ಹುಚ್ಚು ಮನಸ್ಸಿನ ಸಾವಿರ ಮುಖಗಳು 11
- ಯೋಗೀಶ್ ಮಾಸ್ಟರ್, ಬೆಂಗಳೂರು
ಮನುಷ್ಯನ ಪರಾವಲಂಬತನದ ಬಗೆಗಳನ್ನು ಗಮನಿಸಬೇಕು. ಒಂದು ಸ್ವಾಭಾವಿಕವಾದ ಪರಾವಲಂಬತನ. ಇದು ನೈಸರ್ಗಿಕ. ತನ್ನ ಜೈವಿಕ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಇಡೀ ಸೃಷ್ಟಿಯ ಜೀವರಾಶಿಗಳೆಲ್ಲಾ ಒಂದನ್ನೊಂದು ಅವಲಂಬಿಸಿದೆ. ಇನ್ನೊಂದು ವ್ಯಾವಹಾರಿಕ ಪರಾವಲಂಬತನ. ಇದು ಕೂಡಾ ಸಾಮಾಜಿಕ ಪ್ರಾಣಿಯಾಗಿರುವ ಸಂಘಜೀವಿ ಮನುಷ್ಯನು ಮಾಡಿಕೊಂಡಿರುವಂತಹ ವ್ಯವಸ್ಥೆಯಲ್ಲಿ ಸ್ವಾಭಾವಿಕವೇ. ಕಚ್ಛಾವಸ್ತುಗಳನ್ನು ಉತ್ಪಾದನೆ ಮಾಡುವವನು, ಅವನನ್ನು ಆಧರಿಸಿ ಸಾಮಾಗ್ರಿಗಳನ್ನು ಸಿದ್ಧ ಮಾಡುವವನು, ಅದನ್ನು ತರುವಂತಹ ಸಗಟು ಮಾರಾಟಗಾರ, ಕೊಳ್ಳುವವನು, ಉಪಯೋಗಿಸುವವನು; ಹೀಗೆ ವಾಣಿಜ್ಯ, ಶಿಕ್ಷಣ, ವೈದ್ಯಕೀಯ, ರಾಜಕೀಯ ಯಂತ್ರಗಳನ್ನು ನಡೆಸಲು ಬೇಕಾದ ರಾಜಕಾರಣಿಗಳು, ಅಧಿಕಾರಿಗಳು, ನಿರ್ದೇಶಕರು, ಗುಮಾಸ್ತರು; ಹೀಗೆ ಮನುಷ್ಯನ ಅನೇಕಾನೇಕ ಕೆಲಸಗಳು ನಡೆಯಲು, ಅಗತ್ಯವಾದ ಉತ್ಪಾದನೆಗಳನ್ನು ಮಾಡಲು, ತಮ್ಮ ಭೌತಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಪರಸ್ಪರ ಅವಲಂಬನೆ ಹೊಂದಿರಲೇ ಬೇಕು.
ಮೂರನೆಯದು ಮಾನಸಿಕವಾದ ಪರಾವಲಂಬತನ. ಇದು ಮೇಲಿನೆರಡಕ್ಕಿಂತ ಅತ್ಯಂತ ಸಂಕೀರ್ಣವಾದದ್ದು. ಇದರಲ್ಲಿ ವ್ಯಕ್ತಿಯು ತನ್ನ ಆನಂದಕ್ಕಾಗಿ, ಸಮಾಧಾನಕ್ಕಾಗಿ, ತೃಪ್ತಿಗಾಗಿ, ಆಸೆಗಳನ್ನು ನೆರವೇರಿಸಿಕೊಳ್ಳುವುದಕ್ಕಾಗಿ, ಭಯದಿಂದ ಮುಕ್ತರಾಗುವುದಕ್ಕಾಗಿ ಇತರರನ್ನು ಅವಲಂಬಿಸುವನು. ಇಂತಹ ಅಗತ್ಯಗಳನ್ನು ಪೂರೈಸುವ ಸಲುವಾಗಿಯೇ ಕುಟುಂಬ ಎನ್ನುವ ವ್ಯವಸ್ಥೆಗೆ ಮನುಷ್ಯ ಬಹಳ ಒತ್ತು ನೀಡುವುದು. ಮಾನಸಿಕ ಅವಲಂಬನದಲ್ಲಿ ಭೌತಿಕ, ಮಾನಸಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಪೂರೈಸಿಕೊಳ್ಳುವ ನಿರೀಕ್ಷೆ ಮತ್ತು ಅಪೇಕ್ಷೆಗಳ ಆಸೆಗಣ್ಣುಗಳಲ್ಲೇ ಒಬ್ಬರನ್ನೊಬ್ಬರು ನೋಡುತ್ತಿರುವರು. ಸಂಬಂಧಗಳು ಎನ್ನುವ ಛದ್ಮವೇಷಗಳನ್ನು ತೊಟ್ಟಿರುವ ಆಂತರಿಕ ಭಿಕ್ಷುಕರು ಈ ಮನುಷ್ಯರು. ಯಾವಾಗ ಒಂದು ವ್ಯಕ್ತಿಯ ಅಪೇಕ್ಷೆ ಮತ್ತು ನಿರೀಕ್ಷೆಯನ್ನು ಯಾವುದೇ ಸಂಬಂಧದೊಡನೆ ಗುರುತಿಸಿಕೊಂಡಿರುವ ವ್ಯಕ್ತಿಯು ಪೂರೈಸದೇ ಹೋದರೆ ನಿರಾಸೆ, ಹತಾಶೆ ಮತ್ತು ಕೋಪ ಉಂಟಾಗುತ್ತದೆ. ಇಲ್ಲಿಯೂ ಶಕ್ತಿ ಪ್ರದರ್ಶನವಾಗುತ್ತದೆ. ಬಲಾಬಲಗಳ ಸಂಘರ್ಷವಾಗುತ್ತದೆ.
ಮನುಷ್ಯರಲ್ಲಿ ಸಮಾನತೆ ಎಂಬುದು ಒಂದು ಆಶಯ, ಒಡಂಬಡಿಕೆಯ ಕನಸು. ಆದರೆ ಮನುಷ್ಯನ ಮಾನಸಿಕ ವಾಸ್ತವದಲ್ಲಿ ಒಬ್ಬ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಗಿಂತ ಬಲದಲ್ಲಿ ಅಧಿಕನೂ, ಮತ್ತೊಬ್ಬನನ್ನು ಅಧೀನದಲ್ಲಿಟ್ಟುಕೊಳ್ಳಲೂ ಸಮರ್ಥನೂ ಆಗಿರಬೇಕೆಂಬ ಬಯಕೆ ಉಳ್ಳವನಾಗಿರುತ್ತಾನೆ. ಈ ಬಯಕೆಯು ಹಲವು ಸಂಬಂಧಗಳಲ್ಲಿ ಈಡೇರುತ್ತದೆ. ಹಲವು ಸಂಬಂಧಗಳಲ್ಲಿ ಈಡೇರುವುದಿಲ್ಲ. ಈಡೇರಿದಾಗ ಗರ್ವವೂ, ಈಡೇರದಿದ್ದಾಗ ನಿರಾಶನಾಗುತ್ತಾನೆ ಅಥವಾ ವ್ಯಗ್ರನಾಗುತ್ತಾನೆ.
ಗಂಡ ಹೆಂಡಿರ ನಡುವಿನ ಸಂಘರ್ಷಗಳನ್ನು ಗಮನಿಸಿ. ಇಬ್ಬರಿಗೂ ಪರಸ್ಪರ ಅಪೇಕ್ಷೆ ಮತ್ತು ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಗಂಡ ಅವಳ ಅಪೇಕ್ಷೆ ಮತ್ತು ನಿರೀಕ್ಷೆಯನ್ನು ಪೂರೈಸುವುದು ತನ್ನ ಕರ್ತವ್ಯ ಎನ್ನುವುದಕ್ಕಿಂತ ಅವಳು ತನ್ನ ಅಪೇಕ್ಷೆ ಮತ್ತು ನಿರೀಕ್ಷೆಯನ್ನು ಪೂರೈಸುವಂತೆ ಒತ್ತಾಯಿಸುವುದು ತನ್ನ ಅಧಿಕಾರ ಎಂದು ಭಾವಿಸುತ್ತಾನೆ. ಅದೇ ರೀತಿ ಹೆಂಡತಿಯ ಕಡೆಯಿಂದಲೂ ಆಗಬಹುದು. ಇಲ್ಲಿ ವ್ಯಕ್ತಿಗಳು ಪರಸ್ಪರ ತೃಪ್ತಿಯನ್ನು ನೀಡುವುದರ ಬದಲು ನಿರಾಶೆ ಮತ್ತು ಅತೃಪ್ತಿಯನ್ನು ಹಂಚಿಕೊಂಡು ಅದನ್ನು ಹೇಗಾದರೂ ಪಡೆದುಕೊಳ್ಳಲು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಯಾವಾಗ ಪರ್ಯಾಯವಾಗಿಯೂ ತಮ್ಮ ವ್ಯಕ್ತಿಗತ ಅಪೇಕ್ಷೆ ಮತ್ತು ನಿರೀಕ್ಷೆಗಳಿಗೆ ಸೂಕ್ತವಾದಂತಹ ಪರಿಹಾರ ಅಥವಾ ತೃಪ್ತಿ ಸಿಗದೇ ಹೋದಾಗ ಸೇಡಿನ ಭಾವ ಹುಟ್ಟಿಕೊಳ್ಳುತ್ತದೆ. ಈ ಸೇಡನ್ನು ತೀರಿಸಿಕೊಳ್ಳಲು ನಾನು ಗಂಡ, ನಾನು ಹೆಂಡತಿ, ನಾನು ಹೀಗೆ, ಹಾಗೆ, ನಾನು ಅಷ್ಟು ಮಾಡಿದ್ದೇನೆ, ಇಷ್ಟು ಮಾಡುತ್ತೇನೆ, ನನ್ನ ಸಾಧನೆ ಇಷ್ಟು, ನನ್ನ ಸ್ಥಾನಮಾನ ಇಂತಹದು; ಹೀಗೆಲ್ಲಾ ತನ್ನ ಅಧಿಕಾರ ಮತ್ತು ಎತ್ತರಿತ ಸ್ಥಾನವನ್ನು ತೋರ್ಪಡಿಸುತ್ತಾ ನೀನು ಎಂದೆಂದಿಗೂ ಕಡಿಮೆಯೇ ಎಂದು ಮತ್ತೊಂದು ವ್ಯಕ್ತಿಗೆ ಪ್ರದರ್ಶಿಸಲು ಪ್ರಯತ್ನಿಸುತ್ತಿರುತ್ತಾರೆ.
ಗಂಡನು ದೈಹಿಕವಾಗಿ ಮತ್ತು ಅಧಿಕಾರದ ವಿಷಯದಲ್ಲಿ ಶಕ್ತಿಶಾಲಿಯಾಗಿದ್ದಾನೆ ಎಂದು ಹೆಂಡತಿಗೆ ತೋರಿದಾಗ ಅವನನ್ನು ಮಣಿಸಲು ತಾನೆಷ್ಟು ದುಃಖಿತೆ, ಆತನಿಂದ ಶೋಷಿತಳಾಗಿದ್ದೇನೆ ಎಂಬುದನ್ನು ಪ್ರಚಾರ ಮಾಡುವ ಮೂಲಕ ಅವನ ಶಕ್ತಿಯನ್ನು ಇತರರಿಂದ ದಮನ ಮಾಡಿಸಲು ಯತ್ನಿಸುತ್ತಾಳೆ. ಹಾಗೆಯೇ ವೈಸ್ವರ್ಸಾ ಕೂಡಾ ಇರಬಹುದು.
ಹಾಗೆಯೇ ಅಬಲೆಯರಾದ ಹೆಣ್ಣುಮಕ್ಕಳ ರಕ್ಷಣೆಗೆಂದು ಇರುವ ಕಾಯಿದೆ ಮತ್ತು ಕಾನೂನು ವ್ಯವಸ್ಥೆಗಳನ್ನು ತನ್ನ ಹಟಕ್ಕೆ ಮಣಿಯದ ಗಂಡನನ್ನು ನಿರ್ಭಂಧಿಸಲು ಅಥವಾ ತನ್ನ ಹಟ ಸಾಧಿಸಲು ಅದೆಷ್ಟು ಜನ ಹೆಣ್ಣುಮಕ್ಕಳು ಉಪಯೋಗಿಸಿಕೊಂಡಿಲ್ಲ!
ಕಾನೂನಿನ ಚೌಕಟ್ಟಿನಲ್ಲಿರುವ ಯಾವುದೇ ವ್ಯವಸ್ಥೆಯನ್ನು ಮನುಷ್ಯ ತನ್ನ ಹಟಮಾರಿತನದ ಸಾಧನೆಗೆ ದುರ್ಬಳಕೆ ಮಾಡಿಕೊಳ್ಳಲು ಸಾಕಷ್ಟು ಸಾಧ್ಯತೆಗಳಿವೆ. (ಮನೋತಾತ್ವಿಕವಾಗಿ ಮತ್ತು ಮನೋವೈಜ್ಞಾನಿಕವಾಗಿ ಅಪರಾಧ ಮತ್ತು ಕಾನೂನು ವ್ಯವಸ್ಥೆಯನ್ನು ವಿಶ್ಲೇಷಿಸುವ ಬಗ್ಗೆ ವಿವರವಾಗಿ ಮುಂದಿನ ಅಧ್ಯಾಯಗಳಲ್ಲಿ ಬರುವುದು.)
ನಾನಿಲ್ಲಿ ಗಂಡ ಹೆಂಡತಿ ಉದಾಹರಣೆ ಕೊಟ್ಟೆ ಅಷ್ಟೇ. ಇದು ತಂದೆ ಮತ್ತು ಮಕ್ಕಳಲ್ಲಿ, ಅಣ್ಣ ತಮ್ಮಂದಿರಲ್ಲಿ, ಅಕ್ಕ ತಂಗಿಯರಲ್ಲಿ, ಸ್ನೇಹಿತರಲ್ಲಿ, ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ, ರಾಜಕಾರಣಿಗಳಲ್ಲಿ, ಅಷ್ಟೇಕೆ ಅಕಸ್ಮಾತ್ತಾಗಿ ಎದುರಾಗುವ ದಾರಿಹೋಕರಲ್ಲಿ; ಹೀಗೆ ಎಲ್ಲಾ ಬಗೆಯ ಸಂಬಂಧಗಳಲ್ಲಿ ಮತ್ತು ಸಂಬಂಧವೇ ಇಲ್ಲದ ಅಪರಿಚಿತರಲ್ಲೂ ಕೂಡಾ ನಡೆಯುತ್ತಿರುತ್ತದೆ.
ಒಟ್ಟಾರೆ ವ್ಯಕ್ತಿಯು ತನ್ನ ಅಪೇಕ್ಷೆಯನ್ನು ಇತರರು ತೃಪ್ತಿಗೊಳಿಸಬೇಕು ಎಂಬ ನಿರೀಕ್ಷೆಯನ್ನು ಹೊಂದಿರುತ್ತಾನೆ. ಇದರ ಅತೃಪ್ತಿಯ ಉತ್ಪನ್ನಗಳಾಗಿ ಸಂಘರ್ಷ, ಸೇಡು, ಅಧಿಕಾರ ಪ್ರದರ್ಶನ, ಬಲಾಬಲ ಪ್ರದರ್ಶನ, ತಮ್ಮ ಒಳ್ಳೆಯತನ ಮತ್ತು ಮತ್ತೊಬ್ಬರ ನೀಚತನದ ಪ್ರದರ್ಶನ; ಎಲ್ಲಾ ನಡೆಯುತ್ತಿರುತ್ತದೆ. ತನ್ನ ಒಳ್ಳೆಯತನದ ಮಾನದಂಡ ಮತ್ತೊಬ್ಬರ ನೀಚತನವಾಗುವುದು ಈಗಲೇ.
ಇನ್ನೊಂದು ತಮಾಷೆ ಎಂದರೆ, ಇಬ್ಬರ ನಡುವೆ ಅನ್ಯೋನ್ಯತೆ ಇದೆ ಎಂದರೆ ಅಥವಾ ಸಂಘರ್ಷವಿಲ್ಲದ ಸಂಬಂಧ ಅದಾಗಿದೆಯೆಂದರೆ ಒಬ್ಬರು ಮತ್ತೊಬ್ಬರ ಅಧಿಕಾರವನ್ನು ಅಥವಾ ಹೆಚ್ಚುಗಾರಿಕೆಯನ್ನು ಮನ್ನಿಸಿಬಿಟ್ಟಿರುತ್ತಾರೆ. ತಮ್ಮಲ್ಲಿರುವ ಅಪೇಕ್ಷೆ ಮತ್ತು ನಿರೀಕ್ಷೆಗಳನ್ನು ತಾವು ಒಪ್ಪಿರುವ ವ್ಯಕ್ತಿಯ ಯಜಮಾನ್ಯದ ಅಧಿಕಾರಕ್ಕೆ ತಕ್ಕಂತೆ ಹೊಂದಿಸಿಕೊಂಡುಬಿಟ್ಟಿರುತ್ತಾರೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ತಮ್ಮ ಗಂಡನನ್ನು ‘ಯಜಮಾನರು’ ಎನ್ನುವುದು ಆಕಸ್ಮಿಕವೇನಲ್ಲ. ಹಿಂದೆ (ಕೆಲವು ಕಡೆ ಈಗಲೂ) ಗಂಡನ ಯಜಮಾನಿಕೆಯನ್ನು ಒಪ್ಪಿ, ಅವನಿಗೆ ಮತ್ತು ಅವನ ಮನೆಯವರಿಗೆ ತಗ್ಗಿಬಗ್ಗಿ ನಡೆಯುವ ಪಾಠವನ್ನೇ ‘ಕೊಟ್ಟ ಹೆಣ್ಣನ್ನು ಕುಲಕ್ಕೆ ಹೊರಗು’ ಮಾಡಿಯೇ ಹೇಳಿಕೊಡಲಾಗುತ್ತದೆ. ಸಾಮಾಜಿಕ ಪರಿಸ್ಥಿತಿಯು ಇದಾಗಿರುವ ಕಾರಣದಿಂದಲೇ ಆಡಳಿತ ವ್ಯವಸ್ಥೆಯು ಅಬಲೆಯಾಗಿರುವ ಹೆಣ್ಣುಗಳ ನೆರವಿಗೆಂದು ವರದಕ್ಷಿಣೆ ಕಿರುಕುಳ, ಗಂಡನ ಮತ್ತು ಅವನ ಮನೆಯವರ ಚಿತ್ರಹಿಂಸೆಗಳನ್ನು ಮಟ್ಟ ಹಾಕಲು ಶಿಕ್ಷಾರ್ಹ ಅಪರಾಧಗಳನ್ನಾಗಿ ಪರಿಗಣಿಸುವ ಕಾಯಿದೆಗಳನ್ನು ತಂದರು. ಅದನ್ನು ಹಟಮಾರಿ ಹೆಂಗಸರು ತಮ್ಮ ಗಂಡನ ಮತ್ತು ಅವನ ಮನೆಯವರನ್ನು ಮಣಿಸಲು ದುರ್ಬಳಕೆಯನ್ನೂ ಮಾಡಿಕೊಂಡರು. ಒಟ್ಟಾರೆ ತನ್ನ ಸ್ವಾಮಿತ್ವದ ಅಧಿಕಾರ ಸ್ಥಾಪಿಸಲು ಮನುಷ್ಯ ಯಾವ್ಯಾವ ವ್ಯವಸ್ಥೆಗಳನ್ನು, ವಿಷಯಗಳನ್ನು, ಅಸ್ತ್ರಗಳನ್ನು ಬಳಸಿಕೊಳ್ಳಬೇಕೋ ಅದನ್ನೆಲ್ಲಾ ಬಳಸಿಕೊಳ್ಳುತ್ತಾನೆ. ಇದರಲ್ಲಿ ಹೆಣ್ಣು ಗಂಡುಗಳ ತಾರತಮ್ಯವಿಲ್ಲ. ಆದರೆ ಸಾಮಾಜಿಕ ವ್ಯವಸ್ಥೆಯಲ್ಲಿ ಯಾರು ತಮ್ಮ ಯಜಮಾನಿಕೆಯ ಮನಸ್ಥಿತಿಯನ್ನು ಪ್ರದರ್ಶಿಸಬಹುದು, ಪ್ರಯೋಗಿಸಬಹುದು ಎಂಬ ವಿಷಯದಲ್ಲಿ ಪರೋಕ್ಷವಾದ ತಾರತಮ್ಯ ವ್ಯಾಪಕವಾಗಿ ಮಾಡುತ್ತದೆ.
ಈ ಸ್ವಾಮಿತ್ವದ ಮನಸ್ಥಿತಿ ಆಕ್ರಮಣಕಾರಿ ಪ್ರವೃತ್ತಿಯು ವ್ಯಕ್ತಿ ವ್ಯಕ್ತಿಗಳ ನಡುವೆ ಮಾತ್ರವಲ್ಲ ಸಮಾಜದಲ್ಲಿಯೂ ಕೂಡಾ ಸಾಮುದಾಯಿಕವಾಗಿಯೂ ಪ್ರಕಟಗೊಳ್ಳುತ್ತಿರುತ್ತದೆ. ಅದೇ ಒಂದು ಸಾಮಾಜಿಕ ವ್ಯವಸ್ಥೆಯಾಗಿ ರೂಪುಗೊಳ್ಳುತ್ತದೆ.
ವಿಶ್ವದ ವಿವಿಧ ಭಾಗಗಳಲ್ಲಿ ಜಮೀನುದಾರರಿಗೆ ಜೀತದಾಳುಗಳು, ಮೇಲ್ಜಾತಿ ಎನಿಸಿಕೊಂಡವರಿಗೆ ಕೆಳವರ್ಗದ ಜಾತಿಯವರು, ಶ್ರೀಮಂತರಿಗೆ ಬಡವರು ಕೂಡಾ ಇದೇ ರೀತಿಯಲ್ಲಿ ತಮ್ಮ ಅಪೇಕ್ಷೆ ಮತ್ತು ನಿರೀಕ್ಷೆಗಳನ್ನು ಹೊಂದಿಸಿಕೊಂಡುಬಿಟ್ಟರು. ಈ ಉಳ್ಳವರ, ಮೇಲ್ಜಾತಿಯವರ ಶಕ್ತಿಯ ಮುಂದೆ ತಮ್ಮ ನಿರ್ಬಲತೆಯನ್ನು ಒಪ್ಪಿಕೊಂಡು ಪ್ರತಿಭಟಿಸಲೂ ಕೂಡ ಹೆದರಿಕೊಂಡು ಬಡವನ ಕೋಪ ದವಡೆಗೆ ಮೂಲ ಎಂದು ನಿರ್ಧರಿಸಿಬಿಟ್ಟಿದ್ದರು. ಹಾಗಾಗಿ ಅಸ್ಪೃಷ್ಯತೆ, ವರ್ಣಬೇಧ, ಸಾಮಾಜಿಕ ಅಸಮಾನತೆ, ಶ್ರೇಣೀಕೃತವಾಗಿ ಸಮಾಜದ ವಿಂಗಡಣೆ; ಇವೆಲ್ಲಾ ಆಗಿದ್ದು.
ಸರೀ, ಇವೆಲ್ಲಾ ಬರೀ ಸಾಮಾಜಿಕ ಪಿಡುಗುಗಳು ಮಾತ್ರವಲ್ಲ. ಬಂಡವಾಳಶಾಹಿಯ ದೌರ್ಜನ್ಯ, ಅಸ್ಪೃಶ್ಯತೆ, ಆಳುವ ದಣಿಗಳ ದರ್ಪ, ಅಸಮಾನತೆ, ಶ್ರೇಣೀಕೃತವಾಗಿ ವ್ಯಕ್ತಿಗಳ ಮತ್ತು ಸಂಬಂಧಗಳ ವಿಂಗಡಣೆ ಕುಟುಂಬಗಳಲ್ಲಿ ಕೂಡಾ ಇರುತ್ತದೆ. ಆದರೆ ವ್ಯಕ್ತಿಗಳಲ್ಲಿ ಅವೆಲ್ಲವೂ ಬಹಳ ಸೂಕ್ಷ್ಮರೂಪದಲ್ಲಿರುತ್ತದೆ. ಸಮೂಹಗಳದ್ದು ಮನೆಯ ಹೊರಗೆಯಾದ್ದರಿಂದ ಕಾಣುತ್ತವೆ. ಇವು ಮನೆಯೊಳಗೆ, ಮನದೊಳಗೆ ಆದ್ದರಿಂದ ‘ಅವರಿರುವುದೇ ಹೀಗೆ’ ಎಂಬ ತೀರ್ಮಾನಕ್ಕೆ ಬಂದು ಸಂಬಂಧಗಳೊಡನೆ ಇರಲೇ ಬೇಕಾದ ಪರಿಸ್ಥಿತಿಯೊಡನೆ ರಾಜಿ ಮಾಡಿಕೊಳ್ಳುತ್ತಾರೆ.
ಇಬ್ಬರು ವ್ಯಕ್ತಿಗಳು ತಮ್ಮ ಸಂಬಂಧಗಳಲ್ಲಿ ಸಾಮರಸ್ಯ ಸಾಧಿಸಬೇಕೆಂದರೆ ಒಂದೋ ರಾಜಿ ಮಾಡಿಕೊಳ್ಳುತ್ತಾರೆ ಅಥವಾ ತಮ್ಮ ಅಧೀನತೆಯನ್ನು ಒಪ್ಪಿಕೊಂಡುಬಿಟ್ಟಿರುತ್ತಾರೆ.
ಒಬ್ಬರನ್ನೊಬ್ಬರು ಅಧೀನಗೊಳಿಸದೇ, ಅಪೇಕ್ಷೆಗಳನ್ನು ಪೂರೈಸಬೇಕೆಂಬ ನಿರೀಕ್ಷೆಗಳನ್ನು ಇಟ್ಟುಕೊಳ್ಳದೇ, ಪರಸ್ಪರ ಅವಲಂಬಿತವಾಗದೇ, ಅಂತರಾಳದಲ್ಲಿ ಬೆಸುಗೆಯನ್ನು ಹೊಂದಿದ್ದರೂ ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ವ್ಯಾವಹಾರಿಕವಾಗಿ ಅಂತರವನ್ನು ಹೊಂದಿದ್ದರೆ; ಅದು ಅಪರೂಪದ ಮನಸ್ಥಿತಿಯ ಉದಾಹರಣೆಗಳು. ತರಬೇತಿ ಹೊಂದಿರುವಂತಹ ಮತ್ತು ವಿಕಾಸವಾಗಿರುವಂತಹ ಮನಸ್ಥಿತಿಗಳು. ಅವರಲ್ಲಿ ಸಂಘರ್ಷವಿರುವುದಿಲ್ಲ. ತಮಗೆ ಸಮ್ಮತವಾಗದಿರುವಂತಹ ವಿಷಯದಲ್ಲಿ ಸಂಗಾತಿಯನ್ನು ಒಂದು ನಿಟ್ಟುಸುರು ಮತ್ತು ಮುಗುಳ್ನಗೆ ಸಹಿತವಾಗಿ ಬಿಟ್ಟು ಸ್ವೀಕೃತಸ್ಥಿತಿಯಲ್ಲಿಯೇ ಸಾಕ್ಷೀಕರಿಸುವ ಅಪರೂಪದ ಮನಸ್ಥಿತಿಗಳೂ ಇಲ್ಲದೇನಿಲ್ಲ. ಆದರೆ ಅದಕ್ಕೆ ಬಹಳಷ್ಟು ಮಾನಸಿಕವಾದ ಸಿದ್ಧತೆ ಮತ್ತು ತರಬೇತಿಗಳು, ಎಲ್ಲದಕ್ಕಿಂತ ಮುಖ್ಯವಾಗಿ ವ್ಯಕ್ತಿಗತವಾದಂತಹ ಪ್ರಜ್ಞೆ ಹಾಗೂ ಅರಿವು ಬೇಕಾಗಿರುತ್ತದೆ.
“ನನ್ನ ಆಸೆಯನ್ನು ಪೂರೈಸು, ನನ್ನ ಭಯವನ್ನು ನಿವಾರಿಸು, ನೋವಿಗೆ ಸಾಂತ್ವಾನ ನೀಡು, ಒಟ್ಟಾರೆ ನಾನು ಉರುಳಿ ಹೋಗದಂತೆ ಆಸರೆಯಾಗು” ಈ ಅಪೇಕ್ಷೆಯನ್ನು ಪೂರೈಸುವ ನಿರೀಕ್ಷೆಯನ್ನೇ ಕರ್ತವ್ಯವೆಂದು ಮತ್ತೊಬ್ಬರಿಗೆ ವಿಧಿಸಿವುದು.
ಸಂಬಂಧಗಳಲ್ಲಿ ಹಕ್ಕು ಮತ್ತು ಕರ್ತವ್ಯಗಳ ಅಡಿಪಾಯದ ಮೇಲೆಯೇ ಸಾಮಾನ್ಯ ಅಪೇಕ್ಷೆ ಮತ್ತು ನಿರೀಕ್ಷೆಗಳನ್ನು ಪೂರೈಸುವುದು.
ಮನುಷ್ಯನ ಆಸೆ ಮತ್ತು ಭಯಗಳ ಕೇಂದ್ರವಾದ ತನ್ನತನವು ಯಾವಾಗಲೂ ತನ್ನ ಬಲಸಂವರ್ಧನೆಯಾಗುವ ಪೆÇೀಷಕ ಪ್ರತಿಕ್ರಿಯೆಗಳಿಗೆ ಕಾತರಿಸುತ್ತಿರುತ್ತದೆ.
ಅದರ ಸಾಮಾನ್ಯ ಲಕ್ಷಣಗಳನ್ನು ಗಮನಿಸಿ. ತನ್ನ ಇಷ್ಟಪಡುವವನನ್ನು ಇಷ್ಟಪಡುತ್ತದೆ. ಟೀಕಿಸುವವನನ್ನು ದೂರವಿಡಲು ಯತ್ನಿಸುತ್ತದೆ. ಎಷ್ಟೋ ಜನ ಈ ವಿಷಯದಲ್ಲಿ ಬಹಳ ಪ್ರಾಮಾಣಿಕವಾಗಿ ತಮ್ಮನ್ನು ಅಭಿವ್ಯಕ್ತಗೊಳಿಸಿಕೊಳ್ಳುತ್ತಾರೆ. ಫೇಸ್ಬುಕ್ ರೀತಿಯ ಸಾಮಾಜಿಕ ಜಾಲತಾಣಗಳಲ್ಲಿ ಇವುಗಳನ್ನು ನೇರವಾಗಿ ನೋಡಬಹುದು. ತನ್ನದನ್ನು ಇಷ್ಟಪಟ್ಟರೆ ಅವನದನ್ನೂ ಇಷ್ಟಪಡಲಾಗುವುದು. ಟೀಕಿಸಿದರೆ ಅವನನ್ನು ಇನ್ನು ಯಾವ್ಯಾವ ರೀತಿಯಲ್ಲಿ ಟೀಕಿಸಬಹುದು ಎಂದು ನೋಡಲಾಗುವುದು. ತನ್ನದೊಂದು ಪೋಸ್ಟಿಗೆ ಯಾರ್ಯಾರು ಇಷ್ಟಪಟ್ಟಿದ್ದಾರೆ, ಯಾರ್ಯಾರು ಲವ್ ಸಿಂಬಲ್ ಅಥವಾ ವಾವ್ ಸಂಕೇತಗಳನ್ನು ಹಾಕಿದ್ದಾರೆಂದು ನೋಡಲಾಗುವುದು. ಇದು ಮನುಷ್ಯನ ಮನಸ್ಸಿನ ರೂಢಿಗತ ಮನಸ್ಥಿತಿ. ನನ್ನನ್ನು ಇಷ್ಟಪಡು, ನಾನು ನಿನ್ನನ್ನು ಇಷ್ಟಪಡುತ್ತೇನೆ. ಇದೊಂದು ಅನಫಿಶಿಯಲ್ ಒಡಂಬಡಿಕೆ. ಪರಸ್ಪರ ಅಹಮುಗಳನ್ನು ತೃಪ್ತಿಪಡಿಸುವ ಅನಧಿಕೃತ ಕರಾರು.
ತನ್ನ ವಿಷಯದಲ್ಲಿ ಟೀಕೆ ಮಾಡಿದ ತಕ್ಷಣವೇ ಅವನು ಶತ್ರುವಾಗುತ್ತಾನೆ. ಅವನ ಟೀಕೆಯ ಹಿನ್ನೆಲೆ ಏನಿರಬಹುದು, ಟೀಕೆ ಮಾಡಿದರೆ ಅದು ಆತನ ದೃಷ್ಟಿಕೋನದಿಂದ ಮಾತ್ರವೇ ಆಗಿರುತ್ತದೆ ಎಂದು ಸರಳವಾದ ಮನಸ್ಥಿತಿ ಇರುವುದಿಲ್ಲ. ಅವನ ಟೀಕೆಯ ಕಾರಣದಿಂದ ತನ್ನ ವಿಷಯದ ಘನತೆ ಅಥವಾ ಮೌಲ್ಯವು ಕುಸಿಯುವುದಿಲ್ಲ ಎಂಬ ಆತ್ಮವಿಶ್ವಾಸವಿರದೇ ಟೀಕಾಕಾರನಿಗೆ ಉತ್ತರ ಕೊಡುವುದಕ್ಕಿಂತ ಅವನ ವಿರುದ್ಧವಾಗಿ ಟೀಕೆಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಅವನ ವ್ಯಕ್ತಿಗತವಾದ ವಿಚಾರಗಳನ್ನು ಹೊರತಂದು ಚಾರಿತ್ರ್ಯವಧೆ ಮಾಡಲು ಯತ್ನಿಸುವುದು, ಅವನ ಶೀಲದ ಬದ್ಧತೆಯನ್ನು ಪ್ರಶ್ನಿಸುವುದು; ಇತ್ಯಾದಿಗಳಾಗುತ್ತವೆ.
ಇಲ್ಲಿ ನಡೆಯುವ ಸಂಗತಿ ಏನೆಂದರೆ, ತಾನು ಇಷ್ಟಕ್ಕೆ ಒಳಗಾಗುವ ಆಸೆಯು ತೃಪ್ತಿಯಾಗದಿರುವುದು ಅಥವಾ ನಿರಾಸೆಯಾಗುವುದು. ಮತ್ತೊಂದು ಸಂಗತಿ ಎಂದರೆ, ಅವನ ಟೀಕೆಯು ತನ್ನ ವಿಷಯಕ್ಕಿಂತ ಬಲಶಾಲಿಯಾಗಿದ್ದು, ತನ್ನನ್ನು ಇಷ್ಟಪಡಬಹುದಾದವರನ್ನು ಪ್ರಭಾವಿಸಿ ತನ್ನ ವಿಷಯವು ತಳ ಸೇರುವುದೇನೋ ಎಂಬ ಭಯ.
ಮನುಷ್ಯ ತನ್ನ ಅಸ್ತಿತ್ವವನ್ನು ಸೃಷ್ಟಿಯ ಇತರ ಜೀವಿಗಳಂತೆ ಬರಿ ಜೈವಿಕವಾಗಿ ಗುರುತಿಸಿಕೊಂಡಿಲ್ಲವಲ್ಲ! ಅವನು ತಾನು ನಂಬಿರುವ, ತಾನು ಮಂಡಿಸುವ, ತಾನು ಅನುಸರಿಸುವ ವಿಷಯದ ಮೂಲಕವೂ ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡಿರುತ್ತಾನೆ. ತಾನು ಪ್ರತಿನಿಧಿಸುವ ವಿಷಯವು ಅಮಾನ್ಯವಾದರೆ ತನ್ನ ಅಸ್ತಿತ್ವದ ಮಾನ್ಯತೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯಕ್ಕೆ ಪ್ರತ್ಯಾಕ್ರಮಣಕ್ಕೆ ಸಜ್ಜಾಗುತ್ತಾನೆ.
ಮನುಷ್ಯನ ಅಪೇಕ್ಷೆ ಮತ್ತು ನಿರೀಕ್ಷೆಗಳು ಅವನ ಮಾನಸಿಕ ಸ್ಥಿತಿಗತಿಗಳನ್ನು ರೂಪಿಸುವಲ್ಲಿ ಬಹಳ ಪ್ರಧಾನಪಾತ್ರವನ್ನು ನಿರ್ವಹಿಸುತ್ತದೆ. ಈ ಅಪೇಕ್ಷೆ ಮತ್ತು ನಿರೀಕ್ಷೆಗಳು ಕೂಡಾ ಅವನ ತನ್ನತನದ ಕೇಂದ್ರವನ್ನು ಮುನ್ನಡೆಸುವ ಶಕ್ತಿಗಳಾದ ಆಸೆ ಮತ್ತು ಭಯಗಳ ಆಧಾರದಲ್ಲಿಯೇ ಇರುತ್ತವೆ.
ಮನುಷ್ಯನಿಗೆ ಬೀಳುವ ಕನಸುಗಳಾದರೂ ಏನವುಗಳು?
ಅವುಗಳು ಎಲ್ಲಿಂದಲೋ ಹೊರಗಿನಿಂದ ಬರುವುದಲ್ಲ. ಅವನದೇ ಸುಪ್ತಮನಸ್ಸಿನ ಪ್ರಕಟಣೆಗಳು. ಸಾಮಾನ್ಯವಾಗಿ ಮನುಷ್ಯನ ಎಲ್ಲಾ ಕನಸುಗಳು ಅವನ ಆಸೆ ಮತ್ತು ಭಯಗಳಿಂದಲೇ ಕೂಡಿರುತ್ತವೆ. ಅವನ ಈಡೇರಿರದ ಬಯಕೆ ಅಥವಾ ಎದುರಿಸುತ್ತಿರುವ ಆತಂಕ, ಕಳವಳಗಳೇ ಸಾಂಕೇತಿಕವಾಗಿ ಪ್ರಕಟಗೊಳ್ಳುತ್ತಿರುತ್ತದೆ. ಹೊರಗೆ ಹೇಳಿಕೊಳ್ಳಲಾಗದ ಆಸೆಗಳು, ಭಯಗಳು ನಾನಾ ರೀತಿಗಳಲ್ಲಿ, ನಾನಾ ರೂಪಗಳನ್ನು ತಾಳಿ ನಿದ್ರೆಯ ಕತ್ತಲಿನಲ್ಲಿ ಮನಸ್ಸಿನ ಪರದೆಯ ಮೇಲೆ ಸಿನಿಮಾ ತೋರಿಸುತ್ತಿರುತ್ತವೆ. ಅಪಶಕುನದ ಕನಸೆಂಬುದೋ, ಅಮಂಗಳದ ಕನಸೆಂಬುದೋ, ಮುಂದೆ ಜರುಗಬಹುದಾದ ಭವಿಷ್ಯದ ಕನಸೆಂಬುದೋ ಯಾವುದೂ ಇಲ್ಲ. ಇರುವುದೊಂದೇ ಭೂತದ ಕನಸುಗಳು. ಭೂತವೆಂದರೆ ಭೂತಕಾಲ, ಹಿಂದೆ ಭಾವಿಸಿರುವ, ಅನುಭವಿಸಿರುವ, ಚಿಂತಿಸಿರುವ ವಿಷಯವಸ್ತುಗಳೇ ಕನಸುಗಳು. ಕೆಟ್ಟ ಭಯಗಳು ದುಃಸ್ವಪ್ನವಾಗಿ ಕಾಡಿದರೆ, ಸುಂದರ ಅನುಭವಗಳು ಅಥವಾ ಎದುರು ನೋಡುತ್ತಿರುವ ಸುಂದರ ಅನುಭವಗಳ ಆಸೆಯು ಸ್ವೀಟ್-ಡ್ರೀಮ್ಸ್ ಆಗಿ ಬರುತ್ತವೆ. ಕನಸುಗಳೆಲ್ಲವೂ ಭೂತ ಮತ್ತು ವರ್ತಮಾನದ ಭಾವನೆಗಳ ಮತ್ತು ವಿಚಾರಗಳ ಅಭಿವ್ಯಕ್ತಿಯೇ ಆಗಿರುತ್ತದೆ. ಅದು ಯಾವ ಯಾವ ಸಂಕೇತಗಳಲ್ಲಿ ಪ್ರಕಟಗೊಳ್ಳುವುದು ಎಂಬುದು ವ್ಯಕ್ತಿಯ ಪರಿಚಿತ ವಸ್ತುಗಳ ಮೇಲೆ ಅವಲಂಬಿತವಾಗಿರುತ್ತದೆ. ಹದಿಹರೆಯದ ತರುಣರು ಸಂಭೋಗಿಸುವಂತೆ ಕನಸು ಕಾಣುತ್ತಾ ವೀರ್ಯ ಸ್ಖಲನವಾಗುವುದು ಯಾವ ಆಶ್ಚರ್ಯವೂ ಅಲ್ಲ, ಅನೈತಿಕವೂ ಅಲ್ಲ. ಅದವರ ಸ್ವಾಭಾವಿಕ ಆಸೆ ಮತ್ತು ಜೈವಿಕ ಸಂಗತಿ. ಸ್ವೀಟ್ ಡ್ರೀಮ್-ಗಳಲ್ಲಿ ಮಜವಾಗಿರುವುದು ವೆಟ್ ಡ್ರೀಮ್-ಗಳೇ.
ಮನುಷ್ಯನ ಅಪೇಕ್ಷೆ ಮತ್ತು ನಿರೀಕ್ಷೆಗಳು ಅವನ ಆಸೆ ಮತ್ತು ಭಯಗಳಿಗೆ ಅನುಗುಣವಾಗಿ ರೂಪುಗೊಂಡಿರುವವು. ಹಾಗಾಗಿ ಅವನ ಸಂಬಂಧಗಳಲ್ಲಿ ಸಂಘರ್ಷ, ಹಕ್ಕು ಮತ್ತು ಅಧಿಕಾರಗಳ ಪ್ರತಿಪಾದನೆ, ಸಂಬಂಧಗಳು ರೂಪುಗೊಳ್ಳುವ ಅಥವಾ ಮುರಿದುಕೊಳ್ಳುವ ಅಥವಾ ಹಳಸುವ ವಿದ್ಯಮಾನಗಳು ನಡೆಯುತ್ತಿರುತ್ತವೆ. ತಮ್ಮ ಅಪೇಕ್ಷೆ ಮತ್ತು ನಿರೀಕ್ಷೆಗಳು ಪೂರೈಸದಿದ್ದಾಗ ನಿರಾಸೆಯಾಗಿ ಸಂಬಂಧದ ಮೇಲೆ ಜಿಗುಪ್ಸೆ ಬರುತ್ತದೆ.
ಸಂಬಂಧಗಳು ಪರಾವಲಂಬನದ ಸಮಾನಾರ್ಥಕ ಪದ.
ಹಳಸಿದರೂ, ಬೇಡವೆನಿಸಿದರೂ, ಅಸಹನೀಯವಾದರೂ ಸಂಬಂಧವನ್ನು ಮುಂದುವರಿಸಿಕೊಂಡಿರಲೇ ಬೇಕು, ವ್ಯಕ್ತಿಗಳನ್ನು ಸಹಿಸಿಕೊಂಡಿರಲೇ ಬೇಕು ಎಂಬ ಅನಿವಾರ್ಯತೆ ಉಂಟಾದಾಗ ಹತಾಶೆಯಾಗುತ್ತದೆ. ಅವನು ಖಿನ್ನತೆಗೆ ಜಾರುತ್ತಾನೆ. ಗಂಡ ಹೆಂಡರಿಗಾದರೋ ಸಂಬಂಧ ಕಡಿದುಕೊಳ್ಳುವ ಒಂದು ಅವಕಾಶವಿರುತ್ತದೆ. ಆದರೆ ಸೋದರ, ಸೋದರಿಯರಲ್ಲಿ, ತಂದೆ ತಾಯಿಯರಲ್ಲಿ, ಇತರೇ ರಕ್ತಸಂಬಂಧಗಳಲ್ಲಿ ಆ ಅವಕಾಶವೂ ಇಲ್ಲ. ಅಪ್ಪ ಎಂದರೆ ಅವನು ಎಂದೆಂದಿಗೂ ಅಪ್ಪನೇ. ಮಗನ ಮತ್ತು ಅಪ್ಪನ ಸಂಬಂಧ ಎಷ್ಟೇ ಹಳಸಿದ್ದರೂ, ಭಾವನಾತ್ಮಕವಾಗಿ ತುಂಡಾಗಿದ್ದರೂ, ಭೌತಿಕವಾಗಿ ದೂರಾಗಿದ್ದರೂ, ಸಂಬಂಧದ ಕಾರಣದಿಂದ ಸತ್ತಾಗ ಸಂಸ್ಕಾರ ಮಾಡಬೇಕು, ಅಸ್ತಿ ಬಿಡಬೇಕು, ಆಸ್ತಿ ಪಡೆಯಬೇಕು; ಇತ್ಯಾದಿ ವಿಷಯಗಳು ಸಾಮಾಜಿಕವಾಗಿ ವ್ಯವಸ್ಥೆಯ ಭಾಗವಾಗಿರುತ್ತದೆ. ತನ್ನ ಸೋದರಿಯೊಂದಿಗೆ ಇರುವ ಸಂಬಂಧಕ್ಕಿಂತಲೂ ತನ್ನ ಸ್ನೇಹಿತೆಯ ಜೊತೆ ಇರುವ ಸಂಬಂಧವು ಅದೆಷ್ಟೇ ಆಪ್ತವಾಗಿದ್ದರೂ, ಆತ್ಮೀಯವಾಗಿದ್ದರೂ ಆಸ್ತಿಯನ್ನು ಜಗಳಗಂಟಿ ಮತ್ತು ತನ್ನ ದ್ವೇಷಿಸುವ ಸೋದರಿಯೊಂದಿಗೇ ಹಂಚಿಕೊಳ್ಳಬೇಕು. ತನ್ನ ತಂದೆಯ ಮಗಳಾದ ಕಾರಣದಿಂದ ಅವಳಿಗೆ ‘ಹಕ್ಕು’ ಇದೆ. ವ್ಯವಸ್ಥೆಯಲ್ಲಿರುವ ಈ ಹಕ್ಕುದಾರಿಕೆ ತನ್ನ ವ್ಯಕ್ತಿಗತವಾದ ಆಸೆಗಳಿಗೆ ವಿರುದ್ಧವಾದರೂ ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಅದನ್ನು ನ್ಯಾಯವೆಂದೂ ಕರೆಯಲಾಗುತ್ತದೆ.
ಬಹಳಷ್ಟು ರಕ್ತ ಸಂಬಂಧಗಳಿಗಿಂತ ಭಾವನಾತ್ಮಕ ಸಂಬಂಧಗಳೇ ಹೆಚ್ಚು ಆತ್ಮೀಯವೂ, ಆಪ್ತವೂ ಆಗಿರುತ್ತದೆ. ಆದರೆ ಅವುಗಳನ್ನು ಪುರಸ್ಕರಿಸುವ ಸಾಮಾಜಿಕ ವ್ಯವಸ್ಥೆ ಇರುವುದಿಲ್ಲ. ಹಕ್ಕು ಮತ್ತು ಅಧಿಕಾರಗಳಿಂದಾಗಿ ವ್ಯಕ್ತಿಗತವಾದ ಆಸೆಗಳು ನೆರವೇರುವುದಿಲ್ಲ.
ಇಂತಹ ಅನೇಕಾನೇಕ ವೈರುಧ್ಯಗಳು ಮನುಷ್ಯನ ಅಪೇಕ್ಷೆ ಮತ್ತು ನಿರೀಕ್ಷೆಗಳನ್ನು ಛಿದ್ರಮಾಡುತ್ತವೆ. ಆ ಚೂರುಗಳೆಲ್ಲಾ ಮನದಂಗಳದಲ್ಲಿ ಚೆಲ್ಲಾಡಿ ಕಸವಾಗಿ ಬಿದ್ದಿರುತ್ತವೆ. ಒಳಗಿನ ಕಸಗಳು ಹೆಚ್ಚಾದಂತೆ ಕೊಳೆಯುತ್ತವೆ, ನಾರುತ್ತವೆ.