• ಯೋಗೇಶ್ ಮಾಸ್ಟರ್

ಅನುಭವ ಕಥೆ

ನನಗೆ ನೆನಪಿಲ್ಲ. ಆಗ ನನಗೆಷ್ಟು ವಯಸ್ಸೆಂದು. ನನ್ನಮ್ಮನ ಆತುಕೊಂಡು ನಿಂತರೆ ನಾನವರ ಸೊಂಟದವರೆಗೆ ಬರುತ್ತಿದ್ದೆ. ಆ ವಯಸ್ಸಿನ ಆಸುಪಾಸಿನಲ್ಲೇ ನನಗೆ ಹತ್ತು ಪೈಸೆಯ ನಿಕ್ಕಲ್ ಲೋಹದ ಟೊಣಪ ನಾಣ್ಯವು ಮಾನವನ್ನು ಪರಿಚಯಿಸಿತ್ತು, ಸುಳ್ಳನ್ನು ಆರೋಪಿಸಿತ್ತು ಮತ್ತು ಶಾಂತಿಯ ಮಾರ್ಗವನ್ನು ತೋರಿತ್ತು.
ಮಾನದ ಕತೆ
ಆ ದಿನ ನಾನು ನನ್ನ ಅಮ್ಮ ಅದೆಲ್ಲಿಗೆ ಹೋಗಿದ್ದೆವೆಂದು ನೆನಪಿಲ್ಲ. ಎಲ್ಲಿಗೆ ಹೋಗುವುದು, ಏಕೆ ಹೋಗುವುದು, ಹೋಗಿ ಅಲ್ಲೇನು ಮಾಡುವುದು, ಅಲ್ಲಿಂದ ಯಾವಾಗ ಬರುವುದು ಎಂದು ನಾನು ಎಂದೂ ಕೇಳಿದ ನೆನಪಿಲ್ಲ. ನಮ್ಮಮ್ಮ ಎಲ್ಲಿಗೇ ಕರೆದುಕೊಂಡು ಹೋದರೂ ಹೋಗುತ್ತಿದ್ದೆ. ಹಸಿವು ಎನ್ನುವ ಮುಂಚೆಯೇ ಏನಾದರೂ ಒದಗಿಸುತ್ತಿದ್ದರು. ಒಂದು ವೇಳೆ ಅವರ ಲೆಕ್ಕಾಚಾರದ ಮುಂಚೆಯೇ ನನಗೆ ಹಸಿವಾದರೂ ಅಂಗಡಿಯಿಂದ ಬಿಸ್ಕತ್ ಅಥವಾ ಬನ್ ಆದರೂ ಸಿಕ್ಕೇ ಸಿಗುತ್ತಿತ್ತು. ಹಾಗೆಯೇ ಹೋಗುವ ಬರುವ ಜವಾಬ್ದಾರಿ ನನ್ನದೇನಾಗಿರಲಿಲ್ಲವಲ್ಲ. ಕರೆದುಕೊಂಡು ಹೋಗುತ್ತಿದ್ದರು. ಕರೆದುಕೊಂಡು ಬರುತ್ತಿದ್ದರು. ಬಿಟಿಎಸ್ ಕೆಂಪು ಬಸ್ಸಿನಲ್ಲಿ. ಬಸ್ಸಿನಲ್ಲಿ ಅಲ್ಲದೇ ನಡೆದು ಹೋಗುವುದಾಗಿದ್ದರೆ ನಡೆಯುತ್ತಿದ್ದೆವು. ಒಂದು ವೇಳೆ ನನ್ನ ಎಳೆಯ ಕಾಲುಗಳು ನೋಯುವಷ್ಟು ದೂರವನ್ನು ಕ್ರಮಿಸಬೇಕಾಗಿದ್ದರೆ ತಮ್ಮ ಸೊಂಟವೇರಿಸಿಕೊಂಡು ಅವರು ನಡೆಯುತ್ತಿದ್ದರು. ಬಿಸಿಲಿದ್ದರೆ ಅವರ ಸೆರಗು ನನ್ನ ತಲೆಯ ಮೇಲಿರುತ್ತಿತ್ತು. ಭುಜದ ಮೇಲೆಯೇ ತಲೆಯಿಟ್ಟುಕೊಂಡು ನಿದ್ರೆ ಮಾಡಿರುವ ನೆನಪುಗಳೂ ಇವೆ. ಹಾಗಿರುವಾಗ ಹೋಗುವ ಮತ್ತು ಬರುವ ಗುರಿ ಮತ್ತು ದಾರಿಗಳ ಬಗ್ಗೆ ನಾನು ಎಂದೂ ತಲೆ ಕೆಡಿಸಿಕೊಳ್ಳುವ ಸಂದರ್ಭ ಒದಗಿರಲೇ ಇಲ್ಲ.
ಆದರೆ ಆ ದಿನ ಅಮ್ಮನ ಜೊತೆಗಿನ ಪ್ರಯಾಣ ಕೊಂಚ ಆತಂಕವನ್ನು ಹುಟ್ಟಿಸಿತ್ತು. ಏಕೆಂದರೆ, ಅದೆಲ್ಲಿಗೋ ಹೋಗಿದ್ದೆವಲ್ಲ, ವಾಪಸ್ಸು ಬರಲು ಬಸ್ ಚಾರ್ಜಿಗೆ ಕೊರತೆಯಾಗಿತ್ತು. ಮನೆ ಚಾಮರಾಜಪೇಟೆ ನಾಲ್ಕನೇ ಮುಖ್ಯರಸ್ತೆಯಲ್ಲಿ. ಅಲ್ಲಿಗೆ ಹೋಗಲು ಇಬ್ಬರಿಗಿರಲಿ, ಒಬ್ಬರಿಗೂ ಸಾಧ್ಯವಿರಲಿಲ್ಲ. ಹಾಗಂತ ನಡೆದುಕೊಂಡು ಬರುವಷ್ಟು ಹತ್ತಿರದ ದಾರಿಯೇನಲ್ಲ. ನಾವಿದ್ದ ಜಾಗದಿಂದ ಕೆ ಆರ್ ಮಾರ್ಕೆಟ್ಟಿಗೆ ಬರಲು ದೊಡ್ಡವರಿಗೆ ಇಪ್ಪತ್ತು ಪೈಸೆ. ಸಣ್ಣವರಿಗೆ ಹತ್ತು ಪೈಸೆ. ನಮ್ಮಮ್ಮನ ಹತ್ತಿರ ಇದ್ದದ್ದು ಬರೀ ಇಪ್ಪತ್ತು ಪೈಸೆ ಮಾತ್ರ. ಈಗ ನನಗಿಲ್ಲ.
ನನ್ನಷ್ಟು ಚಿಕ್ಕ ಹುಡುಗನಿಗೆ ಟಿಕೆಟ್ ತೆಗೆದುಕೊಳ್ಳಬೇಕೆಂದು ಆಯಾ ಬಸ್ಸಿನ ನಿರ್ವಾಹಕನ ಔದಾರ್ಯ ಅಥವಾ ನಿಷ್ಟುರತೆಯ ಮೇಲೆ ಅವಲಂಬಿತವಾಗಿತ್ತೇ ಹೊರತು, ಕಟ್ಟುನಿಟ್ಟಿನ ಚಂಡಶಾಸನವನ್ನು ಎಲ್ಲರೂ ಅನುಸರಿಸುತ್ತಿದ್ದದ್ದು ನಾ ಕಾಣೆ. ಎಷ್ಟೋ ಸಲ ‘ಈ ಹತ್ತು ಪೈಸೆ ಇಟ್ಟುಕೊಳ್ಳಿ’ ಎಂದು ಎಷ್ಟೋ ಬೆಲೆಯ ಟಿಕೆಟ್ಟಿನ ದೂರವನ್ನು ಚೀಟಿ ಪಡೆಯದೇ ಪರಸ್ಪರ ಅಂಡರ್‍ಸ್ಟ್ಯಾಂಡಿಂಗಲ್ಲಿ ಪ್ರಯಾಣ ಮಾಡುತ್ತಿದ್ದ ಜನರೂ ಉಂಟು. ಇಷ್ಟೆಲ್ಲಾ ಸಡಿಲಿಕೆಯ ಸ್ವಕಲ್ಪಿತ ಆಶ್ವಾಸನೆ ಮತ್ತು ಭರವಸೆ ಇದ್ದುದರಿಂದ ಅಮ್ಮ ಧೈರ್ಯ ಮಾಡಿ, “ನಡಿ ಹೋಗಿಬಿಡೋಣ” ಎಂದು ಬಸ್ ಹತ್ತಿದರು.
ಆದರೆ ಆ ಬಸ್ ಕಂಡಕ್ಟರ್ ಬಹಳ ಪ್ರಾಮಾಣಿಕ ಮತ್ತು ನಿಷ್ಟುರಿ. ನಮ್ಮ ಅಮ್ಮನಿಗೆ ಇಪ್ಪತ್ತು ಪೈಸೆ ಟಿಕೆಟ್ ಕೊಟ್ಟು, “ಹುಡುಗನಿಗೆ?” ಎಂದು ಕೇಳಿದರು. ನಮ್ಮಮ್ಮ, “ಚಿಕ್ಕವನು” ಅಂದರು.
“ಚಿಕ್ಕವನಾದರೆ? ಆಫ್ ಟಿಕೆಟ್ ತಗೋಬೇಕು. ಹತ್ತು ಪೈಸೆ ತೆಗಿ” ಅಂದರು.
ನಮ್ಮಮ್ಮ “ಇಲ್ಲ” ಎಂದರು.
“ಇಲ್ಲ ಅಂದರೆ? ತಗೊಬೇಕು” ಎಂದು ಆ ಕಂಡಕ್ಟರ್ ಇತರರಿಗೆ ಟಿಕೆಟ್ ಕೊಡುವುದರಲ್ಲಿ ಮಗ್ನರಾದರು.
ನನಗೆ ಆತಂಕ ಈಗ ಏನು ಮಾಡುವುದು ಅಂತ. ನಮ್ಮಮ್ಮನ ಹತ್ತಿರ ಇಲ್ಲವೆಂದು ನನಗೆ ಗೊತ್ತು. ಅವನು ಕೊಡದಿದ್ದರೆ ಬಿಡುವುದಿಲ್ಲ ಅಂತ ಅನ್ನಿಸುತ್ತಿದೆ. ಅಳು ಬರುತ್ತಿದೆ. “ಅಮ್ಮಾ ಏನು ಮಾಡೋದು?” ಎನ್ನುತ್ತಿದ್ದೆ ಪದೇಪದೇ.
“ಸುಮ್ಮನಿರು. ಅವನು ಬೇರೆಯವರಿಗೆಲ್ಲಾ ಟಿಕೆಟ್ ಕೊಟ್ಕೊಂಡು ಮರೆತು ಹೋಗ್ತಾನೆ” ಎಂದು ಭರವಸೆ ನೀಡಿದರು. ಸಾಮಾನ್ಯವಾಗಿ ನಾನು ಯಾವುದೇ ಜವಾಬ್ದಾರಿಯನ್ನು ಹೊತ್ತುಕೊಳ್ಳದೇ ನಿರುಮ್ಮಳವಾಗಿ ಇರುವಂತೆ ಅವತ್ತು ಇರಲು ಆಗುತ್ತಿಲ್ಲ. ಕಂಡಕ್ಟರ್ ಮರೆತು ಹೋಗುತ್ತಾರೋ ಅಥವಾ ನೆನಪಿನಲ್ಲಿಟ್ಟುಕೊಂಡು ಕೇಳುತ್ತಾರೋ ಎಂಬ ಭಯದಿಂದ ಆ ಕಂಡಕ್ಟರ್ ಹೋಗುವ ಕಡೆಯಲ್ಲೆಲ್ಲಾ ನೋಡುತ್ತಿದ್ದೆ. ಅವರು ಮರೆತಿರಲಿಲ್ಲ. ನಮ್ಮ ಕಡೆ ಬಂದಾಗ, “ಎಲ್ಲಮ್ಮಾ?” ಎಂದು ಕೇಳುತ್ತಾ ತಮ್ಮ ಕೆಲಸವನ್ನು ಮುಂದುವರಿಸುತ್ತಿದ್ದರು.
ಕೊನೆಗೂ ಕೆ ಆರ್ ಮಾರ್ಕೆಟ್ ಬಂದಿತು. ಎಲ್ಲರೂ ಇಳಿಯುವಾಗ ನಾವೂ ಇಳಿಯಲು ಹೋದೆವು. ಕಂಡಕ್ಟರ್ ನಮ್ಮನ್ನು ತಡೆದರು. “ಎಲ್ಲಿ ಹತ್ತು ಪೈಸೆ?”
“ಇಲ್ಲ.”
“ಕಾಸಿಲ್ದೇ ಬಸ್ ಯಾಕೆ ಹತ್ತಿದೆ? ಹತ್ತು ಪೈಸೆ ಕೊಡು. ಬಸ್ ಇಳಿ” ಎಂದು ತಾನೂ ಬಸ್ ಇಳಿದು ಪ್ರಯಾಣಿಕರಿಗೆ ಚಿಲ್ಲರೆ ಕೊಡುವ ಕೆಲಸದಲ್ಲಿ ಮಗ್ನರಾಗಿದ್ದರು. ಕಂಡಕ್ಟರ್ ನಮ್ಮನ್ನು ಕೊನೆಯ ಬಾರಿ ಎಚ್ಚರಿಸುವಾಗ ಡ್ರೈವರ್ ನಮ್ಮನ್ನು ನೋಡಿದರು. ಮತ್ತೆ ಅವರಿಗೂ ಮತ್ತು ಈ ಹಗರಣಕ್ಕೂ ಸಂಬಂಧವಿಲ್ಲವೆಂದು ಇಳಿದು ಹೋದರು. ಇಡೀ ಬಸ್ಸಿನಲ್ಲಿ ನಾನು ಮತ್ತು ನಮ್ಮಮ್ಮ; ಇಬ್ಬರೇ. ನಾನು ನಮ್ಮ ಅಮ್ಮನ ಮುಂದಿನ ನಡೆಗಾಗಿ ಕಾದಿದ್ದೆ. ಭಯವಾಗಿತ್ತು. ಅಳುಬರುವುದು ಹೆಚ್ಚಾಯಿತು. ತಲೆ ಎತ್ತಿ ಅಮ್ಮನ ನೋಡಿದರೆ ಅವರೂ ಹೆದರಿದಂತೆಯೇ ಕಾಣಿಸಿ ನನ್ನ ಹೆದರಿಕೆ ಇನ್ನೂ ಜಾಸ್ತಿ ಆಯ್ತು. ಮುಂದಿನ ದ್ವಾರದಲ್ಲಿ ಕಂಡಕ್ಟರ್ ಕಾಣಿಸುತ್ತಿದ್ದಾರೆ.
“ಬಾ” ಎಂದು ಅಮ್ಮ ನನ್ನ ಕರೆದುಕೊಂಡು ಹಿಂದಿನ ದ್ವಾರದಿಂದ ಇಳಿಯಲು ಹೋದರು. ಬಹುಶಃ ಹಿಂದೆ ಇಳಿದು ಕಂಡಕ್ಟರ್ ನಮ್ಮ ಕಡೆ ನೋಡುವಷ್ಟರಲ್ಲಿ ಬಸ್ಸಿನ ಹಿಂದಿನಿಂದ ಹೊರಟು ಹೋಗುವುದು ಅವರ ಉದ್ದೇಶವಾಗಿತ್ತೆಂದು ನಾನು ಇವತ್ತು ಊಹಿಸುತ್ತೇನೆ. ನಾನೂ ಆದಷ್ಟು ಸದ್ದು ಮಾಡದಂತೆ ನಮ್ಮಮ್ಮನ ಉದ್ದೇಶವನ್ನು ಯಶಸ್ವಿಗೊಳಿಸಲು ನಡೆದೆ. ಹಿಂದಿನ ದ್ವಾರದಿಂದ ಇಳಿಯುತ್ತಿದ್ದಂತೆ ಆ ಕಂಡಕ್ಟರ್ ನಮ್ಮನ್ನು ಕಂಡೇ ತೀರಿದರು. ಜೋರಾಗಿ ಕೂಗುತ್ತಾ ಬಂದರು.
“ಏನಮ್ಮಾ, ಮಾನ ಇರೋ ಹೆಂಗಸಾ ನೀನು? ಹತ್ತು ಪೈಸೆಗೆ ನೀನು ಕದ್ದು ಓಡೋಗ್ತಿದ್ದೀಯಲ್ಲಾ?” ಎಂದು ಜೋರುಜೋರಾಗಿಯೇ ಕೂಗಾಡತೊಡಗಿದ್ದರು. ನಮ್ಮಮ್ಮ ಏನು ಹೇಳಿದಂತೆ ನನಗೆ ನೆನಪಿಲ್ಲ. ಬೆವರುತ್ತಿರುವ ಮುಖದಲ್ಲಿ ಅವರಿವರ ಮುಖ ನೋಡಿಕೊಂಡು ನಿಂತಿದ್ದರೆಂದು ಕಾಣುತ್ತದೆ. ನಾನು ಪೂರ್ತಿ ಅಮ್ಮನ ಸೊಂಟವನ್ನು ಹಿಡಿದುಕೊಂಡು ಮುಖವನ್ನು ಅವರ ಹೊಟ್ಟೆಯ ಭಾಗಕ್ಕೆ ಒತ್ತಿ ಹಿಡಿದಿದ್ದೆ ನಾನು ಜೋರಾಗಿ ಅಳಬಾರದೆಂದು. ನನ್ನ ಮುಖದ ಮೇಲೆ ನಮ್ಮಮ್ಮನ ಸೀರೆಯ ಸೆರಗು ಮುಸುಕಾಗಿದ್ದು ಬಿಸಿಲು ಬೀಳುತ್ತಿರಲಿಲ್ಲ. ಸೀರೆಯ ಕೆಂಪನೆಯ ಬೆಳಕು ನಾನು ಕಣ್ಣು ಬಿಟ್ಟಾಗ ಕಾಣುತ್ತಿತ್ತು.
ಪ್ರಾಮಾಣಿಕ ಮತ್ತು ನಿಷ್ಟುರಿ ಕಂಡಕ್ಟರ್ ಎಷ್ಟೊಂದು ಮಾತುಗಳನ್ನು ಆಡುತ್ತಿದ್ದು ಕಿವಿಗಳಿಗೆ ಅಪ್ಪಳಿಸುತ್ತಿತ್ತು. ಇದ್ದಕ್ಕಿದ್ದಂತೆ ಇನ್ನೊಂದು ಗಂಡು ಮತ್ತು ಗಡಸು ಧ್ವನಿ ಕಂಡಕ್ಟರ್ ಮಾತುಗಳನ್ನು ತುಂಡರಿಸಿ ಕೇಳಿಸಿತು.
“ಸಾಕು ನಿಲ್ಲಿಸಯ್ಯಾ? ನಿನಗೆ ಮಾನ ಇಲ್ಲವಾ? ಹತ್ತು ಪೈಸೆಗೆ ಒಂದು ಹೆಂಗಸನ್ನ ಬೀದಿಯಲ್ಲಿ ನಿಲ್ಲಿಸಿಕೊಂಡು ಇಷ್ಟು ಮಾತಾಡ್ತಿದ್ದೀಯಲ್ಲಾ? ತಗೋ” ಎಂದು ಅವರು ಎತ್ತಿ ಒಗೆದ ನಾಣ್ಯದ ಸದ್ದು ಕೇಳಿಸಿತು. ತಕ್ಷಣ ಸದ್ದಿನ ಕಡೆಗೆ ಕಣ್ಬಿಟ್ಟು ನೋಡಿದೆ. ಹತ್ತು ಪೈಸೆಯ ನಿಕ್ಕಲ್ಲಿನ ಟೊಣಪ ನಾಣ್ಯ.

ಅಲ್ಲಿಗೆ ನೆಮ್ಮದಿ. ಇನ್ನು ಈ ಕಂಡಕ್ಟರ್ ನಮ್ಮನ್ನು ಏನೂ ಮಾಡಲಾರ. ಬೈಯುವುದನ್ನು ನಿಲ್ಲಿಸಲೇ ಬೇಕು. ಸೆರಗಿನಿಂದ ಮುಖವನ್ನು ಹೊರಗೆ ತೆಗೆದೆ. ಅಮ್ಮನ ಕಡೆ ನೋಡಿದೆ. ಬೆವರು ಕಣ್ಣೀರು ಎಲ್ಲಾ ಬೆರೆತು ಆಗತಾನೇ ಮುಖ ತೊಳೆದುಕೊಂಡಿರುವಂತೆ ಕೆಂಪಗಾಗಿತ್ತು.ನಾಣ್ಯ ಎಸೆದುಕೊಟ್ಟವರ ಕಡೆಗೆ ನೋಡಿದೆ. ಅಲ್ಲಿ ಎಷ್ಟೊಂದು ಜನ ಗಂಡಸರಿದ್ದರು. ಯಾರೆಂದು ಗುರುತು ಹಿಡಿಯಲಾಗಲಿಲ್ಲ. ನಂತರ ಅವರ್ಯಾರೂ ಏನೂ ಮಾತಾಡಲಿಲ್ಲ. ಅಮ್ಮ ಅವರನ್ನು ನೋಡಿದ್ದಿರಬಹುದು. ಆದರೆ ಅವರೂ ಏನೂ ಮಾತಾಡಲಿಲ್ಲ. ನನ್ನ ಕೈ ಹಿಡಿದುಕೊಂಡು ಮುಂದೆ ನಡೆದರು. ಇನ್ನೂ ಒಂದಷ್ಟು ದೂರ ನಾವು ನಡೆದು ಸಾಗಬೇಕಿತ್ತು. ಅಮ್ಮನ ಮುಖದಲ್ಲಿ ಮಾನ ಕಳೆದುಕೊಂಡಿರುವ ಕಳೆಯೇ ಇತ್ತು. ಒಂದು ವೇಳೆ ಸಂತೋಷ ಕಂಡಿದ್ದರೆ ನಾನು ಕೇಳುತ್ತಿದ್ದೆನೋ ಏನೋ, “ಅಮ್ಮಾ, ಯಾರು ಹತ್ತು ಪೈಸೆ ಕೊಟ್ಟಿದ್ದು” ಇತ್ಯಾದಿಗಳನ್ನೆಲ್ಲಾ ಮಾತಾಡಿಕೊಂಡು ಮನೆಯ ದಾರಿಯ ಶ್ರಮ ಮರೆಯಬಹುದಿತ್ತು. ಆದರೆ ಅವರ ಧುಮುಧುಮುಗುಟ್ಟುವ ಮುಖದಿಂದ ಯಾವ ಮಾತುಗಳೂ ಹೊರಡುವುದಿಲ್ಲ ಎಂದು ಸುಮ್ಮನೆ ನಡೆಯುತ್ತಿದ್ದೆ. ಹೊಟ್ಟೆ ಹಸಿಯುತ್ತಿತ್ತು. ಸುಸ್ತಾಗಿತ್ತು. ಕಾಲು ನೋವು ಎನ್ನಲಿಲ್ಲ. ಎತ್ತಿಕೋ ಎಂದೂ ಹೇಳಲಿಲ್ಲ. 

LEAVE A REPLY

Please enter your comment!
Please enter your name here