ಶಿಕ್ಷಣ ಕ್ಷೇತ್ರದಲ್ಲಿ ಕೋವಿಡ್ ಪರಿಣಾಮದ ಕುರಿತು ಸರಣಿ ಲೇಖನಗಳು.

ಭಾಗ – 01

  • ನಿಹಾಲ್ ಮುಹಮ್ಮದ್ ಕುದ್ರೋಳಿ

ಕೋವಿಡ್ ನಿಂದಾಗಿ ಹಲವಾರು ಸಮಸ್ಯೆಗಳು ಉದ್ಭವವಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಕೊರೊನ ವೈರಸ್ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಗೊಳಿಸಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿದ್ದಂತಹ ಕುಂದುಕೊರತೆಗಳನ್ನು ನಮ್ಮ ಮುಂದಿಟ್ಟಿದೆ. ಆದರೆ ಎಲ್ಲಾ ವಿಷಯಗಳ ಹಾಗೆ ಕೋವಿಡ್ ಕೂಡ ನಮಗೆ ಹಲವು ಪಾಠಗಳನ್ನು ಕಲಿಸಿದೆ. ಶಾಲೆಗಳಲ್ಲಿ ನಮಗೆ ಕಲಿಯಲು ಸಾಧ್ಯವಾಗದಂತಹ ಹಲವು ಪಾಠಗಳನ್ನು ಕೋವಿಡ್ ನಿಂದ ನಮಗೆ ಕಲಿಯಲು ಸಾಧ್ಯವಾಯಿತು. ಕೋವಿಡ್ ನಿಂದಾಗಿ ಕೆಲವು ಸಕಾರಾತ್ಮಕ ಬೆಳವಣಿಗೆಗಳು ನಡೆದಿವೆಯೆ. ಅದರಲ್ಲೊಂದು ಶಿಕ್ಷಣ ಕ್ಷೇತ್ರದಲ್ಲಿ ತೆರೆದುಕೊಂಡ ಹೊಸ ಮಾರ್ಗಗಳು.

ನಾವು ಹಲವಾರು ವರ್ಷಗಳಿಂದ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಡಿಜಿಟಲ್ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದೆವು, ಆದರೆ ಕಳೆದ ಒಂದೂವರೆ ವರ್ಷದಲ್ಲಿ ನಾವೆಷ್ಟು ಮುಂದುವರಿದಿದ್ದೇವೆಯೋ ಅಷ್ಟು ಮುಂದುವರಿಯಲು ಕಳೆದ ಹಲವು ವರ್ಷಗಳಿಂದ ನಮಗೆ ಸಾಧ್ಯವಾಗಿರಲಿಲ್ಲ. ಝೂಮ್, ಗೂಗಲ್ ಮೀಟ್, ಸಿಸ್ಕೊ ವೆಬೆಕ್ಸ್ ರಿಂದ ಹಿಡಿದು ಪಿ ಪಿ ಟಿ ಪ್ರೆಸೆಂಟೇಷನ್, ಪ್ರಾಜೆಕ್ಟ್ ವರೆಗೆ ಸಾಕಷ್ಟು ಹೊಸ ಮಾರ್ಗಗಳನ್ನು ಉಪಯೋಗಿಸಿ ನಾವು ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆದಿದ್ದೇವೆ. ಇವುಗಳ ತಾಂತ್ರಿಕ ವಿಷಯಗಳ ಕುರಿತಾಗಿ ಚರ್ಚಿಸಲು ನಾನು ಇಚ್ಛಿಸುವುದಿಲ್ಲ. ಈ ಒಂದು ಲೇಖನದಲ್ಲಿ ಇದರಿಂದಾಗಿ ನಾವು ಯಾವ ರೀತಿಯಲ್ಲಿ ಲಾಭ ಪಡೆಯಬಹುದು ಎಂಬುದರ ಕುರಿತು ಚರ್ಚಿಸೋಣ.

“World On The Finger Tips” ಬೆರಳು ತುದಿಯಲ್ಲಿ ಲೋಕ ಎಂದು ನಾವು ಹೇಳುತ್ತಾ ಬಂದಿದ್ದೇವೆ ಆದರೆ ಕೋರೋನಾ ಕಾಲದಲ್ಲಿ ನಾವು ನೈಜ ರೂಪದಲ್ಲಿ ಅದನ್ನು ಅನುಭವಿಸುತ್ತಿದ್ದೇವೆ, ಈ ಪುಸ್ತಕ ,ಆ ಪುಸ್ತಕ ಎಂದು ನಾವು ಎಲ್ಲೆಲ್ಲೋ ಓಡಾಡುತ್ತಿದ್ದೆವು, ಆದರೆ ಈಗ ಎಲ್ಲವೂ ಪಿಡಿಎಫ್ ಅಥವಾ ವೆಬ್ಸೈಟ್ ಫಾರ್ಮಾಟ್ ನಲ್ಲಿ ನಮಗೆ ಲಭ್ಯವಿದೆ. ಇವೆಲ್ಲ ಸೌಲಭ್ಯಗಳು ಮೊದಲೂ ಇತ್ತು ಆದರೆ ನಾವು ಅದಕ್ಕೆ ಹೊಂದಿಕೊಂಡದ್ದು ಈಗ. “ಸಂಕಟ ಬಂದಾಗ ವೆಂಕಟರಮಣ” ಎಂಬುವುದು ಮನುಷ್ಯನ ಸಹಜ ಗುಣ. ಸಮಯದ ಜೊತೆ ಬದಲಾಗಿ ಕಾಲದ ಬೇಡಿಕೆಗೆ ಅನುಸಾರವಾಗಿ ಹೊಂದಿಕೊಳ್ಳುವ ಗುಣವನ್ನು ನಾವು ಬೆಳೆಸಬೇಕು. ಎಲ್ಲಾ ಗಡಿಗಳನ್ನು ದಾಟಿ ಜ್ಞಾನವನ್ನು ಪಡೆದುಕೊಳ್ಳುವ ಅವಕಾಶವು ನಮಗೆ ದೊರಕಿದೆ. ಇಂದು ನಾವು ಶಿಕ್ಷಣ ಕ್ಷೇತ್ರದ ಹೊಸ ಮಾರ್ಗಗಳಿಗೆ ಹೊಂದಿಕೊಂಡಿದ್ದೇವೆ.

ಇನ್ನು ಪಿಪಿಟಿ,ವಿಡಿಯೋ ಹಾಗೂ ಬೇರೆ ಬೇರೆ ಉಪಕರಣಗಳನ್ನು ಉಪಯೋಗಿಸುವ ರೀತಿಯ ಕುರಿತು ಪ್ರಸ್ತಾಪಿಸುವುದಾದರೆ, ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಸ್ಮಾರ್ಟ್ ಗೊಳಿಸಬೇಕೆಂಬ ನಿಟ್ಟಿನಲ್ಲಿ ತರಗತಿಗಳಲ್ಲಿ ಪ್ರೊಜೆಕ್ಟರ್ ವ್ಯವಸ್ಥೆ ಮಾಡುವುದು, ಇನ್ನಿತರ ತಾಂತ್ರಿಕ ಉಪಕರಣಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆ ನಿಧಾನವಾಗಿ ನಡೆಯುತ್ತಿತ್ತು. ಸ್ಮಾರ್ಟ್ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿ ದೊಡ್ಡ ಅಡಚಣೆ ಇದ್ದದ್ದು ಈ ಉಪಕರಣಗಳ ಕುರಿತು ಶಿಕ್ಷಕರಲ್ಲಿದ್ದ ಅರಿವಿನ ಕೊರತೆ. ಯಾವ ರೀತಿಯಲ್ಲಿ ಉಪಕರಣಗಳನ್ನು ಉಪಯೋಗಿಸಬೇಕೆಂದು ಹಿರಿಯ ಶಿಕ್ಷಕರಿಗೆ ತಿಳಿದಿರಲಿಲ್ಲ, ಆದ್ದರಿಂದ ಅವರಲ್ಲಿದ್ದ ಜ್ಞಾನಭಂಡಾರವನ್ನು ಮುಂದಿನ ಪೀಳಿಗೆ ಪಡೆದುಕೊಳ್ಳಬೇಕಾದರೆ ಅದೇ ಹಳೇ ರೀತಿಯ ಶಿಕ್ಷಣ ವ್ಯವಸ್ಥೆಯನ್ನು ಅವಲಂಬಿಸಬೇಕಾಗಿತ್ತು. ಮೊದಲೇ ಹೇಳಿದಂತೆ ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಕೋವಿಡ್ ಕಾಲದಲ್ಲಿ ಎಲ್ಲಾ ಶಿಕ್ಷಕರೂ ಡಿಜಿಟಲ್ ವ್ಯವಸ್ಥೆಗೆ ಹೊಂದಿಕೊಳ್ಳಲೇಬೇಕಾಯಿತು.
ಇದರಿಂದಾಗಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ತುಂಬಾ ಲಾಭ ದೊರಕಲಿದೆ ಎಂಬುವುದರಲ್ಲಿ ಸಂಶಯವಿಲ್ಲ. ವಿಶ್ವದ ಎಲ್ಲಾ ಮೂಲೆಗಳಲ್ಲಿರುವ ವಿದ್ವಾಂಸರ ಜ್ಞಾನ ಭಂಡಾರದಿಂದ ತಮ್ಮ ಮನೆಯಲ್ಲಿಯೇ ಕುಳಿತು ಒಂದಿಷ್ಟು ಜ್ಞಾನವನ್ನು ನಾವು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಈ ವ್ಯವಸ್ಥೆಯೊಂದಿಗೆ ಇನ್ನಷ್ಟು ಉತ್ತಮ ರೀತಿಯಲ್ಲಿ ಹೊಂದಿಕೊಳ್ಳುವ ಅಗತ್ಯವಿದೆ. ಇವಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಸಕಾರಾತ್ಮಕ ಬೆಳವಣಿಗೆಗಳು ನಡೆದಿವೆ.

ಇಷ್ಟು ಓದಿದ ಬಳಿಕ ಕಳೆದ ಎರಡು ವರ್ಷಗಳಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೂ ಯಾವುದೇ ಸಂಕಷ್ಟ ಅನುಭವಿಸಿಲ್ಲಾ, ಎಲ್ಲಾ ಚೆನ್ನಾಗಿತ್ತು ಎಂದು ನಾನು ಹೇಳುತ್ತಿದ್ದೇನೆ ಎಂದು ನೀವು ಭಾವಿಸಬಹುದು. ಆದರೆ ಹಾಗಲ್ಲ. ನಾನು ನಮ್ಮ ಮುಂದೆ ತೆರೆದುಕೊಂಡಂತಹ ಹೊಸ ಮಾರ್ಗದ ಕುರಿತಾಗಿ ಹೇಳುತ್ತಿದ್ದೇನೆ, ಇದರಿಂದಾಗಿ ನಾವೆಷ್ಟು ಲಾಭ ಪಡೆದಿದ್ದೇವೆ ಎಂಬುವುದು ನಂತರದ ವಿಷಯ. ಒಂದುವರೆ ವರ್ಷದ ಹಿಂದೆ ನಾವು ಈ ವ್ಯವಸ್ಥೆಯ ಮೊದಲನೇ ತರಗತಿಯಲ್ಲಿದ್ದೆವು, ಆದರೆ ಈಗ ಸಾಕಷ್ಟು ಕಲಿತುಕೊಂಡಿದ್ದೇವೆ. ಇನ್ನು ಬರುವ ದಿನಗಳಲ್ಲಿ ಇದರ ಲಾಭ ಪಡೆಯುವ ಪ್ರಯತ್ನಗಳು ನಡೆಯಬೇಕು, ಮುಂದುವರಿಯಬೇಕು. ಹಿಂದಿನ ಶಿಕ್ಷಣ ವ್ಯವಸ್ಥೆ ಹಾಗೂ ಈಗ ಹುಟ್ಟಿಕೊಂಡ ಹೊಸ ಮಾರ್ಗಗಳನ್ನು ಒಟ್ಟುಗೂಡಿಸಿ ಮುನ್ನಡೆಯುವ ಅಗತ್ಯವಿದೆ.

ಇನ್ನು ಈ ವಿಷಯದ ಕುರಿತು ಅವಲೋಕಿಸುವಾಗ ಎದುರಾಗಿರುವ ಅತಿಮುಖ್ಯ ಸಂಗತಿಯೆಂದರೆ ಈ ವ್ಯವಸ್ಥೆಯಿಂದ ಉಂಟಾಗಿರುವ ಸಮಸ್ಯೆಗಳು, ಎಷ್ಟು ಜನರಿಗೆ ಇದರ ಲಾಭ ಪಡೆಯುವ ಸೌಲಭ್ಯವಿದೆ? ಆಂಗ್ಲಭಾಷೆಯಲ್ಲಿ ಹೇಳುವುದಾದರೆ “Digital Haves and Have Not’s”. ಆನ್ಲೈನ್ ತರಗತಿಗಳಿಗೆ ಎದುರಾದ ಅತಿ ದೊಡ್ಡ ಸಮಸ್ಯೆಯಿದು. ಗ್ರಾಮೀಣ ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆ, ಅದಲ್ಲದೆ ಎಷ್ಟೋ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್, ಮೊಬೈಲ್ ಮತ್ತು ಇನ್ನಿತರ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗದಂತಹ ಆರ್ಥಿಕ ಸಂಕಷ್ಟ. ಇವುಗಳನ್ನು ಆದಷ್ಟು ಬೇಗ ಪರಿಹರಿಸುವ ಅಗತ್ಯವಿದೆ. ಈ ಹೊಸ ಮಾರ್ಗಗಳ ಲಾಭ ಪಡೆಯುವ ಸೌಭಾಗ್ಯ ಎಲ್ಲರಿಗೂ ಒದಗಿಸಿ ಕೊಡಬೇಕಾದ ಅಗತ್ಯ ಸರಕಾರದ ಮುಂದಿದೆ. ಸಮಯದ ಬೇಡಿಕೆ, ಕಾಲದ ಬೇಡಿಕೆಗೆ ಮೌಲ್ಯದ ಪಥದಲ್ಲಿ ಹೊಂದಿಕೊಳ್ಳುತ್ತ ಮುನ್ನಡೆಯೋಣ.
ದೇವನು ಅನುಗ್ರಹಿಸಲಿ.

LEAVE A REPLY

Please enter your comment!
Please enter your name here