ಮಹಮ್ಮದ್ ಶಾರೂಕ್ ತೀರ್ಥಹಳ್ಳಿ.

ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಣ್ಗಳ ಸೆಳೆಯುವ ನೋಟ, ಹಿಂದು ಕೈಸ್ತ ಮುಸಲ್ಮಾನ, ಪಾರ್ಸಿ ಜೈನರ ಉದ್ಯಾನ” ಎಂದು ರಾಷ್ಟ್ರಕವಿ ಕುವೆಂಪುರವರು ಈ ನಾಡನ್ನು ವರ್ಣಿಸಿದ್ದಾರೆ. ಜಾತ್ಯಾತೀತ ತತ್ವಕ್ಕೆ ಒಳಪಟ್ಟ ಈ ನಮ್ಮ ಭಾರತ ದೇಶದಲ್ಲಿ ಇತ್ತೀಚೀನ ದಿನಗಳಲ್ಲಿ ಜಾತ್ಯಾತೀತ ತತ್ವಕ್ಕೆ ಧಕ್ಕೆ ಉಂಟು ಮಾಡುವ ಮೂಲಕ ಈ ದೇಶದ ಸಂವಿಧಾನಕ್ಕೆ ತನ್ನದೇ ಆದ ತತ್ವ ಆದರ್ಶಗಳನ್ನು ಸೇರಿಸಿವ ಕೆಲಸಗಳು ನಡೆಯುತ್ತಿರುವುದು ಇಲ್ಲಿನ ನಾಗರೀಕರಿಗೆ ತಿಳಿದಿರುವ ವಿಚಾರ, ಸ್ವತಂತ್ರ ಸಂಗ್ರಾಮದ ನಂತರ ಮತ್ತೆ ಜನರು ಬೀದಿಗೆ ಇಳಿದು ತಮ್ಮ ಹಕ್ಕಿಗಾಗಿ ಪ್ರತಿಭಟಿಸುವುದನ್ನು ಗಮನಿಸಿದರೆ, ಜಾತ್ಯಾತೀತ ಸಂವಿಧಾನವನ್ನು ಉಳಿಸುವ ಸಲುವಾಗಿ ಮತ್ತೊಮ್ಮೆ ಎರಡನೇ ಸ್ವಾತಂತ್ರ ಸಂಗ್ರಾಮದ ಅನಿವಾರ್ಯ ಇದೆ ಎಂಬದು ಈ ಪ್ರತಿಭಟನೆಗಳಿಂದ ತಿಳಿದುಬರುತ್ತಿದೆ.

ಸರ್ಕಾರ ಯಾವಾಗ ನಮ್ಮ ಪೌರತ್ವದ ಬಗ್ಗೆ ಪ್ರಶ್ನಿಸಿತು ಅಂದಿನಿಂದ  ಈ ಜನಾಂದೋಲನ ಪ್ರಾರಂಭವಾಗಿದೆ. ಅದರಲ್ಲೂ ಧರ್ಮದಾರಿತವಾಗಿ ಪೌರತ್ವ ನೀಡುವ ಕೇಂದ್ರ ಸರ್ಕಾರದ ಧೋರಣೆ ಸಂವಿಧಾನದ ವಿರುದ್ದವಾದುದು ಎಂದು ಮನಗಂಡು ಜನರು ಈ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ಪ್ರತಿಭಟಿಸಲು ಪ್ರಾರಂಭಿಸಿದರು. ಅಷ್ಟಕ್ಕೂ ಈ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಕೇವಲ ಮುಸ್ಲಿಮರನ್ನು ಮಾತ್ರ ಹೊರಗಿಟ್ಟಿದ್ದಾರೆ ಆದರೆ ಮಾನ್ಯ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರಿಂದ ಹಿಡಿದು ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರವರಗೆ ಪ್ರತಿಯೊಬ್ಬ ಬಿಜೆಪಿ ನಾಯಕರು ಮಾತ್ರವಲ್ಲದೇ ದೆಹಲಿಯ ಶಾ ಇಮಾಮ್ ಕೂಡ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ ಎಂಬುದಾಗಿ ಹೇಳಿದ್ದಾರೆ. ಆದರೆ ಪೌರತ್ವವನ್ನು ಸಾಬೀತು ಪಡಿಸಲು ಈ ದೇಶದ ನಾಗರೀಕರು ಕೆಲವೊಂದು ಕಾಗದ ಪತ್ರವನ್ನು ಸರ್ಕಾರಕ್ಕೆ ನೀಡಬೇಕು ಅದರ ಆಧಾರದ ಮೇಲೆ ಯಾರು ಇಲ್ಲಿಯ ಪೌರರು, ಯಾರು ಇಲ್ಲಿಯ ನುಸುಳುಕೋರರು ಎಂದು ಸರ್ಕಾರ ತೀರ್ಮಾನಿಸಿ ಅಂತವರನ್ನು ಡಿಟೆಂಕ್ಷನ್ ಕ್ಯಾಂಪ್ ನಲ್ಲಿ ಇಡುವ ಬಗ್ಗೆ ಸರ್ಕಾರ ಈಗಾಗಲೇ ತೀರ್ಮಾನ ಕೈಗೊಂಡಿದೆ. ಪಾಸ್ಪೋರ್ಟ್, ವೋಟರ್ ಐಡಿ, ಆಧಾರ್ ಕಾರ್ಡಿನಿಂದ ಭಾರತ ಪೌರತ್ವವನ್ನು ಸಾಬೀತುಪಡಿಸಲಾಗುವುದಿಲ್ಲ ಎಂದು ಮಾನ್ಯ ಕೇಂದ್ರ ಗೃಹ ಸಚಿವರಾದ ಅಮಿತ್ ಶಾರವರು ಈಗಾಗಲೇ ಹೇಳಿದ್ದಾರೆ. ಇನ್ನು ರೇಶನ್ ಕಾರ್ಡ್ ಅಂತೂ ಪೌರತ್ವದ ದಾಖಲೆ ಅಲ್ಲ ಎಂದು ಕೆಲ ಸಮಯದ ಹಿಂದೆ ಇಂಥಹದೇ ಒಂದು ‘ಅಕ್ರಮ ವಲಸಿಗರ’ ಕೇಸಿನಲ್ಲಿ ಮುಂಬಯಿ ಕೋರ್ಟಿಗೆ ಪೋಲೀಸರು ಹೇಳಿದ್ದರು. ಇವೆಲ್ಲಾ ಅಧಿಕೃತ ದಾಖಲೆಗಳು ಭಾರತೀಯ ಪೌರತ್ವವನ್ನು ಸಾಬೀತುಪಡಿಸುವುದಿಲ್ಲ ಎಂದರೆ, NRCಗೆ ಇನ್ಯಾವ ದಾಖಲೆಗಳು ಬೇಕು? ಎಲ್ಲಿಂದ ತರಬೇಕು ಅವುಗಳನ್ನು? ಅಸ್ಸಾಂ NRCಯಲ್ಲಿ ಹೀಗೆಯೇ ಪಾಸ್ಪೋರ್ಟ್, ಆಧಾರ್ ಕಾರ್ಡ್, ವೋಟರ್ ಐಡಿ ಕೊಟ್ಟರೂ ‘ಅಕ್ರಮ ವಲಸಿ’ಗರ ಪಟ್ಟಿಗೆ ಸೇರಿದವರು ಲಕ್ಷಾಂತರ ಮಂದಿ ಇದ್ದಾರೆ, ಅದರಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿಯ ಮೊಮ್ಮಕ್ಕಳ ಹೆಸರು ಕೂಡ ಇದೆ, ಮೂವತ್ತು ವರ್ಷಗಳ ಕಾಲ ಈ ದೇಶಕ್ಕಾಗಿ ಹೋರಾಡಿದ ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿ ಗೌರವ ಪದಕವನ್ನು ಪಡಿದ ಮಾಜಿ ಸೈನಿಕ ಸನಾವುಲ್ಲ ಸಹ ಇದ್ದಾರೆ. ಪ್ರಪ್ರಥಮಾ ಮುಸ್ಲಿಮ್ ಮಹಿಳಾ ಮುಖ್ಯಮಂತ್ರಿ ಸೈಹಿದಾ ಅನ್ವರಾ ತೈಮೂರ್ ರವರ ಹೆಸರು ಕೂಡ ಅಕ್ರಮ ವಸಿಗರ ಪಟ್ಟಿಯಲ್ಲಿ ಇದೆ ಎಂದಾದರೆ ಈ ದೇಶದಲ್ಲಿ ವಾಸಿಸುವ ಎಷ್ಟು ಮಂದಿ ಈ ಅಕ್ರಮ ವಲಸಿಗರ ಪಟ್ಟಿಯಲ್ಲಿ ಸೇರಬೇಕಾಗಬಹುದು. ಅಸ್ಸಂ ನಲ್ಲಿ ಜಾರಿ ಮಾಡಿದ ಇದೇ ಕಾನೂನು ತಾನೇ ಮಾನ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಡೀ ಭಾರತಕ್ಕೆ ತರಲು ಹವಣಿಸುತ್ತಿರುವುದು? ಭಾರತದಲ್ಲಿ ಎಷ್ಟು ಮಂದಿ ಅಲ್ಪಸಂಖ್ಯಾತರಿದ್ದಾರೆ, ಅಲೆಮಾರಿ ಜನಾಂಗದವರಿದ್ದಾರೆ, ಹೆಚ್ಚಿನವರ ಬಳಿ ಯಾವುದೇ ಕಾಗದ ಪತ್ರಗಳಿಲ್ಲದೆ ಹಲವಾರು ವರ್ಷಗಳಿಂದ ಈ ದೇಶದಲ್ಲಿ ವಾಸಿಸುತ್ತಿದ್ದಾರೆ.

ಈ ಕಾಯ್ದೆ ಜಾರಿಗೆ ಬಂದರೆ ಭಾರತದ ನೂರ ಮೂವತ್ತು ಕೋಟಿಯಲ್ಲಿ ನೂರು ಕೋಟಿ ಜನ ಅಕ್ರಮ ವಲಸಿಗರ ಪಟ್ಟಿಗೆ ಸೇರಬೇಕಾಗುತ್ತದೆ. ಇದು ಕೇವಲ ಮುಸ್ಲಿಮರಿಗೆ ಸಂಭದಿಸಿದ್ದು ಎಂದು ತಾವುಗಳು ತಿಳಿದುಕೊಂಡಿದ್ದರೆ ತಮ್ಮ ಊಹೆ ಖಂಡಿತ ತಪ್ಪಾಗುತ್ತದೆ. ಅಸ್ಸಂ ರಾಜ್ಯದಲ್ಲಿ ಪ್ರಥಮವಾಗಿ NRC ಯನ್ನು ಜಾರಿಗೆ ತರಲಾಗಿದ್ದು ಅದರಲ್ಲಿ ಸುಮಾರು ಹತ್ತೊಂಭತ್ತು ಲಕ್ಷದಷ್ಟು ಜನರನ್ನು ಅಕ್ರಮ ವಲಸಿಗರು ಎಂದು ತೀರ್ಮಾನಿಸಿದ್ದು ಅದರಲ್ಲಿ ಸುಮಾರು ಐದು ಲಕ್ಷದಷ್ಟು ಮಂದಿ ಮಾತ್ರ ಮುಸ್ಲಿಮರಿದ್ದರು, ಬಾಕಿ ಉಳಿದ ಹದಿನಾಲ್ಕು ಲಕ್ಷ ಮಂದಿ ಮುಸ್ಲಿಮೇತರರು ಅಕ್ರಮ ವಲಸಿಗರ ಪಟ್ಟಿಯಲ್ಲಿ ಸೇರಿದ್ದಾರೆ.ಕಳೆದ ವಾರ ಅಂತರರಾಷ್ಟ್ರೀಯ ಹಿಂದೂ ಮಂಡಳಿಯ ಅಧ್ಯಕ್ಷ, ಹಿಂದೂ ನಾಯಕ ಡಾ. ಪ್ರವೀಣ್ ತೊಗಾಡಿಯಾರವರು ಈ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದರೆ ಸುಮಾರು ಹದಿನಾಲ್ಕು ಕೋಟಿ ಹಿಂದುಗಳು ವಿದೇಶಿಯರಾಗುತ್ತಾರೆ ಎಂದು ಹೇಳಿದ್ದರು.

ಒಟ್ಟಿನಲ್ಲಿ ದೇಶದ ಆರ್ಥಿಕತೆ, ನಿರುದ್ಯೋಗ, ರೈತರ ಸಮಸ್ಯೆ, ಸಣ್ಣ ಕೈಗಾರಿಕೆಗಳ, ದಲಿತರ ಸಮಸ್ಯೆಗಳ ಕಡೆಗೆ ಗಮನಹರಿಸಿ ಅದನ್ನು ಸರಿಪಡಿಸಬೇಕಾದ ಸರ್ಕಾರ ಪೌರತ್ವ ತಿದ್ದುಪಡಿಯಂತಹ ಅಸಂವಿಧಾನಿಕ ಕಾಯ್ದೆಗಳನ್ನು ತಂದು ಜನರಲ್ಲಿ ಗೊಂದಲ ಉಂಟುಮಾಡಿ, ಪರಸ್ಪರ ಸೌಹಾರ್ದಯುತವಾಗಿ ಜೀವಿಸುತ್ತಿರುವ ಹಿಂದು ಮುಸ್ಲೀಮರ ಮದ್ಯೆ ದ್ವೇಷದ ಬೀಜವನ್ನು ಬಿತ್ತದೆ, ಪರಸ್ಪರ ಸಂವಿಧಾನದ ಆಶಯಕ್ಕೆ ಬದ್ದರಾಗಿ ಸಂವಿಧಾನ ಯಾವ ಮೂಲವನ್ನು ಈ ದೇಶದ ನಾಗರೀಕರಿಗೆ ನೀಡುತ್ತದೆ ಅದನ್ನೇ ನಮ್ಮ ಸರ್ಕಾರಗಳು ಕಾರ್ಯ ರೂಪಕ್ಕೆ ತಂದು ಈ ದೇಶದ ಕಟ್ಟ ಕಡೆಯ ವ್ಯಕ್ತಿಯ ಅಭಿವೃದ್ದಿಯ ಕಡೆಗೆ ಗಮನವಹಿಸಿದರೆ ಈ ದೇಶ ಮುಂದೊಂದು ದಿನ ಅಭಿವೃದ್ದಿ ಶೀಲ ರಾಷ್ಟ್ರಗಳಲ್ಲಿ ಮೊದಲನೇ ಸ್ಥಾನ ಪಡೆಯುವಲ್ಲಿ ಯಾವುದೇ ಸಂಶಯ ಪಡಬೇಕಾಗಿಲ್ಲ.

2 COMMENTS

  1. ಶಾಹ್ರುಖ್ ರವರು NRC ಬಗ್ಗೆ ಪ್ರಸ್ತುತ ಪಡಿಸಿದ್ದ ಬರವಣಿಗೆ ಅತ್ಯುತ್ತಮ ವಾಗಿ ಮೂಡಿ ಬಂದಿದೆ. ಇನ್ನೂ ಕೂಡ ಇಂತಹ ಲೇಖನ ಮೂಡಿಬರಲಿ ಎಂದು ದೇವನಲ್ಲಿ ಪ್ರಾರ್ಥನೆ

LEAVE A REPLY

Please enter your comment!
Please enter your name here