• ಮಹಮ್ಮದ್ ಶರೀಫ್ ಕಾಡುಮಠ

ನಮ್ಮ ದೇಶದಲ್ಲಿ ಇದುವರೆಗೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳಲ್ಲಿ ಬಹಳಷ್ಟು ಪ್ರಕರಣಗಳು ದೇಶವನ್ನೇ ತಲ್ಲಣಗೊಳಿಸಿದ್ದಂಥವು. 2012 ರ ನಿರ್ಭಯಾ ಪ್ರಕರಣ ಅತ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ಕಾರಣವಾದುದರ ಹಿಂದೆ ಸರ್ಕಾರವನ್ನು ದೂಷಿಸುವ, ಕಾರಣವಾಗಿಸುವ, ಆ ಮೂಲಕ ಕಾಂಗ್ರೆಸ್ ಪಕ್ಷದ ಜಡತ್ವದ ಬಗ್ಗೆ ಜನರಿಗಿದ್ದ ಸಹಜ ಅಭಿಪ್ರಾಯಕ್ಕೆ ಹೆಚ್ಚು ಪುಷ್ಟಿ ನೀಡಿ, ಮುಂದೆ ತಮ್ಮ ಸರ್ಕಾರ ರಚಿಸುವ ಉದ್ದೇಶ ಬಿಜೆಪಿಗೆ ಇದ್ದಿದ್ದು ಈಗ ಗೋಚರಿಸುತ್ತಿದೆ.

ನಿರ್ಭಯಾ ಪ್ರಕರಣದಷ್ಟೇ ಭೀಕರವಾದ, ಕ್ರೂರವಾದ ಕೆಲವು ಅತ್ಯಾಚಾರ ಪ್ರಕರಣಗಳು ಇಲ್ಲಿ ನಡೆದವು. ಬಿಜೆಪಿ ಅಧಿಕಾರದ ಈ ಅವಧಿಗಳಲ್ಲೇ ಉನ್ನಾವೊ, ಕಥುವಾ ಅತ್ಯಾಚಾರ ಪ್ರಕರಣಗಳು ನಡೆದುವು. ಇವು ಯಾವುವೂ ನಿರ್ಲಕ್ಷ್ಯಿಸುವ ಪ್ರಕರಣಗಳಲ್ಲ. ಅದೂ ಬಿಜೆಪಿಯ ಶಾಸಕನೊಬ್ಬ ಭಾಗಿಯಾಗಿರುವ ಪ್ರಕರಣವೂ ಇದರಲ್ಲಿದೆ. ಆದರೆ ಇವುಗಳ ವಿರುದ್ಧ ಸರ್ಕಾರವನ್ನು ಪ್ರಶ್ನಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ದೊಡ್ಡಮಟ್ಟದ ಪ್ರತಿಭಟನೆ ನಡೆಸಲೇ ಇಲ್ಲ. ಬಿಜೆಪಿಯಂತೂ ನಡೆಸುವುದಿಲ್ಲ(ತಮ್ಮ ಸರ್ಕಾರದ ಅವಧಿ ತಾನೆ?). ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ಇಂತಹ ವಿಚಾರದಲ್ಲಿ ಸರ್ಕಾರವನ್ನು ಪ್ರಶ್ನಿಸುವ ಅವಕಾಶ ಕಾಂಗ್ರೆಸ್ ಗೆ ತುಸು ಹೆಚ್ಚೇ ಇದೆ. ಇದಕ್ಕೆ ಇನ್ನೊಂದು ಕಾರಣವೆಂದರೆ ಅತ್ಯಂತ ಹೆಚ್ಚು ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾದವರು ಬಿಜೆಪಿಯ ಸದಸ್ಯರು, ಶಾಸಕರು ಮುಂತಾದವರು. ಕಾಂಗ್ರೆಸ್ ಯಾಕೆ ಈ ಅವಕಾಶವನ್ನು ಬಳಸಿಲ್ಲ (ರಾಜಕೀಯ ಅಸ್ತ್ರವಾಗಿ ಬಳಸಬೇಕೆಂದಲ್ಲ) ಎಂದು ಗೊತ್ತಾಗುತ್ತಿಲ್ಲ.

ಇವೆಲ್ಲದರ ಆಚೆ ಪಶುವೈದ್ಯೆಯ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿಗಳ ಎನ್ಕೌಂಟರ್ ಅತ್ಯಾಚಾರ ಪ್ರಕರಣಕ್ಕಿಂತಲೂ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ. ನಾಲ್ಕು ಆರೋಪಿಗಳ ಎನ್ಕೌಂಟರ್ ತತ್ ಕ್ಷಣಕ್ಕೆ ಈ ಭಾರತಕ್ಕೆ ಅರಗಿಸಿಕೊಳ್ಳಲಾಗಲಿಲ್ಲ. ಅರಗಿಸಿಕೊಳ್ಳುವುದು ಅಷ್ಟು ಸುಲಭವೂ ಅಲ್ಲ. ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದ ಕಾಲದಲ್ಲಿ ಗಲ್ಲುಶಿಕ್ಷೆಯ ವಿಚಾರದಲ್ಲಿ ಸಹಿ ನೀಡುವ ಅವಕಾಶವನ್ನು ಆದಷ್ಟು ತಪ್ಪಿಸುತ್ತಿದ್ದರು. ಅಂದರೆ ಗಲ್ಲು ಶಿಕ್ಷೆ ಈ ದೇಶದ ದೇಹಕ್ಕೆ ಸೂಕ್ತವಲ್ಲ ಎಂಬುದು, ಹೀಗೆ ಕೊಂದು ಬಿಡುವುದು ಸರಿಯಾದ ಕ್ರಮ ಅಲ್ಲ ಎಂಬುದು ಅವರ ನಿಲುವಾಗಿತ್ತು. ಸಹಿ ಹಾಕಲು ಮನಸ್ಸು ಬರುತ್ತಿರಲಿಲ್ಲ ಅವರಿಗೆ. ಈಗಿನ ಸರ್ಕಾರ ಹಿಂಸೆಯನ್ನು ಮುನ್ನೆಲೆಯಲ್ಲಿಟ್ಟುಕೊಂಡೇ ಶಾಂತಿಯನ್ನು ನಾಲಗೆ ತುದಿಗೆ ಸೀಮಿತಗೊಳಿಸಿ ಬೆಂಕಿಯ ಹಾಗೆ ಬೆಳೆಯುತ್ತಿದೆ.

ಈ ಎನ್ಕೌಂಟರ್ ನನಗೆ ಥಟ್ಟೆಂದು ಗಾಂಧಿಯನ್ನು ನೆನಪಿಸಿತು. ಗಾಂಧಿ ಅಹಿಂಸೆಯ ಉದ್ದೇಶದ ಅರಿವಾದವರಿಗೆ ಈ ಹೊತ್ತಿನಲ್ಲಿ ಗಾಂಧಿ ಖಂಡಿತವಾಗಿಯೂ ನೆನಪಾಗಿಯೇ ಆಗುತ್ತಾರೆ. ಹಿಂಸೆಗೆ ಉತ್ತರ ಹಿಂಸೆ ಅಲ್ಲ ಎಂಬುದು ಗಾಂಧೀಜಿಗೆ ಸ್ಪಷ್ಟವಾಗಿ ಅರಿವಿತ್ತು. ಒಂದು ವಿಚಾರ ನಮಗೆ ಸ್ಪಷ್ಟವಾಗಿ ಗೊತ್ತಿದ್ದ ಮೇಲೆ ಆ ದಾರಿಯನ್ನು ಬದಿಗಿಟ್ಟು ನಾವು ತಪ್ಪು ಮಾಡುತ್ತೇವೆಂದರೆ? ಅತ್ಯಾಚಾರ ಆರೋಪಿಗಳನ್ನು ಹೀಗೆ ಕೊಲ್ಲುವುದಾದರೆ ಇನ್ನೆಷ್ಟು ಆರೋಪಿಗಳನ್ನು ಕೊಲ್ಲಬಹುದು ? ಬಿಜೆಪಿಯಲ್ಲಿಯೇ ಆರೋಪಿಗಳಿದ್ದಾರಲ್ಲ ? ಅವರನ್ನೆಲ್ಲ ಹೀಗೇ ಕೊಲ್ಲುವುದು ಉತ್ತರವೇ ? ಹೆಣ್ಣಿನ ಅತ್ಯಾಚಾರದ ಹೀನ ಕೃತ್ಯವನ್ನು ನೆನಪಿಸುವಾಗ ಭಾವನಾತ್ಮಕವಾಗಿ ಹೆಚ್ಚಿನವರ ಮನಸ್ಸು ‘ಎನ್ಕೌಂಟರ್ ಸರಿಯಾದ ಉತ್ತರ’ ಎಂದು ಉಚ್ಚರಿಸಬಹುದು. ಆದರೆ ಇಂತಹ ನಿರ್ಧಾರಗಳು ದೇಶವನ್ನು ಮಾತ್ರವಲ್ಲ, ಪ್ರಪಂಚವನ್ನೇ ನಾಶ ಮಾಡುತ್ತದೆ. ಒಂದು ಸಮಾಜ ಉತ್ತಮ ಸಮಾಜವಾಗಿ ಗುರುತಿಸಲ್ಪಡುವುದು ಅಲ್ಲಿ ನಡೆಯುವ ತಪ್ಪುಗಳ, ಅಪರಾಧಗಳ ಪ್ರಮಾಣದಿಂದ. ಒಂದೇ ತಪ್ಪು ಪದೇ ಪದೇ ನಡೆಯುತ್ತಿದೆ ಎಂದಾದರೆ ಸರ್ಕಾರಗಳು, ಹೋರಾಟಗಾರರು, ಸಮಾಜ ಸುಧಾರಕರು ಅವರು ಇವರು ಎಲ್ಲರೂ ಇದ್ದು ಏನು ಫಲ? ಒಂದು ತಪ್ಪು ನಡೆದ ಮರುಕ್ಷಣವೇ ಅದಕ್ಕೆ ಸೂಕ್ತ ಕ್ರಮ, ಅಂತಹ ತಪ್ಪುಗಳು ನಡೆಯದಂತೆ ತೆಗೆದುಕೊಳ್ಳಬಹುದಾದ ಹಲವು ಆಯಾಮಗಳ ಎಚ್ಚರಿಕೆ‌ ಕ್ರಮವನ್ನು ತೆಗೆದುಕೊಳ್ಳಬೇಕು. ಯಾವುದಾದರೊಂದು ಅಗತ್ಯಕ್ಕೆ ಅರ್ಜಿ ಹಾಕಿದರೆ ವರ್ಷಗಟ್ಟಲೆ ಸತಾಯಿಸುವ ಸರ್ಕಾರಗಳ ಈ ದೇಶದಲ್ಲಿ ಇಂತಹ ತುರ್ತು ನಡೆಗಳನ್ನು ನಿರೀಕ್ಷಿಸುವುದು ತಪ್ಪಾಗಬಹುದು. ಆದರೆ ಮುಂದೆಯಾದರೂ ಇದನ್ನು ಅಳವಡಿಸಬಹುದು ಎಂಬ ನಿರೀಕ್ಷೆಯಷ್ಟೆ.

ಅತ್ಯಾಚಾರ ಕಾಲಕಾಲದಿಂದ ಈ ದೇಶದಲ್ಲಿ ನಡೆಯುತ್ತ ಬಂದಿದೆ. ಈಗಲೂ ನಿರಂತರವಾಗಿ ನಡೆಯುತ್ತಿದೆ. ಕೆಲವು ಬೆಳಕಿಗೆ ಬರುತ್ತವೆ. ಹಲವು ಅಲ್ಲೇ ಮುಚ್ಚಿ ಹೋಗುತ್ತವೆ. ಹೆಣ್ಣು ಬಾಯಿಬಿಟ್ಟು ಹೇಳಲಾಗದಷ್ಟು ಲೈಂಗಿಕ ದೌರ್ಜನ್ಯ ಅನುಭವಿಸುತ್ತಲೇ ಇದ್ದಾಳೆ. ಅವಕಾಶ, ಅಧಿಕಾರ ಎಲ್ಲವನ್ನೂ ಹೆಣ್ಣಿಗೆ ನೀಡಿ, ಮಹಿಳಾ ದಿನದಂದು ಆಕೆಯನ್ನು ಹೊಗಳಿ ಅಟ್ಟಕ್ಕೇರಿಸಿ, ಮಹಿಳೆಯರೇ ಮೇಲುಗೈ, ಗ್ರೇಟ್ ಎನ್ನುವ ಶೀರ್ಷಿಕೆಗಳ ಮೂಲಕ ಅವಳನ್ನು ಎಲ್ಲೋ ಇಟ್ಟು ಸಾಚಾಗಳಾಗುತ್ತೇವೆ. ಆದರೆ ಈ ಸಮಾಜದೊಳಗೆ ವಿದ್ಯಾವಂತ ಗುಳ್ಳೆನರಿಗಳು, ಆಯಾಯ ಕ್ಷೇತ್ರದಲ್ಲಿ ಹೆಣ್ಣನ್ನು ದುರ್ಬಳಕೆ ಮಾಡುವ ರೀತಿ, ತೃಷೆ ತೀರಿಸುವ ಮನಸ್ಥಿತಿಗಳ ಮುಂದೆ ಎನ್ಕೌಂಟರ್ ಗೆ ಒಳಗಾದ ಆರೋಪಿಗಳು ಏನೂ ಅಲ್ಲ. ಮೀಟೂ ಚಳವಳಿ ಸಿನಿಮಾ ಕ್ಷೇತ್ರಕ್ಕೆ ಸೀಮಿತವಾಯಿತು. ಗ್ರಾಮೀಣ ಪ್ರದೇಶದ ಹೆಣ್ಮಕ್ಕಳು ಯಾವುದನ್ನೂ ಹೇಳದೆ ಸುಮ್ಮನಾಗಿದ್ದಾರೆ. ಅವರ ಸ್ಥಾನದಲ್ಲಿ‌ ನಿಂತು ನೋಡುವಾಗ ಅವರ ನಡೆ ಸರಿಯಾಗಿಯೇ ಇದೆ. ಒಂದು ವೇಳೆ ಅವರು ಎಲ್ಲವನ್ನೂ ಹೇಳಿಬಿಟ್ಟರೆ ಈ ಮಾನಗೆಟ್ಟ ಪುರುಷ ಪ್ರಧಾನ ಸಮಾಜ ಮುಖವಿಲ್ಲದ ಮುಖವೆತ್ತಿ ಅವಳನ್ನು ಹೀಯಾಳಿಸುತ್ತದೆ, ಕೆಟ್ಟ ಹೆಸರಿನಿಂದ ಕರೆಯುತ್ತದೆ. ಕಾಲಾನುಕಾಲದಿಂದ ಹೆಣ್ಣಿನ ಮೇಲೆ‌ ನಡೆಸಿದ ಅಮಾನವೀಯ ದೌರ್ಜನ್ಯಕ್ಕೆ ಪ್ರತಿಯಾಗಿ ಈ ಸಮಾಜದ ಪುರುಷರು ತಲೆ ತಗ್ಗಿಸಬೇಕಾದ ಪ್ರಮಾಣ ನೋಡಿದರೆ ಇನ್ನೊಂದು ವರ್ಷ ಪೂರ್ತಿ ತಲೆ ಮೇಲೆತ್ತಬಾರದು.

ಎನ್ಕೌಂಟರ್ ನಡೆದ ಬೆನ್ನಲ್ಲೇ ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ದುಷ್ಕರ್ಮಿಗಳು ಹತ್ಯೆ ಮಾಡಿದರು. ಹೆಣ್ಣೊಬ್ಬಳು ತಾನು‌ ಮಾಡದ ತಪ್ಪಿಗೆ ಕಿಲೋಮೀಟರ್ ದೂರಕ್ಕೆ ಸಾವಿನಿಂದ ರಕ್ಷಿಸಿ ಎಂದು ಬೆಂಕಿಯುಂಡೆಯಾಗಿ ಓಡುವುದೆಂದರೆ ನಮ್ಮ ಸಮಾಜ ಎಂತಹ ಅಮಾನವೀಯ ಕಾಲಘಟ್ಟಕ್ಕೆ ಬಂದು ತಲುಪಿದೆ ? ನಮ್ಮ ಮನಸ್ಥಿತಿ ಇಂದಿನ ಕಾಲಕ್ಕೆ ಹಿಂಸೆಯನ್ನು ಸಂಭ್ರಮಿಸುವ, ನ್ಯಾಯ ಎಂದು ಒಪ್ಪುವ ಪರಿಸ್ಥಿತಿಗೆ ತಲುಪಿದೆ. ಹಿಂಸೆ ನ್ಯಾಯವಾಗುವುದಾದರೆ ದೇಶದಲ್ಲಿ ಅತ್ಯಂತ ಪ್ರಬಲ ಶಕ್ತಿಯಾಗಿ ನಿಂತು ಸಹಸ್ರಾರು ಅನುಯಾಯಿಗಳನ್ನು ಹೊಂದಿದ್ದ ಮಹಾತ್ಮ ಗಾಂಧಿ ಉಪವಾಸ ಸತ್ಯಾಗ್ರಹ ಏಕೆ ಮಾಡಬೇಕಿತ್ತು ? ಬ್ರಿಟಿಷರನ್ನು ಕೊಂದುಬಿಡಿ ಎಂದು ಒಂದು ಮಾತು ಗಾಂಧಿ ಬಾಯಿಯಲ್ಲಿ ಬಂದಿದ್ದರೆ ಅಂದು ಭಾರತದಲ್ಲಿದ್ದ ಬ್ರಿಟಿಷರಲ್ಲಿ ಒಬ್ಬನೂ ಉಳಿಯುತ್ತಿರಲಿಲ್ಲ. ಆದರೆ ಅದು ಪರಿಹಾರ ಅಲ್ಲವೇ ಅಲ್ಲ ಎಂಬುದು ಗಾಂಧಿಗೆ ತಿಳಿದಿದ್ದರಿಂದಲೇ ಅವರು ಉಪವಾಸ ಕೂತರು. ಉಪವಾಸವನ್ನೇ ಆಯುಧವಾಗಿಸಿದರು. ಉಪವಾಸ ಸತ್ಯಾಗ್ರಹದ ಗಾಂಧಿಮಾರ್ಗ ಇಂದಿಗೂ ಚಾಲ್ತಿಯಲ್ಲಿದೆ. ಉಪವಾಸ ಸತ್ಯಾಗ್ರಹದಿಂದ ಪರಿಹಾರ ಸಿಗುವುದಿಲ್ಲ ಎಂದು ಭಾವಿಸುವವರು ಹಿಂಸೆಯ ಮಾರ್ಗದಿಂದ ದಕ್ಕಿದ ಪರಿಹಾರವನ್ನು ತೋರಿಸಬೇಕು. ಹಿಂಸೆ ಯಾವ ಕಾಲದಲ್ಲಿ ನಿಂತು ನೋಡಿದರೂ ಸರ್ವನಾಶದ ಹಾದಿ ಅಷ್ಟೆ. ಹಿಂಸೆ ಪರಿಹಾರವಾಗುವುದು ಗಾಂಧಿಯನ್ನು ಮತ್ತೆ ಮತ್ತೆ ಕೊಂದಂತೆ, ಗೋಡ್ಸೆಯನ್ನು ದೇಶಭಕ್ತನಾಗಿಸಿದಂತೆ.

ಅತ್ಯಾಚಾರ ಅತ್ಯಂತ ಕ್ರೂರ ಹಿಂಸೆ. ಪ್ರತಿಕ್ಷಣವೂ ನಮ್ಮ ಆತ್ಮವನ್ನು ನಾವು ಪ್ರಶ್ನಿಸಬೇಕಾದ ಅಗತ್ಯ ನಮಗಿದೆ. ಮತ್ತೆ ಮತ್ತೆ ನಾವು ಮೌನವಾಗಿ‌, ನಮ್ಮ ಮನಸ್ಸನ್ನು ತೊಳೆಯದೆ ತಪ್ಪು ಮಾಡುತ್ತಿದ್ದೇವೆ. ಎನ್ಕೌಂಟರ್ ನಡೆದಾಕ್ಷಣ ಭಾರತದಲ್ಲಿ ಅತ್ಯಾಚಾರ ಕೊನೆಗೊಂಡಿತೇ ? ಇದಾದ ಬಳಿಕವೇ ಇನ್ನೆಷ್ಟು ಅತ್ಯಾಚಾರ ಪ್ರಕರಣಗಳ ವರದಿಯಾದವು ಎಂದು ಗಮನಿಸಿ.

ಸರ್ಕಾರವಾಗಲಿ, ಜನತೆಯಾಗಲಿ ಇಂತಹ ವಿಚಾರದಲ್ಲಿ ಗಂಭೀರ ಚರ್ಚೆ ನಡೆಸುತ್ತಿಲ್ಲ. ಈ ವಿಚಾರವನ್ನೇ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೆಲವರು ಇಂತಹ ವಿಷಯಗಳು ಮುನ್ನೆಲೆಗೆ ಬಂದಾಗ ತಮ್ಮನ್ನೇ ಮುಟ್ಟಿ ನೋಡುತ್ತಾರೆ. ಬೇರೆ ಯಾರಿಗೂ ಗೊತ್ತಾಗದ ಹಾಗೆ ಮುಚ್ಚಿ ಹೋದ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಾರದ ಹಾಗೆ, ಇಲ್ಲದೇ ಇರುವ ತಮ್ಮ ‘ಮಾನ’ವನ್ನು ಕಾಪಾಡಿಕೊಳ್ಳಲು ಮಾರ್ಗ ಹುಡುಕುತ್ತಿರುತ್ತಾರೆ. ಇಂತಹ ಆರೋಪಿಗಳನ್ನು ಯಾರು ಪತ್ತೆ ಹಚ್ಚುತ್ತಾರೆ‌. ಇಂತಹ ಪ್ರಕರಣಗಳನ್ನು ಹಿಡಿದುಕೊಂಡು ಮನೆ ಮನೆಗೆ ಪೊಲೀಸರು, ಸರ್ಕಾರ ಹೋಗಲಾಗುತ್ತದೆಯೇ ? ಹಾಗಾದರೆ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಚಿಂತಿಸಬೇಕಾದವರು ಯಾರು ? ಜನರ ಒತ್ತಾಯದ ಹೊರತು ಜನತೆಗೆ ಬೇಕಾದ ಪರಿಹಾರ ಇಲ್ಲಿ ಸಿಗುವುದಿಲ್ಲ. ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣಗಳ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳು ದೇಶದಾದ್ಯಂತ ನಡೆಯಲೇಬೇಕು ಎಂಬುದನ್ನು ಈಗಲೂ ಒತ್ತಿ ಹೇಳುತ್ತೇನೆ.

LEAVE A REPLY

Please enter your comment!
Please enter your name here