ಸಂತೋಷ ಎನ್. ಸಾಹೇಬ್
(ಸಂಶೋಧನಾ ವಿದ್ಯಾರ್ಥಿ ಮಂಗಳೂರು ವಿಶ್ವವಿದ್ಯಾಲಯ)

ಪ್ರಜಾಪ್ರಭುತ್ವದ ತಳಹದಿಯ ಮೇಲೆ ಕಟ್ಟಲ್ಪಟ್ಟ ಭಾರತ ದೇಶದಲ್ಲಿ ವರ್ತಮಾನದ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಮತ್ತು ಅವರ ಹೋರಾಟಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುತ್ತಿರುವುದು ದುರಂತದ ವಿಷಯವಾಗಿದೆ. ಹಾಗಾದರೆ  ಈ ರೀತಿಯ ಹೋರಾಟಗಳನ್ನು ಕಠೋರವಾಗಿ ಮತ್ತು ವ್ಯವಸ್ಥಿತವಾಗಿ ದಮನ ಮಾಡಲು ಹೊರಟ ಪಟ್ಟಭದ್ರ ಹಿತಾಸಕ್ತಿಗಳ, ಕಾಣದ ಕೈಗಳ ಉದ್ದೇಶವೇನು..? ಎಂಬುದು ಜನಸಾಮಾನ್ಯರಿಗೆ ತಿಳಿಯದ ಕಗ್ಗಂಟಿನ ಸಂಗತಿಯಾಗಿದೆ. ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿ ಹಲ್ಲೆ ಮಾಡಿ ಅವರಲ್ಲಿ ಭಯದ ವಾತಾವರಣ ಸೃಷ್ಟಿಸಿ ಸಮಾಜದಲ್ಲಿನ ಅನ್ಯಾಯಗಳ ವಿರುದ್ಧ ದನಿ ಎತ್ತದಂತೆ ಮಾಡುವುದು ಒಂದರ್ಥದಲ್ಲಿ ಸಂವಿಧಾನಕ್ಕೆ ದ್ರೋಹ ಬಗೆಯುವ ದುಷ್ಕಾರ್ಯವಾಗಿದೆ. ಇದಕ್ಕೆ ಪೂರಕವೆಂಬಂತೆ JNU, ಜಾಮಿಯಾ ಹಾಗೂ ಇತರೆ ವಿಶ್ವವಿದ್ಯಾನಿಲಯಗಳಲ್ಲಿ ಇತ್ತೀಚೆಗೆ ಹಲವು ಗೂಂಡಾ ವರ್ತನೆಗಳಾಗಿರುವುದು ಖಂಡನೀಯ. ಈ ದುಷ್ಕೃತ್ಯದಿಂದ ದಿಗಿಲುಗೊಂಡ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು JNU ವಿದ್ಯಾರ್ಥಿಗಳ ಪರವಾಗಿ ಈ ಹಲ್ಲೆಯನ್ನು ಖಂಡಿಸಿ ದಿನಾಂಕ 08/02/2020 ರಂದು ಮಾನಸ ಗಂಗೋತ್ರಿಯ ಆವರಣದಲ್ಲಿ ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸಿದ್ದು ಇಲ್ಲಿ ಮುಖ್ಯವಾದ ಸಂಗತಿಯಾಗಿದೆ. ಪ್ರತಿಭಟನೆಯು ಪೊಲೀಸರ ಉಪಸ್ಥಿತಿಯಲ್ಲಿ ಎಂದಿನಂತೆ ಯಾವುದೇ ಅಡಚಣೆ, ಆತಂಕಗಳಿಲ್ಲದೇ ಸಾಂಗವಾಗಿ ನೆರವೇರಿರುತ್ತದೆ. ಇದೇ ಸಂದರ್ಭದಲ್ಲಿ ಮಾಧ್ಯಮದವರು ಕೂಡ ಸಾಕ್ಷಿಯಾಗಿರುತ್ತಾರೆ ಎಂಬುದು ಗಮನಾರ್ಹ.

ಆದರೆ ಆಶ್ಚರ್ಯವೇನೆಂದರೆ ಪ್ರತಿಭಟನೆ ಮುಕ್ತಾಯವಾದ ಒಂದೆರಡು ಗಂಟೆಗಳಲ್ಲಿ ನಡೆದ ವಿದ್ಯಮಾನಗಳು ವಿದ್ಯಾರ್ಥಿಗಳ ನಡೆ ದೇಶದ್ರೋಹವೆಂದು ಕೆಲವು ಮಾಧ್ಯಮಗಳು ಬಿತ್ತರಿಸಿದ್ದು ವಿದ್ಯಾರ್ಥಿಗಳಲ್ಲಿ ದಿಗಿಲು ಬಡಿದಂತಾಗಿತ್ತು. ಪೊಲೀಸರ ಸುಪರ್ದಿನಲಿಯೇ ಪ್ರತಿಭಟನೆಯಲ್ಲಿ ಒಬ್ಬರು “ಫ್ರೀ ಕಾಶ್ಮೀರ” ಎಂಬ ನಾಮಫಲಕವನ್ನು ಹಿಡಿದ ವಿಷಯವನ್ನೇ ದೇಶದ್ರೋಹದ ನೆಲೆಯಲ್ಲಿ ಬಿಂಬಿಸಿರುವುದು ವಿದ್ಯಾರ್ಥಿ ಹೋರಾಟದ ನ್ಯಾಯದ ದನಿಯನ್ನು ಹತ್ತಿಕ್ಕುವ ಉದ್ದೇಶವಾಗಿ ಕಂಡುಬರುತ್ತಿದೆ. ಈ ಪ್ರತಿಭಟನೆಯ ಆರಂಭಕ್ಕೂ ಮುನ್ನ 30 ನಿಮಿಷಗಳ ಮುಂಚೆಯೇ ಬಂದ ಪೊಲೀಸರು ವಿದ್ಯಾರ್ಥಿಗಳಲ್ಲಿ ಈ ನಾಮಫಲಕವನ್ನು ವೀಕ್ಷಿಸಿರಲಿಲ್ಲವೇ..? ನೋಡಿದ್ದರೂ ತಕ್ಷಣ ಅಂತಹ ನಾಮಫಲಕವನ್ನು ತೆರವು ಮಾಡಲು ಹೇಳದೆ ಸುಮ್ಮನಿದ್ದರೆ..? ಇಲ್ಲ ಆ ನಾಮಫಲಕಕ್ಕೆ ದೇಶದ್ರೋಹಕ್ಕು ಸಂಬಂಧವಿಲ್ಲ ಎಂದುಕೊಂಡಿದ್ದರೆ..? ಎಂಬ ಹಲವು ಅಂಶಗಳು ಜನಸಾಮಾನ್ಯರಲ್ಲಿ ಕಾಡುತ್ತಿರುವುದು ಸಹಜವಾಗಿದೆ. ಜೊತೆಗೆ ಮಾಧ್ಯಮ ಕೂಡ ಈ ನಾಮಫಲಕದ ಬಗ್ಗೆ ಯಾವುದೇ ಆಕ್ಷೇಪ ಮಾಡದೆ ಎಲ್ಲಾ ಸರಿ ಇರುವಂತೆ ನಡೆದುಕೊಂಡು ನಂತರ ಕೆಲವೇ ಗಂಟೆಗಳಲ್ಲಿ ದೇಶದ್ರೋಹವನ್ನು ಪಟ್ಟಿ ಕಟ್ಟಿ ಪ್ರಸಾರ ಮಾಡಲು ಕಾರಣವಾದರೂ ಏನು ಎಂಬುದು ನಿಗೂಢವಾಗಿದೆ.
     

ಸಾಮಾನ್ಯವಾಗಿ “ಫ್ರಿ ಕಾಶ್ಮೀರ” ಎಂದರೆ ನಿಖರವಾದ ಯಾವುದೇ ಅರ್ಥಗಳಿಲ್ಲ ಉದಾಹರಣೆಗೆ ದೇವರು ಎಂಬ ಪದವನ್ನು ಎಲ್ಲರೂ ಅವರವರ ಮನಸ್ಸಿಗೆ ಭಾವನೆಗೆ ಬಂದಂತೆ ವರ್ಣಿಸುತ್ತಾರೆ ನಂಬುತ್ತಾರೆ.  ಹಾಗೆಯೇ “ಫ್ರಿ ಕಾಶ್ಮೀರ” ಎಂಬುದನ್ನು ಕೂಡ ಅವರವರ ಭಾವಕ್ಕೆ ಮನಸ್ಸಿಗೆ ಬಂದಂತೆ ಅರ್ಥೈಸಿ ಕೊಳ್ಳುತ್ತಿರುವುದರಿಂದ ಈ ಒಂದು ಘಟನೆ ಬೇರೆ ರೂಪ ಪಡೆದಿರಬಹುದೇನೋ ಎಂದೆನಿಸುತ್ತದೆ. 
ಆದ್ದರಿಂದ ಸಮಾಜದಲ್ಲಿ ಕೋಲಾಹಲವನ್ನೇ ಸೃಷ್ಟಿಸಿರುವ ಫ್ರೀ ಕಾಶ್ಮೀರ ಎಂಬ ಪದದ ನಿಜವಾದ ಅರ್ಥವೇನು ಎಂಬುದನ್ನು ನಾವೆಲ್ಲರೂ ತಿಳಿಯಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.         

ಫ್ರೀ ಕಾಶ್ಮೀರ ಎಂಬ ಪದಕ್ಕೆ ಹೊಲುವಂತೆ ನಮ್ಮ ರಾಜ್ಯದಲ್ಲಿ, ರಾಷ್ಟ್ರದಲ್ಲಿ ಫ್ರೀ ಸ್ಕೂಲ್ ಎಂಬ ಪದವನ್ನು ಬಳಕೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕೆಲವು ಟ್ರಸ್ಟ್ ಗಳ ವತಿಯಿಂದ  ಫ್ರೀ ಸ್ಕೂಲ್ ಎಂಬ ಮಾದರಿಯ ಸ್ಕೂಲ್ ಗಳನ್ನು ತೆರೆಯಲಾಗಿದ್ದು, ಇದರ ಅರ್ಥ ಏನೆಂದರೆ ಆ ಸ್ಕೂಲಿನ ಮಕ್ಕಳಿಗೆ ಕಲಿಕೆಯಲ್ಲಿ ಯಾವುದೇ ನಿರ್ಬಂಧವನ್ನು ಹಾಕುವಂತಿಲ್ಲ ಆ ಮಕ್ಕಳು ಯಾವ ಸಮಯದಲ್ಲಿ ಯಾವ ಪಾಠವನ್ನಾಗಲಿ, ಆಟವನ್ನಾಗಿ ಅವರಿಗೆ ಇಷ್ಟವಾದಂಥ ರೀತಿಯಲ್ಲಿ ಕಲಿಯಬಹುದಾಗಿದೆ. ಇಲ್ಲಿ ನಾವು ಗಮನಿಸಿದರೆ ಫ್ರೀ ಎಂಬ ಪದಕ್ಕೆ ನಿರ್ಬಂಧ ರಹಿತ ಎಂಬ ಅರ್ಥವೂ ಕಂಡುಬರುತ್ತದೆ. ಹಾಗಿದ್ದಲ್ಲಿ ಫ್ರೀ ಕಾಶ್ಮೀರ ಎಂದರೆ ದೇಶದ್ರೋಹದ ನಡೆ ಖಂಡಿತವಾಗಿಯೂ ಆಗುವುದಿಲ್ಲ ಎಂಬುದು ಜನಸಾಮಾನ್ಯರ ಒಂದು ಅಭಿಪ್ರಾಯ. ಹಾಗೆಯೇ ಸಮಾಜದ ಕಳಕಳಿ ಇರುವ ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದೇಶದ್ರೋಹದ ಕೆಲಸವನ್ನು ಮಾಡುತ್ತಾರೆ ಎಂದರೆ ಖಂಡಿತವಾಗಿಯೂ ನಂಬಲು ಅಸಾಧ್ಯ. ಈ ಪ್ರಕರಣ ಜರುಗಿದ ಮರುದಿನವೇ ಈ ಒಂದು ವಿಷಯಕ್ಕೆ  ಸಂಬಂಧಪಟ್ಟ ಯುವತಿ ನಳಿನಿ ಅವರು ಫ್ರೀ ಕಾಶ್ಮೀರ ಎಂಬ ನಾಮಫಲಕದ ದೃಷ್ಟಿಕೋನವನ್ನು ಉದ್ದೇಶವನ್ನು ಹಾಗೂ ಅವರ ಕಾಳಜಿಯನ್ನು ಮಾಧ್ಯಮದ ಮುಂದೆ ಸ್ಪಷ್ಟಪಡಿಸಿರುತಾರೆ. ಆದುದರಿಂದ ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾಧ್ಯಮದವರಾಗಿ ಪೊಲೀಸರಾಗಲಿ ಜನಸಾಮಾನ್ಯರಲ್ಲಿ ತಪ್ಪು ಮಾಹಿತಿಗಳನ್ನು ಬಿತ್ತಿ ಅದಕ್ಕಿರುವ ರೂಪವನ್ನು ತಮಗೆ ಬೇಕಾದಂತೆ ತಿರುಚಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಮಾಡುವುದು ಸಂವಿಧಾನ ಬಾಹಿರವಾಗಬಹುದು. ಜನತೆಯ ರಕ್ಷಣೆ ಸರ್ಕಾರದ ಹೊಣೆ ಆಗಿರುವುದರಿಂದ ಸರ್ಕಾರಗಳೇ ಆಗಲಿ ಅಥವಾ ಜನಪರ ಸಂಘಟನೆಗಳೇ ಆಗಲಿ ಇಂಥ ಗೊಂದಲವಿರುವ ವಿಷಯಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ರೂಪಿಸುವುದರಿ೦ದ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಜಾಗೃತಿ ಮೂಡಿಸಬಹುದಾಗಿದೆ. ಜೊತೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅವರ ಭವಿಷ್ಯವನ್ನು ಒಳ್ಳೆಯ ರೀತಿಯಲ್ಲಿ ರೂಪುಗೊಳ್ಳುವ೦ತೆ ಮಾಡುವಂತಹ ಒಂದು ಸತ್ಕಾರ್ಯ ಮಾಡಬಹುದಾಗಿದೆ.

ಲೇಖಕರು : ಅಧ್ಯಕ್ಷರು, ಅಂಬೇಡ್ಕರ್ ಫುಲೆ ವಿದ್ಯಾರ್ಥಿ ಸಂಘ ಮಂಗಳೂರು ವಿಶ್ವವಿದ್ಯಾಲಯ ರಾಜ್ಯ ಅಧ್ಯಕ್ಷ, ಕರ್ನಾಟಕ ರಾಜ್ಯ ಸಂಶೋಧನಾ ವಿದ್ವಾಂಸರ ಸಂಘ.

LEAVE A REPLY

Please enter your comment!
Please enter your name here