ಮನದ ಮಾತು

  • ರಫೀಕ್ ಮಾಸ್ಟರ್, ಸಮಾಜ ಸೇವಕ

ಶ್ರೇಷ್ಠ ಪಂಡಿತರಾದ ಅಬ್ದುಲ್ಲಾ ಬಿನ್ ಮುಬಾರಕ್ ಪವಿತ್ರ ಮಕ್ಕಾ ಯಾತ್ರೆ ಕೈಗೊಂಡ ವರ್ಷ ಒಂದು ವಿಚಿತ್ರ ಘಟನೆ ನಡೆಯಿತು. ಪವಿತ್ರ ಕಾಬಾ ಬಳಿ ಮಲಗಿದ್ದ ಅವರಿಗೊಂದು ಕನಸು ಬಿತ್ತು. ಆಕಾಶದಿಂದ ಎರಡು ದೇವದೂತರು ಪರಸ್ಪರ ಮಾತನಾಡುತ್ತ ಇಳಿದು ಬರುತ್ತಿರುವ ದೃಶ್ಯ. ಅವರ ಮಾತಿನಂತೆ ಆ ಬಾರಿ ಹಜ್ ಯಾತ್ರೆಗೆ ಬಂದಿರುವ ಆರು ಲಕ್ಷ ಜನರ ಪೈಕಿ ಯಾರ ಹಜ್ ಸ್ವೀಕ್ರತಗೊಂಡಿಲ್ಲ. ಆದರೆ ಡಮಾಸ್ಕಸ್ ನ ಚಮ್ಮಾರ ಮುವಫ್ಫಿಖ್ ಎಂಬವರು ಹಜ್ ಮಾಡದಿದ್ದರೂ ಅಲ್ಲಾಹು ಅವರಿಗೆ ಹಜ್ ನ ಪ್ರತಿಫಲ ನೀಡಿದ್ದಾನೆ ಹಾಗೂ ಅವರಿಂದಾಗಿ ಉಳಿದವರ ಹಜ್ ಸ್ವೀಕಾರ ಗೊಂಡಿರುತ್ತದೆ. ಇದನ್ನು ಕೇಳಿದ ಅಬ್ದುಲ್ಲಾ ಬಿನ್ ಮುಬಾರಕ್ ರವರಿಗೆ ಆಶ್ಚರ್ಯ ಆಯ್ತು. ಒಬ್ಬ ವ್ಯಕ್ತಿ ಮಕ್ಕಾ ಕ್ಕೆ ಬಾರದೆ, ತವಾಫ್ ಮಾಡದೆ, ಮಿನಾದಲ್ಲಿ ತಂಗದೆ, ಹಜ್ ನ ಯಾವ ಕರ್ಮ ಮಾಡದೆ ಇಷ್ಟು ದೊಡ್ಡ ಸ್ಥಾನ ಹೇಗೆ ಪಡೆದರು? ಕುತೂಹಲ ತಡೆಯಲಾಗಲಿಲ್ಲ. ಡಮಾಸ್ಕಸ್ ನಲ್ಲಿರುವ ಅಲಿ ಬಿನ್ ಮುವಫ್ಫಿಖ್ ರವರನ್ನು ನೋಡ ಬೇಕೆಂಬ ಹಂಬಲ ಜಾಸ್ತಿ ಆಯಿತು. ಕೂಡಲೇ ಡಮಸ್ಕಸ್ ಗೆ ಹೊರಟರು. ನಗರ ದಲ್ಲಿ ವಿಚಾರಿಸಿ ವಿಳಾಸ ತಿಳಿದು ಕೊಂಡರು. ನೇರವಾಗಿ ಮನೆಗೆ ಬಂದವರು ತನ್ನ ಪರಿಚಯ ಮಾಡಿ ಕೊಂಡರು. ಅಷ್ಟು ದೊಡ್ಡ ಪಂಡಿತರು ತನ್ನ ಮನೆ ಬಾಗಿಲಿಗೆ ಬಂದಿರುವುದಕ್ಕಾಗಿ ಸಂತೋಷ ಪಟ್ಟರು ಮುವಫ್ಫಿಖ್. ಬದುಕಿಗಾಗಿ ಏನು ಮಾಡುತ್ತೀರಿ ಎಂದು ಕೇಳಿದರು. ಆಗ ಮುವಫ್ಫಿಖ್ “ನಾನೊಬ್ಬ ಚಮ್ಮಾರ. ಚಪ್ಪಲಿ ಹೊಲಿದು ಜೀವನ ಸಾಗಿಸುತ್ತಿದ್ದೇನೆ” ಎಂದರು. ನೀವು ಹಜ್ ಗೆ ಹೋಗಬೇಕು ಎಂದಿದ್ದೀರಾ?
ಎಂದು ಕೇಳಿದರು. ಆಗ ಅವರು ಏನೂ ಮಾತನಾಡಲಿಲ್ಲ. ಇನ್ನೂ ಒತ್ತಾಯ ಮಾಡಿದಾಗ ಅವರ ಕತೆಯನ್ನು ತೆರೆದಿಟ್ಟರು. “ನಾನು ಕಳೆದ ಮೂವತ್ತು ವರ್ಷಗಳಿಂದ ಹಜ್ ಯಾತ್ರೆ ಕೈಗೊಳ್ಳಲು ಸ್ವಲ್ಪ ಸ್ವಲ್ಪ ಹಣ ಕೂಡಿಡುತ್ತ ಬಂದಿದ್ದೆ. ಈ ವರ್ಷ ಹೋಗಬೇಕೆಂದು ಎಲ್ಲಾ ತಯಾರಿ ಮಾಡಿದ್ದೆ. ಒಂದು ದಿನ ಪಕ್ಕದ ಮನೆಯಿಂದ ಮಾಂಸ ಪದಾರ್ಥದ ವಾಸನೆ ಬರುತ್ತಿತ್ತು. ತುಂಬು ಗರ್ಭಿಣಿಯಾದ ನನ್ನ ಹೆಂಡತಿ ಆಸೆ ತಡೆಯಲಾಗಿದೆ ನನಗೆ ಸ್ವಲ್ಪ ಪದಾರ್ಥ ಕೇಳಿ ಕೊಂಡು ತನ್ನಿರಿ ಎಂದಳು. ತುಂಬು ಗರ್ಭಿಣಿ ಆಸೆ ಪೂರೈಸಲು ಆ ಮನೆಗೆ ಹೋಗಿ ಪದಾರ್ಥ ಕೊಡುವಂತೆ ಕೋರಿದೆ. ಆಗ ಆ ಮನೆಯ ಹೆಂಗಸು ಹೊರಬಂದು ಈ ಪದಾರ್ಥ ನಮಗೆ ಹಲಾಲ್. ನಿಮಗೆ ಹರಾಂ ಎಂದರು. ಕಾರಣ ಏನೆಂದು ಕೇಳಿದಾಗ ನಾನೊಬ್ಬ ವಿಧವೆ. ಮನೆಯಲ್ಲಿ ತಿನ್ನಲು ಏನೂ ಇಲ್ಲ. ನನ್ನ ಮಕ್ಕಳ ಹಸಿವು ನೋಡಲಾಗದೆ ಕಾಡಿನಲ್ಲಿ ಸತ್ತು ಬಿದ್ದಿರುವ ಕತ್ತೆಯ ಮಾಂಸ ವನ್ನು ಬೇಯಿಸುತ್ತಿದ್ದೇನೆ. ಹಸಿವಿನಿಂದ ಸಾಯುತ್ತಿರುವ ನಮಗೆ ಅದು ಹಲಾಲ್ ಎಂದರು. ಸೀದಾ ಮನೆಗೆ ಬಂದು ತುಂಬಾ ಆಲೋಚಿಸಿ ಒಂದು ನಿರ್ಧಾರಕ್ಕೆ ಬಂದೆ. “ನೆರೆಹೊರೆಯವರು ಹಸಿದಿರುವಾಗ ಹೊಟ್ಟೆ ತುಂಬಾ ತಿನ್ನುವವರು ನಮ್ಮವರಲ್ಲ” ಎಂಬ ಪ್ರವಾದಿ ವಚನ ನೆನಪಿಗೆ ಬಂತು. ಹಜ್ ನಿರ್ವಹಿಸುವ ಬದಲು ಪಕ್ಕದ ಮನೆಯ ಹಸಿವು ನೀಗಿಸುವುದು ಉತ್ತಮ ಎಂದು ಭಾವಿಸಿದೆ. ಹಜ್ ಗಾಗಿ ಕೂಡಿಟ್ಟ ಮೂರು ಸಾವಿರ ದೀನಾರ್ ಅವರ ಕೈಗಿತ್ತು ಬಂದೆ” ಎಂದರು. ಮುವಫ್ಫಿಖ್ ರ ದಾನದ ಕತೆ ಕೇಳಿ ಅಬ್ದುಲ್ಲಾ ಬಿನ್ ಮುಬಾರಕ್ ರೋಮಾಂಚನಗೊಂಡರು. ಮುವಫಿಕ್ ರೊಂದಿಗೆ ಹೇಳಿದರು ” ಓ, ಮುವಫಿಕ್, ನೀವು ಹಜ್ ಗೆ ಹೋಗದಿದ್ದರೂ ಅಲ್ಲಾಹು ನಿಮಗೆ ಹಜ್ ನ ಪ್ರತಿಫಲ ನೀಡಿದ್ದಾನೆ ಹಾಗೂ ನಿಮ್ಮಿಂದಾಗಿ ಉಳಿದವರ ಹಜ್ ಸ್ವೀಕಾರ ಗೊಂಡಿರುತ್ತದೆ” ಎಂದರು.

ಈ ಘಟನೆಯನ್ನು ಯಾಕೆ ಉಲ್ಲೇಖಿಸಿದೆ ಎಂದರೆ ಗೂಡಿನ ಬಳಿಯ ಅಬ್ದುಲ್ ರಹ್ಮಾನ್ ಎಂಬ ಪುಣ್ಯಾತ್ಮರು ಹಜ್ ಯಾತ್ರೆ ಗಾಗಿ ಕೂಡಿಟ್ಟ ಹಣವನ್ನು ಲಾಕ್ ಡೌನ್ ಸಂದರ್ಭದಲ್ಲಿ ಕಷ್ಟದಲ್ಲಿರುವ ಕುಟುಂಬಗಳಿಗೆ ರೇಶನ್ ವಿತರಿಸಲು ಉಪಯೋಗಿಸಿದರು. ಒಬ್ಬ ಮುಸ್ಲಿಮನ ಬಲು ದೊಡ್ಡ ಕನಸು ಏನೆಂದರೆ ಬದುಕಿನಲ್ಲಿ ಒಮ್ಮೆಯಾದರೂ ಕಣ್ಮುಂದೆ ಕಾಬಾ ಕಾಣಬೇಕು, ರೌಲ ಶರೀಫ್ ಮುಂದೆ ನಿಂತು ಪ್ರವಾದಿವರ್ಯರಿಗೆ (ಸ. ಅ) ಸಲಾಂ ಹೇಳಬೇಕು. ತನ್ನ ಅದೆಷ್ಟು ವರ್ಷಗಳ ಕನಸನ್ನು, ಅದಕ್ಕಾಗಿ ಕೂಡಿಟ್ಟ ಹಣವನ್ನು ಬಲಿದಾನ ಮಾಡಿದ ಗೂಡಿನ ಬಳಿಯ ಅಬ್ದುಲ್ ರಹ್ಮಾನ್ ನಿಜಕ್ಕೂ ಗ್ರೇಟ್. ಅವರ ತ್ಯಾಗಕ್ಕೆ ನಾವು ಹ್ಯಾಟ್ಸಾಪ್ ಅನ್ನಲೇಬೇಕು. ಚಮ್ಮಾರ ಮುವಫಿಕ್ ಗೆ ಅಲ್ಲಾಹನು ನೀಡಿದ ಪ್ರತಿಫಲ ಮತ್ತು ಶ್ರೇಷ್ಠತೆಯನ್ನು ಸಹೋದರ ಅಬ್ದುಲ್ ರಹ್ಮಾನ್ ರವರಿಗೆ ಕರುಣಿಸಲಿ. ಅಮೀನ್. ಅವರ ಹೃದಯ ಶ್ರೀಮಂತಿಕೆ ನಮಗೂ ಬರಲಿ ಹಾಗೂ ತನ್ನ ಕುಟುಂಬ, ನೆರೆಕರೆ, ಸಮುದಾಯದ ಕಷ್ಟಗಳಿಗೆ ಸ್ಪಂದಿಸದೆ ಮತ್ತೆ ಮತ್ತೆ ಹಜ್, ಉಮ್ರಾ ಮಾಡುವವರಿಗೆ ಇದೊಂದು ಪಾಠವಾಗಲಿ ಎಂದು ಹಾರೈಸುತ್ತೇನೆ.

LEAVE A REPLY

Please enter your comment!
Please enter your name here