ಹಾಸ್ಯ ಬರಹ

  • ಉಮ್ಮು ಯೂನುಸ್ ಉಡುಪಿ

ಯಪ್ಪಾ… ಈ ಕೊರೋನಾ ಒಮ್ಮೆ ಭಾರತ ಬಿಟ್ಟು ತೊಲಗಿದ್ರೆ ಸಾಕಿತ್ತು ಮಾರಾಯ್ರೆ, ಇಶ್ಶಿಶ್ಶೀ ಏನ್ ಅವಾಂತರಾ ಅಂತೀರಾ.. ಒಂದೇ, ಎರಡೇ,!?? 3 ತಿಂಗಳಾಯ್ತು ನೋಡಿ.. ಮನೇಲಿ ಮಕ್ಕ್ಳ ಕಾಟ ತಡ್ಕೊಳ್ಳೋ ಹಂಗಿಲ್ಲ, ಗಂಡಸ್ರನ್ನು ಇಡೀದಿನ ಮನೇಲಿ ಇರಿಸಿಕೊಳ್ಳೋ ಹಂಗಿಲ್ಲ.. ಲಾಕ್ ಡೌನು ನಮ್ಮನ್ನೆಲ್ಲಾ ಎಂಥಾ ಸಂಕ್ಟಕ್ಕೆ ತಂದ್ ಬಿಟ್ಟಿದೆ ನೋಡಿ ಮಾರ್ರೆ.. ಇದು ನಮ್ಮ ಪರಿಚಿತ ಆಂಟಿಯ ಸಂಕಟದ ಮಾತು..ಅವರ ಮಾತು ಕೇಳಿ ಒಮ್ಮೆ ವನಗೆ ನಗು ಬಂದಿತಾದರೂ ಇದು ನಮ್ಮಲ್ಲಿ ಪ್ರತಿಯೊಬ್ಬರ ಮನದಾಳದ ಸಂಕಟ. 

                ಕಳೆದೆರಡು ತಿಂಗಳಿಂದೀಚೆಗೆ ಒಂದೇ ಸಮನೆ ನೋಡಿಯೂ ಕೇಳಿಯೂ ಸಾಕು ಸಾಕೆನಿಸಿದ ಒಂದೇ ಶಬ್ಧವೆಂದರೆ, ಅದು ‘ಕೊರೋನ’, ಭಾರತದಲ್ಲಿ ಮಾತ್ರವಲ್ಲ ಜಗದಗಲಕ್ಕೆಲ್ಲಾ ಕಾಲು ಕೈ, ಚಾಚಿ ಜಗತ್ತನ್ನೇ ಮಕಾಡೆ ಮಲಗಿಸಿದೆ ಈ ಕೊರೋನ. ಬೆಳಗಿನ ದಿನಪತ್ರಿಕೆ ತೆರೆದರೆ, ಕೊರೋನವೂ ಕೈಕಾಲು ಚಾಚಿದಂತಹಾ ಅದರ ಚಿತ್ರದೊಂದಿಗೆ ಅದರ ಅಪ್ ಡೇಟ್ ಗಳೂ.. ಟಿ.ವಿ ಹಚ್ಚಿದರೆ, ಅಲ್ಲೂ ಅದೇ, ಮೊಬೈಲ್ ನಲ್ಲಿ, ಅಲ್ಲೂ ರಾರಾಜಿಸುತ್ತಿದೆ ಕೊರೋನ ಮಹಾಶಯ..! ವಾಟ್ಸಪ್ ಸ್ಟೇಟಸ್ ತೆರೆದರೆ, ಒಂದೆಡೆ ಕೊರೋನಾದಿಂದ ಪಾರಾಗಬಹುದಾದ ಪ್ರಾರ್ಥನೆಗಳು, ಔಷದೋಪಚಾರಗಳು, ಇನ್ನೊಂದೆಡೆ “ಸ್ಟೇಹೋಮ್…” “ರೆಸ್ಟ್ ಇನ್ ಹೋಮ್, ಆರ್ ರೆಸ್ಟ್ ಇನ್ ಪೀಸ್….”  ಎನ್ನುವ ಎಚ್ಚರಿಕೆಯೋ, ವಿನಂತಿಯೋ, ಇನ್ನೇನೋ.. ಮತ್ತೊಂದಿಬ್ಬರು ಬರೇ ಫೇಕ್ ನ್ಯೂಸ್ ಕಳುಹಿಸಿ, ಅದನ್ನೋದಿದ ಜನರು ಭೀತರಾಗಿ ‘ಅಯ್ಯೋ ಹಾಗಾ ವಿಷಯ…’ ಅಂದ್ರೆ, ‘ಹೂಂ ಮತ್ತೆ…’ ಅಂತ ಕನ್ಫರ್ಮೇಷನ್ ಕೊಟ್ಟು ಆನಂದ ಪಡೆಯುವವರು.. ಆನಂತರ “ಅಯ್ಯಾ ನೀ ಕಳ್ಸಿದ ನ್ಯೂಸು ಫೇಕು ಮಾರಾಯಾ” ಅಂದ್ರೆ, “ಹಾಂ, ಹೌದಾ” ಅಂತ ಪೆಕರು ಪೆಕರಾಗಿ ನಗೂದು.. ಈ ಲಾಕ್ ಡೌನ್ ನಲ್ಲಿ ಬಹಳಷ್ಟು ಜನ (ನನ್ನನ್ನೂ ಸೇರಿಸಿ) ಫೇಕ್ ನ್ಯೂಸ್ ಗಳನ್ನು ಕಂಡು ಹುಬ್ಬು ಹಾರಿಸಿದ್ದೂ ಇದೆ. ಅಷ್ಟೇ ಅಲ್ಲದೇ ತಮಗೆ ಬಂದಷ್ಟೇ ವೇಗವಾಗಿ ಆ ಮಾಹಿತಿಯನ್ನು ಸಿಕ್ಕಸಿಕ್ಕವರಿಗೆಲ್ಲಾ ಫಾರ್ವರ್ಡ್ ಮಾಡಿ ಕೃತಾರ್ತರಾದದ್ದೂ ಇದೆ. ಆಮೇಲೆ ಬೆಪ್ಪರಾಗಿದ್ದೂ ಇದೆ.  ಅಂದರೆ, ಕೊರೋನ ಕುರಿತ ಈ ಮಾಹಿತಿ ನನಗೇ ಮೊದಲು ದೊರೆತಿದೆ, ಮತ್ತು ನಾನೇ ಈ ಮಾಹಿತಿ ಮತ್ತೊಬ್ಬರಿಗೆ ತಲುಪಿಸಿ ಅವರ ಹುಬ್ಬು ಹಾರಿಸುವಂತೆ ಮಾಡಬೇಕೆಂಬ ಹುಚ್ಚು ಆಲೋಚನೆಯೇ ಬಹಳಷ್ಟು ಫೇಕ್ (ಸುಳ್ಸುದ್ಧಿ) ಮಾಹಿತಿಗಳು ಹರಡಲು ಕಾರಣವಾಗಿದೆ. ಈ ಕೊರೋನಾದ ಆತಂಕ ಅಷ್ಟು ನಮ್ಮನ್ನು ಭೀತರಾಗಿಸಿದೆ ಎನ್ನುವುದಕ್ಕಿಂತಲೂ ಬಹಳಷ್ಟು ಸಲ ನಾವು ನಮ್ಮ ಮೂರ್ಖತನದಿಂದಾಗಿಯೇ ಇಂತಹಾ ಎಡವಟ್ಟುಗಳನ್ನು ಮಾಡಿಕೊಂಡಿದ್ದೇವೆ ಎನ್ನಬಹುದು. 3 ತಿಂಗಳಿಂದಲೂ ಕೊರೋನದಿಂದಾಗಿ ಭೀತರಾಗಿದ್ದರೂ ಅದರೆಡೆಯಲ್ಲಿ ನಗೆಪಾಟಲಿಗೂ ಈಡಾಗಿದ್ದಾರೆ. ಅಂತಹಾ ಕೆಲಜನರ ಪಟ್ಟಿಯನ್ನೊಮ್ಮೆ ತೆಗೆದು ನೋಡೋಣ.

ಮೊತ್ತಮೊದಲ ಹೆಸರಿರುವುದು ನಮ್ಮ ಮಾನ್ಯ ಪ್ರಧಾನಿಗಳ ಹೆಸರು. ಚಪ್ಪಾಳೆ, ತಟ್ಟೆಯಿಂದ ಮೊದಲುಗೊಂಡ ಕೊರೋನ ವಿರುದ್ಧದ ಇವರ ವೀರಾವೇಶದ (!!?) ಹೋರಾಟವು ತೀವ್ರಗೊಂಡದ್ದು ಇಡೀ ಭಾರತವನ್ನು ಕತ್ತಲಾಗಿಸಿದಾಗ… ಓಹ್  ಕ್ಷಮಿಸಿ ಇಡೀ ಭಾರತವನ್ನು 9 ನಿಮಿಷಗಳ ಕಾಲ ದೀಪವಾರಿಸಿ ದೀಪ ಬೆಳಗಿಸಿದಾಗ..!! ಈ ತೀವ್ರ ಹೋರಾಟವನ್ನು ಭಕ್ತರ ದೊಡ್ಡ ಸಮೂಹವೊಂದು ನಮೋ ನಮೋ ಎಂದು ಸ್ವಾಗತಿಸಿ ಧನ್ಯವಾದರೆ, ಉಳಿದ ಭಾರತೀಯರು ಮೋದೀ ಜೀ ಯವರ ದ್ವಾಪರ ಯುಗದಲ್ಲೂ ಕೆಲಸಕ್ಕೆ ಬಂದಿರದ ಉಪಾಯದ ಕುರಿತು ಹೇಳಿಕೊಂಡು ನಕ್ಕಿದ್ದೇ ನಕ್ಕಿದ್ದು.. ಕೆಲವರಂತೂ, “..ಹಚ್ಚಲಿಕ್ಕೆ ಹೇಳಿರುವುದು ದೀಪಗಳನ್ನು ಮಾರಾಯ್ರೆ, ಇನ್ನು ಮನೆಗಳನ್ನೇ ಉರಿಸೀರಾ ಜೋಕೆ..” ಎಂಬ ಕೊಂಕು ಚಟಾಕಿಗಳನ್ನೇ ಹರಿಸಿಬಿಟ್ಟು ಭಕ್ತರ ಇರಿಸುಮುರಿಸಿಗೆ ಕಾರಣಕರ್ತರಾದರು.!! 

ಇನ್ನು ಮತ್ತೊಂದು ಹೆಸರು ಎಲ್ಲಾ ಮನೆಯ ಗಂಡಸೆನ್ನುವ ಜೀವಿಯದ್ದು..! ಈ ಜೀವಿ ಕೆಲವೊಂದು ಮನೆಯಲ್ಲಿ ಚಿರಪರಿಚಿತ.. ಏಕೆಂದರೆ ಆ ಮನೆಗಳಲ್ಲಿ ಮಕ್ಕಳು ಶಾಲೆಗೆ ಹೊರಟ ಬಳಿಕವಷ್ಟೇ ಕೆಲಸಕ್ಕೆ ತೆರಳಿ, ಮಕ್ಕಳು ಮಲಗುವ ಮುನ್ನವೇ ಮನೆ ತಲುಪುವ ಜೀವಿ ಇದು. ಆದರೆ ಬಹಳಷ್ಟು ಮನೆಯಲ್ಲಿ ತಮ್ಮ ಕೆಲಸದ ದಿನಚರಿಯಿಂದಾಗಿ ಮಕ್ಕಳು ಮನೆಯಲ್ಲಿ ಅಪ್ಪನ ಮುಖವನ್ನೇ ಕಂಡಿರುವುದಿಲ್ಲ ಅಂದರೆ, ಮಕ್ಕಳು ಎದ್ದೇಳುವ ಮುನ್ನ ತೆರಳಿದ ಅಪ್ಪ, ಮತ್ತೆ ಮರಳುವುದು ಮಕ್ಕಳು ನಿದ್ದೆಗೆ ಜಾರಿದ ಬಳಿಕವೇ,  ಅಂತಹಾ ಮನೆಯಲ್ಲಿ ಲಾಕ್ ಡೌನ್ ಸಂದರ್ಭ ಮನೆಯೊಳಗೇ ಸುತ್ತಾಡುತ್ತಿರುವ ಅಪ್ಪನನ್ನು ಯಾರೋ ಅಪರಿಚಿತನ ಕಂಡಂತಾಡುವ ಸ್ಥಿತಿಯೂ ಬಂದಿದೆ. ಮತ್ತು ಇಂತಹಾ ಮನೆಗಳಲ್ಲಿ ಅಪ್ಪ – ಮಕ್ಕಳಿಗೆ ಬಹಳಷ್ಟು ತಕರಾರು ನಡೆದು, ಆಮೇಲೆ ಅವರಿಬ್ಬರ ನಡುವೆ ಅಮ್ಮ ಬಂದು “ಈತನೂ ನಮ್ಮ ಮನೆಯ ಸದಸ್ಯನೇ…” ಎಂದು ತಿಳಿಹೇಳಲು ಮತ್ತು ಸಮಸ್ಯೆ ಪರಿಹರಿಸಲು ಹರಸಾಹಸ ಪಡಬೇಕಾದ ಪ್ರಸಂಗವೂ ಬಂದಿದೆ….

        ಇನ್ನು ಕೆಲವು ಮನೆಗಳಲ್ಲಂತೂ ಕಥೆ ಬೇರೆಯೇ ಇದೆ.. ಯಜಮಾನ್ತಿಯಾದ ಮಹಿಳೆಯು, ಯಜಮಾನ (?!) ಎನಿಸಿಕೊಂಡವನಿಗೆ ತನ್ನ ಅರ್ಧ ಹೊರೆಯನ್ನು (ಕೆಲಸದ) ವಹಿಸಿಕೊಟ್ಟು, ತನ್ನ ಮುಕ್ಕಾಲು ಪ್ರತಿಶತ ಕೆಲಸದಿಂದ ಮುಕ್ತಿ ಪಡೆದದ್ದೂ ಇದೆ. “ಘಳಿಗೆಗೊಮ್ಮೆ ಕೊರೊನದಿಂದ ಪಾರಾಗಲು ಕೈ ತೊಳೆವಾಗ, ಒಂದೆರಡು ಪಾತ್ರೆಗಳನ್ನಾದರೂ ತೊಳೆದರೆ ನನಗೊಂದಿಷ್ಟಿ ಸಹಾಯವಾದೀತಲ್ಲಾ..” ಎಂದು ಮುದ್ದು ಮುದ್ದಾಗಿ, ವಯ್ಯಾರವಾಗಿ ಪ್ರಾರಂಭವಾದ ವಿನಂತಿ ಮೂರು ತಿಂಗಳಾಗುವ ಹೊತ್ತಿಗೆ ಖಡಾಕಡಿಯ ಆಜ್ಞೆಯಾಗಿ ಪರಿವರ್ತನೆಯೂ ಆಯಿತು. ಆ ನಂತರ ಈ ಒತ್ತಾಯದ ಡ್ಯೂಟಿಯಿಂದ ಪಾರಾಗಲು ಯಾವುದೇ ಜಾಗ ಕಾಣದೇ ಮನೆಯ ಹೊರಗೆ ನಿಂತಿರುವ ಕಾರಿನೊಳಗಡೆಯೋ, ಟೇರೇಸ್ ಮೇಲೋ, ಅವಿತದ್ದೂ, ಅಲ್ಲಿಂದ ಪತ್ನಿ ಕಿವಿಹಿಂಡಿ ಕರೆತಂದದ್ದೂ ಆಯಿತು. ಇದೀಗ ಇಂತಹಾ ಪತ್ನೀ ಪೀಡಿತ ಪತಿಯಂದಿರಿಗೆ ಆಫೀಸಿನ ಬಾಸ್ ನ ಬೈಗಳು ಆಪ್ಯಾಯಮಾನ ವೆನಿಸತೊಡಗಿದೆಯಂತೆ.. ಕೆಲವು ಪತಿಯಂದಿರಂತೂ ಬಟ್ಟೆ, ಪಾತ್ರೆ ಪಗಡೆಗಳ ನಡುವೆ ಅದ್ಯಾವ ತರಹ ಕಳೆದು ಹೋಗಿದ್ದಾರೆಂದರೆ, ಆಫೀಸಿನಲ್ಲಿ ತಾವು ಯಾವ ಕೆಲಸ ಮಾಡುತ್ತಿದ್ದೇವೆಂದೇ ಮರೆತು ಹೋಗಿದೆಯಂತೆ..!!! 

         ಇನ್ನು ಕೆಲವು ಮನೆಗಳ ಮಹಿಳೆಯರ ಸ್ಥಿತಿ… ಅತ್ತ ರಜೆ ಘೋಷಣೆಯಾದ ಕೂಡಲೇ ಗಂಟು ಮೂಟೆ ಕಟ್ಟಿಕೊಂಡು ತವರೂರಿಗೆ ಹಾರಿಹೋಗುವ ಮಹಿಳೆಯರು ಈ ಬಾರಿ ತಾವಿಚ್ಛಿಸಿದರೂ ಹೋಗಲಾಗದೇ ಕೈಹೊಸಕಿಕೊಳ್ಳುತ್ತಾ ಪತಿಗೃಹದಲ್ಲೇ ಉಳಿದುಕೊಂಡು, ಪ್ರತಿದಿನ ಕೊರೋನವನ್ನು ಹಳಿಯುತ್ತಿದ್ದರೆ, ಇನ್ನು ಕೆಲವು ಮಹಿಳೆಯರು, ಕ್ಲಪ್ತ ಸಮಯಕ್ಕೆ ತಾಯಿಮನೆ ಸೇರಿಕೊಂಡು ಅತ್ತ ಮಕ್ಕಳ ಶಾಲೆಯ ಚಿಂತೆಯೂ ಇಲ್ಲದೇ ಇತ್ತ ರಜಾ ಅವಧಿ ವಿಸ್ತರಿಸುತ್ತಿರುವ ಕೊರೋನಾಗೆ ಮನದಲ್ಲೇ ಥ್ಯಾಂಕ್ಸ್ ಹೇಳುತ್ತಿದ್ದಾರೆ. ಆದರೆ, ಅತ್ತೆಮನೆಯಿಂದ ಕರೆ ಮಾಡಿದಾಗಲೆಲ್ಲಾ, ಈ ಕೊರೋನಾ ಒಂದು ಇಲ್ಲವಾಗಿದ್ದರೆ ಯಾವಾಗಲೋ ವಾಪಾಸಾಗುತ್ತಿದ್ದೆ ಎಂದು ಸುಳ್ಳು ಸುಳ್ಳೇ ಅಲವತ್ತುಕೊಳ್ಳಲು ಮರೆಯಲಾರರು..
ಇನ್ನು ಮಕ್ಕಳು.. ಮಕ್ಕಳ ಸಂತೋಷಕ್ಕೆ ಪಾರವೇ ಇಲ್ಲ… ಅರ್ಧದಲ್ಲೇ ಪರೀಕ್ಷೆಗಳು ನಿಂತುಹೋದವು.. ಬರೆಯಿಸುವ, ಓದಿಸುವ ಅಮ್ಮಂದಿರು, ಅಕ್ಕಂದಿರ ಕೈಯಿಂದ ತಪ್ಪಿಸಿಕೊಂಡ ಆನಂದದ ಗುಂಗಿನಿಂದ ಅವರಿನ್ನೂ ಹೊರಗೆ ಬಂದಿಲ್ಲ. ಪ್ರತಿ ಮನೆಯಲ್ಲೂ ಈ ಬಾರಿ ಮಕ್ಕಳದೇ ರಂಪಾಟ. ಈ ಬಾರಿ ಹಿಂದೆಂದೂ ಆಡದ ಆಟವನ್ನೆಲ್ಲಾ ಆಡಿಬಿಟ್ಟರು. ಲೂಡೋ, ಕ್ಯಾರಮ್, ಚೆಸ್, ಶಟಲ್ ಬ್ಯಾಡ್ ಮಿಂಟನ್, ಕ್ರಿಕೆಟ್, ನಂತಹಾ ಆಧುನಿಕ ಆಟದೊಂದಿಗೆ ಕಳ್ಳ-ಪೋಲಿಸ್, ಚೆನ್ನಮಣೆ, ಕುಂಟೆಬಿಲ್ಲೆ, ಕಣ್ಣೇಮುಚ್ಚಾಲೆ, ಹೀಗೆ ತಮ್ಮ ಅಪ್ಪ, ಅಮ್ಮಂದಿರ ಕಾಲದ ಆಟವನ್ನೂ ಆಡಿ ಮುಗಿಸಿದರು. ಈ ನಡುವೆ, ಊಟ, ತಿಂಡಿ ಸ್ನಾನಗಳಿಗಾಗಿ ಮಕ್ಕಳನ್ನು ಕರೆದೂ ಕರೆದೂ ಬಸವಳಿದ ತಾಯಂದಿರು ಗ್ಲೂಕೋಸ್ ಕುಡಿಯಬೇಕಾಗಿಯೂ, ಗ್ಲೂಕೋಸ್ ಏರಿಸಿಕೊಳ್ಳ ಬೇಕಾಗಿಯೂ ಬಂದಿದೆ.. ಫ್ಲ್ಯಾಟುಗಳಲ್ಲಿ ಬಂದಿಯಾದ ಮಕ್ಕಳು ಮಾತ್ರ ಈ ಎಲ್ಲಾ ಆಟಾಟೋಪಗಳಿಂದ ವಂಚಿತರಾಗಿ ವೀಡಿಯೋ ಗೇಮ್, ಮೊಬೈಲ್, ಟೀವಿಗಳಿಗಷ್ಟೇ ತೃಪ್ತಿ ಪಡಬೇಕಾಗಿ ಬಂದದ್ದು. ಖೇದಕರ. ಈ ಮಕ್ಕಳ ಪಡೆ ಅದೆಷ್ಟು ಚಾಲಾಕಿ ಎಂದರೆ, ಟ್ಯೂಷನ್ ಟೀಚರ್ ಗಳ ವಿರುದ್ಧವೂ ನಮಗೆ ಲಾಕ್ ನಡುವೆಯೂ ಪಾಠ ಓದಿಸುತ್ತಿದ್ದಾರೆಂದು ಪೋಲೀಸರಿಗೆ ದೂರು ಕೊಟ್ಟಿದ್ದಾರೆ…! ಲಾಕ್ ಡೌನ್ ತೆರೆಯಲಿ ಮತ್ತೊಮ್ಮೆ ಎಲ್ಲವೂ ಮೊದಲಿನಂತಾಗಲಿ ಎಂದು ಜಗದೆಲ್ಲೆಡೆಯಲ್ಲಿರುವವರು ಸರಕಾರವನ್ನು ವಿನಂತಿಸುತ್ತಿದ್ದರೆ, ಮಕ್ಕಳು ಮಾತ್ರ ವಿಧೇಯರಾಗಿ ಸರಕಾರದ ಆಜ್ಞೆ ಪಾಲಿಸುವ ಲಾಕ್ ಡೌನ್ ಮುಂದುವರೆಸುವತ್ತ ಉತ್ಸಾಹ ತೋರುತ್ತಿದ್ದಾರೆ..!!
       ಇನ್ನು ಇದೀಗ ಲಾಸ್ಟ್ ಬಟ್ ನಾಟ್ ಲೀಸ್ಟ್ ಆಗಿ ಸರತಿಗೆ ಬಂದು ನಿಂತವರು ತುಂಬಾನೇ ಇಂಟ್ರೆಸ್ಟಿಂಗ್ ವ್ಯಕ್ತಿತ್ವ ಹೊಂದಿದ ನಮ್ಮ ಕುಡುಕ ಮಹಾಶಯರು.. ಅಯ್ಯೋ ಸ್ಸಾರಿ.. ಇಕಾನಾಮಿಕಲ್ ವಾರಿಯರ್ಸ್.. 

 ಈ ಲಾಕ್ ಡೌನ್ ಸಂದರ್ಭದಲ್ಲಿ ಅದೆಷ್ಟು ಕಷ್ಟಾಪಟ್ಟು ಇವರು ಇವರ ಗಂಟಲುಗಳನ್ನು ತೇವ ಮಾಡದೇ ಕಾಪಾಡಿದ್ದಾರೆಂದು ನಮಗ್ಯಾರಿಗೂ ಊಹಿಸಲೂ ಸಾಧ್ಯವಿಲ್ಲ.  3 ತಿಂಗಳ ಹಿಂದಿನವರೆಗೂ ದಿನಗೂಲಿ ಮುಗಿಸಿ ಮನೆ ಕಡೆ ಬರುತ್ತಲೇ, ಕೆಂಪು ಎಣ್ಣೆ ಒಂಚೂರು ಹಾಕ್ಕೊಂಡು, ಇನ್ನೊಂದು ಪ್ಯಾಕೇಟನ್ನು ಲುಂಗಿಯೆಡೆಯ ಒಳಜೇಬಿನಲ್ಲಿ ತುರುಕಿಸಿಕೊಂಡು ಓಲಾಡುತ್ತಾ ಬರುವರು..ಪ್ರತಿದಿನವೂ ಗಂಟಲ ಪಸೆ ಆರಿಸಲು ಸಾರಾಯಿ ಅಡ್ಡೆ ಸೇರಿ, ಬೆಳಗಿಂದ ಸಂಜೆಯವರೆಗೂ ದುಡಿದದ್ದನ್ನೆಲ್ಲಾ ಅಲ್ಲೇ ಸುರಿದು ಅಲ್ಲೊಂದಿಷ್ಟು ಹೊಯ್ ಕೈ ಮಾಡಿ, ಗಟಾರದಲ್ಲಿಯೋ, ರಸ್ತೆಬದಿಯಲ್ಲೋ ಬಿದ್ದು ಹೊರಳಾಡಿ, ಬೆಳ್ಳಗಿನ ಬಟ್ಟೆಯ ಬಣ್ಣ ಕೆಂಪಾಗಿಸಿ, ಬಾಯಿತುಂಬಾ ಅಸಂಬದ್ಧ ಅಶ್ಲೀಲ ಬೈಗುಳದ ನಾದಹೊರಡಿಸಿ ಓಲಾಡುತ್ತಾ ಎದ್ದೂ ಬಿದ್ದೂ ಅದು ಹೇಗೋ ಮನೆ ತಲುಪುತ್ತಾರೆ. (ಸ್ವಾರಸ್ಯಕರವೆಂದರೆ, ಎಷ್ಟೇ ಅಮಲೇರಿಸಿಕೊಂಡರೂ ಪುಣ್ಯಕ್ಕೆ ತನ್ನ ಮನೆಗೇ ತಲುಪುತ್ತಾರೆ..!!) 
       ಹೊಟ್ಟೆ ಸೇರಿದ ಈ ಎಣ್ಣೆ ಇಷ್ಟಕ್ಕೇ ಸುಮ್ಮನಾಗಲು ಬಿಡದು. ಮನೆ ಸೇರಿದೊಡನೆ ಪತ್ನೀ ಮಕ್ಕಳನ್ನು ಚೆನ್ನಾಗಿ ಬಡೀಬೇಕು, ಮನೆ ಸಾಮಾನನ್ನೆಲ್ಲಾ ಕಿತ್ತೆಸೆಯಬೇಕು, ಸುತ್ತಲಿನ ಜನತೆ ಇವರ ಅವತಾರಕ್ಕೆ ನಕ್ಕರೆ, ಅವಾಚ್ಯ ಶಬ್ಧಗಳಿಂದ ಅವರನ್ನೂ ಜರೆಯಬೇಕು. ಇಷ್ಟೆಲ್ಲಾ ಆದಬಳಿಕ, ಹೆಂಡತಿ ಮಾಡಿಟ್ಟದ್ದನ್ನೆಲ್ಲಾ ಬಕಾಸುರನ ವಶಜನಂತೆ ಗಬಗಬನೆ ಮೆದ್ದು ಮೈಮೇಲಿನ ಗೋಚರವಿಲ್ಲದೇ ಕುಂಭಕರ್ಣನಂತೆ ಗೊರಕೆ ಹೊಡೆಯಬೇಕು. ಇಷ್ಟಾದರೆ, ಹೊಟ್ಟೆಗೆ ಎಣ್ಣೆ ಸೇರಿಸಿದ್ದು ಸಾರ್ಥಕವಾದಂತೇ ಲೆಕ್ಕ…
    ಆದರೆ ನಡುವೆ ಬಂದ ಲಾಕ್ ಡೌನ್ ಇವರ ಈ ಎಲ್ಲಾ ಎಂಟರ್ಟೈನ್ಮೆಂಟ್ ಗಳನ್ನೂ ಲಾಕ್ ಮಾಡಿಬಿಟ್ಟಿತಲ್ಲವೇ? ಸಾರಾಯಿಯ ವಾಸನೆಯಿಲ್ಲದೇ ಈ ಎಣ್ಣೆ ಸಿಪಾಯಿಗಳಿಗೆ ಉಸಿರಾಟವೂ ಬೇಡವಾಗಿದೆಯಂತೆ!! ಚರಂಡಿಯ ಕೆಂಪು ತಾಗದೇ ಹಾಗೇ ಬಿಳಿಯಾಗುಳಿದಿರುವ ತೂಗುಹಾಕಿರುವ ಪಂಚೆ ಕುಡುಕಣ್ಣರನ್ನು ಅಣಕಿಸುತ್ತಿದೆಯಂತೆ.. ಅಮಲೇರದೇ ಪತ್ನಿಯನ್ನು ಹೊಡಿಯೋ ಹಾಗಿಲ್ಲ. ಹಾಗೇನಾದರೂ ಕೈಯೆತ್ತಿದನೆಂದಾದರೆ ಆಕೆ ಜೊತೆ ಮಕ್ಕಳೂ ಸೇರಿಕೊಂಡು ತಿರುಗಿ ಮುಖ ಮೂತಿ ನೋಡದೇನೆ ಚಚ್ಚಿಬಿಟ್ಟಾರೆಂಬ ಭಯವಿದೆ. ಮೊದಲೇ ದುಡಿಮೆಯಿಲ್ಲದ ಚಿಂತೆಯಲ್ಲಿ ಆಕೆ ಸಿಕ್ಕಾಪಟ್ಟೆ ಸಿಡುಕುತ್ತಿದ್ದಾಳೆ, ಇನ್ನು ಕೈಯೆತ್ತಿದನೆಂದರೆ ಗೋವಿಂದ…
       ಹೀಗಿರುವಾಗ, ಹಠಾತ್ತಾಗಿ ಸರಕಾರಕ್ಕೆ ಕುಡುಕರು ಸುರಿಸುವ ದುಡ್ಡಿಂದ ತನ್ನ ಖಾಲಿ ಖಜಾನೆ ತುಂಬಿಸುವ ಕುಟಿಲ ಉಪಾಯ ಹೊಳೆದಿದೆ. ಸರಿ, ಸರಕಾರ ಕುಡುಕರ ಮಂದಿರದ ಕದ ತೆರೆದೇ ಬಿಟ್ಟಿತು.. ಇನ್ನೇನಾಗಬೇಕಿತ್ತು… ಪಾನಭಕ್ತರು ಮುಗಿಬಿದ್ದು ರೀಟೈಲರ್ ಪ್ರಭು ಕೊಡುವ ತೀರ್ಥಕ್ಕಾಗಿ ಕಸರತ್ತು ನಡೆಸಿದರು. ಸೋಷಿಯಲ್ ಡಿಸ್ಟೆನ್ಸಿನ ಜೊತೆಗೆ ಉಳಿದೆಲ್ಲಾ ಪ್ರೊಟೊಕಾಲ್ ಗಳನ್ನೆಲ್ಲಾ ಗಾಳಿಗೆ ತೂರಿ “…ನಾವೆಲ್ಲಾ ಒಂದೇ ತಾಯಿಯ ಮಕ್ಕಳು…” ಎಂಬ ಕೋರಸ್ ಗೆ ದನಿ ಸೇರಿಸಿದರು.. ಬಹುದೊಡ್ಡ ಕುಡುಕರ ಗುಂಪೊಂದು ಸೈನಿಕರಂತೆ ಶಿಸ್ತಾಗಿ ಸಾರಾಯಿ ಕೊಳ್ಳಲು ನಿಂತಿದ್ದರು. ದೇಶಕ್ಕಾಗಿ ಪ್ರಾಣ ತೆರಲೇ ನಿಂತಿರುವರೇನೋ ಎಂಬ ಮುಖಭಾವದೊಂದಿಗೆ ನಿಂತಿದ್ದ ನಮ್ಮ ಇಕಾನಮಿ ವಾರಿಯರ್ಸ್, ಗುಂಡು ಒಳಸೇರಿ ಮತ್ತೇರಿ ಮೈಮರೆತು ಚರಂಡಿಯಲ್ಲಿ  ಬಿದ್ದುಕೊಂಡಿರುವ ದೃಶ್ಯ ಜಾಲತಾಣದಲ್ಲಿ ಕೊರೋನಕ್ಕಿಂತಲೂ ಹೆಚ್ಚು ವೈರಲ್ ಆದವು. ಎಣ್ಣೆಗೆ ದುಡ್ಡಿಲ್ಲದೇ ಈ ದಿನ ಮನೆಯಲ್ಲಿದ್ದ ಪತ್ನಿಯ ಹರಕು ಸೀರೆಯನ್ನೂ ಬಿಡದೇ ಒತ್ತೆಯಿಟ್ಟು ಸಾರಾಯಿ ಕುಡಿದವರೆಷ್ಟೋ, ಕುಡಿದು ಬಂದು ಅದೇ ಹೆಂಡತಿಯ ಬೆನ್ನಿಗೆ ಬರೆ ಬರುವಂತೆ ಬಾರಿಸಿದವರೆಷ್ಟೋ, ದೇವನೇ ಬಲ್ಲ… 
      3 ತಿಂಗಳಿಂದ ಕುಡಿತವಿಲ್ಲದೇ ಸ್ವಸ್ಥನಾಗಿದ್ದ ಪತಿಯನ್ನು ಕಂಡು ನೆಮ್ಮದಿಯಿಂದಿದ್ದ ಪತ್ನಿ, ಮಕ್ಕಳೆಲ್ಲಾ ಈ ದಿನ ಸರಕಾರಕ್ಕೆ ನೆಟಿಕೆ ಮುರಿದು ಶಾಪ ಹಾಕಿದ್ದಂತೂ ಸತ್ಯ.. ಸರಕಾರ ಇದರಿಂದ ತಲೆಕೆಡಿಸಿಕೊಂಡಿಲ್ಲ.. ಅದಕ್ಕೆ ಹೇಗಾದರೂ ಬೊಕ್ಕಸ ತುಂಬಿದರಾಯಿತು..
ಮೇಲೆ ಪ್ರಸ್ತಾಪಿಸಿದ ಎಲ್ಲರ ಕ್ಷಮೆ ಕೋರುತ್ತಾ…

LEAVE A REPLY

Please enter your comment!
Please enter your name here