ಹುಚ್ಚು ಮನಸ್ಸಿನ ಸಾವಿರ ಮುಖಗಳು 02

  • ಯೋಗೇಶ್ ಮಾಸ್ಟರ್, ಬೆಂಗಳೂರು

ಒಳಿತು ಮತ್ತು ಕೆಡಕು; ಈ ಎರಡನ್ನು ಅರಿಯುವುದಕ್ಕಿಂತ ಒಳ್ಳೆಯದು ಮತ್ತು ಕೆಟ್ಟದು ಎಂದು ಆಗುವ ಬಾಲಪಾಠಗಳು ಮನುಷ್ಯನ ಮನಸ್ಸಿನ ನಿರಂತರ ಸಂಘರ್ಷಗಳನ್ನು ಒಡ್ಡಿರುತ್ತದೆ. ಒಳಿತು ಮತ್ತು ಕೆಡಕು ಹಾಗೂ ಒಳ್ಳೆಯದು ಮತ್ತು ಕೆಟ್ಟದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಪ್ರಯತ್ನಿಸೋಣ.
ಒಳಿತು ಮತ್ತು ಕೆಡಕು ಎನ್ನುವುದು ಯಾವುದರಿಂದಲೋ ಯಾವುದರ ಮೇಲೋ ಏನೋ ಒಂದು ಆಗುವುದು. ಪ್ರಭಾವವನ್ನು ಬೀರುವುದು. ಕ್ರಿಯೆಗೆ ಅನುಸಾರವಾಗಿ ಅನುಕೂಲಕರವಾದ ಪ್ರತಿಕ್ರಿಯೆ ನಡೆದರೆ ಅಥವಾ ಪ್ರತಿಫಲ ಪಡೆದರೆ ಒಳಿತು ಎಂದೂ ಅನಾನುಕೂಲಕರ ಪ್ರತಿಕ್ರಿಯೆ ಸಿಕ್ಕರೆ ಅಥವಾ ಹಿತವಲ್ಲದ ಪ್ರತಿಫಲ ಪಡೆದರೆ ಕೆಡುಕು ಎಂದೂ ತಿಳಿಯೋಣ.
ಉದಾಹರಣೆಗೆ ಮೈಗೆ ಉಷ್ಣವಾಗಿರುವಾಗ ನೆನೆಸಿದ ಹೆಸರುಬೇಳೆ, ಸೌತೇಕಾಯಿ ತಿನ್ನುವುದು ತಂಪು. ಆದ್ದರಿಂದ ಅದು ಮೈಗೆ ಒಳಿತು. ಹಾಗೆಯೇ ಉಷ್ಣದ ಮೈಗೆ ಹಸಿಮೆಣಸಿನಕಾಯಿ ಅಥವಾ ಹೆಚ್ಚಿನ ಪ್ರಮಾಣದ ಮೆಣಸು ಒಳಿತಲ್ಲ ಅಥವಾ ಕೆಡುಕನ್ನು ಉಂಟು ಮಾಡುತ್ತದೆ.
ಆದರೆ ಒಳ್ಳೆಯದು ಮತ್ತು ಕೆಟ್ಟದು ಎನ್ನುವುದು ಪೂರ್ವ ನಿರ್ಧಾರಿತ ಪರಿಕಲ್ಪನೆಗಳು. ನಿಜವನ್ನೇ ಹೇಳುವುದು, ಕರುಣೆ ತೋರಿಸುವುದು, ಹಿತವಾದ ಮಾತುಗಳನ್ನು ಆಡುವುದು; ಇತ್ಯಾದಿಗಳೆಲ್ಲಾ ಒಳ್ಳೆಯದು. ಸುಳ್ಳು ಹೇಳುವುದು, ಹಿಂಸೆ ಕೊಡುವುದು, ಕದಿಯುವುದು ಇತ್ಯಾದಿಗಳೆಲ್ಲಾ ಕೆಟ್ಟದ್ದು.
ವಾಸ್ತವವಾಗಿ ಭಾಷೆಯ ದೃಷ್ಟಿಯಲ್ಲಿ ಒಳ್ಳೆಯದು ಮತ್ತು ಒಳಿತು, ಕೆಟ್ಟದ್ದು ಮತ್ತು ಕೆಡಕು ಎನ್ನುವುದರ ನಡುವೆ ಹೆಚ್ಚಿನ ಪ್ರಮಾಣದ ವ್ಯತ್ಯಾಸವೇನೂ ಇಲ್ಲ. ಆದರೆ, ಕ್ರಿಯೆ ಮತ್ತು ಅದರಿಂದ ಸಿಗುವ ಪ್ರತಿಫಲ ಹಾಗೂ ಪೂರ್ವನಿರ್ಧಾರಿತ ಒಳ್ಳೆಯ ಮತ್ತು ಕೆಟ್ಟ ಎಂಬ ವಿಚಾರಗಳ ಪರಿಕಲ್ಪನೆಗಳ ಬಗ್ಗೆ ಸ್ಪಷ್ಟತೆಯನ್ನು ಕಾಯ್ದುಕೊಳ್ಳಲು ಈ ಬರವಣಿಗೆಯಲ್ಲಿ ಪ್ರಯತ್ನಪಟ್ಟಿರುವುದಷ್ಟೇ.
ಒಟ್ಟಾರೆ ಈಗ ಒಳಿತು ಮತ್ತು ಕೆಡಕು ಎಂದರೆ ಕ್ರಿಯೆಗಳಿಂದ ಆಗುವ ಪ್ರತಿಫಲಗಳು, ಒಳ್ಳೆಯದು ಮತ್ತು ಕೆಟ್ಟದ್ದು ಎಂದರೆ ಪೂರ್ವನಿರ್ಧಾರಿತ ಸಮ್ಮತ ಮತ್ತು ಅಸಮ್ಮತ ಪರಿಕಲ್ಪನೆಗಳು ಎಂದು ಗಮನದಲ್ಲಿಟ್ಟುಕೊಳ್ಳೋಣ.
ಮನುಷ್ಯನಿಗೆ ಮಾನಸಿಕವಾಗಿ ಬೇಕಾಗಿರುವುದು ಒಂದು ತಿಳುವಳಿಕೆ. ಅದೇನೆಂದರೆ, ಯಾವುದರಿಂದ ಒಳಿತಾಗುತ್ತದೆ ಯಾವುದರಿಂದ ಕೆಡುಕಾಗುತ್ತದೆ ಎಂಬುದು. ಆದರೆ, ಇದನ್ನು ಮೀರಿ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂಬ ಪರಿಕಲ್ಪನೆಗಳ ಬಾಲಪಾಠ ಆಗುವುದರಿಂದ, ಒಳಿತು ಮತ್ತು ಕೆಡುಕಿನ ಅನುಭವ ಆಗುವ ಮುನ್ನವೇ ಮನುಷ್ಯನು ಇದು ಕೆಟ್ಟದ್ದು ಮತ್ತು ಒಳ್ಳೆಯದು ಎಂಬ ನಿರ್ಧಾರಕ್ಕೆ ಬಂದುಬಿಟ್ಟಿರುತ್ತಾನೆ. ಇಲ್ಲೇ ಸಮಸ್ಯೆ ಇರುವುದು.
ಯಾವುದನ್ನು ಒಳ್ಳೆಯದು ಎಂದು ಭಾವಿಸಿರುತ್ತಾನೆಯೋ ಅದರಿಂದ ಅವನಿಗೆ ಕೆಡುಕಿನ ಪರಿಣಾಮಗಳು ಆಗುತ್ತಿರಬಹುದು. ಹಾಗೆಯೇ ಕೆಟ್ಟದ್ದು ಎಂದು ಭಾವಿಸಿರುತ್ತಾನೆಯೋ ಅದರಿಂದ ಹಿತವೂ, ಸುಖವೂ ಕಾಣುತ್ತಿರಬಹುದು.
ಉದಾಹರಣೆಗೆ ನಿಜ ಹೇಳುವುದು ಒಂದು ಮೌಲ್ಯ. ಒಳ್ಳೆಯದು. ಸತ್ಯಂ ವದ, ಧರ್ಮಂ ಚರ ಅಂದರೆ ಸತ್ಯವನ್ನೇ ಹೇಳು, ಧರ್ಮವನ್ನೇ ಆಚರಿಸು ಎನ್ನುವುದು ಮೌಲಿಕವಾದದ್ದು. ಆದರೆ ವ್ಯಕ್ತಿಯು ಸತ್ಯವನ್ನು ಹೇಳುವುದರಿಂದ ಅನೇಕ ಅಹಿತಕರವಾದ ಸನ್ನಿವೇಶಗಳನ್ನು ಎದುರಿಸಬೇಕಾಗುವುದು, ಸಂಬಂಧಗಳ ವಿಷಯದಲ್ಲಿ ಒಡುಕು ಉಂಟಾಗಬಹುದು, ತನ್ನ ಪ್ರಾಮಾಣಿಕ ಅಭಿಪ್ರಾಯವನ್ನು ಅಭಿವ್ಯಕ್ತಿಸುವುದರಿಂದ ಅದನ್ನು ಒಪ್ಪದ ವ್ಯಕ್ತಿಗಳು ಮತ್ತು ಸಮಾಜವು ಅವನನ್ನು ದೂರುತ್ತದೆ, ದೂರೀಕರಿಸುತ್ತದೆ. ಹೀಗೆ ಯಾವುದನ್ನು ಸತ್ಯ ಮತ್ತು ಪ್ರಾಮಾಣಿಕತೆ ಎಂದು ಭಾವಿಸುತ್ತಾನೆಯೋ ಅದರಿಂದ ಅವನಿಗೆ ಅಹಿತವೂ, ಅಸೌಖ್ಯವೂ ಮತ್ತು ತೊಂದರೆಗಳೂ ಆಗುವ ಕಾರಣದಿಂದ ಯಾವುದು ಒಳ್ಳೆಯದು ಎಂದು ಭಾವಿಸುತ್ತಾನೋ ಅದರಿಂದ ಕೆಡುಕಿನ ಪ್ರತಿಫಲವನ್ನು ಅನುಭವಿಸುತ್ತಾನೆ.
ಪೋರ್ನ್ ವಿಡಿಯೋ ಅಥವಾ ಕಾಮೋತ್ತೇಜಕ ಚಿತ್ರಗಳನ್ನು ನೋಡುವುದು, ಅವುಗಳನ್ನು ನೋಡಿಕೊಂಡು ಹಸ್ತಮೈಥುನ ಮಾಡಿಕೊಳ್ಳುವುದು, ಯಾರ್ಯಾರೋ ಸ್ತ್ರೀಯರ ಅಥವಾ ಪುರುಷರ ನಗ್ನ ದೇಹಗಳನ್ನು ನೋಡುತ್ತಾ ತನ್ನ ಲೈಂಗಿಕತೃಪ್ತಿಯನ್ನು ಪಟ್ಟುಕೊಳ್ಳುವುದು ಇತ್ಯಾದಿಗಳೆಲ್ಲಾ ಕೆಟ್ಟದ್ದು ಎಂದು ಕುಟುಂಬ, ಸಮಾಜ ಮತ್ತು ವ್ಯವಸ್ಥೆಯು ಹೇಳಿದರೂ ಅವುಗಳಿಂದ ವ್ಯಕ್ತಿಗತವಾದ ಸುಖ ಮತ್ತು ಹಿತ ಉಂಟಾಗುವುದರಿಂದ ಮನಸ್ಸಿಗೆ ಒಳಿತಾಗಿಯೇ ತೋರುತ್ತದೆ. ಸುಖವಾಗಿಯೇ ಇರುತ್ತದೆ. ಆದರೆ, ಇವು ಕೆಟ್ಟದ್ದು ಎಂಬ ಬಾಲಪಾಠವಾಗಿರುವುದರಿಂದ ತನ್ನ ಸುಖ ಮತ್ತು ಕೆಟ್ಟದು ಎಂಬ ಪರಿಕಲ್ಪನೆಯ ಮಧ್ಯೆ ಸಂಘರ್ಷವಾಗುತ್ತದೆ. ಮುಖ್ಯವಾಗಿ ಸುಖ ಅಥವಾ ಹಿತ ಎನ್ನುವುದಕ್ಕಿಂತ ಅದೊಂದು ಸೆಳೆತ. ನಮಗೆ ಮಜ ಕೊಡುವ ಎಷ್ಟೋ ವಿಷಯಗಳನ್ನು ಬೇಡ ಬೇಡವೆಂದುಕೊಂಡು, ಇದೊಂದೇ ಸರ್ತಿ, ಇದೇ ಕೊನೇ ಸಲ ಅಂತ ಅದೆಷ್ಟು ಸಲ ಪುನರಾವರ್ತನೆಗಳಾಗಿ ಹೋಗಿರುತ್ತವೆಯಲ್ಲಾ ಆ ಬಗೆಯ ಸೆಳೆತ. ಆ ಸೆಳೆತಕ್ಕೆ ಸಿಕ್ಕುವ ಜಾರುವಿಕೆಯಲ್ಲಿ ಒಂದು ಸುಖವಿದೆ. ಉನ್ಮತ್ತರಾಗಿ ಮಾರು ಹೋಗುವಂತಹ ಹಿತವಿದೆ.
ಒಟ್ಟಾರೆ ‘ಒಳಿತು ಮತ್ತು ಕೆಡುಕುಗಳು’ ಹಾಗೂ ‘ಒಳ್ಳೆಯದು ಮತ್ತು ಕೆಟ್ಟದ್ದು’ ಎಂಬ ಪರಿಕಲ್ಪನೆಗಳ ನಡುವೆ ಉಂಟಾಗುವ ಸಂಘರ್ಷಗಳು ವ್ಯಕ್ತಿಯ ಮಾನಸಿಕ ಸ್ವಾಸ್ಥ್ಯವನ್ನು ಕೆಡಿಸುತ್ತದೆ.
ಹಾಗಾದರೆ ಮಾನಸಿಕ ಸ್ವಾಸ್ಥ್ಯಕ್ಕೆ ಯಾವ ಪರಿಭಾಷೆಯಲ್ಲಿ ಮಾತಾಡಬೇಕು?
ಪರಿಭಾಷೆಗಳು ಪರಿಕಲ್ಪನೆಗಳನ್ನು ಸೃಷ್ಟಿಸುತ್ತವೆ. ಪರಿಕಲ್ಪನೆಗಳು ನಮ್ಮೊಳಗೆ ಮೌಲ್ಯದ, ಸಿದ್ಧಾಂತದ, ಸಂಸ್ಕೃತಿಯ, ಒಲವು ನಿಲುವಿನ ಪ್ರತಿಮೆಗಳಾಗುತ್ತವೆ. ಹಾಗಾಗಿ ಪರಿಕಲ್ಪನೆಗಳನ್ನು ಹುಟ್ಟಿಸುವ ಪರಿಭಾಷೆಗಳ ಬಗ್ಗೆ ಎಚ್ಚರಿಕೆ ಇರಬೇಕು. ಪರಿಭಾಷೆಗಳು ಅಥವಾ ಪದಗಳು ಫಲವತ್ತಾದ ಮನೋಭೂಮಿಕೆಯಲ್ಲಿ ಬಿತ್ತುವಂತಹ ಬೀಜಗಳ ರೀತಿಯಲ್ಲಿ ಕೆಲಸ ಮಾಡುತ್ತವೆ.
ಇರಲಿ, ವಿಷಯಕ್ಕೆ ಬರೋಣ. ಮನುಷ್ಯನ ಮನಸ್ಸಿನ ಆರೋಗ್ಯಕ್ಕೆ, ಅದರ ಮೂಲಕ ವ್ಯಕ್ತಿಯ ಸಂಬಂಧಗಳ, ಕುಟುಂಬಗಳ, ಸಮೂಹಗಳ ಮತ್ತು ಸಮಾಜದ ಆರೋಗ್ಯಕ್ಕೆ ಬೇಕಾಗಿರುವುದು ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ಪೂರ್ವನಿರ್ಧಾರಿತ ಪರಿಕಲ್ಪನೆಗಳಲ್ಲ. ಅವುಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತವೆ. ವ್ಯಕ್ತಿಯಿಂದ ವ್ಯಕ್ತಿಗೆ, ಸಂಸ್ಕೃತಿಯಿಂದ ಸಂಸ್ಕೃತಿಗೆ, ದೇಶದಿಂದ ದೇಶಕ್ಕೆ ಬದಲಾಗುತ್ತಿರುತ್ತವೆ. ಹಾಗಾಗಿ, ಅದರ ಬದಲು ಬಳಸಬೇಕಾದ ಪರಿಭಾಷೆ ಎಂದರೆ ಅಗತ್ಯಗಳು ಮತ್ತು ಅನಗತ್ಯಗಳು. ಯಾವ ಯಾವ ವಿಷಯಗಳು ಮನುಷ್ಯನ ಮನಸ್ಸಿನ ಮತ್ತು ವಾತಾವರಣದ ಆರೋಗ್ಯವನ್ನು ಕಾಪಾಡಲು, ಸಬಲೀಕರಣ ಮಾಡಲು, ಶಕ್ತಿ ಸಂವರ್ಧನೆ ಮಾಡಲು ಅಗತ್ಯವಾಗಿವೆ, ಯಾವುವು ಅಗತ್ಯವಲ್ಲ ಎಂಬುದನ್ನು ಗುರುತಿಸುವ ಮತ್ತು ಹಾಗೆ ಗುರುತಿಸುವುದಕ್ಕೆ ಆದ್ಯತೆ ನೀಡುವ ಕೌಶಲ್ಯವನ್ನು ಬೆಳೆಸಿಕೊಂಡರೆ ವ್ಯಕ್ತಿಯಲ್ಲಿ ಆಗುವಂತಹ ಆಂತರಿಕ ಸಂಘರ್ಷಗಳ ತೀವ್ರತೆಯು ಕಡಿಮೆಯಾಗುವುದು.
ಪವಿತ್ರ ಮತ್ತು ಅಪವಿತ್ರ, ಪುಣ್ಯ ಮತ್ತು ಪಾಪ, ಒಳ್ಳೆಯದು ಮತ್ತು ಕೆಟ್ಟದ್ದು ಎಂಬುದರ ಬದಲಾಗಿ ನಮ್ಮ ಒಳಿತಿಗೆ ಅಗತ್ಯವೇ ಅಥವಾ ಇಲ್ಲವೇ ಎಂಬ ಕೌಶಲ್ಯವನ್ನು ರೂಢಿಸಿಕೊಳ್ಳಬೇಕಾಗುತ್ತದೆ. ನೆನಪಿನಲ್ಲಿಡೋಣ, ಇದು ಬಹಳ ಯುಕ್ತಿಪೂರ್ಣವಾದ ಕೌಶಲ್ಯದ ತರಬೇತಿ. ಈ ತರಬೇತಿಯು ಮಾನಸಿಕ ಸ್ವಾಸ್ಥ್ಯಕ್ಕೆ ಅಗತ್ಯವಾದ ಭೂಮಿಕೆಯನ್ನು ಒದಗಿಸುತ್ತದೆ.

(ಮುಂದುವರಿಯುವುದು)

LEAVE A REPLY

Please enter your comment!
Please enter your name here