ಇರ್ಷಾದ್ ವೇಣೂರು

ನಾನು ಮಲಯಾಳಂ ಚಿತ್ರಗಳನ್ನು ಹೆಚ್ಚು ಇಷ್ಟಪಡೋದಕ್ಕೆ ಒಂದು ಕಾರಣ ಅವರಲ್ಲಿರುವ ಕ್ರಿಯೇಟಿವಿಟಿಗೆ. ನಮ್ಮ ದೇಶದಲ್ಲಿ ಇತರ ಸಿನಿಮಾ ಇಂಡಸ್ಟ್ರೀಗಳನ್ನು ಗಮನಿಸಿದರೆ ಒಂದು ಸಣ್ಣ ಎಳೆಯನ್ನು ಇಟ್ಟುಕೊಂಡು ಸಾಮಾನ್ಯನೂ ಇಷ್ಟಪಡುವಾಗೆ ಮಾಡುವಂತಹ ಸಿನಿಮಾಗಳನ್ನು ಕೊಡೋದು ನನ್ನ ಮಟ್ಟಿಗೆ ಮಲಯಾಳಂ ಇಂಡಸ್ಟಿ ಮಾತ್ರ ಎಂಬುವುದು ನನ್ನ ಅಭಿಪ್ರಾಯವಷ್ಟೇ. ಇಷ್ಟಪಡಲು ಇನ್ನೊಂದು ಕಾರಣ ಸಿನಿಮಾದ ಮೂಲಕ ಸಮಾಜಕ್ಕೆ ನೀಡುವಂತಹ ಸಂದೇಶ. ಈ ಹಿಂದೆ ಬಂದಂತಹಾ ಕುಂಬಳಂಗಿ ನೈಟ್ಸ್, ವಿಕೃತಿ, ಸುಡಾನಿ ಫ್ರಮ್ ನೈಜೀರಿಯಾ ಇತ್ಯಾದಿ ಚಿತ್ರಗಳು ಇದಕ್ಕೆ ಉದಾಹರಣೆಯಷ್ಟೇ…
ಸಮಯ ಸಿಕ್ಕಾಗಲೆಲ್ಲ ಸಿನಿಮಾ ನೋಡಿ, ಇಷ್ಟವಾದರೆ ಅದರ ಬಗ್ಗೆ ಒಂದೆರಡು ಮಾತು ಬರೆಯುವಂತಹ ಹವ್ಯಾಸ. ಆ ಮೂಲಕ ಚಿತ್ರವನ್ನು ಮಾಡಿದವರಿಗೆ ನಮ್ಮಿಂದಾಗುವ ಸಣ್ಣ ಪ್ರಚಾರವಷ್ಟೇ. 

ಚಿತ್ರದ ಪ್ರಮುಖ ಪಾತ್ರವೇ ಹೆಲೆನ್. ಬಿಎಸ್ಸಿ ನರ್ಸಿಂಗ್ ಪದವಿ ಮಾಡಿ, ಇಂಗ್ಲಿಷ್ ಭಾಷೆ ಕಲಿತು ಕೆನಡಾದಲ್ಲಿ ಹೋಗಿ ನರ್ಸಿಂಗ್ ಕೆಲಸಕ್ಕೆ ಸೇರಬೇಕೆಂಬ ಮಹದಾಸೆ ಇರುವ ಈ ಯುವತಿಗೆ, ಮನೆಯಲ್ಲಿ ಎಲ್ ಐ ಸಿ ಯಲ್ಲಿ ಏಜೆಂಟ್ ಆಗಿ ದುಡಿಯುವ ಅಪ್ಪ ಮಾತ್ರ ಇರುವ ಕುಟುಂಬ ಈಕೆಯದು. ತಾಯಿಯನ್ನು ಕಳೆದುಕೊಂಡಿರುವ ಹೆಣ್ಣು ಬೇರೆ. ಅಪ್ಪನ ದುಡಿಮೆ ಕೆನಡಾದ ಆಸೆಗೆ ಆರ್ಥಿಕ ನೆರವು ಸಾಕಾಗದ್ದಕ್ಕೆ ಮಾಲ್ ಒಂದರ ಚಿಕನ್ ಹಬ್ ನಲ್ಲಿ ಪಾರ್ಟ್ ಟೈಮ್ ಉದ್ಯೋಗ. ಸದಾ ಚುರುಕು ಇರುವ ಹುಡುಗಿ. ಜೊತೆಗೆ ಒಬ್ಬ ಪ್ರಿಯಕರ. ಆತ ಅನ್ಯಧರ್ಮದವ ಅಲ್ಲದೆ, ನಿರುದ್ಯೋಗಿ ಬೇರೆ..
ಕೊನೆಗೂ ಚೆನ್ನೈನಲ್ಲಿ ಕೆಲಸ ಸಿಕ್ಕ ಖುಷಿಯಲ್ಲಿ ಗೆಳೆಯರ ಜೊತೆಗೆ ಸ್ವಲ್ಪ ಕುಡಿಯುತ್ತಾನೆ.ಬಳಿಕ ಪ್ರಿಯತಮೆಯನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾನೆ. ಚೆಕ್ಕಿಂಗ್ ಮಾಡುತ್ತಿದ್ದ ಪೊಲೀಸಿನವ ಹುಡುಗಿಯ ಅಪ್ಪನನ್ನು ಪೊಲೀಸ್ ಸ್ಟೇಷನ್ ಗೆ ಕರೆದು, ಅವಳಿಗೆ ಪ್ರಿಯಕರನಿರುವ ವಿಷಯವನ್ನು ತಿಳಿಯಪಡಿಸಿದಾಗ ಬೇಸರಗೊಳ್ಳುವ ಅಪ್ಪ ಆ ರಾತ್ರಿಯಿಂದ ಮಾತು ಬಿಡುತ್ತಾನೆ. ಮಗಳು ಮಾತನಾಡಲು ಪ್ರಯತ್ನಿಸಿದರೂ ಅಪ್ಪ ಮಾತನಾಡುವುದಿಲ್ಲ. ಕೆನಡಾಕ್ಕೆ ಬೇಗ ಹೋಗುವ ವ್ಯವಸ್ಥೆ ಮಾಡಲು ಮುಂದಾಗುತ್ತಾನೆ. ಸಪ್ಪೆ ಮೋರೆಯಿಂದ ಚಿಕನ್ ಹಬ್ ನ ಕೆಲಸಕ್ಕೆ ಹೋಗುವ ಮಗಳು ಹೆಲೆನ್, ರಾತ್ರಿಯಾದರೂ ಮನೆಗೆ ಬಾರದಾದಾಗ ಚಿಂತಾಕ್ರಾಂತನಾಗುತ್ತಾನೆ ಅಪ್ಪ. ಅದೇ ವೇಳೆ ಅಂದೇ ಚೆನ್ನೈಗೆ ಕೆಲಸಕ್ಕೆಂದು ಪ್ರಿಯಕರ ಹೊರಡುತ್ತಾನೆ. ಕೆಲಸಕ್ಕೆ ಮಾಲ್ ಗೆ ಹೋದ ಮಗಳು ಮಾಲ್ ನಿಂದ ಹೊರಬಂದ ಹಾಗೆ ಫಿಂಗರ್ ಪ್ರಿಂಟ್ ನಲ್ಲಿ ದಾಖಲಾಗಿದ್ದರೂ ಮನೆಗೆ ತಲುಪದ್ದರಿಂದ ತಂದೆ ಪೊಲೀಸರಿಗೆ ದೂರು ನೀಡುತ್ತಾನೆ. ಮಗಳು  ಕಾಣೆಯಾದ ಬಳಿಕ ನಡೆಯುವ ಘಟನೆ ಹಾಗೂ ಬಳಿಕ ನಡೆಯುವ ಬೆಳವಣಿಗೆಯ ರೋಚಕತೆಯೇ ಹೆಲೆನ್ ಚಿತ್ರದ ಮುಖ್ಯ ವಸ್ತು. ಚಿತ್ರದಲ್ಲಿ ಮಗಳು ಹೆಲೆನ್ ಪೌಲ್ ಪಾತ್ರದಲ್ಲಿ ಉದಯೋನ್ಮುಖ ನಟಿ ಅನ್ನಾ ಬೆನ್, ಅಪ್ಪನ ಪಾತ್ರದಲ್ಲಿ ಲಾಲ್, ಪ್ರಿಯಕರನ ಪಾತ್ರದಲ್ಲಿ ನೋಬಲ್ ಬಾಬು ತೋಮಸ್, ಎಸ್ ಐ ನ ಪಾತ್ರದಲ್ಲಿ ಅಜು ವರ್ಗಿಸ್, ಸರ್ಕಲ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಬಿನು ಪಪ್ಪು, ವಿನೀತ್ ಶ್ರಿನಿವಾಸನ್, ಸೆಕ್ಯೂರಿಟಿ ಗಾರ್ಡ್ ನ ಪಾತ್ರದಲ್ಲಿ ಜಯರಾಜ್ ಸೇರಿದಂತೆ ಮತ್ತಿತರರು ಅಭಿನಯಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.


ಮಾಥುಕುಟ್ಟಿ ಕ್ಸೇವಿಯರ್ ನಿದೇರ್ಶಕರಾಗಿರುವ ಈ ಚಿತ್ರವನ್ನು, ವಿನೀತ್ ಶ್ರಿನಿವಾಸನ್ ನಿರ್ಮಾಪಕರಾಗಿದ್ದಾರೆ. ಸಂಗೀತಕ್ಕೆ ಶಾನ್ ರಹ್ಮಾನ್ ಸಹಕರಿಸಿದ್ದಾರೆ.ಮಲಯಾಳಂ ಅಲ್ಲದೇ, ಭಾರತೀಯ ಚಿತ್ರರಂಗಕ್ಕೆ ಹೆಲೆನ್ ಚಿತ್ರವು ತನ್ನದೇ ಆದ ಕೊಡುಗೆಯನ್ನು ನೀಡಿದೆ. ಎಲ್ಲರೂ ನೋಡಲೇಬೇಕಾದ ಒಂದು ಕೌಟುಂಬಿಕ ಚಿತ್ರವೂ ಹೌದು.

LEAVE A REPLY

Please enter your comment!
Please enter your name here