• ಮಹಮ್ಮದ್ ನಿಹಾಲ್ ಕುದ್ರೋಳಿ

ಬಿಬಿಎಂಪಿ ಅಧಿಕಾರಿಗಳಿಂದ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಮಾತಾಡಿದ್ದಾರೆ. 17 ಮಂದಿಯ ಹೆಸರನ್ನೂ ಉಲ್ಲೇಖಿಸಿದ್ದಾರೆ. ಎಲ್ಲವೂ ಮುಸ್ಲಿಂ ಹೆಸರುಗಳು.

ಇದೇನು ಮದ್ರಸಕ್ಕೆ ಅಪಾಯಿಂಟ್ಮೆಂಟ್ ಮಾಡಿದ್ದೀರಾ ಅಲ್ಲ ಕಾರ್ಪೋರೇಷನ್ನಿಗಾ ಅನ್ನುವ ಪ್ರಶ್ನೆ ಕೂಡ ಅಲ್ಲಿದ್ದ ಬಿಜೆಪಿ ಶಾಸಕ ಎತ್ತಿದ್ದಾರೆ. ಆಸ್ಪತ್ರೆಯ ಬೆಡ್ ಅಲಾಟ್ಮೆಂಟ್ ನಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಬರೇ ಮುಸ್ಲಿಮರು ಮಾತ್ರ ಇದ್ದಾರೆ, ಅವರು ಈ ದುರಿತ ಕಾಲದಲ್ಲೂ ಜನರ ಪ್ರಾಣ ಹಿಂಡುತ್ತಿದ್ದಾರೆ ಎಂಬ ಸಂದೇಶ ತಲುಪಿಸುವುದು ಸಂಸದರ ಉದ್ದೇಶ ಎಂಬುದು ಅವರು ಹೇಳಿರುವ ಹೆಸರುಗಳೇ ಸಾಕ್ಷಿ. ಯಾಕೆಂದರೆ ಈ ಪ್ರಕರಣದಲ್ಲಿ ಈಗಾಗಲೇ ಅಮಿತ್, ರೋಹಿತ್, ನೇತ್ರಾ ಎಂಬವರನ್ನೂ ಬಂಧಿಸಲಾಗಿದೆ. ಆದರೆ ಇವರ ಹೆಸರನ್ನು ತೇಜಸ್ವಿ ಸೂರ್ಯ ಉಲ್ಲೇಖಿಸಿಲ್ಲ. ಅಲ್ಲದೆ ಬಿಬಿಎಂಪಿಯ ಮುಖ್ಯಸ್ಥರಾಗಿರುವುದು ಗೌರವ್ ಗುಪ್ತ. ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಲ್ಲದೆ ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿ ನಡೆಸಿದ್ದು ಮೇ ನಾಲ್ಕರಂದು. ಆದರೆ ಮೇ ಮೂರರಂದು ಬಿಬಿಎಂಪಿ ಮುಖ್ಯಸ್ಥರಾದ ಗೌರವ ಗುಪ್ತರು ಈ ಭ್ರಷ್ಟಾಚಾರದ ಬಗ್ಗೆ ಹೇಳಿದ್ದರಲ್ಲದೆ ಮೂರು ಮಂದಿ ತಜ್ಞ ಅಧಿಕಾರಿಗಳ ತಂಡವನ್ನು ತನಿಖೆಗೆ ನೇಮಿಸಿದ್ದರು. ಇದರ ಮೇಲುಸ್ತುವಾರಿಯನ್ನು ಪೊಲೀಸ್ ಅಧಿಕಾರಿ ಕಮಲ್ ಪಂತ್ ರ ಸುಪರ್ದಿಗೆ ಒಪ್ಪಿಸಿದ್ದರು.

ಮರುದಿನ ಸೂರ್ಯ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ನಿಮಗೆ ಗೊತ್ತಿರಲಿ ಎಂಬುದಕ್ಕಾಗಿ ಇಷ್ಟು ವಿವರಣೆಯನ್ನು ಕೊಡುತ್ತಿದ್ದೇವೆ.

ಇನ್ನು ತೇಜಸ್ವಿ ಸೂರ್ಯ ಮತ್ತು ಅವರು ಉಲ್ಲೇಖಿಸಿರುವ 17 ಹೆಸರುಗಳನ್ನು ಹೇಳಿಕೊಂಡು ಸಂಭ್ರಮ ಪಡುತ್ತಿರುವವರ ಗಮನಕ್ಕೆ.

ಇಲ್ಲಿ ಇನ್ನೊಂದಿಷ್ಟು ಮುಖಗಳಿವೆ. ಮಸೀದಿ ಮದ್ರಸ ಗಳಿವೆ.ಪಿಪಿಇ ಕಿಟ್ ಧರಿಸಿದ ಮತ್ತು ಹೆಸರು ಎಲ್ಲೂ ಬರ ಕೊಳ್ಳದ ಮನುಷ್ಯರಿದ್ದಾರೆ. ಒಂದು ಬಾರಿ ಇವರ ಹೆಸರುಗಳನ್ನು ಕೂಡ ನೀವು ಹಂಚಿಕೊಳ್ಳಿ. ಸಂಭ್ರಮ ಪಡಿ..

ಹಸಿದವರಿಗೆ, ಬೀದಿಬದಿಯಲ್ಲಿರುವವರಿಗೆ ಪೊಲೀಸರಿಗೆ ಕೊರೋನಾ ವಾರಿಯರ್ಸ್ ಗೆ ಊಟ ಮತ್ತು ಕಿಟ್ಟನ್ನು ಹoಚ್ಚುತ್ತಿರುವ ಚಿತ್ರ ಮತ್ತು ವಿಡಿಯೋಗಳು ಇವೆ. ಇವರೂ ಮುಸ್ಲಿಮರು. ಸಾಧ್ಯ ಇದ್ದರೆ ಇವರ ಚಿತ್ರಗಳನ್ನೂ ವಿಡಿಯೋಗಳನ್ನೂ ಹಂಚಿಕೊಳ್ಳಿ.

ಕೊರೋನಾ ಕಾಲದಲ್ಲಿ ಶವಸಂಸ್ಕಾರಕ್ಕೆ ಯಾರೂ ಮುಂದೆ ಬರದೆ ಅನಾಥವಾದ ಶವಗಳ ಸಂಸ್ಕಾರ ನಡೆಸಿದವರ ಚಿತ್ರಗಳು ಇವೆ. ಇವರೆಲ್ಲ ಮುಸ್ಲಿಮರು. ಆದರೆ ಇವರು ಹೆಸರನ್ನು ಧರಿಸಿಕೊಂಡಿಲ್ಲ. ಸಾಧ್ಯವಾದರೆ ಇವರ ಚಿತ್ರ, ವೀಡಿಯೊವನ್ನು ಹಂಚಿಕೊಂಡು ಸಂಭ್ರಮ ಪಡಿ.

ಆಕ್ಸಿಜನ್ ಸಿಲಿಂಡರ್ ತಲುಪಿಸುತ್ತಿರುವ ಇವರು ಕೂಡ ಮುಸ್ಲಿಮರು. ಗಡ್ಡ ಇದೆ. ಟೋಪಿ ಇದೆ. ಜುಬ್ಬಾ ಇದೆ. ಸಾಧ್ಯ ಇದ್ದರೆ ಈ ಫೋಟೋಗಳನ್ನು ಕೂಡಾ ಹಂಚಿಕೊಳ್ಳಿ. ತನ್ನ ಕಾರನ್ನೇ ಮಾರಿ ಆಕ್ಸಿಜನ್ ಸಿಲಿಂಡರ್ ಅನ್ನು ತಲುಪಿಸುತ್ತಿರುವ ಶಾನವಾಜ್ ಕೂಡ ಮುಸ್ಲಿಂ. ಸಾಧ್ಯ ಇದ್ದರೆ ಈ ಚಿತ್ರವನ್ನು ಹಂಚಿಕೊಂಡು ಸಂಭ್ರಮ ಪಡಿ.

ಶವಸಂಸ್ಕಾರವನ್ನು ನಡೆಸಿದ ಮುಸ್ಲಿಮ್ ಮಹಿಳೆಯರೂ ಇದ್ದಾರೆ. ಅವರು ಹೆಸರು ಬರಕೊಂಡಿಲ್ಲ. ಈ ಚಿತ್ರಗಳನ್ನು ಕೂಡ ಸಾಧ್ಯ ಇದ್ದರೆ ಹಂಚಿಕೊಳ್ಳಿ.

ಮಸೀದಿಯನ್ನು, ಶಾಲೆಯನ್ನು ಕೋರೋಣ ಆಸ್ಪತ್ರೆಯಾಗಿ ಬದಲಿಸಿದ ಘಟನೆಗಳು ಕೂಡ ಇವೆ. ಬೀದರ್, ವಡೋದರಾದಲ್ಲಿ ಹೀಗೆ ಬೇರೆ ಬೇರೆ ಕಡೆ ನಡೆದಿದೆ. ಸಾಧ್ಯ ಇದ್ದರೆ ಅವುಗಳನ್ನು ಹುಡುಕಿ ಹಂಚಿಕೊಳ್ಳಿ.

ವಿವಿಧ ಮಸೀದಿಗಳು ಒಟ್ಟು ಸೇರಿಕೊಂಡು ತುರ್ತು ಸೇವೆಗೆ ಇಳಿದಿರುವ ಹಲವು ಘಟನೆಗಳು ನಡೆದಿವೆ. ಸಾಧ್ಯವಿದ್ದರೆ ಇವುಗಳನ್ನು ಹುಡುಕಿ ಸಂಭ್ರಮ ಪಡಿ.

ಕೊರೋನಕ್ಕೆ ಧರ್ಮ ಬೇಧ ಇಲ್ಲ. ಅದು ಎಲ್ಲರನ್ನೂ ಕಾಡುತ್ತೆ. ಈ ದುರಿತ ಕಾಲದಲ್ಲೂ
ಮುಸ್ಲಿಮರು ಜನರ ಪ್ರಾಣ ಹಿಂಡುತ್ತಿದ್ದಾರೆ ಎಂಬ ಸಂದೇಶ ತಲುಪಿಸುವ ಪ್ರಯತ್ನವನ್ನು ಇಲ್ಲಿಗೆ ನಿಲ್ಲಿಸಿ. ಅಪರಾಧಿಗಳು ಯಾರೇ ಆದರೂ ಅವರಿಗೆ ಶಿಕ್ಷೆಯಾಗಲಿ ಅಷ್ಟೇ. ಒಂದು ಸಮುದಾಯದ ಹೆಸರನ್ನು ಮಾತ್ರ ಉಲ್ಲೇಖಿಸಿಕೊಂಡು ರಾಜಕೀಯ ಲಾಭ ಪಡೆದುಕೊಳ್ಳುವ ಹೀನ ಮನಸ್ಥಿತಿಗೆ ದಯವಿಟ್ಟು ಇಳಿಯಬೇಡಿ. ಥ್ಯಾಂಕ್ಯು.

ಸರ್ವೇ ಜನ ಸುಖಿನೋ ಭವಂತು

LEAVE A REPLY

Please enter your comment!
Please enter your name here