹಾಗೂ ಐಪಿಸಿ ದುರ್ಬಲ ದಂಡವನ್ನು ವಿಧಿಸುತ್ತದೆ ಮತ್ತು ಇದನ್ನು ಸಂಯುಕ್ತ ಅಪರಾಧಗಳ ಗುಂಪಿಗೆ ಸೇರಿಸಲಾಗಿದ್ದು ಸುಲಭವಾಗಿ ರಾಜಿ ಮಾಡಿಕೊಳ್ಳಬಹುದಾಗಿತ್ತು. ಆದ್ದರಿಂದ ಮಕ್ಕಳಿಗೆ ಕಾನೂನು ಅನ್ವಯಿಸಲು ಸಾಧ್ಯವಿರಲಿಲ್ಲ.
ಈ ಎಲ್ಲಾ ಲೋಪದೋಷಗಳನ್ನು ನಿವಾರಿಸಲೆಂದೇ ಜಾರಿಗೆ ಬಂದ ಕಾಯಿದೆ ಅದು 2012ರ ಪೋಕ್ಸೋ ಕಾಯಿದೆಯಾಗಿದೆ. ಈ ಕಾಯಿದೆ ನವೆಂಬರ್ 14ರಂದು ಜಾರಿಗೆ ಬಂದಿತು. ಈ ಕಾಯಿದೆಗೆ 2011ರ ಲೈಂಗಿಕ ಅಪರಾಧಿಗಳಿಂದ ಮಕ್ಕಳ ರಕ್ಷಣೆ (ತಿದ್ದುಪಡಿ) ಮಸೂದೆಯು ಕೆಲವು ಬದಲಾವಣೆಯನ್ನು ತಂದಿದೆ. ಈ ಮಸೂದೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಸ್ಮಿತಿ ಇರಾನಿಯವರು 18 ಜುಲೈ 2017ರಲ್ಲಿ ರಾಜ್ಯಸಭೆಯಲ್ಲಿ ಪರಿಚಯಿಸಿದರು ಮತ್ತು ಈ ಮಸೂದೆಯಲ್ಲಿ ಅನೇಕ ಸೆಕ್ಷನ್‍ಗಳ ತಿದ್ದುಪಡಿಯನ್ನು ಕೈಗೊಳ್ಳಲಾಯಿತು. ಈ ಕಾಯಿದೆಯಲ್ಲಿ ಲೈಂಗಿಕ ದೌರ್ಜನ್ಯವನ್ನು ಹಲವು ವಿಭಾಗಗಳನ್ನಾಗಿ ವಿಂಗಡಿಸಿ ಅದರಂತೆ ಶಿಕ್ಷೆ ವಿಧಿಸಲಾಗಿದೆ. ಅದರಲ್ಲಿ ಮೊದಲನೆಯದಾಗಿ,
ಪ್ರವೇಶಕ ಲೈಂಗಿಕ ದೌರ್ಜನ್ಯ: ಈ ದೌರ್ಜನ್ಯದ ವ್ಯಾಖ್ಯೆಯನ್ನು ಕಾಯಿದೆಯಲ್ಲಿ ನೀಡಲಾಗಿದೆ ಮತ್ತು ಈ ದೌರ್ಜನ್ಯವನ್ನು ಎಸಗಿದರೆ 7 ವರ್ಷದಿಂದ ಜೀವಾವಧಿಯವರೆಗೆ ಶಿಕ್ಷೆಯನ್ನು ಮತ್ತು ದಂಡವನ್ನು ವಿಧಿಸಲಾಗುತ್ತದೆ ಮತ್ತು ಕನಿಷ್ಠ ಶಿಕ್ಷೆಯನ್ನು ಈ ಮಸೂದೆಯು 7 ವರ್ಷದಿಂದ 10 ವರ್ಷಕ್ಕೆ ಹೆಚ್ಚಿಸಿರುತ್ತದೆ. ಅದೇ ಅಲ್ಲದೇ ಈ ದೌರ್ಜನ್ಯವನ್ನು 16 ವರ್ಷಕ್ಕಿಂತ ಕೆಳಗಿನ ಯಾವುದೇ ಮಗುವಿನ ಮೇಲೆ ಎಸಗಿದ್ದಲ್ಲಿ ಆತನಿಗೆ 20 ವರ್ಷದಿಂದ ಜೀವಾವಧಿಯ ವರೆಗೆ ಶಿಕ್ಷೆಯನ್ನು ದಂಡದೊಂದಿಗೆ ವಿಧಿಸುತ್ತದೆ.
ಎರಡನೇಯದಾಗಿ ಉಲ್ಪನಗೊಂಡ ಪ್ರವೇಶಕ ಲೈಂಗಿಕ ದೌರ್ಜನ್ಯ: ಈ ದೌರ್ಜನ್ಯವು ಪೋಲಿಸ್ ಅಧಿಕಾರಿ, ಸಶಸ್ತ್ರ ಪಡೆಯ ಸದಸ್ಯ ಅಥವಾ ಸಾರ್ವಜನಿಕ ಸೇವಕನಿಂದ ಮಗುವಿನ ಮೇಲೆ ಎಸಗಲ್ಪಟ್ಟ ಪ್ರವೇಶಕ ಲೈಂಗಿಕ ದೌರ್ಜನ್ಯವನ್ನು ಒಳಗೊಳ್ಳುತ್ತದೆ.
ಅಷ್ಟೇ ಅಲ್ಲದೇ ಲೈಂಗಿಕ ದೌರ್ಜನ್ಯವನ್ನು ಎಸಗಿದವನು ಮಗುವಿನ ಸಂಬಂಧಿಕನಾಗಿದ್ದಲ್ಲಿ ಮತ್ತು ಆ ಕಿರುಕುಳವು ಮಗುವಿನ ಜನನೇಂದ್ರೀಯ ಅಥವಾ ಲೈಂಗಿಕ ಅಂಗಗಳನ್ನು ಗಾಯಗೊಳಿಸಿದ್ದಲ್ಲಿ ಅಥವಾ ಆ ಮಗು ಗರ್ಭಿಣಿಯಾಗಿದ್ದಲ್ಲಿ ಈ ಕೃತ್ಯವನ್ನು ಒಳಗೊಳ್ಳುತ್ತದೆ.

2012ರ ಕಾಯಿದೆಯಲ್ಲಿರುವ ಈ ವ್ಯಾಖ್ಯಾನಗಳಲ್ಲದೇ 2019ರ ಮಸೂದೆಯು ಇನ್ನೆರಡು ಅಂಶಗಳನ್ನು ಇದರಲ್ಲಿ ಅಳವಡಿಸಿದೆ. ಅದೆಂದರೆ ಈ ದೌರ್ಜನ್ಯವು ಮಗುವಿನ ಸಾವಿಗೆ ಕಾರಣವಾಗುವುದು ಮತ್ತು ದೌರ್ಜನ್ಯವನ್ನು ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಎಸಗಿಸ್ದಲ್ಲಿ ಈ ಕೃತ್ಯವು ಒಳಗೊಳ್ಳುತ್ತದೆ. ಆದ್ದರಿಂದ 2012ರ ಕಾಯಿದೆಯಲ್ಲಿ ಈ ದೌರ್ಜನ್ಯಕ್ಕೆ 10 ವರ್ಷದಿಂದ ಜೀವಾವಧಿಯ ಶಿಕ್ಷೆಯ ವರೆಗೆ ಶಿಕ್ಷೆಯನ್ನು ನೀಡಿತ್ತು.
ಇನ್ನು ಮೂರನೇಯದಾಗಿ ಉಲ್ಬನಗೊಂಡ ಲೈಂಗಿಕ ದೌರ್ಜನ್ಯ: ಈ ಕಾಯ್ದೆಯಡಿ, ವ್ಯಕ್ತಿಯು ಯೋನಿ, ಶಿಶ್ನ, ಗುದಧ್ವಾರ ಅಥವಾ ಮಗುವಿನ ಸ್ತನವನ್ನು ಲೈಂಗಿಕ ಉದ್ದೇಶದಿಂದ ಸ್ಪರ್ಶಿಸುವುದು ಕೂಡಾ ಲೈಂಗಿಕ ದೌರ್ಜನ್ಯವೆಂದೆ ತಿಳಿಸುತ್ತದೆ. ಇದು ಪ್ರಾಕೃತಿಕ ವಿಕೋಪ ಮತ್ತು ಸಂಬಂಧಿಕರನ್ನಲ್ಲದೆ ಇನ್ನುಳಿದ ಅಂಶಗಳನ್ನು ಈ ಮಸೂದೆಯ ಮೂಲಕ ಸೇರ್ಪಡೆಗೊಳಿಸುತ್ತದೆ. ಅದೇನೆಂದರೆ ಆರಂಭಿಕ ಲೈಂಗಿಕ ಪ್ರಬುದ್ಧತೆಯನ್ನು ಸಾಧಿಸುವ ಉದ್ದೇಶದಿಂದ ಮಗುವಿಗೆ ಹಾರ್ಮೋನ್ ಕೆಲಸ ಮಾಡುವಂತೆ ಕೃತ್ಯ ವೆಸಗುವುದು ಅಥವಾ ಯಾವುದೇ ಕೆಮಿಕಲ್ ನೀಡುವುದು ಅಥವಾ ಅದಕ್ಕೆ ಸಹಾಯ ಮಾಡುದಾಗಿರುತ್ತದೆ.
ನಾಲ್ಕನೇಯದಾಗಿ ಅಶ್ಲೀಲ ಚಿತ್ರಗಳ ರಚನೆ: ಒಬ್ಬ ವ್ಯಕ್ತಿ ಮಗುವನ್ನು ಯಾವುದೇ ರೀತಿಯ ಮಾಧ್ಯಮಗಳಲ್ಲಿ ಲೈಂಗಿಕ ಸಂತೃಪ್ತಿಯ ಉದ್ದೇಶಕ್ಕಾಗಿ ಬಳಸುವುದನ್ನು ಇದು ಒಳಗೊಳ್ಳುತ್ತದೆ. ಮಗುವನ್ನು ಅಶ್ಲೀಲ ಚಿತ್ರಗಳ ರಚನೆಗೆ ಬಳಸಿ ಅದರಿಂದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವಾದರೆ ಆತನಿಗೂ ಶಿಕ್ಷೆಯನ್ನು ಈ ಕಾಯಿದೆಯು ಕಾಯ್ದಿರಿಸಿದೆ. ಮಗುವನ್ನು ಛಾಯಾಚಿತ್ರ, ವಿಡಿಯೋ, ಡಿಜಿಟಲ್ ಅಥವಾ ಕಂಪ್ಯೂಟರ್ ರಚಿತವಾದ ಚಿತ್ರವನ್ನು ಒಳಗೊಂಡ ಲೈಂಗಿಕ ಸ್ಪಷ್ಟ ನಡವಳಿಕೆಯ ಯಾವುದೇ ದೃಶ್ಯ ಚಿತ್ರಣವೂ ಕೂಡ ಅಶ್ಲೀಲತೆ ಎಂದು ಈ ಮಸೂದೆ ವ್ಯಾಖ್ಯಾನಿಸುತ್ತದೆ. ಈ ಹಿಂದಿನ 2012ರ ಕಾಯಿದೆಯಲ್ಲಿ 5 ವರ್ಷಗಳ ಗರಿಷ್ಠ ಶಿಕ್ಷೆ ವಿಧಿಸಲಾಗಿತ್ತು. ಆದರೆ 2019ರ ಈ ಮಸೂದೆಯಲ್ಲಿ 5 ವರ್ಷಗಳ ಕನಿಷ್ಠ ಶಿಕ್ಷೆ ಎಂದು ತಿಳಿಸುತ್ತದೆ ಮತ್ತು ಈ ಅಶ್ಲೀಲ ರಚನೆ ಪ್ರವೇಶಕ ಲೈಂಗಿಕ ದೌರ್ಜನ್ಯಕ್ಕೆ ಕಾರಣವಾದರೆ ಈ ಹಿಂದಿನ ಕಾಯಿದೆಯಲ್ಲಿ 10 ವರ್ಷಗಳ ಕನಿಷ್ಠ ಮತ್ತು ಜೀವಾವಧಿ ಗರಿಷ್ಠ ಶಿಕ್ಷೆಗಳನ್ನು ನೀಡಲಾಗುತ್ತಿತ್ತು. ಆದರೆ ಈಗ ಗರಿಷ್ಠ ಶಿಕ್ಷೆಯನ್ನು 20 ವರ್ಷಕ್ಕೆ ಹೆಚ್ಚಿಸಲಾಗಿದೆ ಮತ್ತು ಇದನ್ನು ವಾಣಿಜ್ಯ ಉದ್ದೇಶಕ್ಕಾಗಿ ಸಂಗ್ರಹಿಸಲ್ಪಟ್ಟಿದ್ದರೆ ಅದರ ಶಿಕ್ಷೆಯನ್ನು ಮೂರರಿಂದ 5ಕ್ಕೆ ಹೆಚ್ಚಿಸಿದೆ. ಈ ಅಶ್ಲೀಲ ರಚನೆಯನ್ನು ನಾಶ ಮಾಡಲು, ಅಳಿಸಲು ಯಾವೊಬ್ಬನು ವಿಫಲವಾದರೆ ಮತ್ತು ಅದನ್ನು ಪ್ರಸಾರ ಮಾಡಿದರೆ ಶಿಕ್ಷೆಯನ್ನು ವಿಧಿಸುತ್ತದೆ.

ಈ ಕಾಯಿದೆಯು ಮಗುವಿನ ವೈದ್ಯಕೀಯ ಪರೀಕ್ಷೆಗೆ ಕೂಡಾ ನಿಬಂಧನೆಗಳನ್ನು ಹೂಡುತ್ತದೆ. ಚಿಕಿತ್ಸೆ ಅಥವಾ ಪರೀಕ್ಷೆಯನ್ನು ಪ್ರಾರಂಭಿಸುವ ಮೊದಲು ವೈದ್ಯರು ಕಾನೂನು ದಾಖಲೆಗಳು ಅಥವಾ ಕಾನೂನು ವಿಧಾನಗಳನ್ನು ನಿರ್ವಹಿಸಬೇಕು ಅಥವಾ ದಾಖಲಾತಿಗಳನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಬಾರದು ಎಂದು ಈ ಕಾಯಿದೆ ಸ್ಪಷ್ಟವಾಗಿ ಹೇಳುತ್ತದೆ.
ಈ ಬಗ್ಗೆ ವರದಿ ಮಾಡುವಲ್ಲಿ ವೈದ್ಯರು ವಿಫಲವಾದರೆ ಕಾಯ್ದೆಯಡಿಯಲ್ಲಿ ಆರು ತಿಂಗಳ ಜೈಲು ಅಥವಾ ದಂಡವನ್ನು ವಿಧಿಸಬಹುದಾಗಿದೆ ಮತ್ತು ಅಪರಾಧ ವರದಿಯಾದ ದಿನಾಂಕದಿಂದ ಒಂದು ವರ್ಷದೊಳಗೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ವಿಲೇವಾರಿ ಮಾಡಬೇಕು ಎಂದು ಈ ಕಾಯಿದೆಯಲ್ಲಿ ತಿಳಿಸಲಾಗಿದೆ.

ಮಚ್ಚಿಪಿಂಗ್ vs ಪಂಜಾಬ್ ರಾಜ್ಯ ಪ್ರಕರಣದಲ್ಲಿ ಸ್ವಯಂ ರಕ್ಷಣೆಗಾಗಿ ಕೊಲೆಗಾರರನ್ನು ಕೊಲ್ಲಬೇಕು ಎಂದು ಸಮುದಾಯವು ಭಾವಿಸಿದರೆ, ಮರಣದಂಡನೆಯನ್ನು ಮಂಜೂರು ಮಾಡುವ ಮೂಲಕ ಸಮುದಾಯವನ್ನು ರಕ್ಷಿಸಬಹುದಾಗಿದೆ. ಆದರೆ ಎಲ್ಲಾ ಪ್ರಕರಣಗಳಲ್ಲಿ ಈ ಶಿಕ್ಷೆಯನ್ನು ಕೊಡಲಾಗುವುದಿಲ್ಲ. ಕೇವಲ ಅಪರೂಪದ ಪ್ರಕರಣಗಳಲ್ಲಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ 1983ರಲ್ಲಿ ತೀರ್ಪನ್ನು ನೀಡುತ್ತವೆ.
ಈ ಹಿಂದುಳಿಕೆಯನ್ನು ತೊಲಗಿಸಲು ಮತ್ತು ದೇಶದಲ್ಲಿ ಹೆಚ್ಚಾಗುತ್ತಿರುವ ಲೈಂಗಿಕ ದೌರ್ಜನ್ಯದ ಕಾರಣದಿಂದ ಮರಣದಂಡನೆಯಂತಹ ಕಠಿಣ ಶಿಕ್ಷೆಯನ್ನೇ ವಿಧಿಸುವ ಮೂಲಕ ಮಕ್ಕಳಿಗೆ ರಕ್ಷಣೆ, ಭದ್ರತೆಯನ್ನು ಮತ್ತು ಘನತೆಯ ಬಾಲ್ಯವನ್ನು ಕಲ್ಪಿಸಿಕೊಡಲು ಈ ತಿದ್ದುಪಡಿ ಸಹಾಯ ಮಾಡುತ್ತದೆ
ಮಕ್ಕಳ ಹಕ್ಕು ಆಯೋಗದ 2015-16ನೇ ಸಾಲಿನ ವರದಿಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಹೆಚ್ಚಿನ ಮಕ್ಕಳು ಹಿಂದುಳಿದ ವರ್ಗಕ್ಕೆ ಸೇರಿದ ಮಕ್ಕಳಾಗಿರುತ್ತಾರೆ. 2016ರಲ್ಲಿ 1,569 ಪ್ರಕರಣಗಳು ದಾಖಲಾಗಿದ್ದು, ಪರಿಶಿಷ್ಠ ಜಾತಿಗೆ ಸೇರಿದ ಶೇ. 16 ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದ ಮಕ್ಕಳು ಶೇ.7ರಷ್ಟು ಬಲಿಪಶುಗಳಾಗಿದ್ದಾರೆ.
ಒಟ್ಟು ದಾಖಲಾದ ಪ್ರಕರಣದಲ್ಲಿ ಶೇ.50ರಷ್ಟು ಬಲಿಪಶುಗಳು ಉಳಿದ ಹಿಂದುಳಿದ ವರ್ಗಕ್ಕೆ ಸೇರಿದವರು ಹೀಗೆ ಬಲಿಪಶುಗಳಾದ ಮುಂದುವರಿದ ವಿಭಾಗಗಳ ಮಕ್ಕಳ ಸಂಖ್ಯೆ ಶೇ.17ರಷ್ಟಿದೆ. ಯಾವ ಭಾಗಕ್ಕೆ ಸೇರಿದ ಮಕ್ಕಳು ಎಂದು ಸ್ಪಷ್ಟವಾಗದ ಶೇ.10ರಷ್ಟು ಪ್ರಕರಣಗಳು ಕೂಡ ಇವೆ.
ಮನೆಯಲ್ಲೇ ಅನೇಕ ಲೈಂಗಿಕ ದೌರ್ಜನ್ಯಗಳು ನಡೆಯುತ್ತದೆ. 2016ರಲ್ಲಿ ಈ ರೀತಿಯ 489 ಪ್ರಕರಣಗಳು ನಡೆದಿವೆ. ಶಾಲೆಗಳಲ್ಲಿ 33 ಮತ್ತು ಸಾರ್ವಜನಿಕ ಸ್ಥಳಗಳಲ್ಲಿ 331 ಘಟನೆಗಳು ವರದಿಯಾಗಿವೆ. ಹಾಗೆಯೇ ಮಕ್ಕಳ ಸಂರಕ್ಷಣಾ ಸಂಸ್ಥೆಗಳಲ್ಲಿ ಶೇ. 36ರಷ್ಟು ಘಟನೆಗಳು ನಡೆದಿರುತ್ತವೆ. ಹನ್ನೆರಡು ವರ್ಷ ವಯೋಮಾನದವರಲ್ಲಿ ಶೇ.23ರಷ್ಟು ಕಿರುಕುಳಕ್ಕೆ ಬಲಿಪಶು ಆಗಿದ್ದಾರೆ ಮತ್ತು ಆರೋಪಿಗಳು 19ರಿಂದ 40ರ ವರ್ಷ ವಯೋಮಾನವರು ಆರೋಪಿಗಳಾದ 50 ಪ್ರಕರಣಗಳು ದಾಖಲಾಗಿದೆ. ಆರೋಪಿಗಳಲ್ಲಿ ಶೇ.97ರಷ್ಟು ಪುರುಷರು ಮತ್ತು ಶೇ.3ರಷ್ಟು ಮಹಿಳೆಯರಿದ್ದಾರೆ.

ಈ ಮೇಲಿನ ಎಲ್ಲಾ ಅಂಶಗಳನ್ನು ನೋಡಿದರೆ ಶಾಲೆ, ಮನೆ ಮತ್ತು ಧಾರ್ಮಿಕ ಕೇಂದ್ರ ಎಂಬ ಯಾವುದೇ ವ್ಯತ್ಯಾಸ ಅಥವಾ ಭೇದವಿಲ್ಲದೆ ಇಂತಹ ಪ್ರಕರಣಗಳ ನಡೆಯುತ್ತಲೇ ಇವೆ. ಈ ಹಿಂದೆ ಈ ಕಾಯಿದೆ ಮಗುವಿಗೆ ಎಷ್ಟು ಭದ್ರತೆಯನ್ನು ನೀಡಿತ್ತು ಮತ್ತು ಇನ್ನು ಮುಂದೆ ಈ ಮಸೂದೆಯ ತಿದ್ದುಪಡಿಯ ಮೂಲಕ ಯಾವ ರೀತಿಯಲ್ಲಿ ಭದ್ರತೆಯನ್ನು ನೀಡಬಹುದು ಎಂಬುವುದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here