ಕಥೆ

ಹಂಝ ಮಲಾರ್

“ಇಲ್ಲ… ಆ ಮಯ್ಯತನ್ನು ನಾನು ನೋಡಲಾರೆ… ಕೊಂಡು ಹೋಗಿ, ಅದನ್ನು ಎಲ್ಲಾದರು ದಫನ ಮಾಡಿ” ಎಂದು ಝಹುರಾ ಅಬ್ಬರಿಸಿದಾಗ ಒಂದು ಕ್ಷಣ ಅಲ್ಲಿದ್ದವರು ವಿಚಲಿತರಾದರು. ಯಾರೂ ಈ ಮಾತನ್ನು ನಿರೀಕ್ಷಿಸಿರಲಿಲ್ಲ.
ಆದರೆ, ಆಕೆಯ ಕಣ್ಣಲ್ಲಿ ಕಣ್ಣೀರು, ಮನಸ್ಸಲ್ಲಿ ದು:ಖ, ಮುಖದಲ್ಲಿ ಬೇಸರ ಎದ್ದು ಕಾಣುತ್ತಿರಲಿಲ್ಲ. ಏನೂ ಆಗಿಲ್ಲ ಎಂಬಂತೆ ಆಕೆ ತನ್ನ ಕೋಣೆಯಲ್ಲಿ ಪ್ರೀತಿಯ ಗಂಡ ಬಳಸುತ್ತಿದ್ದ ಕೋಂಚಿಯಲ್ಲಿ ಕುಳಿತಿದ್ದರು. ವಿಷಯ ತಿಳಿದ ಅಕ್ಕಪಕ್ಕದ ಮನೆಯವರು, ಸಂಬಂಧಿಕರು ಆ ಮನೆಯೊಳಗೆ ಕಾಲಿಟ್ಟಿದ್ದರು. ಪಾದೆಕಲ್ಲಿನಂತೆ ತುಟಿಪಿಟಿಕೆನ್ನದೆ ಕುಳಿತಿದ್ದ ಆಕೆಯನ್ನು ಮಾತನಾಡಿಸಲು ಮುಂದಾದವರೆಲ್ಲರೂ ಸೋತು ಸುಮ್ಮನಾಗಿದ್ದರು.
ಹೊರಗಡೆ ಟೀವಿ ಚಾನೆಲ್‍ನವರು, ಪತ್ರಿಕೆಯವರು, ಪೊಲೀಸರು ಅಲ್ಲಲ್ಲಿ ನಿಂತು ಬಿಸಿಬಿಸಿ ಚರ್ಚೆಯಲ್ಲಿ ತೊಡಗಿದ್ದರು. ಹಿರಿಯ ಶ್ರೇಣಿಯ ಪೊಲೀಸ್ ಅಧಿಕಾರಿಗಳೂ ಇದ್ದರು. ಒಂದು ಕ್ಷಣ ಝಹುರಾ ಹೊರಬಂದು “ಒಂದು ಹೇಳಿಕೆ ನೀಡಲಿ” ಎಂದು ಮಾಧ್ಯಮದವರು ಆಶಿಸುತ್ತಿದ್ದರು. ಆ ಮನೆ, ಪರಿಸರ, ಅಂಗಳದಲ್ಲಿ ನಿಂತಿದ್ದ ಸಾರ್ವಜನಿಕರು, ಪೊಲೀಸರು, ಮಾಧ್ಯಮದ ಮಂದಿ… ಹೀಗೆ ಎಲ್ಲರನ್ನೂ ಟೀವಿ ಚಾನೆಲ್‍ಗಳು ಮೇಲಿಂದ ಮೇಲೆ ತೋರಿಸುತ್ತಿದ್ದವು. ಚಾನೆಲ್‍ಗಳ ಕೊಠಡಿಯಲ್ಲಿ ಕುಳಿತಿರುವ ನಿರೂಪಕರಂತೂ ತಮ್ಮ ವರದಿಗಾರರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಗಾಗಿ ಒತ್ತಾಯಿಸುತ್ತಿದ್ದರು. ಎಲ್ಲವೂ ಲೈವ್ ಆಗಿತ್ತು. ಝಹುರಾ ಅದೆಲ್ಲವನ್ನೂ ಅಲ್ಲೇ ಕೋಂಚಿಯಲ್ಲಿ ಕುಳಿತು ವೀಕ್ಷಿಸುತ್ತಿದ್ದರು. ಕ್ಷಣಕಾಲ ಆಕೆಯ ಮನಸ್ಸಿಗೆ ನೋವುಂಟಾಯಿತು. ತನ್ನ ಮನೆಯ ಮತ್ತು ಆಸುಪಾಸಿನ ದೃಶ್ಯವನ್ನು ಇಡೀ ಜಗತ್ತು ಕಣ್ಬಿಟ್ಟು ನೋಡುತ್ತಿದೆ ಎಂದು ಆಕೆಗೆ ಮನವರಿಕೆಯಾಗುತ್ತಿದ್ದಂತೆಯೇ ದು:ಖ ಉಮ್ಮಳಿಸತೊಡಗಿತು. ಆದರೂ ಅದುಮಿಟ್ಟರು. ತನ್ನ ದೃಢ ನಿರ್ಧಾರದಿಂದ ಆಕೆ ಕದಲಲಿಲ್ಲ. ತಾನು ಆ ಮಯ್ಯತನ್ನು ಸ್ವೀಕರಿಸಿ ದಫನದ ವ್ಯವಸ್ಥೆ ಮಾಡಿದರೆ, ತೀರಿ ಹೋದ ಗಂಡನ ಮನಸ್ಸಿಗೆ ಸ್ವಲ್ಪವೂ ಶಾಂತಿ ಸಿಗದು ಎಂದು ಆಕೆಯ ಮನಸ್ಸು ಮತ್ತೆ ಮತ್ತೆ ಹೇಳುತ್ತಿತ್ತು.
ಅಷ್ಟರಲ್ಲಿ ಭಾರೀ ಪೊಲೀಸ್ ಬಂದೋಬಸ್ತ್‍ನೊಂದಿಗೆ ಆ್ಯಂಬುಲೆನ್ಸ್‍ನಲ್ಲಿ ಮೃತದೇಹವನ್ನು ತರಲಾಯಿತು. ಟೀವಿ ಚಾನೆಲ್, ಪತ್ರಿಕೆಯ ಫೋಟೋ ಗ್ರಾಫರ್‍ಗಳು ಮುಗಿಬಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಝಹುರಾರ ಸಂಬಂಧಿಕರ ಮೂಲಕ ಮತ್ತೊಮ್ಮೆ ಮನವಿ ಮಾಡಿದರು. ತಮ್ಮಲ್ಲಾದರು ಬಂದು ಮಾತನಾಡಲಿ ಎಂದರು.
“ಇಲ್ಲ… ನನಗೆ ಆ ಮಯ್ಯತ್‍ನ ಮುಖ ತೋರಿಸಬೇಡಿ” ಎಂದು ಝಹುರಾ ಒಳಗಿನಿಂದಲೇ ಹೇಳಿ ಕಳುಹಿಸಿದರು.
“ಹಾಗಂತ ಬರೆದುಕೊಟ್ಟರೆ ಚೆನ್ನ. ಇಲ್ಲದಿದ್ದರೆ ನಾಳೆ ನಮಗೆ ತೊಂದರೆಯಾದೀತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದಾಗ, ಝಹುರಾ ನಿರ್ವಾಹವಿಲ್ಲದೆ, “ನನ್ನ ಸ್ವಇಚ್ಛೆಯಿಂದ ಮಯ್ಯತನ್ನು ಸ್ವೀಕರಿಸದಿರಲು ನಿರ್ಧರಿಸಿದ್ದೇನೆ” ಎಂದು ಸ್ವ ಅಕ್ಷರದಲ್ಲಿ ಬರೆದು ಸಹಿ ಹಾಕಿದರು. ಆವಾಗಲೂ ಆಕೆಗೆ ಗಂಡ ಹಾಜಿ ಮೌಲಾನಾರ ನೆನಪಾಯಿತು. ಅವರ ಒತ್ತಾಯಕ್ಕೆ ಮಣಿದು ತಾನು ಅಂದು ನಾಲ್ಕಕ್ಷರ ಕಲಿತದ್ದು ಎಷ್ಟು ಪ್ರಯೋಜನಕ್ಕೆ ಬಂತು ಎಂದು ನೆನಪಿಸಿ ದು:ಖ-ನೋವಿನ ಮಧ್ಯೆಯೂ ಸಂತಸಗೊಂಡರು. ತನಗೆ ಅಕ್ಷರ ಬರುವುದಿಲ್ಲ ಎಂದು ಹೇಳಿದರೆ, ಮತ್ತೆ ಅದೊಂದು ಎಡವಟ್ಟಿಗೆ ಕಾರಣವಾಗುತ್ತಿತ್ತು. ಅಲ್ಲಾಹು ದೊಡ್ಡವ. ಅವ ನನ್ನನ್ನು ಅಪಾಯದಿಂದ ಪಾರು ಮಾಡಿದ ಎಂದು ಝಹುರಾ ತನ್ನಲ್ಲೇ ಹೇಳಿಕೊಂಡರು.
ಪೊಲೀಸ್ ಅಧಿಕಾರಿ ಆ ಪತ್ರವನ್ನು ಸ್ವೀಕರಿಸಿ, ಮೃತದೇಹವನ್ನು ವಾಪಾಸು ಕೊಂಡೊಯ್ದರು. ಕೆಲವು ಮಾಧ್ಯಮದವರು ಆ್ಯಂಬುಲೆನ್ಸ್‍ನ ಹಿಂದೆ ಹೋದರೆ, ಇನ್ನು ಕೆಲವರು ಬಕಪಕ್ಷಿಯಂತೆ ಅಲ್ಲೇ ಕಾದು ಕುಳಿತರು. ಅವರೆಲ್ಲರಿಗೂ ಝಹುರಾಳ ಹೇಳಿಕೆ ಬೇಕಾಗಿತ್ತು. ಆದರೆ, ಯಾವ ಹೇಳಿಕೆಯನ್ನೂ ನೀಡದಿರಲು ಆಕೆ ನಿರ್ಧರಿಸಿದ್ದರು.
ತನ್ಮಧ್ಯೆ ಕೆಲವು ಚಾನೆಲ್‍ಗಳು ಅದಕ್ಕೂ ಉಪ್ಪುಖಾರ ಬೆರಸತೊಡಗಿದವು. ಒಂದೆಡೆ ಝಹುರಾಳ ದಿಟ್ಟ ನಿಲುವನ್ನು ಪ್ರಶಂಸಿಸುತ್ತಲೇ ಇನ್ನೊಂದೆಡೆ ಮಾತಿಗೆ ಸಿಗದ ಸಿಟ್ಟಿನಿಂದ “ಮನೆಯೊಳಗೆ ಪಾದೆಕಲ್ಲಿನಂತೆ ಕುಳಿತಿದ್ದಾರೆ” ಎಂಬರ್ಥ ಬರುವಂತಹ ಬ್ರೇಕಿಂಗ್ ನ್ಯೂಸ್ ಬಿತ್ತರಿಸುತ್ತಿದ್ದವು.
ಎಷ್ಟಾದರೂ ದೇಶದ್ರೋಹಿಯ ಮನೆ. ಹೆತ್ತ ತಾಯಿ ಮಯ್ಯತ್ ಸ್ವೀಕರಿಸಲು ನಿರಾಕರಿಸಿದರೂ ಕೂಡ ಪುಂಡರಿಂದ ಮನೆಗೆ ಕಲ್ಲುತೂರಾಟ ಮತ್ತಿತ್ಯಾದಿ ಅನಾಹುತ ಸಂಭವಿಸಬಾರದು ಎಂದು ಭಾವಿಸಿ ಪೊಲೀಸರು ಆ ಮನೆಗೆ ಕೆಲವು ದಿನದ ಮಟ್ಟಿಗೆ ಬಂದೋಬಸ್ತ್ ಮಾಡಲು ನಿರ್ಧರಿಸಿದ್ದರು. ಅದಕ್ಕಾಗಿ ಒಂದು ತುಕಡಿ ಪೊಲೀಸ್ ಅಲ್ಲಿ ಕರ್ತವ್ಯ ನಿರ್ವಹಿಸತೊಡಗಿತು.
ಝಹುರಾ ಟಿ.ವಿ. ಮೂಲಕ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಆ ಕೋಣೆಯಿಂದ ಹೊರ ಬಿದ್ದ ಕ್ಷಣ ಮಾಧ್ಯಮದವರು ಮುತ್ತಿಕೊಳ್ಳುತ್ತಾರೆ ಎಂದು ಭಾವಿಸಿದ್ದ ಆಕೆ ಉಪಾಯವಿಲ್ಲದೆ ಅಲ್ಲೇ ಕುಳಿತಿದ್ದರು.
“ನಿಜ, ಅವ ನನ್ನ ಮಗ. ದೂರದ ದಿಲ್ಲಿಯಲ್ಲಿ ಖಾಸಗಿ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿರುವೆ ಎಂದು ಎರಡು ವರ್ಷದ ಹಿಂದೆ ಪತ್ರ ಬರೆದ. ಅದನ್ನು ನಂಬಿದ ನಾನು ಈ ವರ್ಷ ಊರಿಗೆ ಬರುವಂತೆ ಬಲವಾಗಿ ಒತ್ತಾಯಿಸಿದ್ದೆ. ಮದುವೆ ಮಾಡಲು ಬಯಸಿದ್ದೆ. ಆದರೆ, ಅವ ದೇಶದ್ರೋಹಿ ಸಂಘಟನೆಯಲ್ಲಿ ಗುರುತಿಸಿಕೊಂಡ ಮತ್ತು ಬಾಂಬ್ ಸ್ಪೋಟದಲ್ಲಿ ಕೊನೆಯುಸಿರೆಳೆದ ಎಂಬ ವಿಷಯ ಯಾವಾಗ ತಿಳಿಯಿತೋ… ಆ ಕ್ಷಣದಿಂದ ನಾನು ಅವನ ಸಂಬಂಧ ಕಳಕೊಂಡಿದ್ದೇನೆ” ಎಂದು ಆಕೆಯ ಮನಸ್ಸು ಮತ್ತೆ ಮತ್ತೆ ಹೇಳತೊಡಗಿತು.
ಪತ್ರಕರ್ತರು ಮತ್ತೊಮ್ಮೆ ಪರಿಪರಿಯಾಗಿ ಬೇಡಿಕೊಂಡರು. ಯಾವುದೇ ಹೇಳಿಕೆ ಬೇಡ, ಒಂದು ಕ್ಷಣ ಹೊರಗೆ ಬರಲಿ, ಹಳೆಯ ಫೋಟೋ ಆಲ್ಬಾಮ್ ಇದ್ದರೆ ಕೊಡಿ. ಮಗ ರಝಾಕ್ ದೇಶದ್ರೋಹದ ಬಗ್ಗೆ ತಾಯಿಯಲ್ಲಿ ಕಿಂಚಿತ್ತೂ ಮಾತನಾಡಲಿಲ್ಲವಾ? ಹೀಗೆ ಒಂದೊಂದು ತರಲೆ ಪ್ರಶ್ನೆಯನ್ನು ಪತ್ರಕರ್ತರು ರಝಾಕ್‍ನ ಸಂಬಂಧಿಕರಲ್ಲಿ ಕೇಳುತ್ತಿದ್ದರು. ಅವರು ತಮಗೆ ತೋಚಿದಂತೆ ಉತ್ತರಿಸುತ್ತಿದ್ದರು. ಆದರೆ, ಅವರಿಗೆ ಅದು ಮುಖ್ಯವಾಗಲಿಲ್ಲ. ಭಯೋತ್ಪಾದಕನ ತಾಯಿ ನೇರ ಹೇಳಿಕೆ ನೀಡಿದರೆ ಅದು ಸುದ್ದಿ ಎಂಬಂತೆ ಅವರು ವರ್ತಿಸುತ್ತಿದ್ದರು. ಝಹುರಾ ಟಿ.ವಿ. ಚಾನೆಲ್, ಪತ್ರಿಕೆಗಳಿಗೆ ಸಂದರ್ಶನ ನೀಡಲು ಇಷ್ಟಪಡಲಿಲ್ಲ. ವಿನಾ ಕಾರಣ ತಾನು ಅಲ್ಲಿ ಮಿಂಚುವುದು ಆಕೆಗೆ ಸರಿ ಕಾಣಲಿಲ್ಲ. ನನ್ನ ನಿರ್ಧಾರ ಏನು ಎಂದು ಎಲ್ಲರಿಗೂ ಗೊತ್ತಾಗಿದೆ. ಅದು ದೇಶದ್ರೋಹಿ ಕೆಲಸ ಮಾಡುವ ಹೆತ್ತವರ ಸಹಿತ ಅನ್ಯಾಯ-ಅಕ್ರಮ ಮಾಡುವ ಎಲ್ಲಾ ಮಕ್ಕಳ ಹೆತ್ತವರಿಗೊಂದು ಪಾಠವಾಗಲಿ ಎಂದು ಆಕೆ ಆಶಿಸಿದ್ದರು.
“ಈ ಉಮ್ಮ… ಯಾಕಿಷ್ಟು ಹಠ ಹಿಡಿದು ಸುಮ್ಮನೆ ಕುಳಿತಿದ್ದಾರೆ. ಒಂದು ಕ್ಷಣ ಹೊರಗೆ ಬಂದು ಚಾನೆಲ್‍ನ ಮುಂದೆ ನಿಂತರೆ ಅವರೆಲ್ಲಾ ಜಾಗ ಖಾಲಿ ಮಾಡುತ್ತಿರಲಿಕ್ಕಿಲ್ಲವಾ?” ಎಂದು ಕೆಲಸದ ಹೆಂಗಸೊಬ್ಬರು ತನ್ನಲ್ಲೇ ಪ್ರಶ್ನಿಸಿಕೊಂಡರು.
“ಬೆಳಿಗ್ಗೆ ನಾಷ್ಟ ಮಾಡಿದ ಮೇಲೆ ಒಂದು ಗುಟುಕು ನೀರು ಕುಡಿದಿಲ್ಲ. ಹೊಟ್ಟೆಗೆ ತಿಂಡಿ ಹಾಕಿಲ್ಲ. ಇವರಿಗೆ ಹಸಿವೂ ಆಗದೇ?” ಎಂದು ಆಕೆ ಕೇಳಿಕೊಂಡರಲ್ಲದೆ, “ಅರೆ, ತಾನು ಅಡುಗೆಯನ್ನೇ ತಯಾರಿಸಿಲ್ಲ” ಎಂದು ತನ್ನಲ್ಲೇ ಹೇಳಿದರು.
“ಮರಿಯಾ… ಹಸಿವಾಗುತ್ತಿದೆ. ತಿನ್ನಲು ಏನಾದರು ಕೊಡು” ಎಂದು ಝಹುರಾ ಮೆಲ್ಲನೆ ಕೂಗಿ ಕರೆದು ಹೇಳಿದರು.
“ಉಮ್ಮ… ನಾನು ಈವತ್ತು ಏನನ್ನೂ ಮಾಡಿಲ್ಲ”
“ಯಾಕೆ?”
“ಇಂಥ ಪರಿಸ್ಥಿತಿಯಲ್ಲಿ ನೀವು ಊಟ ಮಾಡುತ್ತೀರೋ… ಇಲ್ಲವೋ…?” ಎಂದು ಮರಿಯಾ ತನ್ನ ಮಾತನ್ನು ತುಂಡು ಮಾಡಿದಳು.
“ಊಟ ಮಾಡದಿರುವಂತಹ ಪರಿಸ್ಥಿತಿ ಏನಾಗಿದೆ? ಒಬ್ಬ ಸಜ್ಜನ ಮಗ ಅಗಲಿದ್ದರೆ, ನನಗೆ ಈವತ್ತು ಹಸಿವು ಆಗುತ್ತಿರಲಿಲ್ಲ. ಆದರೆ, ಅವ… ಅವ… ನನ್ನ ಮನಸ್ಸಿಗೆ…”-ಮಾತು ಮುಂದುವರಿಸಲಾಗದೆ ಝಹುರಾ ಅಳತೊಡಗಿದಾಗ ಅಲ್ಲಿದ್ದ ಎಲ್ಲರೂ ಆಕೆಯನ್ನು ಸಮಾಧಾನಪಡಿಸಿದರು. ಆವರೆಗೂ ಕಲ್ಲಾಗಿದ್ದ ಮನಸ್ಸು ಸ್ವಲ್ಪನೆ ಕರಗತೊಡಗಿತು. ಅದು ಮಗನ ಮೃತದೇಹ ನೋಡದ ಕೊರಗಲ್ಲ. ಮಗ ಇಂಥ ಅಡ್ಡದಾರಿ ಹಿಡಿದನಲ್ಲ ಎಂಬ ಕೊರಗಾಗಿತ್ತು.
“ಪ್ರವಾದಿ ಪೈಗಂಬರ್ ಸಾವಿರಾರು ವರ್ಷದ ಹಿಂದೆಯೇ ನಿನ್ನ ನೆಲವನ್ನು ಪ್ರೀತಿಸದ ಹೊರತು ನೀನು ಮುಸ್ಲಿಮನಾಗಲಾರೆ ಎಂದಿದ್ದರು. ಅಂಥ ಪವಿತ್ರ ಧರ್ಮದ ಹೆಸರಿನಲ್ಲಿ ಅವ, ಹುಟ್ಟಿ ಬೆಳೆದ ದೇಶದ ವಿರುದ್ಧ ಕಾರ್ಯಾಚರಣೆಗೆ ಇಳಿಯುವುದೆಂದರೆ… ಅಂಥ ಮಗನಿಗೆ ಜನ್ಮವಿತ್ತ ನಾನು ಪಾಪಿಯಲ್ಲದೆ ಮತ್ತಿನ್ನೇನು?”-ಝಹುರಾರ ಸಹನೆಯ ಕಟ್ಟೆಯೊಡೆಯುತ್ತಿತ್ತು.
ಮರಿಯಾ ರಾತ್ರಿ ಸ್ವಲ್ಪ ಉಳಿದಿದ್ದ ಅನ್ನವನ್ನು ಬೇಯಿಸಿ ತಂದು ಝಹುರಾಳ ಮುಂದಿಟ್ಟಳು. ಆದರೆ, ಝಹುರಾರ ಗಂಟಲಿನೊಳಗೆ ಅದು ಇಳಿಯಲಿಲ್ಲ. ತಾನು ಸಾಕಿ ಸಲಹಿದ, ಆಡಿಸಿ ಬೆಳೆಸಿದ ಮುದ್ದು ಮಗನ ಆ ಮುಖ ಎದುರಾಯಿತು. ಜತೆಗೆ ಅವನ ಜತೆ ಆಟವಾಡುತ್ತಲೇ ಮಗುವಾಗುತ್ತಿದ್ದ ಗಂಡನ ನೆನಪು ಕಾಡತೊಡಗಿತ್ತು. “ಅವರಿದ್ದರೆ, ಇವ ದಾರಿ ತಪ್ಪುತ್ತಿದ್ದನಾ? ಇಂಥ ಪರಿಸ್ಥಿತಿ ಎದುರಾಗುತ್ತಿತ್ತಾ?” ಎಂದು ಅವರ ಮನಸ್ಸು ಮತ್ತೆ ಮತ್ತೆ ಪ್ರಶ್ನಿಸತೊಡಗಿತು.
“ರಝಾಕ್… ನೀನು ದೊಡ್ಡವನಾದರೆ ದೊಡ್ಡ ಡಾಕ್ಟರ್ ಆಗಬೇಕು”
“ಯಾಕೆ ಉಮ್ಮಾ…. ನಾನು ಇಂಜಿನಿಯರ್ ಆಗುವೆ. ದೊಡ್ಡ ದೊಡ್ಡ ಬಿಲ್ಡಿಂಗ್ ಕಟ್ಟಿಸುವೆ”
“ಬೇಡ ಮೋನೇ… ನೀನು ಡಾಕ್ಟರ್ ಆಗಬೇಕು. ಅದೇ ನನ್ನ ಆಸೆ”
“ಯಾಕೆ ಡಾಕ್ಟರೇ ಆಗಬೇಕು?”
“ನನ್ನ ತಂದೆ ಸೂಕ್ತ ಚಿಕಿತ್ಸೆ ಇಲ್ಲದೆ ಮೃತಪಟ್ಟಿದ್ದರು. ಆವತ್ತು ಒಬ್ಬ ಒಳ್ಳೆಯ ಡಾಕ್ಟರ್ ಸಿಕ್ಕಿದ್ದರೆ ಅವರು ಬದುಕುಳಿಯುತ್ತಿದ್ದರೋ ಏನೋ? ಅವರ ನೆನಪಲ್ಲೇ ಉಮ್ಮ ಕೂಡ ಕಾಲವಾದರು”
“ಆಯ್ತು… ಉಮ್ಮ, ನಾನು ದೊಡ್ಡ ಡಾಕ್ಟರ್ ಆಗುವೆ. ಜತೆಗೆ ದೊಡ್ಡ ಮನೆ ಕಟ್ಟಿಸುವೆ. ನಾವೆಲ್ಲಾ ಅಲ್ಲಿ ಸುಖವಾಗಿ ಕಾಲ ಕಳೆಯೋಣ”
“ಈಗ ಈ ಮನೆಯೇ ಸಾಕು. ನಿನ್ನ ತಂದೆ ನಮಗೆ ಯಾವುದರಲ್ಲೂ ಕಡಿಮೆ ಮಾಡಿಲ್ಲ. ನಿನ್ನನ್ನು ಚೆನ್ನಾಗಿ ಓದಿಸಬೇಕು ಅಂತ ಹೇಳುತ್ತಿದ್ದಾರೆ. ನೀನು ಒಬ್ಬನೇ ಮಗ ಅಲ್ವ? ಅವರಿಗೆ ಅದು ಕಷ್ಟವಾಗದು” ಎಂದು 23 ವರ್ಷದ ಹಿಂದೆ ತಾನು ಮಗನ ಜತೆ ಮಾತನಾಡಿದ್ದನ್ನು ಝಹುರಾ ನೆನಪಿಸಿದರು.
ಆವಾಗ ಮಗ ರಝಾಕ್ ಎಷ್ಟು ಮುದ್ದಾಗಿದ್ದ. ನೋಡಲು ಸ್ಪುರಧ್ರೂಪಿ. ಎಲ್ಲರ ಪ್ರೀತಿಯ ಹುಡುಗನಾಗಿದ್ದ. ಮದ್ರಸ-ಶಾಲೆಯಲ್ಲಾಗಲೀ ಹಿಂದೆ ಬಿದ್ದವನಲ್ಲ. ಶಿಕ್ಷಕರು ಅವನನ್ನು ಕೊಂಡಾಡುತ್ತಿದ್ದರು. ಇಂದು ಅದೇ ಮಗ ದೇಶದ್ರೋಹಿ. ಅವನಿಗೆ ಶಿಕ್ಷಣ ನೀಡಿದವರ ಮನಸ್ಸಿಗೆ ಈಗ ಹೇಗಾಗಿರಬೇಡ?”- ಝಹುರಾ ಯೋಚಿಸುತ್ತಿದ್ದರು.
ಸೂರ್ಯ ಮುಳುಗಿದರೂ ಪತ್ರಕರ್ತರು ಅಲ್ಲಿಂದ ಕದಲಲಿಲ್ಲ. ಸಾರ್ವಜನಿಕರಲ್ಲಿ ಹೆಚ್ಚಿನವರನ್ನು ಪೊಲೀಸರು ಚದುರಿಸಿದ್ದರು. ಆದರೆ, ಪತ್ರಕರ್ತರು ಅತ್ತಿತ್ತ ಹೊರಳಾಡಿ ಝಹುರಾರ ಮುಖವನ್ನು ಟೀವಿ ಪರದೆಯ ಮೇಲೆ ಚೆಲ್ಲಲು ಪ್ರಯತ್ನ ಸಾಗಿಸಿದ್ದರು.
ಒಂದಷ್ಟು ಅನ್ನ ಗಂಟಲೊಳಗೆ ಹಾಕಿದ ಝಹುರಾ, ಅದೇ ಕೋಣೆಯಲ್ಲಿ ವಝು ಮಾಡಿ ನಮಾಜ್‍ಗೆ ಅಣಿಯಾದರು. ಟಿ.ವಿ. ಚಾನೆಲ್‍ನಲ್ಲಿ ಮಾತ್ರ “ದೇಶದ್ರೋಹಿ ರಝಾಕ್‍ನ ತಾಯಿ ಝಹುರಾ ಸುಮ್ಮನೆ ಕೋಣೆಯೊಳಗೆ ಪಾದೆಕಲ್ಲಿನ ಹಾಗೆ ಕುಳಿತಿದ್ದಾರೆ” ಎಂದು ಸುದ್ದಿ ಬಿತ್ತರಿಕೆಯಾಗುತ್ತಿತ್ತು. ಅದನ್ನು ಕೇಳಿಸಿಕೊಂಡ ಝಹುರಾ “ಟಿ.ವಿ. ಆಫ್ ಮಾಡಿಬಿಡಿ. ನನಗೆ ಅದನ್ನೆಲ್ಲಾ ನೋಡಿ ಏನಾಗಲಿಕ್ಕಿದೆ?” ಎಂದು ಹೇಳಿ ಸಿಡಿಮಿಡಿಗೊಂಡರು.
ಸೂರ್ಯ ಮತ್ತೆ ಮೇಲೆದ್ದ.
ಕೆಲವೇ ಕೆಲವು ಟಿ.ವಿ. ಚಾನೆಲ್-ಪತ್ರಿಕೆಯವರು ಅಲ್ಲಿದ್ದರು. ಇನ್ನು ಕೆಲವರು ರಾತ್ರಿ ಹಗಲೆನ್ನದೆ ಊರವರ, ರಝಾಕ್‍ನ ಒಡನಾಡಿಗಳ, ಶಿಕ್ಷಕರ ಅಭಿಪ್ರಾಯ ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದರು.
ಎರಡ್ಮೂರು ದಿನಗಳ ಕಾಲ ಟೀವಿ-ಪತ್ರಿಕೆಗಳಲ್ಲಿ ಅದೇ ಸುದ್ದಿ.
ಝಹುರಾ ಅರೆ ಜೀವವಾಗಲು ಮಾಧ್ಯಮಗಳ ಉಪಟಳವೇ ಸಾಕಾಯಿತು.
***
ಪಾತ್ರೆಗಳಿಗೆ ಕಲಾಯಿ ಹಾಕಿ ಬದುಕು ದಿನದೂಡುತ್ತಿದ್ದ ಇಬ್ರಾಯಾಕರಿಗೆ ಮನೆ ತುಂಬಾ ಹೆಣ್ಮಕ್ಕಳು. ಗಂಡ್ಮಗ ಅಂತ ಒಬ್ಬನೂ ಇಲ್ಲ. ಮೇಲಾಗಿ ಬಡ ಕುಟುಂಬ. ಝಹುರಾ ಮೂರನೇ ಹೆಣ್ಮಗಳು. ಆಕೆಯ ಇಬ್ಬರು ಅಕ್ಕಂದಿರಿಗೆ ಮದುವೆಯಾಗಿದೆ. ಆದರೆ, ಎರಡೆರಡು ಮಕ್ಕಳನ್ನು ಕರುಣಿಸಿದ ಅವರ ಗಂಡಂದಿರು ಊರಿಗೆ ಹೋಗಿ ಬರುವೆ ಎಂದು ಹೇಳಿ ಹೋದವರು ಮತ್ತೆ ಬರಲೇ ಇಲ್ಲ. ಊರು, ವಿಳಾಸ ಇಲ್ಲದ ಎಲ್ಲಿಂದಲೋ ಬಂದ ಆ ಇಬ್ಬರಿಗೆ ಮದುವೆ ಮಾಡಿಕೊಟ್ಟದ್ದು ತಪ್ಪು ಎಂದು ಈಗ ಇಬ್ರಾಯಕರಿಗೆ ತಪ್ಪಿನ ಅರಿವಾಗಿತ್ತು.
ಝಹುರಾ ಚೆಂದುಳ್ಳಿ ಚೆಲುವೆ. ಆ ಕುಟುಂಬದಲ್ಲೇ ಆಕೆ ನೋಡಲು ತುಂಬಾ ಚೆಂದ ಇದ್ದಳು. ಆಕೆಯನ್ನಾದರು ಒಳ್ಳೆಯ ಒಬ್ಬ ಹುಡುಗನಿಗೆ ಮದುವೆ ಮಾಡಿಕೊಡಬೇಕು ಎಂದು ಇಬ್ರಾಯಕ ಆಶಿಸಿದ್ದರು. ಇಬ್ರಾಯಕ ಕಲಾಯಿ ಹಾಕಲು ಹೋದಾಗಲೆಲ್ಲಾ ತನ್ನ ಮಗಳಿಗೆ ಮದುವೆ ಇದೆ. ಸ್ವಲ್ಪ ಸಹಾಯ ಮಾಡಬೇಕು ಎಂದು ಹಲವರಲ್ಲಿ ಹೇಳಿಕೊಳ್ಳುತ್ತಿದ್ದರು.
ಅದೊಂದು ದಿನ ಹಾಜಿ ಮೌಲಾನಾರ ಮನೆಗೂ ಇಬ್ರಾಯಾಕ ಕಲಾಯಿ ಹಾಕಲು ಹೋಗಿದ್ದರು. ಅವರ ಮನೆಯ ಎಲ್ಲಾ ಸಂಗತಿಯೂ ಇಬ್ರಾಯಕರಿಗೆ ಚೆನ್ನಾಗಿ ತಿಳಿದಿದೆ. ಊರಲ್ಲೇ ಅನುಕೂಲಸ್ಥ, ಗೌರವಸ್ಥ ಇತ್ಯಾದಿ ಹೆಸರಿದ್ದರೂ ಕೂಡ ಮೌಲಾನಾರಿಗೆ ಮನೆಯಲ್ಲಿ ನೆಮ್ಮದಿ ಇರಲಿಲ್ಲ. ಅದಕ್ಕೆ ಆಕೆಯ ಹೆಂಡತಿಯ “ಬೊಂ”ಬಾಯಿಯೇ ಕಾರಣ ಅಂತಲೂ ಇಬ್ರಾಯಕರಿಗೆ ಗೊತ್ತಿತ್ತು. ಆಕೆಯೂ ದೊಡ್ಡ ತರವಾಡಿನ ಹೆಣ್ಮಗಳು. ಮದುವೆಯಾಗಿ ಆರು ವರ್ಷವಾದರೂ ಮಕ್ಕಳಾಗಲಿಲ್ಲ.
ಊರಲ್ಲೇ ದೊಡ್ಡದಾದ ಜಿನಸಿ ಅಂಗಡಿ ನಡೆಸುತ್ತಿದ್ದ ಹಾಜಿ ಮೌಲಾನಾರಿಗೆ ಮತ್ತೊಂದು ಮದುವೆ ಆಗುವ ಇಚ್ಛೆ ಇತ್ತು. ಅದೂ ಕೇವಲ ಮಕ್ಕಳ ಮೇಲಿನ ಆಸೆಗಾಗಿ!. ಆದರೆ, ಹೆಂಡತಿ ಅದಕ್ಕೆ ತಡೆಯಾಗಿದ್ದಳು.
“ಹಾಜಿಯಾಕ. ಮಗಳ ಮದುವೆ ಇದೆ. ಸ್ವಲ್ಪ ಸಹಾಯ ಮಾಡಬೇಕು” ಎಂದು ಇಬ್ರಾಯಕ ಹೇಳಿ, ತನ್ನ ಪಾಡಿಗೆ ಕಲಾಯಿ ಹಾಕುತ್ತಿದ್ದರು. ಹಾಜಿ ಮೌಲಾನಾ, ಇಬ್ರಾಯಕರ ಹೆಂಡತಿ-ಮಕ್ಕಳ ಬಗ್ಗೆ ಕೇಳಿ ತಿಳಿದು ಕೊಳ್ಳತೊಡಗಿದರು. ಮೊದಲ ಇಬ್ಬರಿಗೆ ಮದುವೆಯಾಗಿದೆ. ಇನ್ನು ಮೂವರು ಮದುವೆಯಾಗಲು ಬಾಕಿ ಇದ್ದಾರೆ. ಮೂರನೇ ಮಗಳು ಝಹುರಾ ನೋಡಲು ತುಂಬಾ ಚೆಂದ ಇದ್ದಾಳೆ. ಹಾಗಾಗಿ ಸ್ವಲ್ಪ ವರದಕ್ಷಿಣೆಯ ಭಾರ ಕಡಿಮೆ ಆದೀತು. ಆದರೆ, ಅವಳ ಮದುವೆಯ ನಿಶ್ಚಿತಾರ್ಥ ಇನ್ನೂ ಆಗಿಲ್ಲ. ಈ ಕಾಲದಲ್ಲಿ ಮದುವೆ ಅಂದರೆ ಅಷ್ಟು ಸುಲಭಾನಾ? ಎಂದು ಇಬ್ರಾಯಕ ಹೇಳಿಕೊಂಡರು.
“ಎಷ್ಟು ಕಲಿತಿದ್ದಾಳೆ?”- ಹಾಜಿ ಮೌಲಾನ ಪ್ರಶ್ನಿಸಿದರು.
“ಶಾಲೆಯ ಮುಖ ಕಂಡಿಲ್ಲ. ಕುರಾನ್ ಓದುತ್ತಾಳೆ” ಇಬ್ರಾಯಕ ಮೆಲ್ಲನೆ ಉತ್ತರಿಸಿದರು.
“ನಿಮ್ಮ ಮಗಳನ್ನು ನನಗೆ ಕೊಟ್ಟರೆ ಹೇಗೆ?”-ಮೌಲಾನಾರ ಪ್ರಶ್ನೆ.
ಈ ಅನಿರೀಕ್ಷಿತ ಪ್ರಶ್ನೆಯಿಂದ ಇಬ್ರಾಯಕ ತತ್ತರಿಸಿದರು. ಏನು ಉತ್ತರಿಸಬೇಕು ಎಂದು ಅವರಿಗೆ ತೋಚಲಿಲ್ಲ. ಅವರು ಹಾಜಿ ಮೌಲಾನರನ್ನೇ ನೋಡತೊಡಗಿದರು.
“ನಿಮಗೆ ಇಷ್ಟವಿದ್ದರೆ ಮಾಡಿಕೊಡಿ. ವರದಕ್ಷಿಣೆ ಅಂತ ಏನೂ ಬೇಡ. ನಾನೇ ಸ್ವಲ್ಪ ಚಿನ್ನಾಭರಣ ಕೊಡುವೆ. ಮದುವೆ ಖರ್ಚನ್ನೂ ಭರಿಸುವೆ”
“ನಿಮ್ಮ ಮೊದಲ ಹೆಂಡತಿ?”
“ಸದ್ಯ ಆಕೆಗೆ ಗೊತ್ತಾಗದ ಹಾಗೆ ನೋಡಿಕೊಳ್ಳೋಣ. ಮತ್ತೆ ಗೊತ್ತಾದರೂ ಚಿಂತೆ ಇಲ್ಲ”
“ನಾಳೆ ಏನಾದರು ಹೆಚ್ಚು ಕಮ್ಮಿಯಾದರೆ?”
“ಹಾಗೇನು ಆಗದು… ಅಲ್ಲಾಹು ದೊಡ್ಡವ”
“ಎರಡು ದಿನದಲ್ಲಿ ಹೇಳುವೆ” ಎನ್ನುತ್ತಾ ಇಬ್ರಾಯಕ ನೇರ ಅಲ್ಲಿಂದ ಮನೆಗೆ ಕಾಲಿಟ್ಟರು. ಅವರಿಗೆ ಮನೆ ಮನೆಗೆ ಹೋಗಿ ಕಲಾಯಿ ಹಾಕಲು ಮನಸ್ಸಾಗಲಿಲ್ಲ. ತನ್ನ ಮನೆಗೆ ಹೋದವರೇ ಮುಚ್ಚುಮರೆ ಇಲ್ಲದೆ ಎಲ್ಲವನ್ನೂ ಹೆಂಡತಿಯಲ್ಲಿ ಹೇಳಿದರು.
“ನಯಾಪೈಸೆ ಖರ್ಚಿಲ್ಲದೆ ಮದುವೆಯಾಗುವುದಾದರೆ ಯಾಕೆ ಬೇಡ ಎನ್ನಬೇಕು?” ಎಂದು ಮನೆ ಮಂದಿ ಹೇಳಿಕೊಂಡರೂ, ಝಹುರಾಳಿಗೆ ಒಳಗಿಂದೊಳಗೆ ಆತಂಕ. “ಮೊದಲ ಹೆಂಡತಿ ಏನಾದರು ಮಾಡಿದರೆ?” ಎಂದು ಆಕೆಯ ಮನಸ್ಸು ಪ್ರಶ್ನಿಸುತ್ತಿತ್ತು.
ಅಂತೂ ಎರಡು ವಾರದ ನಂತರ ಝಹುರಾ, ಹಾಜಿ ಮೌಲಾನಾರ ಬಾಳ ಸಂಗಾತಿಯಾದಳು. ಒಂದು ಸಲ ಹಾಜಿ ಮೌಲಾನಾ ಅತ್ತೆ ಮನೆಗೆ ಹೋಗಿ ತಂಗಿದ್ದರು. ಮತ್ತೆ ವಾರಕ್ಕೊಮ್ಮೆ ಪಕ್ಕದ ಪಟ್ಟಣದ ಲಾಡ್ಜ್‍ಗೆ ಹೋಗಿ ಒಂದು ರಾತ್ರಿ ತಂಗುತ್ತಿದ್ದರು. ಅಲ್ಲಿಂದ ಝಹುರಾ ಮರಳಿ ಮನೆಗೆ ಬರುವಾಗ ಕೈ ತುಂಬಾ ಹಣ, ಸಾಮಾನನ್ನು ತರುತ್ತಿದ್ದಳು. ಇದು ಊರು ತುಂಬಾ ಸುದ್ದಿಯಾಗಿ ಹಾಜಿ ಮೌಲಾನರ ಮೊದಲ ಹೆಂಡತಿಗೆ ಗೊತ್ತಾಗಲು ಹೆಚ್ಚೇನು ದಿನ ಬೇಕಾಗಿರಲಿಲ್ಲ. ಆಕೆ ರಂಪಾಟ ಮಾಡಿದರೂ ಮೌಲಾನಾ ನಿರ್ಲಕ್ಷಿಸಿದರು.
ಝಹುರಾಳನ್ನು ಕೈ ಹಿಡಿದ ಫಲವೋ ಏನೋ? ಹಾಜಿ ಮೌಲಾನರ ವ್ಯಾಪಾರದಲ್ಲೂ ಏರಿಕೆ ಕಂಡು ಬಂತು. ದಿನ ಉರುಳುತ್ತಲೇ ಝಹುರಾ ಗಂಡನ ಮನೆ ಸೇರಿದಳು. ಮೊದಲ ಹೆಂಡತಿ ಒಂದೆರೆಡು ದಿನ ಆರ್ಭಟಿಸಿದರೂ, ಝಹುರಾಳ ಗುಣ ನಡತೆ ಕಂಡು ಸೋತು ಹೋದರು. ಅಕ್ಷರ ಜ್ಞಾನವಿಲ್ಲದ ಝಹುರಾ ಗಂಡನ ಪ್ರೋತ್ಸಾಹದಿಂದ ನಾಲ್ಕಕ್ಷರ ಕಲಿತಳು. ವರ್ಷ ಉರುಳುವುದರೊಳಗೆ ಝಹುರಾ ಗಂಡು ಮಗುವಿಗೆ ಜನ್ಮ ನೀಡಿದಳು. ತನ್ನದೇ ಮಗು ಎಂಬಂತೆ ಮೊದಲ ಹೆಂಡತಿ ಖುಶಿಯಿಂದ ಮಗುವನ್ನು ಆರೈಕೆ ಮಾಡಿದರು. ಹಳೆಯದನ್ನು ಮರೆತು ಗಂಡನ ಜತೆ ಪ್ರೀತಿಯಿಂದ ದಿನ ದೂಡ ತೊಡಗಿದರು. ಆದರೆ, ಆ ಸಂತಸ ಹೆಚ್ಚು ದಿನವಿರಲಿಲ್ಲ. ಆಕೆ ಮೆದುಳಿನ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಕಣ್ಮುಚ್ಚಿದರು. ಹಾಜಿ ಮೌಲಾನಾ ಮಗುವಿನಂತೆ ಅತ್ತಾಗ, ಝಹುರಾ ಸಾಂತ್ವಾನ ನೀಡಿದಳು.
ಕಾಲ ಚಕ್ರ ಉರುಳುತ್ತಲೇ ಇತ್ತು.
ಮಗ ರಝಾಕ್‍ನನ್ನು ಚೆನ್ನಾಗಿ ಸಾಕಿ ಸಲಹಿದರು. ಆತನ ಕೋರಿಕೆಯಂತೆ ಕಾಲೇಜಿಗೆ ಕಳುಹಿಸಿಕೊಟ್ಟರು. ಇನ್ನೇನು ಆತ, ತನ್ನ ಪರೀಕ್ಷೆಯ ಫಲಿತಾಂಶ ತರಲು ಒಂದೆರೆಡು ದಿನ ಬಾಕಿ ಇರುವಂತೆಯೇ ಹಾಜಿ ಮೌಲಾನಾ ಮರಳಿ ಬಾರದ ಲೋಕಕ್ಕೆ ಹೋದರು.
ಝಹುರಾ ಕಂಗಾಲಾದರು. ಅತ್ತ ತನ್ನ ಉಮ್ಮ ಮತ್ತು ಅಬ್ಬ ಕೂಡ ಮೌತ್ ಆಗಿದ್ದರು. ತನ್ನ ಮನೆಯಲ್ಲಿ ಗಂಡ್ಮಕ್ಕಳು ಅಂತ ಯಾರೂ ಇರಲಿಲ್ಲ. ತವರು ಮನೆಯಲ್ಲಿ ಬಿಟ್ಟು ಹೋದ ಗಂಡನ ನೆನಪಲ್ಲೇ ಅಕ್ಕಂದಿರು ತಂಗಿದ್ದರು. ಮದುವೆಯಾಗದ ಇನ್ನಿಬ್ಬರು ಸಹೋದರಿಯರೂ ಆ ಮನೆಯಲ್ಲಿದ್ದರು. ಸ್ವಲ್ಪ ದಿನದ ನಂತರ ಅವರೆಲ್ಲರನ್ನೂ ತನ್ನ ಗಂಡನ ಮನೆಗೆ ಕರೆಯಿಸಿಕೊಂಡ ಝಹುರಾ, ಅಕ್ಕ-ತಂಗಿಯರ ಸಹಾಯದಿಂದ ಗಂಡನ ವ್ಯಾಪಾರವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡರು. ಮಗ ಸದ್ಯ ವ್ಯಾಪಾರದತ್ತ ಗಮನಹರಿಸದೆ, ಶಿಕ್ಷಣದಲ್ಲೇ ಮುಂದುವರಿಯಲಿ ಎಂದು ಆಕೆ ಆಶಿಸಿದ್ದರು. ಅಷ್ಟೇ ಅಲ್ಲ, ಎಷ್ಟೇ ಕಷ್ಟವಾದರೂ ಸರಿ, ಮಗನನ್ನು ಡಾಕ್ಟರ್ ಮಾಡಿಸಬೇಕು ಎಂದು ಬಯಸಿದ್ದರು. ಆದರೆ, ಮಗ ರಝಾಕ್ ತಾಯಿಯ ಹಿಡಿತದಿಂದ ತಪ್ಪಿ ಹೋಗಿದ್ದ. ಧರ್ಮ ಪ್ರಚಾರ ಎನ್ನುತ್ತಲೇ ಮನೆಯಿಂದ ವಾರ-ತಿಂಗಳ ಕಾಲ ದೂರ ಉಳಿಯುತ್ತಿದ್ದ. ಏಕೈಕ ಮಗ ಹೀಗೆ ಮಾಡಿದ್ದರಿಂದ ಆಕೆ ತೀವ್ರ ಬೇಸರಗೊಂಡರು.
ಇತ್ತೀಚೆಗೆ ಮನೆಗೆ ಬರುವುದು ಕೂಡ ಕಡಿಮೆಯಾಯಿತು. ಯಾವತ್ತಾದರೊಮ್ಮೆ ಫೋನ್ ಕರೆ ಮಾಡುತ್ತಿದ್ದ. ಎಲ್ಲಿದ್ದೀ? ಎಂದು ಕೇಳಿದರೆ, ನಾನು ದೆಹಲಿಯ ಕಂಪೆನಿಯಲ್ಲಿ ಮ್ಯಾನೇಜರ್ ಆಗಿದ್ದೇನೆ ಎನ್ನುತ್ತಿದ್ದ. ಝಹುರಾ ಅದನ್ನು ನಂಬಿದ್ದರು. ತಂಗಿಯರಿಗೆ ಮದುವೆ ಮಾಡಿಸಿ ಕಳುಹಿಸಿಕೊಟ್ಟ ನಂತರ ಮಗನಿಗೂ ಒಳ್ಳೆಯ ತರವಾಡಿನ ಹೆಣ್ಣನ್ನು ಹುಡುಕುತ್ತಿದ್ದರು. ಇನ್ನೊಂದು ವರ್ಷದಲ್ಲಿ ಮಗನಿಗೆ ಮದುವೆ ಮಾಡಿ ಮುಗಿಸಬೇಕು ಎಂದು ನಿರ್ಧರಿಸಿದ್ದರು. ಅದೇ ಕುಶಿಯಲ್ಲಿ ತೇಲುತ್ತಿದ್ದ ಝಹುರಾ ಟೀವಿಯಲ್ಲಿ ಆ ಸುದ್ದಿ ಬಿತ್ತರಣೆಗೊಂಡಾಗ ಆಶ್ಚರ್ಯಚಕಿತಗೊಂಡರು. ಆಕೆಗೆ ಅದನ್ನು ನಂಬಲು ಆಗಲಿಲ್ಲ. ಕ್ಷಣಾರ್ಧದಲ್ಲಿ ಮನೆಗೆ ಫೋನ್ ಕರೆ, ಪತ್ರಕರ್ತರ, ಪೊಲೀಸರ, ಸಾರ್ವಜನಿಕರ ದಂಡು ಆಗಮಿಸುತ್ತಿತ್ತು. ಆವಾಗಲೇ ಝಹುರಾ ಯಾರ ಪ್ರಶ್ನೆಗೂ ಉತ್ತರಿಸದೆ ಮೌನವಾಗಿರಲು ನಿರ್ಧರಿಸಿದ್ದರು.
***
ಝಹುರಾಳ ದೃಢ ನಿಲುವು ಎಲ್ಲೆಡೆ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಮಸೀದಿಯಲ್ಲೂ ಕೂಡ ಗುಸು ಗುಸು ಕೇಳಿ ಬಂತು. ಕೆಲವರು ಆಕೆಯ ನಿಲುವನ್ನು ಪ್ರಶಂಸಿದರೆ, ಇನ್ನು ಕೆಲವರು ಆಕೆ ಹಾಗೆ ಮಾಡಬಾರದಿತ್ತು. ಎಷ್ಟಾದರು ಮಗನ ಮಯ್ಯತ್ ಅಲ್ಲವಾ? ಯಾವನೇ ವ್ಯಕ್ತಿ ಮೃತಪಟ್ಟ ನಂತರ ಅಗೌರವ ತೋರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಆದರೆ, ಝಹುರಾ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ತನ್ನ ಪಾಲಿನ ಕೆಲಸ ಮಾಡಿಕೊಂಡು ದಿನ ದೂಡುತ್ತಿದ್ದರು.
ಮತ್ತೆ 1 ತಿಂಗಳು ಉರುಳಿತು.
ಝಹುರಾ ಎಲ್ಲವನ್ನೂ ಮರೆತು ಬಿಡಲು ಪ್ರಯತ್ನಿಸಿದರು. ಸಾಮಾನ್ಯವಾಗಿ ಅಗಲಿದವರ ಬಟ್ಟೆಬರೆ, ಅವರ ದಿನಪಯೋಗಿ ವಸ್ತುಗಳು ಮೂಲೆಪಾಲಾಗುತ್ತದೆ. ಹಾಜಿ ಮೌಲಾನಾ ನಿಧನರಾದಾಗ ಝಹುರಾ, ಗಂಡನ ಬಟ್ಟೆಬರೆ ಇತ್ಯಾದಿಯನ್ನು ಸಂಗ್ರಹಿಸಿ ಒಂದೆಡೆ ಜೋಡಿಸಿಟ್ಟಿದ್ದರು. ಇದೀಗ ಮಗನ ಬಟ್ಟೆಬರೆ, ಆತನ ಬಳಕೆಯ ಸೊತ್ತುಗಳನ್ನು ಜೋಡಿಸಿ ಇಡಬೇಕೇ ಬೇಡವೇ ಎಂಬುದರ ಬಗ್ಗೆ ಗೊಂದಲಕ್ಕೀಡಾದರು.
ರಝಾಕ್ ಮಗುವಾಗಿದ್ದಾಗ ತೆಗೆದ ಬಟ್ಟೆಬರೆ, ಆಟಿಕೆಗಳನ್ನೆಲ್ಲಾ ಝಹುರಾ ತೆಗೆದಿಟ್ಟಿದ್ದರು. ಆತ ಕಾಲೇಜ್‍ಗೆ ಹೋಗುವವರೆಗೂ ಅದನ್ನು ತೋರಿಸಿ ಕುಶಿಪಡುತ್ತಿದ್ದರು. ಆದರೆ, ಯಾವಾಗ ಆತ ಭಯೋತ್ಪಾದಕ ಎಂದು ಗೊತ್ತಾಯಿತೋ, ಆ ಕ್ಷಣದಿಂದ ಆಕೆಯ ಮನಸ್ಸು ಚಂಚಲಗೊಂಡಿತ್ತು. ಎಲ್ಲಾದರು ಬಿಸಾಡಲಾ? ಬಡವರಿಗೆ ಬಳಸಲು ಕೊಡಲಾ? ಎಂದು ತನ್ನಲ್ಲೇ ಪ್ರಶ್ನಿಸಿಕೊಂಡರು. ಇಲ್ಲ… ಭಯೋತ್ಪಾದಕನ ಬಟ್ಟೆಬರೆ ಸಂಗ್ರಹಿಸಿಡುವುದು, ಇತರರಿಗೆ ಬಳಸಲು ಕೊಡುವುದನ್ನು ಆಕೆಯ ಮನಸ್ಸು ಒಪ್ಪುತ್ತಿಲ್ಲ. ಯಾವುದಾದರು ನದಿ ಅಥವಾ ಸಮುದ್ರಕ್ಕೆ ಎಸೆಯುವುದೋ, ಗುಂಡಿ ತೋಡಿ ಹೂಳುವುದೋ ಎಂದೂ ಆಕೆಗೆ ಹೊಳೆಯಲಿಲ್ಲ. ಕೊನೆಗೆ ಅದನ್ನೆಲ್ಲಾ ಸುಟ್ಟು ಬೂದಿ ಮಾಡುವುದು ಎಂದು ನಿರ್ಧರಿಸಿದರು. ಅದು ಬೂದಿಯಾಗುವುದನ್ನು ನೋಡಲು ನನ್ನಿಂದ ಸಾಧ್ಯವೇ ಎಂಬ ಗೊಂದಲಕ್ಕೆ ಮತ್ತೆ ಸಿಲುಕಿದರು. ಇಲ್ಲ, ನಾನು ಗೊಂದಲಕ್ಕೀಡಾಗಬಾರದು. ಹೇಗೆ ಮಯ್ಯತ್ತನ್ನು ಸ್ವೀಕರಿಸದೆ ವಾಪಾಸು ಬಿಟ್ಟಿದ್ದೇನೋ, ಹಾಗೇ ಇದನ್ನು ಕೂಡ ಸುಟ್ಟು ಬೂದಿ ಮಾಡಬೇಕು ಎಂದು ನಿರ್ಧರಿಸಿ ಎಲ್ಲವನ್ನೂ ಒಂದೆಡೆ ಪೇರಿಸಿಟ್ಟು ಕಡ್ಡಿ ಗೀಚಿದರು. ಆವಾಗ ಆಕೆಯ ಕಣ್ಣಲ್ಲಿ ಮತ್ತೆ ನೀರು ಹರಿಯಿತು.
ಆ ದು:ಖ ಎರಡು ದಿನದವರೆಗೂ ಇತ್ತು.
ಅದಿನ್ನೂ ಮನಸ್ಸಿನಿಂದ ದೂರವಾಗಿರಲಿಲ್ಲ. ಅಷ್ಟರಲ್ಲಿ ಒಂದು ಗುಂಪು ತನ್ನ ಮನೆಯತ್ತ ಬರುವುದನ್ನು ಝಹುರಾ ಗಮನಿಸಿದರು. ಬಂದವರು ಯಾರು ಎಂದು ಆಕೆಗೆ ತಕ್ಷಣ ಹೊಳೆಯಲಿಲ್ಲ.
“ಅಮ್ಮಾ… ನಾವು ರಾಷ್ಟ್ರೀಯ ಪಕ್ಷದ ಜಿಲ್ಲಾ ಮುಖಂಡರು. ಭಯೋತ್ಪಾದನೆಯ ವಿರುದ್ಧದ ನಿಮ್ಮ ಹೋರಾಟದಿಂದ ನಾವು ತುಂಬಾ ಕುಶಿಗೊಂಡಿದ್ದೇವೆ. ನಿಮ್ಮ ಧೃಢ ನಿರ್ಧಾರ ಇತರರಿಗೂ ಸ್ಪೂರ್ತಿ ಸಿಕ್ಕೀತು ಎಂದು ಆಶಿಸಿದ್ದೇವೆ. ಹಾಗಾಗಿ ನಮ್ಮ ಪಕ್ಷದ ವತಿಯಿಂದ ನಿಮ್ಮನ್ನು ಬೃಹತ್ ಸಮಾವೇಶದಲ್ಲಿ ಸನ್ಮಾನಿಸಲು ನಿರ್ಧರಿಸಿದ್ದೇವೆ” ಎಂದು ಹೇಳಿಕೊಂಡರು.
ರಾಜಕೀಯ ಪಕ್ಷಗಳ ಬಣ್ಣಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದ ಝಹುರಾ, ತಾನಿಲ್ಲಿ ಕೇವಲ ನೆಪ ಮಾತ್ರ. ತನ್ನನ್ನು ಮುಂದಿಟ್ಟು ಇವರು ರಾಜಕೀಯ ಮಾಡುವುದರಲ್ಲಿ ಸಂಶಯವಿಲ್ಲ. ಇಂಥದ್ದಕ್ಕೆ ಅವಕಾಶ ಮಾಡಿಕೊಡಲೇಬಾರದು ಎಂದು ನಿರ್ಧರಿಸಿ “ನಿಮ್ಮ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ. ಆದರೆ, ನನಗೆ ಸನ್ಮಾನದ ಅಗತ್ಯವಿಲ್ಲ. ಅದಕ್ಕಾಗಿ ನಾನು ಆ ನಿರ್ಧಾರ ತೆಗೆದು ಕೊಂಡವನಲ್ಲ’ ಎಂದು ಗಟ್ಟಿಧ್ವನಿಯಲ್ಲಿ ಝಹುರಾ ಹೇಳಿಕೊಂಡರು. ಪಕ್ಷದ ಮುಖಂಡರಿಗೆ ನಿರಾಶೆಯಾದರೂ ಅದನ್ನು ತೋರಿಸಿಕೊಳ್ಳದೆ, ಬೃಹತ್ ಸಮಾರಂಭವೇನೋ ಬೇಡ. ನಾವು ಇಲ್ಲೇ, ಇದೇ ಮನೆಯಲ್ಲಿ ಸನ್ಮಾನಿಸುತ್ತೇವೆ. ಅದಕ್ಕಾಗಿ ಒಪ್ಪಿಗೆ ನೀಡಿ ಎಂದು ಭಿನ್ನವಿಸಿಕೊಂಡರು.
“ಪ್ರಚಾರ ಪ್ರಿಯರಿಗೆ ನಾಲ್ಕು ಮಂದಿಯ ಮಧ್ಯೆ ಅಥವಾ ಸಾವಿರಾರು ಮಂದಿಯ ಮಧ್ಯೆ ಸನ್ಮಾನಿಸುವುದೂ ಒಂದೇ. ಎಲ್ಲೇ ಸನ್ಮಾನಿಸಿದರೂ ಎಷ್ಟು ಬೇಕೋ ಅಷ್ಟು ಮಾತ್ರ ಪ್ರಚಾರ ಸಿಗುತ್ತದೆ. ನನಗೊಂದು ಶಾಲು-ಹಣ್ಣುಹಂಪಲು ಕೊಟ್ಟು ಸನ್ಮಾನಿಸುವುದಕ್ಕಿಂತ ಬಡಪಾಯಿಗಳಿಗೆ ಅದನ್ನು ಹಂಚಿ ಬಿಡಿ. ಅವರಾದರು ಅದನ್ನು ಬಳಸಿಕೊಳ್ಳಲಿ” ಎಂದು ಝಹುರಾ ಯಾವುದೇ ಹಂಗಿಲ್ಲದೆ ಹೇಳಿಕೊಂಡಾಗ, ಪಕ್ಷದ ನಾಯಕರು ತಬ್ಬಿಬ್ಬಾದರು. ಅವರಿಗೆ ಮಾತು ಹೊರಡಲೇ ಇಲ್ಲ. ಅವರು ಕತ್ತಲಲ್ಲೇ ಮರೆಯಾದರು.
***

LEAVE A REPLY

Please enter your comment!
Please enter your name here