ಹುಚ್ಚು ಮನಸ್ಸಿನ ಸಾವಿರ ಮುಖಗಳು 04

  • ಯೋಗೀಶ್ ಮಾಸ್ಟರ್, ಬೆಂಗಳೂರು

ಆಲೋಚನೆಗಳ ಹರಿವು ನಿರ್ಧಾರವಾಗುವುದು ಅದರ ಆದ್ಯತೆಗಳ ಆಧಾರದ ಮೇಲೆ. ಮನಸ್ಥಿತಿಯ ಕೇಂದ್ರವೆಂದರೆ ಅದು ನೀಡುವ ಪ್ರಾಮುಖ್ಯತೆ. ಹಾಗೆಯೇ ಆದ್ಯತೆ ಮತ್ತು ಪ್ರಾಮುಖ್ಯತೆಗಳನ್ನು ಯಾವುದಕ್ಕೆ ಕೊಡುತ್ತೇವೆಯೋ ಅದು ಮನಸ್ಥಿತಿಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ವಿವಿಧ ರೀತಿಯ ಮನೋಭಾವಗಳನ್ನು ಆಕರ್ಷಿಸುವುದೂ ಕೂಡಾ ಕೊಡುವ ಪ್ರಾಮುಖ್ಯತೆಗಳೇ. ಒಬ್ಬೊಬ್ಬನ ಮನಸ್ಸಿನಲ್ಲಿಯೂ ಪ್ರಾಮುಖ್ಯತೆ ಎಂಬುದು ವಿಚಾರಗಳ ತರಂಗಗಳ ಕೇಂದ್ರದಲ್ಲಿ ಬೆಳಕಿನ ಮೂಲದಂತೆ ಕಿರಣಗಳನ್ನು ಹೊರಸೂಸುತ್ತಿರುತ್ತದೆ. ಈ ಪ್ರಾಮುಖ್ಯತೆಗಳು ಪ್ರಾಮುಖ್ಯತೆಯನ್ನು ಏಕೆ ಪಡೆದುಕೊಂಡವು ಎಂಬುದನ್ನೂ ಕೂಡಾ ಗಮನಿಸಬೇಕಿದೆ. ಮನುಷ್ಯನ ಮನಸ್ಸು ಸ್ವಾಭಾವಿಕವಾಗಿ ಸಂಕೀರ್ಣಮಯವಾದದ್ದು ಎಂಬುದರಲ್ಲಿ ಸಂಶಯವಿಲ್ಲ. ಹಾಗೆಯೇ ಈ ಬಗೆಯ ಸಂಕೀರ್ಣಮಯ ಮನಸ್ಸನ್ನು ಹೊಂದಿರುವ ಮನುಷ್ಯನು ನೈಸರ್ಗಿಕವಾಗಿಯೇ ಕೇಡಿ. ಸ್ವಾರ್ಥಿ ಮತ್ತು ಲಂಪಟ. ಈ ಸ್ವಾರ್ಥ ಮತ್ತು ಲಂಪಟತನವು ಮನುಷ್ಯರ ಭಾಷೆಯಲ್ಲಿ ನಕಾರಾತ್ಮಕವಾಗಿ ಧ್ವನಿಸುತ್ತದೆ. ಆದರೆ ನೈಸರ್ಗಿಕವಾಗಿ ಅದೇನೂ ಹಾಗಿಲ್ಲ. ಯಾವುದೇ ಮೃಗದ ಮನಸ್ಸಿನಂತೆಯೇ ಮನುಷ್ಯನ ಮನಸ್ಸೂ ಕೂಡ. ಅವನ ಮನೋವೃತ್ತಿಯೂ ಕೂಡಾ ಪ್ರಾಣಿಗಳಂತೆ ಪ್ರವೃತ್ತಿಗಳನ್ನೇ ಅವಲಂಬಿಸಿರುವುದು. ಪ್ರಾಣಿಗಳಂತೆ ಅವನೂ ಕೂಡಾ ಬಯಸುವುದು ತೃಪ್ತಿ. ಇಷ್ಟಪಡುವುದು ಸುಖವನ್ನು. ಆದರೆ, ಇಷ್ಟಪಡುವುದು ಸುಖವನ್ನೇ ಆದರೂ, ಆಶಿಸುವುದು ಆನಂದವನ್ನೇ ಆದರೂ, ಬಯಸುವುದು ತೃಪ್ತಿಯನ್ನೇ ಆದರೂ ಅವನ ಆಂತರ್ಯದಲ್ಲಿ ನಕಾರಾತ್ಮಕವಾದ, ಸುಖ ನೀಡದ, ಆನಂದವಿರದ, ತೃಪ್ತಿ ಕಾಣದ ವಿಷಯಗಳು ಬಾಧಿಸುತ್ತಿರುವುದೇಕೆ? ಸ್ವಲ್ಪ ಸೂಕ್ಷ್ಮವಾಗಿ ಅವಲೋಕಿಸೋಣ. ನೋಡಿ, ಇಷ್ಟ ಪಟ್ಟದ್ದನ್ನು ಬೇಗ ಮರೆತಿದ್ದರೂ, ಅಸಹನೀಯವಾಗಿರುವುದು, ಅಸಹ್ಯವಾಗಿರುವುದು, ಅನುಮಾನಾಸ್ಪದವಾಗಿರುವುದು ಮತ್ತೆ ಮತ್ತೆ ಮನುಷ್ಯನ ನೆನಪಿಗೆ ಬರುತ್ತಿರುತ್ತದೆ. ಅವನು ಒಂಟಿಯಾಗಿರುವಾಗಲೂ ಬರುತ್ತಿರುತ್ತದೆ. ಸಂತೋಷದ ಸಂಗತಿಗಳು ಎಲ್ಲರೊಡನೆ ಸೇರಿದಾಗ ನೆನಪಿಗೆ ಬರುತ್ತದೆ. ಆ ಸಂತೋಷದ ಸಂಗತಿಗಳನ್ನು ಯಾರಾದರೂ ನೆನಪಿಸುತ್ತಾರೆ. ಆದರೆ ಯಾರೂ ನೆನಪಿಸದಿದ್ದರೂ ಈ ನಕಾರಾತ್ಮಕವಾದ ಭಾವನೆಗಳು ಬರುತ್ತಿರುತ್ತವೆ. ಇಷ್ಟಪಡಲಿ ಪಡದಿರಲಿ, ಮನುಷ್ಯನ ಮನಸ್ಸಿನಲ್ಲಿ ನಕಾರಾತ್ಮಕವಾದ ವಿಷಯಗಳು ಆದ್ಯತೆಯನ್ನು ಮತ್ತು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿರುತ್ತವೆ. ಇದರಿಂದ ತಿಳಿಯುವುದೇನೆಂದರೆ ವ್ಯಕ್ತಿ ನೀಡುವ ಆದ್ಯತೆಯು ಅಥವಾ ಕೊಡುವ ಪ್ರಾಮುಖ್ಯತೆಯು ಇಷ್ಟಪಡಿಸುವಂತಹುದ್ದೇನಲ್ಲ. ಗಮನಿಸಿ, ಕೆಟ್ಟ ಸಂದರ್ಭಗಳು ಒಳ್ಳೆಯ ಸಂದರ್ಭಗಳಿಗಿಂತ ಗಾಢವಾದ ಪ್ರಭಾವವನ್ನು ಬೀರುವಂತಹದ್ದು. ವ್ಯಕ್ತಿಯು ನೀಡುವ ಆದ್ಯತೆ ಮತ್ತು ಪ್ರಾಮುಖ್ಯತೆಗಳಿಂದಾಗಿ ಮಿತ್ರರಿಗಿಂತ ಶತ್ರುಗಳೇ ಹೆಚ್ಚಾಗುತ್ತಾರೆ. ತಾನು ಪ್ರಾಮುಖ್ಯತೆ ಕೊಡುವ ವಿಷಯಗಳಿಗೆ ಮತ್ತೊಬ್ಬನೂ ಪ್ರಾಮುಖ್ಯತೆ ನೀಡಿದರೆ ಅವನು ಎಷ್ಟರ ಮಟ್ಟಿಗೆ ಮಿತ್ರನಾಗುತ್ತಾನೋ ತಿಳಿಯದು. ಆದರೆ, ತನ್ನ ಆದ್ಯತೆಯನ್ನು, ಪ್ರಾಮುಖ್ಯತೆಯನ್ನು ಧಿಕ್ಕರಿಸುವವನು ಶತ್ರುವಂತೂ ಆಗುತ್ತಾನೆ. ತನ್ನ ಪ್ರಾಮುಖ್ಯತೆಯ ಮಹತ್ವವನ್ನು ಸಾರಲು, ಸಾಧಿಸಲು ತನ್ನ ಎದುರಾಳಿಯೊಡನೆ ವಾದಿಸುತ್ತಾನೆ. ಅವನ ಖಂಡಿಸುತ್ತಾನೆ. ಅವನ ಹುಳುಕುಗಳನ್ನು ಹುಡುಕಿ ಹೊರಗೆಳೆದು ತನ್ನ ಪ್ರಾಮುಖ್ಯತೆಯ ಪ್ರಾಮುಖ್ಯತೆಯು ಅವನ ವಿರೋಧದಿಂದ ಮಂಕಾಗದಿರುವಂತೆ ನೋಡಿಕೊಳ್ಳುತ್ತಾನೆ. ಅವನನ್ನು ಮಂಕಾಗಿಸಲು ಯತ್ನಿಸುತ್ತಾನೆ. ತನ್ನ ಆದ್ಯತೆ ಮತ್ತು ಪ್ರಾಮುಖ್ಯತೆಯನ್ನು ಧಿಕ್ಕರಿಸುವವನು ಶತ್ರುವಾಗುವುದು ಮಾತ್ರವಲ್ಲ, ಅವನ ಒಳಿತು ಎನಿಸುವ ವಿಷಯಗಳೆಲ್ಲಾ ಇವನಿಗೆ ಅಣಕಗಳಾಗಿ ತೋರುವವು. ಅವನ ಸಕಾರಾತ್ಮಕವಾಗಿರುವ ಯಾವ ವಿಷಯವನ್ನೂ ಇವನು ನೋಡಲೂ ಸಿದ್ಧವಾಗಿರುವುದಿಲ್ಲ. ಹಾಗೆಯೇ ಅವನು ಒಳಿತನ್ನು ಮಾಡದಿರಲಿ, ಲೋಕವು ಮೆಚ್ಚುವಂತಹ ಕೆಲಸ ಅವನು ಮಾಡದಿರಲಿ ಎಂಬುದು ಇವನ ಆಂತರಿಕ ಪ್ರಾರ್ಥನೆಯಾಗಿರುತ್ತದೆ. ಅನ್ನಿಸುವುದಿಲ್ಲವೇ ವ್ಯಕ್ತಿಯ ಮನಸ್ಸಿನಲ್ಲಿ ಯಾಕಿಷ್ಟು ನಕಾರಾತ್ಮಕವಾದ ಮನೋಭಾವ ತುಂಬಿರುತ್ತದೆ ಎಂದು? ನಿಮ್ಮ ಗಮನದಲ್ಲಿರಲಿ, ಸಂಗತಿಗಳು ಬರಿಯ ಸಕಾರಾತ್ಮಕವಾದ ವಿಷಯಗಳಿಂದಲೇ ತುಂಬಿದ್ದರೆ ಅದೊಂದು ರೋಚಕ ಕತೆಯಾಗಲಿಕ್ಕೂ ಯೋಗ್ಯವಿರುವುದಿಲ್ಲ. ಆತ ಇದ್ದ, ಆಕೆ ಇದ್ದಳು. ಇಬ್ಬರೂ ಪರಸ್ಪರ ಅರಿತು ನಡೆದುಕೊಳ್ಳುತ್ತಿದ್ದರು. ಇಬ್ಬರೂ ದಿನವೂ ಸಂತೋಷವಾಗಿದ್ದರು. ಸರಿ, ಮುಂದೆ? ಅಷ್ಟೇ, ಅವರು ಮಕ್ಕಳನ್ನು ಮಾಡಿಕೊಂಡರು. ಅವರೂ ಸುಖವಾಗಿದ್ದರು. ‘ಥೂ, ಇದೊಂದು ಕತೆಯೇ?’ ತಿರುವುಗಳಿಲ್ಲ, ಅನಿರೀಕ್ಷಿತ ಸಂಗತಿಗಳಿಲ್ಲ, ಸವಾಲುಗಳಿಲ್ಲ, ಸಾಹಸಗಳಿಲ್ಲ. ಹಾಗೆನ್ನುತ್ತಾ ನಕಾರಾತ್ಮಕವಾದುದನ್ನು ಬಯಸುತ್ತಿರುತ್ತದೆ ನಮ್ಮ ಮನಸ್ಸು. ನೋಡೀ, ವಾಸ್ತವದಲ್ಲಿ ಸಕಾರಾತ್ಮಕವಾದವು ಬರಿಯ ಪ್ರೇರಣೆಗಳಾಗುತ್ತವೆಯೇ ಹೊರತು ನಕಾರಾತ್ಮಕವಾಗಿರುವವು ಪ್ರಭಾವಿಸುವವು, ಗಾಢವಾಗಿ ಪ್ರಭಾವಿಸುವವು.

ತಮಾಷೆಯೆಂದರೆ ಒಳ್ಳೆಯದನ್ನು ಆಶಿಸುತ್ತೇವೆ, ಬಯಸುತ್ತೇವೆ, ಎದುರುನೋಡುತ್ತೇವೆ. ಆದರೆ, ಕೆಟ್ಟದ್ದರ ಬಗ್ಗೆ ಕುತೂಹಲವಿರುತ್ತದೆ, ಎದುರು ನೋಡುತ್ತೇವೆ, ರೋಮಾಂಚಿತರಾಗುತ್ತೇವೆ. ಇನ್ನೂ ದೊಡ್ಡ ಕ್ರೂರ ತಮಾಷೆ ಎಂದರೆ, ಆಶಿಸುವುದರಲ್ಲಿಯೂ ತಮಗೆ ಒಳ್ಳೆಯದಾಗಲಿ ಎಂದೇ ಬಯಸುವುದು. ಇತರರಿಗೆ ಒಳ್ಳೆಯದಾಗುವುದಿದ್ದರೂ ತಮಗೆ ನೇರವಾಗಿ ಸಂಬಂಧಿಸಿದ್ದರೆ, ಅವರ ಒಳಿತಿನಿಂದ ತಮಗೂ ಒಳಿತಾಗುವುದಾದರೆ ಒಳಿತಿನ ಆಶಯವು ಧಾರಾಳವಾಗಿರುತ್ತದೆ.

ಇನ್ನು ಯಾರೊಬ್ಬರಿಗೆ ಆಗುವ ಒಳಿತಿನಿಂದ ತನಗೇನೂ ಒಳಿತಾಗುವುದಿಲ್ಲ ಎಂದರೆ, ಆ ಒಳಿತು ಆದರೆಷ್ಟು ಬಿಟ್ಟರೆಷ್ಟು ಎಂಬ ಗುಪ್ತವಾದ ಧೋರಣೆ ಅಡಗಿಕೊಂಡು ಕುಳಿತು ವ್ಯಕ್ತಿಯ ಒಳಿತಿನ ಆಶಯದ ಪ್ರಕಟಣೆಗಳನ್ನು ಅಣಕ ಮಾಡುತ್ತಿರುತ್ತದೆ. ಹಾಗೆಯೇ ಅಪಘಾತವಾಗುವುದೋ, ಹಲ್ಲೆ ಅಥವಾ ಕೊಲೆಯಾಗುವುದೋ, ಆಕಸ್ಮಿಕ ಅನಾಹುತವಾಗುವುದೋ; ಎಂತದ್ದೋ ಅವಘಡವಾಗುವುದಾದರೆ – ಅದೊಂದು ರೋಮಾಂಚನದ ದೃಶ್ಯ. ಆದರೆ ಅದು ಇತರರಿಗೆ ಆಗಬೇಕು. ತಾವು ರಸ್ತೆಯಲ್ಲಿ ಹೋಗುವಾಗ ತಮ್ಮ ಕಣ್ಣೆದುರು ಆಗುವ ರಕ್ತಸಿಕ್ತ ಅಪಘಾತವನ್ನು ನಂತರ ಇತರರೊಂದಿಗೆ ವಿವರಿಸುವಾಗ ಅವರ ಹುಮ್ಮಸ್ಸು, ಅವರ ಮಾತಿನಲ್ಲಿ ಆಗ ಅವರು ಪಡೆದ ರೋಚಕತೆಯನ್ನು ಗಮನಿಸಿ. ಮತ್ತೆ ಕೆಲವರು ತಮಗಾಗಿರುವ ಸಂಕಟ, ನೋವು, ದಾಳಿ, ದಬ್ಬಾಳಿಕೆ ಅಥವಾ ತೊಂದರೆಗಳನ್ನು ಪದೇಪದೇ ಹೇಳಿಕೊಳ್ಳುತ್ತಾ ತಮ್ಮ ಕತೆಯ ನಾಯಕನಾಗಿ ತಮ್ಮನ್ನು ಬಿಂಬಿಸಿಕೊಳ್ಳುವುದನ್ನು ಗಮನಿಸಿ. ಎಂದೋ, ಎಲ್ಲೋ, ಯಾರಿಂದಲೋ ಆಗಿರುವ ನೋವು, ಸಮಸ್ಯೆಯು ಈಗಿಲ್ಲವಾಗಿದ್ದರೂ ಅದನ್ನು ಈಗ ನೆನಪಿಸಿಕೊಂಡು ಕೇಳುಗರ ಮುಂದೆ ದುಃಖತಪ್ತರಾಗುವುದನ್ನು ಗಮನಿಸಿ. ಆ ಸಂಕಟ ಮತ್ತು ನೋವಿನ ನೆನೆಕೆಯಲ್ಲಿ ಅವರಿಗೆ ಸಿಗುವ ಗುಪ್ತವಾದ ತೃಪ್ತಿಯ ಆನಂದವನ್ನು ಗಮನಿಸಿ. ಬಹಳಷ್ಟು ಜನರು ತಾವು ಯಾವುದನ್ನು ಮರೆಯಬೇಕೆಂದು ಹೇಳುತ್ತಾರೋ, ನೋವುಂಟು ಮಾಡಿದೆ ಎಂದು ಹೇಳುತ್ತಾರೋ, ಆ ತರಹದ್ದು ತನ್ನ ಶತ್ರುವಿಗೂ ಆಗಬಾರದೆಂದು ಹೇಳುತ್ತಾರೋ ಅದನ್ನು ಸವಿವರಗಳಿಂದ ಸಂಪೂರ್ಣವಾಗಿ ಕಿಂಚಿತ್ತೂ ಬಿಡದಂತೆ ವರ್ಣಿಸುವುದನ್ನು ಗಮನಿಸಿ. ವಾಸ್ತವವಾಗಿ ಯಾವುದನ್ನು ಮರೆಯಬೇಕೆಂದು ಹೊರಗೆ ಹೇಳುತ್ತಾರೋ ಅದನ್ನು ಮರೆಯಲು ಆಂತರಿಕವಾಗಿ ಅವರು ಸಿದ್ಧವಿರುವುದೇ ಇಲ್ಲ. ಎರಡು ಬಗೆಯ ಜನರೂ ಇರುತ್ತಾರೆ. ನಕಾರಾತ್ಮಕವಾಗಿರುವುದನ್ನು ತಾವೊಬ್ಬರೇ ಇದ್ದಾಗ ನೆನೆಯದೇ ಇರದವರು ಬೇರೊಬ್ಬರ ಮುಂದೆ ಅನುಕಂಪವನ್ನು ಗಳಿಸಿಕೊಳ್ಳುತ್ತಾ ‘ಪಾಪ ನಾನು’ ಎಂದು ಗೋಗರೆಯುತ್ತಿರುತ್ತಾರೆ. ಇನ್ನೂ ಕೆಲವರು ಎಲ್ಲರ ಎದುರಿಗೆ ಎಲ್ಲರೂ ಇದ್ದಂತೆಯೇ ಇದ್ದು, ತಾವೊಬ್ಬರೇ ಇದ್ದಾಗ ತಮಗಾಗಿರುವ ನಕಾರಾತ್ಮಕವಾದ ಅನುಭವಗಳನ್ನು ನೆನಪಿಸಿಕೊಳ್ಳುತ್ತಾ ಅವುಗಳು ಹುಟ್ಟಿಸಿದ ಭಾವಗಳನ್ನು ಮುನ್ನೆಲೆಗೆ ತಂದುಕೊಳ್ಳುತ್ತಿರುತ್ತಾರೆ. ಯಾರನ್ನೋ, ಯಾವುದನ್ನೋ ನೆನೆಸಿಕೊಂಡು ಕೋಪದಿಂದ ಕುದಿಯುತ್ತಿರುವುದು, ನಿರಾಸೆ, ದುಃಖದಿಂದ ಅಳುವುದು, ಸೇಡಿನಿಂದ ಕುದಿಯುವುದು ಇತ್ಯಾದಿ. ಇನ್ನೂ ಕೆಲವರು ತಮ್ಮ ಪ್ರಾಮುಖ್ಯತೆ, ಆದ್ಯತೆಗಳನ್ನು ಒಪ್ಪದ ಇತರರು, ಅವುಗಳನ್ನು ಒಪ್ಪದೇ ಇರುವುದರಿಂದಲೇ ಕೇಡಿಗೊಳಗಾಗಬೇಕೆಂದು ಆಂತರಿಕವಾಗಿ ಬಯಸುತ್ತಿರುತ್ತಾರೆ. ಅವರಿಗೇನಾದರೂ ಆದರೆ ಹೊರಗೆ ಪಾಪ ಎಂದು ಅನುಕಂಪ ತೋರಿದರೂ, ‘ಸರಿಯಾದ ಶಾಸ್ತಿಯಾಯಿತು’ ಎಂದು ಒಳಗೆ ಸಂತೋಷ ಪುಟಿಯುತ್ತಿರುತ್ತದೆ. ತಮ್ಮನ್ನು ಅಥವಾ ತಮ್ಮ ಧೋರಣೆ ಹಾಗೂ ಒಲವು ನಿಲುವುಗಳನ್ನು ಸಮ್ಮತಿಸದಿರುವವರು, ತಮ್ಮನ್ನು ಗೌರವಿಸದಿರುವವರು, ತಮ್ಮ ದಾರಿಯನ್ನು ಅಥವಾ ಸಲಹೆ ಸೂಚನೆಗಳನ್ನು ತಿರಸ್ಕರಿಸಿದವರಿಗೆ ಸರಿಯಾದ ಶಾಸ್ತಿಯಾಗಲೆಂದೇ ಕಾಯುತ್ತಿರುತ್ತಾರೆ. ತಾವೇ ಸರಿಯಾದ ಶಾಸ್ತಿ ಮಾಡಲು ವ್ಯವಸ್ಥೆಯಲ್ಲಿ ಹಲವಾರು ತೊಡಕುಗಳು ತಮಗೇ ಅಡ್ಡಗಾಲಾಗಿ ತಮಗೆ ಉರುಳಾಗುವುದರಿಂದ ಬೇರೆ ರೀತಿಯಲ್ಲಿ ಆಗಲಿ ಎಂದು ಬಯಸುತ್ತಿರುತ್ತಾರೆ. ಕೆಲವರು ನೇರವಾಗಿ ವ್ಯಕ್ತಪಡಿಸುತ್ತಾರೆ, ಕೆಲವರು ಅದನ್ನು ಅಡಗಿಸಿಕೊಳ್ಳುತ್ತಾರೆ. ಏನೇ ಆದರೂ ಅನಿರೀಕ್ಷಿತವಾದ ಸುಖ, ಸಂತೋಷ, ಆನಂದಗಳಂತಹ ಸಕಾರಾತ್ಮಕ ಅಚ್ಚರಿಗಳು ತಮಗೆದುರಾಗಲಿ ಎಂದು ಬಯಸುವುದೂ, ತಾವಲ್ಲದೇ, ತಮ್ಮ ಆಪ್ತ ಸಂಬಂಧಗಳಲ್ಲದೇ ಇರುವ ಇತರರಿಗೆ ಎದುರಾಗುವ ಆಘಾತ, ಅಪಘಾತ, ಅವಘಡಗಳನ್ನು ನೋಡಿ ರೋಮಾಂಚಿತಗೊಳ್ಳುವ ಮನಸ್ಥಿತಿ ನಮ್ಮಲ್ಲಿ ಬಹಳ ಸಾಮಾನ್ಯವೇ ಆಗಿದೆ.

ಒಟ್ಟಾರೆ ವಿಷಯ ಇಷ್ಟೇ. ಮನುಷ್ಯ ನೈಸರ್ಗಿಕವಾಗಿ ಸ್ವಾರ್ಥಿ. ಅವನ ಮನಸ್ಸು ತಾನು ತೃಪ್ತಿಯನ್ನು ಹೊಂದಲು, ಆನಂದವನ್ನು ಪಡೆಯಲು ನಾನಾ ವಿಷಯಗಳನ್ನು ಅವಲಂಬಿಸಿರುತ್ತದೆ. ಲೋಕ, ಸಮಾಜ, ನೈತಿಕತೆ, ಧಾರ್ಮಿಕತೆ; ಇತ್ಯಾದಿಗಳು ಅವನ ತೃಪ್ತಿಯ ಮತ್ತು ಆನಂದದ ಅವಲಂಬನೆಯ ವಿಷಯಗಳನ್ನು ಪುರಸ್ಕರಿಸುವುದೋ, ತಿರಸ್ಕರಿಸುವುದೋ, ತಪ್ಪೆಂದು ಹೇಳುವುದೋ, ಸರಿ ಎಂದು ಸಮ್ಮತಿಸುವುದೋ; ಅವೆಲ್ಲಾ ವಿಷಯವೇ ಅಲ್ಲ. ಅವನಲ್ಲೊಂದು ಆಂತರಿಕ ಮಾನದಂಡವಿರುತ್ತದೆ. ಆ ಮಾನದಂಡದ ಆಧಾರದ ಮೇಲೆ ಅವನೆಲ್ಲಾ ಆನಂದ, ನಿರಾಸೆ, ತೃಪ್ತಿ, ಸಮ್ಮತಿ, ಅಸಹನೆ, ಸಮಾಧಾನಗಳು ಅವಲಂಬಿತವಾಗಿರುತ್ತದೆ. ಈ ಆಂತರಿಕ ಮಾನದಂಡವು ಹೇಗಿರಬೇಕೆಂದೂ ಒಂದು ಮಾನದಂಡವಿದೆ. ಅದನ್ನು ತೀರ್ಮಾನಿಸುವುದು ಯಾರು? ಮತ್ತು ಹೇಗೆ? ಆ ಮಾನದಂಡವನ್ನು ನಿರ್ಣಯಿಸುವುದಕ್ಕೆ ಒಂದು ಸ್ವಸ್ಥ ಪಾರದರ್ಶಕ ದೃಷ್ಟಿ ಇರಬೇಕು. ‘ಸ್ವಸ್ಥ ಪಾರದರ್ಶಕ ದೃಷ್ಟಿ’ ಎಂಬುದು ಕನ್ನಡಿಯಂತೆ ಕೆಲಸ ಮಾಡುತ್ತದೆ. ಈ ಸ್ವಸ್ಥ ಪಾರದರ್ಶಕ ದೃಷ್ಟಿಯ ಉದ್ದೇಶವೆಂದರೆ ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳುವುದು. ಆ ಮೂಲಕ ತನ್ನ ಆಲೋಚನೆಗಳನ್ನು, ಆಲೋಚನಾ ಕ್ರಮವನ್ನು, ವರ್ತನೆಗಳನ್ನು, ಪ್ರತಿವರ್ತನೆಗಳನ್ನು, ಸ್ಪಂದಿಸುವ ರೀತಿಗಳನ್ನು ಆರೋಗ್ಯವಾಗಿಟ್ಟುಕೊಳ್ಳುವುದು. ಆ ಮೂಲಕ ತನ್ನ ಸುತ್ತಮುತ್ತಲಿನ ಪರಿಸರವನ್ನು, ಕುಟುಂಬವನ್ನು, ಸಮಾಜವನ್ನು ಸ್ವಸ್ಥವಾಗಿಟ್ಟುಕೊಳ್ಳಲು ಯತ್ನಿಸುವುದು. ಒಟ್ಟಾರೆ ಸ್ವಸ್ಥ ಪಾರದರ್ಶಕ ದೃಷ್ಟಿಯ ಕೆಲಸ ಬಹಳವೇ ಇದೆ.

(ಮುಂದುವರಿಯುವುದು)

LEAVE A REPLY

Please enter your comment!
Please enter your name here