• ಶಾರೂಕ್ ತೀರ್ಥಹಳ್ಳಿ
    8050801021

ಬಕ್ರೀದ್ ಮತ್ತೊಮ್ಮೆ ಆಗಮಿಸಿದೆ ಆದರೆ ಈ ಬಾರಿ ಬಕ್ರೀದ್ ಸಂಭ್ರಮಕ್ಕೆ ಕೊರೊನಾ ಅಡ್ಡಿಯಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್ (ಚಂದ್ರಮಾನ ಕ್ಯಾಲೆಂಡರ್)ನ ದುಲ್ ಹಜ್ಜ್ ತಿಂಗಳ 10ನೇಯ ತಾರೀಕಿನಂದು ಆಚರಿಸುವ ಹಬ್ಬವೇ ಬಕ್ರೀದ್ ( ಈದುಲ್ ಅಝ್ಹಾ ) ಇದೇ ಸಮಯದಲ್ಲಿ ವಿಶ್ವ ಭ್ರಾತೃತ್ವ ಸಾರುವ ಹಜ್ ಯಾತ್ರೆ ನಡೆಯುತ್ತದೆ. ಆದರೆ ಈ ಬಾರಿ ಸೌದಿ ಸರ್ಕಾರ ಭಾರತೀಯ ಮುಸ್ಲೀಮರು ಸೇರಿದಂತೆ ವಿದೇಶಿಯರಿಗೆ ಈ ಬಾರಿ ಹಜ್ ಯಾತ್ರೆಯನ್ನು ನೆರೆವೇರಿಸಲು ಅನುಮತಿ ನಿರಾಕರಿಸಿದೆ ಕಾರಣ ಕೊರೋನ ಸೋಂಕು. ಆದರೂ ಯಾತ್ರೆಗೆ ಹೋಗದೆ ಹಜ್ ಯಾತ್ರೆಯಷ್ಟೆ ಪುಣ್ಯವನ್ನು ಪಡೆದ ವ್ಯಕ್ತಿಗಳು ನಮ್ಮ ಮದ್ಯೆ ಸಾವಿರಾರು ಜನರಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ ಸಿ ರೋಡ್ ನ ಗೂಡಿನ ಬಳಿಯ ನಿವಾಸಿ ಅಬ್ದುಲ್ ರಹೆಮಾನ್ ಕೂಲಿ ಮಾಡಿ ಜೀವನ ಸಾಗಿಸುವ ವ್ಯಕ್ತಿ, ಅವರ ಪತ್ನಿ ಕೂಡ ಬೀಡಿ ಕಟ್ಟಿ ಒಂದಿಷ್ಟು ಹಣ ಕೂಡಿಸಿ ಇಟ್ಟಿದ್ದರು ಆ ಹಣದಿಂದ ಪವಿತ್ರ ಮಕ್ಕಾ ಮತ್ತು ಮದೀನ ಯಾತ್ರೆ ಮಾಡಬೇಕು ಎಂಬುದು ಅವರ ಬಹಳ ವರ್ಷಗಳ ಆಸೆಯಾಗಿತ್ತು ಆದರೆ ಈ ಇಬ್ಬರೂ ಕೂಲಿ ಕಾರ್ಮಿಕರು ಪವಿತ್ರ ಹಜ್ ಯಾತ್ರೆಗೆಗಾಗಿ ಹಲವಾರು ವರ್ಷಗಳಿಂದ ಕೂಡಿಟ್ಟ ಹಣವನ್ನು ಹಸಿದ ಹೊಟ್ಟೆಗಳನ್ನು ತುಂಬಿಸುವುದಕ್ಕಾಗಿ ಮೀಸಲಿಟ್ಟು ಲಾಕ್ ಡೌನ್ ಸಮಯದಲ್ಲಿ ಎಲ್ಲರ ಗಮನ ಸೆಳೆದಿದ್ದರು. ಹಜ್ ಯಾತ್ರೆಗೆ ಕೂಡಿಟ್ಟ ಹಣದಿಂದ ಅಕ್ಕಿ ಸಹಿತ ಆಹಾರ ಸಾಮಗ್ರಿ ಖರೀದಿಸಿ, ಸಂಕಷ್ಟದಲ್ಲಿರುವವರಿಗೆ ವಿತರಿಸಲು ಅವರು ಮುಂದಾಗಿದರು. ಬಡ / ಅಶಕ್ತ ಕುಟುಂಬಕ್ಕೆ ಹಜ್ ಹಣದಿಂದ ದಿನಸಿ ಸಾಮಗ್ರಿ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಈ ಈದ್ ಸಂದರ್ಭದಲ್ಲಿ ಅವರನ್ನು ನೆನಪಿಸಲೇ ಬೇಕು, ಏಕೆಂದರೆ ಅವರು ಬಡವರಿಗೆ ಸಹಾಯವನ್ನು ಮಾಡಿ ಅದರಿಂಧ ಹಜ್ ಯಾತ್ರೆಯನ್ನು ಪೂರ್ತಿಕರಿಸಿಕೊಂಡರು. ಇಂತಹ ಹಲವು ಘಟನೆಗಳನ್ನು ನಾವು ಇತಿಹಾಸ ಪುಟಗಳಲ್ಲಿ ಕೂಡ ಕಾಣಬಹುದು, ಪ್ರವಾದಿ ಮುಹಮ್ಮದ್ (ಸ)ರ ಅನುಯಾಯಿಗಳಲ್ಲಿ ಒಬ್ಬರಾದ ಅಬ್ದುಲ್ಲಾ ಬಿನ್ ಮುಕಫ್ಫರ್ ಹಜ್ ಯಾತ್ರೆಗಾಗಿ ಹಲವು ವರ್ಷಗಳಿಂದ ಹಣವನ್ನು ಕೂಡಿಸಿ ಇಟ್ಟಿದ್ದರು. ಒಮ್ಮೆ ಅವರ ಗರ್ಭೀಣಿ ಪತ್ನಿ ಪಕ್ಕದ ಮನೆಯಲ್ಲಿ ಮಾಂಸದ ಸಾರಿನ ಸುವಾಸನೆಯನ್ನು ಗಮನಿಸಿ ನನಗೂ ಮಾಂಸದ ಸಾರು ಬೇಕು ಎಂಬ ಬಯಕೆಯನ್ನು ಪತಿಯ ಮುಂದಿಟ್ಟರು. ಪತಿ ಅಬ್ದುಲ್ಲಾ ಬಿನ್ ಮುಕಫ್ಫರ್ ಪಕ್ಕದ ಮನೆಗೆ ಹೋಗಿ ನನ್ನ ಗರ್ಭೀಣಿ ಪತ್ನಿಗೆ ಸ್ವಲ್ಪ ಮಾಂಸದ ಸಾರು ಕೇಳಲು ಹೋದಾಗ ಮಹಿಳೆಯ ಪರಿಸ್ಥಿತಿಯನ್ನು ನೋಡಿ ತಾನು ಹಜ್ ಯಾತ್ರೆಗಾಗಿ ಕೂಡಿಟ್ಟ ಎಲ್ಲಾ ಹಣವನ್ನು ಆ ಮಹಿಳೆಗೆ ನೀಡಿ ಇದು ನನ್ನ ಹಜ್ ಎಂದು ಹೇಳಿದ್ದರು. ಇಂತಹ ಹಲವು ಘಟನೆಗಳನ್ನು ನಾವು ಇತಿಹಾಸದಲ್ಲಿ ಕಾಣಬಹುದು.
ಈದುಲ್ ಅಝ್ಹ ಪ್ರವಾದಿ ಇಬ್ರಾಹೀಮ್‍ರು(ಅ) ತೋರಿಸಿದ ಮಾರ್ಗದರ್ಶನದಂತೆ ನಡೆಯುವ ಅಹ್ವಾನವನ್ನು ನೀಡುತ್ತದೆ. ಅವರ ಜೀವನ ಮೌಲ್ಯಗಳನ್ನು ಅಳವಡಿಸುವ, ತ್ಯಾಗ ಬಲಿದಾನಗಳ ಅವರ ಆದರ್ಶವನ್ನು ಪಾಲಿಸಲು ಕರೆ ನೀಡುತ್ತದೆ. ಬಹುದೇವ ವಿಶ್ವಾಸ ಮತ್ತು ಅದರ ತೊಂದರೆಗಳಿಂದ ರಕ್ಷಿಸಿಕೊಳ್ಳುವ ಮತ್ತು ಏಕದೇವತ್ವವನ್ನು ಜೀವನದ ಎಲ್ಲಾ ರಂಗಗಳಲ್ಲೂ ಒಪ್ಪಿ ಅದನ್ನು ಜೀವನದಲ್ಲಿ ಅಳವಡಿಸುವ ಕರೆಯನ್ನು ನೀಡುತ್ತದೆ. ಬಲಿದಾನ (ಕುರ್ಬಾನಿ) ಇದರ ಪ್ರತೀಕವಾಗಿದೆ. ಏಕೆಂದರೆ ಇದರ ಉದ್ದೇಶವು ಅಲ್ಲಾಹನನ್ನು ಭಯ ಪಡುವುದು ಮತ್ತು ಆತ್ಮಶುದ್ಧಿಯಾಗಿದೆ. “ಬಲಿ ಪ್ರಾಣಿಯ ಮಾಂಸ ಅಥವಾ ರಕ್ತ ಅಲ್ಲಾಹನನ್ನು ತಲುಪುವುದಿಲ್ಲ. ಆದರೆ ನಿಮ್ಮ ದೇವಭಕ್ತಿಯು ಅಲ್ಲಾಹನನ್ನು ತಲುಪುತ್ತದೆ.( ಪವಿತ್ರ ಕುರ್‍ಆನ್ 22-37)
ಪ್ರತಿಯೊಬ್ಬ ಮುಸ್ಲಿಮನೂ ಪ್ರಾಣಿಬಲಿಯೊಂದಿಗೆ ತಮ್ಮ ಮನಸ್ಸಿನ ಎಲ್ಲ ದುಷ್ಟ ಯೋಚನೆ ಮತ್ತು ಯೋಜನೆಗಳನ್ನು ಬಲಿ ನೀಡಬೇಕಾಗಿದೆ. ಅಲ್ಲಾಹನ ಪ್ರತಿಯೊಂದು ಅಜ್ಞೆಯನ್ನು ಚಾಚೂ ತಪ್ಪದೆ ಪಾಲಿಸುವ ಮತ್ತು ಅವನ ಆದೇಶದಂತೆ ಜೀವನ ಮತ್ತು ಸಂಪತ್ತನ್ನು ಬಲಿ ನೀಡುವ ಸುದೃಢ ನಿಶ್ಚಯವನ್ನು ನಮ್ಮಲ್ಲಿ ಮಾಡಿಕೊಳ್ಳಬೇಕಿದೆ. ಎಲ್ಲಿಯವರೆಗೆ ಹೃದಯದಲ್ಲಿ ದೇವಭಯ ಜಾಗೃತವಾಗಿರುವುದಿಲ್ಲವೋ ಅಲ್ಲಿಯ ವರೆಗೆ ಯಾವುದೇ ಕೆಲಸವೂ ಸ್ವೀಕಾರಾರ್ಹವಾಗುವುದಿಲ್ಲ. ಎಲ್ಲಿಯವರೆಗೆ ಕೆಡುಕನ್ನು ಬಲಿ ನೀಡುವ ಇಚ್ಛೆ ಉಂಟಾಗುವುದಿಲ್ಲವೋ ಅಲ್ಲಿಯ ವರೆಗೆ ಪ್ರಾಣಿಬಲಿಯಿಂದ ನಿರೀಕ್ಷಿತ ಉದ್ದೇಶ ಪೂರ್ತಿಯಾಗಲಾರದು.
ಈ ಬಾರಿಯ ಬಕ್ರೀದ್ ಸಂದರ್ಭದಲ್ಲಿ ಪ್ರತಿಯೊಬ್ಬರು ಗಮನಿಸಲೇ ಬೇಕಾದ ವಿಚಾರ, ಪ್ರಪಂಚದ ಮೂಲೆ ಮೂಲೆಯಲ್ಲು ಹರಡಿಕೊಂಡಿರುವ ಮಹಾಮಾರಿ ಕೊರೋನಾ ಸೋಂಕಿನಿಂದ ಇಡೀ ಸಮಾಜವೇ ತತ್ತರಿಸಿ ಹೋಗಿದೆ. ಕೊರೋನ ಸೋಂಕಿಗೆ ಈಗಾಗಲೇ ಕೊಟ್ಯಾಂತರ ಜನರು ಬಲಿಯಾಗಿದ್ದಾರೆ, ಕೋಟ್ಯಾಂತರ ಜನ ಸೋಂಕಿನಿಂದ ಬಳಲುತ್ತಿದ್ದಾರೆ. ನಮ್ಮ ದೇಶದಲ್ಲು ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ, ಸೋಂಕಿತರ ಸಂಖ್ಯೆಯಲ್ಲು ಯಾವುದೇ ಬದಲಾವಣೆ ಕಂಡುಬರುತ್ತಿಲ್ಲ. ಅದರ ಜೊತೆ ಜೊತೆಯಲ್ಲೆ ಕೋರೋನ ಸೋಂಕಿಗೆ ಇಲ್ಲಿಯವರೆಗೆ ಸರಿಯಾದ ಮದ್ದು ಸಿಗದೇ ಜನರಲ್ಲಿ ಇನ್ನಷ್ಟು ಆತಂಕ ಸೃಷ್ಟಿಯಾಗಿದೆ. ಲಾಕ್ ಡೌನ್ ,ಸೀಲ್ ಡೌನ್ ಗಳನ್ನು ವಿಧಿಸುವ ಮೂಲಕ ಸರ್ಕಾರಗಳು ಕೋರನಾ ನಿಯಂತ್ರಣವನ್ನು ಸಾಧಿಸಲು ಪ್ರಯತ್ನಿಸಿದರು ಯಾವುದೇ ಪ್ರಯೋಜನವಾಗಲಿಲ್ಲ. ಇದರ ಮದ್ಯದಲ್ಲೆ ಹಲವು ಜಾತ್ರೆಗಳು, ಸಮಾರಂಭಗಳು ಹಬ್ಬ ಹರಿದಿನಗಳು, ಮದುವೆ ಕಾರ್ಯಕ್ರಮಗಳು ಎಲ್ಲವೂ ಸರಳ ರೀತಿಯಲ್ಲೆ ನಡೆದುಹೋಯಿತು, ಇದೀಗ ಮುಸ್ಲೀಮರ ಪವಿತ್ರ ಹಬ್ಬ ಬಕ್ರೀದ್ ಆಗಮಿಸಿದೆ. ಸರ್ಕಾರ ಹಲವಾರು ಸೂಚನೆಗಳನ್ನು ಹೊರಡಿಸಿ ಬಕ್ರೀದ್ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಲು ಸೂಚಿಸಿದೆ. ಮಸೀದಿಯಲ್ಲಿ ಐವತ್ತು ಜನರಂತೆ ಪ್ರಾರ್ಥಿಸಲು ಅನುಮತಿ ನೀಡಿದ್ದು, ಈದ್ ಗಾಹ್ ಗಳಲ್ಲಿ ವಿಶೇಷ ಪ್ರಾರ್ಥನೆಗೆ ಅನುಮತಿ ನಿರಾಕರಿಸಿದೆ, ಕೊರೋನ ಸೊಂಕಿನ ಮದ್ಯೆ ಸರ್ಕಾರದ ಸೂಚನೆಗಳನ್ನು ಪಾಲಿಸಿ ಸರಳ ರೀತಿಯಲ್ಲಿ ಹಬ್ಬ ಆಚರಿಸಬೇಕಾಗಿದೆ.

LEAVE A REPLY

Please enter your comment!
Please enter your name here