ಹುಚ್ಚು ಮನಸ್ಸಿನ ಸಾವಿರ ಮುಖಗಳು 07

  • ಯೋಗೇಶ್ ಮಾಸ್ಟರ್, ಬೆಂಗಳೂರು

ಮನುಷ್ಯನಿಗೆ ಮನಸ್ಸು ಸ್ವಾಭಾವಿಕ ಮತ್ತು ಆಲೋಚನೆಗಳು ಅಸ್ವಾಭಾವಿಕ. ಆದ್ದರಿಂದಲೇ ಸಂಘರ್ಷ. ಅದೇ ಅದರ ವಿಲಕ್ಷಣತೆ. ಸ್ವಾಭಾವಿಕವಾಗಿರುವ ಮನಸ್ಸಿನಲ್ಲಿ ಸ್ವಾಭಾವಿಕವಾದ ಆಲೋಚನೆಗಳೇ ಮೊದಲಿಗೆ ಹುಟ್ಟುವುದು. ಆ ಆಲೋಚನೆಗಳೋ ತನ್ನ ಉಳಿಯುವ ಆಸೆ ಮತ್ತು ಅಳಿಯುವ ಭಯದ ಆಧಾರದಲ್ಲಿಯೇ ಇರುತ್ತದೆ. ಸನ್ನಿವೇಶಗಳು, ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಇತ್ಯಾದಿ ಸಂಗತಿಗಳು ಯಾವಾಗ ಉಳಿಯುವ ಆಸೆಗೆ ಪೂರಕವಾಗಿರುತ್ತದೆಯೋ ಆಗ ತೃಪ್ತಿ ಉಂಟಾಗುತ್ತದೆ. ಆ ತೃಪ್ತಿಯನ್ನೇ ಸಂತೋಷ ಎನ್ನುವುದು.
ಒಂದು ಸಾಮಾನ್ಯ ಉದಾಹರಣೆಯನ್ನು ಗಮನಿಸಿ. ತುಂಬಾ ಕೆಲಸ ಮಾಡಿದ್ದೀರಿ. ದಣಿದಿದ್ದೀರಿ. ಹಸಿವಾಗುತ್ತಿದೆ. ಊಟ ಮಾಡಬೇಕು. ಆಗುತ್ತಿಲ್ಲ. ಯಾವಾಗಲೋ ಒಂದು ಸಲ ಸಮಯ ದೊರಕಿತು. ಆಗ ಊಟ ಮಾಡಿದಿರಿ. ಊಟ ಮಾಡಿದಾಗ ತೃಪ್ತಿಯಾಯಿತು. ಸಧ್ಯ ಊಟ ಮುಗಿಸಿದೆ ಎಂದು ಸಂತೋಷ ಪಡುವಿರಿ. ಆ ತೃಪ್ತಿಯೇ ಸಂತೋಷ. ಹಸಿವಾಗುವುದು, ದಣಿವಾಗುವುದು ಎಂದರೆ ಅದು ನಿಮ್ಮ ಬಲವನ್ನು ಕುಗ್ಗಿಸುವುದು. ನಿಮ್ಮ ಉಳಿಯುವಿಕೆಗೆ ಅಗತ್ಯವಿರುವ ಬಲವನ್ನು ಕಡಿಮೆ ಮಾಡುತ್ತಾ ಹೋಗುವುದು. ಉಂಡಾದ ಮೇಲೆ ಬಲ ಸಂವರ್ಧನೆಯಾಗುತ್ತದೆ. ಬಲ ಸಂವರ್ಧನೆಯಾದಾಗ ಉಳಿಯುವಿಕೆಗೆ ಇಂಬುಕೊಟ್ಟಂತಾಯ್ತು.
ಹಸಿವಿನಲ್ಲಿ ಒಬ್ಬನು ಸಂತೋಷಪಡುತ್ತಿದ್ದಾನೆಂದರೆ, ದಣಿವಾದಾಗ ‘ಆಹಾ, ನನಗೆ ಸುಸ್ತಾಗುತ್ತಿರುವುದರಿಂದ ಆನಂದವಾಗುತ್ತಿದೆ’ ಎನ್ನುತ್ತಿದ್ದರೆ ಅದು ಅಸ್ವಾಭಾವಿಕ ಮನಸ್ಥಿತಿ. ಹಸಿವಾಗುತ್ತಿದ್ದರೂ ದಣಿವಾಗಿದ್ದರೂ ಬೇರೊಂದು ಕೆಲಸವಾಗುತ್ತಿದ್ದು ಆತನಿಗೆ ಸಂತೋಷವಾಗಿದೆ ಎಂದರೆ, ತನ್ನ ತೃಪ್ತಿಯನ್ನು ಮತ್ತೊಂದು ಪರ್ಯಾಯ ವಿಷಯದಿಂದ ಪಡೆಯುತ್ತಿರುತ್ತಾನೆ ಎಂದರ್ಥ. ಏಕೆಂದರೆ ಯಾವುದೋ ಕೆಲಸ ಮಾಡಿ ಮುಗಿಸಲು ಡೆಡ್ ಲೈನಿದೆ. ಅದನ್ನು ಮುಗಿಸುವ ತುರಾತುರಿಯಲ್ಲಿದ್ದೀರಿ. ಹಸಿವನ್ನು ಮತ್ತು ದಣಿವನ್ನು ಲೆಕ್ಕಿಸುವಂತಿಲ್ಲ. ಅದನ್ನು ಮಾಡಿ ಮುಗಿಸಿದಿರಿ. ತೃಪ್ತಿಯಾಯಿತು. ಖುಷಿಯಾಯಿತು. ಈ ತೃಪ್ತಿ ಮತ್ತು ಖುಷಿಯು ಹಸಿವಿನಿಂದ ಇದ್ದು ದಣಿವಾಗಿದ್ದಕ್ಕೆ ಅಲ್ಲ. ಮತ್ತೊಂದು ಕೆಲಸ ಮುಗಿದಿದ್ದಕ್ಕೆ. ಈಗ ಹಸಿವು ಭುಗಿಲೇಳುತ್ತದೆ. ಚೆನ್ನಾಗಿ ತಿನ್ನಲಾಗದಿದ್ದರೂ ಒಂದಷ್ಟು ತಿಂದು ಸಮಾಧಾನಪಟ್ಟುಕೊಳ್ಳುವಷ್ಟು ತೃಪ್ತಿಯಾಗುತ್ತದೆ.
ಮನಸ್ಸಿನ ಕತೆಯೂ ಹೀಗೇ ಆಗುತ್ತದೆ. ಅದು ಸ್ವಾಭಾವಿಕವಾಗಿ ಇದ್ದರೂ ಅದಕ್ಕೆ ತೃಪ್ತಿ ನೀಡುವ, ಖುಷಿಕೊಡುವ ನಾನಾ ಪರ್ಯಾಯಗಳನ್ನು ಕಾಲಕ್ರಮೇಣ ರೂಢಿ ಮಾಡಿಕೊಳ್ಳುತ್ತದೆ.
ಧಾರ್ಮಿಕವಾಗಿ ಉಪವಾಸ ಮಾಡುವ ವಿಷಯವನ್ನು ಗಮನಿಸಿ. ಹಸಿವಾದರೂ ತನ್ನ ಜೈವಿಕ ಉಳಿಯುವಿಕೆಯ ಆಸೆಗೆ ಅತಿಭೌತಿಕವಾದ ಸ್ವರ್ಗದಲ್ಲಿ ಶಾಶ್ವತವಾಗಿ ಉಳಿದಿರುವ ಆಸೆಯನ್ನು ಪರ್ಯಾಯವಾಗಿ ಬಿತ್ತಲಾಗಿರುತ್ತದೆ. ಯಾವುದೇ ಧರ್ಮದಲ್ಲಾಗಲಿ ಉಪವಾಸವು ಯಾವುದೇ ಕಾರಣದಿಂದ ಹುಟ್ಟಿರಲಿ ಅದು ಜೈವಿಕ ಉಳಿಯುವಿಕೆಯ ಪರ್ಯಾಯವಾಗಿ ನೀಡಿರುವ ಮತ್ತೊಂದು ಇರುವಿನ ಕಾರಣವೇ ಆಗಿರುತ್ತದೆ. ಅದಕ್ಕೆ ಧಾರ್ಮಿಕವಾಗಿ, ವೈಚಾರಿಕವಾಗಿ, ವೈಜ್ಞಾನಿಕವಾಗಿ ಏನೇ ಸಬೂಬುಗಳನ್ನು ನೀಡಿದರೂ ಅದು ಅಸ್ವಾಭಾವಿಕವೇ.

ಕೌಟುಂಬಿಕ ಸಂಬಂಧಗಳು, ಸಮಾಜ, ಸಂಸ್ಕೃತಿ, ದೇಶ; ಇತ್ಯಾದಿಗಳೆಲ್ಲವೂ ಸ್ವಾಭಾವಿಕವಾದ ಮನಸ್ಸಿಗೆ ಅಸ್ವಾಭಾವಿಕವಾದ ಚಿಂತನೆಗಳನ್ನು ಮಾಡುವುದಕ್ಕೇ ಬೋಧನೆ ಮಾಡುತ್ತಿರುತ್ತವೆ. ಹೀಗಾಗಿಯೇ ವ್ಯಕ್ತಿಯ ಅಂತರಾಳದಲ್ಲಿ ಹುಟ್ಟುವ ಸ್ವಾಭಾವಿಕ ಪ್ರವೃತ್ತಿಗಳು ಅಥವಾ ಆಲೋಚನೆಗಳು ಅಥವಾ ಪ್ರೇರಣೆಗಳು, ಸಮಾಜ ನೀಡುವ ಆಲೋಚನೆಗಳ ಮಾದರಿ ಅಥವಾ ಕಟ್ಟುಪಾಡುಗಳು ಅಥವಾ ಚಿಂತನ ಕ್ರಮಗಳು ಕೂಡಾ ಪ್ರಭಾವ ಬೀರುತ್ತಿರುವುದರಿಂದ ವ್ಯತಿರಿಕ್ತ ಪರಿಣಾಮಗಳು ವ್ಯಕ್ತಿಯ ಮನಸ್ಸಿನ ಮೇಲೆ ಆಗುತ್ತಿರುತ್ತವೆ.
ಉದಾಹರಣೆಗೆ ಒಂದು ಹೆಣ್ಣಿನ ಗರ್ಭದಿಂದ ಹುಟ್ಟಿ ಬಂದಿರುವ ಗಂಡು ಮತ್ತು ಹೆಣ್ಣು ಮಕ್ಕಳು ಲೈಂಗಿಕ ಆಕರ್ಷಣೆಗೆ ಒಳಗಾಗುತ್ತಾರೆಂದಿಟ್ಟುಕೊಳ್ಳಿ. ಆದರೆ ಸಹೋದರ ಮತ್ತು ಸಹೋದರಿಯರು ಹಾಗೆ ಲೈಂಗಿಕವಾಗಿ ಬೆರೆಯಬಾರದೆಂಬ ಕೌಟುಂಬಿಕ, ಸಾಮಾಜಿಕ ಅಥವಾ ಸಾಂಸ್ಕೃತಿಕ ಕಟ್ಟಳೆಗಳಿವೆ. ಈ ಕಟ್ಟಳೆಗಳು ಬಹಳ ಹಿಂದೆ ಇರಲಿಲ್ಲ. ಸೋದರ ಮತ್ತು ಸೋದರಿಯರು ಇರಲಿ, ತಾಯಿ ಎಂದು ನಾವು ಇಂದು ಕರೆಯುವ ಮಹಿಳೆಯು ತನ್ನಿಂದ ಹುಟ್ಟಿದ ಗಂಡುಮಕ್ಕಳೊಂದಿಗೆ ಕೂಡುತ್ತಿದ್ದಳು. ಅದು ಆದಿಮ ಕಾಲದಲ್ಲಿ. ಬಹಳ ಹಿಂದೆ. ಕಾಲಾನುಕ್ರಮದಲ್ಲಿ ಮನುಷ್ಯನ ವೈಯಕ್ತಿಕ ಸಂಬಂಧಗಳಲ್ಲೂ ನಾನಾ ಕಾರಣಗಳಿಂದ ಕಟ್ಟುಪಾಡುಗಳುಂಟಾದವು. ಇದಾದದ್ದು ಮನುಷ್ಯರಲ್ಲಿ ಮಾತ್ರ. ಪ್ರಾಣಿ ಪಕ್ಷಿಗಳೇ ಮೊದಲಾದ ಜೀವರಾಶಿಗಳಲ್ಲಿ ಅಲ್ಲ. ಹೆಣ್ಣು ಮತ್ತು ಗಂಡು ಲೈಂಗಿಕವಾಗಿ ಕೂಡುವಿಕೆಯ ವಿಷಯವು ಕಟ್ಟಳೆಗಳಿಗೆ ಒಳಗಾಗಿ ಮೂಡಿದ ಚಿಂತನೆಗಳೆಲ್ಲವೂ ಅಸ್ವಾಭಾವಿಕವೇ. ಅಂತಹ ಅಸ್ವಾಭಾವಿಕವಾದ ಆಲೋಚನೆಗಳೂ ಮತ್ತು ಸ್ವಾಭಾವಿಕವಾದ ಮನಸ್ಸಿನ ಸೆಳೆತವೂ ಮೂಲದಲ್ಲಿ ಇದ್ದು; ಎರಡಕ್ಕೂ ತಿಕ್ಕಾಟವಾಗುತ್ತಿರುತ್ತದೆ.
ಒಂದು ಗಂಡು ಮತ್ತು ಹೆಣ್ಣು ಕೊಂಚ ಆಪ್ತವಾಗಿ, ಸಲುಗೆಯಿಂದ ಮಾತಾಡಿದರೆ, ವರ್ತಿಸಿದರೆ, ಅಡ್ಡಾಡಿದರೆ ಅದನ್ನು ಕಾಣುವ ವ್ಯಕ್ತಿಗಳು ಅವರಿಬ್ಬರಿಗೆ ಏನಾದರೂ ಲೈಂಗಿಕ ಸಂಬಂಧ ಇರಬಹುದಾ ಎಂದು ಅನುಮಾನ ವ್ಯಕ್ತಪಡಿಸಿದರೆ, ಅದು ಒಬ್ಬ ವ್ಯಕ್ತಿಯ ಸಣ್ಣತನದ ಮನಸ್ಸಿನ ಅನುಮಾನವಲ್ಲ. ವ್ಯಕ್ತಿಯೊಳಗೆ ಇರುವ ಸ್ವಾಭಾವಿಕ ಪ್ರವೃತ್ತಿಯ ವಾಸನೆಯು ತಲೆಯೆತ್ತಿದ್ದು. ಅವರ ಹಿಂದಿನ ತಲೆಮಾರುಗಳಲ್ಲಿ ಮುಕ್ತ ಲೈಂಗಿಕತೆಯ ರೂಢಿ ಇಲ್ಲದೇ ಹೋಗಿದ್ದರೆ ಇಂದು ಅವರಿಗೆ ಈ ಅನುಮಾನವೇ ಬರುತ್ತಿರಲಿಲ್ಲ. ಅಂದರೆ ಅಂತಹ ಐಡಿಯಾ ಅಥವಾ ಚಿತ್ರಣ ಅಥವಾ ಕಲ್ಪನೆಯೇ ಇರುತ್ತಿರಲಿಲ್ಲ.

ಸಾಮಾನ್ಯ ಒಡನಾಟದಲ್ಲಿರುವ ಆ ಗಂಡು ಮತ್ತು ಆ ಹೆಣ್ಣಿಗೂ ಅದೇ ಪ್ರವೃತ್ತಿಯ ವಾಸನೆಯು ಆಂತರಿಕವಾಗಿ ತಲೆಯೆತ್ತುವುದರಿಂದ ಒಬ್ಬರನ್ನೊಬ್ಬರು ಅಣ್ಣಾ, ಅಕ್ಕಾ, ತಂಗಿ, ತಮ್ಮ ಎಂದೇನೋ ಕರೆದುಕೊಂಡು ‘ನಾವಿಬ್ಬರೂ ಲೈಂಗಿಕವಾಗಿ ಕೂಡುವಂತಹ ಮನಸ್ಥಿತಿಯನ್ನು ಹೊಂದಿಲ್ಲ’ ಎಂದು ತಮಗೆ ತಾವೂ ಮತ್ತು ಇತರರಿಗೂ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿರುತ್ತಾರೆ. ಅವರೆಲ್ಲರೂ ಅಸ್ವಾಭಾವಿಕವಾದ ಆಲೋಚನಾ ಕ್ರಮಗಳ ಪ್ರಭಾವಗಳ ಬಲಿಪಶುಗಳೇ.
ಅತ್ಯಂತ ಆಶ್ಚರ್ಯದ ವಿಷಯವೆಂದರೆ ಲೈಂಗಿಕವಾಗಿ ಕೂಡುವುದರ ಬಗ್ಗೆ ಮನುಷ್ಯ ಮಿತಿಮೀರಿದ ಹುಸಿಪರಿಕಲ್ಪನೆಗಳನ್ನು ಕಟ್ಟಿಕೊಂಡಿದ್ದು. ಅದೇ ಅವನಿಗೆ ಉಳಿಯುವಿಕೆಯ ಆನಂದವನ್ನೀಯುವುದು ಮತ್ತು ತನ್ನ ಪೀಳಿಗೆಗಳನ್ನು ಮುಂದುವರಿಸುವ ನೆಪದಲ್ಲಿ ತಾನು ಅಮರನಾಗಿರಲು ಬಯಸುವುದು. ಆದರೆ ಅದರ ಬಗ್ಗೆ ಅಷ್ಟೊಂದು ಪೂರ್ವಾಗ್ರಹಗಳ ಹುತ್ತವನ್ನು ಏಕೆ ಕಟ್ಟಿಕೊಂಡ ಎಂದು ಮುಂದಿನ ಸರಣಿಗಳಲ್ಲಿ ಚರ್ಚಿಸುತ್ತೇನೆ.
ಇರಲಿ, ಒಟ್ಟಾರೆ ಲೈಂಗಿಕ ಸಂಬಂಧಗಳ ಬಗ್ಗೆ ಇರುವ ಕಟ್ಟುಪಾಡುಗಳೆಲ್ಲವೂ ಅಸ್ವಾಭಾವಿಕವಾದ್ದರಿಂದ ಅವನ ಸ್ವಾಭಾವಿಕ ಪ್ರವೃತ್ತಿಯ ಪ್ರೇರಣೆಗಳಿಗೂ ಸಿಗುತ್ತಾ ಅವನು ಆಂತರಿಕವಾಗಿ ಸಂಘರ್ಷದಲ್ಲಿರುತ್ತಾನೆ.
ತಂದೆಯೊಬ್ಬ ತಾನು ಮಗುವನ್ನು ಪಡೆಯುವ ವೇಳೆಗಾಗಲೇ ಸಾಕಷ್ಟು ಸಾಮಾಜಿಕ ಕಟ್ಟಳೆ ಮತ್ತು ಕೌಟುಂಬಿಕ ಕಟ್ಟುಪಾಡುಗಳಿಗೆ ರೂಢಿಯಾಗಿರುವನಾದ್ದರಿಂದ, ಇನ್ನೂ ಕಟ್ಟುಪಾಡುಗಳ ಪದರಗಳಿಗೆ ರೂಢಿಯಾಗಿರದ ಅವನದೇ ಹೆಣ್ಣು ಮಗು ತನ್ನೊಡನೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಲೈಂಗಿಕಾಪೇಕ್ಷೆ ವ್ಯಕ್ತಪಡಿಸಿದಾಗ ನಿರ್ಲಕ್ಷಿಸುತ್ತಾನೆ ಅಥವಾ ಅದನ್ನು ಬೇರೆ ರೀತಿಯಾಗಿ ತಿರುಗಿಸುತ್ತಾನೆ. ಆ ಮಗುವಿಗೂ ಲೈಂಗಿಕ ಸಂಬಂಧಗಳ ಕಟ್ಟಳೆಯನ್ನು ಅನುದ್ದೇಶವಾಗಿಯೇ ರೂಢಿ ಮಾಡಿಸುತ್ತಾನೆ. ಇದೇ ಗಂಡು ಮಗು ಮತ್ತು ಅವನ ತಾಯಿಯ ಕತೆಯೂ. ಪಶುಪ್ರವೃತ್ತಿಯ ಸ್ವಾಭಾವಿಕತೆಯಲ್ಲಿಯೇ ಇರುವ ಮಕ್ಕಳು ತಮ್ಮ ಲೈಂಗಿಕಾಪೇಕ್ಷೆಯನ್ನು ಸಹಜವಾಗಿ ತೋರಿಸುತ್ತಿರುತ್ತಾರೆ. ಏಕೆಂದರೆ ಅವರಿಗಿನ್ನೂ ಕಟ್ಟಳೆಗಳ ಪದರಗಳ ಆವರಣಗಳು ಗಟ್ಟಿಗೊಂಡಿರುವುದಿಲ್ಲ. ಎಷ್ಟೋ ಅಸೂಕ್ಷ್ಮಮತಿಗಳಾದ ಪೋಷಕರಿಗೆ ಅದು ತಿಳಿಯುವುದೇ ಇಲ್ಲ. ಕೆಲವು ಪೋಷಕರು ಅದನ್ನು ತಿಳಿದರೂ ತಾವೇ ಲೈಂಗಿಕಾಪೇಕ್ಷೆಗೆ ಹೊರತಾದ ವಿಷಯಕ್ಕೆ ಅದನ್ನು ಆರೋಪಿಸಿಕೊಂಡುಬಿಡುತ್ತಾರೆ. ಒಟ್ಟಾರೆ ತಮ್ಮ ಪವಿತ್ರವಾದ ತಂದೆ ತಾಯಿ ಮತ್ತು ಮಕ್ಕಳ ಸಂಬಂಧದಲ್ಲಿ ಲೈಂಗಿಕತೆ ಎನ್ನುವ ವಿಚಾರ ಬರಬಾರದು. ಆ ಎಚ್ಚರಿಕೆಯಲ್ಲಿ ಕುಟುಂಬ, ಸಮಾಜ, ಸಂಸ್ಕೃತಿ, ಧರ್ಮ; ಎಲ್ಲವೂ ಇರುವುದರಿಂದ ನಮ್ಮ ಸ್ವಾಭಾವಿಕ ಲೈಂಗಿಕ ವಾಂಛೆಯು ಹೆಡೆಯೆತ್ತದಿರಲು ಎಲ್ಲರನ್ನೂ ತಂಗಿ, ಅಕ್ಕ, ಅಣ್ಣ ಇತ್ಯಾದಿ ಪದಗಳಿಂದ ಕರೆದು ಕಟ್ಟುಪಾಡುಗಳೊಳಗೆ ನಮ್ಮನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳುತ್ತೇವೆ.
ಒಟ್ಟಾರೆ ಮನುಷ್ಯನ ಮನಸ್ಸು ಕಟ್ಟಳೆಗಳಿಗೆ ಒಳಗಾಗಿರುವುದರಿಂದಲೇ ಕೆಟ್ಟಿರುವುದು ಎಂದು ಹೇಳಿಬಿಡಲೂ ಸಾಧ್ಯವಿಲ್ಲ. ಏಕೆಂದರೆ ಅವನಿಗೆ ಮನಸ್ಸೆಂಬುದು ಇರುವುದರಿಂದ, ಅವನಿಗೆ ಆಲೋಚಿಸುವ ಸಾಮರ್ಥ್ಯವು ಇರುವುದರಿಂದ, ಮಾತ್ರವಲ್ಲ ಆ ಆಲೋಚನೆಗಳು ಉನ್ಮತ್ತಾವಸ್ಥೆಗೆ ಹೋಗುವುದರಿಂದ, ಅಮಲುಗಳನ್ನು ಹೊಂದುವುದರಿಂದ, ತನ್ನದನ್ನ ಸರಿ ಎಂದು ಸಮರ್ಥಿಸಿಕೊಳ್ಳಲು ಸಾಧ್ಯವಾಗುವುದರಿಂದ, ತಾರ್ಕಿಕವಾಗಿ ತನ್ನ ನಡೆ ಮತ್ತು ನುಡಿಗಳನ್ನು ಸರಿಯೆಂದು ವಾದಿಸಲು ಆಗುವುದರಿಂದ ಒಬ್ಬೊಬ್ಬ ವ್ಯಕ್ತಿಯೂ ತನ್ನದೇ ಆದ ತರ್ಕಗಳನ್ನು, ತತ್ವಗಳನ್ನು ಹೊಂದಿದ್ದು ವಿಪರೀತ ಘರ್ಷಣೆಗಳಾಗಿ ಮನುಷ್ಯ ಕುಲವೇ ಸರ್ವನಾಶವಾಗಿಬಿಡುವಂತಹ ಸಾಧ್ಯತೆ ಇದೆ.

ಕಟ್ಟಳೆಗಳು ಅಥವಾ ಕಟ್ಟುಪಾಡುಗಳು ಅಸ್ವಾಭಾವಿಕವಾದರೂ ಅವು ಬೇಕಿವೆ. ಆದರೆ ಸವಾಲಿನ ಕೆಲಸವೆಂದರೆ ಆ ಕಟ್ಟುಪಾಡುಗಳು ಮನಸ್ಸಿನ, ಸಂಬಂಧಗಳ ಹಾಗೂ ಸಮಾಜದ ಆರೋಗ್ಯವನ್ನು ಕಾಪಾಡಿಕೊಳ್ಳುವಂತಹ ರೀತಿಯಲ್ಲಿ ಹೇಗೆ ರೂಪಿಸಿಕೊಳ್ಳಬೇಕೆಂಬುದು. ಮನಸ್ಸಿನ ವಿಷಯದಲ್ಲಿ ಮಾತ್ರವೇ ಹೇಳುವುದಾದರೆ, ಕಟ್ಟಳೆಗಳು ತಮ್ಮ ಟ್ರಯಲ್ ಅಂಡ್ ಎರರ್ ಪ್ರಕ್ರಿಯೆಯಲ್ಲಿ ವಿಕಸಿಸುತ್ತಾ ಅಥವಾ ಹರಿದು ಬರುತ್ತಾ ಈಗ ಹೇಗೇಗೋ ರೂಪುಗೊಂಡು ಸಾಕಷ್ಟು ಗಬ್ಬೆದ್ದು ಹೋಗಿವೆ. ಮನುಕುಲ ಈಗ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿದೆಯೆಂದರೆ, ಹಳೆಯದಷ್ಟನ್ನು ಬಿಟ್ಟು ಹೊಸತನ್ನು ಮಾಡಿಕೊಳ್ಳಲಾಗುತ್ತಿಲ್ಲ. ಹೋಗಲೀ, ಹಳೆಯದನ್ನೇ ರಿಪೇರಿ ಮಾಡಲೂ ಬರುವುದಿಲ್ಲ. ಅಷ್ಟರಮಟ್ಟಿಗೆ ಗಬ್ಬೆದ್ದು ಹೋಗಿದೆ. ಇಡೀ ವಿಶ್ವದಲ್ಲಿ ಕಟ್ಟಳೆಗಳು ಒಂದಷ್ಟರಮಟ್ಟಿಗೆ ಕೇಡಿನ ಮನಸ್ಥಿತಿಯವರನ್ನು ಸರಿದಾರಿಗೆ ತರಲು ಯತ್ನಿಸುವುದು ನಿಜ. ಆದರೆ, ಅದೇ ಕಟ್ಟಳೆಗಳು ಮತ್ತೆ ಕೆಲವರನ್ನು ಶೋಷಿಸಲು, ದೌರ್ಜನ್ಯಕ್ಕೆ ಒಳಮಾಡಲೂ ಉಪಯೋಗಿಸಲ್ಪಡುತ್ತಿವೆ. ಪೋಲಿಸ್, ಕಾನೂನು, ಸರ್ಕಾರದಂತಹ ಆಡಳಿತ ಯಂತ್ರಗಳು, ಶಿಕ್ಷಣ, ವೈದ್ಯಕೀಯವೇ ಮೊದಲಾದ ಸಾಮಾಜಿಕ ಸಂಸ್ಥೆಗಳ ಸ್ಥಾಪನೆಯ ಉದ್ದೇಶ, ಅವುಗಳ ಅಗತ್ಯ ಮತ್ತು ಅವುಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಹೆಚ್ಚಿನ ಚರ್ಚೆ ಮಾಡುವಷ್ಟು ಪ್ರಾಥಮಿಕ ಹಂತದ ಪ್ರಬಂಧ ಅಥವಾ ಟಿಪ್ಪಣಿಗಳನ್ನು ಬರೆಯುವ ಅಗತ್ಯವೇನಿಲ್ಲ.
ಕಟ್ಟಳೆಗಳೆಂದರೆ ವ್ಯವಸ್ಥೆ, ವ್ಯವಸ್ಥೆ ಎಂದರೆ ಕಟ್ಟಳೆ. ಎರಡೂ ಒಂದೇ ನಾಣ್ಯದ ಎರಡು ಮುಖಗಳು.
ಕಟ್ಟಳೆಗಳು ಅಸ್ವಾಭಾವಿಕವೆಂದು ಮೇಲ್ನೋಟಕ್ಕೆ ಎನಿಸಿದರೂ ವ್ಯವಸ್ಥೆಯು ಅಸ್ವಾಭಾವಿಕವಲ್ಲ. ನಿಸರ್ಗದಲ್ಲಿಯೂ ತಾನಾಗಿಯೇ ರೂಪುಗೊಂಡ ವ್ಯವಸ್ಥೆಯು ಇರುವುದು. ಅದೇ ರೀತಿಯಲ್ಲಿ ಮನುಕುಲದ ಚರಿತ್ರೆಯಲ್ಲಿಯೂ ಸಾಮಾಜಿಕ ವ್ಯವಸ್ಥೆಯು ಸ್ವಾಭಾವಿಕವಾಗಿ ರೂಪುಗೊಂಡು ಈಗ ನಾವೆಲ್ಲರೂ ಚೆಂದದ ಜೀವನ ನಡೆಸಿಕೊಂಡಿರಬೇಕಿತ್ತು. ಯಾರೋ ಚೆನ್ನಾಗಿಲ್ಲದ ಜೀವನ ನಡೆಸುತ್ತಿರಬಹುದು. ಆದರೆ ನಾನು ಒಳ್ಳೆಯ ಶಿಕ್ಷಣ, ಕುಟುಂಬ, ದುಡಿಮೆ, ಉಳಿಕೆ, ಆರೋಗ್ಯ ಎಲ್ಲವನ್ನೂ ಹೊಂದಿ ಚೆಂದದ ಬದುಕು ನಡೆಸುತ್ತಿದ್ದೇನೆ ಎಂದು ಪ್ರತ್ಯೇಕಿಸಿಕೊಂಡು ಯಾವನೊಬ್ಬ ವ್ಯಕ್ತಿಯೂ ಹೇಳಲಾಗದು. ಏಕೆಂದರೆ ಪ್ರತಿಯೊಬ್ಬನೂ ಮನುಕುಲದ ಪ್ರತಿನಿಧಿ. ನಮ್ಮ ಪಕ್ಕದ ಮನೆಯವರಲ್ಲಿ ಸಂಘರ್ಷವಾಗುತ್ತಿದ್ದರೆ ಅದು ನಮ್ಮ ಮನೆಯ ಸಂಘರ್ಷವೇ. ಭೌತಿಕವಾಗಿ ಅದು ನಮ್ಮ ಮನೆಯಲ್ಲಿ ಘಟಿಸದೇ ಇರಬಹುದು. ಜಗತ್ತಿನ ಯಾವುದೋ ಭೂ ಭಾಗಗಳು ಯುದ್ಧ, ದಂಗೆ, ಅಶಾಂತಿಯಿಂದ ಬಳಲುತ್ತಿದ್ದು ಅಲ್ಲಿ ಮಾರಣ ಹೋಮ ನಡೆಯುತ್ತಿದ್ದರೆ, ಅದು ನನ್ನ ಸಮಸ್ಯೆಯೇ. ಏಕೆಂದರೆ ನಾವೆಲ್ಲರೂ ಒಂದೇ ತಳಿಯವರು. ನನ್ನ ಪಕ್ಕದ ಮನೆಗೆ ಹತ್ತಿದ ಬೆಂಕಿ ನನ್ನ ಮನೆಗೆ ಹತ್ತುವುದಿಲ್ಲ ಎಂದು ನಾನು ನೆಮ್ಮದಿಯಾಗಿ ಮಲಗಲಾಗುವುದಿಲ್ಲ. ನಮ್ಮ ದೇಶಕ್ಕೆ, ರಾಜ್ಯಕ್ಕೆ, ನಗರಕ್ಕೆ, ನಮ್ಮ ಬೀದಿಗೆ ಬಂದಿರುವ ಕರೋನಾ ಎಂಬ ರೋಗಾಣುವು ನನ್ನೊಳಗೆ ಪ್ರವೇಶಿಸುವುದಿಲ್ಲ ಎಂಬ ಮೊಂಡುಧೈರ್ಯದಲ್ಲಿ ನಾನಿರಲು ಸಾಧ್ಯವಿಲ್ಲ.

ನಾನು ಏನು ಹೇಳಲು ಹೊರಟಿದ್ದೇನೆ? ತಿಳಿಯಲಿಲ್ಲವೇ? ಮನುಕುಲವು ಬಾಳ್ವೆ ಮಾಡುತ್ತಿರುವ ಜಗತ್ತಿನ ಎಲ್ಲಾ ಭಾಗಗಳೂ ಆಂಶಿಕವಾಗಿಯೋ, ಪೂರ್ಣಪ್ರಮಾಣದಲ್ಲಿಯೋ, ಅಲ್ಪ ಪ್ರಮಾಣದಲ್ಲಿಯೋ; ಒಟ್ಟಾರೆ ಮಾನವನ ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡುವುದರಲ್ಲಿ ವಿಫಲವಾಗಿವೆ. ಈ ಪ್ರಯತ್ನದಲ್ಲಿ ಎಲ್ಲಾ ಧರ್ಮಗಳೂ, ಸಂಸ್ಕೃತಿಗಳೂ, ಪಂಗಡಗಳೂ, ಜಾತಿ ಕುಲಗಳೂ ಸೋತಿವೆ. ಆದರೂ ಮನುಷ್ಯನ ಧಾರ್ಷ್ಟ್ಯ ಎಂತಹುದು ಎಂದರೆ ಹಿಂದೂ ಧಾರ್ಮಿಕನೊಬ್ಬ ಇಡೀ ಜಗತ್ತೇ ಹಿಂದೂ ಜಗತ್ತಾದರೆ ಎಲ್ಲರೂ ನೆಮ್ಮದಿಯಿಂದ ಇರುತ್ತಾರೆ ಎಂದು ನಂಬುತ್ತಾನೆ. ಇಸ್ಲಾಮೇತರ ಧರ್ಮಗಳು ಮತ್ತು ಅದರ ಅನುಯಾಯಿಗಳು ನಾಶವಾಗಿ ಅಥವಾ ಇಡೀ ಜಗತ್ತು ಇಸ್ಲಾಂ ಜಗತ್ತಾದರೆ ವಿಶ್ವವು ಸುಭೀಕ್ಷವಾಗಿರುತ್ತದೆ ಎಂದು ಕಟ್ಟರ್ ಮುಸ್ಲೀಂ ಭಾವಿಸುತ್ತಾನೆ. ಆದರೆ ಅದೆಲ್ಲವೂ ಸುಳ್ಳು. ಹಾಗೆ ಎಂದಿಗೂ ಆಗದು. ಇಸ್ಲಾಂ, ಹಿಂದೂ, ಕ್ರೈಸ್ತದಂತಹ ಧರ್ಮಗಳು ತಮ್ಮಲ್ಲಿಯ ಪಂಗಡಗಳಲ್ಲಿಯೇ ಸಾಮರಸ್ಯವನ್ನು ತರಲು ವಿಫಲವಾಗಿವೆ. ಇವುಗಳ ಜೊತೆಗೆ ಬೌದ್ಧ, ಜೈನ, ಪಾರ್ಸಿ, ಬಹಾಯಿಯಂತಹ ಯಾವುದೇ ಧರ್ಮಗಳು ಮನುಷ್ಯನ ಮಾನಸಿಕ ಸ್ವಾಸ್ಥ್ಯಕ್ಕೆ, ತನ್ಮೂಲಕ ಪ್ರಸ್ತುತ ಸಮಾಜದ ನೆಮ್ಮದಿಗೆ ಒಂದು ಪೂರ್ಣ ಪ್ರಮಾಣದ ಸೂತ್ರವನ್ನು ಕೊಡಲು ಸಾಧ್ಯವಾಗಿಲ್ಲ. ಆಗುವುದೂ ಇಲ್ಲ. ಏಕೆಂದರೆ ಯಾವುದೇ ಧರ್ಮಗಳು ಆಯಾ ಕಾಲಘಟ್ಟದ ಸಂಘರ್ಷ ಮತ್ತು ಸವಾಲುಗಳನ್ನು ನಿಭಾಯಿಸಲು ಹುಟ್ಟಿರುವಂತಹ ಮಾರ್ಗಗಳು ಆಗಿರುತ್ತವೆ. ಕಾಲ ಸರಿದಂತೆ ಹೊಸ ಹೊಸ ನಮೂನೆಯ ಸಂಘರ್ಷಗಳು, ಸವಾಲುಗಳು ಹುಟ್ಟಿದ್ದು ಅವುಗಳನ್ನು ಉದ್ದೇಶಿಸಬೇಕಾಗುತ್ತದೆ. ಆ ಧಾರ್ಮಿಕ ಕಟ್ಟುಪಾಡುಗಳಿಂದ ಆವೃತವಾದ ತತ್ವಗಳಲ್ಲಿ ಕೆಲವು ಪ್ರಸ್ತುತವಾಗಿರುತ್ತವೆ ಮತ್ತು ಕೆಲವು ಅಪ್ರಸ್ತುತವಾಗಿರುತ್ತವೆ. ಕೆಲವು ಏಕೆ ಪ್ರಸ್ತುತವಾಗಿರುತ್ತವೆ ಎಂದರೆ, ಆಗಲೂ ಮನುಷ್ಯನ ಬದುಕನ್ನು ಉದ್ದೇಶಿಸಿದ್ದು, ಈಗಲೂ ಮನುಷ್ಯ ಅದೇ ಸಮಸ್ಯೆ, ಸಂಘರ್ಷ, ಸವಾಲುಗಳೊಡನೆ ಬದುಕನ್ನು ಜಗ್ಗುತ್ತಿದ್ದಾನೆ. ಹಾಗಾಗಿ ಕೆಲವು ಪ್ರಸ್ತುತವಾಗಿರುತ್ತವೆ. ಕೆಲವು ಏಕೆ ಪ್ರಸ್ತುತವೆಂದರೆ ಸಮಸ್ಯೆಗಳು ಅಪ್ಡೇಟ್ ಆಗಿರುತ್ತವೆ. ಸಮಾಧಾನವು ಔಟ್-ಡೇಟ್ ಆಗಿರುತ್ತವೆ.
ನಿಜ ಹೇಳಬೇಕಂದರೆ, ಆಯಾ ಧಾರ್ಮಿಕರು ಅವರ ಧರ್ಮದಲ್ಲಿರುವ ಒಡಕುಗಳು, ಕವಲುಗಳು, ಭಿನ್ನ ವಾದಗಳು ಅವರಲ್ಲಿಯೇ ಒಮ್ಮತಕ್ಕೆ ತರುವಂತಹ ಸಮರ್ಥ ಮತ್ತು ಫಲಪ್ರದವನ್ನು ಚರ್ಚೆಯನ್ನು ಮಾಡಿ ಮುಗಿಸಲಾಗಿಲ್ಲ. ಅಷ್ಟೆಲ್ಲಾ ಏಕೆ, ಯಾವುದೋ ಒಂದು ಜಾತಿ ಅಥವಾ ಧರ್ಮದ ಕುಟುಂಬದೊಳಗಿನ ಸದಸ್ಯರು ಭಿನ್ನಮತಗಳ ಸಂಘರ್ಷವಿಲ್ಲದೇ ಒಂದು ಸಾಮಾನ್ಯ ಶಾಂತಿಯನ್ನು ಸ್ಥಿರಗೊಳಿಸಿಕೊಳ್ಳಲು ಆಗಿಲ್ಲ. ಇದಕ್ಕೆಲ್ಲಾ ಕಾರಣ ಎಂದು ನಾನು ಬೊಟ್ಟು ಮಾಡುತ್ತಿರುವುದು ವ್ಯಕ್ತಿಯ ಮಾನಸಿಕ ಆರೋಗ್ಯದ ಕಡೆಗೆ. ಇಸ್ಲಾಂ ಭಯೋತ್ಪಾದಕರು, ಹಿಂದೂ ಮತಾಂಧರು, ಕಟ್ಟರ್ ಕ್ರೈಸ್ತರು, ಮಾವೋ ಉಗ್ರರು; ಹೀಗೆಲ್ಲಾ ಗುಂಪುಗಳಿಲ್ಲ. ಅಲ್ಲಿರುವುದು ಧರ್ಮಗಳ ಅಥವಾ ಸಿದ್ಧಾಂತಗಳ ಸಮಸ್ಯೆ ಅಲ್ಲ. ಮಾನಸಿಕ ಅಸ್ವಸ್ಥರು ತಮ್ಮ ತಮ್ಮ ಉನ್ಮತ್ತತೆಗಳಿಂದ ತಾವಿರುವ ಜಾತಿ, ಧರ್ಮ, ಸಂಸ್ಕೃತಿ, ಭಾಷೆ; ಹೀಗೆ ಯಾವುದೋ ಒಂದು ಲಾಂಛನವನ್ನು ಹಿಡಿದೆತ್ತುತ್ತಾರೆ. ತಲೆ ಕೆಟ್ಟವರ ಕೂಟಗಳು ತಮ್ಮ ತಮ್ಮ ಅಮಲಿನಲ್ಲಿ ಉನ್ಮತ್ತರಾಗಿ ವರ್ತಿಸುತ್ತಿರುತ್ತವೆ.
ಈ ಉನ್ಮತ್ತತೆಯ ಸಮಸ್ಯೆ ಸಾಂಘಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಅಥವಾ ಸಾಂಸ್ಕೃತಿಕವಾಗಿ ಇದೆ ಎಂದರೆ ಅರ್ಥ, ಅದು ವ್ಯಕ್ತಿಗತವಾಗಿ ಮಾನಸಿಕ ಸಮಸ್ಯೆಯಾಗಿದೆ ಎಂದೇ. ಇಲ್ಲಿ ಸರಿ ಮಾಡಿಕೊಳ್ಳದೆಯೇ ಅಲ್ಲಿ ಸರಿಯಾಗದು.
ಇದಕ್ಕೆಲ್ಲಾ ಪರಿಹಾರವಿಲ್ಲವೇ? ಇದೆ. ಖಂಡಿತ ಇದೆ.

(ಮುಂದುವರಿಯುತ್ತದೆ)

LEAVE A REPLY

Please enter your comment!
Please enter your name here