• ಶಾರೂಕ್ ತೀರ್ಥಹಳ್ಳಿ

ಕೊರೊನಾ ಬಗ್ಗೆ ಸತ್ಯವಲ್ಲದ ಸುದ್ದಿಗಳನ್ನು ಲೈಕ್, ಕಮೆಂಟ್ ಮಾಡುವ ಮುನ್ನ ಎಚ್ಚರವಾಗಿರಿ. ಯಾಕೆಂದರೆ ಸತ್ಯವಲ್ಲದ ಮಾಹಿತಿ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಫೇಸ್‍ಬುಕ್ ಮುಂದಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಜಾಗತಿಕ ಮಟ್ಟದಲ್ಲಿ ಕೊರೊನಾ ದೊಡ್ಡ ಸುದ್ದಿ ಮಾಡುತ್ತಿದೆ. ಸೋಶಿಯಲ್ ಮಿಡಿಯಾಗಳನ್ನ ಓಪನ್ ಮಾಡಿದರೆ ಸಾಕು ಕೊರೊನಾ ಬಗ್ಗೆ ಅನೇಕ ಪೋಸ್ಟ್‌ಗಳು ಫೇಸ್‍ಬುಕ್, ವ್ಯಾಟ್ಸಪ್ ಇನ್‍ಸ್ಟ್ರಾಗ್ರಾಂನಲ್ಲಿ ಬರುತ್ತಿವೆ. ಹೀಗೆ ಬರುವ ಸುದ್ದಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ತಪ್ಪು ಮಾಹಿತಿ ಶೇರ್ ಆಗುತ್ತಿದೆಯಂತೆ. ಹೀಗೆ ಸತ್ಯವಲ್ಲದ ಮಾಹಿತಿ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಫೇಸ್‍ಬುಕ್ ಈಗ ಸಿದ್ಧವಾಗಿದೆ. ಸುಳ್ಳು ಸುದ್ದಿಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಫೇಸ್‍ಬುಕ್ ಗಮನಕ್ಕೆ ತಂದಿದೆ. ಹೀಗಾಗಿ ಇದನ್ನು ತಡೆಯುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹಲವು ನ್ಯೂಸ್ ಏಜೆನ್ಸಿಗಳ ಜೊತೆ ಫೇಸ್‍ಬುಕ್ ಕೈ ಜೋಡಿಸಿದೆ. ಸತ್ಯವಲ್ಲದ ಸುದ್ದಿಗಳ ಬಗ್ಗೆ ಜಾಗೃತಿ ಮೂಡಿಸುವುದು, ಅನಗತ್ಯ ಸುಳ್ಳು ಮಾಹಿತಿಯನ್ನು ಶೇರ್ ಮಾಡುವುದು, ಲೈಕ್, ಕಾಮೆಂಟ್ ಮಾಡುವರಿಗೆ ಇನ್ಮುಂದೆ ಎಚ್ಚರಿಕೆ ನೀಡುವ ಕೆಲಸ ಫೇಸ್‍ಬುಕ್ ಮಾಡಲಿದೆ.
ಇತ್ತೀಚೆಗೆ ಫೇಸ್‍ಬುಕ್‍ನಲ್ಲಿ ಕೊರೋನಾ ಸಂಬಂಧ ಸುಳ್ಳು ಮಾಹಿತಿ ಹೆಚ್ಚು ಶೇರ್ ಆಗುತ್ತಿದೆ ಅದರಲ್ಲೂ ಮುಖ್ಯವಾಗಿ ಕೊರೊನಾ ವೈರಸ್ ಔಷಧಿ ಲಭ್ಯ, ಗುಣಪಡಿಸುವ ಭರವಸೆಯ ಜಾಹೀರಾತುಗಳು, ವೈರಸ್ ಉಗಮದ ಬಗೆಗೆ ತಪ್ಪು ಮಾಹಿತಿ, ಕೊರೊನಾ ವೈರಸ್ ಸಂಬಂಧಿಸಿದ ವದಂತಿಗಳು, ಕೊರೊನಾ ಹೆಸರಿನಲ್ಲಿ ನಕಲಿ ವಸ್ತುಗಳ ಮಾರಾಟಕ್ಕೆ ಯತ್ನ. ಹೀಗೆ ಹಲವು ಮಾದರಿಯಲ್ಲಿ ವೈಯಕ್ತಿಕ ಹಿತಾಸಕ್ತಿಗಾಗಿ ಫೇಸ್‍ಬುಕ್ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ರೀತಿಯ ಸುಳ್ಳು ಮಾಹಿತಿ ಮತ್ತು ವಿಡಿಯೋ ಲಕ್ಷಾಂತರ ವಿವ್ಯೂ ಮತ್ತು ಶೇರ್ ಗಳನ್ನು ಪಡೆದುಕೊಳ್ಳುತ್ತಿದೆ. ಹೀಗಾಗಿ ಹೀಗೆ ತಪ್ಪು ಮಾಹಿತಿ ಶೇರ್, ಕಾಮೆಂಟ್ ಮಾಡಿದ್ದಲ್ಲಿ ಫೇಸ್‍ಬುಕ್ ಮುಂದಿನ ವಾರದಿಂದ ನಿಮ್ಮನ್ನು ಎಚ್ಚರಿಸಲಿದೆ ಎಂಬ ವರದಿಗಳನ್ನು ಈಗಾಗಲೇ ಪ್ರಸಾರ ಮಾಡಲಾಗಿದೆ.

ಫೇಸ್‍ಬುಕ್ ಬಳಸುವಾಗ ನಿಮ್ಮ ಅರಿವಿಗೆ ಅದು ಬರಲಿದೆ. ಇಷ್ಟು ಮಾತ್ರವಲ್ಲದೇ ಫ್ಯಾಕ್ಟ್ ಚೆಕ್, ನ್ಯೂಸ್ ಫೀಡ್‍ಗಳನ್ನು ಕೂಡ ಪ್ರಕಟಿಸಲಿದೆ. ಇದಕ್ಕಾಗಿ ಹಲವು ಒಪ್ಪಂದಗಳನ್ನು ಫೇಸ್‍ಬುಕ್ ಮಾಡಿಕೊಂಡಿದ್ದು, ಮುಂದಿನ ವಾರದಿಂದ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ಫೇಸ್‍ಬುಕ್ ತಿಳಿಸಿದೆ.

ಕಳೆದ ಹಲವಾರು ದಿನಗಳಿಂದ ಮಾಧ್ಯಮಗಳು ಬಿತ್ತರಿಸಿದ ಸುಳ್ಳು ಸುದ್ದಿಗಳಿಂದ ಪರಸ್ಪರ ಸಹೋದರರಂತಿದ್ದ ಹಿಂದು ಮುಸ್ಲಿಮರ ಮಧ್ಯೆ ಅನುಮಾನದ ದೃಷ್ಟಿಯಿ‌ನ್ನು ಬೀರುವಲ್ಲಿ ಕೆಲವೊಂದು ಮಾಧ್ಯಮಗಳು ಯಶಸ್ವಿಯಾದವು, ಸಮಾಜ ಸ್ವಸ್ಥ ಕಾಪಾಡಬೇಕಾಗಿದ್ದ ಮಾಧ್ಯಮಗಳು ಕೇವಲ ಒಂದು ಸಮುದಾಯವನ್ನು ದೋಷಿ ಎಂದು ಬಿಂಬಿಸಿ ದೇಶಕ್ಕೆ ಮಾರಕವಾದ ಕರೋನ ಸೋಂಕಿನ ನಡುವೆ ತಮ್ಮ ಟಿಆರ್ ಪಿ ಯನ್ನು ಹೆಚ್ಚಿಸುವಲ್ಲಿ ಸಫಲವಾಯಿತು. ಮಾಧ್ಯಮಗಳಲ್ಲಿ ಬಿತ್ತರಿಸಿದ್ದೆ ಸತ್ಯ ಎಂದು ನಂಬಿ ಕುಳಿತಿದ್ದ ಮುಗ್ಧ ಹಿಂದೂ ಸಹೋದರರು ಸಾಮಾಜಿಕ ತಾಣಗಳ ಮೂಲಕ‌ ಇದೆಲ್ಲ ಸುಳ್ಳು ಎಂದು ತಿಳಿದಾಗ ಮುಸ್ಲಿಮರ ಸಹೋದರ ಜೊತೆ ಪ್ರೀತಿ ವಿಶ್ವಾಸ ಹೆಚ್ಚಾಯಿತು, ಏಕೆಂದರೆ ಅವರು ಕೋಮುವಾದದವನ್ನು ಬಿತ್ತಿ ಸೌಹಾರ್ದತೆಯನ್ನು ಕೆಡಿಸಲು ಪ್ರಯತ್ನಿಸಿದರು ಆದರೆ ಅವರ ಭಿತ್ತರಿಸಿದ ಸುಳ್ಳು ಸುದ್ದಿಗಳೆ ಅವರ ಯೋಜನೆಯನ್ನು ವಿಫಲಗೊಳಿಸುವಲ್ಲಿ ಸಹಕಾರಿಯಾಯಿತು. 

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು ಎಂದು ಹಿರಿಯರು ಕಲಿಸಿಕೊಟ್ಟ ಮಾತು ಪ್ರಸ್ತುತ ಸನ್ನಿವೇಶಕ್ಕೆ ಭೂತಕನ್ನಡಿ ಹಿಡಿದಂತಾಗಿದೆ. ನಮ್ಮ ಸುತ್ತ ಮುತ್ತ ಯಾವುದೇ ಘಟನೆಗಳು ಸಂಭವಿಸಿದರೂ ಅದನ್ನು ಸರಿಯಾಗಿ ಅವಲೋಕಿಸುವ ತನಕ ನಾವು ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಬಾರದು. ತಪ್ಪು ಮಾಡುವವರು ಎಲ್ಲಾ ಧರ್ಮಗಳಲ್ಲಿಯೂ ಇರುತ್ತಾರೆ ಆದರೆ ಅವರನ್ನು ಹಿಡಿದು ಧರ್ಮವನ್ನು ಟೀಕಿಸುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಸುಳ್ಳು ಸುದ್ದಿಗಳನ್ನು ಸತ್ಯ ಎಂದು ಬಿಂಬಿಸುವ ಟಿವಿ ನ್ಯೂಸ್ ಮತ್ತು ಪತ್ರಿಕೆಗಳನ್ನು ಬಹಿಷ್ಕರಿಸಿ ಕೇವಲ ಸತ್ಯ ಮತ್ತು ನಿಖರವಾದ ಮಾಹಿತಿಯನ್ನು ನೀಡುವ ನ್ಯೂಸ್ ಚಾನಲ್ ಮತ್ತು ಪತ್ರಿಕೆಗಳನ್ನು ಬಹಿರಂಗವಾಗಿ ಬೆಂಬಲಿಸಬೇಕು ಏಕೆಂದರೆ ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ನೋಡಿದಾಗ ನಿಜವು ಅರಿಯುವುದು.

LEAVE A REPLY

Please enter your comment!
Please enter your name here