ಲೇಖಕರು: ಸುಹಾನಾ ಸಫರ್
(ಕಾನೂನು ವಿದ್ಯಾರ್ಥಿನಿ ಎಸ್. ಡಿ. ಎಂ ಲಾ ಕಾಲೇಜು. ಮಂಗಳೂರು)
“ಧರ್ಮವೆಂಬುವುದು ತುಳಿತಕ್ಕೊಳಗಾದ ಜೀವಿಯ ನಿಟ್ಟುಸಿರು, ಹೃದಯವಿಲ್ಲದ ಈ ಪ್ರಪಂಚದ ಹೃದಯ ಮತ್ತು ಆತ್ಮರಹಿತ ಪರಿಸ್ಥಿತಿಗಳ ಆತ್ಮ ಹಾಗೆಯೇ ಇದು ಜನರ ಅಫೀಮು ಕೂಡಾ ಆಗಿದೆ.” –ಕಾರ್ಲ್ ಮಾಕ್ರ್ಸ್
ಭಾರತ ದೇಶ ವೈವಿದ್ಯತೆಯಲ್ಲಿ ಏಕತೆಯನ್ನು ಬಿಂಬಿಸುವ ತವರು. ಇಲ್ಲಿ ಎಲ್ಲಾ ಭಾಷೆಗಳಿಗೂ, ಎಲ್ಲಾ ಸಂಸ್ಕೃತಿಗಳಿಗೂ, ಎಲ್ಲಾ ಸಮುದಾಯಗಳಿಗೂ ಹಾಗೆಯೇ ಎಲ್ಲಾ ಜಾತಿಗಳಿಗೂ ತನ್ನದೇ ಆದ ಸ್ಥಾನಮಾನ ಗೌರವ ಖಂಡಿತಾ ಇದೆ ಮತ್ತು ಇರಲೇಬೆಕು. ಇದೇ ನಮ್ಮ ದೇಶದ ಹೃದಯವಾಗಿರುವ ಸಂವಿಧಾನದ ನಿಲುವು ಕೂಡಾ. ಅಷ್ಟೇ ಅಲ್ಲದೇ ನಮ್ಮ ದೇಶ ಕರುಣಾಜನಕವಾದ ಕಾನೂನುಗಳಿಗೂ, ಮಾನವೀಯ ಕಾರ್ಯಗಳಿಗೂ, ಮನುಕುಲದ ಸೇವೆಗೂ ಹೆಸರಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಲವಾರು ಸೋಂಕುಗಳು ಭಾರತಕ್ಕೆ ತಗುಲುತ್ತಿದೆ. ಅದು ಕೇವಲ ಕೊರೋನಾ ವೈರಸ್ಸಿನ ಸೋಂಕಾಗಿರದೇ ಅದರ ಜೊತೆ ಜೊತೆಗೆ ಕೋಮುವಾದದ ಸೋಂಕು ಕೂಡಾ ಜನರ ತನುಮನಸ್ಸಿಗೆ ಹಬ್ಬುತ್ತಿದೆ. ಈ ಕೋರೋನವೆಂಬುವುದು ಇಡೀ ಮನುಕುಲಕ್ಕೆ ಸಂಬಂಧ ಪಟ್ಟಂತಹ ವಿಷಯ. ಇಂತಹ ಸಮಯದಲ್ಲಿ ದೇಶದ ಪ್ರತಿಯೋರ್ವ ನಾಗರೀಕನೂ ಜಾತಿ ಬೇಧ ಮರೆತು ಮುಂದುವರಿಯಬೇಕಾಗಿದೆ. ಆದರೆ ಇಂದು ನಮ್ಮ ದೇಶದಲ್ಲಿ ನಡೆಯುತ್ತಿರುವುದು ಇದೆಲ್ಲದಕ್ಕೂ ತದ್ವಿರುದ್ಧವೇ ಸರಿ. ಹೌದು ಇಂದು ಇಡೀ ದೇಶದ ಟಿ.ವಿ. ಚಾನೆಲ್‍ಗಳಲ್ಲಿ ಹಾಗೂ ನ್ಯೂಸ್ ಪೇಪರ್‍ಗಳಲ್ಲಿ ನಿಜಾಮುದ್ದೀನ್‍ನ ಮರ್ಕಝ್ ಒಂದು ಚರ್ಚಾ ವಿಷಯವಾಗಿದೆ. ಕೊರೋನಾ ಸೋಂಕನ್ನು ದೇಶದೆಲ್ಲೆಡೆ ಹಬ್ಬಿಸುವುದರಲ್ಲಿ ತಬ್ಲೀಘಿನ ಮಹತ್ತರ ಪಾತ್ರವಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಕೆಲವರು ಇದನ್ನು ಕೊರೋನಾ ಜಿಹಾದ್ ಎಂತಲೂ ಇನ್ನೂ ಕೆಲವರು ಇದನ್ನು ದೇಶದ ವಿರುದ್ಧ ನಡೆಸಿದ ಪಿತೂರಿ ಎಂತಲೂ ಕರೆಯುತ್ತಿದ್ದಾರೆ. ಒಟ್ಟಾರೆ ಕೋಮುವಾದಿಗಳಿಗೆ ಕೋಮುದ್ವೇಷ ಹಬ್ಬಿಸಲು ಒಂದು ವಿಷಯ ಸಿಕ್ಕಂತಾಗಿದೆ.
ಮೊದಲನೇಯದಾಗಿ ನಾವು ತಬ್ಲೀಗ್ ಜಮಾಅತ್ ಎಂದರೆ ಯಾರು? ಅವರು ಇತರ ಮುಸ್ಲಿಮರಿಗಿಂತ ಭಿನ್ನರೇ? ಮತ್ತು ಅವರು ಮರ್ಕಝ್‍ನ ಸಭೆಯಲ್ಲಿ ನಿಜವಾಗಿಯೂ ಏನನ್ನು ಮಾಡುತ್ತಿದ್ದರು ಎಂಬುವುದನ್ನು ತಿಳಿದುಕೊಳ್ಳಬೇಕಾಗಿದೆ. ತಬ್ಲೀಗ್ ಜಮಾಅತ್ ಎಂಬುವುದು 1927ರಲ್ಲಿ ಮುಹಮ್ಮದ್ ಇಲ್ಯಾಸ ಅಲ್ ಕಂದಲಾವಿ ಎಂಬವರಿಂದ ಪ್ರಾರಂಭವಾಯಿತು. ಇದು ಪ್ರಸ್ತುತಃ ಸಮುದಾಯದೊಳಗೆ ಪ್ರವಾದಿ ಕಾಲದಲ್ಲಿ ಆಚರಣೆಯಲ್ಲಿದ್ದ ಇಸ್ಲಾಮಿನ ನೈಜ್ಯ ಆಚರಣೆ. ಈ ಸಂಘಟನೆಯು ಸಮುದಾಯದ ಜನರ ನಡುವೆ ಆಧ್ಯಾತ್ಮಿಕ ಚಿಂತನೆ ಮತ್ತು ಇನ್ನಷ್ಟೂ ಕಟ್ಟಾ ಮುಸ್ಲಿಂ ಅಂದರೆ ಪ್ರವಾದಿಯವರು ಪಾಲಿಸಿದ ಶಿಷ್ಟಾಚಾರಗಳನ್ನು ಸರಿಯಾದ ರೀತಿಯಲ್ಲಿ ಅನುಸರಿಸುವಲ್ಲಿ ಕೆಲಸ ಮಾಡುತ್ತದೆ. ಇವರು ಕೇವಲ ಭೂಮಿಯ ಕೆಳಗಿನ ಮತ್ತು ಭೂಮಿಯ ಮೇಲಿನ ಅಂದರೆ ಕಬರಿನ ಮತ್ತು ಸ್ವರ್ಗದ ಪರಿಕಲ್ಪನೆಗೆ ಒತ್ತನ್ನು ನೀಡುತ್ತದೆ. ಬದಲಾಗಿ ಯಾವುದೇ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳಲ್ಲಿ ನಿರತರಾಗುವುದಿಲ್ಲ. ನಿಜವಾಗಿಯೂ ಹೇಳುವುದಾದರೆ ಈ ಲೋಕಕ್ಕೆ ಸಂಬಂಧಪಟ್ಟ ವಿಚಾರಗಳಲ್ಲಿ ಅವರು ಅಷ್ಟು ತಲೆಕೆಡಿಸಿಕೊಳ್ಳುವಂತವರಲ್ಲ. ಇವರನ್ನು ಇದಕ್ಕಾಗಿ ಇತರ ಮುಸ್ಲಿಮರೇ ಟೀಕಿಸುವುದಿದೆ. ಇಂತಹ ಕಾರ್ಯವೈಖರಿ ಕೇವಲ ಮುಸ್ಲಿಮರಲ್ಲೇ ಅಲ್ಲ ಜಗತ್ತಿನಾದ್ಯಂತ ನಾನಾ ಜಾತಿಗಳಲ್ಲಿಯೂ ಇದೆ. ಅವರವರ ಧರ್ಮದ ಕಟ್ಟುನಿಟ್ಟಿನ ಆಚರಣೆಯು ತಪ್ಪಲ್ಲ. ಏಕೆಂದರೆ ಈ ಸ್ವತಂತ್ರ್ಯವು ಪ್ರತಿಯೊಬ್ಬ ಪ್ರಜೆಗೂ ಇದೆ. ಆದರೆ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಇಂತಹ ಆಚರಣೆಗಳಿಂದ ಬೇರೆ ಬೇರೆ ದೇಶಗಳಲ್ಲೂ ಕಷ್ಟಗಳು ಎದುರಾಗುತ್ತಿದೆ. ನಾವು ದಕ್ಷಿಣ ಕೊರಿಯಾವನ್ನು ತೆಗೆದುಕೊಂಡರೆ ಅಲ್ಲಿ 30 ಕೊರೋನಾ ಪ್ರಕರಣಗಳಿದ್ದದ್ದು ತಕ್ಷಣ 9 ಸಾವಿರಕ್ಕೇರಿತು. ಇದಕ್ಕೆ ಕಾರಣ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದಂತಹ ಒಂದಷ್ಟು ಜನರು ಚರ್ಚ್‍ನಲ್ಲಿ ಧರ್ಮದ ಸಭೆಯಲ್ಲಿ ಸೇರಿದ್ದರು. ಅವರು ಕೂಡಾ ಪರಲೋಕದ ಚಿಂತೆಯನ್ನೇ ಹೊಂದಿದ್ದು, ಲೋಕವು ಸುಮ್ಮನೇ ಎಂಬ ನಿಲುವು ಅವರದ್ದಾಗಿತ್ತು. ಹೀಗಾಗಿ ಅವರು ಯಾವುದೇ ರೀತಿಯ ಅಂತರವನ್ನು ಕಾಯ್ದುಕೊಳ್ಳಲಿಲ್ಲ. 31ನೇ ಪ್ರಕರಣವು 61 ವಯಸ್ಸಿನ ಒಂದು ಹೆಂಗಸು ಈ ತರಹದ ಒಂದು ಚರ್ಚಿಗೆ ಪದೇ ಪದೇ ಭೇಟಿ ನೀಡಿದ್ದುದರ ಪರಿಣಾಮವಾಗಿ ಆಕೆಗೆ ಕೊರೋನಾ ವೈರಸ್ ತಗುಲಿ ಇನ್ನಷ್ಟು ಜನರಿಗೂ ಆಕೆ ಹಬ್ಬಿಸಿದಳು. ಆದ್ದರಿಂದ ಅಲ್ಲಿನ ಸರಕಾರ ಯಾರು ಈ ಸಭೆಯಲ್ಲಿ ಭಾಗವಹಿಸಿದ್ದರು ಎಂಬುವುದನ್ನು ಪತ್ತೆ ಹಚ್ಚಿ ಕ್ವಾರೆಂಟೈನ್‍ನಲ್ಲಿರಿಸಿ ಇನ್ನಷ್ಟು ಜನರಿಗೆ ಹರಡುವುದನ್ನು ತಡೆದರು. ಆದರೆ ಅಲ್ಲಿನವರು ಆ ಗುಂಪನ್ನು ದೇಶದ್ರೋಹಿಯಂತಲೂ, ಭಯೋತ್ಪಾದಕರಂತಲೂ ಕರೆಯಲಿಲ್ಲ. ಬದಲಾಗಿ ರೋಗಿಯೆಂದು ಪರಿಗಣಿಸಿ ಚಿಕಿತ್ಸೆ ನೀಡಿತು. ಅದೇ ರೀತಿ ಭಾರತದಲ್ಲಿ ಬಲದೇವ್ ಸಿಂಗ್ ಎಂಬ ಕೀರ್ತನಾಕಾರ ಇಟಲಿ ಮತ್ತು ಜರ್ಮನಿಗೆ ತೆರಳಿ ತಾನು ಮಾರ್ಚ್ 8ಕ್ಕೆ ಹಿಂತಿರುಗುತ್ತಾರೆ. ಅವರನ್ನು ಏರ್ಪೊಟ್ನಲ್ಲಿ ಯಾರು ಪರೀಕ್ಷಿಸಲಿಲ್ಲ, ಕ್ವಾರೆಂಟೈನ್‍ನಲ್ಲಿಯೂ ಇರಿಸಲಿಲ್ಲ. ಇಂದು ಅತೀ ಹೆಚ್ಚು ಕೊರೋನಾ ಪ್ರಕರಣಗಳು ಇವೆರಡು ದೇಶಗಳಲ್ಲೇ ಆಗಿದೆ. ಬಲದೇವ್ ಸಿಂಗ್ ಪಂಜಾಬ್‍ಗೆ ಹಿಂತಿರುಗಿದ್ದು ಮಾತ್ರವಲ್ಲ, ಅವರ ಕೀರ್ತನೆಗಳ ಪ್ರಚಾರಕ್ಕೂ ತೊಡಗುತ್ತಾರೆ.
ಮಾರ್ಚ್ 8ಕ್ಕಿಂತ ಮುಂಚೆ ಕೋವಿಡ್-19 ಸೋಂಕಿತರ ಸಂಖ್ಯೆ ಕೇವಲ ಮೂವತ್ತಿತ್ತು. ಆದರೆ ನಂತರ 65ಕ್ಕೇರಿತು. ಈ ಸೋಂಕು ತಗುಲಿದವರೆಲ್ಲರೂ ಬಲದೇವ್‍ಸಿಂಗ್‍ರೊಂದಿಗೆ ನೇರ ಸಂಪರ್ಕದಲ್ಲಿದ್ದವರಾಗಿದ್ದರು. ಆದರೂ ಪಂಜಾಬ್ ಮತ್ತು ಭಾರತ ಸರಕಾರ ಅವರನ್ನು ದೇಶದ್ರೋಹಿ ಎಂತಲೂ, ಆ ಗುಂಪನ್ನು ಭಯೋತ್ಪಾದಕ ಗುಂಪು ಎಂತಲೂ ಕರೆಯಲಿಲ್ಲ. ಬದಲಾಗಿ ಅವರೆಲ್ಲರನ್ನು ಕೋವಿಡ್-19 ಸೋಂಕಿತ ರೋಗಿಗಳು ಎಂದು ಕರೆಯಲಾಯಿತು. ಇವೆಲ್ಲವೂ ಮೌಢ್ಯ ಮತ್ತು ಬೇಜವಬ್ಧಾರಿಯಾಗಿದೆ. ಅದೇ ರೀತಿ ತಬ್ಲೀಗಿ ಜಮಾಅತ್‍ನವರಲ್ಲೂ ಇಂತಹ ಬೇಜವಬ್ದಾರಿಯಾಗಿರಬಹುದು. ಆದರೆ ಇದು ದುರುದ್ಧೇಶ ಪೀಡಿತ ಎಂಬುವುದರಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ ಮಾರ್ಚ್ 13ರ ವರೆಗೂ ಕೋವಿಡ್-19 ಒಂದು ಆರೋಗ್ಯ ತುರ್ತು ಪರಿಸ್ಥಿತಿಯಿಲ್ಲ ಎಂದು ಆರೋಗ್ಯ ಸಚಿವರು ಘೋಷಿಸಿದರು. ತಬ್ಲೀಗಿ ಜಮಾಅತ್ 13ರಿಂದ 15ರ ವರೆಗೆ ತಮ್ಮ ಸಭೆಯನ್ನು ಆಯೋಜನೆ ಮಾಡಿತ್ತು. ಇದು ಹಲವು ತಿಂಗಳ ಮೊದಲೇ ನಿರ್ಧರಿಸಿದ್ದಾಗಿತ್ತು. ಆದರೆ ಮಾರ್ಚ್ 16ರಂದು ದೆಹಲಿಯಲ್ಲಿನ ಮುಖ್ಯಮಂತ್ರಿಯಾದ ಕ್ರೇಜ್ರಿವಾಲ್‍ರವರು ಯಾವುದೇ ರೀತಿಯ ಸಭೆಗಳಲ್ಲಿ 50ಕ್ಕಿಂತ ಹೆಚ್ಚು ಜನರು ಸೇರಬಾರದು ಎಂದು ಆದೇಶಿಸಿದರು. ಪ್ರಧಾನಿಯವರು ತಮ್ಮ ಮೊದಲನೆಯ ಘೋಷಣೆಯನ್ನು ಮಾರ್ಚ್ 19ರಂದು ನೀಡಿದರು. ತಕ್ಷಣವೇ ಮರ್ಕಝ್ ತನ್ನ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಸ್ಥಗಿತಗೊಳಿಸಿದರು. ಆ ಹೊತ್ತಲ್ಲೇ ರೈಲು ಸೇವೆಗಳು ಸ್ಥಗಿತವಾಗಿದ್ದರಿಂದ ಕೆಲವರು ಅಲ್ಲೇ ಉಳಿಯಬೇಕಾಯಿತು. ಇನ್ನು ಕೆಲವರು ಸಿಕ್ಕ ಸಿಕ್ಕ ವಾಹನಗಳಲ್ಲಿ ತಮ್ಮ ದಾರಿಯನ್ನು ಹುಡುಕಿಕೊಂಡು ಹೋದರು. ಮಾರ್ಚ್ 23ರ ವೇಳೆಗೆ ಲಾಕ್‍ಡೌನ್ ಆದೇಶ ಹೊರಬಿದ್ದಿತು. ಮುಂದೇನು ದಾರಿ ಕಾಣದೆ ಅಳಿದುಳಿದ ಶಿಬಿರಾರ್ಥಿಗಳು ವೈದ್ಯಕೀಯ ಮುನ್ನೆಚ್ಚರಿಕೆಯೊಂದಿಗೆ ಅಲ್ಲೇ ಉಳಿದುಕೊಳ್ಳಬೇಕಾಯಿತು. ಇವರ ಜವಬ್ಧಾರಿಯು ಮರ್ಕಝ್ ಮತ್ತು ಕೇಂದ್ರ ಸರಕಾರದ ಮೇಲೆಯೇ ಬಿತ್ತು. ಏಕೆಂದರೆ ಪೋಲಿಸರ ನೋಟಿಸಿಗೆ ಅಂಕಿ ಅಂಶಗಳೊಂದಿಗೆ ಮರ್ಕಝ್ ಉತ್ತರ ನೀಡಿತ್ತು. ಅದರಲ್ಲಿ ವಿದೇಶಗಳಿಂದ ಬಂದವರ ವಿವರವನ್ನೂ ನಮೂದಿಸಲಾಗಿತ್ತು. ನಿಜವಾಗಿಯೂ ತಬ್ಲೀಗ್ ಜಮಾಹತ್ನವರು ಉದ್ದೇಶಪೂರ್ವಕವಾಗಿ ಮಾಡಿದ್ದೆ ಹಾಗಿದ್ದರೆ ಈ ವಿವರಗಳನ್ನು ನೀಡುವ ಅವಶ್ಯಕತೆ ಇತ್ತೆ? ಸರಕಾರ ದೊಂದಿಗೆ ವಿದೇಶದಿಂದ ಪ್ರಯಾಣ ಬೆಳೆಸಿದವರ ಮಾಹಿತಿ ಇರುತ್ತದೆ. ಅದನ್ನು ಬಳಸಿ ಆದಷ್ಟು ಬೇಗ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಅದರಲ್ಲಿ ದೆಹಲಿ ಮತ್ತು ಕೇಂದ್ರದ ಗೃಹ ಇಲಾಖೆ ವಿಫಲವಾಯಿತು. ಆದ್ದರಿಂದ ನಾವು ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಮಾರ್ಚ್ 24ರಂದು ನಮ್ಮ ಪ್ರಧಾನಿ ಮೋದಿಯವರು ದೇಶದಾದ್ಯಂತ 21 ದಿನಗಳ ಲಾಕ್‍ಡೌನ ಘೋಷಿಸಿದರೂ, ಮೊದಲ ದಿನವೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರವರು ಪ್ರತ್ಯಕ್ಷವಾಗಿ ಉಲ್ಲಂಘಿಸಿ ರಾಮನವಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕನಿಕಾ ಕಪೂರ್‍ರವರು ತಮ್ಮ ವಿದೇಶ ಪ್ರಯಾಣದ ದಾಖಲೆಗಳನ್ನು ನೀಡದೆಯೇ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅಷ್ಟೇ ಯಾಕೆ ಕರ್ನಾಟಕದ ಸಿ.ಎಂ. ಆದಂತಹ ಯಡಿಯೂರಪ್ಪನವರೇ ಸ್ವತಃ ತಮ್ಮದೇ ಆಜ್ಞೆಯನ್ನು ಉಲ್ಲಂಘಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನಸೇರಿದ್ದ ಮದುವೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಗೆಯೇ ಜನತಾ ಕಫ್ರ್ಯೂವಿನ ಸಂದರ್ಭದಲ್ಲಿ ವೈದ್ಯಕೀಯ ಲೋಕಕ್ಕೆ ಪ್ರಶಂಸೆ ನೀಡುವ ಉದ್ದೇಶದಿಂದ ಚಪ್ಪಾಳೆ ತಟ್ಟಲೆಂದು ಕರೆ ನೀಡಿದ್ದರೆ ಉತ್ತರ ಪ್ರದೇಶದಲ್ಲಿ ಜನರು ಮೆರವಣಿಗೆಯಲ್ಲಿ ಸಾಗುವ ಮೂಲಕ ಅದರ ಉದ್ದೇಶವನ್ನೇ ವಿಫಲಗೊಳಿಸಿದರು. ಇಷ್ಟೇ ಅಲ್ಲದೇ ಮಾರ್ಚ್ 19ರಂದೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಸಲಾಗಿದ್ದರೂ ಮಾರ್ಚ್ 23ರ ವರೆಗೆ ಸಂಸತ್ತ್ ಕಲಾಪ ನಡೆಯುತ್ತಲೇ ಇತ್ತು. ಕೋವಿಡ್-19 ಭೀತಿ ಇದ್ದುದರಿಂದ ಸಂಸತ್ ಕಲಾಪ ನಿಲ್ಲಿಸಬೇಕೆಂದು ಕೇಂದ್ರಕ್ಕೆ ಪತ್ರ ಬರೆದಿದ್ದರೂ, ಎಪ್ರಿಲ್ 3ರ ವರೆಗೂ ನಡೆಯಬೇಕು ಎಂದು ಪ್ರಧಾನಿ ಮೋದಿಯವರೇ ಹೇಳಿದರು. ಅದೇ ರೀತಿ ಮಾರ್ಚ್ 23ಕ್ಕೆ ಅಪರೇಷನ್ ಕಮಲದಲ್ಲಿ ಬಿಜೆಪಿಗರು ತೊಡಗಿದರು. ಮಾರ್ಚ್ 15ರಂದು ನೂತನ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‍ರವರಿಗೆ ದೊಡ್ಡ ಸಂಖ್ಯೆಯಲ್ಲೇ ಭರ್ಜರಿ ಸ್ವಾಗತವನ್ನು ಮಾಡಲಾಯಿತು. ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಮೇರಿಕೋಮ್ ಮಾರ್ಚ್ 13ರಂದು ಭಾರತಕ್ಕೆ ಜೋರ್ಡನ್‍ನಿಂದ ವಾಪಸ್ಸಾದರು ಮತ್ತು ಮಾರ್ಚ್ 18ರಂದು ರಾಷ್ಟ್ರಪತಿ ಭವನದಲ್ಲಿ ಉಪಹಾರ ಕೂಟದಲ್ಲೂ ಭಾಗಿಯಾದರು.
ಹಾಗಾದರೆ ಇವರೆಲ್ಲರೂ ದೇಶದ್ರೋಹಿಗಳೇ? ಇವರನ್ನು ಏನೆಂದು ಕರೆಯಬಹುದು? ಆದರೆ, ಇವರ್ಯಾರು ತಪ್ಪಿತಸ್ಥರಲ್ಲ, ಅಪರಾಧಿಗಳೂ ಅಲ್ಲ. ಬದಲಾಗಿ ಈ ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣ ನಮ್ಮ ಸರಕಾರವೇ. ಏಕೆಂದರೆ ಸರಕಾರಕ್ಕೆ ಮಾಹಿತಿ ಇತ್ತು. ಕೋವಿಡ್-19 ಎಷ್ಟು ತೀಕ್ಷ್ಣವಾಗಿ ಮತ್ತು ವೇಗವಾಗಿ ಹಬ್ಬುತ್ತಿದೆ ಎಂದು ತಿಳಿದಿತ್ತು. ಎರಡು ತಿಂಗಳುಗಳಲ್ಲಿ 15 ಲಕ್ಷ ವಾಯು ಪ್ರವಾಸಿಗರು ಭಾರತಕ್ಕೆ ಬಂದಿದ್ದಾರೆ ಎಂಬ ವರದಿಯನ್ನು ಕ್ಯಾಬಿನೆಟ್ ಕಾರ್ಯದರ್ಶಿ ನೀಡುತ್ತಾರೆ. ಇವರಿಗೆ ವಿಮಾನ ಪ್ರಯಾಣವನ್ನು ಭಾರತಕ್ಕೆ ಬರುವುದನ್ನು ನಿಲ್ಲಿಸಲು ಮಾರ್ಚ್ ಕೊನೆಯವರೆಗೂ ಸಾಧ್ಯವೇ ಆಗಲಿಲ್ಲ. ಜನವರಿ 30ಕ್ಕೆ ಕೋವಿಡ್-19 ಪ್ರಕರಣ ಭಾರತದಲ್ಲಿ ಕಾಣಿಸಿಕೊಂಡಿತ್ತು. ಫೆಬ್ರವರಿ ಮೊದಲ ವಾರದಲ್ಲೇ ವಿಮಾನಗಳ ಹಾರಾಟವನ್ನು ನಿಲ್ಲಿಸಿದ್ದರೆ ಇಂದು ನಮಗೆ ಈ ಅವಸ್ಥೆ ಬರುತ್ತಿರಲಿಲ್ಲ. ಫೆಬ್ರವರಿಯಲ್ಲಿ ಅಮೇರಿಕಾದಲ್ಲೂ ಕೋವಿಡ್-19 ಪ್ರಕರಣಗಳು ಬೆಳಕಿಗೆ ಬರುತ್ತಲೇ ಇತ್ತು. ಆದರೂ ಕೂಡ ಟ್ರಂಪ್‍ನವರು ಇದು ತಲೆ ಕೆಡಿಸಿಕೊಳ್ಳಬೇಕಾದ ವಿಚಾರವೇ ಅಲ್ಲ ಎಂಬ ನಿಟ್ಟಿನಲ್ಲಿದ್ದರು. ಅವರು ಭಾರತಕ್ಕೆ ಬಂದು ಇನ್ನಷ್ಟು ಜನರನ್ನು ಕರೆ ತಂದರು. ಇಂದು ಅತೀ ಹೆಚ್ಚು ಕೋವಿಡ್-19 ಇರುವ ದೇಶವೇ ಅಮೇರಿಕವಾಗಿದೆ.
ನನ್ನ ಪ್ರಶ್ನೆ ಇಷ್ಟೆ. ಫೆಬ್ರವರಿಯಲ್ಲೇ ನಮ್ಮ ಆಲಸಿ ಸರಕಾರವು ತನ್ನ ನಿರ್ಧಾರಗಳನ್ನು ಏಕೆ ಕೈಗೊಳ್ಳಲಿಲ್ಲ? ಪ್ರಧಾನಿಯವರಂತೆಯೂ, ಶಾಸಕರಂತೆಯೂ, ಎಮ್.ಎಲ್.ಎ. ಗಳಂತೆಯೂ ನಮ್ಮ ದೇಶದಲ್ಲಿರುವವರೆಲ್ಲರೂ ಶ್ರೀಮಂತರಲ್ಲ. ನಮ್ಮ ಹೊಟ್ಟೆಪಾಡಿಗಾಗಿ ಅಲೆಯುತ್ತಲೇ ಇರುತ್ತಾರೆ. ಇಂತಹ ವಲಸೆ ಕಾರ್ಮಿಕರ ಬಗ್ಗೆ ಸರಕಾರ ಕಿಂಚಿತ್ತಾದರೂ ಯೋಚಿಸಿದೆಯೇ? ಯೋಚಿಸಿದ್ದೇಯಾಗಿದ್ದಲ್ಲಿ, ಜನತಾ ಕಫ್ರ್ಯೂವನ್ನು ಘೋಷಿಸುದರ ಕೆಲವು ದಿನಗಳ ಮುಂಚಿತವಾಗಿ ಇದರ ಬಗ್ಗೆ ಏಕೆ ಮಾಹಿತಿ ನೀಡಿಲಿಲ್ಲ? ನಮ್ಮ ದೇಶ ಇಂದು ಕೋವಿಡ್-19ನ ಸ್ಫೋಟಕ್ಕಿಂತಲೂ ಹೆಚ್ಚಿನದಾಗಿ ಹಸಿವಿನಿಂದಲೇ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ತಮ್ಮ ವಾಸ ಸ್ಥಾನಕ್ಕೆ ತಲುಪಲು ವಲಸೆ ಕಾರ್ಮಿಕರು ತಮ್ಮ ಕಾಲುಗಳನ್ನೇ ಆಶ್ರಯಿಸಿದ್ದಾರೆ. ಈಗಿರುವಾಗ ಇವರ ಸಾವಿನ ಸಂಖ್ಯೆ ಇಪ್ಪತ್ತೆರಡಕ್ಕೇರಿದೆ. ಇವರಲ್ಲಿ ಪ್ರತಿ 10ರಲ್ಲಿ 3 ಜನರಿಗೆ ಕೊರೋನ ಪೋಸಿಟಿವ್ ಇದೆ. ಇದಕ್ಕಾಗಿ ಈ ತುರ್ತು ಪರಿಸ್ಥಿತಿಯು ಕೊನೆಯಾಗುವವರೆಗೂ ವಲಸೆ ಕಾರ್ಮಿಕರನ್ನು ಅವರವರ ದನಿಗಳು ಹದ್ದುಬಸ್ತಿನಲ್ಲಿಟ್ಟು ಆರೋಗ್ಯಕರವಾಗಿಡಲು ಸೂಚಿಸಿ, ಕಟ್ಟು ನಿಟ್ಟಾದ ಕ್ರಮಗಳನ್ನು ಸೂಚಿಸಿದ್ದರೂ ಸಾಕಿತ್ತು. ಅವರಲ್ಲರೂ ಇಂದು ತಮ್ಮ ಜೀವವನ್ನು ಕಳೆದುಕೊಳ್ಳುತ್ತಿರಲಿಲ್ಲ. ದೇಶದಲ್ಲಿ ಹೇಳಿ ತೀರದ ಅನೇಕ ಸಮಸ್ಯೆಗಳಿವೆ. ಆದರೆ ಅವುಗಳನ್ನೆಲ್ಲ ಬಿಟ್ಟು ಉದಯವಾಣಿ ಒಂದು ಸಮುದಾಯವನ್ನು ಕೊರೋನಾದೊಂದಿಗೆ ಕಟ್ಟಿ ಮುಖಪುಟದಲ್ಲೇ ಹಚ್ಚು ಹಾಕಿದೆ. ಹಾಗೆಯೇ ನಿಜಾಮುದ್ದೀನಲ್ಲಿ ನಡೆದ ತಬ್ಲೀಗ್ ಜಮಾಅತ್‍ನ ಕಾರ್ಯಕ್ರಮದ ಬಗ್ಗೆ ತಿಳಿದೆ ಇರದ ಅಮಾಯಕರನ್ನು ಅಲ್ಲಿಗೆ ತೆರಳಿದ್ದರು ಮತ್ತು ಅವರಿಗೆ ಕೊರೋನ ಭಾದಿಸಿದೆ ಎಂದು ಮಾಧ್ಯಮಗಳು ಸೃಷ್ಟಿಸಿತು. ಹಾಗೆಯೇ ಮಂಗಳೂರಿನಲ್ಲಿನ ತೊಕ್ಕೋಟಿನ ಮಸೀದಿಯೊಂದರ ಅಧ್ಯಕ್ಷರು ಅಲ್ಲಿಗೆ ತೆರಳಿದ್ದರು ಹಾಗೂ ಅವರಿಗೂ ಕೊರೋನ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸಲು ಮಾಧ್ಯಮಗಳು ಹೊರಟರು. ಇಂತಹ ಮಾಧ್ಯಮಗಳ ಲೈಸೆನ್ಸ್ ರದ್ದುಗೊಳಿಸಬೇಕಾಗಿದೆ. ನಿಜಾಮುದ್ದೀನ್ ಕೇಂದ್ರದಲ್ಲಿ ಜನರು ತಿಳಿಯದೆಯೇ ತಂಗಿರಬಹುದು. ಆದರೆ ಅವರು ಭಯೋತ್ಪಾದಕರು ಎಂದು ಕರೆಯುವುದರಲ್ಲಿ ಯಾವುದೇ ಹುರುಳಿಲ್ಲ. ಇಂದು ಜಗತ್ತಿನಾದ್ಯಂತ ಕೊರೋನದಿಂದ ಮರಣ ಹೊಂದಿದರ ಸಂಖ್ಯೆ 50,000ಕ್ಕೇರಿದ್ದು, ಭಾರತದಲ್ಲಿ 50ಕ್ಕಿಂತಲೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸೋಂಕಿತರ ಸಂಖ್ಯೆ ಭಾರತದಲ್ಲಿ 2000ಕ್ಕೇರಿದ್ದು ಜಗತ್ತಿನಾದ್ಯಂತ 10,000 ಲಕ್ಷದಷ್ಟಾಗಿದೆ . ಈ ನಡುವೆ ನಮ್ಮೆಲ್ಲರ ಮಾನವೀಯತೆ ಹತ್ತರಷ್ಟು ಜಾಸ್ತಿಯಾಗಬೇಕು. ಆದರೆ ಇಂತಹ ಮಾತುಗಳು ಈ ತುರ್ತು ಪರಿಸ್ಥಿತಿಯಲ್ಲಿ ಕೋಮುಧ್ವೇಷವನ್ನು ಬಿತ್ತರಿಸುವುದರಲ್ಲಿ ಯವುದೇ ಅನುಮಾನವಿಲ್ಲ. ಎಲ್ಲದಕ್ಕಿಂತಲೂ ಮೊದಲಾಗಿ ನಾವೆಲ್ಲರೂ ಮಾನವರು ಹಾಗೊ ನಾವೆಲ್ಲರು ಒಂದೇ. ಹಾಗೆಯೇ ಮಾಧ್ಯಮ ಮಿತ್ರರೇ ಇಲ್ಲಿ ಕೇಳಿ ಪ್ರವಾದಿಯವರು ಹೇಳುತ್ತಾರೆ, “ದೇಶಪ್ರೇಮವು ನಿಮ್ಮ ಧರ್ಮದ ಮೇಲಿನ ನಂಬಿಕೆಯ ಒಂದು ಭಾಗವಾಗಿದೆ.” ಎಂದು ಬದಲಾಗಿ ದೇಶದ್ರೋಹವನಲ್ಲ.