ಸಂಪಾದಕೀಯ

ಈಶಾನ್ಯ ರಾಜ್ಯಗಳು ಹೊತ್ತಿಯುರಿಯುತ್ತಿದೆ. ದೇಶದ ವಿದ್ಯಾರ್ಥಿಗಳು ಬೀದಿಗೆ ಬಂದು ಪ್ರತಿಭಟಿಸಲು ಆರಂಭಿಸಿದ್ದಾರೆ. ಮುಸ್ಲಿಮರು ಆತಂಕ ಭರಿತ ಧ್ವನಿಯಲ್ಲೇ ಬೀದಿಗಿಳಿಯುತ್ತಿದ್ದಾರೆ. ಈ ಪ್ರತಿಕ್ರಿಯೆಗಳು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಂಡಿಸಿರುವ “ಪೌರತ್ವ ತಿದ್ದುಪಡಿ ಮಸೂದೆ,2019” ಯ ವಿರುದ್ಧವಾಗಿದೆ. ಈಗಾಗಲೇ ಗೃಹ ಸಚಿವ ಅಮಿತ್ ಶಾರವರು ಈ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಹುಮತದಿಂದ ಅಂಗೀಕೃತಗೊಳಿಸಿದ್ದಾರೆ. ಈಗ ಉಳಿದಿರುವುದು ರಾಷ್ಟ್ರಪತಿಯವರ ಅಂಕಿತ ಮಾತ್ರ. ಅದು ಕೂಡ ಶೀಘ್ರ ಮುಗಿದು ಅನುಷ್ಠಾನಕ್ಕೆ ಬರಲಿದೆ. ಈ ದೇಶದ ಜನತೆ ಈ ಮಸೂದೆಯನ್ನು ವಿರೋಧಿಸಲು ಮುಖ್ಯ ಕಾರಣವೇನೆಂದರೆ ಇದು ಭಾರತದ ಸಂವಿಧಾನದ ಸ್ಪಷ್ಟ ಉಲ್ಲಂಘನೆ ಎಂಬ ಕಾರಣಕ್ಕೆ.

ಭಾರತದಲ್ಲಿ ಯಾವುದಾದರೂ ಕಾಯಿದೆ ಅನುಷ್ಠಾನಕ್ಕೆ ತರಬೇಕಾದರೆ ಅದು ಸಂವಿಧಾನದ ಆಶಯದ ಚೌಕಟ್ಟಿನಲ್ಲಿರಬೇಕು. ಅದರಲ್ಲೂ ಸಂವಿಧಾನದ ಬುನಾದಿಯಾದ ಜಾತ್ಯತೀತತೆ ಅಥವಾ ಧರ್ಮನಿರಪೇಕ್ಷತೆಗೆ ಯಾವುದೇ ಧಕ್ಕೆ ಬರಬಾರದು. ಭಾರತ ವೈವಿಧ್ಯತೆಯಲ್ಲಿ ಏಕತೆ ಸಾರುವ ರಾಷ್ಟ್ರ. ಈ ದೇಶದಲ್ಲಿ ರಾಷ್ಟ್ರ ಧರ್ಮ, ರಾಷ್ಟ್ರದ ದೇವರು, ನಂಬಿಕೆಯೆಂಬ ಯಾವುದೇ ನಿಯಮವಿಲ್ಲ. ಈ ದೇಶದಲ್ಲಿ ಎಲ್ಲರೂ ಸಮಾನರು. ಅವರು ಯಾವುದೇ ದೇಶಕ್ಕೆ, ವರ್ಗಕ್ಕೆ, ಸಮುದಾಯಕ್ಕೆ, ಪ್ರದೇಶಕ್ಕೆ ಸೇರಿರಲಿ, ಅವರಲ್ಲಿ ತಾರತಮ್ಯ ಮಾಡಲು ನಮ್ಮ ದೇಶದ ಗ್ರಂಥ ಸಂವಿಧಾನ ಅನುವು ಮಾಡಿಕೊಡುವುದಿಲ್ಲ. ಆದರೆ ಇದೀಗ 1955 ರಲ್ಲಿ ಅನುಷ್ಠಾನಕ್ಕೆ ಬಂದಿರುವ ತಾರತಮ್ಯ ರಹಿತ ” ಪೌರತ್ವ ಕಾಯಿದೆ”ಯನ್ನು ತಿದ್ದುಪಡಿ ಮಾಡಿ ತಾರತಮ್ಯ ಸಹಿತವಾದ “ ಪೌರತ್ವ ತಿದ್ದುಪಡಿ ಮಸೂದೆ,2019” ಪರಿಚಯಿಸಲಾಗುತ್ತಿದೆ.
ಈ ದೇಶ ವಿಭಜನೆಗೊಂಡಂತಹ ಸಂದರ್ಭದಲ್ಲಿ ಭಾರತೀಯರು ಬೇರೆ ಬೇರೆ ಕಾರಣಕ್ಕೆ ನೆರೆ ರಾಷ್ಟ್ರಗಳಿಗೆ ಒತ್ತಾಯ ಪೂರ್ವಕವಾಗಿ, ಕೆಲವರು ಅನಿವಾರ್ಯವಾಗಿ ತೆರಳಬೇಕಾಯಿತು. ಈ ಸಂದರ್ಭದಲ್ಲಿ ನೆರೆ ರಾಷ್ಟ್ರಗಳಿಂದ ಮೂಲ ನಿವಾಸಿಗಳು ಭಾರತಕ್ಕೆ ಬಂದು ನೆಲೆಸಿ 12 ವರ್ಷಗಳ ಅವಧಿಯ ನಂತರ ಪೌರತ್ವ ನೀಡುವ ಕಾಯಿದೆಯನ್ನು 1955 ರಲ್ಲಿ ಪರಿಚಯಿಸಲಾಯಿತು. ಈ ಕಾಯಿದೆಯಲ್ಲಿ ಪೌರತ್ವವನ್ನು ಅವರು ನೆಲೆಸಿರುವ ವರ್ಷಗಳ ಆಧಾರದಲ್ಲಿ ಅವರಿಗೆ ನೀಡಲಾಗುತ್ತಿತ್ತು. ಎಲ್ಲಿಯೂ ಒಂದು ನಿರ್ದಿಷ್ಟ ಧರ್ಮ, ಪಂಗಡ, ಜಾತಿಗೆ ಮೀಸಲಿಡಲಾಗಿದೆ ಎಂಬ ಧರ್ಮಾಧರಿತ ತಾರತಮ್ಯ ಇರಲಿಲ್ಲ. ಆದರೆ ಇದೀಗ ಬಿಜೆಪಿ ಸರಕಾರ ತನ್ನ ಮಾತೃ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೈದ್ದಾಂತಿಕ ನಿಲುವನ್ನು ಈ ದೇಶದ ಮೇಲೆ ಹೇರುವ ಗುಪ್ತ ಕಾರ್ಯ ಸೂಚಿಯ ಅಂಗವಾಗಿ “ ಪೌರತ್ವ ತಿದ್ದುಪಡಿ ಮಸೂದೆಯನ್ನು” ಪರಿಚಯಿಸುತ್ತಿದೆ. ಭಾರತ ಹಿಂದು ರಾಷ್ಟ್ರವಾಗಬೇಕು. ಇಲ್ಲಿ ಮತ್ತೆ ಮನುಸ್ಮೃತಿಯನ್ನು ಜಾತಿಯಾಧರಿತ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಇಲ್ಲಿನ ಅಲ್ಪ ಸಂಖ್ಯಾತರೊಂದಿಗೆ ಎರಡನೇ ದರ್ಜೆಯ ಪ್ರಜೆಯಂತೆ ವರ್ತಿಸಬೇಕು ಎಂಬ ನಿಲುವುಗಳನ್ನು ತನ್ನ ‘ಬಹುಮತ’ ಎಂಬ ಅಸ್ತ್ರದೊಂದಿಗೆ ಈ ದೇಶದ ಜನರ ಮೇಲೆ ಹೇರಲು ಮಸೂದೆಗಳ ರೂಪದಲ್ಲಿ ತರುತ್ತಿದೆ. ಈ ಪೌರತ್ವ ತಿದ್ದುಪಡಿ ಮಸೂದೆಯ ರೂಪಿಸುವುದರ ಮೊದಲು ಹಲವು ವರ್ಷಗಳಿಂದ ಬಿಜೆಪಿ ಸಂಘಪರಿವಾರದ ಸಹಾಯದಿಂದ ಈ ದೇಶದಲ್ಲಿ ‘ಕೋಟಿಗಟ್ಟಲೆ’ ಜನರು ಬಾಂಗ್ಲಾದೇಶದಿಂದ ಮುಸ್ಲಿಮರು ವಲಸೆ ಬಂದಿದ್ದಾರೆ ಅವರೆಲ್ಲರೂ ಈಶಾನ್ಯ ರಾಜ್ಯವಾದ ಅಸ್ಸಾಮಿನಲ್ಲಿ ನೆಲೆಸಿದ್ದಾರೆಂದು ಗುಲ್ಲೆಬಿಸುವ ಕೆಲಸ ನಡೆಸಿತು. ಅದರ ಭಾಗವಾಗಿ ಬಿಜೆಪಿ ಎನ್.ಆರ್.ಸಿ ಎಂಬ ಪ್ರಕ್ರಿಯೆಯನ್ನು ತರಾತುರಿಯಲ್ಲಿ ಜಾರಿಗೆ ತಂದಿತು.ಯಾವಾಗ ಎನ್.ಆರ್.ಸಿ ಪ್ರಕ್ರಿಯೆಯಲ್ಲಿ ಕೇವಲ 19 ಲಕ್ಷ ಹೊರಗುಳಿದರು. ಆವಾಗಲೇ ಬಿಜೆಪಿ ಮುಖಭಂಗಕ್ಕೆ ಈಡಾಗಿತ್ತು. ಯಾಕೆಂದರೆ ಮೊದಲನೆಯಾದಾಗಿ ಈ ಪಟ್ಟಿ ಕೋಟಿ ಗೆರೆ ದಾಟುವುದು ಬಿಡಿ 50 ಲಕ್ಷದ ಸಮೀಪ ಕೂಡ ಬಂದಿರಲಿಲ್ಲ. ಅದಕ್ಕಿಂತ ಸೋಜಿಗದ ಸಂಗತಿಯೆಂದರೆ ಈ ಪಟ್ಟಿಯಿಂದ ಹೊರಗುಳಿದ ಮುಸ್ಲಿಮರ ಸಂಖ್ಯೆ ಕೇವಲ 2 ಲಕ್ಷವಾಗಿತ್ತು. ಇದೀಗ ಸುಮಾರು 11 ಲಕ್ಷಕ್ಕಿಂತ ಹೆಚ್ಚು ಹಿಂದುಗಳು ಈ ಪಟ್ಟಿಯಿಂದ ಹೊರಗುಳಿದಿದ್ದರು. ಸ್ವತಃ ಅಸ್ಸಾಮಿನ ಬಿಜೆಪಿ ಮುಖಂಡರು ಈ ಪಟ್ಟಿಯ ವಿರುದ್ಧ ಸಿಡಿದೆದ್ದರು. ಜನರಿಗೂ ಇವರ ಬಂಡವಾಳ ಅರ್ಥವಾಗುತ್ತ ಬರುತ್ತಿರುವಾಗ ಅಮಿತ್ ಶಾ ಮತ್ತೆ ಎಂದಿನಂತೆ ಜನರನ್ನು ಉನ್ಮಾದದಲ್ಲಿ ತಲ್ಲೀನವಾಗಿಸಲು ಇಡೀ ದೇಶದಲ್ಲಿ ಎನ್.ಆರ್.ಸಿ ಪ್ರಕ್ರಿಯೆ ಜಾರಿಗೆ ತರಲಾಗುವುದು ಅದರೊಂದಿಗೆ ಈ ‘ಪೌರತ್ವ ತಿದ್ದುಪಡಿ ಮಸೂದೆ’ ಜಾರಿಗೊಳಿಸುವ ಬಗ್ಗೆ ಚರ್ಚೆ ಆರಂಭಿಸಿದರು.
ಈ ಪೌರತ್ವ ತಿದ್ದುಪಡಿ ಕಾನೂನು ಎನ್.ಆರ್.ಸಿ ಯೊಂದಿಗೆ ಪರಿಚಯಿಸಲು ಮುಖ್ಯ ಕಾರಣ ಈ ಪ್ರಕ್ರಿಯೆಯಲ್ಲಿ ಅತೀ ಹೆಚ್ಚು ಹಿಂದುಗಳು ಹೊರಗುಳಿದಿದ್ದರು. ಇದರಿಂದಾಗಿ ಬಿಜೆಪಿಯ ಅತಿ ದೊಡ್ಡ ‘ಮತ ಬ್ಯಾಂಕ್’ ನಿರಾಸೆಗೊಳ್ಳುವ ಎಲ್ಲ ಸಾಧ್ಯತೆಯಿತ್ತು. ಈಗ ನಷ್ಟವನ್ನು ತುಂಬಲು ಮುಸ್ಲಿಮರನ್ನು ಹೊರಗಿಟ್ಟು ಹಿಂದುಗಳು, ಕ್ರೈಸ್ತರು, ಬೌದ್ದರು, ಜೈನರು, ಪಾರ್ಸಿಗಳು ಈ ಮಸೂದೆಯಡಿಯಲ್ಲಿ ಒಂದು ವೇಳೆ 6 ವರ್ಷ ಭಾರತದಲ್ಲಿ ನೆಲೆಸಿದ್ದರೆ ಅವರಿಗೆ ಪೌರತ್ವ ನೀಡುವ ಬಗ್ಗೆ ಪ್ರಸ್ತಾಪಿಸಲಾಯಿತು. ಈ ಪ್ರಸ್ತಾವನೆ ಮಾಡುವಂತಹ ಸಂದರ್ಭದಲ್ಲಿ ಎಂದಿನಂತೆ ಬಿಜೆಪಿ ಸಂವಿಧಾನದ ಆತ್ಮವಾದ ಜಾತ್ಯತೀತತೆಯ ಮೇಲೆ ಪ್ರಹಾರ ಮಾಡಿತು. ಭಾರತದ ಸಂವಿಧಾನದ ಪರಿಚ್ಚೇದಗಳಾದ 5-11 ಈ ದೇಶದ ಪೌರತ್ವವನ್ನು ವ್ಯಾಖ್ಯಾನಿಸುತ್ತದೆ. ಇದರ ವ್ಯಾಖ್ಯಾನದ ಪ್ರಕಾರ ಪೌರತ್ವ ನಿರ್ಧರಿಸುವ ಅಂಶ ಹುಟ್ಟು ಮತ್ತು ನೆಲೆಯ ಆಧಾರವಾಗಿದೆ. ಅದರೊಂದಿಗೆ ಸಂವಿಧಾನದ ಅತ್ಯಂತ ಪ್ರಮುಖ ವಿಧಿ 14 ಕಾನೂನಿನ ಮುಂದೆ ಎಲ್ಲರೂ ಸಮಾನರು. ಯಾವುದೇ ಧರ್ಮ,ಜಾತಿ, ಭಾಷೆ, ಪ್ರಾದೇಶಿಕತೆ ಮತ್ತು ಸಂಸ್ಕೃತಿಯ ಆಧಾರದಲ್ಲಿ ತಾರತಮ್ಯ ಮಾಡುವಂತಿಲ್ಲವೆಂದು ಸ್ಪಷ್ಟಪಡಿಸುತ್ತದೆ. ಆದರೆ ಪ್ರಸ್ತುತ ಮಂಡಿಸಿದ ಪೌರತ್ವ ತಿದ್ದುಪಡಿ ಮಸೂದೆ,2019 ಸಂವಿಧಾನದ ಎಲ್ಲ ಪರಿಚ್ಚೇದಗಳನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಇದೊಂದು ಸಂವಿಧಾನ ಬಾಹಿರವಾದ ಮಸೂದೆಯಾಗಿರುವುದರಲ್ಲಿ ಸಂಶಯವಿಲ್ಲ.
ಕೇಂದ್ರ ಸರಕಾರದ ನಿಲುವಿನ ಪ್ರಕಾರ, ಬಾಂಗ್ಲಾ, ಅಫಘಾನಿಸ್ತಾನ ಮತ್ತು ಪಾಕಿಸ್ತಾನ ಇಸ್ಲಾಮಿ ರಾಷ್ಟ್ರಗಳಾಗಿದ್ದು ಅಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುವುದಿಲ್ಲ. ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತದೆ. ಆದ್ದರಿಂದ ನಾವು ಮುಸ್ಲಿಮರನ್ನು ಹೊರತು ಪಡಿಸಿ ಪೌರತ್ವ ಘೋಷಿಸುತ್ತಿದ್ದೇವೆಯೆಂದು ಹೇಳುತ್ತಿದ್ದಾರೆ. ವಾಸ್ತವದಲ್ಲಿ ಬಿಜೆಪಿಯ ಕಪಠತನ ಈ ನಿಲುವಿನಲ್ಲಿ ಸ್ಪಷ್ಟಗೊಳ್ಳುತ್ತದೆ. ಯಾಕೆಂದರೆ ಈ ರಾಷ್ಟ್ರಗಳಲ್ಲಿ ಮುಸ್ಲಿಮರೂ ಕಡು ಬಡತನದಿಂದ ಬಳಲುತ್ತಿದ್ದಾರೆ. ಅವರು ಕೂಡ ಉದ್ಯೋಗ ಅರಸಿ ಭಾರತಕ್ಕೆ ಬರಬಹುದು. ಅದರೊಂದಿಗೆ ಪಕ್ಕದ ಮಯನ್ಮಾರ್ ನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ. ಚೀನಾದಲ್ಲಿ ಉಲುಘ್ವೆರ್ ಮುಸ್ಲಿಮರ ಅಂಗಕಸಿ ಮಾಡಿ ಕೊಲ್ಲಲಾಗುತ್ತಿದೆ. ಇದರ ಬಗ್ಗೆ ಕೇಂದ್ರ ಸರಕಾರ ಯಾಕೆ ಮೌನವಾಗಿದೆ?
ಈ ಮೂರು ದೇಶಗಳ ಹೆಸರು ಹೇಳಿ ಜನರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟಿ ದ್ವೇಷದ ಉನ್ಮಾದದಲ್ಲಿ ತೇಲಿಸಿ ತಮ್ಮ ಮತ ಬ್ಯಾಂಕ್ ಭದ್ರಗೊಳಿಸುವುದು ಬಿಜೆಪಿ ಮತ್ತು ಸಂಘಪರಿವಾರದ ಮಾಸ್ಟರ್ ಪ್ಲ್ಯಾನ್. ಶ್ರೀಲಂಕಾದಲ್ಲಿ ಬಹುಸಂಖ್ಯಾತ ಬೌದ್ದರಿಂದ ತಮಿಳು ಹಿಂದುಗಳು ಅನುಭವಿಸುವ ಹಿಂಸೆ ಮತ್ತು ಅವರಿಗೆ ಪೌರತ್ವ ನೀಡುವ ಬಗ್ಗೆ ಮಾತನಾಡದ ಈ ಸೋಗಲಾಡಿ ಕೇಂದ್ರ ಸರಕಾರ ಕೇವಲ ಜನರನ್ನು ಧ್ರುವೀಕರಿಸಿ ದೇಶದ ಮೂಲ ಸಮಸ್ಯೆಗಳಿಂದ ಜನರ ಗಮನ ಬೇರೆ ಕಡೆ ಹರಿಸಿ ಜನರನ್ನು ಮೂರ್ಖರನ್ನಾಗಿಸಿ ಆಡಳಿತದ ಚುಕ್ಕಾಣಿ ಹಿಡಿಯುವುದು ‘ಮನು ಮನಸ್ಥಿತಿಯ’ ಗುಪ್ತ ಕಾರ್ಯಸೂಚಿಯಾಗಿದೆ.
ಇದರ ಬಗ್ಗೆ ಅರಿಯದ ಮಂದಿ ಈ ಮಸೂದೆ ಮುಸ್ಲಿಮರ ವಿರುದ್ದಯಿದೆ ಎಂಬ ಕಾರಣಕ್ಕೆ ವಿರೋಧಿಸುವುದಾದರೆ ‘ಇಂದು ನಾನು, ನಾಳೆ ನೀನು’ ಎಂಬ ನುಡಿಗಟ್ಟಿನಂತೆ ಪ್ರತಿಯೊಬ್ಬರು ಸ್ವತಃ ತಮ್ಮ ನಾಶವನ್ನು ಮಾಡಿಸಿಕೊಳ್ಳುತ್ತೀವೆಂದೇ ಅರ್ಥ. ಇದೀಗ ನಾವು ಜಾಗೃತರಾಗಿ ಎನ್.ಆರ್.ಸಿ, ಪೌರತ್ವ ತಿದ್ದುಪಡಿ ಮಸೂದೆ ಕಾಯಿದೆಯನ್ನು ವಿರೋಧಿಸದಿದ್ದರೆ ಮನುಷ್ಯ ವಿರೋಧಿ ಶಕ್ತಿಗಳು ಮತ್ತಷ್ಟು ಬಲಿಷ್ಟಗೊಂಡು ಮತ್ತೆ ನಮ್ಮ ಮೇಲೆ ಎರಗಲಿದೆಯೆಂಬುವುದು ಸ್ಪಷ್ಟ!

LEAVE A REPLY

Please enter your comment!
Please enter your name here