• ಪ್ರಶಾಂತ್ ಭಟ್

ವಿಮರ್ಶೆ

ಮಲಯಾಳಂ ಕಾದಂಬರಿಗಳಾಗಲೀ, ಸಿನಿಮಾಗಳಾಗಲೀ ಎಂಬತ್ತು ತೊಂಬತ್ತರ ದಶಕಗಳಲ್ಲಿ ಭಿನ್ನವಾಗಿ ನಿಲ್ಲಲು ಕಾರಣ ಅದರ ಕಥೆ. ಅದಕ್ಕಿಂತ ಮುಖ್ಯವಾಗಿ ಕಥಾನಾಯಕ ನಮ್ಮ ನಿಮ್ಮೆಲ್ಲರ ಹಾಗೆ ಸಾಮಾನ್ಯ ಮನುಷ್ಯ ಎಂಬುದು; ಎಲ್ಲರಂತೆ ಅವನಿಗೂ ರಾಗ- ದ್ವೇಷಗಳೂ‌, ಸೋಲು ಗೆಲುವುಗಳೂ ಇದೆ ಎಂಬ ಅಂಶ ಮತ್ತು ಅದನ್ನು ನೋಡುವಂತಹ ಕಥೆಯಾಗಿಸುವ ನಿರ್ದೇಶಕ ನಟರ ಜೋಡಿ ಮಲಯಾಳಂ ಸಿನಿಮಾವನ್ನು ಎತ್ತರಕ್ಕೇರಿಸಿತ್ತು. ಇದೆಲ್ಲದಕ್ಕಿಂತ ಮುಖ್ಯ ಅಂಶ ಇನ್ನೊಂದಿತ್ತು. ಪಾಶ್ಚಿಮಾತ್ಯ ದೇಶಗಳಲ್ಲಿ ‌(ಕ್ರಿಶ್ಚಿಯಾನಿಟಿ ಅಪ್ಪಿಕೊಂಡ) ಹೆಚ್ಚಾಗಿ ಕಂಡುಬರುವ ಪಾಪಪ್ರಜ್ಞೆಯ ನರಳಾಟ (ಸಫರಿಂಗ್) ಮೂಲಕದ ಮುಕ್ತಿ ಎಂಬ ಅಂಶ ಹೆಚ್ಚಾಗಿ ಕಂಡುಬರುವುದು ಕೇರಳದ ಈ ಕಾಲಘಟ್ಟದ ಸಿನಿಮಾ,ಕಾದಂಬರಿಗಳಲ್ಲಿ. ಇವಿಷ್ಟು ನಿಮಗೆ ಗೊತ್ತಿದ್ದರೆ ಈ ಸಿನಿಮಾ ಯಾಕೆ ನನಗಿಷ್ಟವಾಯಿತು ಎಂಬುದು ವಿವರಣೆಗೆ ನಿಲುಕುತ್ತದೆ.

ಜೀತು ಜೋಸೆಫ್ ‘ ದೃಶ್ಯಂ ‘ ಮೊದಲ ಭಾಗ ಬಿಟ್ಟರೆ ‌ನನಗೆ ಅಷ್ಟೇನೂ ಒಳ್ಳೆಯ ನಿರ್ದೇಶಕ ಅನಿಸಿರಲಿಲ್ಲ. ಅವನ ಉಳಿದ ಸಿನಿಮಾಗಳು ಅಂತಹ ಗುಣಮಟ್ಟವೂ ಇರಲಿಲ್ಲ. ಆದರೆ ಈ ಸಿನಿಮಾ ಇದಕ್ಕಿಂತ ಒಳ್ಳೆಯ ಸೀಕ್ವೆಲ್ ಆಗುವ ಸಾಧ್ಯತೆಯೇ ಇರಲಿಲ್ಲ. ನಿಮ್ಮ ಕುಟುಂಬದವರ ಕೈಯಿಂದ ಒಂದು ಅಪರಾಧ ಆಗಿ ಹೋಗಿದೆ. ಅದು ಗತ. ಇನ್ನದರಿಂದ ತಪ್ಪಿಸಿಕೊಳ್ಳಲು ‌ಏನೇನು ಮಾಡಬಹುದೋ‌ ಅದಷ್ಟೇ ಮಾಡಬಹುದು. ಅದೃಷ್ಟವಿದ್ದರೆ ಬಚಾವಾಗಬಹುದು. ಇಲ್ಲವಾದರೆ ಅಷ್ಟೇ‌ .

ದೃಶ್ಯಂ 2 ಸಿನಿಮಾದ ಮೊದಲ ಒಂದು ಗಂಟೆ ಬಹಳ‌ ನಿಧಾನವಾಗಿ ಪಾತ್ರಗಳ ಒಳತೋಟಿಯನ್ನು ಪ್ರೇಕ್ಷಕನಿಗೆ ಮನದಟ್ಟು ಮಾಡಿಸುವುದರಲ್ಲೇ ಕಳೆಯುತ್ತದೆ. ಅದ್ಯಾಕೆ ಎಂಬುದು ಎರಡನೇ ಅರ್ಧದಲ್ಲಿ ತಿಳಿಯುತ್ತದೆ.
ಫ್ಯಾಮಿಲಿ ಡ್ರಾಮಾ , ಥ್ರಿಲ್ಲರ್‌ ಆಗಿ, ಫಿಲಾಸಫಿಕಲ್ ಆಗಿ ಮುಗಿಯುತ್ತದೆ. ಇದೆಲ್ಲ ಸಾಧ್ಯವೇ ಎಂಬ ಪ್ರಶ್ನೆಗೆ ಸಿನಿಮಾದಲ್ಲೇ ಉತ್ತರವಿದೆ. ನೋಡಿ ಆಸ್ವಾದಿಸುವ ತಾಳ್ಮೆ ಬೇಕಷ್ಟೆ.

ಒಂದೆರಡು ಸಣ್ಣ ತಕರಾರುಗಳಿವೆ. ಆದರೆ ಅದೇನೂ ಅಂತಹ ಕಿರಿಕಿರಿ ಹುಟ್ಟಿಸುವುದಿಲ್ಲ. ಅವಸರ ಮಾಡಿ ಓಡಿಸಿಕೊಂಡು ನೋಡಿ ತೀರ್ಮಾನಕ್ಕೆ ಬರುವವರ ಬಗ್ಗೆ ಸಹಾನುಭೂತಿಯಷ್ಟೇ. ಹೆಚ್ಚಿನ ನಮ್ಮ ಪ್ರೇಕ್ಷಕರು 2014ರ‌ ನಂತರ ಹೊಸ ಅಲೆಯ ‌(ಬೆಂಗಳೂರು ಡೇಸ್‌‌ ನಂತರದ) ಮಲಯಾಳಂ ಸಿನಿಮಾ‌ ನೋಡಿ ವ್ಹಾ ವ್ಹಾ ಅಂದವರಾದ ಕಾರಣ ಅವರಿಗೆ ಈ ಒರಿಜಿನಲ್ ಫ್ಲೇವರ್ ಪರಿಚಯ ಕಡಿಮೆ. ಹಳೆಯ ಸಿಬಿಐ ಸರಣಿ ಸಿನಿಮಾಗಳು ,ಮಮ್ಮೂಟಿಯ ದ ಟ್ರುತ್ ಇವೆಲ್ಲ‌ ಕಥೆಯಿಂದ ಬೆಳೆವ ಇದೇ ದಾರಿಯ ಸಿನಿಮಾಗಳು.

ನನಗೆ ಬಹಳ ಇಷ್ಟವಾಯಿತು.
ಸಿನಿಮಾದಲ್ಲಿ ಗಮನ ಸೆಳೆದ ‌ಅಂಶಗಳು
ಕಥೆ
ಚಿತ್ರದ ಕೊನೆ
ಮೋಹನ್‌ಲಾಲ್
ಮೋಹನ್‌ಲಾಲ್
ಮತ್ತು
ಮೋಹನ್‌ಲಾಲ್!!

LEAVE A REPLY

Please enter your comment!
Please enter your name here