ಕವನ

  • ಫಯಾಝ್ ದೊಡ್ಡಮನೆ

ಚೈನಾದಲ್ಲೂ ಕಿರಿಕಿರಿಯೆನಿಸಿರಲಿಲ್ಲ
ನೂರಾರು ಜನರ ಜೊತೆ ಬೆರೆತು ಹೋಗಿದ್ದಾಗಲೂ
ಈ ಅನುಭವವಾಗಿರಲಿಲ್ಲ.
ಖಳನಂತೆ ನನ್ನ ಜರಿದಾಗಲೂ
ಗಹಗಹಿಸಿಯೇ ನಕ್ಕಿದ್ದೆ.

ರೋಮ್ ನಗರದಲ್ಲೂ ಹಿತವೆನಿಸುತ್ತಿತ್ತು.
ವೃದ್ಧರಾದಿಯಾಗಿ ತರಗೆಲೆಯಂತೆ ತಿರುಗಿ
ಬಿದ್ದಾಗಲೂ
ಹೆಮ್ಮೆಯೆನಿಸುತ್ತಿತ್ತು.
ಶಹರವೇ ಗಾಢ ಮೌನಕ್ಕೊರಗಿದಾಗ
ನನ್ನ ಶಬುದಕ್ಕೆಂದೂ
ಸ್ಥಳಾಭಾವವಿರಲಿಲ್ಲ.

ಮ್ಯಾಡ್ರಿಡ್ ನ್ಯೂಯರ್ಕಲ್ಲೂ ನಾನೇ ಗೆದ್ದಿದ್ದೆ.
ನನ್ನಟ್ಟಹಾಸದಾರ್ಭಟಕ್ಕೆ ಕೊನೆಯೇ ಇಲ್ಲ
ಎಂದೇ ಬೀಗುತ್ತಿಧ್ದೆ.

ಭಾರತಕ್ಕೆ ಕಾಲಿಟ್ಟೆ ನೋಡಿ,
ನನ್ನನ್ನೇ ಬದಲಿಸಿಬಿಟ್ಟರು.

ಅಣ್ಣ-ತಮ್ಮ ಬಂಧುಬಳಗವಿರದಿದ್ದರೂ
ಒಂಟಿತನ ಕಾಡಿರಲಿಲ್ಲ.
ಕುಲ-ಭಾಷೆಯ ಹಂಗಿರಲಿಲ್ಲ,
ಮತ- ಭೇದದರಿವಿರಲಿಲ್ಲ.
ಜಾತಿ-ಧರ್ಮ ನನಗೆ ಗೊತ್ತಿರಲಿಲ್ಲ.
ಸ್ವಾತಂತ್ರ್ಯದಮಲಿನಲ್ಲಿ ತೇಲುತ್ತಲೇ ಇದ್ದೆ.

ಏನು ಮಾಯೆಯರಿಯೆ?
ಬಂಧಿಯಾಗಿರುವೆ,
ಧರ್ಮದ ಅರಿವೆ ತೊಡಿಸಿದರು.
ನನ್ನದಲ್ಲದೊಂದನ್ನು ನನ್ನಂತೆ
ಭಾವಿಸಿದರು.
ತಮಗೆನಿಸಿದ ರೂಪ
ತೋಚಿದೊಂದ್ಹೆಸರ
ಮಾತುಮಾತಿಗೆ
ಹೆಸರಿಸಿದರು.

ಮೊನ್ನೆಯಿಂದ ಬದಲಾಗಿರುವೆ
ಎಂದೆಂದೂ ಅನುಭಾವಿಸದ
ಅನುಭವ,
ಅಪರಿಚಿತತೆ ಕಾಡುತ್ತಿದೆ
ನನಗೂ ಸಾಕೆನಿಸಿದೆ.

ನನಗಾರ ದೇಹವೂ ಬೇರೆಯಲ್ಲ.
ನನಗಾರ ರಕುತವೂ ಬೆಳ್ಳಗಲ್ಲ.
ನನಗಾರ ಉಸಿರೂ ಬಂಧುವಲ್ಲ.

1 COMMENT

LEAVE A REPLY

Please enter your comment!
Please enter your name here