ಭಾಗ – 1
ಲೇಖಕರು : ಶೌಕತ್ ಅಲಿ.ಕೆ
ಪ್ರವಾದಿ ಮುಹಮ್ಮದ್ ಸ ರವರು ಮದೀನಾದಲ್ಲಿ ಮಾಡಿದ ಘೋಷಣೆ
“ನಮ್ಮ ಆಡಳಿತ ಸೀಮೆಯಲ್ಲಿರುವ ಯಹೂದಿಯರಿಗೆ ಕೋಮುಪಕ್ಷಪಾತೀ ವರ್ತನೆ ಮತ್ತು ಶೋಷಣೆಗಳಿಂದ ಸಂರಕ್ಷಣೆ ನೀಡಲಾಗುವುದು. ನಮ್ಮ ಸಹಾಯ, ಸಹಕಾರ, ಸಹಾನುಭೂತಿಯ ಸಂರಕ್ಷಣೆಗಳಲ್ಲಿ ಸ್ವಸಮುದಾಯದವರಂತೆಯೇ ಅವರಿಗೂ ಹಕ್ಕಿರುವುದು. ಅವರು ಮುಸ್ಲಿಮರ ಜತೆಗೂಡಿ ಏಕ ವ್ಯವಸ್ಥೆಯ ಒಂದೇ ರಾಷ್ಟ್ರವಾಗುವರು. ಮುಸ್ಲಿಮರಂತೆ ಅವರಿಗೂ ತಮ್ಮ ಧರ್ಮವನ್ನು ಸ್ವತಂತ್ರವಾಗಿ ಆಚರಿಸಬಹುದಾಗಿದೆ.”
ಹಾಗೆಯೇ ದ್ವಿತೀಯ ಖಲೀಫಾ ಉಮರ್ ರ ಪತ್ರ
“ಇದು ದೇವನ ದಾಸ ಮತ್ತು ವಿಶ್ವಾಸಿಗಳ ನಾಯಕನಾಗಿರುವ ಉಮರ್, ಈಲಿಯಾದ ಜನರಿಗೆ ಬರೆದುಕೊಡುವ ಕರಾರು ಪತ್ರವಾಗಿದೆ. ಎಲ್ಲ ಪ್ರಾಣ, ಸೊತ್ತು, ಚರ್ಚ್, ಶಿಲುಬೆ ಹಾಗೂ ಧರ್ಮಕ್ಕೆ ಸಂಬಂಧಿಸಿದ ಎಲ್ಲ ಅಂಶಗಳಿಗೂ ಭದ್ರತೆಯನ್ನು ಒದಗಿಸಲಾಗುವುದು. ಯಾರ ಚರ್ಚ್‍ಗಳನ್ನೂ ನಿವಾಸವಾಗಿ ಬಳಸಬಾರದು ಅಥವಾ ನಾಶಗೊಳಿಸಬಾರದು. ಅವು ಅಥವಾ ಅವುಗಳಿಗೆ ಸಂಬಂಧಿಸಿದ ಸೊತ್ತು ವಿತ್ತಗಳನ್ನು ಕಸಿಯಬಾರದು, ಹಾಗೆಯೇ ಅವರ ಸೊತ್ತು ಅಥವಾ ಶಿಲುಬೆಗಳನ್ನು ಸ್ವಾಧೀನಪಡಿಸಬಾರದು. ವಿಶ್ವಾಸದ ವಿಷಯದಲ್ಲಿ ಯಾರನ್ನೂ ಅಡ್ಡಿಪಡಿಸಬಾರದು, ಮತಾಂತರಕ್ಕೆ ಬಲಾತ್ಕರಿಸಬಾರದು. ಯಾರನ್ನೂ ಪೀಡಿಸಬಾರದು..
ಉಮರ್ ಫಾರೂಕ್‍ರ ರಾಜ್ಯಪಾಲರಾಗಿದ್ದ ಅಮ್ರ್ ಬಿನ್ ಅಸ್‍ರು ಈಜಿಪ್ಟ್‍ನಲ್ಲಿ ಮಾಡಿಕೊಂಡ ಒಪ್ಪಂದದಲ್ಲಿ, ಅಲ್ಲಿನ ಕ್ರೈಸ್ತ ವಿಶ್ವಾಸಿಗಳಿಗೆ ಎಲ್ಲ ರೀತಿಯ ಸಂರಕ್ಷಣೆಯ ಭರವಸೆ ನೀಡಿದ್ದರು. ಅಂದಿನಿಂದ ಈ ತನಕ ಕೊಪ್ಟಿಕ್ ಕ್ರೈಸ್ತರು ಅಲ್ಲಿ ನೆಮ್ಮದಿಯಿಂದ ಬಾಳುತ್ತಿದ್ದಾರೆ. ಯಾವ ರೀತಿಯ ಧಾರ್ಮಿಕ ಹಿಂಸೆಯನ್ನೂ ಅವರು ಅನುಭವಿಸಿಲ್ಲ. ಆಧುನಿಕ ಈಜಿಪ್ಟ್‍ನಲ್ಲಿ ಅವರಿಗೆ ಸುಮಾರು 2000 ಆರಾಧನಾಲಯಗಳು ಮತ್ತು 500 ಸಂಘಟನೆಗಳಿವೆ. ಅವೆಲ್ಲವೂ ಮುಸ್ಲಿಮರ ಆಡಳಿತ ಕಾಲದಲ್ಲಿಯೇ ಸ್ಥಾಪನೆಗೊಂಡಿವೆ. ಇಸ್ಲಾಮ್, ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿಲ್ಲದಿರುತ್ತಿದ್ದರೆ ಸುಮಾರು ಹದಿಮೂರು ಶತಮಾನಗಳಿಗಿಂತಲೂ ಅಧಿಕ ಕಾಲದ ಮುಸ್ಲಿಮ್ ಆಡಳಿತದ ಬಳಿಕವೂ ಅಲ್ಲಿ ಅನ್ಯ ಧರ್ಮೀಯರ ಇಷ್ಟೊಂದು ಆರಾಧನಾಲಯಗಳು ಉಳಿದಿರುತ್ತಿರಲಿಲ್ಲ.
ಪ್ರಥಮ ಖಲೀಫರಾದ ಹ. ಅಬೂಬಕರ್‍ರೊಡನೆ ರಾಷ್ಟ್ರದ ಕ್ರೈಸ್ತರು ತಮ್ಮ ನೂತನ ಚರ್ಚೊಂದನ್ನು ಉದ್ಘಾಟಿಸುವಂತೆ ವಿನಂತಿಸಿದರು. ನಿಮ್ಮ ಧರ್ಮಾಚಾರದಂತೆ ನಮಾಝ್ ನಿರ್ವಹಿಸಿ ಉದ್ಘಾಟಿಸಿದರೆ ಸಾಕೆಂದೂ ಪ್ರತ್ಯೇಕವಾಗಿ ತಿಳಿಸಿದ್ದರು. ಆಗ ಅಬೂಬಕರ್(ರ) ಹೀಗೆಂದರು: “ನಾನು ಉದ್ಘಾಟಿಸಿದರೆ ನನ್ನ ಕಾಲಾನಂತರ ನಿಜಸ್ಥಿತಿಯನ್ನು ಅರಿಯದವರು ಇದು ನಮ್ಮ ಖಲೀಫರು ನಮಾಝ್ ಮಾಡಿದ ಸ್ಥಳವೆಂದು ವಾದಿಸಿ ಅದು ಗಲಭೆಗೆ ಹೇತುವಾಗಬಹುದು.”
ಮಹಾನುಭಾವರಾದ ಉಮರ್ ಫಾರೂಕ್(ರ), ಫೆಲೆಸ್ತೀನ್‍ನಲ್ಲಿ ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ಸಾಮ್ರಾಜ್ಯಶಾಹಿತ್ವವನ್ನು ಕೊನೆಗೊಳಿಸಿದ್ದರು. ಅವರು ಹಕ್ರ್ಯುಲೆಸ್‍ನ ದುರಾಡಳಿತವನ್ನು ಕೊನೆಗೊಳಿಸಿ ಅಲ್ಲಿನ ಜನರಿಗೆ ನೆಮ್ಮದಿ ನೀಡಿದ್ದರು. ಆದ್ದರಿಂದಲೇ ಅಲ್ಲಿಗೆ ಭೇಟಿ ನೀಡಿದ ಖಲೀಫರನ್ನು ಅಲ್ಲಿನ ಪ್ರಜೆಗಳು ಪ್ರೀತ್ಯಾದರಗಳಿಂದ ಸ್ವಾಗತಿಸಿದ್ದರು. ಸ್ಥಳೀಯ ಕ್ರೈಸ್ತ ಪುರೋಹಿತನಾಗಿದ್ದ ಸಫರ್‍ನಿಯೂಸ್ ಮತ್ತು ಪರಿವಾರವು ಅದರಲ್ಲಿ ಮುಂಚೂಣಿಯಲ್ಲಿತ್ತು. ಖಲೀಫರು ಅವರ ಜತೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. ಅದರಲ್ಲಿ ಚರ್ಚುಗಳೂ ಸೇರಿದ್ದವು. ಝುಹರ್ (ಮಧ್ಯಾಹ್ನ) ನಮಾಝ್‍ನ ವೇಳೆಯಾಯಿತು. ಈ ವಿಷಯವನ್ನು ತಿಳಿದ ಪೇಟ್ರಿಯಾರ್ಕಿಸ್, ಉಮರ್ ಮತ್ತು ಸಂಗಡಿಗರೊಡನೆ ಅಲ್ಲಿನ ಚರ್ಚ್‍ನಲ್ಲಿ ನಮಾಝ್ ಮಾಡುವಂತೆ ವಿನಂತಿಸಿದರು. ಆದರೆ ಸಫರ್‍ನಿಯೂಸಿಯ ಈ ವಿನಂತಿಯನ್ನು ಖಲೀಫರು ಕೃತಜ್ಞತೆಯಿಂದ ತಿರಸ್ಕರಿಸಿದರು. ಅದಕ್ಕೆ ಅವರು ನೀಡಿದ ಕಾರಣ ಹೀಗಿತ್ತು- “ನಾನು ಇಲ್ಲಿ ನಮಾಝ್ ಮಾಡಿದರೆ ಮುಂದೆ ಯರಾದರೂ ಅವಿವೇಕಿ ಮುಸ್ಲಿಮರು ಅದರ ವಾರೀಸು ಹಕ್ಕಿಗಾಗಿ ವಾದಿಸಿ ಅದನ್ನು ಮಸೀದಿಯಾಗಿ ಪರಿವರ್ತಿಸಲು ಪ್ರಯತ್ನಿಸಬಹುದು.” ಅಂತಹ ಅಕ್ರಮಕ್ಕೆ ಅವಕಾಶವಾಗಬಾರದೆಂಬ ಮುಂದಾಲೋಚನೆಯಿಂದ ಉಮರ್ ಫಾರೂಕ್(ರ), ಚರ್ಚ್‍ನ ಹೊರಾಂಗಣದ ಖಾಲಿ ಸ್ಥಳದಲ್ಲಿ ಬಟ್ಟೆ ಹಾಸಿ ನಮಾಝ್ ಮಾಡಿದರು.
ಖಲೀಫಾ ಉಮರ್ ಫಾರೂಕರ (ರ) ನ್ಯಾಯ
ಉಮರ್ ಫಾರೂಕ್‍ರ ಆಡಳಿತ ಕಾಲದಲ್ಲಿ ಅವರ ಈಜಿಪ್ಟ್‍ನ ರಾಜ್ಯಪಾಲರಾಗಿದ್ದ ಅಮ್ರ್ ಬಿನ್ ಅಸ್‍ರ ಪುತ್ರ ಮುಹಮ್ಮದ್ ಮತ್ತು ಕೋಪ್ಟ್ ವಂಶದ ಓರ್ವ ಕ್ರೈಸ್ತ, ಓಟ ಸ್ಪರ್ಧೆ ನಡೆಸಿದರು. ಅದರಲ್ಲಿ ಮುಹಮ್ಮದ್ ಸೋತರು. ಪ್ರತೀಕಾರಕ್ಕಾಗಿ ಅವರು ತನ್ನ ಕ್ರೈಸ್ತ ಸಹೋದರನಿಗೆ ಚಾಟಿಯಿಂದ ಹೊಡೆದರು. ಪುತ್ರ ಮಾಡಿದ ತಪ್ಪಿಗೆ ರಾಜ್ಯಪಾಲರು ಕ್ರಮಕೈಗೊಳ್ಳಲಾರರೆಂದು ಭಾವಿಸಿ ರಾಜ್ಯ ಪಾಲರಿಗೆ ತಿಳಿಸದೆ ನೇರವಾಗಿ ಖಲೀಫಾ ಉಮರ್ ರಿಗೆ ಆ ಕ್ರೈಸ್ತ ವ್ಯಕ್ತಿ ದೂರು ನೀಡಿದನು. ಆ ಕೂಡಲೇ ಉಮರ್‍ರು(ರ) ಪಿರ್ಯಾದಿದಾರನನ್ನೂ ರಾಜ್ಯಪಾಲ ಅಮ್ರ್ ಮತ್ತು ಅವರ ಪುತ್ರ ಮುಹಮ್ಮದ್‍ನನ್ನೂ ಕರೆಸಿ ವಿಚಾರಣೆ ನಡೆಸಿದರು. ಘಟನೆಯು ನಿಜವೆಂದು ಮನಗಂಡ ಬಳಿಕ ಕೋಪ್ಟ್ ವಂಶದ ಕ್ರೈಸ್ತ ಸಹೋದರನಿಗೆ ಚಾಟಿ ನೀಡಿ ಮುಹಮ್ಮದ್‍ನಿಗೆ ಹೊಡೆಯುವಂತೆ ಆದೇಶಿಸಿದರು. ಹಾಗೆಯೇ ಆತ ತನಗೆ ಹೊಡೆದುದಕ್ಕೆ ಪ್ರತಿಯಾಗಿ ರಾಜ್ಯಪಾಲರ ಮಗ ಮುಹಮ್ಮದ್ನಿಗೆ ಹೊಡೆದನು. ಪುನಃ ಉಮರ್ ಫಾರೂಕ್ ಹೇಳಿದರು: “ಇನ್ನು ಅಮ್ರ್‍ರ ತಲೆಗೂ ಹೊಡೆಯಿರಿ. ಅಲ್ಲಾಹನಾಣೆ! ಕೇವಲ ಅವರ ಅಧಿಕಾರ ಬಲದಿಂದಾಗಿಯೇ ಅವರ ಮಗ ಮುಹಮ್ಮದ್ ನಿಮಗೆ ಹೊಡೆದಿದ್ದಾನೆ.”
“ಸತ್ಯವಿಶ್ವಾಸಿಗಳ ನಾಯಕರೇ! ನನಗಿಷ್ಟೇ ಸಾಕು. ನನಗೆ ಹೊಡೆದವನೊಂದಿಗೆ ನಾನು ಪ್ರತೀಕಾರ ತೀರಿಸಿದ್ದೇನೆ.” ಕ್ರೈಸ್ತ ಬಾಂಧವ ಸಂತೃಪ್ತಿಯಿಂದ ಹೇಳಿದ.
ಇನ್ನೊಂದು ಘಟನೆ
ರಾಜ್ಯಪಾಲ ಅಮ್ರ್ ಬಿನ್ ಅಸ್‍ರು ಓರ್ವ ಕ್ರೈಸ್ತ ಮಹಿಳೆಯ ಮನೆಯನ್ನು ಬಲಾತ್ಕಾರದಿಂದ ಮಸೀದಿಗೆ ಸೇರಿಸಿದರು. ಆ ಕುರಿತು ಮಹಿಳೆಯು ಖಲೀಫಾ ಉಮರ್ ರಿಗೆ ದೂರು ನೀಡಿದಳು. ದೂರು ದೊರೆತ ತಕ್ಷಣವೇ ಉಮರ್ ಫಾರೂಕ್‍ರು ರಾಜ್ಯಪಾಲರನ್ನು ಕರೆಸಿ ವಿಚಾರಣೆ ನಡೆಸಿದರು. ಪ್ರಕರಣವನ್ನು ನಿಜವೆಂದು ಒಪ್ಪಿಕೊಂಡು ರಾಜ್ಯಪಾಲರು ಅದಕ್ಕೆ ಪ್ರೇರಕವಾದ ಸಮಜಾಯಿಷಿ ನೀಡಿದರು. ಮುಸ್ಲಿಮರ ಜನಸಂಖ್ಯೆ ಬಹಳಷ್ಟು ಹೆಚ್ಚಿತು. ಮಸೀದಿಯಲ್ಲಿ ಸ್ಥಳಾವಕಾಶ ಕಡಿಮೆಯಾಗಿ ತೊಂದರೆಯಾಯಿತು. ಮಸೀದಿಯನ್ನು ವಿಶಾಲಗೊಳಿಸಲು ತೀರ್ಮಾನಿಸಿದಾಗ ಸಮೀಪದಲ್ಲಿ ಆ ಮಹಿಳೆಯ ಮನೆಯಿತ್ತು. ಅದಕ್ಕೆ ನ್ಯಾಯೋಚಿತ ಬೆಲೆ ನೀಡುವೆವೆಂದು ತಿಳಿಸಿದರೂ ಆಕೆ ಮಾರಲು ಒಪ್ಪಲಿಲ್ಲ. ಆದ್ದರಿಂದ ಮನೆಕೆಡಹಿ ಮಸೀದಿಗೆ ಸೇರಿಸಬೇಕಾಯಿತು. ಅದರ ಬೆಲೆಯನ್ನು ಆಕೆ ಬಯಸಿದ ಕೂಡಲೇ ಪಡೆಯಲಿಕ್ಕಾಗಿ ಸಾರ್ವಜನಿಕ ಖಜಾನೆಯಲ್ಲಿರಿಸಿದ್ದೇನೆ.” ಸಾಮಾನ್ಯವಾಗಿ ಇದು ಇಂದಿನ ಕಾಲದಲ್ಲಿಯೂ ಎಲ್ಲೆಡೆ ರೂಢಿಯಲ್ಲಿರುವ ಕ್ರಮವಾಗಿದೆ. ಆದರೆ ಉಮರ್ ಫಾರೂಕ್‍ರ ಧೋರಣೆ ಇದಕ್ಕೆ ವ್ಯತಿರಿಕ್ತವಾಗಿತ್ತು. ಅವರು ಅಮ್ರ್‍ರ ವಿವರಣೆಯನ್ನು ಸಂಪೂರ್ಣ ಆಲಿಸಿದ ಬಳಿಕ, ಮಸೀದಿಯ ಆ ಭಾಗವನ್ನು ಕೆಡಹಿ ಕ್ರೈಸ್ತ ಮಹಿಳೆಯ ಮನೆಯನ್ನು ಯಥಾಸ್ಥಾನದಲ್ಲಿ ಕಟ್ಟಿಸಿಕೊಡುವಂತೆ ಆದೇಶಿಸಿದರು. ಮಸೀದಿಯ ಭಾಗವನ್ನು ಕೆಡವಿ ಆ ಮಹಿಳೆಗೆ ಮನೆ ಮರಳಿಸಲಾಯಿತು.
ಖಲೀಪಾ ಅಲಿ (ರ) ಯವರ ವಿರುದ್ಧ ತೀರ್ಪು
ಅಲೀಯವರು ಆಡಳಿತ ನಡೆಸುತ್ತಿದ್ದ ಕಾಲ. ಅವರು ತಮ್ಮ ರಾಷ್ಟ್ರದ ನ್ಯಾಯಾಲಯಕ್ಕೆ ಒಂದು ದೂರು ಸಲ್ಲಿಸಿದರು. ಆರೋಪಿಯು ಓರ್ವ ಯಹೂದಿಯಾಗಿದ್ದ.
“ನನ್ನ ಯುದ್ಧ ಕವಚವನ್ನು ಆತ ಕದ್ದಿದ್ದಾನೆ. ಅದು ಆತನ ಬಳಿಯಿದೆ”ಯೆಂದು ರಾಷ್ಟ್ರದ ಖಲೀಫಾ (ಜನ ಪ್ರತಿನಿಧಿ) ಅಲೀಯವರು(ರ) ದೂರಿನಲ್ಲಿ ಹೇಳಿದ್ದರು. ವಿಚಾರಣೆಯ ನೇತೃತ್ವವನ್ನು ನ್ಯಾಯಾಧೀಶ ಶುರೈಹ್ ವಹಿಸಿದ್ದರು.
ಅವರು ಯಹೂದಿಯೊಡನೆ ವಿಚಾರಿಸಿದರು. “ಅಮೀರುಲ್ ಮೂಮಿನೀನ್‍ರ (ಸತ್ಯವಿಶ್ವಾಸಿಗಳ ನಾಯಕ ಅಥವಾ ರಾಷ್ಟ್ರದ ನಾಯಕ) ದೂರಿನ ಬಗ್ಗೆ ನೀನು ಏನು ಹೇಳುವೆ?”
“ಈ ಯುದ್ಧ ಕವಚ ನನ್ನದು. ನಿಜವಾಗಿಯೂ ನನ್ನದೇ.” ಯಹೂದಿ ಉತ್ತರಿಸಿದ,
“ನಿಮ್ಮ ವಾದವನ್ನು ಸಾಬೀತು ಪಡಿಸಲು ಸಾಧ್ಯವಿದೆಯೇ?” ಶುರೈಹ್, ಖಲೀಫ ಅಲಿಯವರೊಡನೆ ಕೇಳಿದರು.
“ಹೌದು. ಇದು ನನ್ನದು. ಆ ಬಗ್ಗೆ ಇಬ್ಬರು ಸಾಕ್ಷಿಗಳಿದ್ದಾರೆ.”- ಖಲೀಫ(ಜನ ಪ್ರತಿನಿಧಿ) ಅಲಿ (ರ) ಹೇಳಿದರು,
“ಸಾಕ್ಷಿಗಳು ಯಾರು?” ನ್ಯಾಯಾಧೀಶರು ವಿಚಾರಿಸಿದರು.
“ನನ್ನ ಪುತ್ರ ಹಸನ್ ಮತ್ತು ನನ್ನ ಸೇವಕ ಕಮರ್.”
“ಅವರು ನಿಮ್ಮದೇ ಜನರು. ಆದ್ದರಿಂದ ಅವರ ಸಾಕ್ಷ್ಯ ಸ್ವೀಕಾರಾರ್ಹವಲ್ಲ.” ನ್ಯಾಯಾಧೀಶ ಶುರೈಹ್ ದೃಢ ಸ್ವರದಲ್ಲಿ ಹೇಳಿದರು, ಅಲೀಯವರಿಗೆ ಬೇರೆ ಸಾಕ್ಷಿಗಳಿರಲಿಲ್ಲ.
ಆದ್ದರಿಂದ ನ್ಯಾಯಾಧೀಶರು, ರಾಷ್ಟ್ರದ ಆಡಳಿತಗಾರನ ವಿರುದ್ಧವಾಗಿ ಮತ್ತು ಯಹೂದಿಯ ಪರವಾಗಿ ತೀರ್ಪು ನೀಡಿದರು. ಯುದ್ಧ ಕವಚವನ್ನು ಯಹೂದಿಗೆ ನೀಡಿದರು, ಅಂತೆಯೇ ಆತ ಅದನ್ನು ಹಿಡಿದುಕೊಂಡು ಹೊರಟ. ಆ ಯಹೂದಿ ಸ್ವಲ್ಪ ದೂರ ಹೋಗಿ ಕೂಡಲೇ ಮರಳಿ ಬಂದ. ನ್ಯಾಯಾಧೀಶ ಶುರೈಹ್‍ರನ್ನು ನೋಡಿ ಹೀಗೆ ಹೇಳಿದ: “ಖಂಡಿತ! ಇದು ಪ್ರವಾದಿಯವರ(ಸ) ಕಾನೂನೆಂದು ನಾನು ಸಾಕ್ಷ್ಯವಹಿಸುತ್ತೇನೆ.”
(ಮುಂದುವರಿಯುವುದು)