• ಉಮ್ಮು ಯೂನುಸ್ , ಉಡುಪಿ.

ಪತ್ರಿಕೆಯಲ್ಲಿ ಇತ್ತೀಚೆಗಿನ ಸುದ್ಧಿಯೊಂದನ್ನು ಕಂಡಾಗ, ಕರುಳು ಚುರುಕ್ಕೆನಿಸಿತು. Covid-19 ನಿಂದಾಗಿ ದುಡಿಮೆಯಿಲ್ಲದೇ, ಕಂಗಾಲಾಗಿ ವಲಸೆ ಕಾರ್ಮಿಕರ ಗುಂಪೊಂದು ಆಂಧ್ರಪ್ರದೇಶದಿಂದ ಬಿಜಾಪುರದ ಕಡೆಗೆ ಹೊರಡುತ್ತದೆ. ಇನ್ನೇನು ಊರು ಸಮೀಪಿಸುತ್ತಿದೆ ಎನ್ನುವಾಗಲೇ 12 ರ ಬಾಲಕಿ ಸಾವನ್ನಪ್ಪುತ್ತಾಳೆ. ಯಾವ ಮರಣದ ಭಯದಿಂದ ಜನ ವಾಹನಗಳಿಗೂ ಕಾಯದೇ ತಮ್ಮೂರು ಸೇರುವ ತವಕದಲ್ಲಿ ಕಾಲ್ನಡಿಗೆಯಲ್ಲೇ ಹೊರಟಿದ್ದರೋ, ಸಾವು ಅವರ ಊರ ಬಾಗಿಲ ಬಳಿ ಕಾಯುತ್ತಿತ್ತು.. ಇದೊಂದು ಉದಾಹರಣೆ ಮಾತ್ರವಾಗಿದೆ. ಈ ಬಾರಿ ಕೊರೋನದೊಂದಿಗೆ ಈರೀತಿಯ ದುರ್ಮರಣಗಳೂ ಸಾಕಷ್ಟು ವರದಿಯಾಗಿವೆ. ಈ ಮಾತು ಯಾಕಾಗಿ ನೆನಪಿಗೆ ಬರುತ್ತಿದೆಯೆಂದರೆ, ನಮ್ಮ ದೇಶ ಇತ್ತೀಚೆಗೆ ಅತೀ ಎನಿಸುವಂತಹಾ ಕೆಲವು ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ.

ನೇರ ವಿಷಯಕ್ಕೆ ಬರುವುದಾದರೆ, ದೇಶದ ಸದ್ಯದ ಪರಿಸ್ಥಿತಿ ಯಾವುದೇ ರೂಪದಲ್ಲೂ “ಚೆನ್ನಾಗಿದೆ” ಎನ್ನುವಂತಿಲ್ಲ. ಏಕೆಂದರೆ ದೇಶಕ್ಕೆ ಬೀಗ ಜಡಿದು ತಿಂಗಳು ಕಳೆದರೂ ಕೊರೋನಕ್ಕಿಂತಲೂ ಭೀಕರವಾಗಿ ದೇಶವನ್ನು ಕಾಡಿದ್ದು ದೇಶದ ಮಾಧ್ಯಮ, ಮತ್ತದರ ಪ್ರತಿನಿಧಿಗಳು. ತಮ್ಮ ನಾಡಿನ ಈ ಸಂಕಷ್ಟದ ಸಂದರ್ಭದಲ್ಲಿಯೂ ಕೂಡ ಜನರ ನಡುವೆ ಜಾತಿಯ ಗಟಾರ ತೆರೆದು ಗಬ್ಬೆಬ್ಬಿಸಿಬಿಟ್ಟವು ನಮ್ಮ ನಾಡಿನ ಮಾಧ್ಯಮಗಳು. ವಲಸೆ ಕಾರ್ಮಿಕರ ಪರದಾಟಗಳನ್ನು, ಅವರ ಬದುಕಿನ ಅನಿಶ್ಚಿತತೆಗಳನ್ನು ತೆರೆದಿಟ್ಟು, ಉಳ್ಳವರ ಬದುಕು ಕಟ್ಟುವ “ಇಲ್ಲದವರ’ ಪರ ಕಾಳಜಿ ತೋರಬೇಕಿದ್ದ ಮಾಧ್ಯಮಗಳು, ಆ ಕುರಿತು ಅಸಡ್ಡೆ ತೋರಿದುವು. ಆದರೆ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹಾ ಸುದ್ಧಿಗಳನ್ನು ಮಾತ್ರ ಮಿರ್ಚ್ ಮಸಾಲೆ ಸೇರಿಸಿ ಸತ್ಯಾಸತ್ಯತೆಯ ಗೋಜಿಗೇ ಹೋಗದೆ ಪುಂಖಾನುಪುಂಖವಾಗಿ ಬಿತ್ತರಿಸಿದುವು. ಈ ಪೂರ್ವಾಗ್ರಹ ಸುದ್ಧಿಗಳ ಹಿಂದಿನ ಮರ್ಮವರಿಯದ ಮುಗ್ಧ ಹಳ್ಳಿಗರು ಸಹ ಸಮುದಾಯವನ್ನು ಭೀತಿಯಿಂದಲೋ ಅಥವಾ ಅವರೇ ವೈರಸ್ ಗಳೋ ಎಂದು ಕಾಣುವಂತಾಯಿತು. ಇದು ಖಂಡಿತಾ ಪತ್ರಿಕಾ ಧರ್ಮವಲ್ಲ. ಇದು ಮಾಧ್ಯಮಗಳು ಹಿಂದೆಂದಿಗಿಂತಲೂ ಹೆಚ್ಚು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾಗಿರುವ ಸಂದರ್ಭವಾಗಿದೆ. ಆದರೆ ಮಾಧ್ಯಮಗಳು ಕೋಮುವಾದದ ಗುತ್ತಿಗೆ ಪಡೆದುಕೊಂಡವರೋ ಎಂಬಂತೆ ತೀರಾ ಅಮಾನವೀಯವಾಗಿ ನಡೆದುಕೊಂಡವು

ಇದು ಪತ್ರಿಕೆಗಳ ಬೇಜವಾಬ್ದಾರಿತನವಾಯಿತು. ಇನ್ನು ರಾಜಧರ್ಮ ನಿರ್ವಹಿಸಬೇಕಿದ್ದ ನಾಯಕರೇನು ಮಾಡುತ್ತಿದ್ದಾರೆ? ಕೊರೋನ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ದುಡಿಮೆ ಇಲ್ಲದ ಬಡಪಾಯಿಗಳ ಅಂದರೆ, ಮಧ್ಯಮ ವರ್ಗಿಗಳು ಮತ್ತು ಬಡಜನರಿಗೆ ಆಹಾರ ಸಾಮಾಗ್ರಿ ಒದಗಿಸುವಿಕೆ, ಅವರಿಗೆ ಉಚಿತ ಆರೋಗ್ಯ ತಪಾಸಣೆ , ಮತ್ತು ಔಷದಿ ವಿತರಣೆಗಳಂತಹಾ ಭಾಗ್ಯಗಳನ್ನು ನೀಡುವ ಕುರಿತು ಚಿಂತನೆ ನಡೆಸಿ ಕಾರ್ಯ ಪ್ರವೃತ್ತರಾಗಿದ್ದರೆ ಅದೊಂದು ಕೋವಿಡ್ ವಿರುದ್ಧ ಗುರುತರ ಹೆಜ್ಜೆಯಾಗಿ ಜನಮಾನಸದಲ್ಲಿ ಉಳಿದು ಹೋಗುತ್ತಿತ್ತೇನೋ.. ಆದರೆ, ಜವಾಬ್ದಾರಿಯುತರೆನಿಸಿಕೊಂಡ ನಮ್ಮ ನಾಯಕರು, ಮೂಢನಂಬಿಕೆಯ ಮೊರೆಹೋಗಿ ಅಷ್ಟರಲ್ಲೇ ಕೈತೊಳೆದುಕೊಂಡರು. ಇನ್ನು ಕೆಲವರು ಜಾತಿ ಧರ್ಮಗಳ ನಡುವಿನ ಕಂದರವನ್ನು ಮತ್ತಷ್ಟು ಆಳವಾಗಿಸಿದರು. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಚರ್ಚೆಗೆ ಬಂದದ್ದು, ನಮ್ಮ ತೇಜಸ್ವಿ ಸೂರ್ಯರವರ 5 ವರುಷ ಹಿಂದಿನ ಟ್ವೀಟ್.. ತನ್ನ ದೇಶದ ಮಹಿಳೆಯರ ಸಾವಿರಾರು ಸಮಸ್ಯೆಗಳ ಕುರಿತು ನಮ್ಮ ತೇಜಸ್ವಿಯವರಿಗೆ ಜ್ಞಾನವೇ ಇಲ್ಲವೋ, ಅಥವಾ ಅವರ “ಮಡಿವಂತಿಕೆ” ಅವರಿಂದ ಆ ರೀತಿ ಮಾಡಿಸಿತೋ ಅರಿಯದು. ಆದರೂ ತನ್ನ ದೇಶದ 1% ಮಹಿಳೆಯರ ಸಮಸ್ಯೆಯನ್ನರಿಯದಿದ್ದರೂ ಪರವಾಗಿಲ್ಲ ಅರಬ್ ಮಹಿಳೆಯರ ಆರ್ಗ್ಯಾಝಮ್ (orgasm) ಲೈಂಗಿಕ ಪರಾಕಾಷ್ಠೆ ಕುರಿತು ತುಚ್ಛ ಹೇಳಿಕೆ ನೀಡಿ ಮುಖಭಂಗ ಮಾಡಿಕೊಂಡರಲ್ಲದೇ ಜಾಗತಿಕವಾಗಿ ಭಾರತೀಯ ಮಾನದ ಹರಾಜು ಹಾಕಿಬಿಟ್ಟರು. ತನ್ನ ದೇಶದ ಮಹಿಳೆಯರ ಮೇಲೆ ಪ್ರತಿ ನಿಮಿಷಕ್ಕೊಮ್ಮೆ ಅತ್ಯಾಚಾರವಾಗುತ್ತಿದೆ, ಮಹಿಳೆಯರು, ಹೆಣ್ಣುಮಕ್ಕಳು ಮನೆಯಿಂದ ಹೊರಗಡಿಯಿಡಲು ಭಯಪಡುತ್ತಿದ್ದಾರೆ, ಈ ಮಾತುಗಳನ್ನು ಸಾಮಾಜಿಕ ತಾಣಗಳಲ್ಲಿ ಟ್ವೀಟಿಸಿ ಸಮಸ್ಯೆಯ ಗಾಂಭೀರ್ಯತೆಯನ್ನು ಸನಾಜದ ಮುನ್ನೆಲೆಗೆ ತಂದಿದ್ದರೆ, ತೇಜಸ್ವಿ ದೇಶದ ಮಹಿಳೆಯರ ಪಾಲಿನ ಹೀರೋ ಎನಿಸಿಕೊಳ್ಳುತ್ತಿದ್ದರೇನೋ.. 5 ವರುಷಗಳ ಹಿಂದಿನ ಮಹಿಳೆಯರ ತೀರಾ ಖಾಸಗಿತನದ ತುಚ್ಛ ಮಾನಸಿಕತೆಯನ್ನು ಪ್ರತಿಪಾದಿಸುವ ಈ ಟ್ವೀಟ್ ಅರಬ್ ಜನತೆಯ ಕೆಂಗಣ್ಣಿಗೆ ಗುರಿಯಾಯಿತು. ಎಷ್ಟೆಂದರೆ, ಅರಬರ ರಾಜಕುಮಾರಿ, ಉದ್ಯಮಿ ಮಹಿಳೆಯರೂ, ಗಾಂಧಿಯ ನಾಡಿನಲ್ಲಿ ಇಂತಹಾ ಸಂಸ್ಕೃತಿಹೀನರೂ ಇದ್ದಾರಲ್ಲಾ ಎಂದು ಅವರ ತರಬೇತಿಯ ಕರಿತು ಬೆರಳೆತ್ತಿದರಲ್ಲದೇ, ನಮ್ಮ ನೆಲದಲ್ಲಿ ನಿಮಗೆಂದೂ ಸ್ವಾಗತವಿಲ್ಲ ಎಂದು ವಾಗ್ದಾಳಿ ಮಾಡಿದರು. ವೃತ್ತಿಯಲ್ಲಿ ವಕೀಲರಾಗಿರುವ ತೇಜಸ್ವಿಯವರ ಈ ಟ್ವೀಟ್ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಒಬ್ಬ ಮಹಿಳೆಯ ಕುರಿತು ಇಷ್ಟು ತುಚ್ಛವಾಗಿ ಮಾತನಾಡುವ ಇಂತಹಾ ಕಿರಾತಕತೆ ಅದು ಯಾವ ಬೈಠಕ್ ನಲ್ಲಿ ಕಲಿತರೋ ದೇವರೇ ಬಲ್ಲ. ಏಕೆಂದರೆ ಭಾರತೀಯ ಸಂಸ್ಕೃತಿಯಂತೂ ಈ ರೀತಿ ಸಭ್ಯತೆಯ ಎಲ್ಲೆ ಮೀರುವುದನ್ನು ಸುತಾರಾಂ ಒಪ್ಪದು. ಇನ್ನು ತೇಜಸ್ವಿಯಂತಹವರದೇ ಮಾನಸಿಕತೆಯನ್ನು ಹೊಂದಿರುವ ಇತರ ಚೇಲಾಗಳೂ, ಅರಬ್ ದೇಶದಲ್ಲಿ ಇಂತಹದ್ದೇ ಅತಿರೇಕದ ಟ್ವೀಟ್ ಮಾಡಿ, ಕೆಲಸ ಕಳಕೊಂಡು, ಕಾರಾಗ್ರಹ ಕಂಡ ಭಕ್ತರೂ ಇದ್ದಾರೆ. ಅದಲ್ಲದೇ ಮುಸಲ್ಮಾನರ ಬೆಳಗಿನ ನಮಾಝ್ ಕರೆಯಿಂದಾಗಿ ಕಿರಿಕಿರಿ ಅನುಭವಿಸುತ್ತಿದ್ದೇನೆ ಎಂದು2017 ರಲ್ಲಿ ಟ್ವೀಟ್ ಮಾಡಿ ಭಕ್ತರ ಹೀರೋ ಎನಿಸಿಕೊಂಡಿದ್ದ ಬಾಲಿವುಡ್ ಗಾಯಕ ಸೋನು ನಿಗಮ್, ತೇಜಸ್ವಿಯವರ ಸ್ಥಿತಿ ಕಂಡು ಕಳ್ಳಬೆಕ್ಕಿನಂತೆ ತಮ್ಮ ಗೋಡೆಯ ಮೇಲಿನ ಬರಹವನ್ನು ಉಜ್ಜಲು ನೋಡಿದರು, ಆದರೆ ಜನ ಬಿಟ್ಟಾರೇ? ತಕ್ಷಣ ಆ ಟ್ವೀಟನ್ನೂ ಸಂಬಂಧ ಪಟ್ಟವರ ಗಮನಕ್ಕೆ ತಂದೇಬಿಟ್ಟರು.! ಒಂದು ವೇಳೆ ಕಿಡಿಗೇಡಿತನದ ಟ್ವೀಟ್ ಗಳಲ್ಲಿ 1 ಪ್ರತಿಶತವಾದರೂ ನೈಜತೆಯಿದ್ದಿದಿದರೆ ಅವರಿಗೆ ಈ ಟ್ವೀಟ್ ಗಳನ್ನು ಡಿಲೀಟ್ ಮಾಡುತ್ತಿರಲಿಲ್ಲ..

ಇದೀಗ ಕೊರೋನದ ತಿವ್ರ ಮತ್ತು ತುರ್ತು ಸಂದರ್ಭದಲ್ಲಿ ತಬ್ಲೀಗಿ ಜಮಾಅತಿಗರ ಕುರಿತಾಗಿ ಅಸಹಿಷ್ಣುಗಳ ಕಹಿ ಟ್ವೀಟ್, ಮತ್ತು ಅವುಗಳೊಂದಿಗೆ ಜೋಡಿಸಲಾದ ಅವಾಸ್ತವಿಕ ವೀಡಿಯೋಗಳೆಲ್ಲಾ ಈ ಬಾರಿ ಅಂತರ್ರಾಷ್ಟ್ರೀಯ ಸ್ತರದ ಗಮನ ಸೆಳೆಯಿತು. ಮತ್ತು ಭಾರತದಲ್ಲಿ ಆಂತರಿಕವಾಗಿದ್ದ ಸಮಸ್ಯೆಯೊಂದು ಭಕ್ತರಿಂದಾಗಿ ಜಗಜ್ಜಾಹೀರಾಯಿತು. ಈ ಒಂದು ಹಂತ ತಲುಪಿದಾಗ ನಟಿ ಕಂಗನಾರಂತಹವರಿಗೆ ಟ್ವಿಟ್ಟರ್ ನಮ್ಮ ದೇಶೀಯ ಮಾಧ್ಯಮವಲ್ಲ ಅದನ್ನು ಭಾರತದಲ್ಲಿ ನಿಷೇಧಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.

ಇಂದಿನವರೆಗೂ ಸಾಕಷ್ಟು ನಕಾರಾತ್ಮಕತೆಗಳನ್ನು ದೇಶ ಸಮರ್ಥವೋ ಅಸಮರ್ಥವೋ ರೀತಿಯಿಂದ ಎದುರಿಸುತ್ತಾ ಬಂದಿದೆ. ಆದರೆ ಇದೀಗ ಭಾರತದಲ್ಲಿ ಹೊಗೆಯಾಡುತ್ತಿರುವ ಅಸಹಿಷ್ಣುತೆಯ ಕರಾಳ ಮುಖ ಜಗದೆದುರು ಅನಾವರಣಗೊಂಡಿದೆ. 80 ವರುಷಗಳಿಂದಲೂ ಜನತೆಯ ಮನಸ್ಸಿಗೆ ಧರ್ಮ, ಜಾತಿ, ಅಸಹಿಷ್ಣುತೆಯ ಸಯನೈಡ್ ಉಣಿಸುತ್ತಿರುವ ಸಂಘಪರಿವಾರ, ಅದೇಕೋ ಎಡವುತ್ತಿರುವ ಲಕ್ಷಣ ಕಾಣಿಸುತ್ತಿದೆ. ಸಂಘದ ಬಣ್ಣದ ಮುಖವಾಡ ಕಳಚಿಬಿದ್ದಾಗ ಅದರ ವಿಕಾರ ರೂಪ ಕಂಡು ಬಹಳಷ್ಟು ನಿರ್ಮಲ ಹ್ರದಯಿಗಳು ಸಂಘದ ಸಂಗ ತೊರೆದಿದ್ದಾರೆ. ಅವರಲ್ಲಿ ಈಚೆಗೆ ಮೃತರಾದ ಮಹೇಂದ್ರಕುಮಾರ್ ಒಬ್ಬರು. ಮಹೇಂದ್ರ ಕುಮಾರ್ ತಾವು ಹಾದಿತಪ್ಪಿದ್ದರೂ ಸರಿಯಾದ ಸಂದರ್ಭದಲ್ಲಿ ಜಾತಿಗಿಂತಲೂ ಪ್ರಾಣ, ದೇಶ ಮೇಲು ಎಂಬುವುದನ್ನು ಮನಗಂಡು ಆ ಹಾದಿ ತೊರೆದದ್ದಲ್ಲದೇ, ಮರಣದ ಮುನ್ನ “ನಮ್ಮ ಧ್ವನಿ” ಎಂಬ ಯೂ ಟ್ಯೂಬ್ ಚಾನೆಲ್ ಮುಖಾಂತರ ಸಂಘ, ಮತ್ತು BJP ಯ ವಾಸ್ತವ ಮುಖವನ್ನು ತೋರಿಸಿಕಟ್ಟು ಬಹಳಷ್ಟು ಜನರ ಮನದ ಗೊಂದಲವನ್ನು ದೂರೀಕರಿಸಿದರು. ನಮ್ಮ ದೇಶವು ವಿವಿಧತೆಯಲ್ಲಿ ಏಕತೆಗಾಗಿಯೇ ಜಗತ್ತಿನಲ್ಲಿ ಪ್ರಸಿದ್ಧವಾಗಿದೆ. ಕೆಲವು ಕಿರಾತಕರಿಂದಾಗಿ ಈ ಏಕತೆಗೆ ಭಂಗ ಬಾರದಿರಲಿ ಎಂಬುವುದು ದೇಶಪ್ರೇಮಿಗಳ ಮನದಾಳದ ಹಾರೈಕೆ.

LEAVE A REPLY

Please enter your comment!
Please enter your name here