ಹುಚ್ಚು ಮನಸ್ಸಿನ ಸಾವಿರ ಮುಖಗಳು 09

  • ಯೋಗೀಶ್ ಮಾಸ್ಟರ್, ಬೆಂಗಳೂರು

ಇವತ್ತಿನ ಮನುಷ್ಯನು ಆ ಶಿಲಾಯುಗದ ಮನುಷ್ಯನಲ್ಲಿದ್ದ ಹೋರಾಟದ, ಪೈಪೋಟಿಯ ಮತ್ತು ಮೇಲುಗೈ ಸಾಧಿಸುವ ಗುಣಗಳನ್ನು ಈಗಲೂ ಸಾಗಿಸುತ್ತಿದ್ದಾನೆ ಮತ್ತು ಸಾಧಿಸುತ್ತಿದ್ದಾನೆ. ಭೂಮಿಯ ವಿವಿಧ ಭಾಗಗಳಲ್ಲಿ ವಿವಿಧ ಜನಾಂಗಗಳು ಅಥವಾ ಸಂತತಿಗಳು ಹುಟ್ಟಿದವು. ಅವುಗಳು ಬೆಳೆದವು, ವಿಕಾಸವಾದವು. ಶಾರೀರಿಕವಾಗಿ ಹೇಗೆ ಚಹರೆಗಳನ್ನು ಸಾಗಿಸಿಕೊಂಡು ಬಂದರು. ಬಣ್ಣ, ಸಂಸ್ಕೃತಿ ಮತ್ತು ಇತರ ರೂಢಿಗಳನ್ನು ಪೀಳಿಗೆಯಿಂದ ಪೀಳಿಗೆಗಳಿಗೆ ಸಾಗಿಸಿಕೊಂಡು ಬಂದರು.

ಟತಮ್ಮ ಬಣ್ಣ, ತಮ್ಮ ಸಂಸ್ಕೃತಿ, ತಮ್ಮ ರೂಢಿಗಳ ಬಗ್ಗೆ ಹೆಚ್ಚುಗಾರಿಕೆಯನ್ನು ಬೆಳೆಸಿಕೊಂಡಿದ್ದ ಜನಾಂಗಗಳಿಗೆ ಬೇರೆ ಬಣ್ಣದವರನ್ನು, ಸಂಸ್ಕೃತಿ ಮತ್ತು ಭಾಷೆಯವರನ್ನು ನೋಡಿಯೂ ಗೊತ್ತಿರದಿದ್ದಾಗ, ನೋಡಿದರು. ವಿಚಿತ್ರವೆನಿಸಿತು. ವಿಲಕ್ಷಣವೆನಿಸಿತು. ಮೂಲತಃ ಅಧೀನದಲ್ಲಿಟ್ಟುಕೊಳ್ಳುವ ಪ್ರವೃತ್ತಿಯಿಂದಾಗಿ ತಮ್ಮದನ್ನು ಶ್ರೇಷ್ಟವೆಂದು ಹೊಸದಾಗಿ ನೋಡಿದವನ್ನು ಕನಿಷ್ಟವೆನ್ನುವ ಪ್ರತಿಕ್ರಿಯೆಗಳನ್ನು ತೋರಿದರು. ಆ ಪ್ರತಿಕ್ರಿಯೆಗಳನ್ನು ಸಮರ್ಥಿಸಿಕೊಂಡು ಸಾಧಿಸುತ್ತಾ ಅದನ್ನೂ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಸಿದರು. ಅವರು ನಿರ್ಧಿಷ್ಟ ಚಹರೆ, ಬಣ್ಣ, ರೂಢಿ, ಸಂಸ್ಕೃತಿ ಇತ್ಯಾದಿಗಳಿಂದ ತಮ್ಮ ಬಗ್ಗೆ ಹೆಚ್ಚುಗಾರಿಕೆ ಮತ್ತು ಇತರ ಜನಾಂಗಗಳ ಬಗ್ಗೆ ಹೇವರಿಕೆಯನ್ನು ಹೊಂದುವುದು ವ್ಯಕ್ತಿಗತ ಮಾತ್ರವಾಗಿರಲಿಲ್ಲ. ಅದನ್ನು ಸಾಮುದಾಯಿಕ ಮಾಡಿದ್ದರು. ಬಿಳಿಯರ ಮತ್ತು ಆರ್ಯರ ಅಹಂಕಾರ ಎಷ್ಟರಮಟ್ಟಿಗಿತ್ತೆಂದರೆ ತಾವಷ್ಟೇ ಸುಸಂಸ್ಕೃತರು ಉಳಿದವರೆಲ್ಲಾ ಹೀನರು ಎಂಬ ಭಾವವನ್ನು ಸಾಮೂಹಿಕವಾಗಿ ಹೊಂದಿದ್ದು ಅದನ್ನು ಪ್ರತಿಪಾದಿಸುತ್ತಿದ್ದರು. ತಮಾಷೆಯೇನು ಗೊತ್ತೇ? ಅವರು ಇತರ ಜನಾಂಗಗಳನ್ನು ನೋಡದೇ ಇದ್ದಾಗಲೂ ಈ ಬಗೆಯ ಮನಸ್ಥಿತಿಗಳನ್ನು ಹೊಂದಿದ್ದರು. ಬಿಳಿಯರು ಕರಿಯರನ್ನು ನೋಡದಿದ್ದಾಗ, ಆರ್ಯರು ದಸ್ಯುಗಳನ್ನು ನೋಡದಿದ್ದಾಗಲೂ ಇಂತಹ ಶ್ರೇಷ್ಟ ಮತ್ತು ಕನಿಷ್ಟದ ಅರಿಮೆಗಳನ್ನು ತಮ್ಮಲ್ಲೇ ಹೊಂದಿದ್ದರು. ಬಿಳಿಯರು ಬಿಳಿಯರಲ್ಲೇ, ಕರಿಯರು ಕರಿಯರಲ್ಲೇ, ಆರ್ಯರು ಆರ್ಯರಲ್ಲೇ, ದಸ್ಯುಗಳು ದಸ್ಯುಗಳಲ್ಲೇ ಬಣಗಳಾಗಿದ್ದರು ಹೊಡೆದಾಡಿಕೊಳ್ಳುತ್ತಿದ್ದರು. ಸಣ್ಣ ಸಣ್ಣ ವಿಷಯಗಳ ಕುರಿತಾಗಿ (ಅದು ನಮಗೆ ಈಗ ಸಣ್ಣದು ಅನ್ನಿಸುತ್ತದೆ. ಆದರೆ ಆಗ ಅವರಿಗೆ ಪ್ರಮುಖವಾದ ವಿಷಯಗಳೇ ಆಗಿರುತ್ತಿದ್ದವು) ಹೊಡೆದಾಡಿಕೊಳ್ಳುತ್ತಿದ್ದರು. ಒಂದು ಬಣ, ಮತ್ತೊಂದು ಬಣವನ್ನು, ಒಂದು ಗಣ ಮತ್ತೊಂದು ಗಣವನ್ನು, ಒಂದು ಗೋತ್ರ ಮತ್ತೊಂದು ಗೋತ್ರವನ್ನು, ಒಂದು ಬುಡಕಟ್ಟು ಮತ್ತೊಂದು ಬುಡಕಟ್ಟನ್ನು ಸಣ್ಣ ಪುಟ್ಟ ವ್ಯತ್ಯಾಸಗಳ ಕಾರಣಕ್ಕೆ ಬಡಿದಾಡಿಕೊಳ್ಳುತ್ತಿದ್ದರು. ಸಾಲದಕ್ಕೆ ಒಂದು ಸಂತತಿಯು ಮತ್ತೊಂದು ಸಂತತಿಯನ್ನು ಸಂಪೂರ್ಣ ನಾಶ ಮಾಡಿ ತಮ್ಮ ಸಂತತಿಯು ಮಾತ್ರ ಇರಬೇಕೆನ್ನುವಷ್ಟರ ಮಟ್ಟಿಗೆ ಅಧಿಪತ್ಯ ಸಾಧಿಸಲು ಯತ್ನಿಸುತ್ತಿದ್ದರು. ಆಮೇಲೆ ತಮ್ಮಿಂದ ಸೋತವರು ಸಂಪೂರ್ಣ ನಾಶವಾಗಬಾರದು. ಆದರೆ ತಮ್ಮ ಅಡಿಯಾಳಾಗಿ, ದಾಸರಾಗಿ, ತಮ್ಮ ಗುಲಾಮರಾಗಿ ಇರಬೇಕೆಂದು ಬಯಸುತ್ತಿದ್ದರು. ಏಕೆಂದರೆ ತಮ್ಮ ಅಧೀನವಾಗಿ ತಾವು ಕಾಲೆತ್ತಿ ಒದೆಯುವಾಗ ಸೋತವರ, ಪರಕೀಯರ ಕುಂಡೆ ಒದೆಸಿಕೊಳ್ಳಲು ಬೇಕಾಗುತ್ತದೆ. ತನ್ನ ಸ್ವಾಮಿತ್ವದ ದಾಹ ತೃಪ್ತಿಗೊಳ್ಳುವುದು ಆಗಲೇ. ಬರೀ ನಮ್ಮವರೇ ಇದ್ದರೆ, ಸಮಾನರೇ ಇದ್ದರೆ ಯಾರು ಯಾರ ಮೇಲೆ ದಬ್ಬಾಳಿಕೆ ಮಾಡುವುದು? ಹಾಗಾಗಿ ಇತರರನ್ನು ದುರ್ಬಲಗೊಳಿಸಿ, ತಮ್ಮ ಅಧೀನವಾಗಿಸಿಕೊಳ್ಳುವಂತಹ ಹೋರಾಟಗಳು ಬೇಕಾಗಿದ್ದರು. ಅದರಲ್ಲಿ ಗೆಲುವು ಸೋಲು ಇರಬೇಕಿತ್ತು. ಸೋತವರು ದಾಸರಾಗಿ ಗೆದ್ದವರ ಸೇವೆ ಮಾಡಬೇಕಿತ್ತು. ಮೊಣಕಾಲೂರಿ ಅವರ ಅಧಿಪತ್ಯವನ್ನು ಒಪ್ಪಬೇಕಿತ್ತು. ಹೀಗೆ ಸ್ವಾಮಿತ್ವದ ಅಹಂಕಾರವು ಪೀಳಿಗೆಯಿಂದ ಪೀಳಿಗೆಗೆ ಸಾಗಿಬರುವಾಗ ಈ ಸಂಗತಿಗಳನ್ನೆಲ್ಲಾ ಸಾಕ್ಷೀಕರಿಸುತ್ತಾ, ಅನುಭವಿಸುತ್ತಾ, ಆಕ್ರೋಶ ಪಡುತ್ತಾ, ಆನಂದಿಸುತ್ತಾ ಇರುವ ವ್ಯಕ್ತಿಗಳೆಲ್ಲಾ ಬರೀ ಶಾರೀರಿಕ ಚಹರೆಗಳನ್ನು ಮಾತ್ರವಲ್ಲದೇ ಸಾಮುದಾಯಿಕ ಮನಸ್ಥಿತಿಗಳನ್ನೂ ಕೂಡಾ ಸಾಗಿಸಿದರು. ಸಾಮುದಾಯಿಕವಾದ ಧೋರಣೆಗಳು ಪೀಳಿಗೆಯಿಂದ ಪೀಳಿಗೆಗೆ ಸಾಗಿ ಬರುತ್ತಾ ಮನುಷ್ಯರಲ್ಲಿ ವ್ಯಕ್ತಿಗತವಾದ ಮಾನಸಿಕ ಸಮಸ್ಯೆಗಳಾದವು. ಸಾವಿರಾರು ವರ್ಷಗಳಿಂದ ಸಾಗಿಬಂದ ಈ ಮನಸ್ಥಿತಿಗಳು ಹುಟ್ಟುಗುಣಗಳಂತೆ ನಂತರ ಅನುವಂಶೀಯವಾಗಿಯೂ ಮುಂದುವರಿದವು. ಮುಂದೆ ವಿವಿಧ ಜನಾಂಗಗಳು ಪರಸ್ಪರ ಪರಿಚಯವಾದ ಮೇಲೆ ಹೊಕ್ಕುಬಳಕೆ ಆರಂಭವಾದವು. ಅನಿವಾರ್ಯವಾಗಿಯೋ, ಆಕಸ್ಮಿಕವಾಗಿಯೋ ಅಥವಾ ಆಕರ್ಷಿತವಾಗಿಯೋ ವರ್ಣಸಂಕರಗಳಾದವು. ಬೆರಕೆ ಜನಾಂಗಗಳ ಪೀಳಿಗೆಗಳು ಮುಂದುವರಿದವು. ಆದರೆ ಅನುವಂಶೀಯವಾಗಿ ಮುಂದುವರಿದಂತಹ ಸ್ವಾಮಿತ್ವವನ್ನು ಸಾಧಿಸುವ, ಹೋರಾಡುವ, ಗೆಲ್ಲುವ, ಸೋಲಿಸುವ, ಅಧೀನಕ್ಕೊಳಪಡಿಸುವಂತಹ ಪ್ರವೃತ್ತಿಗಳು, ವರ್ಣತಂತು ಅಥವಾ ಡಿ ಎನ್ ಎಗಳಲ್ಲಿ ಅಡಕವಾಗಿರುವ ಹುಟ್ಟುಗುಣಗಳೇನಾದವು? ಬೇರೆ ಬೇರೆ ರೂಪಗಳಲ್ಲಿ ಪ್ರಕಟಗೊಳ್ಳುತ್ತವೆ. ನೆನಪಿರಲಿ, ಮನುಷ್ಯ ಶಿಲಾಯುಗದಿಂದ ಹೊರಗೆ ಬಂದಿದ್ದಾನೆ. ಆದರೆ ಅವನಿಂದ ಶಿಲಾಯುಗವು ಹೊರಗೆ ಬಂದಿಲ್ಲ. ಶಿಲಾಯುಗದಿಂದಲೂ ಈ ಹೊತ್ತಿನ ವರೆಗೂ ಮನುಕುಲವು ಪರಸ್ಪರ ಸಮೂಹಗಳ ನಡುವೆ ಒಡಂಬಡಿಕೆಗಳನ್ನು ಮಾಡಿಕೊಂಡು ಬಂದಿವೆ. ಸಹಜೀವನ ನಡೆಸುವ ಅನಿವಾರ್ಯತೆ, ಪರಸ್ಪರ ಅವಲಂಬಿತವಾಗಿರುವ ವ್ಯವಹಾರಗಳು, ಬಲಾಬಲಗಲ ಪರೀಕ್ಷೆಗಳನ್ನು ಮಾಡಲು ಹೋದರೆ ಅಳಿದು ಹೋಗುವ ಭಯ ಇತ್ಯಾದಿಗಳೆಲ್ಲಾ ಇರುವುದರಿಂದ ಸಂಪೂರ್ಣ ಬಲಪ್ರದರ್ಶನ ಮಾಡಿ ಯುದ್ಧವನ್ನೂ ಮಾಡಲಾರ, ಶಾಂತಿ ಕಾಪಾಡಲು ಶಸ್ತ್ರವನ್ನೂ ಸಂಪೂರ್ಣವಾಗಿ ಕೆಳಗಿಳಿಸಲಾರ. ದೇಶ ದೇಶಗಳೂ ನೆಪಗಳನ್ನು ಹುಟ್ಟಿಸಿಕೊಂಡು ಯುದ್ಧಗಳಿಗೆ ಕಾಲು ಕೆರೆಯುತ್ತವೆ. ವ್ಯಕ್ತಿ ವ್ಯಕ್ತಿಗಳೂ ಅಣುಕು ಯುದ್ಧಗಳನ್ನು, ಹೋರಾಟಗಳನ್ನು ತಮ್ಮ ತಮ್ಮ ಮಟ್ಟಗಳಲ್ಲಿ ಲಘುವಾಗಿ ಆಡಿಕೊಂಡು ತೃಪ್ತಿ ಪಡೆಯುತ್ತವೆ. ಮನುಷ್ಯನಿಗೆ ಅನುವಂಶೀಯವಾಗಿ ಬಂದಿರುವ ಹೋರಾಟಗಳ, ಪೈಪೋಟಿಗಳ, ಅಧೀನಗೊಳಿಸುವ ಮೂಲಪ್ರವೃತ್ತಿಯು ಯಾವ್ಯಾವ ವೇಷಗಳನ್ನು ಹಾಕಿಕೊಂಡು ತನ್ನ ಗುಣಗಳನ್ನು ತೃಪ್ತಿಪಡಿಸಿಕೊಳ್ಳುತ್ತಿರುತ್ತವೆ ಗೊತ್ತೇ? ಇನ್ನೊಂದು ಮಾತು, ವಸ್ತುವಿನಲ್ಲಾಗಲಿ, ಸಸ್ಯ ಸಂಕುಲಗಳಲ್ಲಾಗಲಿ, ಕ್ರಿಮಿಕೀಟಗಳಲ್ಲಾಗಲಿ ಪ್ರಾಣಿಪಕ್ಷಿಗಳಲ್ಲಾಗಲಿ, ಮನುಷ್ಯನಲ್ಲಾಗಲಿ ಅನುವಂಶೀಯವಾಗಿ ಬಂದಿರುವ ಗುಣಗಳು ಯಾವುವೇ ಇರಲಿ, ಅವುಗಳು ಕಾರ್ಯ ಚಟುವಟಿಕೆಯ ಮೂಲಕ ತಮ್ಮ ಇರುವನ್ನು ಸಾರ್ಥಕಪಡಿಸಿಕೊಳ್ಳಲು ಹೆಣಗಾಡುತ್ತಿರುತ್ತವೆ. ಗುಣಗಳು ಪ್ರಕಟಣಾ ದಾಹದಿಂದ ಬಳಲುತ್ತಿದ್ದು ಅದನ್ನು ತೃಪ್ತಿಪಡಿಸಿಕೊಳ್ಳುವ ಸಂಗತಿ ಒದಗಲು ಕಾಯುತ್ತಿರುತ್ತವೆ.ಸಾಹಿತ್ಯ ಸ್ಪರ್ಧೆ, ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆ, ಚಿತ್ರಬಿಡಿಸುವ ಸ್ಪರ್ಧೆ, ಬಣ್ಣ ತುಂಬುವ ಸ್ಪರ್ಧೆ; ಹೀಗೆ ನಾನಾ ಬಗೆಯ ಸ್ಪರ್ಧೆಗಳನ್ನು ಬಹಳ ಎಳೆಯ ವಯಸ್ಸಿನಿಂದಲೇ ಪರಿಚಯಿಸುತ್ತಾರೆ. ಸ್ಪರ್ಧೆ ಎಂದರೇನು? ಹತ್ತು ಹಲವು ಜನ ಒಂದೇ ಪ್ರತಿಭೆ ಅಥವಾ ಒಂದೇ ಕೆಲಸದ ವಿಷಯವಾಗಿ ಒಂದೆಡೆ ಸೇರುತ್ತಾರೆ. ಯಾರು ಸಮರ್ಥವಾಗಿ ಎಲ್ಲರನ್ನೂ ಹಿಂದಕ್ಕೆ ಹಾಕುವರೋ ಅವರು ಗೆದ್ದವರು. ಅದರಲ್ಲಿ ಶ್ರೇಣಿ ಮೊದಲು, ಎರಡು, ಮೂರು, ಸಮಾಧಾನ ಇತ್ಯಾದಿ. ಉಳಿದವರು ಸೋತವರು. ಸ್ಪರ್ಧೆಯನ್ನು ಆಯೋಜಿಸುವರಾಗಲಿ, ಸ್ಪರ್ಧೆಗಳಲ್ಲಿ ಭಾಗವಹಿಸುವರಾಗಲಿ ಆದಿಮಕಾಲದ ಮನಸ್ಥಿತಿಯಿಂದ ಇನ್ನೂ ಬಂದಿಲ್ಲದವರು. ಹಲವಾರು ಜನರನ್ನು ನಿರಾಶೆಗೊಳಿಸಿ, ತಮ್ಮ ಅಧಿಪತ್ಯವನ್ನು ಎತ್ತಿ ಹಿಡಿಯುವವರು. ಗೆಲ್ಲಬೇಕು ಎಂಬ ಮನಸ್ಥಿತಿಯೇ ಕ್ರೂರ. ಇತರರನ್ನು ಸೋಲಿಸಬೇಕೆನ್ನುವುದೇ ಅಮಾನವೀಯ. ಈ ಮಾನವೀಯ ಮತ್ತು ಅಮಾನವೀಯ ಎನ್ನುವುದು ಇದೇ ಮನಸ್ಥಿತಿಗಳು ಮಾಡಿಕೊಂಡಿರುವ ಒಡಂಬಡಿಕೆಯ ಪ್ರಕಾರ. ಯಾರೋ ಒಬ್ಬರು ನನಗೆ ಆ ಕಥಾ ಸ್ಪರ್ಧೆಯಲ್ಲಿ ಮೊದಲನೆಯ ಬಹುಮಾನ ಬಂದಿತು ಎಂದು ಹಿಗ್ಗುವ ಮನಸ್ಥಿತಿಯೊಳಗೆ ಇತರರನ್ನು ಹಿಂದಿಕ್ಕಿದ ಸಂಭ್ರಮ ಕಾಣುತ್ತದೆ. ತನ್ನ ಹಾಗೆ ಸ್ಪರ್ಧೆಯಲ್ಲಿ ಭಾಗವಹಿಸಿರುವ ಇತರ ಸ್ಪರ್ಧಿಗಳ ಬಗ್ಗೆ ಮರುಗಿ, ಅವರಿಗೆ ಸಂತಾಪವನ್ನೇನೂ ಅವನು ಸೂಚಿಸುವುದಿಲ್ಲ. ಅವನಿಗೆ ಅವರ್ಯಾರಿದ್ದಾರೆ ಎಂಬುದೇ ಗೊತ್ತಿರುವುದಿಲ್ಲ. ಪ್ರಥಮ ಅಥವಾ ದ್ವಿತೀಯ ಎಂದು ತನ್ನ ಸ್ಥಾನ ತಿಳಿದಾಗ ಹಿಗ್ಗುವ ವ್ಯಕ್ತಿ ಯಾರು ತನ್ನ ಪ್ರಥಮನೆಂದು ಆಯ್ಕೆ ಮಾಡಿರುತ್ತಾರೋ ಅವರಿಗೆ ಸೌಜನ್ಯಪೂರ್ವಕವಾಗಿ ಧನ್ಯವಾದವನ್ನು ಸೂಚಿಸುತ್ತಾನೆ. ನಿಜ ಹೇಳಬೇಕೆಂದರೆ ಹಾಗೆ ಧನ್ಯವಾದವನ್ನು ಸೂಚಿಸುವ ಅಗತ್ಯವೇನೂ ಇರುವುದಿಲ್ಲ. ಆದರೂ ಅವನು ತನ್ನ ವಂದನೆಗಳನ್ನು ಸೂಚಿಸುವುದು ತನ್ನ ವಸ್ತುವನ್ನು ಅವನು ಮೆಚ್ಚಿದ್ದಕ್ಕೆ, ಆಯ್ಕೆ ಮಾಡಿದ್ದಕ್ಕೆ. ತನ್ನೊಳಗಿನ ಪ್ರವೃತ್ತಿಯ ದಾಹವನ್ನು ತೃಪ್ತಿಪಡಿಸಿದ್ದಕ್ಕೆ. ಅವನಿಗೆ ಆ ಪ್ರವೃತ್ತಿ ಇದ್ದಿಲ್ಲವಾದರೆ, ಅಥವಾ ಅದನ್ನು ತಾನು ಗುರುತಿಸಿಕೊಂಡು ಈ ಪೈಪೋಟಿಯ ಮನಸ್ಥಿತಿಯ ಗುಣಜಾಲದಿಂದ ಹೊರಗೆ ಬರುವಂತಹ ಪ್ರಯತ್ನ ಮಾಡುವವನಾದರೆ, ಸ್ಪರ್ಧೆಗೆ ಆಕರ್ಷಿತನೇ ಆಗುವುದಿಲ್ಲ. ಅದಕ್ಕೆ ತನ್ನ ಕತೆಯನ್ನು, ಚಿತ್ರವನ್ನು ಅಥವಾ ಮತ್ತೊಂದನ್ನು ಕಳಿಸುವ ಕೆಲಸವನ್ನೇ ಮಾಡುವುದಿಲ್ಲ. ಗೆಲ್ಲುವ ಆಸೆ ಇದೆ ಎಂದರೆ ಅಥವಾ ಗೆಲ್ಲಲು ಪರಿಶ್ರಮ ಮಾಡುತ್ತಿದ್ದಾನೆಂದರೆ ಅವನಲ್ಲಿ ಆ ಅಧಿಪತ್ಯ ಸಾಧಿಸುವ ಪ್ರವೃತ್ತಿ ಅಥವಾ ವಾಸನೆ ಇನ್ನೂ ಜೀವಂತವಾಗಿ ಉಸಿರಾಡುತ್ತಿದೆ ಎಂದೇ ಅರ್ಥ.

ಯಾವುದೋ ಕ್ರೀಡೆಯ ಪಂದ್ಯದಲ್ಲಿ ಭಾಗವಹಿಸುವ ಜನರ ಮನಸ್ಥಿತಿಗಳು ಗೆಲ್ಲುವಾಗ ಅದೆಷ್ಟು ಹಿಗ್ಗುತ್ತದೆ, ಸೋತಾಗ ಅದೆಷ್ಟು ಕುಗ್ಗುತ್ತದೆ. ಗೆದ್ದಾಗ ಅವರ ಉನ್ಮತ್ತತೆಯ ಅಬ್ಬರ, ಸೋತಾಗ ಗೋಳಿಡುವುದು ಇವೆಲ್ಲವೂ ಆ ಆದಿಮ ಕಾಲದಿಂದ ಮುಂದುವರಿದುಕೊಂಡು ಬಂದಿರುವ ಅನುವಂಶೀಯ ಗುಣ ಪ್ರಭಾವಗಳೇ. ಬಿಗಿಯಾದ ಸ್ಪರ್ಧೆಯನ್ನು ನೋಡಲೂ ಜನ ಕಾತರಿಸುತ್ತಿರುತ್ತಾರೆ. ಹಿಂದೆ ವನ್ಯಮೃಗಗಳ ಜೊತೆಗೆ ಮನುಷ್ಯರನ್ನು ಹೊಡೆದಾಡಲು ಬಿಟ್ಟು, ಅಥವಾ ಮಹಾಬಲರನ್ನು ಒಬ್ಬರನ್ನೊಬ್ಬರು ಸಾಯುವವರೆಗೆ ಬಡಿದಾಡಲು ಬಿಡುತ್ತಿದ್ದ ಕ್ರೀಡೆಗಳನ್ನು ಜನರು ಹೇಗೆ ಆನಂದಿಸುತ್ತಿದ್ದರು! ಗ್ಲ್ಯಾಡಿಯೇಟರುಗಳನ್ನು ನೆನಪಿಸಿಕೊಳ್ಳಿ. ನೋಡುಗರಲ್ಲಿಯೂ ಒಬ್ಬರನ್ನೊಬ್ಬರು ಬಡಿದು ಹಾಕಿ ಅಧಿಪತ್ಯ ಸಾರುವ ಕ್ರೌರ್ಯದ ವಾಸನೆ ಉಸಿರಾಡುತ್ತಿತ್ತು. ಕ್ರೀಡಾಮನೋಭಾವದಿಂದ ಆಡಬೇಕು, ಗೆಲುವು ಸೋಲು ಎನ್ನುವುದಕ್ಕಿಂತ ಭಾಗವಹಿಸುವುದು ಮುಖ್ಯ, ಈಗಲ್ಲದಿದ್ದರೆ ಮುಂದಿನ ಸಲ, ನಿಮ್ಮ ಪ್ರತಿಭೆಗೆ, ಅದನ್ನು ಅಳೆದುಕೊಳ್ಳಲು ಇದೊಂದು ವೇದಿಕೆ; ಇತ್ಯಾದಿ ತಿಪ್ಪೆಸಾರಿಸುವ ಮಾತುಗಳೆಲ್ಲಾ ನಾಗರಿಕತೆಯ ಮುಖವಾಡ ಹೊತ್ತಿರುವ ಆದಿಮ ಮನಸ್ಥಿತಿಯ ಗುಣಗಳೇ. ಆದಿಮ ಕಾಲದ ಕ್ರೌರ್ಯದ ನವಿರು ವೇಷ ಈ ನಾಗರಿಕ ಯುಗದ ಸ್ಪರ್ಧೆಗಳು. ಯಾವುದೇ ಸ್ಪರ್ಧೆಗಳಾಗಲಿ ಇದರಿಂದ ಹೊರತಲ್ಲ. ಸ್ಪರ್ಧೆಗಳ ಸಂಕೀರ್ಣತೆ ಮತ್ತು ವಿಲಕ್ಷಣತೆಯನ್ನು ಅರ್ಥ ಮಾಡಿಕೊಳ್ಳಿ. ಒಬ್ಬರು ಮತ್ತೊಬ್ಬರ ಮೇಲೆ ಅಧಿಪತ್ಯವನ್ನು ಸಾಧಿಸಿ ತನ್ನ ಗೆಲುವನ್ನು ಮೆರೆಯಬಾರದು, ಸೋತವರನ್ನು ಅಧೀನವಾಗಿಸಿ ಅಪಮಾನಿಸಬಾರದು. ಬಲಗಳು ವ್ಯಕ್ತಿಯಿಂದ ವ್ಯಕ್ತಿಗೆ, ಕಾಲದಿಂದ ಕಾಲಕ್ಕೆ, ದೇಶದಿಂದ ದೇಶಕ್ಕೆ, ರೂಢಿಯಿಂದ ರೂಢಿಗೆ ವ್ಯತ್ಯಾಸವಾಗುತ್ತದೆ. ಆದ್ದರಿಂದ ಪೈಪೋಟಿಗಳಿಂದ ಉಂಟಾಗುವ ಗೆಲುವು ಸೋಲುಗಳು ಸಮಸಮಾಜದಲ್ಲಿ ಯಾರನ್ನೂ ಮೇಲೆತ್ತಿ ವೈಭವೀಕರಿಸಬಾರದು, ಯಾರನ್ನೂ ಕೆಳಗೆ ತುಳಿದು ನೋವುಣ್ಣಿಸಬಾರದು ಎಂಬ ಒಡಂಬಡಿಕೆಯನ್ನು ನಾವು ವ್ಯವಸ್ಥಿತವಾಗಿ ಮಾಡಿಕೊಂಡಿದ್ದೇವೆ. ಆದರೆ ಅಂತಹ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿರುವ ಸಮಾಜದ ದ್ವಂದ್ವ ಮನಸ್ಥಿತಿಯ ಪ್ರದರ್ಶನ ಈ ಸ್ಪರ್ಧೆಗಳಲ್ಲಿ ಕಾಣುತ್ತದೆ. ಸಾಮುದಾಯಿಕ ಉಳಿಯುವಿಕೆ ಮತ್ತು ವ್ಯಕ್ತಿಗತವಾದ ಉಳಿಯುವಿಕೆಯ ನಡುವಿನ ಸತತ ಸಂಘರ್ಷದ ಪ್ರತಿಫಲನಗಳನ್ನು ಈ ಸ್ಪರ್ಧೆಗಳಲ್ಲಿ ಕಾಣುತ್ತಿರುತ್ತೇವೆ. ಆದರೆ ಅದನ್ನು ಹಾಗೆನ್ನುಕೊಳ್ಳದಿರುವಂತೆ ಜಾಗೃತ ಮನಸ್ಸು ವ್ಯವಸ್ಥಿತವಾಗಿ ನೋಡಿಕೊಳ್ಳುತ್ತದೆ. ಒಂದು ಸರಳ ಪ್ರಶ್ನೆ. ಪ್ರತಿಭೆಗಳ ಅನಾವರಣಕ್ಕೆ ಈ ಸ್ಪರ್ಧೆಗಳು ಎನ್ನುತ್ತಾ ಅವುಗಳನ್ನು ಆಯೋಜಿಸುವವರು ಮೇಳಗಳನ್ನು ಮಾಡಬಾರದೇಕೆ? ಮೇಳಗಳಲ್ಲಿ ಭಾಗವಹಿಸುವ ವ್ಯಕ್ತಿಗಳನ್ನು ಮತ್ತು ತಂಡಗಳನ್ನು ಆಡಿಶನ್ ಮಾಡಿ ಸೂಕ್ತ ತರಬೇತಿಗಳನ್ನು ನೀಡಿ ಅಥವಾ ಪಡೆಯಲು ಸೂಚಿಸಿ, ಅವರ ಪ್ರತಿಭೆಯ ಪ್ರದರ್ಶನಕ್ಕೆ ವೇದಿಕೆಯನ್ನು ಒದಗಿಸಬಾರದೇಕೆ? ಹಾಗೆ ಮಾಡಿದರೆ ಅದು ಸಹಕಾರ ತತ್ವದಲ್ಲಿ ನಡೆದಂತಾಗುತ್ತದೆ. ಸಹಕಾರ ತತ್ವವು ಮನುಷ್ಯನ ಬಹಳ ಕಷ್ಟದ ಪ್ರಯತ್ನ. ಸ್ಪರ್ಧೆಯು ಸಹಜ ಗುಣ. ಸಾಮಾಜಿಕ ಬದುಕಿಗೆ ತೊಡಕಾಗುವಂತಹ ವ್ಯಕ್ತಿಯ ಸಹಜ ನೈಸರ್ಗಿಕ ಮತ್ತು ಅನುವಂಶೀಯ ಗುಣಗಳನ್ನು ಮೀರಿ ವಿವಿಧ ತತ್ವಗಳನ್ನು ಅಳವಡಿಸಿಕೊಂಡು ಸಹಕಾರದ ತತ್ವದಲ್ಲಿ ಬಾಳ್ವೆ ಮಾಡುವ ಪ್ರಯತ್ನವನ್ನೇ ಮನುಷ್ಯತ್ವ ಎನ್ನುವುದು. ಇನ್ನೊಂದು ಉದಾಹರಣೆ ಈ ವಿಷಯದಲ್ಲಿ ಮತ್ತಷ್ಟು ಸ್ಪಷ್ಟತೆ ಕೊಡಬಹುದು.

ಮದುವೆಯಾಗಿರುವವರಾಗಲಿ, ಪ್ರೇಮಿಗಳಾಗಲಿ ತಮ್ಮ ಸಂಗಾತಿಗಳೊಡನೆ ಇದ್ದರೂ ಪರಸಂಗಕ್ಕೆ ಆಕರ್ಷಿತರಾಗುವುದು ಸಹಜಗುಣ. ಮುಕ್ತ ಲೈಂಗಿಕತೆಯ ಪ್ರವೃತ್ತಿ ಅಥವಾ ಸ್ವಚ್ಛಂದ ಕಾಮ ಅವನ ಪಶುತನದ ನೈಸರ್ಗಿಕವಾಗಿ ಹುಟ್ಟುಗುಣ. ಆದರೆ ಪರಿಣಾಮಗಳ ಬಗ್ಗೆ ಅರಿತು ಪ್ರಜ್ಞಾವಂತಿಕೆಯಿಂದ ವರ್ತಿಸುವುದು ಅವನ ವಿವೇಚನಾ ಬಲ. ಅದಕ್ಕೆಂದೇ ‘ಒಲ್ಲೆನಯ್ಯ ಪರಸತಿಯರ ಸಂಗವ’ ಎಂದು ಶರಣರು ತನ್ನ ಹೆಂಡತಿಯ ಹೊರತಾಗಿ ಪರಸತಿಯನ್ನು ಕಾಮುಕ ದೃಷ್ಟಿಯಿಂದ ನೋಡದಿರುವಂತಹ ಮೌಲ್ಯಕ್ಕೆ ಬದ್ಧರಾದರು. ತನ್ನ ಹುಟ್ಟುಗುಣವನ್ನು ನಿಗ್ರಹಿಸಿ ಅಥವಾ ನಿಯಂತ್ರಿಸಿಕೊಂಡು ಇತರರೊಂದಿಗೆ ಆಕ್ರಮಣಕಾರಿಯಾಗಿ, ಅತಿಕ್ರಮಣಕಾರಿಯಾಗಿ ತೊಂದರೆಯಾಗದಂತೆ ಬಾಳಲು ವ್ಯಕ್ತಿ ತಾನು ತನ್ನೊಡನೆಯೇ ಒಡಂಬಡಿಕೆ ಮಾಡಿಕೊಳ್ಳಬೇಕು. ಅದನ್ನೇ ಅವನು ಆದರ್ಶ ಎನ್ನುತ್ತಾನೋ, ಮೌಲ್ಯ ಎನ್ನುತ್ತಾನೋ ಒಟ್ಟಾರೆ ಅದು ನಿಗ್ರಹ. ಸ್ವನಿಯಂತ್ರಣ. ಅದೇ ನೈತಿಕತೆ. ಅದೇ ಸಮಾಜದಲ್ಲಿ ವ್ಯಕ್ತಿಗಿರುವ ಅನಿವಾರ್ಯತೆ. (ಮುಂದುವರಿಯುವುದು)

LEAVE A REPLY

Please enter your comment!
Please enter your name here