ಮಹಾಂತೇಶ ದುರ್ಗ. ಹೆಚ್.ಇ. ಪಿ.ಎಚ್.ಡಿ.ಸಂಶೋಧನಾ ವಿದ್ಯಾರ್ಥಿ, ಸಮಾಜಶಾಸ್ತ್ರ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ,

ಯಾವುದೇ ಒಂದು ದೇಶದ ಭವಿಷ್ಯ ಆ ದೇಶದ ಯುವ ಜನಾಂಗದ ಕೈಯಲ್ಲಿದೆ: ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಎಂಬಂತೆ ಇಂದಿನ ಯುವಕರೇ ಈ ದೇಶದ ಭವಿಷ್ಯದ ಶಿಲ್ಪಿಗಳು ಎನ್ನಬಹುದು. ಯುವಜನತೆ ಭವ್ಯ ಭಾರತದ ಭವಿಷ್ಯದ ರೂವಾರಿಗಳಾಗಿರುತ್ತಾರೆ. ಇಂಥ ಯುವ ಜನತೆ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಮೊದಲನೆಯದಾಗಿ ಯುವಜನತೆ ರಾಷ್ಟ್ರದ ಶಕ್ತಿಯಾಗುವುದು. ಅವರು ಪಡೆಯುವ ಗುಣಾತ್ಮಕ ಶಿಕ್ಷಣದಿಂದ. ಇಲ್ಲಿ “ಗುಣಾತ್ಮಕ” ಎಂಬ ಪದ ವಿಶೇಷವಾದುದು. ಈ ಶಿಕ್ಷಣದಲ್ಲಿ ಈ ಗುಣಾತ್ಮಕತೆ ಎಂಬುದು ಇದ್ದರೆ ಇಂದಿನ ಬಹುತೇಕ ಶೈಕ್ಷಣಿಕ ಸಮಸ್ಯೆಗಳು ಇಲ್ಲವಾಗುತ್ತವೆ. ಇಂದು ಯುವಜನತೆ ಶಿಕ್ಷಿತರಾಗುತ್ತಿದ್ದಾರೆ. ಆದರೆ ಸುಶಿಕ್ಷಿತರಾಗುತ್ತಿಲ್ಲ. ಇದಕ್ಕೆ ನಮ್ಮ ಶೈಕ್ಷಣಿಕ ವಾತಾವರಣವು ಕಲುಷಿತವಾಗಿರುವುದು ಕಾರಣವಾಗಿದೆ. ಇಂದಿನ ಶಿಕ್ಷಣ ರಂಗದಲ್ಲಿನ ಡೊನೆಷನ್, ಕ್ಯಾಪಿಟೆಷನ್ ಇತ್ಯಾದಿಗಳಿಂದಾಗಿ ಜನ ಸಾಮಾನ್ಯರು ತತ್ತರಿಸುವಂತಾಗಿದೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ವರ್ಗದವರು ತಮ್ಮ ಮಕ್ಕಳನ್ನು ಅವರಿಗಿಷ್ಟವಾದ ಕೋರ್ಸ್‍ನ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಉದಾಹರಣೆಗೆ ಹೇಳುವುದಾದರೆ ಸಿ.ಇ.ಟಿ. ಯಲ್ಲಿ ಒಂದು ಅಂಕದಿಂದ ವೈದ್ಯಕೀಯ ಸೀಟು ಪಡೆಯಲು ವಿಫಲನಾದ ವಿದ್ಯಾರ್ಥಿ, ಅದೇ ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆಯಲು ಲಕ್ಷಗಟ್ಟಲೆ ಹಣ ಪಾವತಿಸಬೇಕು. ಜೀವನ ನಡೆಸುವುದೇ ದುಸ್ತರವಾಗಿರುವಾಗ ಲಕ್ಷ ಲಕ್ಷ ಹಣವೆಲ್ಲಿ ತಂದಾನು?. ಇದರಿಂದ ಒಲ್ಲದ ಕೋರ್ಸಿಗೆ ಸೇರುವ ಅವನು ಅಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದೆ ಈ ಸಮಾಜದಲ್ಲಿ ಈ ವ್ಯವಸ್ಥೆಯ ವಿರುದ್ಧ ಅಸಹನೆ ಬೆಳೆಸಿಕೊಳ್ಳುತ್ತಾನೆ. ಇನ್ನು ಮುಂದುವರೆದು ಆಕ್ರೋಶಗೊಳ್ಳುತ್ತಾನೆ. ಆದುದರಿಂದ ಈ ರೀತಿಯ ಡೊನೆಷನ್, ಕ್ಯಾಪಿಟೆಷನ್ ಶುಲ್ಕದಿಂದ ಮುಕ್ತವಾಗಿರುವಂತಹ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಬೇಕಾದ ಅವಶ್ಯಕತೆ ಇದೆ.

ಅದೇ ರೀತಿ ಶಿಕ್ಷಕರ ವರ್ಗಾವಣೆ ನೀತಿ, ನೇಮಕಾತಿಯಲ್ಲಿನ ಲೋಪದೋಷಗಳು, ಈ ಶೈಕ್ಷಣಿಕ ರಂಗದ ಅಶಕ್ತಿಗೆ ಕಾರಣವಾಗುವುದರಲ್ಲಿ ಸಂಶಯವಿಲ್ಲ. ಗುರು-ಶಿಷ್ಯ ಸಂಬಂಧ ಇಂದು ಅಷ್ಟಕ್ಕಷ್ಟೆ. ಸಂಬಳಕ್ಕಾಗಿ ಏನೋ ಒಂದು ಹೇಳಬೇಕು ಅಷ್ಟೆ. ಅದರಾಚೆ ಈ ಶಿಕ್ಷಕರು ಕಣ್ಣು ಹಾಯಿಸುವುದಿಲ್ಲ. ಇದಕ್ಕೆ ಅಪವಾದವು ಇದೆ. ಹಾಗೆಯೇ ವಿದ್ಯಾರ್ಥಿಗಳಲ್ಲೂ ಶಿಸ್ತು, ನಿಷ್ಠೆ, ಶ್ರದ್ದೆ, ನಿಯಮ ಪಾಲನೆ ಇಲ್ಲವಾಗಿದೆ,. ಕಾಲೇಜುಗಳಲ್ಲಿ ನಡೆಯುವ ರ್ಯಾಗಿಂಗ್ ಒಂದು ಪಿಡುಗಾಗಿ ಪರಿಣಮಿಸಿದೆ. ಗುರು-ಶಿಷ್ಯ ಸಂಬಂಧ ಇಂದು ಆತ್ಮೀಯವಾಗಿರದೆ ಯಾಂತ್ರಿಕವಾಗಿದೆ. ಆದುದರಿಂದ ಈ ನಿಟ್ಟಿನಲ್ಲಿ ಗುರು-ಶಿಷ್ಯರಿಬ್ಬರೂ ಬದಲಾಗಬೇಕಾದ ಅಗತ್ಯತೆ ಮಾದರಿಗಳಾಗಬೇಕಾದ ಅನಿವಾರ್ಯತೆ ಇದೆ.

ಎರಡನೆಯದಾಗಿ ಯುವ ಜನತೆಯಾದಿಯಾಗಿ ಎಲ್ಲರೂ ವಾಸಿಸುವುದು ಈ ಸಾಮಾಜಿಕ ವಾತಾವರಣದಲ್ಲಿ. ನಮ್ಮ ಸುತ್ತಲಿನ ಈ ಸಮಾಜ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಬಹಳವಾಗಿ ಪ್ರಭಾವ ಬೀರುತ್ತದೆ. ಇಂದಿನ ಈ ಸಾಮಾಜಿಕ ವ್ಯವಸ್ಥೆಯ ಮೇಲು-ಕೀಳು, ಬಡವ-ಬಲ್ಲಿಗ, ಮೇಲು ಜಾತಿ-ಕೀಲುಜಾತಿ, ಈ ರೀತಿಯ ಅಸಮಾನತೆಗಳು ಯುವ ಜನಾಂಗದ ಮೇಲೆ  ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದುನ್ನು ಕಾಣಬಹುದಾಗಿದೆ. ಹುಟ್ಟುತ್ತಾ ವಿಶ್ವ ಮಾನವನಾಗಿರುವ  ಈ ಮನುಷ್ಯ ಶಿಶುವನ್ನು ಈ ಸಾಮಾಜಿಕ ಪರಿಸರ ಅಲ್ಪ ಮಾನವವನ್ನಾಗಿ ರೂಪಿಸುತ್ತಿರುವುದು ಈ ವ್ಯವಸ್ಥೆಯ ದುರಂತ.  ಈ ಸಮಾಜದಲ್ಲಿ  ಸಮಾನತೆ ಎಂಬುದು  ಈ ಸಂವಿಧಾನದಲ್ಲಿ ಮಾತ್ರ ಇದ್ದು ನಿಜ ಜೀವನದಲ್ಲಿ ಅಸಮಾನತೆ ತಾಂಡವವಾಡುತ್ತಿದೆ.  ಈ ಜಾತಿ ನಿರ್ಮೂಲನೆಯಾಗಬೇಕೆಂಬ ಆಶಯದೊಂದಿಗೆ ಅಸ್ತಿತ್ವಕ್ಕೆ ಬಂದ ನಮ್ಮ ಈ ಸಂವಿಧಾನವು, ಆ ಮೂಲಕ ರಚನೆಯಾಗುವ  ಸರ್ಕಾರದ ಯಾವುದೇ ಅರ್ಜಿ ನಮೂನೆಯಲ್ಲಿ ಜಾತಿ ನಮೂದಿಸಿ ಎಂಬ ಕಾಲಂ ಜಾತಿಯ ಪುನರುಜ್ಜೀವನವನ್ನು ಪ್ರತ್ಯಕ್ಷವಾಗಿಯೇ ಮಾಡುತ್ತದೆ ಎಂದರೆ ತಪ್ಪಾಗಲಾರದು.

ಈ ಸಂವಿಧಾನದಲ್ಲಿ ಈ ಭಾರತ ಜಾತ್ಯತೀತ ರಾಷ್ಟ್ರ, ಆದರೆ ವಾಸ್ತವದಲ್ಲಿ ಪಕ್ಕ ಜಾತಿ ರಾಷ್ಟ್ರ!!!! ಈ ವ್ಯವಸ್ಥೆ ಬದಲಾಗಬೇಕು. ಆರ್ಥಿಕ, ಸಾಮಾಜಿಕ ಅಸಮಾನತೆ ತೊಲಗಿ ಎಲ್ಲರೂ ಸಮಾನರು ಎಂಬ ಸ್ಥಿತಿ ನಿರ್ಮಾಣವಾಗಬೇಕು. ಆಗ  ಮಾತ್ರ ಈ ಸಮಾಜದಲ್ಲಿ ಸರ್ವರ ಉದ್ಧಾರ ಸಾಧ್ಯ. ಇನ್ನು ಕ್ರೀಡಾ ಕ್ಷೇತ್ರ, ಯುವಜನತೆ ದೈಹಿಕವಾಗಿ ಮಾನಸಿಕವಾಗಿ ಸಬಲರಾಗಲು ಕ್ರೀಡೆಗಳು ಅತ್ಯಗತ್ಯ. ಸದೃಢವಾದ ದೇಹದಲ್ಲಿ ಸಬಲ ಮನಸ್ಸಿರುತ್ತದೆ ಎಂಬ ಉಕ್ತಿಯಂತೆ ವ್ಯಕ್ತಿ ದೈಹಿಕವಾಗಿ ಆರೋಗ್ಯವಂತ ಹಾಗೂ ದೃಢಕಾಯನಾಗಿದ್ದರೆ ಮಾತ್ರ ಆತ ಈ ಸಮಾಜದ, ದೇಶದ ಆಸ್ತಿಯಾಗುತ್ತಾನೆ. ಇಲ್ಲದಿದ್ದರೆ ಹೊರೆಯಾಗುತ್ತಾನೆ. ಆದುದರಿಂದ ಪ್ರತಿ ಯುವ ಜನತೆಗೆ ದೈಹಿಕ ಹಾಗೂ ಮಾನಸಿಕ ವಿಕಾಸಕ್ಕೆ ಅಗತ್ಯವಾದ ಕ್ರೀಡಾ ಸೌಲಭ್ಯಗಳು ತಲುಪಬೇಕು. ಆದರೆ ಇಂದಿನ ನಮ್ಮ ಹಳ್ಳಿಗಳಲ್ಲಿ ಅಷ್ಟೇ ಏಕೆ ನಗರಗಳಲ್ಲೂ ಕೂಡ ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲ. ಆಡಲು ಕ್ರೀಡಾ ಸಾಮಗ್ರಿಗಳು ಇಲ್ಲ. ಗಾಳಿ ಬೆಳಕು ಸಾಕಷ್ಟಿಲ್ಲದ ಕೋಳಿ ಗೂಡುಗಳಂಥ ಕೊಠಡಿಗಳಲ್ಲಿ ಶಾಲಾ ಕಾಲೇಜುಗಳು ನಡೆಯುತ್ತಿರುವುದನ್ನು ಕಾಣಬಹುದು. ಇಂಥ ವಾತಾವರಣದಲ್ಲಿ ಬೆಳೆದ ಯುವಕರಿಂದ ಯಾವ ಕ್ರೀಡಾ ಸಾಧನೆ ಸಾಧ್ಯವಾಗುತ್ತದೆ ಹೇಳಿ? ಹಾಗೆಯೇ ಯುವಜನತೆ ಏನಾದರೂ ಮಾಡಿ ದಿಢೀರ್ ಹೆಸರು ಮಾಡಬೇಕು, ಹಣಗಳಿಸಬೇಕು ಎಂಬ ಹುಚ್ಚಿನಿಂದ ಉದ್ದೀಪನಾ ಮದ್ದು ಸೇವಿಸಿ ಕ್ರೀಡಾ ಕ್ಷೇತ್ರಕ್ಕೆ ಕಳಂಕ ತರುತ್ತಿದ್ದಾರೆ. ಆದುದರಿಂದ ಯುವ ಜನತೆ ಈ ನಿಟ್ಟಿನಲ್ಲಿ ಏನಾದರೂ ಮಾಡಿ ಪದಕ ಗೆಲ್ಲಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂಬ ಇಚ್ಛೆಯನ್ನು ಬಿಟ್ಟು ಶ್ರದ್ದೆ, ನಿಷ್ಠೆ, ಪ್ರಾಮಾಣಿಕತೆಯಿಂದ ಸಾಧನೆ ಮಾಡಿದರೆ ಹೆಸರು, ಹಣ, ಅಂತಸ್ತು ಖಂಡಿತಾ ಸಿಗುತ್ತದೆ. ಈ ವಿಷಯದಲ್ಲಿ ಸಹನೆ, ನಿರಂತರವಾದ ಅಭ್ಯಾಸ ಮುಖ್ಯ, ಅಂತೆಯೇ ಸರ್ಕಾರವು ಈ ಶಾಲಾ ಕಾಲೇಜು ಹಂತದಲ್ಲಿಯೇ ಕ್ರೀಡಾ ಚಟುವಟಿಕೆಗೆ ಪೂರಕವಾದ ವಾತಾವರಣದ ಜೊತೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಯುವ ಜನತೆಯಲ್ಲಿನ ಅನನ್ಯ ಕ್ರೀಡಾ ಪ್ರತಿಭೆಯನ್ನು ಅನಾವರಣ ಮಾಡಬೇಕಾದ ಅಗತ್ಯತೆ ಇದೆ.

ಇನ್ನೊಂದು ಬಹಳ ಗಂಭೀರವಾದ ವಿಚಾರವೆಂದರೆ ನಿರುದ್ಯೋಗಿ ಯುವಜನತೆ ಸಮಾಜವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು. ಇಂದು ಶಿಕ್ಷಿತ ಯುವ ಜನತೆಯೇ ಅನೇಕ ಪ್ರಲೋಭನೆಗಳಿಗೆ ಒಳಗಾಗಿ ನಕ್ಸಲೀಯ ಚಟುವಟಿಕೆಗಳಲ್ಲಿ, ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗುತ್ತಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಹಾಗೆಯೇ ಯುವ ಜನತೆಯಲ್ಲಿ ಸಂಸ್ಕಾರದ ಕೊರತೆಯಿಂದ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯವಾಗಿದೆ. ಆದುದರಿಂದ ಶಾಲಾ ಹಂತದಲ್ಲಿ ನೀತಿ ಶಿಕ್ಷಣವನ್ನು ಕಡ್ಡಾಯ ಮಾಡಬೇಕಾದ  ಅಗತ್ಯತೆ ಇದೆ. ಇದರ ಜೊತೆಗೆ ಪೋಷಕರು ಈ ಮಕ್ಕಳನ್ನು- ಯುವ ಜನತೆಯನ್ನು ಉತ್ತಮ ನಾಗರಿಕರನ್ನಾಗಿಸುವಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕಾಗಿದೆ.

 

 

 

 

 

LEAVE A REPLY

Please enter your comment!
Please enter your name here