• ಕೌಶಿಕ್ ಕೆ.ಎಸ್

ಬಾಲಿವುಡ್ ಸಿನಿಮಾಗಳನ್ನು ಕನಿಷ್ಠ ಕಳೆದೊಂದು ದಶಕದಿಂದ ಬಲ್ಲವರಿಗೆ ಇರ್ಫಾನ್ ಖಾನ್ ಎನ್ನುವ ಒರಟು ಸ್ವರದ, ಸ್ಫುರದ್ರೂಪಿ‌ ಅಲ್ಲದಿದ್ದರೂ ಚಂದದ ನಟನೆಯ ಕಲಾವಿದನ ಪರಿಚಯ ಇದ್ದೇ ಇರುತ್ತದೆ. ಇತರೆ ನಟರಂತೆ ವರ್ಷಕ್ಕೆ ಹಲವು ಸಿನಿಮಾದಲ್ಲಿ ಕಾಣಿಸಿಕೊಳ್ಳದಿದ್ದರು ಇರ್ಫಾನ್ ನಟನೆಯನ್ನು ಆರಾಧಿಸುವ, ಆಸಕ್ತಿಯಿಂದ ನೋಡುವ ವರ್ಗ ದೊಡ್ಡದೇ ಇದೆ.

ಸಹಜ ನಟನೆ, ಕಣ್ಣಲ್ಲೇ ನಟಿಸುವ ವಿಶೇಷ ಪ್ರತಿಭೆಯಿಂದ ಇರ್ಫಾನ್ ಖಾನ್ ಕ್ಲಾಸ್ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದವರು. ಲಂಚ್ ಬಾಕ್ಸ್, ಕರೀಬ್ ಕರೀಬ್ ಸಿಂಗಲ್, ಹಿಂದಿ ಮೀಡಿಯಂ, ಕಾರ್ವಾನ್’ ನಂತಹ ಸಿನಿಮಾಗಳು ಇರ್ಫಾನ್ ನಟನೆಗೆ ಕೇರ್ ಆಫ್ ಅಡ್ರೆಸ್..!

ಇರ್ಫಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ ಮೊದಲ‌ ಬಾಲಿವುಡ್ ಸಿನಿಮಾ ‘ರೋಗ್’. ಇರ್ಫಾನ್ ಬಾಯ್ಮಾತಿಗಿಂತ ಕಣ್ಣಿನ ಸಂಭಾಷಣೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಈ ಚಿತ್ರದ ಬಗ್ಗೆ ಪತ್ರಕರ್ತರು ವಿಮರ್ಶೆ ಬರೆದಿದ್ದರು. ಹೀಗೆ ಸಹಜ ನಟನೆಯಲ್ಲೇ ಅಭಿಮಾನಿ ಬಳಗವನ್ನು ಗಳಿಸುತ್ತಾ ಬಂದಿದ್ದರು. ಭಾರತೀಯ ಸಿನಿರಂಗದಂತೆ ಹಾಲಿವುಡ್’ನಲ್ಲೂ ಇರ್ಫಾನ್ ಪರಿಚಿತ ಮುಖ. ಸ್ಲಂಡಾಗ್ ಮಿಲೇನಿಯರ್, ಲೈಫ್ ಆಫ್ ಪೈ, ಜುರಾಸಿಕ್ ವರ್ಲ್ಡ್, ಅಮೇಜಿಂಗ್ ಸ್ಲೈಡರ್ ಮ್ಯಾನ್-೨ ಹಾಗೂ ಇನ್’ಫೆರ್ನೋ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಖ್ಯಾತ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್’ರ ‘ಇಂಟರ್’ಸ್ಟೆಲ್ಲಾರ್’ ಚಿತ್ರವನ್ನ‌ ಇರ್ಫಾನ್ ರಿಜೆಕ್ಟ್ ಮಾಡಿದ್ದರು ಎನ್ನುವುದು ಹಲವರಿಗೆ ಗೊತ್ತಿಲ್ಲದ ಸಂಗತಿ. ‘ಲಂಚ್’ಬಾಕ್ಸ್’ ಹಾಗೂ ‘ಡಿ-ಡೇ’ ಚಿತ್ರಕ್ಕಾಗಿ ದೊಡ್ಡ ಆಫರ್ ತಳ್ಳಿಹಾಕಿದ್ದರು.
ಇರ್ಫಾನ್ ಖಾನ್ ಇಂದು ಕೋಟ್ಯಂತರ ಜನ ಮೆಚ್ಚುವ ನಟ ಆಗಿದ್ದಾರೆ‌. ಅಸಲಿಗೆ ಕ್ರಿಕೆಟ್ ಮೇಲೆ ಇರ್ಫಾನ್’ಗೆ ಹೆಚ್ಚು ಒಲವಿತ್ತು. ಉತ್ತಮ‌ ಕ್ರಿಕೆಟರ್ ಆಗಬೇಕು ಎನ್ನುವ ಆಸೆ ಹೊಂದಿದ್ದ ಇರ್ಫಾನ್ ನಂತರ ಆಗಿದ್ದು ಪ್ರಸಿದ್ಧ ಸಿನಿಮಾ‌ ನಟ. ಒಂದು ವೇಳೆ ಇರ್ಫಾನ್ ಕ್ರಿಕೆಟರ್ ಆಗಿದ್ದರೆ, ಭಾರತೀಯ ಚಿತ್ರರಂಗ ಒಂದೊಳ್ಳೆ ನಟನನ್ನು ಕಳೆದುಕೊಳ್ಳುತ್ತಿತ್ತು. ರಾಜಸ್ಥಾನದಲ್ಲಿ ಜನಿಸಿದ ಇರ್ಫಾನ್ ಮುಂಬೈಗೆ ಬಂದು ಮೊದಲಿಗೆ ಏಸಿ ರಿಪೇರ್ ಮಾಡುವ ಕೆಲಸ ಮಾಡಿದ್ದರು. ಬಾಲಿವುಡ್ ಸೂಪರ್’ಸ್ಟಾರ್ ರಾಜೇಶ್ ಖನ್ನಾ ಮನೆಯಲ್ಲೇ ಮೊದಲ ಏಸಿ ರಿಪೇರಿ ಮಾಡಿದ್ದರು ಎನ್ನುವುದು ಇರ್ಫಾನ್ ಬದುಕಿನ ಪುಟ ತಿರುವಿದಾಗ ಕಾಣಸಿಗುವ ಅಚ್ಚರಿ..!
ತೆರೆಮೇಲೆ ಕಾಣುವಂತೆ ನಿಜ ಜೀವನದಲ್ಲೂ ಇರ್ಫಾನ್ ‘ಮ್ಯಾನ್ ವಿದ್ ಫ್ಯೂ ವರ್ಡ್ಸ್’ ಎನ್ನುವುದು ಆಪ್ತವಲಯದ ಮಾತು. ಇರ್ಫಾನ್ ಮಾತು ಕಮ್ಮಿ ಆಗಿದ್ದರೂ, ಆಡುವ ಮಾತು ತೂಕದಿಂದ ಕೂಡಿರುತ್ತಿತ್ತು. 2018ರಲ್ಲಿ ಕ್ಯಾನ್ಸರ್ ವಕ್ಕಿರಿಸಿ ಇರ್ಫಾನ್’ರ ಜೀವ ಹಿಂಡಿತ್ತು. ಕೆಲಕಾಲ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಬಂದಿದ್ದ ಬಾಲಿವುಡ್ ನಟ ಆ ಬಳಿಕ ‘ಅಂಗ್ರೇಜಿ ಮೀಡಿಯಂ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಮಾರ್ಚ್ 13ರಂದು ಬಿಡುಗಡೆಯಾದ ಈ ಸಿನಿಮಾಗೆ ಪ್ರೇಕ್ಷಕರಿಂದ‌ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೊರೋನಾ ಭಾರತದಲ್ಲಿ ವ್ಯಾಪಿಸಿದ ಪರಿಣಾಮ ಇರ್ಫಾನ್ ನಟನೆಯ ಈ ಕೊನೆಯ ಚಿತ್ರ ಹೆಚ್ಚು ದಿನ ಥಿಯೇಟರ್’ನಲ್ಲಿ ಉಳಿಯಲಿಲ್ಲ. ಇಹಲೋಕದ ಪಯಣ ಮುಗಿಸಿರುವ ಮುಗ್ಧ ನಗುವಿನ ಇರ್ಫಾನ್ ಖಾನ್ ತಮ್ಮ ಸಿನಿಮಾಗಳ ಮೂಲಕ ಸಿನಿಪ್ರೇಕ್ಷಕರ ಮನಸ್ಸಲ್ಲಿ ಎಂದೆಂದಿಗೂ ಶಾಶ್ವತ..!

LEAVE A REPLY

Please enter your comment!
Please enter your name here