ವಿವೇಕಾನಂದ.ಹೆಚ್.ಕೆ ಬೆಂಗಳೂರು

ಕರ್ನಾಟಕದ ಕನ್ನಡ ಮಣ್ಣಿನ ಯಾರಾದರೂ ಒಬ್ಬ ಅತ್ಯಂತ ಜನಪ್ರಿಯ ಅಥವಾ ಪ್ರಸಿದ್ಧ ಅಥವಾ ಸಾಧಕ ಅಥವಾ ಅಧಿಕಾರಸ್ತ ವ್ಯಕ್ತಿಗಳ ಸಂಪೂರ್ಣ ಜೀವನ ವೃತ್ತಾಂತವನ್ನು ಎಲ್ಲಾ ದೃಷ್ಟಿಕೋನದಿಂದಲೂ ಪರಿಶೀಲಿಸಿ
” ಹಳ್ಳಿ ಹೈದ ” ಎಂಬ ಅನ್ವರ್ಥನಾಮಕ್ಕೆ ಸೂಕ್ತ ವ್ಯಕ್ತಿತ್ವದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದಾದರೆ ಅದು ಮುತ್ತುರಾಜನೆಂಬ ಡಾ. ರಾಜ್ ಕುಮಾರ್…

ನೀವು ಹೇಗೇ ನೋಡಿ, ಹುಟ್ಟಿನಿಂದ ಸಾಯುವತನಕ ಅವರ ಭಾಷೆ, ದೇಹಚಲನೆ, ಉಡುಗೆ ತೊಡುಗೆ, ಊಟ, ಸಾಂಧರ್ಭಿಕ ನಿರ್ಧಾರಗಳು ಈ ನೆಲದ ಅಪ್ಪಟ ಮಣ್ಣಿನ ಸೊಗಡಿನ ಗ್ರಾಮೀಣ ಪರಿಸರದ ಹಳ್ಳಿ ಹೈದನಂತೆಯೇ ಕಾಣುತ್ತಾರೆ.

ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ಎಷ್ಟೋ ಇಲ್ಲಿನ ಮಣ್ಣಿನ ಮಕ್ಕಳು ಬೆಳೆಯುತ್ತಾ ರೈತ ನಾಯಕರೋ, ರಾಜಕಾರಣಿಗಳೋ, ಕ್ರೀಡಾಪಟುಗಳೋ, ವಿಜ್ಞಾನಿಗಳೋ, ಉದ್ಯಮಿಗಳೋ,
ಹೀಗೆ ಏನೋ ಆಗಿ ದೊಡ್ಡ ಹೆಸರು ಮಾಡಿ, ಅವರೆಲ್ಲ ಕ್ರಮೇಣ ಹಳ್ಳಿ ಸೊಗಡನ್ನು ಮೇಲ್ನೋಟದ ತೋರಿಕೆಗಾಗಿಯೋ ಅಥವಾ ನೆನಪಿನ ಬುತ್ತಿಯಾಗಿಯೋ ಬಳಸುತ್ತಾರೆ ಮತ್ತು ಬಹುತೇಕರು ನಗರೀಕರಣಗೊಂಡು ತಮ್ಮ ತನ ಕಳೆದುಕೊಂಡಿರುತ್ತಾರೆ.

ಆದರೆ , ಈ ರಾಜಕುಮಾರ ಅಪ್ಪಟ ಹಳ್ಳಿ ಹೈದನಂತೆಯೇ ಕೊನೆಯವರೆಗೂ ಇದ್ದರು.
ಆಂತರಿಕವಾಗಿ ಅವರ ಮನಸ್ಥಿತಿ ಹೇಗಿತ್ತೋ ಅವರೇ ಬಲ್ಲರು. ಆದರೆ ನಡವಳಿಕೆ ಮಾತ್ರ ಅವರು ಎಷ್ಟು ಮುಗ್ಧರೋ ಅಷ್ಟೇ ಒಬ್ಬ ಹಳ್ಳಿ ಪೆದ್ದು ಎಂದು ನಾವೆಲ್ಲ ಹಾಸ್ಯ ಮಾಡುವ ಗ್ರಾಮ್ಯ ಶೈಲಿಯ ಗುಣ ಅವರಲ್ಲಿ ಅಂತರ್ಗತವಾದಂತೆ ಭಾಸವಾಗುತ್ತದೆ. ನಟನೆಯಲ್ಲೂ ಅದೇ ಮುಗ್ಧತೆ, ಅದೇ ರಸಿಕತೆ, ಭಕ್ತಿಯಲ್ಲೂ ಅದೇ ತನ್ಮಯತೆ, ಹೊಡೆದಾಟಗಳಲ್ಲಿ ಅದೇ ಗ್ರಾಮ್ಯ ಶೈಲಿ, ಕಣ್ಣುಗಳಲ್ಲಿ ಅದೇ ಹಳ್ಳಿಯ ನೋಟ,
ಹೊರ ಪ್ರಪಂಚದ ಹಾಗು ಹೋಗುಗಳಲ್ಲಿ ಅದೇ ಪೆದ್ದುತನ ಎಲ್ಲವೂ ಹಳ್ಳಿಹೈದನ ಗುಣಲಕ್ಷಣಗಳು ಅವರಲ್ಲಿ ಐಕ್ಯವಾದಂತಿವೆ.

ರಾಜಕೀಯವೆಂದರೆ ಏನೋ ಕೆಟ್ಟದ್ದು ಎಂಬಂತೆ ಅದರಿಂದ ಮಾರು ದೂರ, ಮಾಂಸಹಾರಿ ಊಟವೆಂದರೆ ಪಂಚಪ್ರಾಣ, ಪ್ರಣಯದ ಕಣ್ಣೋಟದಲ್ಲಿ ಅದೇ ಹಳ್ಳಿಯ ಕಿಲಾಡಿತನ, ಹಣದ ವಿಷಯದಲ್ಲಿ ಸ್ವಲ್ಪ ಜಿಪುಣತನ, ಗೊಂದಲವಾದಾಗ ತಲೆ ಕರೆದುಕೊಳ್ಳುವ ಅದೇ ಮಣ್ಣಿನ ಗುಣ ಎಲ್ಲವೂ ಪಕ್ಕಾ ಹಳ್ಳಿ ಹೈದ.
ನನಗಂತೂ ವೈಯಕ್ತಿಕವಾಗಿ ಕನ್ನಡ ಮಣ್ಣಿನ ಸಮಷ್ಠಿ ಪ್ರಜ್ಙೆಯಿಂದ ಅವಲೋಕಿಸಿದಾಗ ನಿಜವಾದ ಹಳ್ಳಿ ಹೈದ ಡಾ.ರಾಜ್ ಕುಮಾರ್.

ಕೆಲವೊಂದು ಒಪ್ಪು ತಪ್ಪುಗಳ ನಡುವೆಯೂ ಕನ್ನಡಿಗರು ಹೆಮ್ಮೆ ಪಡುಬಹುದಾದ ಕೆಲವೇ ಅಗ್ರಗಣ್ಯ ವ್ಯಕ್ತಿತ್ವಗಳ ಶ್ರೇಷ್ಠ ಸಾಲಿನಲ್ಲಿ ರಾಜ್ ಕುಮಾರ್ ಅವರೂ ಪ್ರಮುಖವಾಗುತ್ತಾರೆ ಎಂದು ನಿಸ್ಸಂಶಯವಾಗಿ ಹೇಳಬಹುದು.

ಮಣ್ಣಿನ ಗುಣದಲ್ಲಿ ಹಳ್ಳಿಯ ಕಣ್ಣುಗಳಲ್ಲಿ ಗ್ರಾಮೀಣ ಸೊಗಡಿನ ಕಿವಿಗಳಲ್ಲಿ ಮುಗ್ದತೆಯ ಮನಸ್ಸಿನಲ್ಲಿ ರಾಜಕುಮಾರ ಕಂಡ ಪರಿಯಿದು…
ಅವರ ಹುಟ್ಟುಹಬ್ಬದ ನೆನಪಿನಲ್ಲಿ. ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,ಮನಸ್ಸುಗಳ ಅಂತರಂಗದ ಚಳವಳಿ.

ಬದುಕು ಮತ್ತು ಸಾಧನೆ : ಕನ್ನಡದ ಹೆಸರಾಂತ ನಟ ಗಾಯಕರಾದ ಪದ್ಮಭೂಷಣ, ದಾದ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುಸ್ಕೃತ ಕನ್ನಡದ ರತ್ನ ನಾಡೋಜ ಸಿಂಗಾನಲ್ಲೂರು ಪುಟ್ಟಸ್ವಾಮಿ ಗೌಡ ಮುತ್ತುರಾಜು ಎಂಬ ಡಾ.ರಾಜ್ ಕುಮಾರ್ ರವರು 1929 ರ ಏಪ್ರಿಲ್ 24 ರಂದು ಮದ್ರಾಸು ಪ್ರಾಂತ್ಯದ ಗಾಜನೂರು ಎಂಬಲ್ಲಿ ಹುಟ್ಟಿದರು (ಪ್ರಸ್ತುತ ತಮಿಳುನಾಡು ರಾಜ್ಯಕ್ಕೆ ಒಳಪಟ್ಟಿದೆ) ಅಭಿಮಾನಿಗಳು ಅಣ್ಣಾವ್ರು, ರಾಜಣ್ಣ ಮುತ್ತಣ್ಣ ಎಂದು ಪ್ರೀತಿಯಿಂದ ಕರೆಯುತ್ತಿದ್ದರು

ತಂದೆಯ ಜೊತೆ ನಾಟಕ ರಂಗದಲ್ಲಿ ಸಕ್ರಿಯವಾಗಿದ್ದ ಆವರನ್ನು ಎಚ್. ಎಲ್ ಎನ್ ಸಿಂಹ ರವರು ಬೇಡರ ಕಣ್ಣಪ್ಪ ಎಂಬ ಚಿತ್ರ ದ ಮೂಲಕ ಕನ್ನಡ ಸಿನೇಮಾ ರಂಗಕ್ಕೆ ಪರಿಚಯಿಸಿದರು. ಬಾಲ ನಟನಾಗಿ, ನಾಯಕ ನಟನಾಗಿ ಖಳನಾಯಕ ನ ಪಾತ್ರದಲ್ಲಿ ಪತ್ತೇದಾರಿ ಪಾತ್ರದಲ್ಲಿ ದೇವರಾಗಿ, ಐತಿಹಾಸಿಕ ಪಾತ್ರದಲ್ಲಿ, ಒಟ್ಟು ಸೇರಿ ಸುಮಾರು 200 ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿ ಜನರ ಮನ ಗೆದ್ದರು. ಅಭಿನಯದ ಜೊತೆಗೆ ಗಾಯನದಲ್ಲೂ ಪ್ರಸಿದ್ದಿ ಪಡದಿದ್ದಾರೆ.ಕನ್ನಡ ಪರ ಹೋರಾಟದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿ ಕನ್ನಡದ ಕಣ್ಮಣಿ ಎನಿಸಿಕೊಂಡರು.1953 ರಲ್ಲೀ ಪಾರ್ವತಮ್ಮ ರವರನ್ನು ವಿವಾಹ ವಾದರು ಕನ್ನಡದ ಹೆಸರಾಂತ ನಟರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕಮಾರ್, ಪುನೀತ್ ರಾಜ್ ಕಮಾರ್,ಹಾಗೂ ಪೂರ್ಣಿಮ ಮತ್ತು ಲಕ್ಷ್ಮಿ ಇವರ ಮಕ್ಕಳಾಗಿದ್ದರೆ ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದ ನಟ ಸಾರ್ವಭೌಮ ಡಾ. ರಾಜ್ ಕುಮಾರ್ 2006 ಏಪ್ರಿಲ್ 12 ರಂದು ತಮ್ಮ 76 ನೆ ವಯಸ್ಸಿನಲ್ಲಿ ನಿಧನರಾದರು.

LEAVE A REPLY

Please enter your comment!
Please enter your name here