ಕಿರು ಟಿಪ್ಪಣಿ
- ಇಸ್ಮತ್ ಪಜೀರ್
ಭುಜ ಮುರಿದುಕೊಂಡು , ಶಸ್ತ್ರ ಚಿಕಿತ್ಸೆಯಾಗಿ ಮನೆಯಲ್ಲೇ ವಿಶ್ರಾಂತಿಯಲ್ಲಿರುವುದರಿಂದ ಈಗ ದಿನದ ಹೆಚ್ಚು ಹೊತ್ತು ಸಹಜವಾಗಿಯೇ ಓದಿನಲ್ಲಿ ಕಳೆಯುತ್ತೇನೆ. ನಿನ್ನೆ ಪುಸ್ತಕದ ಕಪಾಟಿನಲ್ಲಿ ಪುಸ್ತಕವೊಂದರ ತಲಾಶೆಯಲ್ಲಿದ್ದಾಗ ಈ ಚಿತ್ರದಲ್ಲಿರುವ 2019ರ ಅಗಸ್ಟ್ ತಿಂಗಳ “ತುಷಾರ” ಕಣ್ಣಿಗೆ ಬಿತ್ತು. ನಾನೇನೂ ತುಷಾರದ ರೆಗ್ಯುಲರ್ ಓದುಗನಲ್ಲ. ಅಂದು ಈ ಸಂಚಿಕೆಯ ಜಾಹೀರಾತು ಕಂಡು ಖರೀದಿಸಿದ್ದೆ. ಮತ್ತೆ ಯಾವುದೋ ಕೆಲಸದ ಒತ್ತಡದಿಂದಾಗಿ ಅದನ್ನು ಮರೆತೇ ಬಿಟ್ಟಿದ್ದೆ. ಅದನ್ನು ಖರೀದಿಸಿಡಲು ಮುಖ್ಯ ಕಾರಣ ” ಇಬ್ನ್ ಬತೂತ” ಎಂಬ ಲೋಕ ಸಂಚಾರಿ ವಿದ್ವಾಂಸ..
ಇಬ್ನ್ ಬತೂತ ನನ್ನ ಪಾಲಿಗೆ ಒಂದು ಅಚ್ಚರಿಯಾಗಿದ್ದರು. 1304ರಲ್ಲಿ ಆಫ್ರಿಕಾ ಖಂಡದ ಮೊರಕ್ಕೊ ದೇಶದ ಟ್ಯಾಂಜೀರ್‌ನಲ್ಲಿ ಹುಟ್ಟಿದ ಇಬ್ನ್ ಬತೂತ ತನ್ನ ಇಪ್ಪತ್ತನೇ ವಯಸ್ಸಿಗೆ ಇಸ್ಲಾಮಿಕ್ ಶಿಕ್ಷಣವನ್ನು ಪೂರೈಸಿ ಓರ್ವ ಆಲಿಂ ಆದರು.ಇಬ್ನ್ ಬತೂತರಿಗೆ ಆಗಲೇ ಈ ವಿಸ್ಮಯಕಾರಿ ಜಗತ್ತಿನ ಕುರಿತಂತೆ ಅಪಾರ ಕುತೂಹಲ. ಜಗತ್ತು ಹೇಗಿದೆ.. ಎಲ್ಲೆಲ್ಲಿ ಏನೇನಿರಬಹುದು.. ಎಂದರಿಯುವ ತವಕ. ದಿನೇ ದಿನೇ ಅವರ ಕುತೂಹಲ ಏರುತ್ತಾ ಹೋಯಿತು. ಅವರ ಕುತೂಹಲ ಅವರನ್ನು ನಿದ್ರಿಸಗೊಡಲಿಲ್ಲ. ಆದರೆ ಅವರು ತನ್ನ ಈ ಕುತೂಹಲವನ್ನು ಯಾರಲ್ಲೂ ಹಂಚಿಕೊಳ್ಳಲಿಲ್ಲ. ಹೀಗಿರಲು ಒಂದು ದಿನ ಒಂದು ದೃಡವಾದ ತೀರ್ಮಾನಕ್ಕೆ ಬಂದೇ ಬಿಟ್ಟರು.. ತಾನು ವಿಶ್ವ ಸಂಚಾರ ಮಾಡಬೇಕು.. ಮನೆಯಲ್ಲಿ ತನ್ನ ಹಜ್ ನಿರ್ವಹಿಸಲು ಮಕ್ಕಾಕ್ಕೆ ಹೋಗುವುದಾಗಿ ಹೇಳಿ ಒಂದು ಕತ್ತೆಯ ಮೇಲೆ ತನ್ನ ಸಾಮಾನು ಸರಂಜಾಮುಗಳನ್ನು ಹೊರಿಸಿ ಹೊರಟೇ ಬಿಟ್ಟರು. ಆಗ ಅವರ ವಯಸ್ಸು ಕೇವಲ ಇಪ್ಪತ್ತೊಂದು.. ಅದು 1325. ಆ ಕಾಲದಲ್ಲಿ ಯಾತ್ರೆ ಹೊರಡುವವರು ಕ್ಯಾರವಾನ್‌ಗಳನ್ನು ಕೂಡಿಕೊಂಡು ಹೊರಡುವುದು ಸರ್ವೇ ಸಾಮಾನ್ಯ. ಆದರೆ ಇಬ್ನ್ ಬತೂತ ಯಾವುದೇ ಕ್ಯಾರವಾನ್ (ವ್ಯಾಪಾರೀ ಸಂಘ) ಜೊತೆ ಕೂಡದೇ ಒಬ್ಬಂಟಿಯಾಗಿ ಹೊರಟರು. ಒಂದು ವೇಳೆ ತಾನು ತನ್ನ ತಾಯ್ನಾಡಿನಿಂದ ಹೊರಡುವ ಕ್ಯಾರವಾನ್ ಜೊತೆ ಕೂಡಿಕೊಂಡರೆ ಎಲ್ಲಿ ತನ್ನ ಯೋಜನೆಗಳ ಗುಟ್ಟು ರಟ್ಟಾಗಿ ತಡೆ ಬೀಳುವುದೋ ಎಂಬ ಭಯ ಇಬ್ನ್ ಬತೂತಗೆ.. ಅವರು ತನ್ನ ತಾಯ್ನಾಡಿನ ಸರಹದ್ದು ದಾಟಿದ ಬಳಿಕ ಸಿಕ್ಕ ಕ್ಯಾರವಾನ್ ಒಂದರ ಜೊತೆ ಸೇರಿಕೊಂಡರು. ಆದರೆ ಯಾವುದೇ ಕ್ಯಾರವಾನ್ ಕೂಡಾ ಅವರಿಗೆ ಪರ್ಮನೆಂಟಲ್ಲ. ಯಾಕೆಂದರೆ ಎಲ್ಲಾ ಕ್ಯಾರವಾನ್‌ಗಳಿಗೂ ಒಂದೊಂದು ಗಮ್ಯವಿರುತ್ತದೆ. ಇಬ್ನ್ ಬತೂತರ ಸಂಚಾರಕ್ಕೆ ಗಮ್ಯವೆಂಬುವುದಿಲ್ಲ. ಒಂದು ಕ್ಯಾರವಾನ್ ಒಂದೂರು ತಲುಪಿ ಅಲ್ಲಿ ಕೆಲದಿನ ತಂಗಿ ಅಲ್ಲಿ ತಮ್ಮ ವ್ಯಾಪಾರ ವಹಿವಾಟುಗಳನ್ನು ಮುಗಿಸಿ ಅಲ್ಲಿಂದ ಹೊರಡುತ್ತದೆ. ಹಾಗೆ ಒಂದು ಊರು ತಲುಪಿದ ಬಳಿಕ ಇಬ್ನ್ ಬತೂತ ಆ ಕ್ಯಾರವಾನನ್ನು ತಪ್ಪಿಸಿ ಅಲ್ಲಿಂದ ಇನ್ನೊಂದು ಕ್ಯಾರವಾನ್ ಸೇರಿಕೊಳ್ಳುತ್ತಿದ್ದರು. ಯಾಕೆಂದರೆ ಒಂದನೆಯದಾಗಿ ಈಗಾಗಲೇ ಬರೆದಂತೆ ಅವರಿಗೆ ನಿರ್ದಿಷ್ಟ ಗಮ್ಯವಿರುತ್ತದೆ. ಇಬ್ನ್ ಬತೂತರ ಸಂಚಾರದ ಗಮ್ಯ ಯಾವುದೆಂದು ನಿರ್ದಿಷ್ಟವಾಗಿ ಅವರಿಗೇ ತಿಳಿದಿರುವುದಿಲ್ಲ.ಅವರು ಆಗ ತಲುಪಿದ ಊರಿನಿಂದ ಮಾಹಿತಿ ಕಲೆ ಹಾಕಿ ಮುಂದಿನ ಊರು ನಿರ್ಧರಿಸುತ್ತಿದ್ದರು. ಹೀಗೆ ಇಬ್ನ್ ಬತೂತ ಹೋದಲ್ಲೆಲ್ಲಾ ಅಲ್ಲಿನ ಜನರ ಬದುಕು, ಆಚಾರ – ವಿಚಾರ, ನಂಬಿಕೆಗಳು, ಆ ನೆಲದ ಸಂಸ್ಕೃತಿ, ಅಲ್ಲಿನ ವಿಶೇಷತೆ, ಅಲ್ಲಿನ ಇತಿಹಾಸಗಳನ್ನು ಅಲ್ಲಿನ ವಿದ್ವಾಂಸರುಗಳಿಂದ, ಜನಸಾಮಾನ್ಯರಿಂದ ಕೇಳಿ ತಿಳಿದು ಟಿಪ್ಪಣಿ ಮಾಡುತ್ತಿದ್ದರು. ಹೀಗೆ ಒಂದೂರಿಂದ ಇನ್ನೊಂದೂರಿಗೆ ಹೀಗೆ ಅವರ ಸಂಚಾರ ಮುಂದುವರಿಯುತ್ತಿತ್ತು.
ಅವರು ಹೊರಟಿದ್ದು ಕತ್ತೆಯ ಮೇಲಾದರೂ ಅವರ ಸಂಚಾರದಲ್ಲಿ ಕುದುರೆ, ಒಂಟೆ, ಆನೆಗಳ ಮೇಲೂ ಸಂಚರಿಸಿದರು.. ಅವರು ಒಟ್ಟು ಒಂದು ಲಕ್ಷ ಇಪ್ಪತ್ತು ಸಾವಿರ ಕಿಲೋ ಮೀಟರ್ ಸಂಚರಿಸಿದ್ದರು. ಅದರಲ್ಲಿ ಹಲವು ಸಾವಿರ ಕಿಲೋ ಮೀಟರ್ ದೂರದ ಬೃಹತ್ ಮರುಭೂಮಿಯಾದ ಸಹರಾ ಮರುಭೂಮಿಯೂ ಸೇರಿತ್ತು. ಇಷ್ಟು ಸುದೀರ್ಘವಾದ ಮರುಭೂಮಿಯ ಪಯಣ ಭಯ ಹುಟ್ಟಿಸುವಂತಹದ್ದು.. ಮರುಭೂಮಿಯೆಂದರೆ ಸಾವಿರಾರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಎಲ್ಲೋ ನೂರಾರು ಕಿಲೋ ಮೀಟರ್‌ಗೊಂದರಂತೆ ಒಂದಿಷ್ಟು ಜನವಾಸದ ಊರುಗಳು. ಮರುಭೂಮಿಯ ಪಯಣ ಹೇಗಿರುತ್ತದೆಂದರೆ ರಾತ್ರಿ ಹೊತ್ತು ಪಯಣ, ಹಗಲು ಹೊತ್ತು ಓಯಸಿಸ್ ಸಿಕ್ಕಲ್ಲಿ ವಿಶ್ರಾಂತಿ. ಮರುಭೂಮಿಯ ಸುಡುವ ಮರಳಲ್ಲಿ ಹಗಲು ಸಂಚಾರ ಸಾಧ್ಯವಿಲ್ಲ. ರಾತ್ರಿಯಾಗುತ್ತಿದ್ದಂತೆಯೇ ಅಲ್ಲಿ ಚಳಿ ಪ್ರಾರಂಭವಾಗುತ್ತದೆ. ಇವಿಷ್ಟು ತುಷಾರ ಪತ್ರಿಕೆಯ 23ಪುಟಗಳ ದೀರ್ಘ ಲೇಖನದಲ್ಲಿ ನನಗೆ ದಕ್ಕಿದ್ದರ ಸಾರಾಂಶ.. ಓದುತ್ತಿದ್ದಂತೆಯೇ ಎಲ್ಲಾದರೂ ನಮ್ಮ ಭಾರತಕ್ಕೆ ಇಬ್ನ್ ಬತೂತ ಭೇಟಿ ಕೊಟ್ಟ ಬಗ್ಗೆ ಮಾಹಿತಿಯಿದೆಯೇ ಎಂದು ಹುಡುಕುತ್ತಿದ್ದ ನನಗೆ ನಿರಾಶೆಯಾಯಿತು..

ನಾನು ನನ್ನ ಇತರ ಓದಿನಲ್ಲಿ ಅಲ್ಲಿಲ್ಲಿಂದ ದಕ್ಕಿಸಿಕೊಂಡ ಒಂದಿಷ್ಟು ವಿಚಾರವನ್ನೂ ನಿಮ್ಮ ಮುಂದಿಡುವೆ.
ಇಬ್ನ್ ಬತೂತ ಸಂಚಾರದ ಮಧ್ಯೆ ಎದುರಿಸಿದ ಸಂಕಷ್ಟಗಳು ಅಷ್ಟಿಷ್ಟಲ್ಲ. ಮಳೆ, ಜಡಿಮಳೆ, ಸಿಡಿಲು, ಮಿಂಚು, ಪ್ರವಾಹ, ಮೈ ಮರಗಟ್ಟಿಸುವ ಮೈನಸ್ ಡಿಗ್ರಿ ಚಳಿ,ಚರ್ಮ ಕಿತ್ತು ಬರುವಂತಹ ಬಿಸಿಲು ಹೀಗೆ ಎಲ್ಲಾ ಹವಾಮಾನಕ್ಕೂ ತಮ್ಮ ದೇಹವನ್ನು ಒಗ್ಗಿಸಿಕೊಂಡು ಹೋಗಬೇಕಿತ್ತು. ಅದೇನೂ ಸುಲಭದ ವಿಚಾರವೇ..?
ಕ್ರೂರ ಮೃಗಗಳ, ಕಾಡು ಪ್ರಾಣಿಗಳ ದಾಳಿಯನ್ನು ಎದುರಿಸಿ ಪ್ರಾಣ ಉಳಿಸಿಕೊಳ್ಳುವಂತಹ ಅಪಾಯಕ್ಕೂ ಒಡ್ಡಿಕೊಳ್ಳಬೇಕು. ಅವರ ಪಯಣದ ದಾರಿಯಲ್ಲಿ ಮರುಭೂಮಿ, ಒಳನಾಡು, ಸಮುದ್ರಮಾರ್ಗ,ದಟ್ಟ ಪರ್ವತ ಶ್ರೇಣಿಗಳು, ದಟ್ಟ ಕಾಡುಗಳು ಹೀಗೆ ವಿಧ ವಿಧ ಮಾರ್ಗಗಳಲ್ಲಿ ಸಾಗಿದ್ದರು. ಸಮುದ್ರಗಳನ್ನು ದಾಟಲು
ಅವರು ಹಡಗುಗಳನ್ನು ಅವಲಂಭಿಸಿದ್ದರು. ಅವರು ಹಡಗಿನ ಮೂಲಕ ನಮ್ಮ ದೇಶದ ಮಲಬಾರ್ ಕರಾವಳಿಗೆ ಬಂದಿಳಿದುದು 1342ರಲ್ಲಿ.. ಅಲ್ಲಿಂದ ಬಳಿಕ ಒಳನಾಡಿನ ಮೂಲಕ ಭಾರತದ ವಿವಿಧ ನಾಡುಗಳಲ್ಲಿ ಸಂಚರಿಸಿದರು.1342ರಲ್ಲಿ ಇಬ್ನ್ ಬತೂತ ನಮ್ಮ ಮಂಗಳೂರಿಗೂ ಬಂದಿದ್ದರು. ಅವರು ಮಂಗಳೂರನ್ನು ಮಂಜರೂರ್ ಎಂದು ದಾಖಲಿಸಿದ್ದಾರೆ.
ಇಬ್ನ್ ಬತೂತ ತನ್ನ ರಿಹ್ಲತ್ ಇಬ್ನ್ ಬತೂತದಲ್ಲಿ ದಾಖಲಿಸಿದ ಪ್ರಕಾರ ಆ ಕಾಲದಲ್ಲಿ ಮಂಜರೂರಿನಲ್ಲಿ ನಾಲ್ಕು ಸಾವಿರ ಮುಸ್ಲಿಮರಿದ್ದರು. ಆಗ ಮಂಗಳೂರಿನ ಖಾಝಿಯಾಗಿದ್ದವರು ” ಬದ್ರುದ್ದೀನುಲ್ ಮಅ್‌ಬರೀ” ಎಂಬ ವಿದ್ವಾಂಸರು. ಶಾಫಿ ಕರ್ಮಶಾಸ್ತ್ರ ವಿಭಾಗದವರಾದ ಅವರು ಮಲಬಾರ್‌ನ ಪೊನ್ನಾಣಿಯ ಪ್ರಖಾಂಡ ವಿದ್ವಾಂಸ ಝೈನುದ್ದೀನುಲ್ ಮಖ್ದೂಮಿಯವರ ವಿದ್ವಾಂಸ ಪರಂಪರೆಯವರು. ಆಗ ಮಂಗಳೂರಿನಲ್ಲಿ ದರ್ಸ್ (ಮೌಲವಿಗಳು ಕಲಿಯುವ ಪಾಠ ಶಾಲೆ) ಇತ್ತೆಂದೂ ರಿಹ್ಲತ್ ಇಬ್ನ್ ಬತೂತದಲ್ಲಿ ದಾಖಲಿಸಿದ್ದಾರೆ.
ತನ್ನ ಒಂದು ಲಕ್ಷ ಇಪ್ಪತ್ತು ಸಾವಿರ ಕಿಲೋ ಮೀಟರ್‌ನ ಸುದೀರ್ಘ ಸಂಚಾರದಲ್ಲಿ ಇಬ್ನ್ ಬತೂತ ಆಫ್ರಿಕಾ, ಯುರೋಪ್, ಏಶ್ಯಾ ಖಂಡಗಳನ್ನು ಸಂಚರಿಸಿದ್ದರು.
1325ರಲ್ಲಿ ಮೊರಕ್ಕೊದ ಟ್ಯಾಂಜೀರ್‌ನಿಂದ ಹೊರಟ ಇಬ್ನ್ ಬತೂತ ತನ್ನ ಸಾಹಸೀ ಪಯಣವನ್ನು ಮುಗಿಸಿದ್ದು 1354ರಲ್ಲಿ.. ಆಗ ಅವರ ವಯಸ್ಸು ಐವತ್ತು… ತನ್ನ ಪಯಣದಲ್ಲಿ ಕಂಡು ಕೊಂಡ, ಅರಿತ, ಶೋಧಿಸಿದ ವಿಷಯಗಳನ್ನೆಲ್ಲಾ ಅವರು ಬರೆದು ಮುಗಿಸಿದ್ದು 1356ರಲ್ಲಿ.ಅಂದರೆ ಮೂವತ್ತು ವರ್ಷಗಳ ಪಯಣದ ಕತೆಯನ್ನು ಬರೆದು ಮುಗಿಸಲು ಅವರಿಗೆ ಮೂರು ವರ್ಷಗಳು ಬೇಕಾದವು. ಅರಬಿಯಲ್ಲಿ ಅವರು ಬರೆದ ವಿಸ್ಮಯಕಾರಿ ಗ್ರಂಥ ಇನ್ನೊಂದು ಭಾಷೆಗೆ ಅನುವಾದಗೊಂಡಿದ್ದು 1854ರಲ್ಲಿ.. ಅಂದರೆ ಸುಮಾರು ಐನೂರು ವರ್ಷಗಳ ಬಳಿಕ. 1854ರಲ್ಲಿ ಮೊದಲ ಬಾರಿಗೆ ಫ್ರೆಂಚ್ ಭಾಷೆಗೆ ಅನುವಾದಗೊಂಡರೆ, ಅದಾದದ ಸರಿ ಸುಮಾರು ನೂರ ನಲ್ವತ್ತು ವರ್ಷಗಳ ಬಳಿಕ ಅಂದರೆ 1993ರಲ್ಲಿ ಸ್ಪ್ಯಾನಿಷ್ ಭಾಷೆಗೆ ಅನುವಾದಗೊಂಡಿತು..ಆ ಬಳಿಕ ಇಬ್ನ್ ಬತೂತ ವಿಶ್ವೇತಿಹಾಸದಲ್ಲಿ ಯಾರೂ ಏರದ ಎತ್ತರದ ವ್ಯಕ್ತಿಯಾಗಿ ಚಿರಸ್ಥಾಯಿಯಾಗಿಬಿಟ್ಟರು.. ಇಬ್ನ್ ಬತೂತರ ಕುರಿತಂತೆ ನನ್ನರಿವಿನ ಪ್ರಕಾರ ಕನ್ನಡದಲ್ಲಿ ಈ ವರೆಗೆ ಯಾವುದೇ ಗ್ರಂಥಗಳೂ ಬಂದಿಲ್ಲ.
ಬೇಸರದ ಸಂಗತಿಯೇನೆಂದರೆ ಇಂತಹ ಅಪ್ರತಿಮ ಸಾಹಸಿ ಸಂಚಾರಿ ,ವಿದ್ವಾಂಸ, ಇತಿಹಾಸಕಾರ ಇಬ್ನ್ ಬತೂತ ಯಾವ ವರ್ಷ ಮೃತಪಟ್ಟರೆಂಬುವುದಕ್ಕೆ ನಿಖರವಾದ ಮಾಹಿತಿಯಿಲ್ಲ.1368ರಲ್ಲಿಯೆಂದೂ, 1369ರಲ್ಲಿಯೆಂದೂ, 1377ರಲ್ಲಿಯೆಂದೂ ಮೂರು ವಿವಿಧ ವರ್ಷಗಳ ದಾಖಲೆಯಿದೆ. ಹುಟ್ಟೂರು ಮೊರಾಕ್ಕೊದ ಟ್ಯಾಂಜೀರ್‌ನಲ್ಲಿ ಇಬ್ನ್ ಬತೂತರ ಸಮಾಧಿಯಿದೆ..
ಒಟ್ಟಿನಲ್ಲಿ ಇಬ್ನ್ ಬತೂತ ಎಂದರೆ ಓದಿದಷ್ಟು ಮುಗಿಯದ, ಅರಿತಷ್ಟು ಅರಿಯದ ವಿಸ್ಮಯ ವ್ಯಕ್ತಿತ್ವ…