ಮಂಜುನಾಥ ಕೆ.ವಿ.
(ಹಿಂದಿ ಭಾಷಾ ಉಪನ್ಯಾಸಕರು.
ಜೆ. ಸಿ. ಬಿ. ಎಂ. ಕಾಲೇಜ್ ಶೃಂಗೇರಿ)

ನನಗಿನ್ನೂ ನೆನಪಿದೆ. ಸರಿಸುಮಾರು ಹತ್ತು ಹದಿನೈದು ವರುಷದ ಹಿಂದಿರ ಬಹುದು. ಆಗ ನಮಗೆಲ್ಲಾ ದೀಪಾವಳಿ ಹಬ್ಬ ಅಂದರೆ ದೀಪ ಹಚ್ಚೋದು, ಪಟಾಕೀ ಹೊಡೆಯೋದು, ನೆನೆಕೋಲು ಹಚ್ಚೋದು , ಕೈಗೆ ಮೈಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡೋದು, ಗೋವುಗಳಿಗೆ ಪೂಜೆ ಮಾಡಿ ಹೂವಿನ ಹಾರ ತೊಡಿಸೋದು ಹೊರತು ಪಡಿಸಿ ಹಬ್ಬದ ಹಿನ್ನಲೆಯಾಗಲಿ, ಮಹತ್ವವಾಗಲಿ ತಿಳಿದಿರಲಿಲ್ಲ.

ಒಮ್ಮೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಕ್ಕದ ಮನೆಯವರೊಬ್ಬರು ಅಜ್ಜನ ಬಳಿ ಪೂಜಾವಿಧಿ- ವಿಧಾನ ತಿಳಿದುಕೊಂಡು ಹೋಗಲು ಬಂದಾಗ, ಅಜ್ಜ ಕೈಯಲ್ಲಿ ಪಂಚಾಂಗ ಹಿಡಿದು ಪೂಜಾ ವಿಧಿ- ವಿಧಾನಗಳನ್ನ ಎಳೆ ಎಳೆಯಾಗಿ ಬಿಡಿಸಿಡುತ್ತಾ ಹಬ್ಬದ ಹಿನ್ನಲೆಯನ್ನ ಬಿಚ್ಚಿಟ್ಟರು.

ಹಬ್ಬದ ಮೊದಲನೆಯ ದಿನ ನರಕ ಚತುರ್ದಶಿ. ಹಿಂದೆ ವಿಷ್ಣು ವರಹಾವತಾರದಲ್ಲಿದ್ದಾಗ ಅವನ ದೇಹದ ಒಂದು ತೊಟ್ಟು ಬೆವರು ಭೂಲೋಕದಲ್ಲಿ ಬಿದ್ದು ನರಕಾಸಯರನ ಹುಟ್ಟಿಗೆ ಕಾರಣನಾಗುತ್ತಾನೆ. ಭೂತಾಯಿಯು ತನ್ನ ಮಗನ ಮೇಲಿನ ಮೋಹದಿಂದ ವಿಷ್ಣುವನ್ನು ಪ್ರಾರ್ಥಿಸಿ ತನ್ನ ಮಗನಿಗೆ ವೈಷ್ಣವಾಸ್ತ್ರವನ್ನು ವರವಾಗಿ ಕೊಡಿಸುತ್ತಾಳೆ. ಇದರಿಂದ ಶಕ್ತಿವಂತನಾದ ನರಕಾಸುರನು ಸಕಲ ಜೀವ ಜಂತುಗಳಿಗೂ ಕಂಟಕನಾಗುತ್ತಾನೆ. ಇವನ ದುಷ್ಟತನವನ್ನ ಭೂತಾಯಿಯು ಸಹಿಸಲು ಕಷ್ಟವಾದಾಗ ನರಕಾಸುರನನ್ನು ಸಂಹರಿಸಿ, ಭೂಲೋಕವನ್ನು ರಕ್ಷಿಸುವಂತೆ ಶ್ರೀಕೃಷ್ಣ ನಲ್ಲಿ ಕೋರಿಕೊಳ್ಳುತ್ತಾಳೆ. ಶ್ರೀ ಕೃಷ್ಣ ನು ನರಕಾಸುರನನ್ನು ಆಶ್ವಯುಜ ಮಾಸದ ಕೃಷ್ಣ ಪಕ್ಷ ಚತುರ್ದಶಿ ಯ ರಾತ್ರಿಯಲ್ಲಿ ಸಂಹರಿಸಿ ಭೂಲೋಕವನ್ನು ರಕ್ಷಿಸುತ್ತಾನೆ. ಅಂದಿನಿಂದ ದುಷ್ಟರ ಸಂಹಾರ ಮತ್ತು ಶಿಷ್ಟರ ಸಂಕೇತವಾಗಿ ನರಕ ಚತುರ್ದಶಿ ಆಚರಿಸಲಾಗುತ್ತದೆ.

ಎಣ್ಣೆಸ್ನಾನ –

ಹಿಂದೆ ದೇವತೆಗಳಿಗೂ ಮತ್ತು ರಾಕ್ಷಸರಿಗೂ ಸಮುದ್ರಮಥನ ನಡೆದ ಸಂದರ್ಭದಲ್ಲಿ ವಿಷ್ಣು ಧನ್ವಂತರಿ ಆಗಿ ಅಮೃತ ದೊಡನೆ ಅವತಾರ ಎತ್ತಿದ. ಈ ದಿನ ತುಂಬುವ ಸ್ನಾನದ ನೀರಿನಲ್ಲಿ ಗಂಗೆಯೂ, ಎಣ್ಣೆಯಲ್ಲಿ ಧನಲಕ್ಷ್ಮೀ ಇರುವಳೆಂದು ನಂಬಿಕೆ. ಈ ದಿನ ಎಣ್ಣೆಸ್ನಾನ ಮಾಡಿದರೆ ಸಕಲ ಕಷ್ಟಕಾರ್ಪಣ್ಯಗಳು ದೂರಾಗಿ, ಆಯುರಾರೋಗ್ಯ
ವೃದ್ಧಿಆಗುತ್ತದೆ ಎಂಬ ನಂಬಿಕೆ.

ಮಹಾಲಕ್ಷ್ಮೀ ಪೂಜೆ-

ಮಹಾಲಕ್ಷ್ಮೀ ಯು ಆಶ್ವಯುಜ ಕೃಷ್ಣ ಪಕ್ಷದ ಅಮವಾಸ್ಯೆ ಯಂದು ಸಮುದ್ರಮಥನ ದಿಂದ ಜನಿಸಿದಳು. ಈ ದಿನ ಯಾರು ಲಕ್ಮೀಯನ್ನು ಆರಾಧಿಸುತ್ತಾರೋ ಅವರೆಲ್ಲರೂ ಲಕ್ಷ್ಮಿಯ ಅನುಗ್ರಹಕ್ಕೆ ಪಾತ್ರ ರಾಗುತ್ತಾರೆ.

ಬಲಿ ಪಾಡ್ಯಮಿ :

ಭೂಲೋಕದ ದೊರೆ ಬಲಿ ಚಕ್ರವರ್ತಿ. ಈ ಬಲಿಬಪಾಡ್ಯಮಿ ದಿನದಂದು ಆತ ಭೂಲೋಕ ಸಂಚಾರಕ್ಕೆ ಬರುತ್ತಾನೆಂದು ವಾಡಿಕೆ. ಬಲಿ ಚಕ್ರವರ್ತಿ ಬಳಿ ಶ್ರೀ ವಿಷ್ಣು ವಾಮನ ಅವತಾರವಾಗಿ ಬಂದು ಮೂರು ಹೆಜ್ಜೆ ಇಡುವಷ್ಟು ಭೂಮಿಯನ್ನ ದಾನವಾಗಿ ಪಡೆದುಕೊಳ್ಳುತ್ತಾನೆ. ಎರಡು ಹೆಜ್ಜೆಗಳಲ್ಲಿ ಆಕಾಶ ಭೂಮಿಯನ್ನ ಅಳೆದುಕೊಂಡು ಮೂರನೇ ಹೆಜ್ಜೆಯನ್ನ ಬಲಿಯ ಸೂಚನೆಯಂತೆ ಬಲಿ ಚಕ್ರವರ್ತಿ ಯ ತಲೆಯ ಮೇಲಿಟ್ಟು ಆತನನ್ನು ಪಾತಾಳಕ್ಕೆ ತಳ್ಳುತ್ತಾನೆ. ಬಲಿಯ ನಿಸ್ವಾರ್ಥ ಗುಣವನ್ನ ಮೆಚ್ಚಿದ ಶ್ರೀ ವಿಷ್ಣು ಪ್ರತಿವರ್ಷ ಒಂದು ದಿವಸ ಬಲಿ ಚಕ್ರವರ್ತಿಯ ಹೆಸರಿನಲ್ಲಿ ಭೂಲೋಕದಲ್ಲಿ ಪೂಜೆನಡೆಯುವಂತೆ ವರವನ್ನು ನೀಡುತ್ತಾನೆ. ಅದ್ದರಿಂದಲೇ ಬಲಿ ಪಾಡ್ಯಮಿಯ ದಿನದಂದು ಬಲಿಯು ಭೂಲೋಕದ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯೂ ಇದೆ.

ವನವಾಸದಿಂದ ರಾಮನ ಆಗಮನ- ಹದಿನಾಲ್ಕು ವರುಷ ವನವಾಸ ನಡೆಸಿ, ವಿಜಯ ದಶಮಿಯ ದಿನದಂದು ರಾವಣನನ್ನು ಸಂಹರಿಸಿ, ಕ್ಷೇಮವಾಗಿ ಹಿಂತಿರುಗಿದ ರಾಮ, ಲಕ್ಷ್ಮಣ, ಸೀತೆಗೆ ಅಯೋಧ್ಯದ ಪ್ರಜೆಗಳು ದೀಪವನ್ನು ಹಚ್ಚಿ ಸ್ವಾಗತಿಸಿದರಂತೆ. ಆದಿನದಿಂದಲೇ ದೀಪಾವಳಿ ಹಬ್ಬ ಆರಂಭವಾಯಿತು ಎಂಬ ವಾಡಿಕೆ ಇದೆ.

ಈ ರೀತಿಯಾಗಿ ಪುಟ್ಟಜ್ಜ ಹೇಳಿದ ಪುರಾಣ ಕಥೆಗಳು ಕತ್ತಲೆಯನ್ನು ಕಳೆವ ದೀಪದ ಬೆಳಕಿನಂತೆ ನಮ್ಮ ಮನದಲ್ಲಿ ಹಬ್ಬದ ಆಚರಣೆಯ ಹಿನ್ನಲೆ ಮಹತ್ವದ ಕತ್ತಲೆಯನ್ನ ಕಳೆದು ಬೆಳಕನ್ನ ಹೊರ ಸೂಸಿತು.

LEAVE A REPLY

Please enter your comment!
Please enter your name here