ಮೌಲಾನ ವಹೀದುದ್ದೀನ್ ಖಾನ್

ನೀವು ನಿಮ್ಮ ಕೋಣೆಯಲ್ಲಿರುವಾಗ ಕೋಣೆಯ ಮೇಲ್ಛಾವಣಿಯ ವಿಸ್ತೀರ್ಣವನ್ನು ತಿಳಿಯಬಹುದು. ಆದರೆ, ನೀವು ತೆರೆದ ಮೈದಾನಕ್ಕೆ ಬಂದಾಗ ಆಕಾಶದ ಕೆಳಗಿರುತ್ತೀರಿ ಆಗ ನಿಮ್ಮ ಮೇಲಿರುವ ಆಕಾಶದ ಉದ್ದಗಲಗಳನ್ನು ಅಳೆಯುವ ಯಾವುದೇ ಅಳತೆ ಕೋಲು ನಿಮ್ಮ ಕೈಯಲ್ಲಿರಲಾರದು. ಇದೇ ಸ್ಥಿತಿಯು ದೇವನ ಪ್ರಪಂಚದ್ದಾಗಿದೆ. ಒಂದು ಬೀಜವು ಮೊಲಕೆಯೊಡೆದು ವೃಕ್ಷಗಳ ಲೋಕವೇ ನಿರ್ಮಾಣವಾಗುತ್ತದೆ. ಸೂರ್ಯನ ಪ್ರಕಾಶ, ಮಾರುತಗಳ ಚಲನೆ, ಹಕ್ಕಿಗಳ ಕಲರವ, ಹರಿಯುತ್ತಿರುವ ಚಿಲುಮೆಗಳು ಹೀಗೆ ನಾವು ದೈನಂದಿನ ನೋಡುತ್ತಿರು ದೃಶ್ಯಗಳನ್ನು ಶಬ್ಧಗಳಿಂದ ವಿವರಿಸಲು ನಮಗೆ ಸಾಧ್ಯವಾದೀತೆ.

ಸತ್ಯವು ಮಾನವನ ವಿವರಣೆಗಿಂತ ಸುಮಧುರವಾಗಿದೆ. ಮಾನವನು ಮೂಕಸ್ಮಿತನಾದಾಗ ವಾಸ್ತವಿಕತೆಗಳು ಹೊರಬರುತ್ತವೆ. ಮಾತುಗಳು ಸಹಕರಿಸದಾಗ ಅರ್ಥ ತಾತ್ಪರ್ಯಗಳು ಹೊರ ಹೊಮ್ಮುತ್ತವೆ. ದೇವನು ಮೌನವಾಗಿ ಮಾತನಾಡುತ್ತಿದ್ದಾನೆ. ಆದರೆ, ನಾವು ಶಬ್ಧಗಳ ಕೋಲಾಹಲಗಳಿಂದ ಕೇಳ ಬಯಸುತ್ತೇವೆ. ಈ ನೆಲೆಯಲ್ಲಿ ದೇವನ ಮಾತುಗಳನ್ನು ಹೇಗೆ ಆಲಿಸಬಹುದು, ಲೋಕದ ಅತಿ ಅಮೂಲ್ಯ ಮಾತುಗಳು ಮೂಕ ಭಾಷೆಯಲ್ಲಿ ಬಿತ್ತರಿಸಲ್ಪಡುತ್ತಿದೆ. ಆದರೆ, ಮಾನವ ಸದ್ದು ಗದ್ದಲಗಳಿಂದಲೇ ಕೇಳಬಯಸುತ್ತಾನೆ. ಒಬ್ಬ ಕಿವುಡನು ಉತ್ತಮ ಸಂಗೀತದಿಂದ ನಿರ್ಲಿಪ್ತನಾದಂತೆ, ಈ ರಸಭರಿತ ಮಾತುಗಳಿಂದ, ದೇವನ ಈ ಅಮೂಲ್ಯ ಸದುಪದೇಶದಿಂದ ಮಾನವ ನಿರ್ಲಕ್ಷ್ಯನಾಗಿದ್ದಾನೆ. ದೇವನ ಲೋಕವು ಬಹಳ ಸುಂದರವಾಗಿದೆ. ಆ ಸೌಂಧರ್ಯವನ್ನು ಮಾತಿನಲ್ಲಿ ವ್ಯಕ್ತಗೊಳಿಸಲು ಸಾಧ್ಯವಿಲ್ಲ. ಮಾನವನು ಈ ಲೋಕವನ್ನು ನೋಡಿದಾಗ ತನಗರಿವಿಲ್ಲದೆಯೇ ಇಲ್ಲಿ ಸತ್ಯವಿಶ್ವಾಸಿಯಾಗಲು ಬಯಸುತ್ತಾನೆ. ತಂಗಾಳಿಯಲ್ಲಿ ಸೇರಿಕೊಳ್ಳಲು, ವೃಕ್ಷಗಳ ಪಚ್ಚೆಹಸಿರಾಗಿ ಕಂಗೊಳಿಸಲು, ಬಾನಂಗಳದಲ್ಲಿ ಮುಳುಗೇಳಲು ಬಯಸುತ್ತಾನೆ. ಆದರೆ, ಮಾನವನ ಪರಿಮಿತಿಯು ಅವನ ಅಭಿಲಾಷೆಗಳಿಗೆ ತಡೆಯಾಗಿದೆ. ಆತ ತನ್ನ ಪ್ರೀತಿಯ ಲೋಕವನ್ನು ನೋಡುತ್ತಿದ್ದಾನೆ ಅದರಲ್ಲಿ ಸೇರಲು ಅಶಕ್ತನಾಗಿದ್ದಾನೆ.

ಮಾನವ ನಿರ್ಮಿತ ಈ ನಾಗರೀಕ ಲೋಕವು ದೇವನ ಲೋಕಕ್ಕಿಂತ ಬಹಳ ಭಿನ್ನವಾಗಿದೆ. ಮಾನವ ನಿರ್ಮಿತ ಸವಾರಿಗಳು ಶಬ್ಧ ಮಾಲಿನ್ಯ ಮತ್ತು ವಾಯು ಮಾಲಿನ್ಯಗಳಿಂದ ಕೂಡಿದೆ. ಆದರೆ, ದೇವನ ಲೋಕದಲ್ಲಿ ಪ್ರಕಾಶವು ಪ್ರತೀ ಸೆಕೆಂಡಿನಲ್ಲಿ ಒಂದು ಲಕ್ಷದ ಎಂಬತ್ತಾರು ಸಾವಿರ ಮೈಲುಗಳ ವೇಗದಲ್ಲಿ ಚಲಿಸುತ್ತದೆ. ಆದರೆ ಎಲ್ಲೂ ಶಬ್ಧ ಮಾಲಿನ್ಯವಾಗಲಿ, ವಾಯು ಮಾಲಿನ್ಯವಾಗಲಿ ಸಂಭವಿಸುವುದಿಲ್ಲ. ಮಾನವರು ಪರಸ್ಪರರ ಮಧ್ಯೆ ತೊಂದರೆಗಳನ್ನು ಅನುಭವಿಸಿಕೊಂಡೇ ಜೀವಿಸುತ್ತಾರೆ. ಆದರೆ, ದೇವನ ಲೋಕದಲ್ಲಿ ಬೀಸುತ್ತಿರುವ ಚಂಡ ಮಾರುತವು ಎಲ್ಲೂ ಡಿಕ್ಕಿ ಹೊಡೆಯುವುದಿಲ್ಲ. ಮಾನವನು ಬೆವರು, ಮಲ, ಮೂತ್ರಗಳ ರೂಪದಲ್ಲಿ ತನ್ನ ಕಲ್ಮಶಗಳನ್ನು ಹೊರಹಾಕುತ್ತಾನೆ. ಆದರೆ, ದೇವನ ಲೋಕವು ತನ್ನ ಕೊಳೆಗಳನ್ನು ದೇವನು ಬೆಳೆಸಿದ ವೃಕ್ಷಗಳಿಂದ ಮಾನವನಿಗೆ ಪರಿಶುದ್ಧವಾದ ಆಮ್ಲಜನಕ ಹೊರಹೊಮ್ಮಿಸುತ್ತದೆ.

ಪುಷ್ಪಗಳು ತನ್ನ ಕಲ್ಮಶಗಳನ್ನು ಸುವಾಸನೆಯ ರೂಪದಲ್ಲಿ ಹೊರಸೂಸುತ್ತದೆ. ಮಾನವ ನಿರ್ಮಿತ ಪಟ್ಟಣಗಲಲ್ಲಿ ಕಸ ಕಲ್ಮಶಗಳ ನಿವಾರಣೆಯೂ ದೊಡ್ಡ ಸಮಸ್ಯೆಯಾಗಿದೆ. ದೇವನ ಈ ಮಹಾ ಭೂಮಿಯಲ್ಲಿ ಯೋಚಿಸಲಾರದಷ್ಟು ಕಸ ಮತ್ತು ನಿರುಪಯುಕ್ತ ವಸ್ತುಗಳು ದೊರೆಯುತ್ತವೆ. ಆದರೆ, ನಮಗರಿವಿಲ್ಲದೆಯೇ ಅವುಗಳನ್ನು ಪುನಃ ಉಪಯುಕ್ತ ರಸಗಳನ್ನಾಗಿ ಬದಲಾಯಿಸಲಾಗುತ್ತದೆ. ಯಾವನೇ ವ್ಯಕ್ತಿ ಸತ್ಯದ ಪ್ರತಿಬಿಂಬವನ್ನು ಕಂಡು ಅದರ ವಿವರಣೆ ತನ್ನಿಂದ ಅಸಾಧ್ಯವೆಂದು ತಿಳಿಯುತ್ತಾನೆ. ಮತ್ತು ಆತನನ್ನು ಮೌನ ಆವರಿಸುತ್ತದೆ.

ಅನುವಾದ: ತಲ್ಹಾ ಇಸ್ಮಾಯಿಲ್ ಕೆ.ಪಿ

 

LEAVE A REPLY

Please enter your comment!
Please enter your name here