ಪುಸ್ತಕ ವಿಮರ್ಶೆ : ಶರೀಫ್ ಕಾಡುಮಠ

ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು

ಕೃತಿ: ಹರಾಂನ ಕಥೆಗಳು(ಕಥಾ ಸಂಕಲನ)
ಲೇಖಕ: ಮುಸ್ತಾಫ ಕೆ.ಎಚ್.
ಪ್ರಕಾಶನ: ಅಹರ್ನಿಶಿ ಪ್ರಕಾಶನ
ಬೆಲೆ: ರೂ. 100

ಮುಸ್ತಾಫ ಕೆ.ಎಚ್. ಅವರ ಚೊಚ್ಚಲ ಕಥಾ ಸಂಕಲನ ‘ಹರಾಂನ ಕಥೆಗಳು’. ಇತ್ತೀಚೆಗೆ ಬಿಡುಗಡೆಯಾದ ಈ ಸಂಕಲನದಲ್ಲಿ ಒಟ್ಟು 9 ಕಥೆಗಳಿವೆ. ಅಹರ್ನಿಶಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಹರಾಂನ ಕಥೆಗಳು ಎಂಬ ಹೆಸರೇ ಸ್ವಲ್ಪ ಮಟ್ಟಿಗೆ ಕುತೂಹಲಕಾರಿ. ಇಸ್ಲಾಂ ನಲ್ಲಿ ಹರಾಂ ಎನ್ನುವುದು ಎಲ್ಲಿಂದ ಆರಂಭವಾಗುತ್ತದೆ ಎಂಬುವುದನ್ನು ಸೂಕ್ಷ್ಮವಾಗಿ ಈ ಶೀರ್ಷಿಕೆ ಮೇಲ್ಪದರದಲ್ಲಿ ಸ್ಪರ್ಶಿಸಿ ತೋರಿಸುತ್ತದೆ. ಕಥೆಗಳನ್ನು, ಕಾದಂಬರಿ ಕೃತಿಗಳನ್ನು ಓದುವುದೇ ‘ಹರಾಂ’ ಎಂದು ಭಾವಿಸುತ್ತಿದ್ದ ಕಾಲವೂ ಮುಸ್ಲಿಂ ಸಮುದಾಯದಲ್ಲಿತ್ತು. ಬಹುಶಃ ಈಗಲೂ ಕೆಲವು ಮನೆಗಳಲ್ಲಿ ಇಂತಹ ‘ಕಟ್ಟುನಿಟ್ಟು’ ಇದೆ ಅನಿಸುತ್ತದೆ‌. ಹಲವು ಮನೆಯ ಹೆಣ್ಣುಮಕ್ಕಳು ಕದ್ದು ಕದ್ದು ಕಥೆ ಪುಸ್ತಕಗಳನ್ನು ಓದಿದ್ದಕ್ಕೆ, ಕಾದಂಬರಿಗಳನ್ನು ಓದಿದ್ದಕ್ಕೆ ‘ಧರ್ಮಿಷ್ಠ’ ಅಣ್ಣಂದಿರಿನಿಂದ, ಅಪ್ಪನಿಂದ ಹೊಡೆತ ತಿಂದ ಪ್ರಸಂಗವೂ ನಮ್ಮ ಸಮಾಜದ ಒಂದು ಸಂದರ್ಭದ ವಾಸ್ತವ.

ಮುಸ್ತಫಾ ಸಾಮಾಜಿಕ ತುಡಿತವನ್ನು ಸಾಹಿತ್ಯ ಚಟುವಟಿಕೆಯ ಜೊತೆ ಜೊತೆಗೆ ಇಟ್ಟುಕೊಂಡು ಬೆಳೆಯುತ್ತಿರುವ ಬರಹಗಾರ. ವರ್ತಮಾನಕ್ಕೆ ಮಿಡಿಯುವುದಕ್ಕೆ ಕಥೆ ಮುಸ್ತಫಾ ಅವರಿಗೆ ಒಂದು ಹಾದಿಯಾಗಿ, ಸ್ಪಂದನೆಯ ರೂಪವಾಗಿ ಕಂಡಿರುವುದು ಸಹಜ. ಈ ಸಂಕಲನದ ಹೆಚ್ಚಿನ ಕಥೆಗಳಲ್ಲಿ ಅಡಗಿರುವ ವಸ್ತು ಎಂದರೆ ಲೈಂಗಿಕತೆ. ಲೈಂಗಿಕ ಸ್ವಾತಂತ್ರ್ಯವನ್ನು ಪರಿಶೋಧಿಸುವ, ಸಾಮಾಜಿಕ ಕಟ್ಟುಪಾಡುಗಳ ಆಚೆ ನಿಲ್ಲುವ ಪ್ರಾಕೃತಿಕ, ತೀರಾ ಸಹಜ ಅಂಶವಾಗಿ ಕಾಣಿಸುವ ಲೈಂಗಿಕ ವಿಚಾರಗಳು ಇಲ್ಲಿ ಸಂವೇದನೆಯ ಪ್ರಶ್ನೆಗಳಾಗಿ ಎದುರಾಗುತ್ತವೆ. ಸಲಿಂಗ ಕಾಮ, ವೇಶ್ಯೆಯನ್ನು ಸಮಾಜ ನೋಡುವ ಬಗೆ, ಅಂತರ್ಧಮೀಯ ಜೋಡಿಗಳು, ವಿವಾಹಪೂರ್ವ ಲೈಂಗಿಕ ಸಂಬಂಧ ಇವೆಲ್ಲವೂ ಇಲ್ಲಿ ಧರ್ಮ, ಪ್ರಸ್ತುತ ಸಮಾಜವನ್ನು ಮುಖಾಮುಖಿಯಾಗುವ ವಿಷಯಗಳಾಗಿ ಇಲ್ಲಿನ ಕಥೆಗಳಲ್ಲಿ ಕಂಡುಬರುತ್ತವೆ. ಚಿಂತಿಸುವುದಕ್ಕೆ ಅವಕಾಶವಿರುವ ಇಸ್ಲಾಂನಲ್ಲಿ ಪ್ರಶ್ನಿಸುವುದಕ್ಕೆ ಅವಕಾಶ ಕಡಿಮೆ. ಮದರಸಾಗಳಿಗೆ ಹೋಗುತ್ತಿದ್ದ ಸಂದರ್ಭ ಪ್ರಶ್ನೆಗಳನ್ನು ಕೇಳಿದರೆ ಅವರನ್ನು ಅಧಿಕಪ್ರಸಂಗಿ ಎಂದು ಕಣ್ಣು ಕೆಂಪಗಾಗಿಸಿ ನೋಡುತ್ತಿದ್ದ ಉಸ್ತಾದರೂ ಇದ್ದರು. ಪ್ರಶ್ನೆ ಕೇಳಿದ್ದಕ್ಕಾಗಿ ಮದರಸಾದಿಂದ ಒದ್ದು ಹೊರಗೆ ಕಳಿಸಿದ್ದೂ ಇದೆ. ಧರ್ಮ ಎನ್ನುವುದನ್ನು ಅಮಲಿನಂತೆ ಕಾಣುವುದರ ಫಲವಾಗಿ ಇಂತಹ ಪರಿಸ್ಥಿತಿ ಒದಗಿ ಬರುತ್ತದೆ‌. ಈಗಲಾದರೂ ಧರ್ಮದ ಅಮಲಿನ ಪರಿಣಾಮಗಳನ್ನು ನಮ್ಮ ಸುತ್ತಲಿನ ಸಮಾಜದಲ್ಲಿ ಕಾಣುತ್ತೇವೆ.

‘ನಿಮ್ಮವಳಲ್ಲ’ ಎಂಬ ಕಥೆ ಧರ್ಮದ ಗುತ್ತಿಗೆ ಹಿಡಿದವರಂತೆ ವರ್ತಿಸುವ ಕೆಲವರ ಗುಣವನ್ನು, ಅದರ ಹಿಂದಿನ ಸತ್ಯವನ್ನು ಎತ್ತಿ ತೋರಿಸುತ್ತದೆ. ರಶ್ಮಿ ಎಂಬ ಪಾತ್ರದ ಜೊತೆ ಪ್ರೀತಿಯ ನಾಟಕವಾಡಿ ಅನೈತಿಕ ಸಂಬಂಧ ಬೆಳೆಸುವ ಮಸೀದಿಯ ಅಧ್ಯಕ್ಷನ ಮಗ ಶಾಹೀನ್ ನ ದುಷ್ಟತನ ಬೆಳಕಿಗೆ ಬಂದಾಗ, ಮಸೀದಿಯಲ್ಲಿ ಗದ್ದಲವಾಗಿ ತನ್ನ ಮಗನ ಪ್ರಕರಣ ಮುಚ್ಚಿಹಾಕಲು ಸದ್ದಿಲ್ಲದಂತೆ ಆ ಹುಡುಗಿಯನ್ನು ಕೊಂದು ಹಾಕುವ ಬಗೆ ಪ್ರಸ್ತುತ ಸಮಾಜದಲ್ಲಿ ಅವಾಸ್ತವವೇನಲ್ಲ.

ಮೊದಲ ಕಥೆ ‘ಮುಳಿಹುಲ್ಲಿನ ಮೂಲೆ ಅಂಗಡಿ’ ತನ್ನ ನಿರೂಪಣಾ ಶೈಲಿಯಿಂದಲೂ, ಕಥೆಯೊಳಗಿನ ಸಣ್ಣ ಎಳೆಯ ವಸ್ತುವಿನಿಂದಲೂ ಇಷ್ಟವಾಗುತ್ತದೆ. ಅಲ್ಲಿನ ಭಾಷೆ, ಊರು, ಸಂಸ್ಕೃತಿ, ಪರಿಸರ ಪಾತ್ರಗಳು ಖುಷಿ ಕೊಡುತ್ತವೆ. ಒಂದು ಸುಳ್ಳು ಹೇಳಿ ಉದ್ಧಾರವಾಗುವ ಪ್ರಯತ್ನ ನಡೆಸುವ ಗಂಡನನ್ನು ಪೊಲೀಸರ ಬಲೆಗೆ ಬೀಳಿಸುವ ಹೆಂಡತಿಯ ಮನಸ್ಸಿನಲ್ಲಿ ಒಳ್ಳೆಯ ಶೌಚಾಲಯವಿರುವ ಪುಟ್ಟ ಮನೆ ಕಟ್ಟುವ ಕನಸೂ, ಉದ್ದೇಶವೂ ಅಡಗಿರುವುದು, ಕಥೆಗಾರ ಅವೆರಡನ್ನೂ ಹೆಣೆದ ಬಗೆ ವಿಶೇಷ. ಒಂದು ಪರಿವರ್ತನೆಗಾಗಿ ಹೆಣ್ಣು ಗಟ್ಟಿಯಾಗಿ‌ ನಿಲ್ಲುವುದು ಮತ್ತು ಗಂಡನ ಮನಸ್ಸನ್ನು ಬದಲಾಯಿಸುವುದು ಕೌಟುಂಬಿಕ ಜೀವನದ ಸುಲಭದ ಮಾತಲ್ಲ. ಆದರೆ ಅದು ಮುಖ್ಯವಂತೂ ಹೌದು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಅಗತ್ಯಗಳು ನಿರ್ಲಕ್ಷ್ಯಕ್ಕೊಳಗಾಗುವುದನ್ನು ನಾವು ಹಿಂದಿನಿಂದಲೂ ಕಾಣುತ್ತಲೇ ಬಂದಿದ್ದೇವೆ. ಅಂತಹ ವ್ಯವಸ್ಥೆಯಲ್ಲಿ ಹೆಣ್ಣಿನ ಸ್ಥೈರ್ಯ ಕೆಲವೊಂದು ಬದಲಾವಣೆಗಳಿಗೆ ನಾಂದಿ ಹಾಡಬಹುದು ಎಂಬುದನ್ನು ಈ ಕಥೆ ಬಿಂಬಿಸುತ್ತದೆ.‌

ಕಂಚಿನ ಪುತ್ಥಳಿ ಮತ್ತು ಮಣ್ಣು ಸೇರದ ಬೀಜ ಎಂಬ ಎರಡು ಕಥೆಗಳು ಬಹಳ ಇಷ್ಟವಾಗುತ್ತವೆ. ಕಂಚಿನ ಪುತ್ಥಳಿ, ಸೂಕ್ಷ್ಮವಾದ ವಿಚಾರವೊಂದನ್ನು ವಸ್ತುವಾಗಿಸಿಕೊಂಡ ಕಥೆ. ಕೋಮುದಳ್ಳುರಿಯ ವಾತಾವರಣದಲ್ಲಿ ಮೌಲ್ಯಗಳಿಗಿಂತ ಪ್ರತಿಮೆಗಳ ಹೆಚ್ಚು ರಾರಾಜಿಸುತ್ತಿದೆ. ವರ್ತಮಾನದ ಕೆಟ್ಟ ಮನಸ್ಥಿತಿಗೆ ಈ ಕಥೆ ಕನ್ನಡಿ ಹಿಡಿಯುತ್ತದೆ. ಇಬ್ಬರು ಮಹಾನ್ ನಾಯಕರನ್ನು ಧರ್ಮದೊಳಗೆ ಬಂಧಿಸಿ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ಸಜ್ಜಾಗುವ ಎರಡು ಕೋಮಿನವರು, ದೊಡ್ಡ ಗಲಭೆಯೊಂದು ನಡೆಯದಂತೆ ತಡೆಯಲು ಕಾದು ಕೂರುವ ಪೊಲೀಸರು. ಇವರೆಲ್ಲರ ನಡುವೆಯೇ ಓದುಗನ ಮನಗೆಲ್ಲುವ ನಿರುದ್ಯೋಗಿಗಳ ಗುಂಪು, ರೋಚಕ ಘಟ್ಟಕ್ಕೆ ಈ ಕಥೆ ನಮ್ಮನ್ನು ಕೊಂಡೊಯ್ಯುತ್ತದೆ.

ಮಣ್ಣು ಸೇರದ ಬೀಜ ಅಂತರ್ಧರ್ಮೀಯ ಜೋಡಿಯ ಪ್ರೀತಿ, ಪ್ರೇಮ, ವಿವಾಹದ ವಿಚಾರವಾಗಿ ಈ ಸಮಾಜಕ್ಕಿರುವ ದೃಷ್ಟಿಕೋನ, ಜನರ ಮನಸ್ಥಿತಿ, ಮರ್ಯಾದೆ-ಪ್ರತಿಷ್ಠೆಯ ಸಂಗತಿಗಳನ್ನು ಮುನ್ನೆಲೆಗೆ ತರುತ್ತದೆ. ವಿರೋಧದ ನಡುವೆಯೇ ವಿವಾಹವಾಗಿ ಕುಟುಂಬದೊಳಗೆ ಎದುರಾಗುವ ದುರಂತ ಸನ್ನಿವೇಶಗಳು ತೀರಾ ವಾಸ್ತವದ ನೆಲೆಯಲ್ಲಿ ಚಿತ್ರಿತವಾಗಿದೆ.

ಉಳಿದಂತೆ ಹೆಣ್ಣಾಗಬೇಕಿತ್ತು, ಕಾಡುವ ಕನಸುಗಳ ಜೊತೆ, ಬ್ಲೂ ಮೂನ್ ಎಕ್ಲಿಪ್ಸ್, ನೀಲಾಗಸದ ಹಕ್ಕಿಯ ರೆಕ್ಕೆ ತಮ್ಮದೇ ಆದ ನೆಲೆ, ವಿಷಯದ ಮಿತಿಯೊಳಗೆ ಸಮಾಜಕ್ಕೆ ಎದುರಾಗುತ್ತವೆ.

ಆಳವಾದ ವಿಮರ್ಶೆಗೆ ಒಡ್ಡುವ ಅಗತ್ಯಕ್ಕಿಂತ ಈ ಕಥಾಸಂಕಲನ ತನ್ನ ಕಥಾವಸ್ತುಗಳಿಗೆ ನೀಡಬೇಕಾದ ಪ್ರಾಮುಖ್ಯತೆಯನ್ನು ಪರೋಕ್ಷವಾಗಿ ತಿಳಿಸುತ್ತದೆ. ಮುಸ್ತಾಫ ಅವರ ಮೊದಲ ಪ್ರಯತ್ನ ನಿರೂಪಣೆ, ಕಥೆಯ ವಸ್ತು, ವಿಷಯಗಳ ಕಾರಣಕ್ಕೆ ಬಹಳ ಮುಖ್ಯ ಎನಿಸುತ್ತದೆ. ಸಮುದಾಯವನ್ನು ವಿಮರ್ಶಿಸುವ, ಸಮುದಾಯಕ್ಕೆ ಧ್ವನಿಯಾಗುವ ಹೀಗೆ ಎಲ್ಲವನ್ನೂ ಮುಖಾಮುಖಿಯಾಗಿಸುವ ಕಥೆಗಳು ಅವಶ್ಯ ಎನಿಸಿರುವ ಈ ಹೊತ್ತಿನಲ್ಲಿ ಮುಸ್ತಾಫ ಅವರ ಕಥೆಗಳು ಮುಂದಿಡುವ ಸವಾಲುಗಳು ಸ್ವಲ್ಪ ಮಟ್ಟಿಗೆ ಸಮಾಧಾನ ತರುತ್ತದೆ.

ಒಟ್ಟಿನಲ್ಲಿ ‘ಹರಾಂನ ಕಥೆಗಳು’ ಎಂಬ ಪುಟ್ಟ ಕೃತಿ, ಒಂದೇ ಸಲಕ್ಕೆ ಓದಿ ಮುಗಿಸಬಹುದಾದ ಸಂಕಲನ. ಯುವಮನಸ್ಸುಗಳನ್ನು, ಸಾಮುದಾಯಿಕ ಸವಾಲುಗಳನ್ನು ಪ್ರತಿನಿಧಿಸುವ ಇಲ್ಲಿನ ಎಲ್ಲಾ ಕಥೆಗಳು ಸಣ್ಣದೊಂದು ಆಲೋಚನೆಯ ಕಿಡಿಯನ್ನು ಹೊತ್ತಿಸುವಲ್ಲಿ ಯಶಸ್ವಿಯಾಗುತ್ತದೆ. ಮುಸ್ತಾಫ ಎಂಬ ಪ್ರತಿಭಾವಂತ ಕಥೆಗಾರನ ಕಥಾಲೋಕಕ್ಕೆ ಈ ಸಂಕಲನ ಮೊದಲ ಮೆಟ್ಟಿಲು. ಇನ್ನಷ್ಟು ಕಥೆಗಳು ಅವರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಹರಿದು ಬರಲಿ ಎಂದು ಆಶಿಸುವೆ.

LEAVE A REPLY

Please enter your comment!
Please enter your name here