• ಮುಷ್ತಾಕ್ ಹೆನ್ನಾಬೈಲ್

ವಾಸಿಯಾಗದ ರೋಗದ ಸಹವಾಸದಲ್ಲಿ ನಾವಿದ್ದೇವೆ. ಸಾಂಕ್ರಾಮಿಕ ರೋಗಗಳೇನೂ ಜಗತ್ತಿಗೆ ಹೊಸತಲ್ಲ. ಕಾಲಕಾಲಗಳಲ್ಲಿ ಮನುಕುಲ ಇದನ್ನು ಕಂಡಿದೆ. ಆದರೆ ಈ ಹಿಂದಿನ ರೋಗಕ್ಕೂ ಈಗಿನ ರೋಗಕ್ಕೂ ವ್ಯತ್ಯಾಸವೆನೆಂದರೆ, ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ಅಂಟಿಕೊಂಡಿರುವ ಸಂದರ್ಭದಲ್ಲೇ ಈ ಅಂಟುರೋಗ ವಕ್ಕರಿಸಿಕೊಂಡಿದೆ. ಆಧುನಿಕ ಆರೋಗ್ಯ ವಿಜ್ಞಾನ ಮತ್ತು ಬೌದ್ಧಿಕ ಮಟ್ಟಕ್ಕೆ ನಿಲುಕದ ರೋಗವೂ ಇದಲ್ಲ. ಒಂದಿಷ್ಟು ದಿನ ಸುಮ್ಮನಿದ್ದು, ಅಂತರ ಕಾಯ್ದುಕೊಂಡು, ಕನಿಷ್ಠ ಶಮನ ಪ್ರಕ್ರಿಯೆಗಳಿಗೆ ಬದ್ದರಾದರೆ ಖಂಡಿತ ಇದು ಮಾಯವಾಗುವಂತದ್ದು. ಆದರೆ ಸರಳ ಪ್ರಕ್ರಿಯೆಗಳ ಪಾಲನೆಗೆ ಪ್ರಜೆಗಳು ಮತ್ತು ಪ್ರಭುತ್ವದ ನಡುವೆ ಸಮನ್ವಯ ಮೂಡದಿರುವುದು ರೋಗದ ವ್ಯಾಪಕವಾದ ನಕಾರಾತ್ಮಕ ಪರಿಣಾಮಗಳಿಗೆ ಕಾರಣವಾಗಿದೆ. ಯಾರೇನೇ ಅಂದರೂ, ಈ ರೋಗದ ಉಲ್ಭಣಿಸುವಿಕೆಯಲ್ಲಿ ಪ್ರಜೆ ಮತ್ತು ಪ್ರಭುತ್ವವು ಸಮಪಾಲಿನ ಸಹಭಾಗಿತ್ವವನ್ನು ಹೊಂದಿದೆ. ಹಾಗಾಗಿ ದೇಶಾದ್ಯಂತ ಅಘೋಷಿತ ಆರೋಗ್ಯ ತುರ್ತುಪರಿಸ್ಥಿತಿಯಿದೆ. ಹೀಗೆ ಮುಂದುವರಿದರೆ ಈ ರೋಗವು ಕನಿಷ್ಠ 5 ವರ್ಷ ರಂಪಾಟ ನಡೆಸುವುದು ನಿಶ್ಚಿತ..ಒಂದೊಮ್ಮೆ ಹೀಗಾಯಿತಾದರೆ ಕನಿಷ್ಟ 30 ವರ್ಷವಾದರೂ ನಾವು ಹಿಂದಕ್ಕೆ ಹೋದಂತಾಗುತ್ತದೆ.

ಸರ್ಕಾರಗಳು ಮಾರ್ಗಸೂಚಿ-ಸವಲತ್ತುಗಳನ್ನು ಅನುಷ್ಠಾನಿಸುತ್ತಿರುವ ರೀತಿ ಮತ್ತು ಜನರು ಸ್ಪಂದಿಸುವ ರೀತಿಯಿಂದಾಗಿ ಶಮನಕ್ಕಿಂತ ಹೆಚ್ಚು ಸಮಸ್ಯೆ ಉಲ್ಭಣಿಸುತ್ತಿದೆ. ಅದೇನೇ ಭಿನ್ನಾಭಿಪ್ರಾಯ ಮತ್ತು ಕೆಲವು ಲೋಪಗಳಿದ್ದರೂ, ಆರೋಗ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆ ರೋಗದ ಮೇಲೆ ನಿಯಂತ್ರಣ ಸಾಧಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ನಿಜ ಹೇಳಬೇಕೆಂದರೆ, ಕೊರೊನಾ ಬಂದ ಮೇಲೆ ಅತಿಹೆಚ್ಚು ದಮನಿತರಾದವರು ಈ ಎರಡು ಇಲಾಖೆಯವರೇ. ಬಹುತೇಕ ಖಾಸಗಿ ಆಸ್ಪತ್ರೆಗಳು ಸರಾಗ ಸುಲಿಗೆಗೆ ಇಳಿದಿರುವುದು ಆತಂಕದ ವಿಚಾರ. ಮೇಲ್ನೋಟಕ್ಕೆ ಸಾಮಾನ್ಯ ರೋಗದಂತೆ ಕಂಡರೂ ಕೂಡ, ಇತರ ಆರೋಗ್ಯ ಸಮಸ್ಯೆಯಿರುವವರಿಗೆ ಮತ್ತು ವಯಸ್ಸಾದವರಿಗೆ ಈ ರೋಗ ಮಾರಣಾಂತಿಕವಾಗಿದೆ. ವೈರಾಣುವಿನ ಪರಿವರ್ತಿತವೆಂದು ಬಿಂಬಿತವಾಗಿರುವ ರೂಪ, ಎಲ್ಲ ವಯೋಮಾನದವರಿಗೆ ಅಪಾಯಕಾರಿಯಾಗಿರುವುದು ಚಿಂತೆಯ ವಿಷಯ..ಈ ರೋಗದ ಸುಳಿಯಲ್ಲಿ ಸಿಲುಕಿ ಜಗತ್ತು ಇನ್ನೇನು ಕೆಲವೇ ದಿನಗಳಲ್ಲಿ ಎರಡು ವರ್ಷ ಪೋರೈಸುತ್ತದೆ. ಕಲಿಕೆಯ ಒಂದಿಡೀ ಶೈಕ್ಷಣಿಕ ವರ್ಷ ಮೊಬೈಲ್ ಹಿಡಿದುಕೊಂಡೇ ಹೋಯಿತು. ಎರಡನೇ ವರ್ಷವೂ ಮೊಬೈಲ್ ನೊಂದಿಗೆ ಆರಂಭವಾಗುವ ಸರ್ವ ಸಾಧ್ಯತೆಗಳು ನಿಚ್ಚಳವಾಗಿದೆ.

ಕೋವಿಡ್ 19 ಕಾಟ ಮುಗಿಯುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ..ಮುಂದೇನು?ರೋಗ ನಿಯಂತ್ರಣಕ್ಕೆ ಬರಬೇಕಾದರೆ, ಸರ್ವರೂ ಸಮರೋಪಾದಿಯಲ್ಲಿ ಕಾರ್ಯೋನ್ಮುಖರಾಗಬೇಕು. ಸರ್ಕಾರಗಳು ಮತ್ತು ಇಲಾಖೆಗಳು ನೈಜ ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಈ ವರ್ಷದ ಎಲ್ಲ ಸ್ತರದ ಚುನಾವಣೆಗಳನ್ನು ಮುಂದೂಡಬೇಕು. ಆಡಳಿತ ವಲಯದಲ್ಲಿ, ಪ್ರತೀ ರಾಜ್ಯದಲ್ಲಿ ಸರ್ವಪಕ್ಷೀಯರಿಂದ ಕೂಡಿದ, ತತ್ ಕ್ಷಣದ ಅನಿವಾರ್ಯತೆಗಳಿಗೆ ಸೂಕ್ತವೆನಿಸುವ ನಿರ್ಧಾರ ತೆಗೆದುಕೊಳ್ಳಬಲ್ಲ ಕ್ರಿಯಾಶೀಲ ಸಮಿತಿಯ ರಚನೆಯಾಗಬೇಕು. ಪ್ರತಿಯೊಂದಕ್ಕೂ ಮುಖ್ಯಮಂತ್ರಿ , ಆರೋಗ್ಯ ಸಚಿವರು,ಜಿಲ್ಲಾಧಿಕಾರಿಗಳನ್ನು ಮಾತ್ರ ಅವಲಂಬಿಸುವಂತಾಗಬಾರದು. ಇಂತಹ ಸಮರಸದೃಶ ಪರಿಸ್ಥಿತಿಯಲ್ಲಿ ಸರ್ಕಾರದ ಸರ್ವ ಇಲಾಖೆಗಳು ಕ್ಷಿಪ್ರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಪ್ರತಿ ಗ್ರಾಮ ಪಂಚಾಯತ್ ಗೆ ಒಂದರಂತೆ ಕನಿಷ್ಠ ಮೂಲ ಸೌಲಭ್ಯಗಳಿರುವ ಸುಸಜ್ಜಿತ ಕೋವಿಡ್ ಸೆಂಟರ್ ಗಳು ಸ್ಥಾಪನೆಯಾಗಿ, ಅದರಲ್ಲಿ ಸರ್ಕಾರಿ ವೈದ್ಯರ ಜೊತೆಗೆ ಖಾಸಗಿ ವೈದ್ಯರ ಸೇವೆಯನ್ನು ಸಮರ್ಥವಾಗಿ ಪಡೆದುಕೊಂಡರೆ, ಜಿಲ್ಲಾಡಳಿತಗಳ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ಬಹಳಷ್ಟು ಜೀವಗಳನ್ನು ಉಳಿಸಬಹುದು.

ಮಾಧ್ಯಮಗಳು, ಅದರಲ್ಲೂ ದೃಶ್ಯ ಮಾಧ್ಯಮಗಳು ಸಾವಿನ ಮನೆಯಲ್ಲಿ ಸಂಭ್ರಮಿಸುತ್ತಿವೆ. ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡುವುದರ ಬದಲಿಗೆ ವಿಪರೀತ ಪ್ರವಚನ ನೀಡುತ್ತಾ, ಮಧ್ಯದಲ್ಲಿ ಒಂದೆರಡು ಮಾಹಿತಿ ನೀಡುತ್ತಿವೆ. ಪರಿಸ್ಥಿತಿ ವಿಕೋಪಕ್ಕೆ ಹೋದರೆ ನಿಯಂತ್ರಣ ಸಾಧಿಸಲು ಸರ್ಕಾರಕ್ಕೂ ಸಾಧ್ಯವಿಲ್ಲ ಎಂಬ ಸತ್ಯದ ಅರಿವು ಸರ್ವರಿಗೂ ಮೂಡಬೇಕಿದೆ. ಸರ್ಕಾರದ ಜವಾಬ್ದಾರಿಯಷ್ಟೇ ಜವಾಬ್ದಾರಿ ಸಾರ್ವಜನಿಕರಿಗೂ ಇದೆ. ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸಮನ್ವಯ ಮೂಡದಿದ್ದರೆ ಕೋವಿಡ್ ಕಾಲ ವಿಸ್ತರಿಸಿಕೊಳ್ಳುವುದು ಖಚಿತ. ರೋಗಿಗಳ ಸಂಖ್ಯೆಗೆ ಹೋಲಿಸಿದರೆ ಸಾಯುವವರ ಸಂಖ್ಯೆ ಅತೀ ಕಡಿಮೆ. ಲಸಿಕೆಯ ಲಭ್ಯತೆಯಿರುವುದು ಸಮಾಧಾನದ ವಿಚಾರ..ಆದರೂ ವಯೋಸಹಜ ಕಾಯಿಲೆಯಿರುವವರು ಮತ್ತು ಇತರ ಕಾಯಿಲೆಯಿರುವ ಎಲ್ಲ ವಯೋಮಾನದವರಿಗೆ ಲಸಿಕೆಯ ಹೊರತಾಗಿಯೂ ಈ ರೋಗ ಮಾರಣಾಂತಿಕ. ಸಾಂಕ್ರಾಮಿಕ ರೋಗಗಳ ಇತಿಹಾಸವನ್ನು ನೋಡಿದರೆ, ಈ ರೋಗ ಈ ಹಿಂದಿನ ರೋಗಗಳಷ್ಟು ಭಯಾನಕವಲ್ಲ. ಆದರೆ ಇದು ಹರಡುವ ಮತ್ತು ರೋಗಿಯು ವಿಷಮ ಸ್ಥಿತಿಗೆ ತಲುಪುವ ವೇಗ ಈ ಹಿಂದಿನ ಎಲ್ಲ ರೋಗಗಳಿಗಿಂತ ಹೆಚ್ಚು. ಲಾಕ್ ಡೌನ್ ಮಾಡಲು ಸರ್ಕಾರಕ್ಕೂ ಇಷ್ಟವಿಲ್ಲ. ಅದು ಆರ್ಥಿಕತೆಗೆ ಪ್ರಬಲ ಹೊಡೆತವಿಕ್ಕುತ್ತದೆ. ಆ ಹೊಡೆತದಿಂದ ಚೇತರಿಸಿಕೊಂಡು ಸರ್ಕಾರ ನಡೆಸುವುದು ಅಷ್ಟು ಸುಲಭವಲ್ಲ. ಆದರೆ ಅವರಿಗೆ ಬೇರೆ ಆಯ್ಕೆಯೂ ಇಲ್ಲ. ಕೊರೊನಾ ಕಾಲದಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳು ಅತೀ ನತದೃಷ್ಟ ಸರ್ಕಾರಗಳು. ತಜ್ಞರ ವರದಿಯ ಪ್ರಕಾರ ರೋಗದ ವಿರುದ್ಧ ತುರ್ತು ಕಾರ್ಯಾಚರಣೆ ನಡೆಸದಿದ್ದರೆ ಪರಿಸ್ಥಿತಿ ಸರ್ಕಾರಗಳ ನಿಯಂತ್ರಣಗಳಿಂದ ಹೋರಹೋಗಲಿದೆ. ಒಂದೊಮ್ಮೆ ಹಾಗಾಯಿತಾದರೆ, ಜನಸಾಮಾನ್ಯರು ಮಾತ್ರವಲ್ಲ ಸರ್ಕಾರಗಳೂ ಗಂಭೀರ ಸಮಸ್ಯೆಯನ್ನು ಎದುರಿಸಲಿವೆ.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಸರ್ಕಾರ, ಇಲಾಖೆಗಳು ಮತ್ತು ಇತರ ವ್ಯವಸ್ಥೆಗಳು ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇದರಿಂದ ಕೊವಿಡ್ 19 ಮೇಲೆ ನಿಯಂತ್ರಣ ಸಾಧಿಸುವುದು ಕಷ್ಟ. ವೈರಸ್ ಮಾನವ ದೇಹದಲ್ಲಿ ಒಂದರಿಂದ ಮೂರು ವಾರದವರೆಗೆ ಮಾತ್ರವಿರುವುದರಿಂದ ರೋಗ ನಿರ್ಮೂಲನೆಗೆ ಸರ್ಕಾರ ಮತ್ತು ಸಾರ್ವಜನಿಕರು, ಅದೆಷ್ಟೇ ಕಠಿಣ ಪರಿಸ್ಥಿತಿ ಎದುರಾದರೂ,ಒಂದು ತಿಂಗಳು ಯೋಜನಾಬದ್ದರಾಗಿ ಕಾರ್ಯೋನ್ಮುಖರಾಗಬೇಕಿದೆ. ಅದೊಂದೇ ಆಯ್ಕೆಯಿರುವುದು. ಸರ್ಕಾರ ಮತ್ತು ಇಲಾಖಾ ಮಟ್ಟದಲ್ಲಿ ಸಹಜವಾಗಿಯೇ ತಪ್ಪುಗಳೂ ಸಂಭವಿಸುತ್ತವೆ. ಆದರೆ ಪರಸ್ಪರ ಕೆಸರರೆಚಾಟ, ಪ್ರವಚನ, ಭಾಷಣಗಳಿಗೆ ಇದು ಸಮಯವಲ್ಲ. ಪ್ರಾಣಿಗಳನ್ನು ಹೊರತಾಗಿಸಿ ಎಲ್ಲರ ತಲೆಯ ಮೇಲೂ ಕತ್ತಿ ತೂಗುತ್ತಿದೆ. ರೋಗದ ಬಗ್ಗೆ ನಾನಾ ಕಡೆಯಿಂದ ನಾನಾ ವ್ಯಾಖ್ಯಾನಗಳು ಬರುತ್ತಿವೆ. ಅದರ ಅವಲೋಕನಕ್ಕೂ ಇದು ಸಮಯವಲ್ಲ..ಕೆಲವರು ಎರಡನೇ ಅಲೆಯೆಂದರೆ, ಇನ್ನು ಕೆಲವರು ದೇಶದ ಮೇಲೆ ಜೈವಿಕ ಯುದ್ಧವೆನ್ನುತ್ತಿದ್ದಾರೆ. ಮೇಲ್ನೋಟಕ್ಕೆ ಮೊದಲ ಅಲೆಯೇ ಹೋಗಿಲ್ಲ, ಹೋಗಿದೆ ಎಂದು ಭ್ರಮಿಸಿ ನಿರಾಳರಾಗಿದ್ದೆ ಸಮಸ್ಯೆಯಾದಂತೆ ಕಂಡುಬರುತ್ತಿದೆ.

ಅದೇನೇ ಆದರೂ, ರೋಗ ನಿರ್ಮೂಲನೆಗೆ ಸರ್ವರೂ ಯೋಧಮನಸ್ಕರಾಗಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕಿದೆ. ಆಧುನಿಕ ಜೀವನಶೈಲಿ ಅತೀ ಹೆಚ್ಚು ಪರಾವಲಂಬಿಯಾದ ಕಾರಣ ಪರರೊಂದಿಗೆ ಪರಸ್ಪರ ಸಂಪರ್ಕವಿರಿಸದೇ ಬದುಕು ಸಾಧ್ಯವಿಲ್ಲದಷ್ಟು ಸ್ಥಿತಿಗೆ ಮನುಕುಲ ತಲುಪಿದೆ. ಆ ಸಂಪರ್ಕದಲ್ಲಿ ಖಂಡಿತ ಒಂದು ಕನಿಷ್ಟ ಕಾಲಘಟ್ಟದವರೆಗೆ ದೈಹಿಕ ಅಂತರ ಕಾಯ್ದುಕೊಳ್ಳಬೇಕೆಂಬ ಅತೀ ಕನಿಷ್ಠ ಜ್ಞಾನ ಮೂಡಿದರೆ ಈ ರೋಗ ಮಾಯ..ಸರ್ವರ ಇಚ್ಛಾಶಕ್ತಿ ಮೇಳೈಸಿ ಸಮರ್ಥ ಭೂಮಿಕೆ ನಿಭಾಯಿಸುವ ಸದ್ಬುದ್ಧಿ ಭಗವಂತ ಕರುಣಿಸಿದರೆ ಭೂಮಿಯ ಮೇಲಿನ ಬದುಕು ಇನ್ನು ಕೆಲವೇ ದಿನಗಳಲ್ಲಿ ಸುಗಮ ಮತ್ತು ಸರಾಗ. ಇಲ್ಲದಿದ್ದರೆ ಇರುವ ಅಲೆಗೇ 3 ನೇ ಅಲೆ ಎಂಬ ನೂತನ ನಾಮಕರಣ ಮತ್ತು 3 ನೇ ವರ್ಷಕ್ಕೆ ಪಾದಾರ್ಪಣೆ.

LEAVE A REPLY

Please enter your comment!
Please enter your name here